March 29, 2023 10:58 pm

ಸಮಾನತೆ ವರ್ಸಸ್ ಅಸಮಾನ ಜೀವ ವಿರೋಧಿ ಸಿದ್ಧಾಂತ

ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಅವರು ಸಂವಿಧಾನ ಓದು ಸಿದ್ಧಾಂತ ತಿಳಿಸುವ ವಿಧಾನ ಆಗಬಾರದು ಎಂದು ಠರಾವು ಪಾಸ್ ಮಾಡಿದ್ದಾರೆ. ಸಂವಿಧಾನದ ಬಗ್ಗೆ ಜನರಿಗೆ ವಿದ್ಯಾರ್ಥಿಗಳಿಗೆ ತಿಳಿಸುವಾಗ ರಾಗ ದ್ವೇಷ ಇರಬಾರದು. ಸಂವಿಧಾನವನ್ನು ಓದಿ ಎಂದು ಹೇಳುವುದು ಯಾವುದೋ ಸಿದ್ಧಾಂತವನ್ನು ತಿಳಿಸುವ ವಿಧಾನ ಆಗಬಾರದು ಎಂದು ಅವರು ದಿನಾಂಕ 14.03.2021ರಲ್ಲಿ ಹೇಳಿದ್ದರು.

ಚಾಮರಾಜನಗರದಲ್ಲಿ ನಡೆದ ನ್ಯಾ. ನಾಗಮೋಹನ್ ದಾಸ್ ಅವರ ಸಂವಿಧಾನ ಓದು ಕೃತಿಯನ್ನು ಪಿಯುಸಿ ವಿದ್ಯಾರ್ಥಿಗಳಿಗೆ ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಹೀಗೆ ಹೇಳಿರುವುದನ್ನು ವಿಶೇಷವಾಗಿ ನಾವು ಗಮನಿಸಬೇಕು.

ಸುರೇಶ್ ಕುಮಾರ್ ಅವರು ಲಾಠಿ ಬೀಸುತ್ತ ನಮಸ್ತೆ ಸದಾ ವತ್ಸಲೆ ಕಲಿತ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಹೇಳಿಕೊಡುವುದಕ್ಕಿಂತ ತೀರಾಭಿನ್ನವಾದ, ಮಾನವೀಯವಾದ, ಸಮಾಜವಾದಿ, ಸಮಾನತೆಯ ಆಶಯಗಳನ್ನು, ಸಿದ್ಧಾಂತಗಳನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಆಚರಣೆಗೆ ತರಲು ಒತ್ತು ನೀಡುತ್ತದೆ.

ಅಸಮಾನತೆ ನಂಬಿರುವ ಸಂಘ ಪರಿವಾರಕ್ಕೆ ಸರ್ವರಿಗೂ ಸಮಾನ ಅವಕಾಶ ನೀಡುವ ಸಂವಿಧಾನ ಅರಗದ ಕಹಿ ಗುಳಿಗೆ. ಮನು ಸ್ಮೃತಿ ಪ್ರಕಾರ ಸಕಲ ಆಸ್ತಿ, ಸಂಪತ್ತು, ಎಲ್ಲ ವರ್ಗದ ಮಹಿಳೆಯರು ಕೂಡ ಬ್ರಾಹ್ಮಣರ ಒಡೆತನಕ್ಕೆ ಸೇರಿದ್ದಾರೆ. ಸಂವಿಧಾನದ ಪ್ರಕಾರ ಇವೆಲ್ಲ ಅಮಾನ್ಯ. ಆದ್ದರಿಂದಲೇ ಸಂಘ ಪರಿವಾರದವರು ಸಂವಿಧಾನ ಸುಡುತ್ತಾರೆ. ಸಂವಿಧಾನ ಸರಿ ಇಲ್ಲ, ಬದಲಿಸುವ ಸಲುವಾಗಿಯೇ ನಾವು ಬಂದಿದ್ದೇವೆ ಎನ್ನುತ್ತಾರೆ. ಇವರಿಗೆ ಸಂವಿಧಾನ ಬದಲಿಸಿ, ಮನು ಸ್ಮೃತಿಯನ್ನು ಅದರ ಜಾಗದಲ್ಲಿ ಪ್ರತಿಷ್ಠಾಪಿಸುವ ಬಯಕೆ ಇದೆ.

