ಬೆಂಗಳೂರು: ಬೇರೆಲ್ಲಾ ಕಾಯಿಲೆಗಳಿಗೆ ನಾವು ಹೇಗೆ ಕಾಳಜಿಯಿಂದ ಚಿಕಿತ್ಸೆ ಪಡೆಯುತ್ತೇವೆಯೋ ಅದೇ ರೀತಿ ಮಾನಸಿಕ ಕಾಯಿಲೆಗಳಿಗೂ ಚಿಕಿತ್ಸೆ ಪಡೆಯುವುದು ಅತ್ಯವಶ್ಯ ಎಂದು ಮಾನಸಿಕ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದರು.
ವಾರಾಂತ್ಯದ ಉಪನ್ಯಾಸ ಮಾಲಿಕೆ ಬಂಧುತ್ವದ ಬೆಳಕು ಕಾರ್ಯಕ್ರಮದ ಸರಣಿಯ ಮೊದಲ ಮನೋರೋಗಗಳು ಏಕೆ ಬರುತ್ತವೆ? ಚಿಕಿತ್ಸೆ ಏನು? ವಿಷಯದ ಕುರಿತು ಮಾತಾಡಿದ ಅವರು, ಜಿಲ್ಲಾ ಕೇಂದ್ರಗಳಲ್ಲಿ ಮಾನಸಿಕ ವೈದ್ಯರು ಲಭ್ಯವಿರುತ್ತಾರೆ. ಸರಿಯಾದ ಅರಿವು ಇಲ್ಲದೇ ನಾವು ಮಾನಸಿಕ ಕಾಯಿಲೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಈ ಕಾಯಿಲೆಗಳಿಗೆ ಸಾಮಾನ್ಯರು ಹಿಂಜರಿಕೆಯಿಂದ, ಹೆದರಿಕೆಯಿಂದ ಚಿಕಿತ್ಸೆಗೆ ಮುಂದೆ ಬರುವುದಿಲ್ಲ ಎಂದರು.
ಮಾನಸಿಕ ಕಾಯಿಲೆಗಳ ಲಕ್ಷಣಗಳು
ಅತಿ ದುಃಖ: ಒಂಟಿಯಾಗಿರುವುದು, ಕೆಲಸದಲ್ಲಿ ನಿರಾಸಕ್ತಿ, ಮೈಕೈ ನೋವು, ಹಸಿವು ಆಗದಿರುವುದು, ತಾಯಿಯಾಗಿ ಮಕ್ಕಳನ್ನು ನೋಡಿಕೊಳ್ಳಲು ಆಸಕ್ತಿ ಇಲ್ಲದೇ ಇರುವುದು, ಗಂಡನ ಯೋಗಕ್ಷೇಮ ನೋಡಿಕೊಳ್ಳಲು ಆಸಕ್ತಿ ಇಲ್ಲದಿರುವುದು, ಅತಿ ದುಃಖ. ಇವೆಲ್ಲ ಸಾಮಾನ್ಯ ಮಾನಸಿಕ ಕಾಯಿಲೆಯ ಲಕ್ಷಣಗಳು ಎಂದರು.
ಆತ್ಮಹತ್ಯೆ: ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಹೆಚ್ಚು ಮಾನಸಿಕ ತೊಂದರೆಗೆ ಒಳಗಾಗುತ್ತಾಳೆ. ಕೆಲಸ ಮಾಡಿದರೂ ಆಕೆ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಹಾಗಾಗಿ ಆಕೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಾಳೆ ಎಂದರು.
ವಿಚಿತ್ರ ವರ್ತನೆ: ನಾವೇನು ಹುಚ್ಚ ಎನ್ನುತ್ತೇವೆ ಆ ರೀತಿಯ ವಿಚಿತ್ರ ವರ್ತನೆ, ಅನುಮಾನ ಪಡುವುದು ಇತ್ಯಾದಿ ಮಾನಸಿಕ ಕಾಯಿಲೆಯ ಲಕ್ಷಣ ಎಂದರು.
