October 1, 2023 8:04 am

ಸುಳ್ಳುಗಳ ಉತ್ಪಾದನೆಯ ಕಾರ್ಖಾನೆಗಳಲ್ಲಿ ಮರೆಯಾಗುತ್ತಿರುವ ಸತ್ಯ

ಮನುವಾದಿ ರಾಜಕಾರಣ ಮನುಕುಲ ವಿರೋಧಿ ಎಂಬ ಗಾಢ ಅನುಭವ ಜನರಿಗೆ ಈಗ ಆಗುತ್ತಿದೆ. ಈ ಅನುಭವ ಆಗುತ್ತಿಲ್ಲ ಎಂದರೆ ಆತ ಅಕ್ಷರಶಃ ಅಂಧ ಭಕ್ತ ಅಥವಾ ಮಿದುಳು ನಿಷ್ಕ್ರಿಯಗೊಂಡ ಬೌದ್ಧಿಕ ಗುಲಾಮ ಎಂದೇ ಪರಿಗಣಿಸಬೇಕಾಗುತ್ತದೆ.

ವೈದಿಕರು ಹಿಂದುತ್ವದ ಬೀಜ ಬಿತ್ತಿ ಸ್ವತಂತ್ರ ಭಾರತದಲ್ಲಿ ಸುಮಾರು ನೂರು ವರ್ಷಗಳು ಸಮೀಪಿಸುತ್ತಿವೆ. ವಂಚನೆ, ಕಪಟ, ದ್ವೇಷ, ಹಿಂಸೆ, ಅನ್ಯಾಯಗಳೆಂಬ ಫಸಲನ್ನು ದೇಶಾದ್ಯಂತ ತುಂಬಿದ್ದಾರೆ. ಹಾಗೆ ನೋಡಿದರೆ ಭಾರತ ಎಂಬ ಉಪಖಂಡದಲ್ಲಿ ಎರಡು ಸಾವಿರ ವರ್ಷಗಳಿಂದಲೂ ವೈದಿಕರು ಜನರ ಮಿದುಳನ್ನು ಆಪೋಷನ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಈ ಕುತಂತ್ರಗಳ ವಿರುದ್ಧ ಜನತೆಯನ್ನು ವಿಮೋಚನೆಗೊಳಿಸಲು ಮಹಾವೀರ, ಬುದ್ಧ, ಕಬೀರ, ಬಸವಣ್ಣ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಜ್ಯೋತಿಬಾಪುಲೆ, ಅಂಬೇಡ್ಕರ್, ಗಾಂಧಿ ಪೆರಿಯಾರ್, ಲೋಹಿಯಾ ಮುಂತಾಗಿ ಸಾವಿರಾರು ದಾರ್ಶನಿಕರು, ಸಮಾಜ ಸುಧಾರಕರು, ಚಿಂತಕರು, ಹೋರಾಟ ರೂಪಿಸುತ್ತಲೇ ಬಂದಿದ್ದರು.

