(ದಿನಾಂಕ: 17 ಜುಲೈ 2021ರಂದು ಮಾನವ ಬಂಧುತ್ವ ವೇದಿಕೆ ‘ಬಂಧುತ್ವ ಬೆಳಕು’ ಉಪನ್ಯಾಸ ಮಾಲಿಕೆಯಲ್ಲಿ ಏರ್ಪಡಿಸಿದ್ದ “ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳು” ವಿಶೇಷ ವೆಬಿನಾರ್ ಕಾರ್ಯಕ್ರಮದಲ್ಲಿ ಮಾಡಿದ ಉಪನ್ಯಾಸದ ಬರಹ ರೂಪ.)
ಮೊದಲನೆಯದಾಗಿ ಜಗತ್ತು ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್-೧೯ ಎಂಬ ಪ್ಯಾಂಡಮಿಕ್ ನಿಂದ ನರಳುತ್ತಿದೆ. ಇದನ್ನು ನೆಪವಾಗಿಟ್ಟುಕೊಂಡು ಜಗತ್ತಿನಾದ್ಯಂತ ಹಲವಾರು ದೇಶಗಳು ನಾನಾ ರೀತಿಯ ಕಟ್ಟಳೆಗಳನ್ನು ಜಾರಿಮಾಡಿ ಮಾನವ ಹಕ್ಕುಗಳನ್ನು ದಮನ ಮಾಡುತ್ತ ಬಂದಿವೆ. ಹಲವೆಡೆ ಇದು ಅಲ್ಪಕಾಲಕ್ಕೆ ಸೀಮಿತವಾಗಿದ್ದರೆ, ಮತ್ತೆ ಕೆಲವೆಡೆ ಇದು ದೀರ್ಘಕಾಲದವರೆಗೆ ನಡೆದಿದೆ, ಮುಂದುವರೆಯುತ್ತಲೇ ಇವೆ. ೨೦೨೦ರ ಮಾರ್ಚ್ ೨೪ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ೨೧ ದಿನಗಳವರೆಗಿನ ಮೊದಲ ಲಾಕ್ ಡೌನ್ ಘೋಷಿಸಿದರು. ನನಗೆ ೨೧ ದಿನಗಳ ಅವಕಾಶ ಕೊಡಿ, ಕರೋನಾ ವಿರುದ್ಧದ ಯುದ್ಧ ಗೆಲ್ಲೋಣ ಎಂದು ಕಳಕಳಿಯಿಂದ ದೇಶದ ನಾಗರಿಕರನ್ನು ವಿನಂತಿಸಿಕೊಂಡರು. ಆದರೆ ಆಗಿದ್ದೇನು?
ಕರೋನಾ ನೆಪದಲ್ಲಿ ದೇಶವ್ಯಾಪಿ ಹೇರಲಾದ ಲಾಕ್ ಡೌನ್ ಇಡೀ ಜನಸಮುದಾಯವನ್ನು ಅಕ್ಷರಶಃ ನಲುಗಿಸಿಬಿಟ್ಟಿತು. ಲಾಕ್ ಡೌನ್ ಘೋಷಣೆಯಾದಾಗ ಅತಿಹೆಚ್ಚು ನರಕ ಯಾತನೆ ಅನುಭವಿಸಿದ್ದು ದೇಶದ ವಲಸೆ ಕಾರ್ಮಿಕರು. ಅವರು ತಾವು ಕೆಲಸ ಮಾಡುತ್ತಿದ್ದ ಜಾಗಗಳಿಂದ ತಮ್ಮತಮ್ಮ ಊರುಗಳನ್ನು ತಲುಪಲು ನೂರಾರು ಕಿ.ಮೀ ನಡೆದರು. ಕೆಲವರು ದಾರಿಯಲ್ಲೇ ಹಸಿವು, ಬಳಲಿಕೆಗಳಿಂದ ಸತ್ತರು. ದಿ ವೈರ್ ಪ್ರಕಟಿಸಿದ ವರದಿಯೊಂದರ ಪ್ರಕಾರ ಏಪ್ರಿಲ್ ೨೪ರಿಂದ ಜುಲೈ ೩೧ರವರೆಗೆ ಲಾಕ್ ಡೌನ್ ಕಾರಣದಿಂದ ಸತ್ತವರ ಸಂಖ್ಯೆ ೯೭೯! ದೇಶದ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಅನುಸರಿಸಿ ಈ ಲೆಕ್ಕವನ್ನು ‘ದಿ ವೈರ್’ ನೀಡಿತ್ತು. ಆದರೆ ಮಾಧ್ಯಮಗಳಲ್ಲೂ ವರದಿಯಾಗದ ಸಾವುಗಳ ಲೆಕ್ಕ ಗೊತ್ತಿಲ್ಲದೇ ಇರುವುದರಿಂದ ಈ ಸಂಖ್ಯೆಯನ್ನು ಮೀರಿ ಸಾವುಗಳು ಸಂಭವಿಸಿವೆ ಎಂದು ಅದು ವರದಿ ಮಾಡಿದೆ. ಲಾಕ್ ಡೌನ್ ಕೇವಲ ವಲಸೆ ಕಾರ್ಮಿಕರನ್ನು ಮಾತ್ರ ಕೊಲ್ಲಲಿಲ್ಲ. ಬೇರೆ ಬೇರೆ ಖಾಯಿಲೆಗಳಿಂದ ನರಳುತ್ತಿದ್ದವರು ಆಸ್ಪತ್ರೆಗೆ ಸೇರಲು ಸಾಧ್ಯವಾಗದೆ ಸತ್ತರು, ಅವರಲ್ಲಿ ಗರ್ಭಿಣಿಯರೂ ಇದ್ದರು. ಕಿಡ್ನಿ ವಿಫಲರಾದ ರೋಗಿಗಳಿಗೆ ಸರಿಯಾದ ಸಂದರ್ಭಕ್ಕೆ ಡಯಾಲಿಸಿಸ್ ಸಿಗಲಿಲ್ಲ, ಕ್ಯಾನ್ಸರ್ ನಿಂದ ಬಳಲುತ್ತಿದ್ದವರಿಗೆ ಕೀಮೋಥೆರಫಿ, ರೇಡಿಯೋಥೆರಪಿ ಚಿಕಿತ್ಸೆಗಳು ಲಭಿಸಲಿಲ್ಲ. ದೇಶದ ಲಕ್ಷಾಂತರ ಸಣ್ಣಪುಟ್ಟ ಕ್ಲಿನಿಕ್ ಗಳು, ನರ್ಸಿಂಗ್ ಹೋಂಗಳು ಬಾಗಿಲು ಹಾಕಿಕೊಂಡ ಕಾರಣಕ್ಕೆ ಕೋವಿಡ್ ಹೊರತಾದ ಖಾಯಿಲೆಗಳಿಂದ ನರಳುತ್ತಿದ್ದವರಿಗೆ ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆಗಳು ಸಿಗಲಿಲ್ಲ.
ದೂರದ ಉದಾಹರಣೆಗಳು ಯಾಕೆ, ಬೆಂಗಳೂರಿನಲ್ಲೇ ೨೮ ವರ್ಷ ವಯಸ್ಸಿನ ತುಂಬು ಗರ್ಭಿಣಿ ಏಳು ಆಸ್ಪತ್ರೆಗಳನ್ನು ಸುತ್ತಿ, ಎಲ್ಲೂ ಆಕೆಯನ್ನು ದಾಖಲಿಸಿಕೊಳ್ಳದೇ ತೀರಿಹೋದಳು. ಆಕೆಗೆ ಬೇರೇನೂ ಆಗಿರಲಿಲ್ಲ, ಹೀಮೋಗ್ಲೋಬಿನ್ ಕೊರತೆ ಇತ್ತು. ಬೇಕಾಗಿದ್ದಿದ್ದು ಒಂದು ಸಣ್ಣ ಪ್ರೊಸೀಜರ್, ಏಳು ಆಸ್ಪತ್ರೆಗಳು ನಿರಾಕರಿಸಿದವು. ಇನ್ನೂ ಹಲವರು ಲಾಕ್ ಡೌನ್ ನಲ್ಲಿ ತಿನ್ನಲು ಅನ್ನವಿಲ್ಲದೆ ಸತ್ತರು. ಇದೆಲ್ಲ ಸಾವುಗಳು ಏನನ್ನು ಸೂಚಿಸುತ್ತವೆ? ಒಂದು ಪ್ಯಾಂಡಮಿಕ್ ನೆಪ ಇಟ್ಟುಕೊಂಡು ದೇಶದ ಜನರ ಸ್ವಾತಂತ್ರ್ಯಹರಣ ಮಾಡಲಾಯಿತು. ನಿಸ್ಸಂಶಯವಾಗಿ ಇದು ಜನರ ಬದುಕುವ ಹಕ್ಕಿನ ಮೇಲೆ ನಡೆದ ಪ್ರಹಾರ. ಇದು ಕೇವಲ ಭಾರತದಲ್ಲಿ ನಡೆದಿದೆ ಎಂದೇನಲ್ಲ, ಇದೇ ರೀತಿ ಹಲವಾರು ದೇಶಗಳಲ್ಲಿ ಜನರ ಹಕ್ಕುಗಳನ್ನು ನಿರ್ಬಂಧಿಸಲಾಯಿತು. ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸ್ ದೌರ್ಜನ್ಯಗಳೂ ನಡೆದವು. ಜಗತ್ತಿನ ಎಲ್ಲೆಡೆ ಮಾನವ ಹಕ್ಕುಗಳ ಹರಣ ನಡೆಯಿತು. ಕೋವಿಡ್-೧೯ನ್ನು ಬಳಸಿಕೊಂಡು ಆಳುವ ವರ್ಗ ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳುವ ಕೆಲಸವನ್ನು ಮಾಡಿದವು. ಭಿನ್ನಧ್ವನಿ ಹೊಂದಿದವರನ್ನು ಮಟ್ಟ ಹಾಕಲು ಈ ಅವಧಿಯನ್ನು ಬಳಸಿಕೊಳ್ಳಲಾಯಿತು. ಕೋವಿಡ್ ಒಂದು ರೀತಿಯಲ್ಲಿ ನಿರಂಕುಶ ಆಡಳಿತಗಾರರಿಗೆ ಅನಾಯಾಸವಾಗಿ ಒದಗಿಬಂದ ಅಸ್ತ್ರವಾಗಿಹೋಯಿತು.
ಈ ಚರ್ಚೆ ಈ ಸಂದರ್ಭದಲ್ಲಿ ಯಾಕೆ ಮಹತ್ವದ್ದು ಎಂಬುದಕ್ಕೆ ಮತ್ತೊಂದು ಕಾರಣ ಜಗತ್ತಿನಾದ್ಯಂತ ಹರಡುತ್ತಿರುವ ಪಾಪ್ಯುಲರಿಸ್ಟ್ (ಜನಪ್ರಿಯ) ರಾಜಕಾರಣ ಮತ್ತು ಅದು ಭಿನ್ನ ಧ್ವನಿಗಳನ್ನು ಹತ್ತಿಕ್ಕಲು ನಡೆಸುತ್ತಿರುವ ನಾನಾ ಬಗೆಯ ಹುನ್ನಾರಗಳು. ರಷ್ಯಾದಲ್ಲಿ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಾನು ಮತ್ತೊಂದು ಅವಧಿಗೆ ಅಧ್ಯಕ್ಷನಾಗಲು ಇದ್ದ ಸಾಂವಿಧಾನಿಕ ತೊಡಕನ್ನು ನಿವಾರಿಸಿಕೊಳ್ಳಲೆಂದೇ ರೆಫರೆಂಡಂ ಮುಂದಿಟ್ಟು, ಕೋವಿಡ್ ಕಾಲದಲ್ಲೇ ಜನರಿಂದ ಮತದಾನ ಮಾಡಿಸಿ ತನ್ನ ಉದ್ದೇಶ ಈಡೇರಿಸಿಕೊಂಡರು. ಜನರು ಮತಗಟ್ಟೆಗೆ ಬಂದು ರೆಫರೆಂಡಂಗೆ ಮತ ಚಲಾಯಿಸುವಂತೆ ಮಾಡಲು ಪುಟಿನ್ ಅಗ್ಗದ ಜನಪ್ರಿಯ ತಂತ್ರಗಳನ್ನು ಹೆಣೆದರು. ರಷ್ಯಾದ ಸಂವಿಧಾನದಲ್ಲಿ ಈವರೆಗೆ ಇಲ್ಲದ ‘ದೈವ ನಂಬಿಕೆ’ಎಂಬ ಪದವನ್ನು ಸೇರಿಸಲಾಯಿತು. ಈ ಮೂಲಕ ಶೇ.೭೦ಕ್ಕೂ ಹೆಚ್ಚು ಇರುವ ಕ್ರಿಶ್ಚಿಯನ್ನರ ಸಂಪ್ರದಾಯವಾದಿ ಮನಸುಗಳನ್ನು ಸಂತುಷ್ಟಿಗೊಳಿಸಲಾಯಿತು. ಗಂಡು ಮತ್ತು ಹೆಣ್ಣು ಒಬ್ಬರನ್ನೊಬ್ಬರು ಮಾತ್ರ ಮದುವೆಯಾಗಬಹುದು, ಸಲಿಂಗ ಮದುವೆ ನಿಷಿದ್ಧ ಎಂಬ ಅಂಶವನ್ನು ಸೇರಿಸಲಾಯಿತು. ಒನ್ಸ್ ಎಗೇನ್, ಇದೂ ಕೂಡ ಕಟ್ಟರ್ ಸಂಪ್ರದಾಯವಾದಿಗಳ ಹೃದಯ ಗೆಲ್ಲುವ ಅಂಶ. ಅಮೆರಿಕದಲ್ಲಿ ಟ್ರಂಪ್ ಹೇಗೆ ‘ಅಮೆರಿಕನ್ ರಾಷ್ಟ್ರೀಯತೆ’ಯನ್ನು ಮುಂದಕ್ಕೆ ತಂದು ವೀಸಾ ನೀತಿಗಳನ್ನು ಬದಲಾಯಿಸಿದರೋ ಅದೇ ರೀತಿ ಪುಟಿನ್ ಸಹ, ‘ದೇಶ ಮೊದಲು’ ಎಂಬ ನೀತಿಯನ್ವಯ ಇತರ ದೇಶಗಳ ನಾಗರಿಕರಾಗಿರುವ ರಷ್ಯನ್ನರ ಹಕ್ಕುಗಳನ್ನು ಮೊಟಕುಗೊಳಿಸಿದರು. ರಷ್ಯಾದ ಸಂವಿಧಾನಬದ್ಧ ಹುದ್ದೆಗಳನ್ನು ಏರಲು ದ್ವಿಪೌರತ್ವ ಹೊಂದಿರುವವರಿಗೆ ಇದ್ದ ಅವಕಾಶವನ್ನು ಕಿತ್ತುಹಾಕಿದರು. ಇದೆಲ್ಲವೂ ಜನಪ್ರಿಯ ರಾಜಕಾರಣದ ಪರಿಭಾಷೆಗಳು. ೨೦೨೦ರ ಜುಲೈನಲ್ಲಿ ರಷ್ಯಾದಲ್ಲಿ ಜನಮತಗಣನೆ ನಡೆಯಿತು. ಸಹಜವಾಗಿಯೇ ಜನರು ಪುಟಿನ್ ಅವರನ್ನು ಬೆಂಬಲಿಸಿದರು, ರೆಫರೆಂಡಂ ಜನರಿಂದಲೇ ಗೆದ್ದುಬಿಟ್ಟಿತು. ರಷ್ಯಾದಲ್ಲಿ ವಿರೋಧಪಕ್ಷಗಳನ್ನು ಹೇಗೆ ವ್ಯವಸ್ಥಿತವಾಗಿ ಮುಗಿಸಿಹಾಕಲಾಗಿದೆ ಎಂದರೆ ಅಲ್ಲಿನ ಪ್ರಧಾನ ವಿರೋಧಪಕ್ಷದ ನಾಯಕ ಮತ್ತು ಅವರ ಕುಟುಂಬದ ಬ್ಯಾಂಕ್ ಅಕೌಂಟುಗಳನ್ನು ಸೀಜ್ ಮಾಡಿ ಅವರು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಿಸಲಾಗಿತ್ತು.
