March 25, 2023 4:34 pm

ತಬ್ಬಲಿ ಅಲೆಮಾರಿ ಜನಾಂಗಗಳಿಗೆ ಸರ್ಕಾರಗಳು ತಾಯತ್ತನ ತೋರಬೇಕು

ಭಾರತದಲ್ಲಿ ಒಬ್ಬ ರಾಜಕಾರಣಿ, ಉನ್ನತ ಅಧಿಕಾರಕ್ಕೆ ಬಂದು ಕೆಲವೇ ವರ್ಷಗಳಲ್ಲಿ ಸಾವಿರಾರು ಎಕರೆ ಭೂಮಿ‌ ಸಾವಿರಾರು‌ ಕೋಟಿ ಹಣ ಸಂಪಾದಿಸುತ್ತಾನೆ. ಸಂಪಾದಿಸಿದ್ದನ್ನು ಉಳಿಸಿಕೊಳ್ಳಲು ಹಾಗೂ ಅರಸೊತ್ತಿಗೆಯಂತೆ ಅಧಿಕಾರವನ್ನು ತನ್ನ ಮಕ್ಕಳು ಮೊಮ್ಮಕ್ಕಳಲ್ಲೇ ಗಿರಕಿ ಹೊಡೆಯುವಂತೆ ನೋಡಿಕೊಳ್ಳಲು ಇಳಿಯಬಾರದ ಪಾತಾಳಕ್ಕೆ ಇಳಿದು ಬೇಕಾದರೂ ಅದನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಸಾವಿರಾರು ವರ್ಷಗಳಿಂದ ಭೂಮಿ ಇಲ್ಲದೆ ಮನೆ ಇಲ್ಲದೆ ಒಳ್ಳೆಯ ಬಟ್ಟೆ ಇಲ್ಲದೆ ಊಟವಿಲ್ಲದೆ ಅಕ್ಷರವಿಲ್ಲದೆ ಭಾರತಮ್ಮನ ಮಕ್ಕಳಾಗಿದ್ದೂ ಪರಕೀಯರಂತೆ ಅನಾಥರಂತೆ ಬದುಕುತ್ತಿರುವ ಅಲೆಮಾರಿಗಳು, ನಾಗರಿಕ ಸಮಾಜದ ಕಣ್ಣಲ್ಲಿ ಕಳ್ಳರು ದರೋಡೆಕೋರರು ಕೀಳು ಜನರು ಎನಿಸಿಕೊಳ್ಳುತ್ತಾ ಅಸ್ತಿತ್ವವೇ ಇಲ್ಲದಂತೆ ಬಾಳುತ್ತಿದ್ದಾರೆ.

ಬ್ರಿಟಿಷರು ಜಾರಿಗೆ ತಂದಿದ್ದ ಕ್ರಿಮಿನಲ್ ಟ್ರೈಬ್ ಆ್ಯಕ್ಟಿನ ಅಡಿಯಲ್ಲಿ ತೊಂದರೆ ಕೊಡಬಹುದಾದ ಕಟ್ಟುಗ್ರವಾದ ಕಾನೂನುಗಳು ಈಗಲೂ ಅಸ್ಥಿತ್ವದಲ್ಲಿವೆ. ಅವರಿಗೆ ಜೀವನದ ದಾರಿ ಕಲ್ಪಿಸದೆ ಸಣ್ಣಪುಟ್ಟ ತಪ್ಪುಗಳಿಗಾಗಿ ಶಿಕ್ಷಿಸುವ ಭೂ ಅಕ್ರಮಣ ಮಾಡಿದ್ದಾರೆ, ಅರಣ್ಯ ಅತಿಕ್ರಮಣ ಮಾಡಿದ್ದಾರೆ ಎಂದೆಲ್ಲಾ ಸರ್ಕಾರಗಳೇ ಬ್ರಹ್ಮಾಸ್ತ್ರ ಪ್ರಯೋಗಿಸುವ ಎಷ್ಟೋ ಘಟನೆಗಳು ಈಗಾಗಲೇ ನಡೆದು ಹೋಗಿವೆ. ಹಾಗಾದರೆ ನಿಜವಾದ ಖದೀಮರು ಯಾರು? ದೇಶದ ಭೂಮಿಯನ್ನೂ ಕಾಡನ್ನೂ ನದಿ‌‌ ಕೆರೆ ಕಡಲು ಕೊಳ್ಳ ಗಿರಿ ಎಲ್ಲವನ್ನೂ ಕಬಳಿಸುತ್ತಿರುವವರು ಯಾರು?

