March 25, 2023 3:55 pm

ಐಹಿಕ ಸುಖದ ಲಾಲಸೆಗಳನ್ನು ಕಳಚಿಕೊಳ್ಳುತ್ತಾ

ಕಳಬೇಡ ಕೊಲಬೇಡ

ಹುಸಿಯ ನುಡಿಯಲು ಬೇಡ

ಮುನಿಯಬೇಡ

ಅನ್ಯರಿಗೆ ಅಸಹ್ಯ ಪಡಬೇಡ

ತನ್ನ ಬಣ್ಣಿಸಬೇಡ

ಇದಿರ ಹಳಿಯಲುಬೇಡ

ಇದೇ ಅಂತರಂಗಶುದ್ಧಿ!

ಇದೇ ಬಹಿರಂಗಶುದ್ಧಿ!

ಇದೇ ನಮ್ಮ ಕೂಡಲಸಂಗನನೊಲಿಸುವ ಪರಿ

  • ಬಸವಣ್ಣ

ಇದು ಮಹಾ ಮಾನವತಾವಾದಿ ಬಸವಣ್ಣ ಹೇಳಿದ ಮಾತು ಎಂಬುದು ಎಲ್ಲರಿಗೂ ಗೊತ್ತು. ಸರಳ ಎನಿಸುವ ಅಸಾಧಾರಣವಾದ ನೈತಿಕ ಬದುಕಿನ ಪ್ರಣಾಳಿಕೆ ಇದು. ಯಾರು ಸಂಪತ್ತು ಹೆಣ್ಣು ಅಧಿಕಾರಗಳೆಂಬ ಲೋಲುಪತೆಯ ಅಧೀನಕ್ಕೆ ತಮ್ಮ ಮನಸ್ಸನ್ನು ಬಲಿಹಾಕಿಕೊಂಡಿರುತ್ತಾರೊ ಅವರು ಸಹಜವಾಗೇ ಯಾವುದನ್ನು ಬೇಡ ಎಂದು ಬಸವಣ್ಣ ನಿರಾಕರಿಸಿ ಹೇಳಿದ್ದಾನೊ ಅದೆಲ್ಲವನ್ನೂ ಮಾಡುತ್ತಿರುತ್ತಾರೆ. ಮನುಷ್ಯ ಮನುಷ್ಯತ್ವದಿಂದ ಬದುಕಲು ಮತ್ತೊಬ್ಬರಿಗೆ ಪೀಡಕನಾಗದೆ ವಂಚಿಸದೆ ಅಥವಾ ಹಲವರಿಗೆ ಸಲ್ಲಬೇಕಾದುದನ್ನು ತಾನೊಬ್ಬನೇ ವಾಮಮಾರ್ಗದಿಂದ ಕಬಳಿಸಿ ಅನುಭೋಗಿಸದೆ ಅಂತರಂಗವೂ ಬಹಿರಂಗವೂ ಶುದ್ಧನಾಗಿ ಬದುಕಬೇಕು. ಅಂತರಂಗ ಬಹಿರಂಗಗಳು ಶುದ್ಧವಾಗಿರಬೇಕಾದರೆ ಅವನು ಕಳುವ ಕೊಲುವ ಹುಸಿ ನುಡಿವ ಮುನಿವ ಮತ್ತೊಬ್ಬರನ್ನು ತೆಗಳುವ ತನ್ನ ತಾನೇ ಗುಣಗಾನ ಮಾಡಿಕೊಳ್ಳುವ ಅನ್ಯರ ಉದ್ಧಾರವ ಕಂಡು ಕರುಬುವ ಸಣ್ಣತನ ಸ್ವಾರ್ಥ ವಿಕೃತಿಗಳಿಂದ ದೂರವಿದ್ದಾಗ ಮಾತ್ರ ಸಾಧ್ಯವಾಗುತ್ತದೆ. ಆದರೆ ಪಂಚೇಂದ್ರಿಯಗಳ ಕೈಗೊಂಬೆಯಾದ ಅರಿಷಡ್ವರ್ಗಗಳ ಗುಲಾಮನಾದ ಮಾನವನಿಂದ ಅದು ಅಸಾಧ್ಯದ ಕೆಲಸ. ಬಸವಣ್ಣ ಹೀಗೆ ಹೀಗೆಲ್ಲ ಮಾಡಬೇಡವೆಂದು ಸರಳವಾಗಿ ಹೇಳುತ್ತಾನೆ. ಆದರೆ ಅದು ಸರಳವಲ್ಲ. ಒಬ್ಬ ಮನುಷ್ಯ ಪರಿಪೂರ್ಣನಾಗಿ ಬದುಕುವುದಕ್ಕೆ ಇರಬೇಕಾದ ಈ ಮೂಲಭೂತ ಗುಣಗಳನ್ನು ಅಳವಡಿಸಿಕೊಳ್ಳುವುದು ಬುದ್ಧನಂತವನಿಗೆ ತೀರ್ಥಂಕರರಂತವರಿಗೆ ಮಾತ್ರವೇ ಸಾಧ್ಯವಾಗಬಹುದೇನೋ? ಹೀಗೆ ಹೇಳುವ ಬಸವನೇ ತನ್ನ ಅನೇಕ ವಚನಗಳಲ್ಲಿ ತನ್ನ ತಾನು ನಿಕಷಕ್ಕೆ ಒಡ್ಡಿಕೊಳ್ಳುತ್ತಾನೆ‌. ತನ್ನ ಚಿತ್ತ ಅತ್ತಿಯ ಹಣ್ಣು ಎನ್ನುತ್ತಾನೆ, ಮರನೇರಿದ ಮರ್ಕಟ ಎನ್ನುತ್ತಾನೆ, ಅಕ್ಕ ತೆರಣಿಯ ಹುಳು ತನ್ನದೇ ನೂಲಿನಿಂದ ಸುತ್ತಿಸುತ್ತಿ ಮನೆಯ ಮಾಡಿ ಸಾಯುವಂತೆ ಮನ ಬಂದುದ ಬಯಸಿ ಬಯಸಿ ಬೇಯುತ್ತಾಳೆ.