ಇದು ರಷ್ಯಾ ಮಾತ್ರವಲ್ಲ, ಜಗತ್ತಿನ ನಾನಾ ಪ್ರಜಾಪ್ರಭುತ್ವವಾದಿ ದೇಶಗಳಲ್ಲೇ ಇಂಥ ಪ್ರಕ್ರಿಯೆಗಳು ನಡೆಯುತ್ತಿವೆ. ಬ್ರೆಜಿಲ್, ಫಿಲಿಫೈನ್ಸ್, ಟರ್ಕಿ, ಇಥಿಯೋಪಿಯಾ ಇತ್ಯಾದಿ ದೇಶಗಳನ್ನು ಆಳುತ್ತಿರುವವರು ಪರೋಕ್ಷ ಸರ್ವಾಧಿಕಾರಿಗಳಾಗಿ ಬೆಳೆದಿದ್ದಾರೆ. ಅತ್ತ ಚೀನಾ ಹಾಂಕಾಂಗ್ ಮೇಲೆ ಏರಿ ಕುಳಿತಿದೆ. ಕೋವಿಡ್ ಕಾಲದಲ್ಲಿಯೇ ಕಳೆದ ಜೂನ್ ೩೦ರಂದು ಚೀನಾ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಹಾಂಕಾಂಗ್ ಗೆ ಅನ್ವಯವಾಗುವಂತೆ ಹೊಸ ಕಾನೂನನ್ನು ತಂದಿತು. ಆ ಕಾನೂನು ಬಳಸಿಕೊಂಡು ಚೀನಾ ಸರ್ಕಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಚೇರಿಯೊಂದನ್ನು ಹಾಂಕಾಂಗ್ ನಲ್ಲಿ ತೆರೆದಿದೆ. ಅದು ಹಾಂಕಾಂಗ್‌ಗೆ ಇದ್ದ ಸ್ವಾಯತ್ತತೆಯನ್ನು ಕಸಿದುಕೊಂಡಿದೆ. ಇದರ ವಿರುದ್ಧ ಹಾಂಕಾಂಗ್ ನಾಗರಿಕರು ಪ್ರತಿಭಟಿಸುತ್ತಿದ್ದಾರೆ. ಚೀನಾ ಸರ್ಕಾರ ಅವರ ಮೇಲೆ ಮುಗಿಬಿದ್ದಿದೆ.
ಇಥಿಯೋಪಿಯಾದಲ್ಲಿ ಸರ್ವಾಧಿಕಾರಿಯಂತೆ ಬೆಳೆಯುತ್ತಿರುವ ಅಬಿ ಅಹಮದ್ ಸಂವಿಧಾನಬಾಹಿರವಾಗಿ ತನ್ನ ಅಧ್ಯಕ್ಷ ಅವಧಿಯನ್ನು ಒಂದು ವರ್ಷ ವಿಸ್ತರಿಸಿಕೊಂಡಿದ್ದಲ್ಲದೇ ತನ್ನದೇ ದೇಶದ ಪ್ರಾಂತ್ಯವೊಂದರ ಮೇಲೆ ಯುದ್ಧ ಹೂಡಿದ್ದಾರೆ. ಸಾವಿರಾರು ಮಂದಿಯನ್ನು ಕೊಲ್ಲಲಾಗಿದೆ ಅಥವಾ ಜೈಲಿನಲ್ಲಿ ಕ್ರೂರ ರೀತಿಯ ಶಿಕ್ಷೆಗೆ ಒಳಪಡಿಸಲಾಗಿದೆ. ಇದೆಲ್ಲವೂ ಸಾಧ್ಯವಾಗುತ್ತಿರುವುದು ಪಾಪ್ಯುಲರಿಸ್ಟ್ ರಾಜಕಾರಣದಿಂದ. ದೇಶದ ಬಹುಸಂಖ್ಯಾತರ ಬೆಂಬಲ ಪಡೆಯುವ ಈ ರಾಜಕಾರಣ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ. ಈ ನೆಪವನ್ನು ಒಡ್ಡಿ ಅದು ಬಹುಸಂಖ್ಯಾತರ ಹಕ್ಕುಗಳನ್ನೂ ಅವರ ಒಪ್ಪಿಗೆ ಪಡೆದೇ ಕಿತ್ತುಕೊಳ್ಳುತ್ತದೆ. ಈ ಪಾಪ್ಯುಲರಿಸ್ಟ್ ರಾಜಕಾರಣ ‘ರಾಷ್ಟ್ರೀಯತೆ’ಯ ಮುಸುಕು ಹೊದ್ದುಕೊಂಡಿರುತ್ತದೆ. ಇದು ನೇರವಾಗಿ ಜನರ ಹಕ್ಕುಗಳನ್ನು ದಮನ ಮಾಡುತ್ತಿರುತ್ತದೆ.
ಈ ಚರ್ಚೆಯನ್ನು ನಾವು ನಡೆಸುತ್ತಿರುವ ಹೊತ್ತಿಗೆ ಭಾರತದಲ್ಲೂ ನಾವೆಲ್ಲರೂ ಆತಂಕಪಡುವ ಘಟನೆಗಳು ನಮ್ಮದೇ ದೇಶದಲ್ಲೂ ನಡೆಯುತ್ತಿದೆ. ಸ್ಟಾನ್ ಸ್ವಾಮಿ ಎಂಬ ೮೪ ವರ್ಷಗಳ ಪಾದ್ರಿ ಮುಂಬೈನ ತಲೋಜಾ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಮೃತಪಟ್ಟರು. ಅವರ ಮೇಲೆ ಯುಎಪಿಎ ಅಡಿ ಮೊಕದ್ದಮೆ ಹೂಡಲಾಗಿತ್ತು. ಅವರ ಹಾಗೆಯೇ ದೇಶದ ಅತ್ಯಂತ ಹೆಸರುವಾಸಿಯಾದ ಮಾನವಹಕ್ಕು ಹೋರಾಟಗಾರರು, ಕಾರ್ಮಿಕ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು, ವಿದ್ಯಾರ್ಥಿಗಳು ಹಾಗು ದೊಡ್ಡ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಯುವಕರು ಇದೇ ಯುಎಪಿಎ ಕಾಯ್ದೆ ಅಡಿ ಬಂಧಿತರಾಗಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಸಾಧಾರಣವಾಗಿ ಭಯೋತ್ಪಾದಕರ ಮೇಲೆ ಹೂಡುವಂಥ ಕಾಯ್ದೆಯನ್ನು ಈಗ ಯಾವುದೇ ಎಗ್ಗಿಲ್ಲದಂತೆ ಭಿನ್ನಮತ ಪ್ರದರ್ಶಿಸುವ ಯಾರ ಮೇಲಾದರೂ ಹೂಡಲು ಸರ್ಕಾರಗಳು ಹಿಂಜರಿಯುತ್ತಿಲ್ಲ. ಮಾನವ ಹಕ್ಕುಗಳನ್ನು ಯುಎಪಿಎಯಂಥ ಕಾಯ್ದೆಗಳು ಹೇಗೆ ದಮನ ಮಾಡುತ್ತವೆ ಎಂಬ ವಿಷಯದ ಕುರಿತು ಗಮನಹರಿಸುವುದು ಮುಖ್ಯ. ಈ ವಿಷಯಕ್ಕೆ ಪ್ರವೇಶಿಸುವ ಮುನ್ನ ಪ್ರಜಾಪ್ರಭುತ್ವ ಎಂದರೆ ಏನು ಎಂಬುದನ್ನು ನಾನು ಅರ್ಥ ಮಾಡಿಕೊಂಡ ಬಗೆಯನ್ನು ವಿವರಿಸುತ್ತೇನೆ.
ಡೆಮಾಕ್ರಸಿ ಎಂಬುದು ಮೂಲತಃ ಗ್ರೀಕ್ ಶಬ್ದ. ಡೆಮೋಸ್ ಎಂದರೆ ಪ್ರಜೆಗಳು, ಕ್ರಾಟೋಸ್ ಎಂದರೆ ಆಳ್ವಿಕೆ. ಇವೆರಡು ಶಬ್ದಗಳು ಸೇರಿ ಡೆಮಾಕ್ರಸಿ ಆಗಿದೆ. ಇದನ್ನು ನಾವು ಕನ್ನಡಕ್ಕೆ ಪ್ರಜಾಪ್ರಭುತ್ವ ಅಥವಾ ಮಂದಿಯಾಳ್ವಿಕೆ ಎಂದು ಅನುವಾದಿಸಿಕೊಂಡಿದ್ದೇವೆ. ನಾವೆಲ್ಲ ಶಾಲೆಗಳಲ್ಲಿ ಓದುವಾಗ ಡೆಮಾಕ್ರಸಿಯ ಒಂದು ಸರಳ ವ್ಯಾಖ್ಯೆಯನ್ನು ಬಾಯಿಪಾಠ ಮಾಡಿಕೊಂಡಿದ್ದೇವೆ. ಪ್ರಜೆಗಳಿಗೋಸ್ಕರ, ಪ್ರಜೆಗಳೇ ನಡೆಸುವ ಆಡಳಿತವೇ ಪ್ರಜಾಪ್ರಭುತ್ವ ಎಂದು ಓದಿಕೊಂಡಿದ್ದೇವೆ. ಆದರೆ ಡೆಮಾಕ್ರಸಿಯ ಅರ್ಥವ್ಯಾಖ್ಯೆ ಅಷ್ಟು ಸರಳವೂ ಅಲ್ಲ. ಜಗತ್ತಿನಲ್ಲಿ ಡೆಮಾಕ್ರಸಿಯನ್ನು ಬೇರೆಬೇರೆ ಭಾಗದ ಜನ ಬೇರೆ ಬೇರೆ ರೀತಿ ವ್ಯಾಖ್ಯಾನಿಸಿಕೊಂಡಿದ್ದಾರೆ. ಸುಮಾರು ಎರಡು ಸಾವಿರದ ಇನ್ನೂರಕ್ಕೂ ಹೆಚ್ಚು ವ್ಯಾಖ್ಯೆಗಳನ್ನು ಕಟ್ಟಲಾಗಿದೆ. ಡೆಮಾಕ್ರಸಿಯ ಪರಿಕಲ್ಪನೆಗಳು ಬೆಳೆದಂತೆ ಅದರಲ್ಲೂ ಹಲವು ಬಗ್ಗೆಯ ಕವಲುಗಳು ಬೆಳೆದಿವೆ. ಆದರೆ ಜಗತ್ತಿನ ಬಹುತೇಕ ರಾಷ್ಟ್ರಗಳು ಒಪ್ಪಿಕೊಂಡಿರುವುದು ಪಾರ್‍ಲಿಮೆಂಟರಿ ಡೆಮಾಕ್ರಸಿ (ಸಂಸದೀಯ ಪ್ರಜಾಪ್ರಭುತ್ವ) ಅಥವಾ ಪ್ರೆಸಿಡೆನ್ಷಿಯಲ್ ಡೆಮಾಕ್ರಸಿ (ಅಧ್ಯಕ್ಷೀಯ ಮಾದರಿ ಪ್ರಜಾಪ್ರಭುತ್ವ)ಯನ್ನು. ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಅಮೆರಿಕಗಳಲ್ಲಿ ಕ್ರಮವಾಗಿ ಸಂಸದೀಯ ಪ್ರಜಾಪ್ರಭುತ್ವ ಮತ್ತು ಅಧ್ಯಕ್ಷೀಯ ಪ್ರಜಾಪ್ರಭುತ್ವಗಳು ಜಾರಿಯಲ್ಲಿವೆ.
