ಮುಖಪುಟದ ಮಿತ್ರ ಜಲೀಲ ಮುಖ್ರಿಯವರು ಅಲ್ಪಸಂಖ್ಯಾತರ ಮೇಲಿನ ಅಪನಂಬಿಕೆ ಮತ್ತು ದಾಳಿಯಿಂದ ಬೇಸತ್ತು ಮನೆ ಮಠ ಎಲ್ಲವನ್ನೂ ಬಿಟ್ಟು ದೇಶಾಂತರ ಹೋಗಬೇಕೆನಿಸುತ್ತಿದೆ ಎಂದು ಮನ ಕಲಕುವ ಪತ್ರವೊಂದನ್ನು ತಮ್ಮ ಪಕ್ಕದ ಮನೆಯವರನ್ನುದ್ದೇಶಿಸಿ ಬರೆದಿದ್ದರು. ಅದಕ್ಕೆ ನಾನು ಬರೆದ ಪ್ರತಿ ಪತ್ರ.
ಹಿರಿಯ ಸಹೋದರ ಜಲೀಲ ಸಾಹೇಬರೇ ತಾವು ಪಕ್ಕದ್ಮನೆಯವರಿಗೆ ಬರೆದ ಭಾವನಾತ್ಮಕ ಪತ್ರ ಓದಿ ಮನಸ್ಸು ಮತ್ತು ಹೃದಯ ಎರಡೂ ಭಾರವಾದಂತಾಗಿ ಕಣ್ಣಲ್ಲಿ ನೀರಾಡಿತು.
ಹುಟ್ಟಿ ಆಡಿ ಬೆಳೆದ ನಮ್ಮ ನೆಲದಲ್ಲೇ ನಾವು ಅನಾಥ ಪ್ರಜ್ಞೆ ಅನುಭವಿಸುವುದಿದೆಯಲ್ಲ, ಅದು ಭಯಾನಕವಾದದ್ದು, ವರ್ಣಿಸಲಸಾಧ್ಯವಾದದ್ದು ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಎಂಥ ನಿರಾಸೆ ಮತ್ತು ಆತಂಕವಾಗುತ್ತದೆ ಎಂಬುದು ಮಾನವೀಯತೆ ಇರುವ ಪ್ರತಿಯೊಬ್ಬರಿಗೂ ಅರ್ಥವಾಗುವಂತದ್ದು.
ನಿಮ್ಮ ನೋವಿಗೆ ಸದ್ಯದ ಸಂದರ್ಭ ಕಾರಣವಾಗಿರಬಹುದು. ಆದರೆ ಜಲೀಲ ಸಾಹೇಬರೇ ಒಂದು ಮಾತು ಹೇಳಲಿಚ್ಚಿಸುತ್ತೇನೆ. ಭಾರತದ ಒಬ್ಬನೇ ಒಬ್ಬ ಮುಸಲ್ಮಾನರನ್ನೂ ದೇಶದಿಂದ ಹೊರಹಾಕುವುದನ್ನು ನಾನು ನನ್ನ ಜೀವ ಇರುವವರೆಗೂ ವಿರೋಧಿಸುತ್ತೇನೆ. ಉಸಿರು ನಿಲ್ಲುವವರೆಗೂ ನಾನು ನನ್ನ ಪಕ್ಕದ ಮನೆಯ ಮುಸಲ್ಮಾನರನ್ನು ಅವರ ಜಾಗದಿಂದ ಕದಲಿಸುವ ಪ್ರಯತ್ನದ ವಿರುದ್ಧ ಹೋರಾಡುತ್ತೇನೆ.
