March 25, 2023 4:17 pm

ಪೂರ್ವಾಗ್ರಹಗಳು ಮತ್ತು ವಾಸ್ತವದ ಅರಿವು: ಅಂಬೇಡ್ಕರ್ ಅಭಿಯಾನದ ಒಂದು ಅನುಭವ

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಅಂಬೇಡ್ಕರ್ ಅಭಿಯಾನವನ್ನು ಆರಂಭಿಸಿತ್ತು. ಆರಂಭದಿಂದಲೂ ನಾನು ಅದರ ಭಾಗವಾಗಿದ್ದೆ. ನಾಲ್ಕು ಜಿಲ್ಲೆಗಳಲ್ಲಿ ನಾನು ಸಂಪನ್ಮೂಲ ವ್ಯಕ್ತಿಯಾಗಿದ್ದೆ. ಹಿರಿಯ ಸ್ನೇಹಿತರಾದ ಲಕ್ಷ್ಮಣ ಮರಡಿತೋಟ ಅವರು ನಮ್ಮ ಭಾಗದ ಸಂಚಾಲಕರಾಗಿದ್ದರು.

ಒಂದು ದಿನ ನಾವಿಬ್ಬರೂ ತಾಳಿಕೋಟೆಗೆ ಹೋದೆವು. ಅಲ್ಲಿ ಒಂದು ವೀರಶೈವ ಸಮುದಾಯ ನಡೆಸುವ ಖಾಸಗೀ ಕಾಲೇಜು. ಸಾಕಷ್ಟು ದೊಡ್ಡ ಕಾಲೇಜು. ಪ್ರಾಚಾರ್ಯರೊಂದಿಗೆ ಲಕ್ಷ್ಮಣ ಅವರು ಮೊದಲೇ ಮಾತನಾಡಿದ್ದರು. ನಾವು ಕಾಲೇಜಿಗೆ ಹೋಗಿ ಪ್ರಾಚಾರ್ಯರನ್ನು ಭೇಟಿಯಾಗಿ ಪರಿಚಯಿಸಿಕೊಂಡೆವು.

ಬನ್ನಿ ಕುಳಿತುಕೊಳ್ಳಿ ಎಂದರೇ ಹೊರತು ಯಾವ ಆಸಕ್ತಿಯನ್ನೂ ತೋರಿಸಲಿಲ್ಲ.‌ ಸ್ವಲ್ಪ ಕೆಲಸ ಇದೆ‌ ಮುಗಿಸ್ತೀನಿ ಮಾತಾಡೋಣ ಅಂದವರು ಕೆಲಸದಲ್ಲಿ ಮಗ್ನರಾದರು. ಅರ್ಧಗಂಟೆ ನಂತರ ಎದ್ದು ಹೊರಹೋದವರು ಹತ್ತು ನಿಮಿಷ ಬಿಟ್ಟು ಬಂದು ಉಪನ್ಯಾಸ ಮಾಡೋರು ಯಾರು ಅಂದರು. ಆಗ ಲಕ್ಷ್ಮಣ ಸರ್ ನನ್ನನ್ನು ಪರಿಚಯಿಸಿ ಇವರೇ ಅಂದರು. ಅದಕ್ಕವರು ನನ್ನನ್ನೇ ಕೆಲ ಕ್ಷಣ ನೋಡಿ ನಮ್ಮದು ವೀರಶೈವ ಕಾಲೇಜು, ಸರಕಾರಿ ಆದೇಶವಿದೆ ಎಂಬ ಕಾರಣಕ್ಕೆ ನಿಮಗೆ ಅವಕಾಶ ಕೊಡ್ತಾ ಇದ್ದೇವೆ. ಏನಾದ್ರೂ ಕಾಂಟ್ರವರ್ಸಿ ಆದ್ರೆ ಸಮಸ್ಯೆಯಾಗುತ್ತೆ. ಅದಕ್ಕೆ ನಮ್ಮಲ್ಲೇ ಒಬ್ರು ಮೇಸ್ಟ್ರು ಅಂಬೇಡ್ಕರ್ ಬಗ್ಗೆ ಮಾತಾಡ್ತಾರೆ. ನೀವು ನಿಮಗೆ ಬೇಕಾದ ಫೋಟೋ ತೆಗೆದು ಕಳಿಸಿ, ನಾವು ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಆಗಿದೆ ಅಂತ ಬರೆದು ಕೊಡ್ತೀವಿ ಅಂದ್ರು. ಅದಕ್ಕೆ ಲಕ್ಷ್ಮಣ ಸರ್ ಇಲ್ಲ ಸರಕಾರ ಯೂನಿವರ್ಸಿಟಿ ಟೆಕ್ಸ್ಟ್ ರೆಡಿ ಮಾಡಿ, ಅದರ ಬಗ್ಗೆ ತರಬೇತಿ ನೀಡಿದೆ. ಏನೂ ಸಮಸ್ಯೆ ಆಗಲ್ಲ… ಈಗಾಗಲೇ ಸಾಕಷ್ಟು ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡಿದ್ದೇವೆ ಅಂದ್ರು.