ಯಾವುದೇ ರೂಪದ ಪ್ರಜಾಪ್ರಭುತ್ವವಾದರೂ ಅದರಲ್ಲಿ ಕೆಲವು ಸಮಾನ ಅಂಶಗಳು ಇರಲೇಬೇಕಾಗುತ್ತದೆ. ಪ್ರಜಾಪ್ರಭುತ್ವದ ಮೂಲ ತಳಹದಿ ನಿಂತಿರುವುದು ಜನರ ಹಕ್ಕುಗಳ ಆಧಾರದ ಮೇಲೆ. ಯಾವ ದೇಶದಲ್ಲಿ ಸಮಾನತೆಯ ಹಕ್ಕು, ಮತದಾನದ ಹಕ್ಕು, ಸಭೆ ಸೇರುವ ಹಕ್ಕು, ಬದುಕುವ ಹಕ್ಕು, ಮಾತನಾಡುವ ಹಕ್ಕು ಇದೆಯೋ, ಯಾವ ದೇಶದ ಆಡಳಿತವು ಸಹಮತದ ಮೇರೆಗೆ ರೂಪುಗೊಂಡಿರುತ್ತದೋ, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುತ್ತದೋ ಅಂಥ ರಾಷ್ಟ್ರಗಳನ್ನು ಪ್ರಜಾಪ್ರಭುತ್ವ ರಾಷ್ಟ್ರ ಎಂದು ನಾವು ಗುರುತಿಸಬಹುದು. ಹೀಗಾಗಿ ನಾವು ಇಂದು ಚರ್ಚಿಸುತ್ತಿರುವ ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳು ಎಂಬ ಎರಡು ವಿಷಯಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಬಿಡಿಸಿ ಹೇಳುವುದಾದರೆ ಪ್ರಜಾಪ್ರಭುತ್ವದ ಒಳಗೆಯೇ ಮಾನವ ಹಕ್ಕುಗಳನ್ನು ಖಾತ್ರಿಪಡಿಸುವ ಅಂಶ ಅಡಕವಾಗಿದೆ. ಹೀಗಾಗಿ ಮಾನವಹಕ್ಕುಗಳು ಇಲ್ಲದ ಪ್ರಜಾಪ್ರಭುತ್ವ ಇರಲು ಸಾಧ್ಯವಿಲ್ಲ.
ನಾವು ರಾಜಪ್ರಭುತ್ವವನ್ನು ನೋಡಿದ್ದೇವೆ. ರಾಜಪ್ರಭುತ್ವದಲ್ಲಿ ರಾಜಮಹಾರಾಜರುಗಳಿಗೆ ವಂಶಪಾರಂಪರ್ಯದಿಂದಲೇ ಅಧಿಕಾರ ಒದಗಿಬರುತ್ತಿತ್ತು. ನಾವು ಕಮ್ಯುನಿಸಂ ಅನ್ನೂ ನೋಡಿದ್ದೇವೆ. ಅದು ಎಲ್ಲ ಬಗೆಯ ಪ್ರಜಾಪ್ರಭುತ್ವವನ್ನು ಬೂರ್ಜ್ವಾ ಎಂದು ಕರೆಯುತ್ತದೆ. ಎಲ್ಲ ಅಧಿಕಾರವನ್ನು ಒಬ್ಬ ವ್ಯಕ್ತಿ ಕೇಂದ್ರೀಕರಿಸಿಕೊಂಡು ನಡೆಸುವ ಸರ್ವಾಧಿಕಾರಿ ಆಳ್ವಿಕೆಗಳನ್ನೂ ಗಮನಿಸಿದ್ದೇವೆ. ಅದೇ ರೀತಿ ಒಂದು ಗುಂಪು ಅಥವಾ ಕೆಲವೇ ವ್ಯಕ್ತಿಗಳು ನಡೆಸುವ ನಿರಂಕುಶ ಆಡಳಿತವೂ ಜಗತ್ತಿನ ಹಲವೆಡೆ ಈಗಲೂ ಚಾಲ್ತಿಯಲ್ಲಿದೆ. ಚುನಾಯಿತ ಸರ್ಕಾರಗಳನ್ನು ಬುಡಮೇಲು ಮಾಡಿ ಸೈನ್ಯಾಧಿಕಾರಿಗಳೇ ನಡೆಸುವ ಮಿಲಿಟರಿ ಆಡಳಿತವೂ ಸಹ ಜಗತ್ತಿನಲ್ಲಿ ಚಾಲ್ತಿಯಲ್ಲಿದೆ. ಇದಲ್ಲದೆ ಇನ್ನೂ ಹಲವು ಬಗೆಯ ಆಡಳಿತ ವ್ಯವಸ್ಥೆಗಳು ಜಗತ್ತನ್ನು ಆಳುತ್ತಿವೆ. ಆದರೆ ಜಗತ್ತಿನ ಅತಿಹೆಚ್ಚು ದೇಶಗಳು ಒಪ್ಪಿ ಪಾಲಿಸುತ್ತಿರುವುದು ಪ್ರಜಾಪ್ರಭುತ್ವ ಮಾದರಿಯನ್ನು. ಯಾಕೆಂದರೆ ಅದಕ್ಕಿಂತ ಒಳ್ಳೆಯ ಮಾದರಿ ಇನ್ನೊಂದು ಇದುವರೆಗೆ ನಮ್ಮ ಮುಂದೆ ಇಲ್ಲ. ಒಂದು ಉದಾರವಾದಿ ಪ್ರಜಾಪ್ರಭುತ್ವವು ಒಬ್ಬ ಮನುಷ್ಯನ ಜೀವಿಸುವ ಹಕ್ಕನ್ನು ಎತ್ತಿಹಿಡಿಯುವಂತೆ ಇನ್ಯಾವ ವ್ಯವಸ್ಥೆಯೂ ಎತ್ತಿಹಿಡಿಯುವುದಿಲ್ಲ.
ಪ್ರಜಾಪ್ರಭುತ್ವವೆಂಬುದು ಒಂದು ಸಿದ್ಧಸೂತ್ರವೇನಲ್ಲ, ಅದು ಕಾಲಕಾಲಕ್ಕೆ ರೂಪಾಂತರಗೊಂಡು ಬೆಳೆಯುತ್ತ ಹೋಗಬೇಕಾಗುತ್ತದೆ, ಅದು ವಿಕಸನಗೊಳ್ಳುತ್ತಲೂ ಬಂದಿದೆ. ಪ್ರಜಾಪ್ರಭುತ್ವದ ಕಲ್ಪನೆ ಬಂದ ಕಾಲದಲ್ಲಿ ಒಂದು ಪ್ರದೇಶದ ಜನರು ಒಂದು ಸೇರಿ ಒಂದಷ್ಟು ನಿಯಮಾವಳಿಗಳನ್ನು ರೂಪಿಸಿಕೊಂಡು ತಮ್ಮನ್ನು ತಾವು ಆಳಿಕೊಳ್ಳುತ್ತಿದ್ದರು. ಅದನ್ನು ನಾವು ಡೈರೆಕ್ಟ್ ಡೆಮಾಕ್ರಸಿ ಎಂದು ಕರೆಯುತ್ತೇವೆ. ಆದರೆ ನಾಗರಿಕತೆ ಬೆಳೆದಂತೆ, ಜನಸಂಖ್ಯೆ ಬೆಳೆದಂತೆ ಜನರು ತಮ್ಮನ್ನು ಆಳ್ವಿಕೆ ಮಾಡಲೆಂದು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಆರಂಭವಾಯಿತು. ಅದೇ ಈಗ ಪ್ರಾತಿನಿಧಿಕ ಪ್ರಜಾಪ್ರಭುತ್ವ ಅಥವಾ ರೆಪ್ರೆಸೆಂಟೇಟಿವ್ ಡೆಮಾಕ್ರಸಿ ಆಗಿದೆ. ಜನರು ಆಯ್ಕೆ ಮಾಡುವ ವ್ಯಕ್ತಿಗಳು ಕಾನೂನು ರೂಪಿಸುತ್ತಾರೆ, ಆಡಳಿತ ನಡೆಸುತ್ತಾರೆ. ಇಂಥ ಡೆಮಾಕ್ರಸಿಗಳು ಸಹಜವಾಗಿಯೇ ಬಹುಸಂಖ್ಯಾತರ ಪರವಾಗಿ ಇರುತ್ತವಲ್ಲವೇ? ಈ ರೀತಿಯಾದ ಮೆಜಾರಿಟೇರಿಯನ್ ಸರ್ಕಾರಗಳು ಪ್ರಜಾಪ್ರಭುತ್ವದ ಮೂಲ ಆಶಯವನ್ನು ದಿಕ್ಕುತಪ್ಪಿಸಬಹುದು. ಹೀಗಾಗಿ ಎಲ್ಲ ದೇಶಗಳು ತಮ್ಮದೇ ಆದ ಸಂವಿಧಾನಗಳನ್ನು ಅಳವಡಿಸಿಕೊಂಡಿವೆ. ಈ ಸಂವಿಧಾನಗಳು ಆಯಾ ದೇಶದ ಅಲ್ಪಸಂಖ್ಯಾತ ಸಮುದಾಯಗಳು, ಬುಡಕಟ್ಟುಗಳು, ಭಾಷಾ ಜನಾಂಗಗಳ ರಕ್ಷಣೆ ಮಾಡುತ್ತವೆ. ಇದಕ್ಕಾಗಿಯೇ ಪ್ರಜಾಪ್ರಭುತ್ವಗಳು ಸಮಾನತೆಯ ಆದರ್ಶವನ್ನು ಪಾಲಿಸುತ್ತವೆ, ಎಲ್ಲ ಪ್ರಜೆಗಳಿಗೂ ಮಾನವಹಕ್ಕುಗಳನ್ನು ನೀಡುತ್ತವೆ.
ಡೆಮಾಕ್ರಸಿಯ ಕಲ್ಪನೆಗೆ ಬಹಳ ದೊಡ್ಡ ಇತಿಹಾಸವಿದೆ. ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ಪ್ರಾಚೀನ ಗ್ರೀಕ್ ನ ಅಥೆನ್ಸ್ ನಗರವನ್ನು ಕೇಂದ್ರವಾಗಿಟ್ಟುಕೊಂಡು ಪ್ರಜಾಪ್ರಭುತ್ವದ ಮೊದಲ ಅಧಿಕೃತ ಮಾದರಿ ಸ್ಥಾಪನೆಯಾಯಿತು. ಇಸಾಗೋರಸನ ದೌರ್ಜನ್ಯದ ಆಳ್ವಿಕೆ ಕೊನೆಗೊಂಡ ನಂತರ ಕ್ಲಿಸ್ತೆನಸ್ ಎಂಬಾತ ಮತ್ತು ಆತನ ಸಂಗಡಿಗರು ಕ್ರಿ.ಪೂ. ೫೦೮ರಲ್ಲಿ ಅಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುತ್ತಾರೆ, ಅದನ್ನು ಅಥೇನಿಯನ್ ಪ್ರಜಾಪ್ರಭುತ್ವ ಎಂದು ಕರೆಯಲಾಗುತ್ತದೆ. ಹೆಚ್ಚುಕಡಿಮೆ ೧೮೦ ವರ್ಷಗಳವರೆಗೆ ಈ ಆಡಳಿತ ಜಾರಿಯಲ್ಲಿತ್ತು. ಅಥೆನ್ಸ್ ಆ ಕಾಲಘಟ್ಟದಲ್ಲಿ ಕಲೆ, ತತ್ತ್ವಶಾಸ್ತ್ರಗಳ ನೆಲೆಯಾಗಿತ್ತು. ದಾರ್ಶನಿಕರು, ಬರೆಹಗಾರರು, ಜನಪ್ರಿಯ ರಾಜಕಾರಣಿಗಳ ಕೇಂದ್ರವಾಗಿತ್ತು. ಅಥೆನ್ಸ್ ನಗರ ಸಾಕ್ರಟೀಸ್, ಪ್ಲೇಟೋ, ಅರಿಸ್ಟೋಫೆನಿಸ್, ಪೆರಿಕಲ್ಸ್, ಸೋಫೋಕ್ಲಿಸ್ ಮುಂತಾದವರ ಜನ್ಮಸ್ಥಳ. ಅವತ್ತಿನ ಕ್ಲಾಸಿಕಲ್ ಅಥೆನ್ಸ್ ನಲ್ಲಿ ಅರಳಿದ ಪ್ರಜಾಪ್ರಭುತ್ವದ ಪರಿಮಳ ಅಂದಿನ ಯೂರೋಪಿಯನ್ ದೇಶಗಳಿಗೆ ಹಬ್ಬಲು ಹೆಚ್ಚು ಕಾಲ ಬೇಕಾಗಲಿಲ್ಲ. ನಂತರ ಡೆಮಾಕ್ರಸಿಯು ಇಡೀ ಜಗತ್ತಿನಾದ್ಯಂತ ಹರಡುತ್ತ ಬಂದಿತು. ಆ ಕಾಲದಿಂದಲೂ ಡೆಮಾಕ್ರಸಿಯ ಸ್ವರೂಪ ಬದಲಾಗುತ್ತ, ವಿಕಸನಗೊಳ್ಳುತ್ತ ಬಂದಿದೆ.
ಪ್ರಜಾಪ್ರಭುತ್ವ ಎಷ್ಟೇ ಬೆಳೆಯುತ್ತ ಬಂದರೂ ಅದರ ಮೂಲ ಆಶಯದಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಕಾನೂನುಬದ್ಧ ಸಮಾನತೆ, ರಾಜಕೀಯ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಪ್ರತಿಯೊಬ್ಬನ ಮತಕ್ಕೂ ಒಂದೇ ತೂಕವಿರುತ್ತದೆ ಮತ್ತು ಪ್ರತಿಯೊಬ್ಬ/ಳಿಗೂ ಮತದಾನದ ಹಕ್ಕು ಇರಬೇಕು. ಅದನ್ನು ಪ್ರಜಾಪ್ರಭುತ್ವವಾದಿ ದೇಶಗಳ ಸಂವಿಧಾನಗಳು ಜನರಿಗೆ ನೀಡುತ್ತವೆ.