ಅನುಮಾನ: ತನಗೇ ಯಾರೋ ಕೆಟ್ಟದ್ದು ಮಾಡಬಹುದು ಎಂದು ದೂರುವುದು, ಯಾರ ಮೇಲೆಯೂ ನಂಬಿಕೆ ಇರಲ್ಲ, ತನ್ನ ಆಸ್ತಿ, ಕೆಲಸ ಯಾರೋ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದುಕೊಳ್ಳುವುದು ಎಂದು ವಿವರಿಸಿದರು.
ಬೇರೆಯವರಿಗೆ ಕಾಣಿಸದ, ಕೇಳಿಸದ, ದೃಶ್ಯ, ಧ್ವನಿಗಳು ಕಾಣಿಸುವುದು, ಕೇಳಿಸುವುದು, ತನಗೆ ಮಾತ್ರ ಯಾರೋ ಕಾಣಿಸುತ್ತಾರೆ, ಮಾತನಾಡುತ್ತಾರೆ ಎಂದು ಭಾವಿಸುತ್ತಾರೆ ಮತ್ತು ಅದನ್ನೇ ನಿಜವೆಂದು ವಾದಿಸುತ್ತಾರೆ ಎಂದರು.
ಮಂಕಾಗಿರುವುದು: ಒಬ್ಬರೇ ಕುಳಿತುಕೊಳ್ಳುವುದು. ಯಾರೊಂದಿಗೂ ಬೆರೆಯಲು ಆಸಕ್ತಿ ಇರುವುದಿಲ್ಲ. ಏನೂ ಕಷ್ಟ ಇಲ್ಲದಿದ್ದರೂ ಕಷ್ಟದಲ್ಲಿ ಇದ್ದಂತೆ ಒದ್ದಾಡುತ್ತಾರೆ ಎಂದರು.
ಅತಿ ಸಂತೋಷ: ಕೋಟಿಗಟ್ಟಲೇ ದುಡ್ಡು ಇಟ್ಟಿದ್ದೇನೆ, ಪ್ರಧಾನಿ ಆಗುತ್ತೇನೆ ಎಂಬಂತೆ ಮಾತನಾಡುವುದು. ಪ್ರಶ್ನಿಸಿದರೆ ನಂಬಿಕೆ ಇಲ್ಲ ಎಂದು ಜಗಳವಾಡುವುದು ಮಾಡುತ್ತಾರೆ ಎಂದರು.
ದೇವರು/ದೆವ್ವ ಬಂದಂತೆ ಆಡುವುದು: ಮೈಮೇಲೆ ಯಾರೋ ಬಂದಿದ್ದಾರೆ ಎಂದು ವರ್ತಿಸುವುದು. ಮಂತ್ರವಾದಿ ಪ್ರೇತಾತ್ಮ ಓಡಿಸುತ್ತೇನೆಂದು ಹೊಡೆಯುವುದು, ಬರೆ ಕೊಡುವುದು ಮಾಡುತ್ತಾರೆ. ಇಂಥವುಗಳು ಮಾನಸಿಕ ಚಿಕಿತ್ಸೆ ಅಗತ್ಯ ಎಂದರು.
ಮಾನಸಿಕ ಕಾಯಿಲೆ: ಅಸಂಬದ್ಧವಾಗಿ ಎರಡು ವಾರಗಳ ಕಾಲ ನಡೆದುಕೊಳ್ಳುವುದು. ಮಾನಸಿಕ ಕಾಯಿಲೆ ಅನುವಂಶಿಯವೇ? ಎಂಬ ಪ್ರಶ್ನೆಗೆ, 5-10% ಬರಬಹುದು ಅಷ್ಟೇ. ಅದರ ಹೊರತಾಗಿ ಬೇರೆ ಕಾರಣಗಳಿಂದಲೇ ಬರುತ್ತದೆ ಎಂದರು.
ಪುರುಷರು/ಮಹಿಳೆಯರಲ್ಲಿ ಯಾರಲ್ಲಿ ಹೆಚ್ಚು?