ಕಳೆದೆರೆಡು ವರ್ಷಗಳ ಹಿಂದೆ ನಾನು ಸಮಾನ ಮನಸ್ಕ ಸ್ನೇಹಿತರಾದ ಪ್ರಕಾಶ್ ಕೋನಾಪುರ, ಹರ್ಷಕುಮಾರ್ ಕುಗ್ವೆ ಅವರೊಂದಿಗೆ ನಮ್ಮ ಶಿಕಾರಿಪುರ ತಾಲೂಕು ಹಾಗೂ ಸೊರಬ ತಾಲೂಕಿನ ಕೆಲವು ಕಡೆ ವಾಸಿಸುತ್ತಿರುವ ದುರುಗಮುರಗಿ, ಹಕ್ಕಿಪಿಕ್ಕಿ, ದೊಂಬರು, ಮೊದಲಾದ ಅಲೆಮಾರಿಗಳ ಕ್ಯಾಂಪುಗಳಿಗೆ ಭೆಟ್ಟಿ ನೀಡಿದ್ದೆ. ಅವರು ತಾತ್ಕಾಲಿಕವಾಗಿ ಮಾತ್ರ ಯಾವುದೋ ಖಾಸಗಿಯವರ ಜಾಗದಲ್ಲಿ, ಇಲ್ಲವೇ ಸ್ಥಳೀಯ ಸಂಸ್ಥೆಯವರು ತೋರಿಸಿದ ಯಾವುದೋ ಸರ್ಕಾರಿ ಜಾಗದಲ್ಲಿ ತಮ್ಮ ಜೋಪಡಿಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಇಡೀ ರಾಜ್ಯದ ಅಲೆಮಾರಿಗಳ ಇದಕ್ಕೆ ಹೊರತಾಗಿಲ್ಲ‌.

ಸರ್ಕಾರ ಸಾರ್ವಜನಿಕ ಆಡಳಿತಕ್ಕೆಂದೇ ನೇಮಿಸುವ ಅಧಿಕಾರಿಗಳು ಬಹುಪಾಲು ಬಟ್ಟೆ ಮಾಸದಂತೆ ಅಥವಾ ಬಟ್ಟೆ ಮಾಸದ ಜಾಗೆಗಳಲ್ಲಿ ಮಾತ್ರ ಓಡಾಡುತ್ತಾ ಘನ ಮರ್ಯಾದೆ ಸಂಪಾದಿಸುತ್ತಾ ಕಡೆಗೆ ಪ್ರಾಮಾಣಿಕ ಅಧಿಕಾರಿ, ಜನಾನುರಾಗಿ, ಸಮರ್ಥ ಅಧಿಕಾರಿ, ಯಶಸ್ವಿ ಆಡಳಿತಗಾರ ಎಂದೆಲ್ಲಾ ಸನ್ಮಾನಿತನಾಗಿ ಮೆರೆಯುತ್ತಾನೆ‌. ಆದರೆ ದೇಶದ ಯಾವ ಊರಿನಲ್ಲೂ ನಿರ್ಗತಿಕರ ಹಾಗೂ ಅನಾಥ ಸಮುದಾಯಗಳ ಉದ್ಧಾರಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಅಧಿಕಾರಿ ಬಹಳವೆಂದರೆ ಬಹಳ ಕಡಿಮೆ. ಅಧಿಕಾರಿಗಳು ಹೊಣೆಗಾರಿಕೆಯಿಂದ ಬದ್ಧತೆಯಿಂದ ನಿಜವಾದ ಕಳಕಳಿಯಿಂದ, ನಿಜವಾಗಲೂ ಯಾರು ವಂಚಿತರೋ ಯಾರು ಶೋಷಿತರೋ ಅವರ ಪರವಾಗಿ‌ ಅಂತರಂಗದ ಕಣ್ಣಿಂದ ಕೆಲಸ ಮಾಡಿದ್ದರೆ ಬಹುಷಃ ಇಂದು ಯಾವ ಚಳುವಳಿಗಳ ಅವಶ್ಯಕತೆಯೂ ಇರುತ್ತಿರಲಿಲ್ಲ.