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ಭಾರತ ಒಂದು ದೇಶವಾಗಿ ಅರಳಿತು, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾಯಿತು. ನಮ್ಮದು ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆ. ದೇಶದ ಯಾವುದೇ ವ್ಯಕ್ತಿ ತನ್ನದೇ ಆದ ರಾಜಕೀಯ ಪಕ್ಷ ಸ್ಥಾಪಿಸಿ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು. ಇದು ರಾಜಕೀಯ ಸ್ವಾತಂತ್ರ್ಯದ ಮಾತಾಯಿತು. ಆದರೆ ರಾಜಕೀಯ ಪ್ರಜಾಪ್ರಭುತ್ವವೊಂದೇ ಸಾಕೇ ಎಂಬ ಪ್ರಶ್ನೆಗೆ ಸ್ವತಃ ನಮ್ಮ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಉತ್ತರಿಸಿದ್ದಾರೆ. ೧೯೪೯ರ ನವೆಂಬರ್ ೨೫ರಂದು ಕಾನ್‌ಸ್ಟಿಟ್ಯೂಟ್ ಅಸೆಂಬ್ಲಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆಡಿದ ಭಾಷಣವನ್ನು ನಾವು ಸರಿಯಾಗಿ ಗಮನಿಸಿಬೇಕು. ಅವರು ಹೇಳುತ್ತಾರೆ.
“Political democracy cannot last unless there lies at the base of… social democracy. What does social democracy mean? It means a way of life which recognizes liberty, equality and fraternity as the principles of life…
…They form a union of trinity in the sense that to divorce one from the other is to defeat the very purpose of democracy …
Without equality, liberty would produce the supremacy of the few over the many.
Without fraternity, liberty would produce the supremacy of the few over the many.
Without fraternity, liberty and equality could not become a natural course of things. It would require a constable to enforce them.”
‘ರಾಜಕೀಯ ಪ್ರಜಾಪ್ರಭುತ್ವವೆಂಬುದು ಸಾಮಾಜಿಕ ಪ್ರಜಾಪ್ರಭುತ್ವದ ತಳಪಾಯವಿಲ್ಲದೆ ಬಹುಕಾಲ ಬಾಳಲು ಸಾಧ್ಯವಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಜೀವನವಿಧಾನವಾಗಿ ರೂಢಿಸಿಕೊಳ್ಳುವುದು. ಈ ಮೂರು (ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ) ವಿಷಯಗಳಲ್ಲಿ ಒಂದನ್ನು ಬಿಟ್ಟರೂ ಅದು ಪ್ರಜಾಫ್ರಭುತ್ವದ ಸೋಲಾಗಿಬಿಡುತ್ತದೆ. ಸಮಾನತೆಯಿಲ್ಲದ ಸ್ವಾತಂತ್ರ್ಯ ಕೆಲವೇ ವ್ಯಕ್ತಿಗಳು ಮೇಲುಗೈ ಸಾಧಿಸಲು ಅವಕಾಶ ನೀಡುತ್ತದೆ, ಭ್ರಾತೃತ್ವವಿಲ್ಲದ ಸ್ವಾತಂತ್ರ್ಯವೂ ಕೂಡ ಕೆಲವೇ ವ್ಯಕ್ತಿಗಳು ಉಳಿದ ಸಮಸ್ತರ ಮೇಲೆ ಮೇಲುಗೈ ಸಾಧಿಸುವಂತೆ ಮಾಡುತ್ತದೆ.’ ಸಾಮಾಜಿಕ ಪ್ರಜಾಪ್ರಭುತ್ವ ಯಶಸ್ವಿಯಾದರಷ್ಟೇ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು.
ಇದೇ ಕಾನ್‌ಸ್ಟಿಟ್ಯೂಟ್ ಅಸೆಂಬ್ಲಿಯಲ್ಲಿ ಮಾತನಾಡುವಾಗ ಬಾಬಾಸಾಹೇಬ್ ಅಂಬೇಡ್ಕರ್ ಅವರು ಇನ್ನೊಂದು ಮುಖ್ಯ ವಿಷಯವನ್ನು ಪ್ರಸ್ತಾಪಿಸಿದ್ದರು. ಜಾನ್ ಸ್ಟುವರ್‍ಟ್ ಮಿಲ್ ಎಂಬ ಅಮೆರಿಕದ ಸಂಸದ, ತತ್ತ್ವಶಾಸ್ತ್ರಜ್ಞ, ಆರ್ಥಿಕ ತಜ್ಞರ ಪ್ರಖ್ಯಾತ ನುಡಿಯೊಂದನ್ನು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. “ನಾವು ನಮಗೆ ದಕ್ಕಿದ ಸ್ವಾತಂತ್ರ್ಯವನ್ನು ಒಬ್ಬ ವ್ಯಕ್ತಿಯ ಪಾದದಲ್ಲಿ ಇಡುವ ಕೆಲಸ ಮಾಡಬಾರದು, ಹಾಗೆ ಮಾಡಿದಾಗ ಅದು ಸಾಂವಿಧಾನಿಕ ಸಂಸ್ಥೆಗಳ ನಾಶಕ್ಕೆ ದಾರಿಯಾಗುತ್ತದೆ.” ಅಂಬೇಡ್ಕರ್ ಅವರು ಮುಂದುವರೆದು ಹೇಳುತ್ತಾರೆ. “ದೇಶಸೇವೆ ಮಾಡಿದ ಮಹಾನ್ ವ್ಯಕ್ತಿಗಳನ್ನು ಗೌರವಿಸುವುದು, ಅವರಿಗೆ ಕೃತಜ್ಞರಾಗಿರುವುದು ತಪ್ಪಲ್ಲ. ಆದರೆ ನಾವು ನಮ್ಮ ಸ್ವಾತಂತ್ರ್ಯಹರಣ ಮಾಡಿಕೊಂಡು ಕೃತಜ್ಞತೆ ಪ್ರದರ್ಶಿಸಬೇಕಿಲ್ಲ. ಭಾರತದಲ್ಲಿ ಭಕ್ತಿ ಎನ್ನುವುದು ಸರ್ವವ್ಯಾಪಿಯಾಗಿದೆ. ಧರ್ಮದಲ್ಲಿನ ಭಕ್ತಿ ಮನುಷ್ಯನ ಆತ್ಮೋದ್ಧಾರಕ್ಕೆ ಸಹಾಯ ಮಾಡಬಹುದು. ಆದರೆ ರಾಜಕಾರಣದಲ್ಲಿನ ಭಕ್ತಿ ರಾಜಕೀಯದಲ್ಲಿನ ಭಕ್ತಿ ಅವನತಿಗೆ ಅಂತಿಮವಾಗಿ ಸರ್ವಾಧಿಕಾರಕ್ಕೆ ಅವಕಾಶ ನೀಡುತ್ತದೆ.”
ಸಂವಿಧಾನ ರಚನೆಯ ನಂತರ, ಅದು ಅನುಷ್ಠಾನವಾಗುವುದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಚ್ಚರಿಕೆಯ ರೂಪದಲ್ಲಿ ಹೇಳಿದ ಮಾತುಗಳು ಈಗ ನಿಜವಾಗುತ್ತಿವೆಯೇನೋ ಎಂದು ಅನಿಸಲು ಕಾರಣಗಳಿವೆ. ಅಂಬೇಡ್ಕರ್ ಅವರು ಹೇಳಿದ ಭಕ್ತಿ ಮತ್ತು ಭಕ್ತ ಎಂಬ ಶಬ್ದಗಳು ಈಗ ಅತಿಹೆಚ್ಚು ಬಳಕೆಯಾಗುತ್ತಿವೆ. ಈ ಪದಗಳು ಈಗ ಧಾರ್ಮಿಕ ಕಾರಣಕ್ಕಾಗಿ ಅಲ್ಲ, ರಾಜಕೀಯ ಕಾರಣಕ್ಕಾಗಿ ಬಳಕೆಯಾಗುತ್ತಿವೆ. ರಾಜಕೀಯ ಭಕ್ತಿ ಎಂಬುದು ಎಷ್ಟು ಅಪಾಯಕಾರಿಯೆಂದರೆ ಅದು ಒಬ್ಬ ನಾಗರಿಕನು ತನ್ನ ಹಕ್ಕುಗಳನ್ನು ಕಿತ್ತು ಮಂಡಿಯೂರುವಂತೆ ಮಾಡಿಬಿಡುತ್ತದೆ. ರಾಜಕಾರಣದಲ್ಲಿ ಭಕ್ತಿ ಪ್ರವೇಶವಾಯಿತೆಂದರೆ ಪ್ರಜಾಪ್ರಭುತ್ವದ ಒಳಗೆಯೇ ಒಂದು ಫ್ಯಾಸಿಸ್ಟ್ ಪ್ರಭುತ್ವ, ಸರ್ವಾಧಿಕಾರಿ ಆಳ್ವಿಕೆ ಆರಂಭವಾಗಿಬಿಡುತ್ತದೆ. ಜನರು ಭಕ್ತಿಯ ಉನ್ಮಾದದಲ್ಲಿ ತಮ್ಮ ಮೇಲೆ ನಡೆಯುವ ರಾಜಕೀಯ, ಸಾಮಾಜಿಕ ದಾಳಿಗಳನ್ನು ಕೂಡ ಸಂಭ್ರಮಿಸುವಂಥ ವಿಲಕ್ಷಣ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಸಹಜವಾಗಿಯೇ ಮಾನವಹಕ್ಕುಗಳ ಹರಣ ಎಗ್ಗಿಲ್ಲದಂತೆ ನಡೆಯುತ್ತಹೋಗುತ್ತದೆ.
ಇವತ್ತು ಭಾರತದಲ್ಲಿ ಇರುವ ರಾಜಕೀಯ ಸ್ಥಿತಿ ಸಮಾಧಾನಕರವಾಗಿಲ್ಲ. ದಿನೇದಿನೇ ಪ್ರಜಾಪ್ರಭುತ್ವದ ಆಶಯಗಳು ಕುಸಿಯುತ್ತ ಹೋಗುತ್ತಿವೆ. ಇದು ಒಂದು ರಾಜಕೀಯ ಹೇಳಿಕೆ ಎಂದು ಭಾವಿಸಬೇಕಾಗಿಲ್ಲ. ಹೀಗೆ ಹೇಳುವುದಕ್ಕೆ ಒತ್ತಾಸೆಯಾಗಿ ನೂರೆಂಟು ಘಟನೆಗಳು ನಮ್ಮ ಸುತ್ತಮುತ್ತ ಜರುಗುತ್ತಲೇ ಇವೆ. ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ದೇಶಗಳಲ್ಲಿ ಏನೇನು ವಿದ್ಯಮಾನಗಳು ನಡೆಯುತ್ತಿವೆಯೋ ಅದೆಲ್ಲ ಮಾಹಿತಿಗಳನ್ನು ಸಂಗ್ರಹಿಸಿ, ಯಾವ ಯಾವ ದೇಶದಲ್ಲಿ ಪ್ರಜಾಪ್ರಭುತ್ವದ ಮಟ್ಟ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಹಲವು ಸಂಸ್ಥೆಗಳು ಸಂಗ್ರಹಿಸಿ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ವರದಿ ಮಾಡುತ್ತವೆ. ಈ ವರದಿಗಳೂ ಸಹ ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಕಳವಳ ವ್ಯಕ್ತಪಡಿಸುತ್ತಿವೆ.
ಅಮೆರಿಕದಲ್ಲಿ ಫ್ರೀಂಡಂ ಹೌಸ್ ಎಂಬ ಎನ್ ಜಿ ಓ ಒಂದಿದೆ. ಇದು ಸ್ಥಾಪನೆಯಾಗಿದ್ದು ೧೯೪೧ರ ಅಕ್ಟೋಬರ್ ನಲ್ಲಿ. ಇದು ಪ್ರಜಾಪ್ರಭುತ್ವ, ರಾಜಕೀಯ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆ ಸಂಶೋಧನೆ ನಡೆಸುತ್ತದೆ. ಫ್ರೀಡಂ ಹೌಸ್ ಅನ್ನು ಅಕ್ಟೋಬರ್ ೧೯೪೧ ರಲ್ಲಿ ಸ್ಥಾಪಿಸಲಾಯಿತು. ಫ್ರೀಡಂ ಹೌಸ್ ತನ್ನನ್ನು ತಾನು “ವಿಶ್ವದಾದ್ಯಂತದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಸ್ಪಷ್ಟ ಧ್ವನಿ” ಎಂದು ವಿವರಿಕೊಳ್ಳುತ್ತದೆ. ಪ್ರತಿ ದೇಶದ ರಾಜಕೀಯ ಸ್ವಾತಂತ್ರ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಕುರಿತು ಈ ಸಂಸ್ಥೆ ಅಧ್ಯಯನ ನಡೆಸುತ್ತದೆ. ಈ ಸಂಸ್ಥೆ ಕಳೆದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದಲ್ಲಿನ ಪ್ರಜಾಪ್ರಭುತ್ವ ಈ ಸಂಪೂರ್ಣ ಪ್ರಜಾಪ್ರಭುತ್ವವಾಗಿ ಉಳಿದಿಲ್ಲ. ಭಾರತದ ಪ್ರಜಾಪ್ರಭುತ್ವ ಈಗ ದೋಷಪೂರಿತ ಪ್ರಜಾಪ್ರಭುತ್ವ. ರಾಜಕೀಯ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾರತ ನಲವತ್ತಕ್ಕೆ ಮೂವತ್ತನಾಲ್ಕು ಅಂಕ ಪಡೆದರೆ, ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಅರವತ್ತು ಅಂಕಗಳಿಗೆ ಕೇವಲ ೩೩ ಅಂಕಗಳನ್ನು ಪಡೆದಿದೆ. ಒಟ್ಟಾರೆಯಾಗಿ ನೂರಕ್ಕೆ ಅರವತ್ತೇಳು ಅಂಕಗಳಷ್ಟೇ ಭಾರತಕ್ಕೆ ಲಭ್ಯವಾಗಿದೆ.