ಜಲೀಲ ಸಾಹೇಬರೇ ನಾನು ಈ ಬರಹವನ್ನು ನಿಮ್ಮ ಪತ್ರವನ್ನೋದಿ ಮನಕಲಕಿ ನಾನು ನಿಮ್ಮ ಬೆಂಬಲಕ್ಕಿದ್ದೇನೆ ಎಂದು ಭರವಸೆ ನೀಡಲು ಬರೆಯುತ್ತಿಲ್ಲ. ನನ್ನ ಸ್ವಾರ್ಥಕ್ಕಾಗಿ ಬರೆಯುತ್ತಿದ್ದೇನೆ. ನನಗೆ ಆತಂಕವಾಗುತ್ತಿರುವುದು ನನ್ನ ಬಗ್ಗೆ. ನಾನು ಚಿಕ್ಕವನಿದ್ದಾಗ ಅಲಾಬ್ ಸಮಯದಲ್ಲಿ ತಿಂಗಳ ಕಾಲ ಸಂಭ್ರಮದಿಂದ ಚಿನ್ನಿಕೋಲು ಕಲಿತು ಸಂಭ್ರಮಿಸಿ ಅದನ್ನು ಹಬ್ಬದಲ್ಲಿ ಆಡಿದಾಗ ನನ್ನ ತಾಯಿ ನೋಡಿ ಸಂತಸದಿಂದ ನನ್ನನ್ನು ಎದೆಗವಚಿಕೊಂಡು ಪ್ರೀತಿಸಿದ್ದನ್ನು ನಾನು ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ. ಆ ನೆನಪುಗಳ ಜೀವಂತಿಕೆಯನ್ನು ಉಳಿಸಿಕೊಳ್ಳಲು ಹೋರಾಡುತ್ತೇನೆ.
ನಮ್ಮೂರಿನ ದರ್ಗಾ ಜಾತ್ರೆಗೆ ಬೇಸಿಗೆ ಕಾಲದಲ್ಲಿ ಬರಿಗಾಲಲ್ಲಿ ನದಿಯಲ್ಲಿನ ಮರಳಲ್ಲಿ ಹಾದು ಹೋಗಿ ಹಚ್ಚ ಹಸುರಿನ ನಿಸರ್ಗದ ಮಡಿಲಿನಲ್ಲಿ ಜಾತ್ರೆ ಮಾಡಿ ಬೆಂಡು, ಬೆತ್ತಾಸು ತಿಂದು ಸಂಭ್ರಮಿಸಿದ ನೆನಪುಗಳನ್ನು ನಾನು ಉಳಿಸಿಕೊಳ್ಳದಿದ್ದರೆ ಆ ಕಾಲ ನನ್ನಿಂದ ಕಳೆದು ಹೋಗುತ್ತದೆ.
ನಂತರ ನಾನು ಶಿಕ್ಷಣಕ್ಕಾಗಿ, ದುಡಿಮೆಗಾಗಿ ಊರಿನಿಂದ ದೂರವಾದಾಗಲೂ ಈ ಸುಂದರ ನೆನಪುಗಳು ನನ್ನ ಬದುಕನ್ನು ಹಸಿಯಾಗಿರಿಸಿಕೊಳ್ಳಲು ನೆರವಾಗಿವೆ. ನಂತರವೂ ಊರಿಗೆ ಹತ್ತಿರವಾದಾಗ ಪ್ರತಿ ವರ್ಷ ದರ್ಗಾ ಜಾತ್ರೆ (ನಮ್ಮೂರಲ್ಲಿ ಉರುಸು ಅಂತ ಕರೆಯದೇ ಜಾತ್ರೆ ಅಂತಲೇ ಕರೆಯುವುದು)ಗೆ ಬರಲೇಬೇಕು ಸರ್ ಅಂತ ಸ್ಪರ್ಧೆಗೆ ಬಿದ್ದವರಂತೆ ಕರೆದು, ನಮ್ಮಲ್ಲೂ ಎರಡು ತುತ್ತು ತಿನ್ನಲೇಬೇಕು ಅಂತ ಪ್ರೀತಿಯಿಂದ ಬಲವಂತ ಮಾಡಿ ಅಲ್ಲಿ ಹರಕೆಗೆ ಮಾಡಿದ ಕುರಿ ಮಾಂಸದ ರುಚಿರುಚಿಯಾದ ಅಡುಗೆಯನ್ನು ಹೊಟ್ಟೆ ಬಿರಿಯುವಷ್ಟು, ಎದೆ ಬಿರಿಯುವಷ್ಟು ಪ್ರೀತಿಯಿಂದ ತಿನ್ನಿಸಿ ಮುಂದಿನ ವರ್ಷ ಹೇಳ್ತೀನಿ, ಅಲ್ಲಿದ್ದೀನಿ, ಇಲ್ಲಿದ್ದೀನಿ ಅಂತ ನೆಪ ಹೇಳದೇ ಬರಬೇಕು ಸರ್, ಊಟ ನಿಮಗೆ ಛಲೋ ಅನಿಸ್ತೋ ಇಲ್ಲೋ ಎಂದು ಸಂಕೋಚದಿಂದ ಬಿಳ್ಕೊಡುವ ನಮ್ಮೂರಿನ ಅಕ್ಬರ್, ಇಕ್ಬಾಲ್, ರಂಜಾನ್, ಶಬ್ಬೀರ್ ಮೇಸ್ತ್ರೀ, ಇರ್ಫಾನ್, ಇನ್ನೂ ಹಲವಾರು ಜನ.