ಖಿನ್ನತೆ ಮಹಿಳೆಯರಲ್ಲಿ ಹೆಚ್ಚು. ದುಶ್ಚಟಗಳು ಪುರುಷರಲ್ಲಿ ಜಾಸ್ತಿ.
ಹಳ್ಳಿ/ಪಟ್ಟಣ ಎಲ್ಲಿ ಹೆಚ್ಚು?
ಪಟ್ಟಣಗಳಲ್ಲಿ ಹೆಚ್ಚು. ಸ್ವಾರ್ಥ, ದುರಾಸೆ, ಮೋಸ, ವಂಚನೆಗಳಿಂದ ಹೆಚ್ಚು.
ಶ್ರೀಮಂತರಲ್ಲಿ/ಬಡವರಲ್ಲಿ ಯಾರಲ್ಲಿ ಹೆಚ್ಚು?
ಬಡವರಲ್ಲಿ ಹೆಚ್ಚು.
ಮದುವೆಯಾದವರಲ್ಲಿ, ಆಗದವರಲ್ಲಿ, ವಿಚ್ಛೇದಿತರಲ್ಲಿ, ವಿಧವೆಯರಲ್ಲಿ?
ವಿಚ್ಛೇದಿತರಲ್ಲಿ, ವಿಧವೆಯರಲ್ಲಿ ಹೆಚ್ಚು.
ಅಂಟುರೋಗವೇ?
ಖಂಡಿತ ಅಲ್ಲ. ಅವರನ್ನು ದೂರ ಮಾಡಬೇಡಿ.
ದೆವ್ವ ಭೂತಗಳು ಕಾರಣವೇ?
ಅಲ್ಲ. ಮಾನಸಿಕ ರೋಗದ ಲಕ್ಷಣ ಅಷ್ಟೇ.
ಮದ್ದು ಮಾಟ ಮಂತ್ರ ಅತೀಂದ್ರಿಯ ಶಕ್ತಿ ಕಾರಣವೇ?
ಇಲ್ಲ. ದೇವರ ಹೆಸರಲ್ಲಿ ಪರಿಹರಿಸಬಹುದು ಎಂದು ನಂಬಿಸುತ್ತಾರೆ. ಇದಕ್ಕೆ ಸಾಕ್ಷ್ಯಾಧಾರಗಳಿಲ್ಲ.
ಪೂರ್ವ ಜನ್ಮದ ಪಾಪ ಕರ್ಮದ ಫಲವೇ? ಜಾತಕ ದೋಷ ಗ್ರಹಗತಿ ಕಾರಣವೇ?
ಈ ರೀತಿಯಲ್ಲಿ ಹೇಳಿ ನಂಬಿಸಿ ಮೋಸ ಮಾಡುತ್ತಾರೆ. ನಾಗದೋಷ ಎಂದೂ ಹೇಳಿ ನಂಬಿಸುತ್ತಾರೆ. ಜನ್ಮ, ಪುನರ್ಜನ್ಮ, ಗ್ರಹಗತಿ, ಗ್ರಹಚಾರಗಳೆಲ್ಲವೂ ನಂಬಿಕೆಗಳಷ್ಟೇ.
ಅತಿ ಕಾಮ, ಅತಿ ಬುದ್ಧಿವಂತಿಕೆ ಕಾರಣವೇ?
ಅಲ್ಲ. ನೋವು, ನಷ್ಟ, ಹತಾಷೆ, ನಿರಾಶೆಗಳು ಕಾರಣವಾಗುತ್ತವೆ. ಮನೋರೋಗ ಬರಬಹುದು.
ಮಕ್ಕಳಿಗೆ ಮಾನಸಿಕ ಕಾಯಿಲೆ ಬರಬಹುದೇ?
ಖಿನ್ನತೆ, ಅತಿಯಾದ ವರ್ತನೆಗಳಂತ ಲಕ್ಷಣಗಳು ಮಾನಸಿಕ ಕಾಯಿಲೆಯ ಲಕ್ಷಣಗಳಾಗಿವೆ.
ದುಷ್ಚಟಗಳು ಮನೋರೋಗವೇ?