ಅಧಿಕಾರವೇ ಜನತೆಯ ಉದ್ಧಾರದ ಚಳುವಳಿಯಾಗಬೇಕು, ನಮ್ಮಲ್ಲಿ ಚಳುವಳಿಯಾಗುವ ಬದಲು ಯಜಮಾನ್ಯವಾಯಿತು. ಮತ್ತೊಂದು ಊಳಿಗಮಾನ್ಯವಾಯಿತು, ಮತ್ತೊಂದು ಉನ್ನತ ವರ್ಗವಾಯಿತು. ಆಳುವ ದೊಡ್ಡವರೆಲ್ಲಾ ನುಂಗುವ ಮೀನಾದರು. ಅಧಿಕಾರದ ಕೋಟೆಯೊಳಗಡೆ ಎಲ್ಲೆಲ್ಲೂ  ಇಲಿ ಹೆಗ್ಗಣಗಳು ದೋರು ಕೊರೆದುಕೊಂಡವು. ಕಬಳಿಸುವುದು ವಂಚಿಸುವುದು ಇದೇ ನೀತಿಯಾಯಿತು. ಇಲ್ಲದಿದ್ದರೆ ಇನ್ನೂ ಏಕೆ ಈ ದೇಶದಲ್ಲಿ ಅದೆಷ್ಟೋ ಅಲೆಮಾರಿ ಸಮುದಾಯಗಳು ವೃತ್ತಿ ಸಮುದಾಯಗಳು ಸ್ವಾತಂತ್ರ್ಯ ಸಿಕ್ಕು ಅರ್ಧ ಮುಕ್ಕಾಲು ಶತಮಾನದ ಸಮೀಪಕ್ಕೆ ಬಂದರೂ ಬಡತನ ನಿರುದ್ಯೋಗ ಅನಕ್ಷರತೆ ಅಪೌಷ್ಟಿಕತೆ  ಮೊದಲಾದ ದಾರಿದ್ರ್ಯಗಳಿಂದ ನರಳುತ್ತಿದ್ದರು?

ನಾವು ಗಮನಿಸಿದಂತೆ ಅಲೆಮಾರಿಗಳಲ್ಲಿ ಬಹಳೇ ಜನಕ್ಕೆ ಓಟಿನ ಕಾರ್ಡ್ ಮಾಡಿಸಿದ್ದಾರೆ. ಆದರೆ ರೇಶನ್ ಕಾರ್ಡ್ ಕೊಡಿಸಿಲ್ಲ, ಆಧಾರ್ ಕಾರ್ಡ್ ಕೊಡಿಸಿಲ್ಲ, ನಿವೇಶನ ಕೊಡಿಸಿಲ್ಲ. ಕನಿಷ್ಠಪಕ್ಷ ಶಾಲೆ ಶೌಚಾಲಯ ಏನೂ ಕೊಡಿಸಿಲ್ಲ. ಅಲೆಮಾರಿಗಳು ನಿತ್ತಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಅವರಿಗೆ ಶಾಲೆ ಎಂದು ಕಟ್ಟಿಸಿದರೆ ಮಕ್ಕಳೇ ಬರುವುದಿಲ್ಲ ಎಂಬ ವಾದವಿದೆ. ಅಲೆಮಾರಿಗಳು ಭಾರತಕ್ಕೆ ಸ್ವಾತಂತ್ರ್ಯ ಒದಗಿ ಮುಕ್ಕಾಲು ಶತಮಾನಕ್ಕೆ ಬಂದರೂ ಇನ್ನೂ ಅಲೆಯುವಂತೆಯೇ ಇಟ್ಟಿರುವ ಸರ್ಕಾರಗಳು ಅಲೆಮಾರಿ ಅಭಿವೃದ್ಧಿ ಮಂಡಳಿ ಮತ್ತು ಯೋಜನೆಗಳನ್ನು ರಚಿಸಿದ್ದರೂ ನಿರೀಕ್ಷಿತ ವೇಗದಲ್ಲಿ ಗುರಿ ತಲುಪಲು ಆಗಿಲ್ಲ.