ಸುರೇಶ್ ಕುಮಾರ್ ಅವರು ನಂಬಿರುವ ಸಿದ್ಧಾಂತ ಅಸಮಾನತೆ. ಇವರ ಪ್ರಕಾರ ಮನು ಸಂವಿಧಾನವೇ ಶ್ರೇಷ್ಠ. ಅದರಲ್ಲಿ ಇರುವುದಾದರೂ ಏನು? ಶೂದ್ರರು (ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರನ್ನು ಹೊರತುಪಡಿಸಿ ಉಳಿದ ಎಲ್ಲ ಶ್ರಮಿಕ ವರ್ಗ, ಜಾತಿಯ ಜನ) ಮತ್ತು ಮಹಿಳೆಯರಿಗೆ ಓದುವ, ಜ್ಞಾನ, ಸಂಪತ್ತು, ಆಸ್ತಿಗಳನ್ನು ಹೊಂದುವ ಹಕ್ಕಿಲ್ಲ. ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ಅವಕಾಶ ಕೊಟ್ಟದ್ದು ಸಂವಿಧಾನ. ಇಲ್ಲಿ ಎಲ್ಲರೂ ಸಮಾನರು. ರಾಷ್ರಪತಿಗೂ ಒಂದೇ ವೋಟು, ಭಿಕ್ಷುಕನಿಗೂ ಒಂದೇ ವೋಟು. ಸಂವಿಧಾನ ನ್ಯಾಯಯುತ ಮಾರ್ಗದಲ್ಲಿ ದುಡಿದು ಗೌರವಯುತ ಬದುಕು ಸಾಗಿಸಲು ಅವಕಾಶ ನೀಡಿತು. ಕಷ್ಟಪಟ್ಟು ದುಡಿದು ಕಾರು, ಮನೆ, ಬೈಕ್, ಹೆಲಿಕಾಪ್ಟರ್, ವಿಮಾನ ಕೊಳ್ಳುವ ಅವಕಾಶವನ್ನು ಎಲ್ಲರಿಗೂ ನೀಡಿದ್ದು ಸಂವಿಧಾನ.

ಸುರೇಶ್ ಕುಮಾರ್ ಅವರು ನಂಬಿರುವ, ಆಚರಿಸುವ ಸಂಘ ಪರಿವಾರದ ಮನುವಾದದ ಪ್ರಕಾರ, ಶೂದ್ರರಿಗೆ ನಾಗರಿಕ ಸೌಕರ್ಯಗಳನ್ನು ಹೊಂದುವ ಹಕ್ಕಿಲ್ಲ. ಇದರ ಭಾಗವಾಗಿಯೇ ಅವರು ಎನ್.ಆರ್.ಸಿ., ಸಿಎಎ, ವಿವಾದಾಸ್ಪದ ರೈತ ಮಸೂದೆಗಳನ್ನು ಜಾರಿಗೆ ತರುತ್ತಿದ್ದಾರೆ. ಗರಿಷ್ಠ ಮುಖಬೆಲೆ ನೋಟು ನಿಷೇಧ, ತರಾತುರಿಯಲ್ಲಿ ಅವೈಜ್ಞಾನಿಕ ಜಿ.ಎಸ್.ಟಿ. ಜಾರಿ, ಖಾಸಗೀಕರಣಗಳೆಲ್ಲ ಇದರ ಮುಂದುವರೆದ ಭಾಗ.

ಮನುವಾದದ ಪ್ರಕಾರ, ಬ್ರಾಹ್ಮಣರು ಆನಂದದಾಯಕ, ಕ್ಷತ್ರಿಯರು ಬಲಸೂಚಕ, ವೈಶ್ಯರು ಧನಸೂಚಕ, ಶೂದ್ರರು ಅಸಹ್ಯಸೂಚಕ ಹೆಸರುಗಳನ್ನು ಇಟ್ಟುಕೊಳ್ಳಬೇಕು. ಇಂತಹ ಜೀವವಿರೋಧಿಯಾದ ಸಿದ್ಧಾಂತ ಇವರದು.