ನಾವು ಹೇಳಿದ ಒಂದು ಕಾಲೇಜಿನ ಪರಿಚಿತ ಪ್ರಾಂಶುಪಾಲರಿಗೆ ಕರೆ ಮಾಡಿ ವಿಚಾರಿಸಿ ನಂತರ ಪರೀಕ್ಷೆಗಳು ಹತ್ತಿರಕ್ಕಿವೆ, ಕ್ಲಾಸ್ ಗಳನ್ನು ನಡೆಸಬೇಕು ಬೇಗ ಮುಗಿಸಬೇಕು ಎಂದು ಹೇಳಿ ತಯಾರಿಗೆ ಹೋದರು. ಯಾವುದೋ ಸಂಸ್ಥೆಯವರು ಸರಕಾರಿ ದುಡ್ಡು ಹೊಡೆಯಲು ಯೋಜನೆ ಹಾಕಿಕೊಂಡು ಬಂದಿದ್ದಾರೆ ಅನ್ನುವಂತಿತ್ತು ಅವರ ಭಾವನೆ. ನನ್ನನ್ನು ನೋಡಿದ ಮೇಲಂತೂ ಮತ್ತಷ್ಟು ನಿರಾಸಕ್ತಿಯಿಂದ ಮಾತನಾಡಿದರು.

ದೊಡ್ಡ ಹಾಲ್ ನಲ್ಲಿ ಕಾರ್ಯಕ್ರಮದ ತಯಾರಿ ಮಾಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತುಂಬಿದ್ದರು. ಅದು ನಮಗಾಗಿ ಅಲ್ಲ, ಅದಕ್ಕೆ ಕಾರಣ ಉದ್ಘಾಟನೆಗೆ ಆಡಳಿತ ಮಂಡಳಿಯ ಛೇರ್ಮನ್ ಬರ್ತಾರೆ ಎಂಬುದಾಗಿತ್ತು.

ಬಿಳಿ ಬಣ್ಣದ ಖಾದಿ ತೊಟ್ಟ ಛೇರ್ಮನ್ ಕಾರು ಇಳಿದು ಬಂದ್ರು. ಬಂದವರೇ ನಮ್ಮ ಕೈ ಕಲುಕಿ ಅರ್ಜಂಟ್ ಬೇರೆ ಕೆಲಸಕ್ಕೆ ಹೋಗಬೇಕಿದೆ. ಉದ್ಘಾಟನೆ ಮಾಡಿ ಹೋಗಿ ಬಿಡ್ತೀನಿ ಅಂದ್ರು.