ವೇಗವಾಗಿ ಬೆಳೆಯುತ್ತಿರುವ ನಾಗರೀಕತೆಗೆ ಒಗ್ಗಿಕೊಳ್ಳಲಾಗದೇ ಹೋರಾಡಲಾಗದೇ ಕುಸಿಯುತ್ತಿರುವ ಅಲೆಮಾರಿ\ಅರೆ ಅಲೆಮಾರಿಗಳ ಬದುಕು ಸರ್ಕಾರದ ಪ್ರಥಮ ಆದ್ಯತೆಯಾಗಬೇಕು. ಕೋವಿಡ್ ಲಾಕ್ ಡೌನಿನ ಸಂದರ್ಭದಲ್ಲಿ ಆ ಜನಾಂಗಗಳ ರಕ್ಷಣೆಗೆ ಯಾವ ಕಾರ್ಯಸೂಚಿಗಳೂ ಇರಲಿಲ್ಲ. ಸ್ವಯಂ ಸೇವಾ ಸಂಸ್ಥೆಗಳು, ಪ್ರಗತಿಪರ ಚಳುವಳಿಯ ಗುಂಪುಗಳು ತಕ್ಕಮಟ್ಟಿಗೆ ನೆರವಿಗೆ ಬಂದಿದ್ದಾರೆ ಬಿಟ್ಟರೆ ಪ್ರಸ್ತುತ ಸರ್ಕಾರದ ಪಾತ್ರ ಏನು ಎಂಬುದೇ ಗೊತ್ತಿಲ್ಲ. ಕೋಟ್ಯಂತರ ರೂಪಾಯಿ ಬಿಡುಗಡೆಯಾಗಿದ್ದರೂ ಸರ್ಕಾರದ ದಾಖಲೆಗಳಲ್ಲಿ ಬಳಸಿದ ಅಂಕಿಅಂಶಗಳು ದಾಖಲಾಗುತ್ತಿದ್ದರೂ ದಶಕಗಳಿಂದ ಅಲೆಮಾರಿಗಳು ಸ್ವಂತ ನಿವೇಶನವಿಲ್ಲದೆ ಹಕ್ಕುಪತ್ರವಿಲ್ಲದೆ ಉಳುಮೆಗೆ ಭೂಮಿ ಇಲ್ಲದೆ ನಿರಂತರ ದುಡಿಮೆ ಇಲ್ಲದೇ ನಿರೀಕ್ಷೆಗಳಲ್ಲೇ ಬದುಕು ದೂಡುತ್ತಿದ್ದಾರೆ. ಅವರನ್ನು ನಿತ್ತಲ್ಲಿ ನಿಲ್ಲಗೊಡದೆ ಒಕ್ಕಲೆಬ್ಬಿಸುವ ಅಧಿಕಾರಿ ವರ್ಗ ಪರ್ಯಾಯ ಜಾಗ ಕಲ್ಪಿಸಿದಾಗಲೂ ಅದೂ ಕೂಡಾ ಅನಿಶ್ಚಿತ. ಆ ಸಮುದಾಯಗಳು ಒಂದೆಡೆ ನೆಲೆ ನಿಲ್ಲಲು ಬೇಕಾದುದು ಸ್ಥಿರ ನಿವೇಶನ ವ್ಯವಸ್ಥೆ, ಕಡ್ಡಾಯ ಶಿಕ್ಷಣ ಮತ್ತು ಉದ್ಯೋಗ. ಇದು ಆಮೆಗತಿಯಲ್ಲಿ ಸಾಗುತ್ತಿದೆ.

ಕೆಲವು ಅಲೆಮಾರಿಗಳಿಗೆ ಒಳ ಮೀಸಲಾತಿ ಕಲ್ಪಿಸಿ ಪುನಶ್ಚೇತನಗೊಳಿಸಬೇಕಾದ ಅವಶ್ಯಕತೆ ಇದೆ. ಭ್ರಷ್ಟಾಚಾರವಿಲ್ಲದೆ, ಅಡಚಣೆ ಇಲ್ಲದೆ ಪ್ರಾಮಾಣಿಕವಾಗಿ ವೇಗವಾಗಿ ಅವರಿಗೆ ತಲುಪಬೇಕಿರುವ ಸೌಲಭ್ಯಗಳನ್ನು ತಲುಪಿಸುವ ಕಾಳಜಿ ಸರ್ಕಾರದ್ದೇ ಆಗಿರಬೇಕು. ಇತರೇ ದಲಿತ ಸಮುದಾಯಗಳಿಗೆ ಇರುವಂತೆ ಹೋರಾಡಿ ಹಕ್ಕು ಪಡೆಯಲು ಅಲೆಮಾರಿಗಳಿಗೆ ಜನಾಂಗೀಯ ಬಲವಾಗಲೀ, ರಾಜಕೀಯ ಶಕ್ತಿಯಾಗಲೀ, ಸಂಘಟನಾ ಶಕ್ತಿಯಾಗಲೀ ಇಲ್ಲ. ಅವರನ್ನು ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡದ ಹೊರತು ಸಂವಿಧಾನದ ಆಶಯಗಳನ್ನು ಪರಿಪೂರ್ಣಗೊಳಿಸಲು ಸಾಧ್ಯವಿಲ್ಲ.