ನೀವು ಏನೇನ್ ಹಾಕ್ತೀರಿ ಎಲ್ಲ ಹಾಕಿದ್ರೂ ನಮ್ಮ ಮನೆಯಲ್ಲಿ ಬಿರಿಯಾನಿ ನಿಮ್ಮ ಮನೆ ಥರಾ ಆಗೋದೇ ಇಲ್ಲಲ್ಲೋ ಮಗನೇ ಏನ್ ಮಾಡ್ತೀರಿ ಅಂತ ಬೈದಾಗ, ಅದು ಆಗೋದಿಲ್ಲ ಬಿಡೋ… ಅಂತ ಹೇಳಿ, ಮನೆಯಲ್ಲಿ ಮಾಡಿಸಿ ಬೋಗಾಣಿಗಟ್ಟಲೇ ಬಿರಿಯಾನಿ ತಂದು ಕೊಡುವ ಗೆಳೆಯ ಉಸ್ಮಾನ್.
ಈಗ ನಮ್ಮೂರಿನ ಬಸ್ ನಿಲ್ಧಾಣದಲ್ಲಿ ಬಾಳೆ ಹಣ್ಣು ಮಾರುವ ಫಾತೀಮಾ ಅಜ್ಜಿ ನಮ್ಮ ಅಜ್ಜಿಯ ಗೆಳತಿ. ಮೊದಲು ಬೋರೆ ಹಣ್ಣು ಮಾರುತ್ತಿದ್ದಳು. ಶಾಲೆಗೆ ಹೋಗುವಾಗ ಹಣ ಇಲ್ಲದೇ ತಿನ್ನುವ ಆಸೆಯಿಂದ ನೋಡುತ್ತ ನಿಂತಾಗ ಅದೆಷ್ಟು ಸಲ ಬೊಗಸೆ ತುಂಬ ಬೋರೆ ಹಣ್ಣು ಕೊಟ್ಟುಕಳಿಸಿಲ್ಲ? ಈಗಲೂ ಅದೇ ಧಾಟಿ. ಬಾಳೆ ಹಣ್ಣಿನ ಬೆಲೆ ಕೇಳಿದಾಗ “ಅದನ್ನೆಲ್ಲ ಏನ್ ಮಾಡ್ತಿ, ಎಷ್ಟು ಬೇಕೋ ಅಷ್ಟು ತಗೊಂಡು ಹೋಗೋ ಬಾಡ್ಯಾ” ಅಂತ ಬೈದು ಕೈಗಿಟ್ಟಷ್ಟು ಸಾಕು ಹೋಗು ಎನ್ನುವ ಆ ಹಿರಿಯ ಜೀವ.