ಈ ಎಲ್ಲಾ ಹೋರಾಟಗಳನ್ನು ನುಂಗಿ ನೊಣೆದಿರುವ, ಹಿಂದುತ್ವ ಎಂಬ ಬ್ರಾಂಡಿನ ರಾಜಕೀಯ ದೇಶವನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದೆ. ಆದರೆ ಅಮಲಿನಲ್ಲಿರುವ ಅಂದ ಭಕ್ತರು ಸ್ಮಶಾನದಲ್ಲಿ ನಿಂತು ಸಹ, ಮೋದಿ ಇರುವುದಕ್ಕೆ ಇಷ್ಟಾದರೂ ಸಹ ಉಳಿದಿದೆ ಎನ್ನುತ್ತಿದ್ದಾರೆ. ಸನಾತನತೆ ಆಧುನಿಕತೆಯ ಹೆಗಲ ಮೇಲೆ ಕುಳಿತು ನಿರಂತರ ಸುಳ್ಳು ಬಿತ್ತಿ ಧರ್ಮದ ಅಮಲನ್ನು ಉಣಿಸಿದ ಪರಿಣಾಮ ಈ ದಿವಾಳಿಯ ಸ್ಥಿತಿ ಬಂದೊದಗಿದೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ, ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂಬ ಹಸಿ ಸುಳ್ಳನ್ನು ಹೇಳಿದರು. ಜನ ಅದನ್ನು ನಂಬಿ ಬಹುಮತವನ್ನು ನೀಡಿದರು. ಅಂದಿನಿದ ಈ ದೇಶದಲ್ಲಿ ಸುಳ್ಳು ಚಲಾವಣೆಗೆ ಬರುತ್ತದೆ ಎಂಬ ಸತ್ಯವನ್ನು ಮನಗಂಡ ಬಲಪಂಥೀಯರು ಸುಳ್ಳಿನ ಕಾರ್ಖಾನೆಯನ್ನು ತೆರೆದು ದೇಶವನ್ನು ದಿಕ್ಕೆಡಿಸಿದರು. ಸಾಮಾಜಿಕ ಜಾಲತಾಣಗಳನ್ನು ಪ್ರಬಲ ಅಸ್ತ್ರವನ್ನಾಗಿಸಿ, ದೇಶದ ಬಹುಸಂಖ್ಯಾತ ಯುವಜನರ ಮಿದುಳನ್ನು ಆಲೋಚನಾ ಕ್ರಮದಿಂದ ನಿಷ್ಕ್ರಿಯಗೊಳಿಸಿರುವುದು ಇಂದಿನ ದುರಂತ.

ಮಾಹಿತಿ ಎನ್ನುವುದು ಜನರನ್ನು ಸದಾ ಜಾಗ್ರತೆಯಲ್ಲಿ ಇರಿಸಲು ಸಹಾಯವಾಗುತ್ತದೆ. ಇದರಿಂದ ಆರೋಗ್ಯಕರ ನಾಗರಿಕ ಸಮಾಜವು ಅಸ್ತಿತ್ವದಲ್ಲಿ ಇರುತ್ತದೆ. ಆದರೆ ಮಾಹಿತಿಗಳು ತಪ್ಪು ಮತ್ತು ಸುಳ್ಳುಗಳಿಂದ ಕೂಡಿದರೆ, ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ. ಇದು ಬಲಪಂಥೀಯ ರಾಜಕಾರಣದ ಬಂಡವಾಳ ಆಗಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್ ಬಳಕೆ ಅತ್ಯಧಿಕವಾಗಿದೆ. ಅವನ್ನು ಕೈ ವಶಪಡಿಸಿಕೊಂಡಿರುವ ಮನುವಾದಿಗಳು ಈ ಅವಕಾಶವನ್ನು ಬಳಸಿಕೊಂಡು ಸುಳ್ಳುಗಳ ಮೂಲಕವೇ ಜನರನ್ನು ಅಂಧಕಾರದಲ್ಲಿ ಇಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯನ್ನು ನಾಶಗೊಳಿಸುವ ಹುನ್ನಾರವು ಅವರದ್ದಾಗಿದೆ. ಇದರಲ್ಲಿ ಬಹುತೇಕ ಪತ್ರಿಕಾ ಮತ್ತು ದೃಶ್ಯಮಾಧ್ಯಮಗಳು ಶಾಮೀಲಾಗಿದೆ.