ಅನೇಕ ಅಲೆಮಾರಿಗಳು ‘ಕ್ರಿಮಿನಲ್ ಟ್ರೈಬ್’ ನ ಹೆಸರಲ್ಲಿ ಸ್ವಾತಂತ್ರ್ಯಾನಂತರವೂ ಸಂಕಷ್ಟ ಅನುಭವಿಸಿದ್ದಾರೆ. ಬ್ರಿಟಿಷ್ ಕಾಲದ ಕೆಲವು ಕಾನೂನುಗಳು ಈಗಲೂ ಚಾಲ್ತಿಯಲ್ಲಿವೆ. ಕರ್ನಾಟಕದ ಗದಗ – ಬೆಟಗೇರಿ, ಬಿಜಾಪುರ, ಬಾಗಲಕೋಟೆ ಮೊದಲಾದೆಡೆ ಅಲೆಮಾರಿ ಸೆಟಲ್ಮೆಂಟ್ ಗಳು ಈಗಲೂ ಇವೆ. ಶಿಳ್ಳೆಕ್ಯಾತ, ಶಿಕ್ಕಲಗಾರ್, ಹರಣಶಿಖಾರಿ, ಹಂದಿಜೋಗಿ, ಮಾಂಗ್ ಗಾರುಡಿ, ದುರುಗಮುರಗಿ, ದೊಂಬಿದಾಸ ಮೊದಲಾದ ಅಲೆಮಾರಿ ಬುಡಕಟ್ಟುಗಳು ಸೆಟಲ್ಮೆಂಟಿನ ಬಂಧಿಗಳಾಗಿ ಜೀವಿಸುತ್ತಿದ್ದಾರೆ. ಅಂದರೆ ಸ್ವಚ್ಛಂದ ಜೀವನಕ್ಕೆ ತೆರೆದುಕೊಳ್ಳಲು ಅವರನ್ನು ಸರ್ಕಾರವೇ ಬಿಡದಿದ್ದರೆ ಆಂಗ್ಲರ ನೀತಿಗೂ ನಮ್ಮ ಪ್ರಜಾಪ್ರಭುತ್ವ ಸರ್ಕಾರದ ನೀತಿಗೂ ಏನೂ ವ್ಯತ್ಯಾಸವಿರುವುದಿಲ್ಲ.