ಗಾಡಿ ರಿಪೇರಿಗೆ ಅಂತ ಗ್ಯಾರೇಜಿಗೆ ಬಿಟ್ಟು, ಎಷ್ಟಾಯಿತು? ಅಂತ ಕೇಳಿದಾಗ, ನಾಲ್ಕು ನೂರು ಆಗಿದೆ ಎಷ್ಟಾದ್ರೂ ಕೊಡಿ ಸರ್ ಎಂದು ಕೊಟ್ಟಷ್ಟು ತೆಗೆದುಕೊಂಡು ಅದರಲ್ಲೇ ಚಹಾ ತರಿಸಿ ಕುಡಿಸಿ ನನ್ನ ವೈಯಕ್ತಿಕ ಬದುಕಿನ ಬಗ್ಗೆ ನನಗಿಂತ ಹೆಚ್ಚು ಕಾಳಜಿ ವಹಿಸುವ ನಮ್ಮೂರಿನ ಸೈಯ್ಯದ್ ಸಾಬ್.
ಬೆಳಿಗ್ಗೆ ವಾಕಿಂಗ್ ಹೋಗುವಾಗ ಇನ್ನೂ ಬೆಳಕು ಹರಿಯದಿದ್ದರೂ ಚಹಾ ಮಾಡಿ ಇಟ್ಟುಕೊಂಡು ಕರೆದು ಚಹಾ ಕುಡಿದು ಹೋಗ್ರೀ ಸರ್ ಅಂತ ಪ್ರೀತಿಯ ಬಲವಂತದಿಂದ ಚಹಾ ಕುಡಿಸಿ ಕಳಿಸುವ ನಜೀರ್.
“ಏಯ್ ಸರ್ ಕೋ ಅಚ್ಛಾ ಕರೋ” ಅಂತ ಅಡುಗೆ ಮಾಡುವವನಿಗೆ ಕೂಗಿ ಹೇಳಿ, ನೀವು ಇಲ್ಲಿ ಬನ್ನಿ ಸರ್ ಅಂತ ಜಾಗವನ್ನು ಎರಡೆರಡು ಬಾರಿ ಸ್ವಚ್ಚಗೊಳಿಸಿ ಊಟ ಬಡಿಸಿ, ಮತ್ತೇನ್ ಬೇಕು ಸರ್ ಅನ್ನುತ್ತ ಓಡಾಡುವ ನಿಯಾಜ್ ದಾಬಾದ ಸಲೀಂ.
“ಮೀನು ಸರಿ ಇಲ್ಲ. ಇಲ್ಲಿ ಊಟ ಬೇಡ ಸರ್” ಅಂತ ಪ್ರಾಮಾಣಿಕ ಕಾಳಜಿ ಮಾಡುವ, ಮೀನು ಚನ್ನಾಗಿದೆ ಸಕ್ಕತ್ತಾಗಿ ಮಾಡಿಕೊಡ್ತೀನಿ ನೀವು ಊಟ ಮಾಡ್ಕೊಂಡೇ ಹೋಗಿ ಸರ್. ಅನ್ನುತ್ತ ಎಂದೂ ಬಿಲ್ ಬಗ್ಗೆ ಯೋಚನೆನೇ ಮಾಡದ ರಸೂಲ್ ದಾದಾ.
ಇನ್ನೂ ಎಷ್ಟು ಉದಾಹರಣೆ ಕೊಡಲಿ. ನನ್ನ ಜೀವನ ಚರಿತ್ರೆಯೇ ಆದೀತು. ಇವರೆಲ್ಲ ನನ್ನ ಬದುಕಿನ ಭಾಗವಾಗಿಯೇ ಹೋಗಿದ್ದಾರೆ ಎನ್ನುವುದಕ್ಕಿಂತ ಬದುಕಿನ ಭಾಗವೇ ಹೌದು. ಅವರ ಇತಿಹಾಸ ನಮ್ಮ ಇತಿಹಾಸದಷ್ಟೇ ಆಳವಾಗಿದೆ. ಹೃದಯದ ಪಸೆಯಲ್ಲೂ ವ್ಯತ್ಯಾಸವಿಲ್ಲ…
ಇನ್ನೂ ಮುಖ್ಯವಾಗಿ ಸಾಹಿತಿ, ಕವಿ, ನನ್ನ ಹಿರಿಯ ಮಿತ್ರ, ಮಾರ್ಗದರ್ಶಕರಾದ ಪೀರ್ ಭಾಷಾ ಅವರಿಂದ ನಾನು ಜನರನ್ನು, ಈ ದೇಶವನ್ನು ಪ್ರೀತಿಸುವ ಬಗೆಯನ್ನು ಕಲಿತಿದ್ದೇನೆ. ಜನರ ನೋವಿಗೆ ಮಿಡಿಯುವ ಅಂತರಂಗವನ್ನು ರೂಢಿಸಿಕೊಂಡಿದ್ದೇನೆ. ರಹಮತ್ ತರೀಕೆರೆಯವರಂಥ ಸಾಹಿತ್ಯ ಸಂತನನ್ನು ಮರು ರೂಪಿಸಲು ಈ ನಾಡಿಗೆ ಸಾಧ್ಯವೇ?