ಭಾರತ ಹೀಗೆ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಕುಸಿತ ಕಾಣಲು ಕಾರಣಗಳನ್ನೂ ಸಹ ಫ್ರೀಡಂ ಹೌಸ್ ಒದಗಿಸಿದೆ “rising violence and discriminatory policies affecting the Muslim population” and “crackdown on expressions of dissent by the media, academics, civil society groups, and protesters” under the Narendra Modi government. It said criminal charges were filed against journalists, students, and others under “colonial-era sedition laws” and the the Information Technology (IT) Act in response to “speech perceived as critical of the government, notably including expressions of opposition to the new citizenship legislation and discussion of the official response to the COVID-19 pandemic”.
ಫ್ರೀಡಂಹೌಸ್ ನ ವರದಿ ಭಾರತದಲ್ಲಿ ಮುಸ್ಲಿಂ ಸಮುದಾಯದ ಕುರಿತು ಆಳುವ ಸರ್ಕಾರ ತೆಗೆದುಕೊಂಡಿರುವ ನಿಲುವುಗಳು ಮತ್ತು ನೀತಿಗಳ ಕುರಿತು ಕಟುವಾಗಿ ವಿಮರ್ಶಿಸಿದೆ. ದೇಶದ ಶೇಕಡ ಎಂಭತ್ತರಷ್ಟು ಹಿಂದೂಗಳು ಮೂಲತಃ ಸೆಕ್ಯುಲರ್ ಆಗಿದ್ದಾರೆ. ಆದರೆ ಕೆಲವು ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳು, ಕೆಲವು ಮೀಡಿಯಾ ಸಂಸ್ಥೆಗಳು ದೇಶದಲ್ಲಿ ಮುಸ್ಲಿಂವಿರೋಧಿ ಭಾವನೆಗಳನ್ನು ಹಬ್ಬಿಸುತ್ತಿವೆ. ಇದನ್ನು ಸ್ವತಃ ನರೇಂದ್ರ ಮೋದಿಯವರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ವರದಿ ಹೇಳುತ್ತದೆ. ೨೦೨೦ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಸಿಎಎ, ಎನ್.ಆರ್.ಸಿ ವಿರೋಧಿ ಚಳವಳಿಯ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿರುವ ವರದಿಯು ‘ಕನಿಷ್ಠ ೫೩ ಮಂದಿ ಈ ಗಲಭೆಯಲ್ಲಿ ಸಾವಿಗೀಡಾದರು, ಸಾವಿಗೀಡಾದವರಲ್ಲಿ ಬಹುತೇಕರು ಮುಸ್ಲಿಮರು. ಭಾರತ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜಾರಿಗೆ ತರಲು ಹೊರಟ ಎನ್ ಆರ್ ಸಿ ಮುಸ್ಲಿಮರನ್ನು ಅಕ್ರಮ ವಲಸೆಕೋರರೆಂದು ಹೇಳುವ ಹುನ್ನಾರ ಹೊಂದಿದೆ ಎಂದು ಮುಸ್ಲಿಮರು ಭಾವಿಸಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಹೇಳುತ್ತದೆ. ಮುಸ್ಲಿಮರನ್ನು ಕೋವಿಡ್-೧೯ ಹರಡಲು ಕಾರಣಕರ್ತರು ಎಂದು ಅಪಪ್ರಚಾರ ನಡೆಸಿರುವುದು, ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸಹ ವರದಿ ಉಲ್ಲೇಖಿಸುತ್ತದೆ.
ಫ್ರೀಡಂ ಹೌಸ್ ವರದಿಯಲ್ಲಿ ಭಾರತದ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆ ಕುಸಿಯುತ್ತಿರುವ ಕುರಿತೂ ಸಹ ಕಳವಳ ವ್ಯಕ್ತಪಡಿಸಲಾಗಿದೆ. ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಗಳ ಕಾರ್ಯನಿರ್ವಹಣೆ ಪ್ರಶ್ನಾರ್ಹವಾಗಿದೆ. ಮಾಧ್ಯಮ ಸ್ವಾತಂತ್ರ್ಯದ ಹರಣವೂ ನಡೆಯುತ್ತಿದೆ ಎಂದು ವರದಿ ಹೇಳುತ್ತದೆ.
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಈಐಯು) ಎಂಬ ಇನ್ನೊಂದು ಸಂಸ್ಥೆಯಿದೆ, ಇದು ಸ್ಥಾಪನೆಯಾಗಿರುವುದು ೧೯೪೬ರಲ್ಲಿ. ಇದು ಲಂಡನ್ ನಲ್ಲಿ ಪ್ರಧಾನ ಕಚೇರಿ ಹೊಂದಿದೆ, ಚೀನಾ, ಸಿಂಗಾಪುರಗಳಲ್ಲೂ ಇದರ ಕಚೇರಿಗಳಿವೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿರುವ ರಾಜಕೀಯ, ಆರ್ಥಿಕ, ಸಾಮಾಜಿಕ ಬೆಳವಣಿಗೆಗಳ ಕುರಿತಾದ ಸಂಶೋಧನೆ ಮತ್ತು ವಿಶ್ಲೇಷಣೆಗೆ ಇದು ಹೆಸರುವಾಸಿಯಾಗಿದೆ.
ಈಐಯು ಜಗತ್ತಿನ ೧೬೫ ದೇಶಗಳಲ್ಲಿನ ಆಡಳಿತವನ್ನು ಅಧ್ಯಯನ ಮಾಡಿ ಒಂದು ಸೂಚ್ಯಂಕವನ್ನು ತಯಾರು ಮಾಡಿದೆ. ಈ ದೇಶಗಳನ್ನು ಅದು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿಕೊಂಡಿದೆ. ೧೬೫ ದೇಶಗಳಲ್ಲಿ ಒಟ್ಟು ೨೩ ದೇಶಗಳು ಪೂರ್ಣ ಸ್ವರೂಪದ ಪ್ರಜಾಪ್ರಭುತ್ವವನ್ನು ಹೊಂದಿದ್ದರೆ, ೫೨ ದೇಶಗಳಲ್ಲಿ ದೋಷಪೂರಿತ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ೩೫ ದೇಶಗಳನ್ನು ಹೈಬ್ರಿಡ್ ಪ್ರಭುತ್ವಗಳು ಎಂದು ಗುರುತಿಸಲಾಗಿದ್ದು, ೫೭ ದೇಶಗಳನ್ನು ನಿರುಕುಂಶ ಪ್ರಭುತ್ವಗಳೆಂದು ಹೇಳಲಾಗಿದೆ. ಭಾರತ ಕೂಡ ದೋಷಪೂರಿತ ಪ್ರಜಾಪ್ರಭುತ್ವ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಇರುವುದು ಆತಂಕಕಾರಿ. ಈಐಯು ಪ್ರಜಾಪ್ರಭುತ್ವದ ಆಚರಣೆಯ ಮಾನದಂಡವನ್ನು ಇಟ್ಟುಕೊಂಡು ಒಂದು ಪಟ್ಟಿ ತಯಾರಿಸಿದ್ದು ಭಾರತ ಈ ಪಟ್ಟಿಯಲ್ಲಿ ೫೩ನೇ ಸ್ಥಾನದಲ್ಲಿದೆ. ಭಾರತದಲ್ಲಿ ನಾಗರಿಕರ ಹಕ್ಕುಗಳನ್ನು ದಮನ ಮಾಡುವ ಆಡಳಿತ ವ್ಯವಸ್ಥೆಯಿಂದಾಗಿ ಪ್ರಜಾಪ್ರಭುತ್ವದ ಮಟ್ಟ ಕುಸಿಯುತ್ತ ಬರುತ್ತಿದೆ ಎಂದು ಈ ವರದಿ ಹೇಳುತ್ತಿದೆ. ಪ್ರಜಾಪ್ರಭುತ್ವ ಆಚರಣೆಗೆ ಸಂಬಂಧಿಸಿದಂತೆ ಈಐಯು ನೀಡುವ ಅಂಕಪಟ್ಟಿಯಲ್ಲಿ ೨೦೧೪ರಲ್ಲಿ ಭಾರತ ಗಳಿಸಿದ ಅಂಕ ೭.೯೨ (ಹತ್ತಕ್ಕೆ). ಆದರೆ ಕಳೆದ ಏಳು ವರ್ಷಗಳಲ್ಲಿ ಅದು ಕುಸಿಯುತ್ತ ಬಂದಿದ್ದು, ೨೦೨೦ರ ಅಂತ್ಯಕ್ಕೆ ೬.೬೧ಗೆ ಇಳಿದಿದೆ.
ಜಾಗತಿಕ ಸಂಸ್ಥೆಗಳು ನೀಡುತ್ತಿರುವ ಈ ವರದಿಗಳು ಭಾರತದ ಪಾಲಿಗೆ ಅತ್ಯಂತ ಗಂಭೀರವಾದ ಎಚ್ಚರಿಕೆಯನ್ನು ನೀಡುತ್ತಿವೆ. ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದರೆ ಅಲ್ಲಿ ಮಾನವ ಹಕ್ಕುಗಳ ಹರಣ ನಡೆಯುತ್ತಿದೆ ಎಂದೇ ಅರ್ಥ. ಭಾರತದ ಮಟ್ಟಿಗೆ ಅಲ್ಪಸಂಖ್ಯಾತ ಮುಸ್ಲಿಮರು, ದಲಿತರು, ಆದಿವಾಸಿಗಳು, ಮಾನವಹಕ್ಕು ಹೋರಾಟಗಾರರು, ಪತ್ರಕರ್ತರು, ವಿದ್ವಾಂಸರು, ಸಾಮಾಜಿಕ ಹೋರಾಟಗಾರರು, ಮಹಿಳೆಯರು ಅತಿ ಹೆಚ್ಚು ಮಾನವಹಕ್ಕು ಹರಣಕ್ಕೆ ಒಳಗಾಗುತ್ತಿದ್ದಾರೆ.
ವಿಶ್ವಸಂಸ್ಥೆಯ The Universal Declaration of Human Rights (UDHR) ಏನನ್ನು ಹೇಳುತ್ತದೆ ಎಂಬುದನ್ನು ನಾವು ಗಂಭೀರವಾಗಿ ಆಲಿಸಬೇಕು. ೧೯೪೮ರ ಡಿಸೆಂಬರ್ ೧೦ರಂದು ಪ್ಯಾರಿಸ್ ನಲ್ಲಿ ನಡೆದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ತೆಗೆದುಕೊಂಡ ೨೧೭ (ಎ) ನಿರ್ಣಯವೇ ದಿ ಯೂನಿವರ್ಸಲ್ ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್ ಅಥವಾ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ. ಜಗತ್ತಿನಾದ್ಯಂತ ಬೇರೆ ಬೇರೆ ದೇಶಗಳ ಯಾವುದೇ ರೂಪದ ಪ್ರಭುತ್ವ ಇದ್ದರೂ ಅವು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳ ಕುರಿತು ಈ ಡಿಕ್ಲರೇಷನ್ ಮಾತನಾಡುತ್ತದೆ. ಇದು ಸುಮಾರು ಐನೂರು ಭಾಷೆಗಳಿಗೆ ಅನುವಾದವೂ ಆಗಿದೆ.
Whereas recognition of the inherent dignity and of the equal and inalienable rights of all members of the human family is the foundation of freedom, justice and peace in the world…
ಈ ಘೋಷಣೆಯ ಮೊದಲ ಸಾಲುಗಳಲ್ಲೇ ಮನುಕುಲದ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸುವ ಕುರಿತು ಸ್ಪಷ್ಟ ನುಡಿಗಳಿವೆ. ಮನುಕುಲದ ಎಲ್ಲ ಸದಸ್ಯರ ಘನತೆ ಮತ್ತು ಸಮಾನ ಮತ್ತು ಅಳಿಸಲಾಗದ ಹಕ್ಕುಗಳನ್ನು ಗುರುತಿಸುವುದು ವಿಶ್ವದ ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿಯ ಅಡಿಪಾಯವಾಗಿದೆ ಎಂದು ಅದು ಹೇಳುತ್ತದೆ.
ಮನುಷ್ಯ ಭಯ ಮುಕ್ತನಾಗಿ ಬದುಕುವಂತಾಗಬೇಕು, ಅವನಿಗೆ ವಾಕ್ ಸ್ವಾತಂತ್ರ್ಯವಿರಬೇಕು, ನಂಬಿಕೆಗಳನ್ನು ಅನುಸರಿಸುವಲ್ಲಿ ಪೂರ್ಣ ಸ್ವಾತಂತ್ರ್ಯವಿರಬೇಕು, ಇದು ಮನುಷ್ಯನ ಮೂಲಭೂತ ಹಕ್ಕುಗಳು. ದೌರ್ಜನ್ಯ, ಶೋಷಣೆಗಳ ವಿರುದ್ಧ ಪ್ರತಿಭಟಿಸುವ ಹಕ್ಕೂ ಕೂಡ ಅವನಿಗೆ ಇರಬೇಕು ಎಂದು ಈ ಘೋಷಣೆ ಹೇಳುತ್ತದೆ. ಮನುಷ್ಯ ಯಾವುದೇ ಮತ ಪಂಥ ಧರ್ಮ ಪ್ರಾಂತ್ಯ ಲಿಂಗಕ್ಕೆ ಸೇರಿದ್ದರೂ ಆತನಿಗೆ ಘನತೆಯಿಂದ ಬದುಕುವ ಹಕ್ಕು, ಸಮಾನತೆಯಿಂದ ಬದುಕುವ ಹಕ್ಕು ಇದೆ ಎಂಬುದು ಈ ಘೋಷಣೆಯ ಮೂಲಧಾತು. ಈ ಘೋಷಣೆ ಹೀಗೆ ಹೇಳುತ್ತದೆ:
Proclaims this Universal Declaration of Human Rights as a common standard of achievement for all peoples and all nations, to the end that every individual and every organ of society, keeping this Declaration constantly in mind, shall strive by teaching and education to promote respect for these rights and freedoms and by progressive measures, national and international, to secure their universal and effective recognition and observance, both among the peoples of Member States themselves and among the peoples of territories under their jurisdiction.