ಧರ್ಮ ಜಾತಿ ಬಂಡವಾಳಶಾಹಿ ಹಿಡಿತದಲ್ಲಿರುವ ಇಂದಿನ ಸರ್ಕಾರಗಳು ರಾಜಕಾರಣಿಗಳು ರಾಜಕೀಯ ಪಕ್ಷಗಳಿಗೆ ಜನತೆಯ ಓಟು ಮಾತ್ರ ಬೇಕು. ಅದಕ್ಕಾಗಿ ಅತ್ಯಂತ ಜಾಗರೂಕತೆಯಿಂದ ಓಟಿನ ಗುರುತು ಪತ್ರ ಮಾಡಿಸಿದ್ದಾರೆ. ಚುನಾವಣೆಯ ಹಿಂದಿನ ದಿನ ರಾತ್ರೆ ದುಡ್ಡು ಮದ್ಯ ಕೊಟ್ಟರೆ ಆಯಿತು ಎಂಬುದೇ ಅವರ ಎಣಿಕೆ. ಈ ಬಗೆಯ ದುರಾಲೋಚನೆ ಬರೀ ರಾಜಕಾರಣಿಗಳಲ್ಲಿ ಮಾತ್ರವೇ ಇಲ್ಲ ಅವರನ್ನೂ ಸೇರಿಸಿಕೊಂಡು ಜಾತಿವಾದಿಗಳು ಅಧಿಕಾರ ದಾಹಿಗಳು ಅಧಿಕಾರಿಗಳು ಎಲ್ಲರಲ್ಲೂ ಇದೆ. ಪ್ರಾಮಾಣಿಕತೆಯಿಂದ ಜನತೆಯ ಕೆಲಸ ಮಾಡುವ ಅಧಿಕಾರಿಗಳಿದ್ದಾರೆ ರಾಜಕಾರಣಿಗಳಿದ್ದಾರೆ. ಆದರೆ ಅವರ ಸಂಖ್ಯೆ ಎಷ್ಟು? ಅಂತವರನ್ನು ಬಲಾಢ್ಯರಾದ ಭ್ರಷ್ಟರು ಪೀಡಿಸುತ್ತಾರೆ. ಒಳ್ಳೆಯ ಕೆಲಸ ಮಾಡುತ್ತಾನೆಂದರೆ ಅದು ಬಹು ಸಂಖ್ಯೆಯ ಜನಕ್ಕೆ ಆಗಿಬರುವುದಿಲ್ಲ. ಅವನಿಗೆ ಅಮಾನತ್ತು ಎತ್ತಂಗಡಿ ವಜಾ ಸಾಧ್ಯವಾದರೆ ಜೀವಕಂಟಕ ಕಟ್ಟಿಟ್ಟ ಬುತ್ತಿ. ಇಂತಹ ವ್ಯವಸ್ಥೆಯನ್ನು ಬದಲಾಯಿಸಲು ಶಿಕ್ಷಣ ಪರಿಹಾರ ಎಂದು ನಾನಂತೂ ನಂಬುವುದಿಲ್ಲ. ಕಾರಣ ಶಿಕ್ಷಿತರೇ ಬಹುಪಾಲು ಶೋಷಕರು.