ಹೌದು. ಧೂಮಪಾನ, ಮದ್ಯ, ಗಾಂಜಾ, ಹೆರಾಯಿನ್ ಸೇವಿಸುವುದೆಲ್ಲವೂ ರೋಗ ಲಕ್ಷಣಗಳು.
ದಿಢೀರ್ ಲಾಭ, ಸಂತೋಷದಿಂದ ಮನೋರೋಗ ಬರಬಹುದೇ?
ಬರಬಹುದು.
ನಿದ್ರಾಹೀನತೆಯಿಂದ ಬರಬಹುದೇ?
ಬರಬಹುದು. ನಿದ್ರೆ ಅನ್ನಾಹಾರಗಳಷ್ಟೇ ಮುಖ್ಯ. 7 ದಿನಗಳ ನಿದ್ರಾಹೀನತೆ ಅಪಾಯ.
ತೀವ್ರ ಪೆಟ್ಟು, ಪ್ರಜ್ಞೆ ಇಲ್ಲ, ಕಿವಿ ಗಂಟಲಲ್ಲಿ ರಕ್ತಸ್ರಾವ?
ಹೌದು.
ಅಮಾವಾಸ್ಯೆ, ಪೌರ್ಣಿಮೆಯಿಂದ ಬರಬಹುದೇ?
ಇಲ್ಲ.
ಮನೊರೋಗ, ಹುಚ್ಚು ಎರಡೂ ಒಂದೇ?
ತೀವ್ರಗತಿಯ ಮನೋರೋಗ ಅಷ್ಟೇ.
ಧಾರ್ಮಿಕ ಆಚರಣೆಗಳಿಂದ ಮನೊರೋಗ ವಾಸಿಯಾಗಬಲ್ಲುದೇ?
ಇಲ್ಲ.
ಚಿಕಿತ್ಸೆ: ಆಯುರ್ವೇದಿಕ, ಹೋಮಿಯೋಪಥಿ, ಆಧುನಿಕ ವೈದ್ಯ, ಯೋಗ?
ಆಧುನಿಕ ಚಿಕಿತ್ಸೆ ಒಳ್ಳೆಯದು.
ಜನಸಂಖ್ಯೆಯ 10% ಜನರಿಗೆ ಮಾನಸಿಕ ಕಾಯಿಲೆ ಇದೆ. ಖಿನ್ನತೆ, ಆತಂಕ, ಸ್ಕಿಜೋಫ್ರೇನಿಯಾ ಸಮಸ್ಯೆಗಳು ಬರುತ್ತವೆ. ಮನೋರೋಗವನ್ನು ಗುರುತಿಸಿ. ಆಪ್ತ ಸಮಾಲೋಚನೆ ಮಾಡಿ. ಪ್ರೀತಿಯಿಂದ ಮಾತನಾಡಬೇಕು. ಅಂತವರನ್ನು ಮನೋವೈದ್ಯರ ಬಳಿ ಕಳಿಸಿ, ಆರೋಗ್ಯ, ಶಿಕ್ಷಣ, ನೀಡಬೇಕು. ಮಾನಸಿಕ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಇದೆ ಎಂದರು.
ಔಷಧಿಗಳು, ವಿದ್ಯುತ್ ಕಂಪನ, ಆಪ್ತ ಸಮಾಲೋಚನೆ, ಯೋಗ, ಧ್ಯಾನ ಎಲ್ಲವೂ ಪರಿಹಾರಗಳು ಎಂದು ಮಾಹಿತಿ ಹಂಚಿಕೊಂಡರು.
2 Responses
ಮಾನವ ಬಂಧ್ದುತ್ವ ವೇದಿಕೆಯಿಂದ ಜನರಿಗೆ ಇನ್ನೊ ಹೆಚ್ಚಿನ ರಿತಿಯಲ್ಲಿ ತಿಳುವಳಿಕೆ ಒಳ್ಳೆ ವಿಚಾರಗಳು ಸಿಗುವಂತಾಗಬೇಕು..
ಒಳ್ಳೆಯ ಮಾಹಿತಿ ಧನ್ಯವಾದಗಳು