ಸುರೇಶ್ ಕುಮಾರ್ ಅವರು “ಸಂವಿಧಾನ ಓದು ಸಿದ್ಧಾಂತ ತಿಳಿಸುವ ವಿಧಾನ ಆಗಬಾರದು” ಎಂದಿದ್ದಾರೆ. ಇವರ ಸಂಘ ಪರಿವಾರದ ಶಾಖೆಯಲ್ಲಿ ಎಂದಾದರೂ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಇವರಂತಹ ಜೀವಪರ ಚಿಂತನೆಗಳ ಪ್ರಸ್ತಾಪವಾಗಿರುವುದೋ? ಈ ಪ್ರಶ್ನೆ ಏಕೆಂದರೆ ಅವರು ಸದಾ ಸುಳ್ಳುಗಳನ್ನು ಬಿತ್ತಿ, ಸುಳ್ಳುಗಳ ಮೂಟೆಗಳನ್ನು ಬೆಳೆದು, ಎಲ್ಲ ಜನರ ಮೇಲೆ ಸವಾರಿ ಮಾಡುವ ಸಿದ್ಧಾಂತದವರು. ಸಂವಿಧಾನ ಎಲ್ಲ ಜಾತಿಯವರಿಗೂ ನಿರ್ದಿಷ್ಟ ತಪ್ಪಿಗೆ ನಿರ್ದಿಷ್ಟ ಶಿಕ್ಷೆ ವಿಧಿಸಲು ಅವಕಾಶ ನೀಡಿದೆ. ಮನುಸ್ಮೃತಿ ಪ್ರಕಾರ ಬ್ರಾಹ್ಮಣ ಶಿಕ್ಷೆಯಿಂದ ಹೊರಗೆ. ಅಲ್ಲದೆ ಅವನಿಗೆ ಎಲ್ಲ ಶಿಕ್ಷೆಗಳಲ್ಲು ವಿಶೇಷ ವಿನಾಯಿತಿ ಇದೆ. ಅದಕ್ಕಾಗಿಯೇ ಇವರಿಗೆ ಸಂವಿಧಾನ ಕಂಡರೆ ಉರಿ. ಅವರ ಮನದಲ್ಲಿರುವ ವಿಷವನ್ನು ಹೀಗೆ ಕಕ್ಕಿದ್ದಾರೆ ಅಷ್ಟೇ. ಇವರ ಪ್ರಕಾರ, ಜಾತ್ಯತೀತ, ಸಮಾನತೆಯನ್ನು ಬೋಧಿಸುವುದು ದೇಶದ್ರೋಹದ ಕೆಲಸ.