ಭಾರತ ಸಂವಿಧಾನವು ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ನೀಡಿವೆ. ಇವೆಲ್ಲವೂ ಕೂಡ ಮಾನವಹಕ್ಕುಗಳೇ ಆಗಿವೆ. ಒಟ್ಟು ಆರು ಅತಿಮುಖ್ಯ ಹಕ್ಕುಗಳನ್ನು ಭಾರತ ಸಂವಿಧಾನವು ಗುರುತಿಸಿದೆ. ಸಂವಿಧಾನದ ೧೨ನೇ ಪರಿಚ್ಛೇದದಿಂದ ಹಿಡಿದು ೩೫ನೇ ಪರಿಚ್ಛೇದದವರೆಗೆ ಈ ಹಕ್ಕುಗಳ ಕುರಿತು ವಿವರಣೆ ಇದೆ. ೧೪ರಿಂದ ೧೮ನೇ ಪರಿಚ್ಛೇದಗಳು ಸಮಾನತೆಯ ಹಕ್ಕನ್ನು ನೀಡಿದರೆ ೧೯ರಿಂದ ೨೨ನೇ ಪರಿಚ್ಛೇದಗಳು ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತವೆ. ಶೋಷಣೆಯ ವಿರುದ್ಧ ಹಕ್ಕುಗಳನ್ನು ೨೩ರಿಂದ ೨೪ನೇ ಪರಿಚ್ಛೇದಗಳು ವಿವರಿಸುತ್ತವೆ. ಹಾಗೆಯೇ ೨೫ ರಿಂದ ೨೮ರವರೆಗಿನ ಪರಿಚ್ಛೇದಗಳು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತವೆ. ೨೯ ಮತ್ತು ೩೦ನೇ ಪರಿಚ್ಛೇದಗಳು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ನೀಡಿದರೆ ೩೨ನೇ ಪರಿಚ್ಛೇದ ಮತ್ತು ೨೨೬ನೇ ಪರಿಚ್ಛೇದಗಳು ಹಕ್ಕುಗಳ ಹರಣವಾದಾಗ ದೇಶದ ಉನ್ನತ ನ್ಯಾಯಾಲಯಗಳಿಂದ ರಕ್ಷಣೆ ಪಡೆಯುವ ಹಕ್ಕನ್ನು ನೀಡುತ್ತವೆ.
ಆದರೆ ಇಷ್ಟೆಲ್ಲ ಸಾಂವಿಧಾನಿಕ ರಕ್ಷಣೆ ಇದ್ದರೂ ಭಾರತದಲ್ಲಿ ಜಾತಿ ಆಧಾರಿತ ದೌರ್ಜನ್ಯಗಳು ನಡೆಯುತ್ತಲೇ ಇವೆ. ಪ್ರತಿ ವರ್ಷ ಸರಾಸರಿ ಐವತ್ತು ಸಾವಿರದಷ್ಟು ಅಪರಾಧ ಪ್ರಕರಣಗಳು ಜಾತಿಯ ಹಿನ್ನೆಲೆಯಲ್ಲಿ ನಡೆಯುವ ದೌರ್ಜನ್ಯಗಳಾಗಿರುತ್ತವೆ. ಇವೆಲ್ಲವೂ ಸಹ ಈ ದೇಶದ ಎಸ್‌ಸಿ, ಎಸ್‌ಟಿ ಸಮುದಾಯಗಳ ಮೇಲೆಯೇ ನಡೆಯುತ್ತವೆ. ಭಾರತದಲ್ಲಿ ಶತಶತಮಾನಗಳಿಂದ ದಲಿತ ಸಮುದಾಯದ ಮಾನವಹಕ್ಕುಗಳ ದಮನ ನಡೆಯುತ್ತಲೇ ಇದೆ. ಭಾರತ ಸಂವಿಧಾನದ ರಕ್ಷಣೆ ದೊರೆತರೂ ಅದು ಈಗಲೂ ಮುಂದುವರೆದಿದೆ. ದಲಿತ ಸಮುದಾಯದ ಹುಡುಗ ಕುದುರೆ ಓಡಿಸಿದನೆಂದು ಕೊಲ್ಲುವ, ಮೀಸೆ ಬಿಟ್ಟಿದ್ದಾನೆಂದು ಕೊಲ್ಲುವ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದನೆಂಬ ಕಾರಣಕ್ಕೆ ಕೊಲ್ಲುವ ಘಟನೆಗಳನ್ನು ನಾವು ನೋಡಿದ್ದೇವೆ. ಜಾತಿಯ ಕಾರಣಕ್ಕಾಗಿಯೇ ದಲಿತ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಅಪಮಾನಿಸುವ, ಅತ್ಯಾಚಾರ ಮಾಡಿ ಕೊಲ್ಲುವ ಘಟನೆಗಳೂ ನಡೆಯುತ್ತವೆ.
ಜಾತಿಯ ಕಾರಣಕ್ಕಾಗಿ ನಡೆಯುತ್ತಿರುವ ದೌರ್ಜನ್ಯ, ಅಸಮಾನತೆ, ಅಸ್ಪೃಶ್ಯತೆಗಳು ಮಾನವಹಕ್ಕುಗಳ ನೇರ ಉಲ್ಲಂಘನೆ, ಸಂವಿಧಾನದ ಆಶಯಗಳ ಉಲ್ಲಂಘನೆಯೂ ಹೌದು. ಅಸ್ಪೃಶ್ಯತೆ ತಡೆಗೆ ಕಾಯ್ದೆಗಳು ಇದ್ದರೂ ಅಸ್ಪೃಶ್ಯತೆ ಇನ್ನೂ ಕೊನೆಯಾಗಿಲ್ಲ. ಭಾರತದಲ್ಲಿ ನಿಸ್ಸಂಶಯವಾಗಿ ಮಾನವಹಕ್ಕು ಹರಣದ ಮೊದಲ ಬಲಿಪಶುಗಳು ಹಿಂದೆ, ಇವತ್ತು ಮತ್ತು ಬಹುಶಃ ಮುಂದೆಯೂ ಈ ತಳಸಮುದಾಯಗಳೇ ಆಗಿವೆ. ಭಾರತದ ವರ್ಣಾಶ್ರಮ ವ್ಯವಸ್ಥೆ ಮತ್ತು ಅದರ ಮುಂದುವರಿಕೆಯಾದ ಜಾತಿವ್ಯವಸ್ಥೆ ದಿನದಿಂದ ದಿನಕ್ಕೆ ಕ್ರೂರ ಸ್ವರೂಪ ಪಡೆದುಕೊಳ್ಳುತ್ತಿದೆ.
ಭಾರತ ಮೂಲಭೂತವಾಗಿ ಜಾತ್ಯತೀತ ರಾಷ್ಟ್ರ. ಆದರೆ ಬಲಪಂಥೀಯ ಶಕ್ತಿಗಳು ಪ್ರವರ್ಧಮಾನಕ್ಕೆ ಬಂದು ದೇಶದ ಆಡಳಿತ ಚುಕ್ಕಾಣಿ ಹಿಡಿದ ನಂತರ ಭಾರತವನ್ನು ‘ಕೋಮುಭಾರತ’ವನ್ನಾಗಿಸಲು ಅದು ಯಶಸ್ವಿಯಾಗಿದೆ. ಭಾರತ ಈಗ ಒಂದು ಬಗೆಯಲ್ಲಿ ಅಘೋಷಿತ ಹಿಂದೂ ರಾಷ್ಟ್ರವಾಗಿ ಮಾರ್ಪಾಡಾಗಿದೆ. ಸಾಧಾರಣವಾಗಿ ಯಾವುದೇ ದೇಶ ಒಂದು ಧರ್ಮಕ್ಕೆ ಸಮರ್ಪಿಸಿಕೊಂಡರೆ, ಅದು ಇನ್ನುಳಿದ ಅಲ್ಪಸಂಖ್ಯಾತ ಸಮುದಾಯಗಳನ್ನು ಎರಡನೇ ದರ್ಜೆ ನಾಗರಿಕರಂತೆ ಅಥವಾ ದೇಶದ ನಾಗರಿಕರೇ ಅಲ್ಲವೆಂಬಂತೆ ನೋಡುತ್ತದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದಲೇ ದೇಶದ ಮುಸ್ಲಿಮರಲ್ಲಿ ಅಭದ್ರತೆಯ ಭಾವ ಆರಂಭಗೊಂಡಿತ್ತು. ಬಾಬರಿ ಮಸೀದಿ ಒಡೆದದ್ದು ತಪ್ಪು ಆದರೂ ಮಸೀದಿ ಒಡೆದ ಜಾಗದಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಸಿಎಎ, ಎನ್ ಆರ್ ಸಿ ಜಾರಿಗೆ ತರುವ ಭಾರತ ಸರ್ಕಾರದ ಆತುರ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತ್ರಿವಳಿ ತಲಾಖ್ ಕಾನೂನು ರಚಿಸಿದ್ದು, ನಂತರ ಇದೇ ಸಮುದಾಯಕ್ಕೆ ಅಭದ್ರತೆ ಸೃಷ್ಟಿಸುವಂತೆ ಸಿಎಎ, ಎನ್‌ಆರ್‌ಸಿ ಜಾರಿಗೆ ತರಲು ಹೊರಟಿದ್ದು, ಈಗ ಜನಸಂಖ್ಯಾ ನಿಯಂತ್ರಣದ ಹೆಸರಿನಲ್ಲಿ ಸಮಾನ ನಾಗರಿಕ ಸಂಹಿತೆಯ ಅಸ್ತ್ರವನ್ನು ಝಳಪಿಸುತ್ತಿರುವುದು ಇದೆಲ್ಲವೂ ಭಾರತದ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಸಾಕ್ಷ್ಯಗಳಾಗಿವೆ. ಇದೆಲ್ಲದರ ಜತೆಗೆ ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ದಾಳಿಗಳು, ಗುಂಪುಹಲ್ಲೆಗಳು, ಕೊಲೆಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಕೆಲವು ಸರ್ಕಾರಿ ಕೃಪಾಪೋಷಿತ ಗುಂಪುಗಳು, ಸಂಘಟನೆಗಳು ಯಾವುದೇ ಭಯಭೀತಿಯಿಲ್ಲದೆ ನಡುಬೀದಿಯಲ್ಲಿ ಇಂಥ ಕ್ರೂರ ದಾಳಿಗಳನ್ನು ಎಸಗುತ್ತಿವೆ. ಇಂಥವರು ಜೈಲಿಗೆ ಹೋದರೂ ಅವರಿಗೆ ರಕ್ಷಣೆ ದೊರೆಯುತ್ತಿದೆ, ಹೊರಗೆ ಬಂದಾಗ ಆಳುವ ಪಕ್ಷದ ಸದಸ್ಯರಿಂದಲೇ, ಮಂತ್ರಿ-ಶಾಸಕರಿಂದಲೇ ಜೈಲಿನಾವರಣದಲ್ಲೇ ಸ್ವಾಗತ ದೊರೆಯುತ್ತಿದೆ.
ಕಳೆದ ವರ್ಷ ಸಿಎಎ ಎನ್ಆರ್ಸಿ ವಿರುದ್ಧ ಪ್ರತಿಭಟಿಸುತ್ತಿದ್ದ ಮುಸ್ಲಿಂ ಸಮುದಾಯದ ಯುವಕ–ಯುವತಿಯರ ಮೇಲೆ ವ್ಯಾಪಕವಾದ ಹಲ್ಲೆಗಳು ನಡೆದು ಹಲವಾರು ಮಂದಿ ಮೃತಪಟ್ಟರು. ದೆಹಲಿ–ಉತ್ತರಪ್ರದೇಶಗಳಲ್ಲಿ ನಡೆದ ಹಿಂಸಾಚಾರದಲ್ಲಿ ಸತ್ತವರೂ ಮುಸ್ಲಿಮರು, ಜೈಲಿಗೆ ಹೋದವರೂ ಬಹುತೇಕ ಮುಸ್ಲಿಮರು. ಇದೆಲ್ಲ ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ದಮನದ ನಿದರ್ಶನಗಳು, ಎಲ್ಲವೂ ಕೂಡ ಮಾನವಹಕ್ಕುಗಳ ಹರಣದ ಉದಾಹರಣೆಗಳು.
ಯುಎಪಿಎ, ರಾಜದ್ರೋಹದ ಕಾನೂನುಗಳು ಕೂಡ ಭಾರತದಲ್ಲಿ ಮಾನವಹಕ್ಕುಗಳ ಕುಸಿತಕ್ಕೆ ದೊಡ್ಡ ರಹದಾರಿ ಒದಗಿಸಿವೆ. ೧೮೭೦ರಲ್ಲಿ ಬ್ರಿಟಿಷ್ ವಸಾಹತುಶಾಹಿ ಪ್ರಭುತ್ವ ಜಾರಿಗೆ ತಂದಿದ್ದ ರಾಜದ್ರೋಹದ ಕಾನೂನು ಆ ಕಾಲದಿಂದಲೂ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರೀಯವಾದಿಗಳನ್ನು ಗುರಿಯಾಗಿಸಿಕೊಂಡಿತ್ತು. ರಾಜದ್ರೋಹ ಅಥವಾ ಸೆಡಿಷನ್ ಕಾನೂನು ಈಗಲೂ ಜಾರಿಯಲ್ಲಿದೆ ಮತ್ತು ಅದನ್ನು ದೇಶದ ನಾಗರಿಕರ ಮೇಲೆ ಪ್ರಯೋಗ ಮಾಡಲಾಗುತ್ತಿದೆ.