ನಾವು ಕಟ್ಟಿಕೊಂಡಿರುವ ಜಾತಿ ಮತ ವರ್ಗ ವರ್ಣಾಧಾರಿತ ವ್ಯವಸ್ಥೆಯೇ ನಮ್ಮನ್ನು ಲೋಭಿಗಳನ್ನಾಗಿಯೂ ಅಹಂಕಾರಿಗಳನ್ನಾಗಿಯೂ ಸುಳ್ಳರನ್ನಾಗಿಯೂ ವಂಚಕರನ್ನಾಗಿಯೂ ಕಟುಕರನ್ನಾಗಿಯೂ ದುರಭಿಮಾನಿಗಳನ್ನಾಗಿಯೂ ದರ್ಪಿಷ್ಟರನ್ನಾಗಿಯೂ ರೂಪಿಸಿದೆ. ಬುದ್ಧ ಹೇಳುವ ಆಸೆಯೇ ದುಃಖಕ್ಕೆ ಮೂಲ ಎಂಬ ಮಾತು ಬರಿಯ ದುಃಖಕ್ಕೆ ಮಾತ್ರ ಮೂಲವಾಗುವುದಿಲ್ಲ. ಅದರ ಒಳಾರ್ಥವೇ ಆಸೆಯೆಂಬುದು ಮನುಷ್ಯರನ್ನು ಲೋಭಿಗಳನ್ನಾಗಿಸುತ್ತದೆ. ಅವನ ಮನಸನ್ನೂ ಬದುಕನ್ನೂ ಸಂಕುಚಿತಗೊಳಿಸುತ್ತದೆ. ಆಸೆಯು ಅತಿಯಾಗಿ ದುರಾಸೆಯಾಗುತ್ತದೆ. ದುರಾಸೆಯ ಪರಿಣಾಮಗಳೇ ವ್ಯಕ್ತಿತ್ವ ಅಧಃಪತನಕ್ಕೆ ಕಾರಣವಾಗುತ್ತವೆ. ದುರಾಸೆಯ ಮನುಷ್ಯ ಯಾವುದಕ್ಕೂ ಹೇಸದ ಸ್ಥಿತಿ ತಲುಪುತ್ತಾನೆ. ತನ್ನೊಳಗೆ ಅಸೂಯೆಯನ್ನೂ ದ್ವೇಷವನ್ನೂ ಸ್ವಾರ್ಥವನ್ನೂ ತುಂಬಿಕೊಳ್ಳುತ್ತಾ ಹೋಗಿ ನಿಜವಾದ ಆನಂದವನ್ನೂ ಸುಖವನ್ನೂ ಸಂತೃಪ್ತಿಯನ್ನೂ ಕಳೆದುಕೊಳ್ಳುತ್ತಾನೆ. ಆತನನ್ನು ಭಯ ಅಂಜಿಕೆ ಸುಳ್ಳು ಹಸಿಹಸಿಯಾದ ಕ್ರೌರ್ಯ ಹೇಡಿತನಗಳು ಆವರಿಸಿಕೊಳ್ಳುತ್ತವೆ. ಮನುಷ್ಯ ಪರಮಸ್ವಾರ್ಥದ ತಿದಿಯಾಗುತ್ತಾನೆ.