ಅವರದೇನಿದ್ದರು ಜೀವ ವಿರೋಧಿ ಸಿದ್ಧಾಂತ. ಏಕೆಂದರೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ, ಅಸ್ಪೃಶ್ಯತೆ ನಿವಾರಣೆಯಾಗಬೇಕು ಎಂದು ಒತ್ತಾಯಿಸಿದ, ಹಿಂದು – ಮುಸ್ಲಿಮರು ದೇಶದಲ್ಲಿ ಸಹಬಾಳ್ವೆಯಿಂದ ಬದುಕಬೇಕು ಎಂದು ಹಂಬಲಿಸಿ ಮಹಾತ್ಮ ಗಾಂಧಿಯನ್ನು ಕೊಂದವರು ಇದೇ ಹಿನ್ನೆಲೆಯಿಂದ ಬಂದವರು. ಇದೀಗ ಅವರು ಗಾಂಧಿ ಹತ್ಯೆ ಸೇರಿದಂತೆ ಇನ್ನಿತರ ಹತ್ಯೆ, ದಲಿತರ ಮೇಲಿನ ಅತ್ಯಾಚಾರಗಳನ್ನು ಕೂಡ ಸಮರ್ಥಿಸುವ ಮಟ್ಟಕ್ಕೆ ಬಂದಿದ್ದಾರೆ. ಉದಾಹರಣೆಗೆ, ಉತ್ತರಪ್ರದೇಶದ ಹತ್ರಾಸ್ ನಲ್ಲಿ ಮನೀಶಾ ವಾಲ್ಮೀಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಕುರಿತು ಪ್ರತಿಕ್ರಿಯಿಸಿದ ಉತ್ತರಪ್ರದೇಶ ಸಿಎಂ ಆದಿತ್ಯನಾಥ್, ಠಾಕೂರರದು ಬಿಸಿ ರಕ್ತ ಎಂದರು. ಅವರ ಬಿಸಿ ರಕ್ತವನ್ನು ತಣಿಸಲು ದೇಶದ ದಲಿತರು ಅತ್ಯಾಚಾರಕ್ಕೆ ಒಳಗಾಗಬೇಕೆ? ಬಲಿಯಾಗಬೇಕೆ? ಎಂದು ನಾವೆಲ್ಲ ಪ್ರಶ್ನಿಸಬೇಕಿದೆ.

ಅದರ ಜೊತೆಗೆ, ದೇಶದ ಸಕಲ ಆಸ್ತಿ ಒಂದು ಜಾತಿಗೆ ಸೇರಿದ್ದು, ಉಳಿದ ಎಲ್ಲ ಜಾತಿಯವರು ನಮ್ಮ ಸೇವೆಗಾಗಿ ಹುಟ್ಟಿದ್ದಾರೆ ಎಂಬ ಪ್ರಾಚೀನ ಮೂಢನಂಬಿಕೆಯಲ್ಲೇ ಕಾಲ ಹಾಕುತ್ತಿರುವ, ಹಳೆಯ ಕೊಳೆಯನ್ನೇ ಪವಿತ್ರ ಎಂದು ನಂಬಿರುವವರಲ್ಲಿ ಮೆದುಳು ಇದೆಯೋ? ಅಥವಾ ರಕ್ತದ ಕಣಕಣದಲ್ಲೂ ಇನ್ನುಳಿದ ಜಾತಿಯ ಜನರ ಮೇಲೆ ಕ್ರೌರ್ಯವೇ ತುಂಬಿದೆಯೋ? ಎಂದು ಆಲೋಚಿಸಬೇಕಿದೆ.

ಏನೇ  ಆಗಲಿ ಕೊಂದಾದರೂ ಅಧಿಪತ್ಯ ಸ್ಥಾಪಿಸಬೇಕು ಎಂಬ ಜೀವವಿರೋಧಿ ಸಿದ್ಧಾಂತ ಒಂದುಕಡೆ ಇದೆ. ಅದಕ್ಕೆ ಪರ್ಯಾಯವಾಗಿ ಸಂವಿಧಾನ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುತ್ತದೆ. ಜೀವ ವಿರೋಧಿ ಸಿದ್ಧಾಂತದ ಪ್ರಕಾರ, ಮೇಲ್ಜಾತಿಯವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಅಪರಾಧಿಗಳು, ದೇಶದ್ರೋಹಿಗಳು, ಅವರನ್ನು ದೇಶದಿಂದ ಹೊರಹಾಕಬೇಕು ಎಂಬ ಬಹಿಷ್ಕಾರ ಅಗತ್ಯ. ಎನ್.ಆರ್.ಸಿ., ಸಿಎಎ ವಿರುದ್ಧ ಪ್ರತಿಭಟಿಸಿದವರನ್ನು, ವಿವಾದಿತ 3 ಕೃಷಿ ಮಸೂದೆಗಳನ್ನು ವಿರೋಧಿಸಿದ ರೈತರನ್ನು ದೇಶದ್ರೋಹಿಗಳು ಎಂದವರು ಯಾರು? ಎಂಬುದನ್ನು ನೋಡಬೇಕಿದೆ. ಆದರೆ, ಇದಕ್ಕೆ ಮುಖಾಮುಖಿಯಾಗಿ ಸಂವಿಧಾನದ ಸಿದ್ಧಾಂತವೆಂದರೆ ಭ್ರಾತೃತ್ವವನ್ನು ಬೆಳೆಸುವ ಸಿದ್ಧಾಂತ.