ನಾವು ಸರಿ ಅಂದ್ವಿ. ಕಾರ್ಯಕ್ರಮ ಶುರುವಾಯಿತು. ಅವರಿಗೆ ಆಗಾಗ ಕರೆಗಳು ಬರುತ್ತಿದ್ದವು. ಅವರೂ ಅರ್ಧಗಂಟೆಯಲ್ಲಿ ಬಂದೇ ಎನ್ನುತ್ತಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮನದಲ್ಲಿ ಜಾತಿ ವಿಷ ಬಿತ್ತುವ, ಗೊಂದಲ ಸೃಷ್ಟಿಸುವ  ಕೆಲಸವಾಗದಂತೆ ಮಾತಾಡಿ ಎಂದು ಹೇಳಿ ಕುಳಿತರು.

ನಾನು ಅಂಬೇಡ್ಕರ್ ಕುರಿತು ಮಾತನಾಡಲಾರಂಭಿಸಿದೆ. ಹತ್ತು ನಿಮಿಷ, ಅರ್ಧ ಗಂಟೆ, ಒಂದು ಗಂಟೆ… ಹಾಗೇ ಮುಂದುವರೆದಿತ್ತು. ಇಡೀ ಸಭಾಂಗಣ ಸೈಲೆಂಟಾಗಿತ್ತು. ನಾನು ಸುಮ್ನೇ ತಿರುಗಿ ಚೇರ್ಮನ್ನರನ್ನು ನೋಡಿದರೆ ಅವರೂ ಅಲುಗಾಡದೇ ನನ್ನನ್ನೇ ನೋಡುತ್ತ ಕುಳಿತಿದ್ದರು. ನಾನು ಅವರತ್ತ ತಿರುಗಿ ನೋಡಿದಾಗ… ಮಾತಾಡಿ, ಮುಂದುವರೆಸಿ ನಾನು ಹೋಗುವ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದೆ. ನಿಮ್ಮ ಮಾತು ಕೇಳಬೇಕು ಮುಂದುವರೆಸಿ ಅಂದ್ರು. ನಾನು ಮತ್ತೇ ಒಂದು ಗಂಟೆ ಮಾತಾಡಿ ಮುಗಿಸಿದೆ.

ನನ್ನ ಮಾತು ಮುಗಿದ ತಕ್ಷಣ ಅವರು ಎದ್ದು ನಿಂತು ಮತ್ತೇ ಮೈಕ್ ಪಡೆದು. ಅಂಬೇಡ್ಕರ ಹೀಗೆಲ್ಲ ಇದ್ರಾ? ನಮಗೆ ಗೊತ್ತೆ ಇರಲಿಲ್ಲ. ಅವರು ವಿಚಾರಗಳು ಬಹಳ ಸರಿಯಾಗಿವೆ. ಅವರು ಬರೀ ದಲಿತರ ಬಗ್ಗೆ ಕೆಲಸ ಮಾಡಿ, ಬೇರೆಯವರನ್ನು ವಿರೋಧ ಮಾಡಿದ್ದಾರೆ ಅಂದ್ಕೊಂಡಿದ್ದೆ. ಆ ಸಂಘ… ಈ ಸಂಘ ಅಂತ ಬರ್ತಾರೆ… ನಿಮ್ಮನ್ನು ಹಾಗೇ ತಿಳಿದಿದ್ದೆ. ಎಲ್ಲ ವಿದ್ಯಾರ್ಥಿಗಳು, ಮಹಿಳೆಯರಂತೂ ಅವರ ಬಗ್ಗೆ ತಿಳಿಯಲೇಬೇಕು. ಅವರ ಎಲ್ಲ ಪುಸ್ತಕಗಳನ್ನು ಲೈಬ್ರರಿಗೆ ತರಿಸ್ತೀವಿ. ನೀವು ಅವುಗಳ ಹೆಸರು ಬರೆದು ಕೊಡಿ ಅಂದರು.