ಯಾವನಾದರೂ ಬಂಡವಾಳಶಾಹಿ ತನಗೆ ಸಾವಿರಾರು ಎಕರೆ ಭೂಮಿ ಮಂಜೂರು ಮಾಡಬೇಕೆಂದು ಆಳುವ ಸರ್ಕಾರದ ಮುಂದೆ ಪ್ರಸ್ತಾವವನ್ನಿಟ್ಟರೆ ಅದನ್ನ ಜನರ ಮೇಲೆ ದಬ್ಬಾಳಿಕೆ ಮಾಡಿ ರೈತರಿಂದ ಕಸಿದು ಕೊಡಲು ಮುಂದಾಗುವ ಸರ್ಕಾರ ತನ್ನದೇ ಪ್ರಜೆಗಳಾದ ಅಲೆಮಾರಿಗಳ ವಸತಿ ಶಿಕ್ಷಣ ಆರೋಗ್ಯ ಆಹಾರ ರಕ್ಷಣೆಗಳನ್ನು ತುಂಬಾ ನಿರ್ಲಕ್ಷಿಸುತ್ತವೆ. ನಾವು ಅಲೆಮಾರಿಗಳ ಕ್ಯಾಂಪಿಗೆ ಭೆಟ್ಟಿಕೊಟ್ಟಾಗ ಕಷ್ಟದ ನಡುವೆಯೇ ಹೇಗೆಹೇಗೋ ಹೋರಾಡಿ ಬಿ.ಎಡ್., ಓದಿದ ಸುಡುಗಾಡು ಸಿದ್ದರ ಜನಾಂಗದ ವ್ಯಕ್ತಿಯೊಬ್ಬ ಸಿಕ್ಕಿದ. ಆತ ಪ್ಲಾಸ್ಟಿಕ್ ಕೊಡಪಾನ, ಬಕೆಟ್, ಪೊರಕೆ, ಮೊದಲಾದವನ್ನು ಮಾರಾಟ ಮಾಡಿ ಹೊಟ್ಟೆ ಹೊರೆಯುತ್ತಿದ್ದ‌. ಎಷ್ಟು ಪ್ರಯತ್ನಿಸಿದರೂ ಆತನಿಗೆ ಸರ್ಕಾರಿ ಕೆಲಸ ಸಿಗಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ತನಗೆ ಜಾತಿ ಕಿರುಕುಳ ತಪ್ಪಲಿಲ್ಲ. ಆದ್ದರಿಂದ ಜೀವನೋಪಾಯಕ್ಕಾಗಿ ಆತ ಈ ದುಡಿಮೆ ನಂಬಿದ್ದುದಾಗಿ ಹೇಳಿಕೊಂಡು ವಿಷಾದಿಸಿದ. ಸುಡುಗಾಡು ಸಿದ್ದರು ಅಥವಾ ಬುಡಬುಡಕಿಗಳು ಕೆಲವು ಕಡೆ ಒಳ್ಳೆಯ ಸ್ಥಿತಿಯಲ್ಲೇ ಇದ್ದರೂ ಬಹು ಸಂಖ್ಯೆಯಲ್ಲಿ ದಯನೀಯ ಸ್ಥಿತಿಯಲ್ಲೇ ಬದುಕು ಸಾಗಿಸುತ್ತಿದ್ದಾರೆ‌. ಈ ರೀತಿಯಲ್ಲಿಯೇ ಈಗಾಗಲೇ ಕರ್ನಾಟಕದಲ್ಲಿ ಗುರುತಿಸಲಾಗಿರುವ ಬೈರಾಗಿ (ಬಾವ) ಬಾಲಸಂತೋಷಿ – ಜೋಷಿ, ಬಾಜಿಗರ್, ಭರಡಿ, ಬುಡಬುಡಕಿ, ಜೋಷಿ, ಗೊಂಧಳಿ, ಚಾರ, ಚಿತ್ರಕಥಿ-ಜೋಷಿ, ಧೋಲಿ, ಡವೇರಿ, ದೊಂಬರಿ, ಘಿಸಾಡಿ, ಗಾರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ನಂದಿವಾಲ, ನಿರ್ಶಿಕಾರಿ, ಹಾವಾಡಿಗ, ಬೈಲಪತ್ತರ್, ದೊಂಬಿದಾಸ, ಶಿಕ್ಕಲಿಗ, ಕಾಶಿ ಕಪಾಡಿ, ದೊಂಬಿದಾಸ ಇನ್ನೂ ಹಲವಾರು ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ನಾಗರಿಕರೆನಿಸಿಕೊಂಡ ಜನಸಮುದಾಯಗಳಿಗೆ ಅಪರಿಚಿತವಾಗೇ ಉಳಿದಿವೆ. ಅಜ್ಞಾತರಂತೆ ಬದುಕುವ ಈ ಜನಗಳ ಪರವಾಗಿ ಅನೇಕ ಸಂಘಟನೆಗಳು, ಎನ್ ಜಿ ಒ ಗಳು ಪ್ರಗತಿಪರ ಹೋರಾಟಗಾರರು ಚಿಂತಕರು, ಜನಾಂಗೀಯ ತಜ್ಞರು, ವಿಶ್ವವಿದ್ಯಾನಿಲಯಗಳು, ಜೀವಪರವಾದ ಪತ್ರಿಕಾ ವರದಿಗಾರರು ಪತ್ರಿಕೆಗಳು ತಕ್ಕಮಟ್ಟಿನ ಹೋರಾಟ ಮಾಡಿ ಮೂಲಭೂತ ಹಕ್ಕುಗಳನ್ನು ಒದಗಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ‌‌. ಮುಖ್ಯವಾಹಿನಿಗೆ ತರುವುದಕ್ಕೆ ಸರ್ಕಾರಗಳು ತಮ್ಮ ನಿರ್ಲಕ್ಷ್ಯ ಧೋರಣೆ ಬದಿಗಿಟ್ಟು ಅಲಕ್ಷಿತ ಸಮುದಾಯಗಳ ತಬ್ಬಲಿ ಜನಾಂಗಗಳ ತಾಯಿಯಂತೆ ನೆಡೆದುಕೊಳ್ಳಬೇಕು. ರಾಜಕಾರಣ ಮಾನವನ ವಿಕಾಸದ ಪರಮೋದ್ದೇಶಕ್ಕಾಗಿ ಇರಬೇಕೇ ಹೊರತು ಅವನ ಹಕ್ಕುಗಳನ್ನು ಕಿತ್ತುಕೊಳ್ಳಲು ಅಥವಾ ಯಥಾಸ್ಥಿತಿಯಲ್ಲಿಡಲು ಅಲ್ಲ. ಈಗಿನ ಸರ್ಕಾರಗಳಿಗೆ ಈ ವಿವೇಕ ತೀರಾ ಕಡಿಮೆ.

  • ಸುರೇಶ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