ಸುಳ್ಳು ಮಾಹಿತಿ ಮತ್ತು ಸುದ್ದಿಗಳನ್ನು ಬಯಲಿಗೆಳೆದು ಜನರಿಗೆ ವೈಜ್ಞಾನಿಕವಾಗಿ ಸತ್ಯ ತಿಳಿಸುವ ಪ್ರಯತ್ನಕ್ಕೆ ಉತ್ತರಪ್ರದೇಶದ  ಪ್ರತಿಕ್ ಸಿನ್ಹಾ  ಮತ್ತವರ ತಂಡ alt news ಎಂಬ ವೆಬ್ ಪೋರ್ಟಲ್ ರೂಪಿಸಿದೆ. ಕಳೆದ ಐದು ವರ್ಷಗಳಿಂದ ಈ ನಿಟ್ಟಿನಲ್ಲಿ ಜನರಿಗೆ ಸತ್ಯ ತಿಳಿಸುವ ಸಮರವನ್ನು ಸಾರಿದ್ದಾರೆ. ಇದಕ್ಕಾಗಿ, ಉದ್ಯಮಿಗಳು, ಪತ್ರಕರ್ತರು, ತಂತ್ರಜ್ಞರು ಮುಂತಾಗಿ ಎಲ್ಲ ರಂಗಗಳ ತಜ್ಞರನ್ನು ಕಲೆ ಹಾಕಿದ್ದಾರೆ. ಡಾ.ಸುಮಯ್ ಶೇಕ್ ಮತ್ತು ಅರ್ಜುನ್ ಸಿದ್ದಾರ್ಥ ಇವರಲ್ಲಿ ಪ್ರಮುಖರು. ಈ ಮೂವರು, India misinformed the true story ಎಂಬ ಪುಸ್ತಕವನ್ನು ಹೊರತಂದಿದ್ದು, ರಾಜಕೀಯ ಪಕ್ಷಗಳಲ್ಲಿ ಪ್ರಮುಖವಾಗಿ ಬಿಜೆಪಿಯ ನಿರ್ಲಜ್ಜ ಅನೈತಿಕತೆಯನ್ನು ಬೆತ್ತಲುಗೊಳಿಸಿದೆ.

ಇಸ್ಲಾಂ ಧರ್ಮವನ್ನು ದೇಶದ್ರೋಹಿಗಳಂತೆ ಚಿತ್ರಿಸುವುದು, ಮುಸ್ಲಿಮರಿಂದ ಹಿಂದೂ ಧರ್ಮದ ಅವನತಿ ಆಗುತ್ತಿದೆ, ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರಗಳು ನಡೆಯುತ್ತಿವೆ, ನಕ್ಸಲರೂ ಇಸ್ಲಾಂ ಭಯೋತ್ಪಾದಕರೊಂದಿಗೆ ಒಂದಾಗಿದ್ದಾರೆ, ಕಾಂಗ್ರೆಸ್ ಪಾಕಿಸ್ತಾನದ ಪರವಾಗಿದೆ; ಹಿಂದೂ ವಿರೋಧಿಯಾಗಿದೆ, ಬಿಜೆಪಿಯವರು ಪ್ರಾಮಾಣಿಕರು, ದೇಶಭಕ್ತರು, ದೈವಭಕ್ತರು, ಇತರೆ ರಾಜಕೀಯ ಪಕ್ಷಗಳ ನಾಯಕರು ನೀತಿಗೆಟ್ಟವರು, ದೇಶದ್ರೋಹಿಗಳು, ಭ್ರಷ್ಟರು – ಮುಂತಾದ ವಿಷಯಗಳನ್ನು ಮುಖ್ಯ ಸಾರವಾಗಿಟ್ಟುಕೊಂಡು ಕ್ಷಣಕ್ಕೊಂದು ಸುಳ್ಳು ಬಿತ್ತಲಾಗುತ್ತಿದೆ.

ರಾಜ್ಯದಲ್ಲೂ ಈ ಕುತಂತ್ರಗಳು ಪೋಸ್ಟ್ ಕಾರ್ಡ್ ಎಂಬ ಹೆಸರಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇವುಗಳಿಗೆ ಪ್ರತಿರೋಧವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳು ಸುಳ್ಳುಗಳನ್ನು ಸೃಷ್ಟಿಸಿದ್ದರು, ಅದು ಜನರನ್ನು ದಿಕ್ಕೆಡಿಸುವ ಅಷ್ಟು ಪ್ರಭಾವಶಾಲಿಯಾಗಿಲ್ಲ ಪರಿಣಾಮಕಾರಿಯೂ ಯಶಸ್ವಿಯೂ ಆಗಿಲ್ಲ.