ಯಾವಾಗ ಐಹಿಕ ಸುಖದ ಲಾಲಸೆಗಳನ್ನು ಕಳಚಿಕೊಳ್ಳುತ್ತಾ ನಿಸರ್ಗ ತತ್ವವನ್ನು ಅರಿತುಕೊಳ್ಳುತ್ತಾ ಬಯಕೆಯಿಂದ ಬಯಲಿನೆಡೆಗೆ ಸಾಗುತ್ತೇವೋ ಆಗ ನಮಗೆ ಸುಳ್ಳು ಅಸಹ್ಯವಾಗುತ್ತದೆ, ಕಳವು ಹೇಸಿಗೆ ಎನಿಸುತ್ತದೆ ಸ್ವರತಿ ಬೇಡದ ವಿಚಾರವಾಗುತ್ತದೆ, ಕೊಲೆ ಪಾಪವೆನಿಸುತ್ತದೆ ಅನ್ಯ ಎನಿಸುವವರೆಲ್ಲ ಬಂಧುಗಳೆನಿಸಲು ತೊಡಗುತ್ತಾರೆ. ಈ ಸುಖ ಅನುಭವಿಸಲು ಸಾಧ್ಯವಾಗುವುದೇ ನಾವು ನಮ್ಮ ಅಂತರಂಗ ಬಹಿರಂಗಗಳು ನಿರ್ಮಲವಾಗಿರುವ ಸ್ಥಿತಿಯನ್ನು ತಲುಪಿದಾಗ ಮಾತ್ರ. ಯಾವ ಗಾಯತ್ರಿ ಮಂತ್ರದಲ್ಲಿಯೂ ಶತನಾಮಾವಳಿಗಳಲ್ಲಿಯೂ ಜಪತಪಗಳಲ್ಲಿಯೂ ಇಲ್ಲದ ಅಸಾಧಾರಣ ಸತ್ಯವನ್ನು ಬಸವಣ್ಣ ಈ ವಚನದಲ್ಲಿ ಸಾರಿ ಹೇಳಿದ್ದಾನೆ. ಇದು ನಾವು ಮನುಷ್ಯರಾಗಿ ಬದುಕಲು ಇರುವ ಮಹಾಮಂತ್ರ. ಇದೊಂದು ವಚನ ಇಡೀ ವಚನ ಚಳುವಳಿಯ ಮಹದಾಶಯವನ್ನು ಅತ್ಯಂತ ಸರಳವಾಗಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.