ಕಾರ್ಯಕ್ರಮದ ನಂತರ ಅಧ್ಯಕ್ಷರ ಚೇಂಬರ್ ನಲ್ಲೇ ವಿಶೇಷ ಊಟದ ವ್ಯವಸ್ಥೆ. ಪ್ರಾಚಾರ್ಯರೂ ಸೇರಿದಂತೆ ಎಲ್ಲರ ಮುಖದಲ್ಲೂ ಸಂತಸದ ಭಾವ. ನಮಗೆ ಹೊರಲಾಗದ ಮರ್ಯಾದೆ. ಅಮೌಂಟು ಕೊಡಬೇಕಾ? ಎಷ್ಟು ಹೇಳಿ ಚೆಕ್ ಬರೀತೀನಿ ಅನ್ನೋ ಮಾತು. ನಾವು ನಿರಾಕರಿಸಿ ಬರುವವರೆಗೂ ಚೇರ್ಮನ್ನರು ನಮ್ಮನ್ನು ಬಿಟ್ಟು ಕದಲಲಿಲ್ಲ. ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿ ಅರ್ಧ ಗಂಟೆಯಾಗಿಲ್ಲ. ಅದೇ ಚೇರ್ಮನ್ನರ ಫೋನು. ಮುದ್ದೇಬಿಹಾಳ ತಲುಪುವವರೆಗೂ ಮಾತು. ಮದ್ದೇಬಿಹಾಳದಲ್ಲಿ ಇರುವ ಖರ್ಚು ನೋಡಿಕೊಳ್ಳಲು ಯಾರಿಗೋ ಹೇಳ್ತೀನಿ ಅಂದ್ರು. ನಾವು ಎಲ್ಲ ವ್ಯವಸ್ಥೆ ಸರಕಾರದದ ಆಗಿರುವುದರಿಂದ ಬೇಡ ಅಂದೆವು.

ಮರುದಿನ ಮತ್ತೇ ಅವರದೇ ಕರೆ.

ಮತ್ತೊಮ್ಮೆ ಕಾಲೇಜಿಗೆ ಬರಬೇಕು ಎಲ್ಲ ವಿದ್ಯಾರ್ಥಿಗಳನ್ನು ಸೇರಿಸುತ್ತೇವೆ ಅಂದ್ರು.

ನನಗನಿಸಿತು… ಅಂಬೇಡ್ಕರ್ ಚಿಂತನೆಗಳನ್ನು ನಾವೇ ಬಂಧಿಸಿ ಬಿಟ್ಟೆವಾ? ಕೆಲ ಅಂಶಗಳನ್ನು ಮಾತ್ರ ಹಿಡಿದು ಅಸ್ತ್ರ ಮಾಡಿಕೊಂಡ ಕಾರಣ ಬೇರೆಯವರು ಅವುಗಳಿಂದ ದೂರವಾಗುವಂತಾಯ್ತಾ? ಅಂಬೇಡ್ಕರ್ ಕುರಿತು ಮೇಲಿನ ಸಮಾಜಕ್ಕಿರುವ ಪೂರ್ವಾಗ್ರಹ ಮುಂಚಿನಿಂದಲೂ ಇರುವಂಥದ್ದಾ? ಅಥವಾ ಸೃಷ್ಟಿಸಲ್ಪಟ್ಟಿತಾ?

ಅಂಬೇಡ್ಕರರ ತಾಯಿ ಹೃದಯದ ಚಿಂತನೆಗಳನ್ನು ಎಲ್ಲ ಸಮಾಜಗಳು ಯಾಕೆ ಸ್ವೀಕರಿಸಲಿಲ್ಲ?  ಹೀಗೆ ನೂರೆಂಟು ಪ್ರಶ್ನೆ.

ಮಹಾಲಿಂಗಪ್ಪ ಆಲಬಾಳ, ಸಾಂಸ್ಕೃತಿಕ ಚಿಂತಕರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