ಸುಳ್ಳುಗಳಿಂದಲೇ ಇತಿಹಾಸವನ್ನು ತಿರುಚಲಾಗುತ್ತಿದೆ. ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಮಾತ್ರವಲ್ಲದೆ ವೈಜ್ಞಾನಿಕ ಕ್ಷೇತ್ರವನ್ನು ಬಿಟ್ಟಿಲ್ಲ. ಕೆಲವರ್ಷಗಳ ಹಿಂದೆ, ಪ್ರಧಾನಿ ಮೋದಿಯವರು ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮ್ಮೇಳನದಲ್ಲಿ, ಕ್ಲೋನಿಂಗ್ ವ್ಯವಸ್ಥೆಯನ್ನು ಮಹಾಭಾರತ ಕಾಲದಲ್ಲಿ ಕಂಡುಹಿಡಿಯಲಾಗಿತ್ತು ಎಂದು ಹೇಳಿದ್ದರು. ರಾಮಾಯಣ ಕಾಲದಲ್ಲಿ ವಿಮಾನವನ್ನು ಕಂಡು ಹಿಡಿದಿದ್ದರೂ ಎಂದು ಭಕ್ತರು ಹೇಳುತ್ತಾರೆ. ಗೋಮೂತ್ರ ಕುಡಿದರೆ ಕೊರೊನಾ ಬರುವುದಿಲ್ಲ ಎಂದು ಸಂಸದೆ ಪ್ರಜ್ಞಾಸಿಂಗ್ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಹಲವು ಕಡೆ ಸಗಣಿಯನ್ನು ಮೈಯಿಗೆ ಬಳಿದುಕೊಂಡು ಗೋಮೂತ್ರ ಕುಡಿಯುವ ಸಮಾವೇಶಗಳು ನಡೆದಿವೆ.

ಇದೇನೇ ಇರಲಿ, ಪ್ರತೀಕ್ ಸಿನ್ಹಾ, ಮೂಲಭೂತವಾದಿಗಳ ಸುಳ್ಳುಗಳು ದೇಶವನ್ನು ಹೇಗೆ ಮಾನಸಿಕವಾಗಿ ಇಬ್ಬಾಗಗೊಳಿಸಿವೆ ಎಂಬುದನ್ನು ಹಲವು ಆಯಾಮಗಳಲ್ಲಿ ಜ್ವಲಂತ ಉದಾಹರಣೆ ಮೂಲಕವೇ ನಿಖರ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.

ಆಯ್ದ ಒಂದೆರಡು ಘಟನೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ. ಗಲಭೆಗಳಿಗೆ ಪ್ರೇರೇಪಣೆ ನೀಡಿ, ಸಮಾಜದಲ್ಲಿ ಅಶಾಂತಿ ಎಬ್ಬಿಸಲು ನಿರಂತರ ಸುಳ್ಳುಗಳನ್ನು ಹರಡಲಾಗುತ್ತಿದೆ.

2018ರ ಅಕ್ಟೋಬರ್ ನಲ್ಲಿ ಪಂಜಾಬ್ ನ ಅಮೃತಸರದಿಂದ ಹೊರಟಿದ್ದ ರೈಲೊಂದು ಭೀಕರ ಅಪಘಾತಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ರೈಲು ಬರುವುದಿಲ್ಲವೆಂದು, ದಸರಾ ಹಬ್ಬದ ರಾವಣ ದಹನ ಕಾರ್ಯಕ್ರಮ ವೀಕ್ಷಿಸುತ್ತಿದ್ದ ನೂರಾರು ಜನ ಸ್ಟೇಡಿಯಂನಲ್ಲಿ ನಿಂತಂತೆ ರೈಲ್ವೆ ಹಳಿಯ ಅಕ್ಕಪಕ್ಕ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ರೈಲು 60 ಜನರನ್ನು ಆಹುತಿ ತೆಗೆದುಕೊಂಡು ಹಲವು ಜನರಿಗೆ ಗಂಭೀರ ಗಾಯಗಳಾಗಿದ್ದವು.

ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಸಿಹಸಿ ಸುಳ್ಳು ಬಿತ್ತರವಾಯಿತು. ಇದು ಹಿಂದೂಗಳನ್ನು ಸಾಮೂಹಿಕವಾಗಿ ಕೊಲ್ಲುವ ಟ್ರೈನ್ ಜಿಹಾದ್ ಎಂಬ ಮುಸಲ್ಮಾನರ ಪಿತೂರಿ. ಈ ಟ್ರೈನ್ ಚಾಲಕನ ಹೆಸರು ಇಮ್ತಿಯಾಜ್ ಅಲಿ ಎಂದು. ಆತ ಜನರ ಗುಂಪನ್ನು ನೋಡಿ ರೈಲನ್ನು ನಿಲ್ಲಿಸಬಹುದಿತ್ತು. ಆದರೆ ಸಾಮೂಹಿಕವಾಗಿ ಹಿಂದೂಗಳನ್ನು ಹತ್ಯೆಗೈಯ್ಯುವ ಉದ್ದೇಶದಿಂದಲೇ ರೈಲನ್ನು ನಿಲ್ಲಿಸಲಿಲ್ಲ. ಈ ಘಟನೆಯಲ್ಲಿ 250 ಹಿಂದೂ ಬಾಂಧವರು ಮೃತಪಟ್ಟಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ಸುದ್ದಿಗಳನ್ನು ಬಿತ್ತರಿಸಿದವರು ಬಿಜೆಪಿಯ  ಐಟಿ ಸೆಲ್ ನವರು ಮತ್ತು ಮೋದಿಯವರ ಅಭಿಮಾನಿಗಳು.

ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ  ಎ.ಎನ್.ಐ. ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಈ ರೈಲಿನ ಚಾಲಕನ ಹೆಸರು ಅರವಿಂದ ಕುಮಾರ್. ಆದರೆ ಈ ಸತ್ಯ ಹೊರ ಬರುವ ಮುನ್ನವೇ, ಇಮ್ತಿಯಾಜ್ ಆಲಿ ಎಂಬ ವ್ಯಕ್ತಿ ಈ ಘಟನೆಗೆ ಉದ್ದೇಶಪೂರ್ವಕ ಕಾರಣ ಎಂದು ಜನ ನಂಬಿದ್ದರು.

2017ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ, ಕೋಮುಗಲಭೆ ನಡೆದಿತ್ತು. ಈ ಗಲಭೆ ನಡೆದು ಕೆಲ ದಿನಗಳ ಬಳಿಕ ನಾಪತ್ತೆಯಾಗಿದ್ದ ಪರೇಶ್ ಮೇಸ್ತ ಎಂಬ 21 ವರ್ಷದ ಯುವಕನ ದೇಹ ಕೊಳೆತ ಸ್ಥಿತಿಯಲ್ಲಿ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ದಿಡೀರ್ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಜಿಹಾದಿ ಕಾರ್ಯಕರ್ತರೇ ಪರೇಶ್ ಮೇಸ್ತನನ್ನು, ತಲೆ ಕೈಕಾಲು ಕತ್ತರಿಸಿ ಬರ್ಬರ ಕೊಲೆ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯ ಮುನ್ನವೇ ಘೋಷಿಸಿದರು. ಅವರ ಹೇಳಿಕೆಯನ್ನು ಆಧರಿಸಿ 2018ರ ಡಿಸೆಂಬರ್ 11ರಂದು ಇಂಡಿಯಾ ಟುಡೇ ಸುದ್ದಿವಾಹಿನಿ ಪ್ರಮುಖ ಸುದ್ದಿಯಾಗಿ ಬಿತ್ತರಿಸಿ ಮಸಾಲವನ್ನು ಸೇರಿಸಿತು. ಪರೇಶನ್ ಮೇಲೆ ಕುದಿಯುವ ಎಣ್ಣೆ ಸುರಿದು ಕೈಕಾಲು ರುಂಡಗಳನ್ನು ಬೇರ್ಪಡಿಸಲಾಗಿತ್ತು ಎಂಬ ವರದಿ ಪ್ರಕಟಿಸಿತ್ತು. ಸುದ್ದಿವಾಹಿನಿಗಳಿಗೆ ಟಿ ಆರ್ ಪಿ ಮುಖ್ಯವಾಗುತ್ತದೆ.