ನಾನು ಅವರಿಂದ, ಅವರನ್ನು ಗಮನಿಸುತ್ತ, ಅವರ ಪುಸ್ತಕಗಳನ್ನು ಓದುತ್ತ ಮಾನವೀಯವಾದ ಆಲೋಚನಾ ಕ್ರಮಗಳನ್ನು ಕಲಿತ್ತಿದ್ದೇನೆ. ಒಂದು ದಿನ ಬೆಳಗಿನ ಜಾವ ಧಾರವಾಡದ ಬೀದಿಯಲ್ಲಿ ಅವರೊಂದಿಗೆ ಸುತ್ತುತ್ತ ಸಿರಿಯಾದಲ್ಲಿನ ನಾಗರಿಕ ಹತ್ಯೆ ಬಗ್ಗೆ ಕೇಳಿದೆ. “ಮನುಷ್ಯ ಇಷ್ಟು ಕ್ರೂರಿ ಯಾಕಾಗ್ತಾನೆ ಅಂತ ಗೊತ್ತಿಲ್ಲ ಆಲಬಾಳ… ಎನ್ನುತ್ತ… ಅಂದ ಹಾಗೇ ಸಾಕಷ್ಟು ಜನರ ಸಂಪರ್ಕ ಇರುವ ನೀವು ಈ ಪ್ರಶ್ನೆಯನ್ನು ನನಗೆ ಏಕೆ ಕೇಳುತ್ತಿದ್ದೀರಿ” ಎಂದಾಗ ನನ್ನ ಮೂರ್ಖತನಕ್ಕೆ ನನಗೇ ನಾಚಿಕೆಯಾಗಿತ್ತು. ತಲೆ ತಗ್ಗಿಸಿ ಅವರ ಸೂಕ್ಷ್ಮತೆಯೊಳಗಿನ ಸ್ವಲ್ಪನ್ನಾದರೂ ನಾನು ರೂಢಿಸಿಕೊಳ್ಳಬೇಕು ಅಂತ ನಿರ್ಧರಿಸಿದೆ.
ಇನ್ನೂ, ನಾನು ಬಳ್ಳಾರಿ ಕಡೆ ಬರ್ತೀನಿ ಅಂತ ಹೇಳಿದ್ದೆ ತಡ. ಈಗ ಎಲ್ಲಿಗೆ ಬಂದ್ರೀ… ನಾನು ಬಸ್ ನಿಲ್ದಾಣದಲ್ಲಿದ್ದೀನಿ ಆರಾಮಾಗಿ ಬನ್ನಿ ಎನ್ನುತ್ತ ತಾಸುಗಟ್ಟಲೇ ಕಾದು, ಸಿಕ್ಕ ತಕ್ಷಣ ಮೊದಲೇ ನಿಗದಿ ಮಾಡಿದ ಭೋಜನ ಕೂಟಕ್ಕೆ ಕರೆದೊಯ್ದು ಕುಡಿಸಿ, ತಿನ್ನಿಸಿ ಮಲಗುವವರೆಗೂ ಕಾಳಜಿ ಮಾಡಿ ನಂತರ ಮಲಗುವ ಗೆಳೆಯ ಇರ್ಫಾನ್ ಮುದುಗಲ್.