ಸಂವಿಧಾನ ಓದು ಕೃತಿಯಲ್ಲಿ ತುರ್ತುಪರಿಸ್ಥಿತಿ ಕುರಿತು ಉಲ್ಲೇಖ ಏಕಿಲ್ಲ? ಎಂದು ಸುರೇಶ್ ಕುಮಾರ್ ಅವರು ಪ್ರಶ್ನಿಸಿದ್ದಾರೆ. ಸರಿ. ಈಗ ಭಾರತ ಚುನಾಯಿತ ನಿರಂಕುಶಪ್ರಭುತ್ವದತ್ತ ಚಲಿಸುತ್ತಿರುವ ಕುರಿತು ಅವರು ಕೂಡ ಮಾತಾಡಬೇಕಲ್ಲವೇ? ಇವರು ನಂಬಿರುವ ಸಿದ್ಧಾಂತದಲ್ಲಿ ಸತ್ಯಕ್ಕೆ ಸ್ಥಾನವಿಲ್ಲ. ಅವರು ಸುಳ್ಳು, ದ್ವೇಷ, ನಯವಂಚಕತೆಯ ಜನಕರು. ಅವರಿಗೆ ಜಾಣಕುರುಡು, ಜಾಣಕಿವುಡು, ಜಾಣಮೂಗತನ ಆಜನ್ಮಸಿದ್ಧ ಹಕ್ಕು. ಇಂತಹ ಜನರನ್ನು ಯಾವುದೇ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಕ್ಕೆ ಹೋಲಿಸಿದರೆ, ಇವರ ಹೊಲಸು ಸಿದ್ಧಾಂತ ಅವುಗಳಿಗೆ ಗೊತ್ತಾದರೆ, ಅವುಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಖಂಡಿತ. ಅಥವಾ ಅವುಗಳಿಗೆ ನಮ್ಮಂತೆ ಮಾತು ಬಂದಲ್ಲಿ, ಸಂಘಪರಿವಾರದವರಿಗೆ ಹೋಲಿಸಿದವರ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಬಹುದೋ ಏನೋ?

ಸುರೇಶ್ ಕುಮಾರ್ ಅವರೇ, ನಿಮ್ಮ ಶಾಖೆಯಲ್ಲಿ ಹೇಳಿಕೊಡುವ ಸಿದ್ಧಾಂತಕ್ಕಿಂತ ಸಂಪೂರ್ಣ ತದ್ವಿರುದ್ಧವಾದ, ಭಿನ್ನವಾದ ಸಮಾನತೆಯ ಸಿದ್ಧಾಂತವನ್ನು ಸಂವಿಧಾನದ ಓದು ಹೆಸರಿನಲ್ಲಿ ಹೇಳಿಕೊಟ್ಟರೆ ತಪ್ಪೇನಿದೆ?

ಇರಲಿ, ಸಂಘ ಪರಿವಾರದ ಸಂಗದಲ್ಲಿ ಧರ್ಮದ ಹೆಸರಿನಲ್ಲಿ ಮೈ ಮರೆತಿರುವ, ಧರ್ಮದ ಅಮಲಿನಲ್ಲಿ ತೇಲುತ್ತಿರುವ ಶೂದ್ರರು ಈ ಸಂಗತಿಯನ್ನು ಶೀಘ್ರವಾಗಿ ಅರಿಯಬೇಕು. ಸಂಘದ ಸಂಗದಿಂದ ಹೊರಬರಬೇಕು.

–        ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ

Share:

One Response

  1. ಅದ್ಬುತ ಬರಹ. ಪ್ರತಿಯೋಬ್ಬರೂ ಓದಬೇಕು. ಧನ್ಯವಾದಗಳು ಪ್ರದೀಪ್

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