ಆರ್ಟಿಕಲ್ ೧೪ ಎಂಬ ಒಂದು ಪೋರ್ಟಲ್ ಇದೆ. ಅದನ್ನು ಪತ್ರಕರ್ತರು, ಸಮಾಜವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರನ್ನು ಒಳಗೊಂಡ ಒಂದು ತಂಡ ನಡೆಸುತ್ತದೆ. ಈ ಪೋರ್ಟಲ್ ಭಾರತದಲ್ಲಿ ರಾಜದ್ರೋಹದ ಅಡಿಯಲ್ಲಿ ಹೂಡಲಾಗಿರುವ ಪ್ರಕರಣಗಳ ಕುರಿತು ವಿಸ್ತೃತ ಅಧ್ಯಯನವನ್ನು ಪ್ರಕಟಿಸಿದೆ. ಆಸಕ್ತರು ಓದಬಹುದು. ಜನವರಿ ೧, ೨೦೧೦ರಿಂದ ಡಿಸೆಂಬರ್ ೩೧,೨೦೨೦ರವರೆಗೆ ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ ೧೨೪ಎ ಅಡಿಯಲ್ಲಿ ದಾಖಲಾದ ರಾಜದ್ರೋಹದ ಪ್ರಕರಣಗಳಿಗೆ ಗುರಿಯಾದ ಭಾರತೀಯರ ಸಂಖ್ಯೆ ಒಟ್ಟು ೧೦,೯೩೮. ಈ ಪೈಕಿ ಶೇ.೬೫ರಷ್ಟು ಪ್ರಕರಣಗಳು ೨೦೧೪ರ ಮೇ ತಿಂಗಳಿನಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವರದಿಯಾಗಿವೆ. ಈ ವರದಿಯನ್ನು ಬರೆದಿರುವ ಕುನಾಲ್ ಪುರೋಹಿತ್ ಅವರ ಪ್ರಕಾರ, ಬಹುತೇಕ ಪ್ರಕರಣಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಾಖಲಾಗಿವೆ ಮತ್ತು ಈ ಪ್ರಕರಣಗಳನ್ನು ಸರ್ಕಾರದ ವಿರುದ್ಧ ಸಾರ್ವಜನಿಕ ಟೀಕೆ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕುವ ಸಲುವಾಗಿಯೇ ಹೂಡಲಾಗಿದೆ. ಇದಕ್ಕೆ ಉದಾಹರಣೆಯಾಗಿ ರೈತರ ಪ್ರತಿಭಟನೆ ಸಂದರ್ಭದಲ್ಲಿ ಹೂಡಲಾದ ಪ್ರಕರಣಗಳು, ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿ ಹೂಡಲಾದ ಪ್ರಕರಣಗಳನ್ನು ಗಮನಿಸಬಹುದು. ಅಷ್ಟೇ ಏಕೆ, ಹತ್ರಾಸ್ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದ ಜನತೆ ಪ್ರತಿಭಟಿಸುತ್ತಿದ್ದಾಗ ಇದಕ್ಕೆ ಸಂಬಂಧಿಸಿದಂತೆ ಹೂಡಲಾದ ದೇಶದ್ರೋಹದ ಪ್ರಕರಣಗಳು ೨೨. ಅತ್ಯಾಚಾರಗಳ ವಿರುದ್ಧ ಪ್ರತಿಭಟಿಸುವುದೂ ಕೂಡ ನಮ್ಮ ದೇಶದಲ್ಲಿ ದೇಶದ್ರೋಹದ ಕ್ರಿಯೆಯಾಗಿ ಹೋಗಿರುವುದು ಎಂಥ ವಿಪರ್ಯಾಸ ನೋಡಿ.
ಶೇ.೯೬ರಷ್ಟು ರಾಜದ್ರೋಹದ ಪ್ರಕರಣಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಗಳನ್ನು ಟೀಕಿಸಿದವರನ್ನೇ ಸಿಲುಕಿಸಲಾಗಿದೆ. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾನಹಾನಕಾರಿಯಾಗಿ ಅಥವಾ ಕಟುವಾಗಿ ಟೀಕಿಸಿದವರ ಮೇಲೆ ೧೪೯ ಪ್ರಕರಣಗಳನ್ನು, ಉತ್ತರಪ್ರದೇಶ ಮುಖ್ಯಮಂತ್ರಿ ಅಜಯ್ ಕುಮಾರ್ ಬಿಷ್ಟ್ (ಆದಿತ್ಯನಾಥ್) ವಿರುದ್ಧ ಟೀಕಿಸಿದವರ ಮೇಲೆ ೧೪೪ ಪ್ರಕರಣಗಳನ್ನು ಹೂಡಲಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ಬಿಹಾರ, ಉತ್ತರಪ್ರದೇಶ, ಕರ್ನಾಟಕ ಮತ್ತು ಜಾರ್ಖಂಡ್ ಗಳು ಅತಿಹೆಚ್ಚು ದೇಶದ್ರೋಹದ ಕೇಸು ಹೂಡಿದ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.
ಒಂದು ಆಘಾತಕಾರಿ ವಿಷಯವೆಂದರೆ ೨೦೧೦ರಿಂದ ೨೦೧೧ರವರೆಗೆ ಕೇವಲ ಕರ್ನಾಟಕದಲ್ಲಿ ೨೦೪ ವ್ಯಕ್ತಿಗಳ ವಿರುದ್ಧ ಒಟ್ಟು ೫೩ ಸೆಡಿಷನ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಕರ್ನಾಟಕದಲ್ಲಿ ದಾಖಲಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಅವುಗಳಲ್ಲಿ ಬಹುತೇಕ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳನ್ನು ಆಧರಿಸಿ ಹೂಡಲಾಗಿರುವುದು ಬೆಳಕಿಗೆ ಬರುತ್ತವೆ. ಹೀಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೇಲೆ ಹೂಡಲಾಗುವ ಪ್ರಕರಣಗಳ ಪಟ್ಟಿ ನೋಡಿದರೆ ಇಡೀ ದೇಶದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ.
ಇನ್ನು ಯುಎಪಿಎ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದವರ ಪಟ್ಟಿಯನ್ನು ಗಮನಿಸಿದರೆ ಅವರಲ್ಲಿ ಬಹುತೇಕರು ಮಾನವಹಕ್ಕು ಹೋರಾಟಗಾರರು, ಸಾಮಾಜಿಕ ಹೋರಾಟಗಾರರು, ವಿದ್ವಾಂಸರು, ಕವಿಗಳು, ಬರೆಹಗಾರರು, ಪತ್ರಕರ್ತರೇ ಹೆಚ್ಚು ಕಾಣಿಸುತ್ತಾರೆ. ಯುಎಪಿಎ ದೇಶದ ಭದ್ರತೆಗೆ ಸಂಬಂಧಿಸಿದ ಕಾಯ್ದೆ. ಆದರೆ ಅದು ಭಯೋತ್ಪಾದಕರಿಗಿಂತ ಹೆಚ್ಚಾಗಿ ದೇಶದಲ್ಲಿ ಆಳುವ ಸರ್ಕಾರಗಳ ವಿರುದ್ಧ ಭಿನ್ನಮತ ಪ್ರದರ್ಶಿಸುವ ನಾಗರಿಕರ ಮೇಲೇ ಹೂಡಲಾಗುತ್ತಿದೆ. ೨೦೧೯ರ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್ ಸಿ ಆರ್ ಬಿ) ದಾಖಲೆಗಳ ಪ್ರಕಾರ ೨೦೧೬ರಿಂದ ೨೦೧೯ರವರೆಗೆ ಯುಎಪಿಎ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಕನ್ವಿಕ್ಷನ್ (ಶಿಕ್ಷೆ) ಆಗಿರುವುದು ಕೇವಲ ೨.೨% ಪ್ರಕರಣಗಳಲ್ಲಿ ಮಾತ್ರ. ಇದನ್ನು ಸ್ವತಃ ಒಕ್ಕೂಟ ಸರ್ಕಾರದ ರಾಜ್ಯಖಾತೆ ಗೃಹಸಚಿವ ಜಿ.ಕೃಷ್ಣನ್ ರೆಡ್ಡಿ ರಾಜ್ಯಸಭೆಯಲ್ಲಿ ಅಧಿಕೃತವಾಗಿ ತಿಳಿಸಿದ್ದರು.
ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ನಾವು ಗಮನಿಸಬೇಕು. ಯುಎಪಿಎ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ನಿಧಾನಗತಿಯಲ್ಲಿ ಚಾರ್ಜ್ ಶೀಟ್ ಹಾಕುವುದು, ತನಿಖೆಯನ್ನು ವಿಳಂಬಗೊಳಿಸುವುದನ್ನು ನಾವು ನೋಡಿದ್ದೇವೆ. ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾದರೆ ಜಾಮೀನು ದೊರೆಯುವುದು ತೀರಾ ವಿರಳ. ಹೀಗಾಗಿ ಕೋರ್ಟು ತೀರ್ಪು ಬರುವ ಮುನ್ನವೇ ಆರೋಪಿಗಳು ಶಿಕ್ಷೆ ಅನುಭವಿಸಿಬಿಟ್ಟಿರುತ್ತಾರೆ. ಇದು, ಬೇರೇನೂ ಅಲ್ಲ, ಸರ್ಕಾರ ಭಿನ್ನಮತವನ್ನು ಹತ್ತಿಕ್ಕುವ ಪರಿ ಎಂದು ಮಾನವಹಕ್ಕು ಹೋರಾಟಗಾರರು ವಿವರಿಸುತ್ತಾರೆ. ಆದರೆ ವಿಚಿತ್ರವೆಂದರೆ ಒಮ್ಮೆ ಕೋರ್ಟು ತೀರ್ಪು ಬಂದು ಆರೋಪಿ ನಿರಪರಾಧಿ ಎಂದು ಸಾಬೀತಾದರೂ ಅಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಕ್ಕೆ ಯಾವುದೇ ಪರಿಹಾರ ಆತನಿಗೆ/ಆಕೆಗೆ ದೊರೆಯುವುದಿಲ್ಲ. ಟಾಡಾ ಕಾಯ್ದೆ ಇದ್ದಾಗ ಅನಾರೋಗ್ಯದ ಕಾರಣದಿಂದ ಆರೋಪಿಗಳು ಜಾಮೀನು ಪಡೆಯುವ ಅವಕಾಶವಿತ್ತು, ಯುಎಪಿಎ ಕಾಯ್ದೆ ಅಡಿ ಅದೂ ಕೂಡ ಅಷ್ಟು ಸುಲಭವಲ್ಲ. ಜಾಮೀನು ಸಿಕ್ಕರೂ ಕವಿ ವರವರರಾವ್ ಅವರಿಗೆ ದೊರೆತಂತೆ ತಾತ್ಕಾಲಿಕ ಜಾಮೀನು ಮಾತ್ರ ದೊರೆಯಬಹುದು.
ಇನ್ನು ಮಹಿಳೆಯರ ಮೇಲೆ ನಡೆಯುವ ದಾಳಿ, ಹಿಂಸೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೊಲೆಗಳನ್ನು ಪ್ರಸ್ತಾಪಿಸದೇ ಈ ವಿಷಯ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ಯಾವುದೇ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಿದೆಯೇ ಇಲ್ಲವೇ ಎಂದು ಮೇಲ್ನೋಟಕ್ಕೆ ಹೇಳಲು ಸಾಧ್ಯವಿರುವುದು ಆ ದೇಶದ ಹೆಣ್ಣುಮಕ್ಕಳು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದರ ಆಧಾರದಲ್ಲಿ. ಭಾರತದಲ್ಲಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ನೀಡುವ ಮಾಹಿತಿಯ ಪ್ರಕಾರವೇ ಭಾರತದಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ಭಾರತದ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತವೆ. ಪ್ರತಿ ಗಂಟೆಗೆ ಕನಿಷ್ಠ ಇಬ್ಬರು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಲಾಗುತ್ತದೆ. ಪ್ರತಿ ಆರು ಗಂಟೆಗೆ ಒಬ್ಬ ವಿವಾಹಿತ ಮಹಿಳೆಯನ್ನು ಹೊಡೆದು ಅಥವಾ ಸುಟ್ಟು ಕೊಲ್ಲಲಾಗುತ್ತದೆ. ಶೇ.೨೮.೪ರಷ್ಟು ಗರ್ಭಿಣಿ ಮಹಿಳೆಯರು ಒಂದಲ್ಲ ಒಂದು ರೀತಿಯ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾಳೆ. ನೀವು ಪ್ರಜಾಪ್ರಭುತ್ವ ಕುಸಿದುಹೋಗಿರುವ ದೇಶಗಳನ್ನು ಗಮನಿಸಿ ನೋಡಿ, ಅಲ್ಲೆಲ್ಲ ಮಹಿಳೆಯರ ಮೇಲಿನ ದೌರ್ಜನ್ಯಗಳು ಅತಿಹೆಚ್ಚು ನಡೆಯುತ್ತಿರುತ್ತವೆ.
ಕೊನೆಯದಾಗಿ ಪ್ರಚಲಿತ ಸಂದರ್ಭದಲ್ಲಿ ಸ್ಟಾನ್ ಸ್ವಾಮಿಯವರನ್ನು ನಾನು ಅತ್ಯಂತ ಅಂತಃಕರಣದಿಂದ ನೆನಪಿಸಿಕೊಳ್ಳಲು ಬಯಸುತ್ತೇನೆ. ಜಾರ್ಖಂಡ್ ನಲ್ಲಿ ಅವರು ಅಲ್ಲಿನ ಆದಿವಾಸಿಗಳು, ಬುಡಕಟ್ಟು ಜನರ ಪರವಾಗಿ ಕೆಲಸ ಮಾಡುತ್ತಿದ್ದರು. ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಅವರನ್ನು ಸಿಲುಕಿಸಲಾಯಿತು. ಜಾರ್ಖಂಡ್ ನಲ್ಲಿ ಮೂರು ಸಾವಿರ ಆದಿವಾಸಿಗಳನ್ನು ಯುಎಪಿಎ ಅಡಿ ಬಂಧಿಸಿ ಜೈಲಿಗಟ್ಟಿದ್ದರ ವಿರುದ್ಧ ಫಾದರ್ ಸ್ವಾಮಿ ಕಾನೂನು ಹೋರಾಟಕ್ಕೆ ಇಳಿದಿದ್ದರು. ಭಿನ್ನಮತ ತೋರಿದವರನ್ನೆಲ್ಲ ಹೀಗೆ ಜೈಲಿಗೆ ಕಳುಹಿಸುವುದರ ಕುರಿತು ಅವರು ಹಲವಾರು ರಾಜ್ಯಗಳ ಮಾನವಹಕ್ಕು ಹೋರಾಟಗಾರರನ್ನೆಲ್ಲ ಒಂದು ವೇದಿಕೆಯಡಿ ತಂದಿದ್ದರು. ಪ್ರಭುತ್ವ ಇದನ್ನು ಹೇಗೆ ಸಹಿಸಲು ಸಾಧ್ಯ ಹೇಳಿ? ಭೀಮಾ ಕೋರೆಗಾವ್ ಕೇಸಿನಲ್ಲಿ ಫಾದರ್ ಅವರನ್ನು ಬಂಧಿಸಲಾಯಿತು.
ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ೧೯೬೯ರಲ್ಲಿ The Unlawful Activities (Prevention) Amendment Act ಜಾರಿಗೆ ಬಂದಿತು. ನಂತರ ಹಲವು ಬಾರಿ ಇದು ತಿದ್ದುಪಡಿಗಳಿಗೆ ಒಳಗಾಗಿ, ೨೦೧೯ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯುಎಪಿಎ ಹೊಸ ರೂಪವನ್ನು ಜಾರಿಗೆ ತಂದಿತು. ಭಯೋತ್ಪಾದನಾ ದಾಳಿಗಳ ಸಂದರ್ಭದಲ್ಲಿ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ನೀಡಲು ಯುಎಪಿಎ ಕಾಯ್ದೆ ಅಗತ್ಯ ಶಕ್ತಿಯನ್ನು ತುಂಬಿದೆ ಎಂಬುದು ಸರ್ಕಾರದ ವಾದ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವ ಸರ್ಕಾರದ ಪ್ರಯತ್ನಗಳನ್ನು ತಡೆಯಲು ಕಾಯ್ದೆಯಲ್ಲಿ ಯಾವುದೇ ಮಾರ್ಗವಿಲ್ಲದೇ ಇರುವುದು ಗಮನಾರ್ಹ. ತನಿಖೆಗೂ ಮುನ್ನವೇ ಆರೋಪಿಯೊಬ್ಬನಿಗೆ ’ಭಯೋತ್ಪಾದಕ’ನ ಪಟ್ಟ ನೀಡುವ ಅವಕಾಶ ಈ ಕಾಯ್ದೆಯಲ್ಲಿದೆ. ಇದು ಮನುಷ್ಯನ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಮಾನವ ಹಕ್ಕು ಸಂಘಟನೆಗಳು, ವಿರೋಧಪಕ್ಷಗಳು ೨೦೧೯ರಿಂದಲೂ ಹೇಳುತ್ತಲೇ ಬಂದಿವೆ.
ಲೇಖಕ, ವಿದ್ವಾಂಸ ಜಿ.ಎನ್.ಸಾಯಿಬಾಬಾ, ದಲಿತ ಹೋರಾಟಗಾರ ಸುಧೀರ್ ಧವಾಲೆ, ಬುಡಕಟ್ಟು ಹೋರಾಟಗಾರ ಮಹೇಶ್ ರಾವತ್, ಮಾನವ ಹಕ್ಕು ಹೋರಾಟಗಾರ ಪ್ರೊ.ಶೋಮಾ ಸೇನ್, ದಲಿತ ಹೋರಾಟಗಾರ ಸುರೇಂದ್ರ ಗಾಡ್ಲಿಂಗ್, ರಾಜಕೀಯ ಕಾರ್ಯಕರ್ತರ ಬಂಧನ ವಿರೋಧಿ ಹೋರಾಟ ನಡೆಸುತ್ತಿದ್ದ ರೋನಾ ವಿಲ್ಸನ್, ಕಾರ್ಮಿಕ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್, ಮಾನವ ಹಕ್ಕು ಹೋರಾಟಗಾರರಾದ ವರವರರಾವ್, ಗೌತಮ್ ನವ್ಲಾಕಾ, ಆರ್‌ಟಿಐ ಕಾರ್ಯಕರ್ತ ಅಖಿಲ್ ಗೊಗೋಯ್, ಮಾನವ ಹಕ್ಕು ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ (ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ), ಕಾರ್ಮಿಕ ಚಳವಳಿಯ ವೆರ್ನನ್ ಗೋನ್ಸಾಲ್ವೇಸ್, ಪತ್ರಕರ್ತರಾದ ಮಸ್ರತ್ ಜಹ್ರಾ, ವಿದ್ಯಾರ್ಥಿ ನಾಯಕರಾದ ಮೀರಾ ಹೈದರ್, ಸಫೂರಾ ಜರ್ಗಾರ್, ಜೆಎನ್ ಯು ವಿದ್ಯಾರ್ಥಿ ನಾಯಕರಾಗಿದ್ದ ಉಮರ್ ಖಾಲಿದ್, ಪ್ರಚೋದನಾಕಾರಿ ಭಾಷಣ ಮಾಡಿದ ಶಾರ್ಜಿಲ್, ಬುಡಕಟ್ಟು ಜನರಿಗಾಗಿ ಕೆಲಸ ಮಾಡುತ್ತಿದ್ದ ಸ್ಟಾನ್ ಸ್ವಾಮಿ, ಹತ್ರಾಸ್ ಘಟನೆ ವರದಿಗಾಗಿ ತೆರಳಿದ್ದ ಸಿದ್ದೀಕ್ ಕಪ್ಪನ್, ಕಾಂಗ್ರೆಸ್ ಕಾರ್ಪೊರೇಟರ್ ಇಸ್ರತ್ ಜಹಾನ್… ಹೀಗೆ ಯುಎಪಿಎಗೆ ಶಿಕಾರಿಯಾದ ರಾಜಕೀಯ ಕಾರ್ಯಕರ್ತರ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಮೇಲ್ನೋಟಕ್ಕೆ ಕಾಣುವ ಹಾಗೆ ಇವರು ಯಾರೂ ಭಯೋತ್ಪಾದಕರಲ್ಲ, ಭಯೋತ್ಪಾದಕ ಸಂಘಟನೆಗಳನ್ನೂ ನಡೆಸುತ್ತಿಲ್ಲ. ಬಹುತೇಕರು ಜನರ ಹಕ್ಕುಗಳಿಗಾಗಿ ದಶಕಗಳಿಂದ ಹೋರಾಡುತ್ತಿರುವವರು, ಮಿಕ್ಕವರು ಹೊಸ ತಲೆಮಾರಿನ ಬಿಸಿರಕ್ತದ ಯುವಕ-ಯುವತಿಯರು, ಪತ್ರಕರ್ತರು. ಇಂಥವರ ಮೇಲೆ ಭಯೋತ್ಪಾದಕರ ಮೇಲೆ ಹೂಡುವ ಕಾಯ್ದೆ ಹೂಡಿ ಜೈಲಿನಲ್ಲಿ ಕೊಳೆಯಿಸುವುದು ಎಷ್ಟು ಸರಿ ಎಂದು ನಾವು ಪ್ರಶ್ನಿಸುತ್ತಿದ್ದೇವೆ. ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ರಾಜಕೀಯ ಕಾರ್ಯಕರ್ತರ ಮೇಲೆ ಕ್ರೂರ ಕಾಯ್ದೆಗಳನ್ನು ಹೇರಿ, ಹಿಂಸೆ ನೀಡುತ್ತಿರುವ ಕುರಿತು ನಾವೆಲ್ಲ ಮಾತನಾಡುತ್ತಿದ್ದೆವು. ಆದರೆ ಅದೆಲ್ಲವೂ ಈಗ ಭಾರತದಲ್ಲಿಯೇ ಘಟಿಸುತ್ತಿದೆ.
೮೪ ವರ್ಷ ವಯಸ್ಸಿನ ಸ್ಟಾನ್ ಸ್ವಾಮಿಯವರಿಗೆ ಪಾರ್ಕಿನ್ಸನ್ ಖಾಯಿಲೆ ಇತ್ತು. ಅವರ ಕೈಗಳು ನಡುಗುತ್ತಿದ್ದವು. ಒಂದು ಲೋಟವನ್ನು ಹಿಡಿದುಕೊಳ್ಳಲು ಸಾಧ್ಯವಿರಲಿಲ್ಲ. ಹೀಗಾಗಿ ತಮ್ಮ ಕೈಚೀಲದಲ್ಲಿ ಅವರು ಸ್ಟ್ರಾ ಮತ್ತು ಸಿಪ್ಪರ್ ಇಟ್ಟುಕೊಂಡಿದ್ದರು. ಪೊಲೀಸರು ಫಾದರ್ ಅವರನ್ನು ಬಂಧಿಸಿದಾಗ ಅವರ ಕೈಚೀಲವನ್ನು ಸೀಜ್ ಮಾಡಿದ್ದರು. ಕಳೆದ ವರ್ಷ ನವೆಂಬರ್ ೭ರಂದು ಸ್ವಾಮಿಯವರು ತಮಗೆ ತಮ್ಮ ಕೈಚೀಲದಲ್ಲಿರುವ ಸ್ಟ್ರಾ ಮತ್ತು ಸಿಪ್ಪರ್ ಕೊಡಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದರು. ಈ ಬೇಡಿಕೆಯ ಕುರಿತು ಪ್ರತಿಕ್ರಿಯೆ ನೀಡಲು ಪೊಲೀಸರು ನ್ಯಾಯಾಲಯದ ಬಳಿ ಕಾಲಾವಲಾಶ ಕೇಳಿದರು! ನ್ಯಾಯಮೂರ್ತಿ ಕೊಥಾಲಿಕರ್ ೨೦ ದಿನಗಳ ಕಾಲಾವಕಾಶ ನೀಡಿದರು! ಇಪ್ಪತ್ತು ದಿನಗಳ ನಂತರ ಪೊಲೀಸರು ತಾವು ಸ್ವಾಮಿಯವರ ಕೈಚೀಲ ಸೀಜ್ ಮಾಡೇ ಇಲ್ಲ, ಹೀಗಾಗಿ ಸ್ಟ್ರಾ, ಸಿಪ್ಪರ್ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ ಪರಿಣಾಮವಾಗಿ ಸಿಪ್ಪರ್ ಕೇಳಿದ ಅರ್ಜಿಯನ್ನು ನ್ಯಾಯಮೂರ್ತಿ ಕೊಥಾಲಿಕರ್ ವಜಾಗೊಳಿಸಿದರು!
ಇದಾದನಂತರ ಅನಿವಾರ್ಯವಾಗಿ ಸ್ವಾಮಿ ಪರ ವಕೀಲರಾದ ಶರೀಫ್ ಶೇಕ್, ಕೃತ್ತಿಕಾ ಅಗರ್ ವಾಲ್ ಅವರು ಮತ್ತೆ ನ್ಯಾಯಾಲಯದ ಮುಂದೆ ಇನ್ನೊಂದು ಅರ್ಜಿಹಾಕಿ, ಹೊಸ ಸ್ಟ್ರಾ ಖರೀದಿ ಮಾಡಿ ಒದಗಿಸಲು ಅವಕಾಶ ನೀಡುವಂತೆ ಕೇಳಿದರು. ಇದೇ ನ್ಯಾಯಾಧೀಶರು ಜೈಲಿನ ಅಧಿಕಾರಿಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಲು ಒಂದು ವಾರದ ಕಾಲಾವಕಾಶ ನೀಡಿದರು! ಕೊನೆಗೆ ಜೈಲಿನ ಅಧಿಕಾರಿಗಳು, ವಕೀಲರುಗಳ ಒತ್ತಡದಿಂದಾಗಿ ಸ್ವಾಮಿ ಅವರಿಗೆ ಸ್ಟ್ರಾ ಒದಗಿಸಿದರು. ಕೊನೆಗೂ ನ್ಯಾಯಾಲಯದ ಸಹಾಯ ದೊರೆಯಲೇ ಇಲ್ಲ!
೨೦೨೦ರ ಅಕ್ಟೋಬರ್ ೮ರಂದು ಸ್ಟಾನ್ ಸ್ವಾಮಿಯವರನ್ನು ಬಂಧಿಸಲಾಗಿತ್ತು. ಜುಲೈ ೫, ೨೦೨೧ರಂದು ಅವರು ಕೋವಿಡ್ ನಿಂದಾಗಿ ತೀರಿಕೊಂಡರು. ಬುಡಕಟ್ಟು ಜನರ, ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಹಿರಿಯ ಜೀವವನ್ನು ನಾವು ಕಳೆದುಕೊಂಡೆವು. ಸ್ವಾಮಿಯವರದು ಯಾವ ದೃಷ್ಟಿಯಿಂದ ನೋಡಿದರೂ ಸಹಜ ಸಾವಲ್ಲ, ಸಾಂಸ್ಥಿಕ ಕೊಲೆ.
ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳು ಎಲ್ಲಿಗೆ ಬಂದು ತಲುಪಿವೆ ಎಂಬುದಕ್ಕೆ ಸ್ಟಾನ್ ಸ್ವಾಮಿಯವರ ಸಾವು ಒಂದು ರೂಪಕದಂತೆ ನಮ್ಮೆದುರು ನಿಂತು ನಾವೆಲ್ಲ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ.
ಈ ಉಪನ್ಯಾಸ ನೀಡಲು ಅವಕಾಶ ಕಲ್ಪಿಸಿದ ಸತೀಶ ಜಾರಕಿಹೊಳಿಯವರಿಗೆ, ರವೀಂದ್ರ ನಾಯ್ಕರ್ ರವರಿಗೆ, ಜಯಕುಮಾರ್ ಅವರಿಗೆ, ಡಾ.ಲೀಲಾ ಸಂಪಿಗೆಯವರಿಗೆ, ಪ್ರದೀಪ್ ಮಾಲ್ಗುಡಿಯವರಿಗೆ, ಮಹಾಲಿಂಗಪ್ಪ ಅಲಬಾಳ್ ಅವರಿಗೆ ಮತ್ತು ಮಾನವ ಬಂಧುತ್ವ ವೇದಿಕೆಯ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಎಲ್ಲರಿಗೂ ನಮಸ್ಕಾರಗಳು.
- ಎಸ್.ಸಿ.ದಿನೇಶ್ ಕುಮಾರ್, ಹಿರಿಯ ಪತ್ರಕರ್ತರು