ಪೊಲೀಸರು ಮಣಿಪಾಲದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆತನ ಕಳೇಬರವನ್ನು ನೀಡಿದರು. ಕೆಲ ದಿನಗಳ ನಂತರ ಈ ಸಾವಿನ ಬಗ್ಗೆ ತಜ್ಞರು ವರದಿ ನೀಡಿದರು. ವರದಿಯ ಪ್ರಕಾರ ಆಯುಧದಿಂದ ಹಲ್ಲೆ ನಡಿಸಿರುವ ಗುರುತುಗಳು ಇರಲಿಲ್ಲ. ರುಂಡ ಸೇರಿದಂತೆ ಅಂಗಾಂಗಗಳು ಬೇರ್ಪಟ್ಟಿರಲಿಲ್ಲ. ಬಹಳ ದಿನಗಳ ನಂತರ ಶವ ಪತ್ತೆಯಾಗಿದ್ದರಿಂದ ಚರ್ಮ ಕೊಳೆತಿದೆಯೇ ಹೊರತು ಕುದಿಯುವ ಎಣ್ಣೆ ಆತನ ದೇಹದ ಮೇಲೆ ಬಿದ್ದಿರಲಿಲ್ಲ. ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯುವ ಉದ್ದೇಶಕ್ಕಾಗಿ ವಾಟ್ಸಾಪ್ ಗಳಲ್ಲಿ ಈ ರೀತಿ ಸುದ್ದಿಯನ್ನು ಹರಿಯಬಿಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಈ ವಿಷಯವನ್ನು ವಿಷಯ ತಜ್ಞರು ತಿಳಿಸುವ ಮುನ್ನವೇ ಸಂಸ್ಥೆಯು ಹೇಳಿರುವ ಸುಳ್ಳನ್ನೇ ಜನರು ನಂಬಿದ್ದರು.

ಉತ್ತರಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭವ ಅನುಭವಿಸಿತ್ತು. ಗೋರಖ್ ಪುರ, ಫುಲ್ ಪುರ್ ಮತ್ತು ಖೈರಾನ  ಕ್ಷೇತ್ರಗಳಲ್ಲಿ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಗೆದ್ದಿತ್ತು. ಖೈರಾನ ಕ್ಷೇತ್ರದಿಂದ ಗೆದ್ದಿದ್ದ ಬೇಗಂ ತಬ್ಸಂ ಹಸನ್ ಅವರು ಹೇಳಿಕೆ ನೀಡಿ, ಇದು ರಾಮನ ಸೋಲು, ಅಲ್ಲಾಹುವಿನ ಗೆಲುವು ಎಂದಿದ್ದಾರೆ ಎಂದು ಬಿಜೆಪಿ ನಾಯಕ ಕಮಲ್ ತ್ಯಾಗಿ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿ, ಅದು ಪ್ರಸರಣವಾದ ನಂತರ ಡಿಲೀಟ್ ಮಾಡಿದ್ದ. ಆದರೆ ಸಂಸದೆ ತಬ್ಸಂ ಖಳನಾಯಕಿ ಸ್ಥಾನದಲ್ಲಿ ನಿಂತಿದ್ದರು. ಅವರು ಇಂತಹ ಹೇಳಿಕೆಯನ್ನೇ ನೀಡಿಲ್ಲ ಎಂದು ಸ್ಪಷ್ಟನೆ ಕೊಡುವ ಮುನ್ನವೇ ಸುಳ್ಳು ವ್ಯಾಪಿಸಿತ್ತು.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ, Hindu girl stabbed to death by a Muslim  ಎಂಬ ಹೆಡ್ಡಿಂಗ್ ಇರುವ ಕ್ಲಿಪ್ಪಿಂಗ್ ವೊಂದನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಹಾಕಿಕೊಂಡು ನಂತರ ಡಿಲೀಟ್ ಮಾಡಿದ್ದರು. ಇದರ ಅಸಲೀಯತ್ತು ಏನು ಎಂದರೆ, ಆ ಪತ್ರಿಕೆಯಲ್ಲಿ  Day after  being stabbed by a stalker  21 year old dies  ಎಂಬ ಹೆಡ್ಡಿಂಗ್ ನೀಡಲಾಗಿತ್ತು ಎಂದು ಆ  ಪತ್ರಿಕೆ  ಟ್ವಿಟರ್ ನಲ್ಲಿ ಸ್ಪಷ್ಟೀಕರಣ ನೀಡಿತ್ತು. ವಾಸ್ತವದಲ್ಲಿ ಭಕ್ತನೊಬ್ಬ ಫೋಟೋಶಾಪ್ ಮಾಡಿ, ಮುಸ್ಲಿಂ ಯುವಕನಿಂದ ಹಿಂದು ಯವತಿಯ ಕೊಲೆ ಎಂದು ಹೆಡ್ಡಿಂಗ್ ವಿರೂಪಗೊಳಿಸಿದ್ದ.