ನೀನು ನನ್ನ ಹಿರಿಯ ಮಗ ಅಂತ ಹೇಳಿ ಮನೆಯ ವ್ಯವಹಾರಗಳಿಗೆಲ್ಲ ನನ್ನನ್ನೇ ಕೇಳುವ ಅವನ ತಂದೆ ತಾಯಿ. ಅಣ್ಣ ಎನ್ನುತ್ತ ತಮ್ಮ ಶಿಕ್ಷಣ, ಓದು ಎಲ್ಲದರ ಕುರಿತು ವರದಿ ಒಪ್ಪಿಸುವ ಅವರ ತಂಗಿಯರು ಅವರ್ಯಾರು ನನಗೆ ಜೀವಮಾನದಲ್ಲೆಂದೂ, ಧರ್ಮದ ಕಾರಣಕ್ಕಾಗಿ ಬೇರೆಯವರು ಅನ್ನಿಸಲೇ ಇಲ್ಲ.
ಬರೆಯುತ್ತ ಹೋದರೆ ಬಹಳ ಆಗುತ್ತದೆ ಜಲೀಲ್ ಸಾಹೇಬರೆ. ಇವರೆಲ್ಲ, ಇಂಥ ಸಾವಿರಾರು ಜನ ನನ್ನ ಬದುಕಿನ ಭಾಗವಾಗಿದ್ದಾರೆ. ನಾನು ಸವೆಸಿದ ಆಯಸ್ಸಿನ ಭಾಗವಾಗಿದ್ದಾರೆ. ನನ್ನ ಸಂತಸದ, ನೆನಪುಗಳ ಭಾಗವಾಗಿದ್ದಾರೆ.
ನಾನು ಇವರಿಂದ ದೂರವಾಗುವುದೆಂದರೆ ನನ್ನ ಬದುಕಿದ ಬದುಕಿನಿಂದಲೇ ದೂರವಾದಂತಾಗುವುದಿಲ್ಲವೇ? ನಾನು ಕಳೆದ ಕಾಲ, ನೋವು, ನಲಿವು, ಅನುಭವಿಸಿದ ಅನುಭವ, ಮುಖ್ಯವಾಗಿ ನಾನು ಮರು ಕಟ್ಟಿಕೊಳ್ಳಲು ಸಾಧ್ಯವಿರದಂಥ ನೆನಪುಗಳು ಎಲ್ಲವುಗಳಿಂದಲೂ ದೂರವಾದಂತಾಗುವುದಿಲ್ಲವೇ?
ಆಗ ನಾನು ಬದುಕಿದ ಆ ಕ್ಷಣಗಳು ಕಳೆದು ಹೋಗುತ್ತವೆ. ಇಲ್ಲವೇ ಆ ಕ್ಷಣಗಳಲ್ಲಿ ನಾನು ಬದುಕಿಯೇ ಇರಲಿಲ್ಲ ಎಂದು ಭಾವಿಸಿಕೊಳ್ಳಬೇಕಾಗುತ್ತದೆ.
ಜಲೀಲ್ ಸಾಹೇಬರೇ ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ಇದರಲ್ಲಿ ನನ್ನ ಸ್ವಾರ್ಥವಿದೆ. ನಾನು ಬದುಕಿದ ಯಾವೊಂದು ಕ್ಷಣಗಳನ್ನು ನಾನು ಬದುಕಿಲ್ಲ ಎಂದು ಹೇಳಲು ನಾನು ಸಿದ್ಧನಿಲ್ಲ. ಅದಕ್ಕಾಗಿ ಈ ನೆಲದಿಂದ ಈ ನೆಲದವರೇ ಆದ ಯಾವೊಬ್ಬ ಮುಸಲ್ಮಾನರನ್ನೂ ಕದಲಿಸಲು ನಾನು ಕೈ ಕಟ್ಟಿಕೊಂಡು ಕುಳಿತು ಅವಕಾಶ ಕೊಡುವುದಿಲ್ಲ ಏಕೆಂದರೆ ನನ್ನ ಬದುಕು ಅವರೊಂದಿಗೆ ಹಂಚಿಕೆಯಾಗಿದೆ.
– ಮಹಾಲಿಂಗಪ್ಪ ಆಲಬಾಳ, ಸಾಂಸ್ಕೃತಿಕ ಚಿಂತಕರು