ನೆಲ ಗುಡಿಸುವ ಕಾಯಕದ ಜಂಬೂರು ಸತ್ಯಕ್ಕ,

ಲಂಚವಂಚನಕ್ಕೆ ಕೈಯಾನದ ಭಾಷೆ

ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ

ನಾನು ಕೈ ಮುಟ್ಟಿ ಎತ್ತಿದೆನಾದರೆ

ನಿಮ್ಮಾಣೆ ನಿಮ್ಮ ಪ್ರಮಥರಾಣೆ

ಅದೇನು ಕಾರಣವೆಂದರೆ

ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ

ಇಂತಲ್ಲದೆ ನಾನು ಅಳಿಮನವ ಮಾಡಿ

ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ

ನೀವಾಗಲೇ ನನ್ನ ನರಕದಲ್ಲಿ ಅದ್ದಿ

ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ

ಎನ್ನುತ್ತಾಳೆ. ದಾಸಿಮಯ್ಯ ‘ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ’ ಎನ್ನುತ್ತಾನೆ. ಬಸವಣ್ಣ, ‘ಪರ ಧನ ಪರಸ್ತ್ರೀ ಎಂಬೀ ಜೂಬಿಂಗೆ ಅಂಜುವೆನಯ್ಯಾ’ ಎನ್ನುತ್ತಾನೆ‌. ಅಗತ್ಯಕ್ಕಿಂತ ಹೆಚ್ಚು ಅಕ್ಕಿಯನ್ನು ಆಯ್ದು ತಂದ ತನ್ನ ಗಂಡ ಮಾರಯ್ಯನಿಗೆ ಲಕ್ಕಮ್ಮ ಕನಲಿ ಕೇಳುತ್ತಾಳೆ “ಆಸೆಯೆಂಬುದು ಅರಸಿಂಗಲ್ಲದೇ ಶಿವಭಕ್ತರಿಗೆ ಉಂಟೆ ಅಯ್ಯಾ ಎನ್ನುತ್ತಲೇ ಈಸಕ್ಕಿಯಾಸೆ ನಿಮಗೇಕೆ?” ಎಂದು ಕೇಳುತ್ತಾಳೆ. ಹಾಗೆ ಕೇಳುತ್ತಲೇ ಎಲ್ಲಿಂದ ತಂದೆಯೋ ಅಲ್ಲಿಯೇ ಚೆಲ್ಲಿ ಬರುವಂತೆ ಮರಳಿ ಕಳಿಸುತ್ತಾಳೆ. ಇದೆಲ್ಲವೂ ಸಾಧ್ಯವಾದದ್ದು ಅಂತರಂಗ ಮತ್ತು ಬಹಿರಂಗ ಶುದ್ಧವಾಗಿರುವ ಕಾರಣದಿಂದ. ಅಂತರಂಗ ಬಹಿರಂಗ ಶುದ್ಧವಾಗಿದ್ದವರಿಂದ ಮಾತ್ರವೇ ಉತ್ತುಂಗವಾದ ಬದುಕು ಬದುಕಲು ಸಾಧ್ಯವೆಂಬುದನ್ನು ಎಲ್ಲ ಶರಣರು ಬದುಕಿ ತೋರಿಸಿದ್ದಾರೆ. ಅವರಿಗೆ ಕಷ್ಟ ಕಷ್ಟವೆನಿಸಲಿಲ್ಲ ಬಡತನ ಬಡತನವೆನಿಸಲಿಲ್ಲ ಹಸಿವು ಹಸಿವೆನಿಸಲಿಲ್ಲ ಸಾವು ಸಾವೆನಿಸಲಿಲ್ಲ ಹೀಗೆ ಅನಿಸದಿರುವ ಸ್ಥಿತಿಯನ್ನು ನಾವು ಯಾವಾಗ ತಲುಪುತ್ತೇವೆಂದರೆ ಸಲ್ಲದ ಆಸೆಗಳನ್ನು ಬಿಟ್ಟಾಗ ಮಾತ್ರ. ಈ ಸಲ್ಲದ ಆಸೆಗಳನ್ನು ಬಿಟ್ಟಾಗ ಖಂಡಿತ ನಾವು ಕಳವು ಮಾಡದ ಹುಸಿ ನುಡಿಯದ ಅನ್ಯರಿಗೆ ಅಸಹ್ಯ ಪಡದ ಇದಿರು ಹಳಿಯದ ಸ್ಥಿತಿ ತಲುಪುತ್ತೇವೆ. ಅಂತರಂಗ ಬಹಿರಂಗ ಶುದ್ಧರಾಗಿ ಬದುಕುವ ಸ್ಥಿತಿಯನ್ನು ತಲುಪುತ್ತೇವೆ.

  • ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

One Response

  1. ಲೇಖನ ಅರ್ಥಪೂರ್ಣವಾಗಿ ಬಂದಿದೆ ಸುರೇಶ್

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