ಉತ್ತರಪ್ರದೇಶ ವಿಧಾನ ಸಭಾ ಚುನಾವಣೆಗೆ ಮುನ್ನವೇ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರೇ ಸುಳ್ಳು ಉತ್ಪಾದನಾ ಕಾರ್ಖಾನೆಗೆ ಅಧಿಕೃತ ಚಾಲನೆ ನೀಡಿದ್ದರು. ಬಹಿರಂಗ ಸಭೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಅಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ವ್ಯಾಟ್ಸಾಪ್ ಗುಂಪುಗಳಿದ್ದು ಒಂದು ಗುಂಪಿನಲ್ಲಿ 17 ಲಕ್ಷ ಮತ್ತೊಂದರಲ್ಲಿ 12 ಲಕ್ಷ ಸದಸ್ಯರಿದ್ದಾರೆ. ಪ್ರತಿ ಬಿಜೆಪಿ ಕಾರ್ಯಕರ್ತರು, ಸತ್ಯವನ್ನು ತಿಳಿಸುತ್ತೇವೆ ಎಂಬ ಘೋಷಣೆಯೊಂದಿಗೆ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಬಿಜೆಪಿ ಪರವಾಗಿರುವ ಮೆಸೇಜು ಒಂದೊಂದು ಹಾಕಬೇಕು ಎಂದು ಅವರು ಸೂಚಿಸಿದ್ದರು.

ಮುಲಾಯಂಸಿಂಗ್ ಯಾದವರ ಪುತ್ರ, ಅಖಿಲೇಶ್, ಯಾವುದೋ ವಿಚಾರಕ್ಕೆ ಅವರಪ್ಪನಿಗೆ ಕಪಾಳಕ್ಕೆ ಬಾರಿಸಿದ್ದರು ಎಂಬ ಸುದ್ದಿಯನ್ನು ಕಾರ್ಯಕರ್ತನೊಬ್ಬ ಹರಿಯಬಿಟ್ಟಿದ್ದು, ಈ ಸುದ್ದಿ ರಾಜ್ಯವನ್ನು ವ್ಯಾಪಿಸಿತ್ತು. ಆ ಸಂದರ್ಭದಲ್ಲಿ ಮುಲಾಯಂ ಮತ್ತು ಅಖಿಲೇಶ್ 600 ಕಿಲೋಮೀಟರ್ ಗಳ ಅಂತರದಲ್ಲಿದ್ದರು.

ಇಂತಹ ವಿನಾಶಕಾರಿ ಸುದ್ದಿಯ ಬಗ್ಗೆ ಅಮಿತ್ ಶಾ ಅವರಿಗೆ ಯಾವ ಪಾಪ ಪ್ರಜ್ಞೆಯೂ ಇಲ್ಲ. ಜನ ಪ್ರಚೋದನೆಗೆ ಒಳಗಾಗಬೇಕು. ಬಿಜೆಪಿ ಪಕ್ಷಕ್ಕೆ  ಲಾಭವಾಗಬೇಕು ಎಂಬುದೇ ಅವರ ಉದ್ದೇಶ. ಸುಳ್ಳು ಮಾಹಿತಿಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸಾಯಬೇಕು. ಆ ಮೂಲಕ ಸಂವಿಧಾನ ನಿಷ್ಕ್ರಿಯ ಗೊಳ್ಳಬೇಕು. ಮನುವಾದ, ಅಸಮಾನತೆ ಅಸ್ತಿತ್ವಕ್ಕೆ ಬರಬೇಕು ಎನ್ನುವುದೇ ಅವರ ಹುನ್ನಾರ. ಆದರೆ ಈ ಸತ್ಯ ಈಗಾಗಲೇ ಅಮಲಿನಲ್ಲಿರುವ ಶೂದ್ರ ವರ್ಗಗಳಿಗೆ  ಸತ್ಯದ ಅರಿವಾಗಬೇಕಾಗಿದೆ.

  • ಕೆ.ಎಸ್.ಸತೀಶ್ ಕುಮಾರ್, ಪತ್ರಕರ್ತರು, ಹಾಸನ

Share:

One Response

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು