ಪ್ರತಿರೋಧ ಎದುರಿಸದ ಪ್ರಭುತ್ವವಿಲ್ಲ. ಚರಿತ್ರೆಯ ಪುಟಗಳನ್ನು ತೆರೆದು ನೋಡಿದರೆ ಜನಪದರು ಜನಕವಿಗಳು ಪ್ರಭುತ್ವವನ್ನು ಕಟುವಾಗಿ ವಿಮರ್ಶಿಸಿದ್ದಾರೆ. ಅದರ ನೀತಿಗಳನ್ನು ತಮ್ಮದೇ ಭಾಷೆಯಲ್ಲಿ ಪ್ರತಿರೋಧಿಸಿದ್ದಾರೆ. ಅರಸೊತ್ತಿಗೆಯ ಯಾವ ಅರಸೂ ಜನತೆಯ ರಾಜನಾದುದು ಕಡಿಮೆ. ಅದಕ್ಕಾಗೇ ಅನಿಸತ್ತೆ ಸದಾ ಯುದ್ಧಾಸಕ್ತರೂ ದರ್ಪಿಷ್ಟರೂ ಅರಮನೆಯ ಕೂಸುಗಳೂ ಆಗಿದ್ದ, ಬಲಾತ್ಕಾರದ ತೆರಿಗೆ, ಭೂ ಕಬಳಿಕೆ, ದಮನ, ದಂಡನೆಗಳ ಸರದಾರರೂ ಆಗಿದ್ದ ಅವರನ್ನು ಕುರಿತು ಇನ್ನಿಲ್ಲದ ಅಸಮಧಾನವನ್ನು ಹೊರಹಾಕಿದ್ದಾರೆ ವ್ಯಂಗ್ಯ ಗೇಲಿಗಳ ಮೂಲಕ ಪ್ರಭು ಮತ್ತು ಪ್ರಭುತ್ವದ ಮೇಲಿನ ತಮ್ಮ ಆಕ್ರೋಶವನ್ನು ಕಾರಿಕೊಂಡಿದ್ದಾರೆ.
ಕವಿ ಕುಮಾರವ್ಯಾಸ ತನ್ನ ‘ಗದುಗಿನ ಭಾರತ’ದಲ್ಲಿ,
‘ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು?’
ಎಂದಿದ್ದಾನೆ. ರಾಜನೆಂದರೆ ಮಂತ್ರಿಯೆಂದರೆ ಅವರು ಜನರ ಪಾಲಿನ ರಾಕ್ಷಸರೇ ಎರಗಿ ಕೊಲ್ಲುವ ಹುಲಿಗಳೇ ಎಂದು ಅವನ ಅಭಿಮತ. ಪುರಂದರ ದಾಸರೂ ಕೂಡಾ
‘ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ
ಆನೆ ಕುದುರೆ ಒಂಟೆ ಲೊಳಲೊಟ್ಟೆ, ಬಹು
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಘ ಲೊಳಲೊಟ್ಟೆ, ದೊಡ್ಡ
ಕ್ಷೋಣೀಶನೆಂಬುದು ಲೊಳಲೊಟ್ಟೆ
. . . . . . . . . . . .
ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ’
ಎನ್ನುತ್ತಾರೆ. ಪ್ರಭುತ್ವವನ್ನು ಲೊಳಲೊಟ್ಟೆ ಎನ್ನಬೇಕಾದರೆ ಆ ವ್ಯವಸ್ಥೆ ಎಷ್ಟು ತಿರಸ್ಕಾರಕ್ಕೊಳಗಾಗಿತ್ತು ಮತ್ತು ಒಳಗೊಳಗೇ ಕುದಿಯುವ ಜನರ ಆಕ್ರೋಶದ ಹಾಸಿಗೆಯ ಮೇಲೇ ಮಲಗಿತ್ತು ಎಂಬುದನ್ನು ಈ ಮಾತುಗಳು ಪರಿಣಾಮಕಾರಿಯಾಗಿ ನಿರೂಪಿಸುತ್ತವೆ. ಕನಕದಾಸರು ಆಳುವವರನ್ನು ‘ಡೊಂಕುಬಾಲದ ನಾಯಕರೇ’ ಎಂದು ಮೂದಲಿಸುತ್ತಾರೆ. ಈ ಮೂರೂ ಜನ ಕವಿಗಳು ಬದುಕಿದ್ದುದು ಬರೆದದ್ದು ‘ಸುವರ್ಣಯುಗ’ ಎಂದು ಹೊಗಳುಭಟ್ಟರು ಕರೆದಿರುವ ಪ್ರಭಾವಶಾಲಿ ವಿಜಯನಗರ ಸಾಮ್ರಾಜ್ಯ ಉತ್ತುಂಗದಲ್ಲಿದ್ದ ಕಾಲಘಟ್ಟದಲ್ಲಿ ಎಂಬುದನ್ನು ಮರೆಯಬಾರದು.
ಜನಪದರು ‘ಯಾವ್ ರಾಜ ಬಂದ್ರು ರಾಗಿ ಬೀಸೋದು ತಪ್ಪಲ್ಲ’ ಎಂದೇ ತೀರ್ಮಾನಿಸಿಕೊಂಡಿದ್ದರು. ಇವರೆಲ್ಲಾ ಏಕೆ ತಮ್ಮ ಸಮಕಾಲೀನ ಆಳುವ ವ್ಯವಸ್ಥೆಯನ್ನು ಇಷ್ಟು ಕಟುವ್ಯಂಗ್ಯದಿಂದ ಟೀಕಿಸಿದರು? ವಿಮರ್ಶಿಸಿದರು? ಅಧಿಕಾರದ ದಾಹ, ಸಾಮ್ರಾಜ್ಯ ವಿಸ್ತರಣೆಯ ದುರಾಸೆ, ಸುಖಲೋಭದ ಭೋಗ ಜೀವನದ ಮೇರೆ ಮೀರಿದ ಲಾಲಸೆಗಳಿಂದ ಜನಸಾಮಾನ್ಯರ ಬಾಳು ಮೂರಾಬಟ್ಟೆಯಾಗಿದ್ದಿತು. ಈ ಸಾಮ್ರಾಜ್ಯಗಳೆಲ್ಲವೂ ಅಧಿಕಾರಕ್ಕೇರುತ್ತಿದ್ದ ರಾಜರೆಲ್ಲರೂ ಪೋಷಿಸಿದ್ದು ಶ್ರೇಣಿ ವ್ಯವಸ್ಥೆಯನ್ನು. ವರ್ಗ ಜಾತಿ ಧರ್ಮಗಳನ್ನು ತಮ್ಮನ್ನಾಳುವ ಯಾವ ರಾಜ ಗಾದಿ ಏರಿದರೂ ಆತ ಪುರೋಹಿತ ವರ್ಗದ ದಾಸನಾಗಿರುತ್ತಿದ್ದ. ಗ್ರಾಮ ಊರು ಸೀಮೆ ನಾಡು ಕಂಪಣಗಳನ್ನಾಳುವ ಗೌಡ ಪಟೇಲ ದೇಸಾಯಿ ಕರಣಿಕ ದೊಣ್ಣೆ ಡಣ್ಣಾಯಕರೆಲ್ಲ ಅವರೇ ಆಗಿರುತ್ತಿದ್ದರು. ದುಡಿಯುವ ಜನರ ರಕ್ತ ಹೀರುವ ಈ ತಿಗಣೆಸ್ವರೂಪಿಗಳ ಜಾತಿ, ವರ್ಗ, ಕಾರ್ಯ, ನೀತಿಗಳಿಗೇನೂ ಚ್ಯುತಿ ಇರಲಿಲ್ಲ. ರಾಜ ಬದಲಾದರೂ ವ್ಯವಸ್ಥೆ ಬದಲಾಗುತ್ತಿರಲಿಲ್ಲ. ಎಲ್ಲೆಲ್ಲಿಯೂ ದಾಸ್ಯ ಶೋಷಣೆ ದಬ್ಬಾಳಿಕೆ ದಮನ ನೀತಿಗಳು ನಿರಂತರವಾಗಿ ನಡೆದೇ ಇದ್ದವು.
ಆಂಗ್ಲ ಪ್ರಭುತ್ವ ಬಂದಮೇಲೂ ಈ ಸಾಮಾಜಿಕ ಸ್ಥಿತಿಗಳಲ್ಲೇನೂ ವ್ಯತ್ಯಾಸವಾಗಲಿಲ್ಲ. ಆದರೆ ಇದೇ ಆಂಗ್ಲರು ಮುಂದೆ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿದಾಗ ಬದಲಾವಣೆಗಳನ್ನು ಪಾಶ್ಚಾತ್ಯ ವಿಚಾರಧಾರೆಗಳು ನಮ್ಮವರಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯ ಅಸಹ್ಯಗಳನ್ನು ಕಣ್ಣುಕುಕ್ಕುವಂತೆ ತೆರೆದು ತೋರಲು ಅನುವಾದವು. ತಮ್ಮ ಧರ್ಮ ಸಮಾಜ ಇದ್ದ ಸ್ಥಿತಿಯಲ್ಲೇ ಇದ್ದರೆ ಅದು ಉಳಿಯಲಾರದು ಉದ್ಧಾರವಾಗಲಾರದು ಎಂದರಿತರು ಅದರ ಭಾಗವಾಗಿಯೇ ಜ್ಯೋತಿಭಾ ಫುಲೆ, ಸಾವಿತ್ರಿಬಾಯಿ ಫುಲೆ, ರಾಜಾ ರಾಮಮೋಹನರಾಯ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ನಾರಾಯಣಗುರು ಮೊದಲಾದ ಮಹನೀಯರು ಸಮಾಜ ಪರಿವರ್ತನಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಇವರಾರೂ ರಾಜರಾಗಿರಲಿಲ್ಲ ಇವರು ಜ್ಞಾನಿಗಳಾಗಿದ್ದರು ದಾರ್ಶನಿಕರಾಗಿದ್ದರು. ಭಾರತದ ಚರಿತ್ರೆಯಲ್ಲಿ ಸಾಮಾನ್ಯ ಜನತೆ ಸ್ವಲ್ಪವಾದರೂ ಉಸಿರಾಡುವಂತಹ ಅವಕಾಶವಿದ್ದುದು ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಟಿಪ್ಪೂ ಸುಲ್ತಾನನ ಕಾಲದಲ್ಲಿ. ಬ್ರಿಟಿಷ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟ ಐನೂರಕ್ಕೂ ಹೆಚ್ಚು ಅರಸೊತ್ತಿಗೆ ಸಂಸ್ಥಾನಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಜಾತಿ ವ್ಯವಸ್ಥೆಯನ್ನು ಊಳಿಗಮಾನ್ಯ ಪದ್ಧತಿಯನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಪೋಷಿಸಿಕೊಂಡೇ ಬರುತ್ತಿದ್ದವು. ಇದಕ್ಕೆ ಕೊಲ್ಲಾಪುರ ಸಂಸ್ಥಾನವಾಗಲೀ ಮೈಸೂರು ಸಂಸ್ಥಾನವಾಗಲೀ ಬರೋಡೆಯ ಸಂಸ್ಥಾನವಾಗಲೀ ಹೊರತಾಗಿರಲಿಲ್ಲ. ರಾಜ ಎಂದರೆ ಅವನು ವರ್ಣಾಶ್ರಮ ವ್ಯವಸ್ಥೆಯ ಕಟ್ಟುಕಟ್ಟಳೆಗಳನ್ನು ಪೋಷಿಸುವ ರಕ್ಷಿಸುವ ಮೀರಿದವರನ್ನು ಮುರಿಯುವ ಸಾಧನವೇ ಆಗಿದ್ದ. ಅರಮನೆ ಅರಸ ನ್ಯಾಯ ಎಂಬುವು ಸಾಮಾನ್ಯ ಜನಗಳಿಗೆ ನಿಲುಕದ ನಕ್ಷತ್ರಗಳಾಗಿದ್ದವು. ಅವರೆಲ್ಲರೂ ಪರಂಪರಾನುಗತವಾಗಿ ಬಂದ ಶಾಸ್ತ್ರ ಸಂಹಿತೆಗಳ ಆಧಾರದಲ್ಲಿ ಆಡಳಿತ ಮಾಡುತ್ತಿದ್ದರೇ ಹೊರತು ಜನತೆಯ ಸಾಮಾಜಿಕ, ಆರ್ಥಿಕ, ಜೀವನದ ಸ್ಥಿತಿಗತಿಗಳಲ್ಲಿ ಯಾವ ಬದಲಾವಣೆಗಳನ್ನು ತರಲೂ ತೆರೆದುಕೊಂಡವರಾಗಿರಲಿಲ್ಲ. ನೂರಾರು ಸಂಸ್ಥಾನಿಕರು ಬ್ರಿಟಿಷರಿಂದ ಪಿಂಚಣಿ ಪಡೆದು ಹುತ್ತದ ಹುಳಗಳಾಗಿ ಬದುಕಿ ಸತ್ತರು. ಇಂತಹಾ ವ್ಯವಸ್ಥೆಯೊಳಗೆ ಛತ್ರಪತಿ ಶಾಹೂ, ನಾಲ್ವಡಿ ಕೃಷ್ಣರಾಜ, ಸಯ್ಯಾಜಿರಾವ್ ಗಾಯಕವಾಡರಂತವರು ಮೂಡಿ ಬಂದದ್ದು ದಮನಿತ ವರ್ಗಗಳ ಪಾಲಿಗೆ ಮೊಟ್ಟ ಮೊದಲ ಬಾರಿಗೆ ಸೂರ್ಯೋದಯವಾದಂತಾಯಿತು.
ಜಾತಿಯೇ ಆಧಾರಸ್ಥಂಭವಾಗಿದ್ದ ಭಾರತದ ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ಈ ತ್ರಿಮೂರ್ತಿಗಳದ್ದು ಕ್ರಾಂತಿಕಾರಿ ನಡೆಯಾಗಿತ್ತು. ಸಮಕಾಲೀನ ರಾಜಕುವರರಾಗಿದ್ದ ಶಾಹೂ ಮತ್ತು ನಾಲ್ವಡಿ ಕೃಷ್ಣರಾಜರಿಗೆ ಗುರುವಾಗಿ ದೊರೆತವರು ಸರ್ ಸ್ಟುವರ್ಟ್ ಫ್ರೇಜರ್ ಎಂಬ ಮಹಾತ್ಮ. ಅವರ ಶಿಕ್ಷಣ ಮಾರ್ಗದರ್ಶನ ಇರದೇ ಹೋಗಿದ್ದರೆ ಶಾಹೂ ಅವರಾಗಲೀ ನಾಲ್ವಡಿಯವರಾಗಲೀ ಸಯ್ಯಾಜಿರಾವ್ ಅವರಾಗಲಿ ಪರಂಪರೆಯ ರಾಜರ ಮುಂದುವರೆದ ಭಾಗವಾಗುತ್ತಿದ್ದರೇ ಹೊರತು ಸಾಮಾಜಿಕ ಕ್ರಾಂತಿಯ ಹರಿಕಾರರಾಗುತ್ತಿರಲಿಲ್ಲ ಎನಿಸುತ್ತದೆ.
ಮಹಾರಾಷ್ಟ್ರದ ಇತಿಹಾಸವನ್ನು ಅವಲೋಕಿಸುತ್ತಾ ಬಂದರೆ ಅಲ್ಲಿ ಬ್ರಾಹ್ಮಣಶಾಹಿಯ ಹೊರತಾಗಿ ಉಳಿದಾವ ಶೂದ್ರ ವರ್ಗವೂ ಉಸಿರು ಬಿಡುವಂತಿರಲಿಲ್ಲ. ಪ್ರಭುತ್ವದ ಸುತ್ತ ಇವರೇ ಸುತ್ತವರೆದಿದ್ದರೂ ತಕ್ಕಮಟ್ಟಿಗೆ ಜನತೆಯ ರಾಜನಾಗಿ ಶಿವಾಜಿ ತಂದಿದ್ದ ಸುಧಾರಣೆಗಳು ಇವರ ನಿದ್ದೆಗೆಡಿಸಿದ್ದವು. ಶಿವಾಜಿಯ ವಂಶಸ್ಥರನ್ನು ಬದಿಗೊತ್ತಿ ಬ್ರಾಹ್ಮಣ ಪೇಶ್ವೆಗಳು ಸರ್ವಾಧಿಕಾರ ಸಾಧಿಸಿದ ಮೇಲಂತೂ ಇಡೀ ಮರಾಠಾ ಸಾಮ್ರಾಜ್ಯ ಅಸ್ಪೃಶ್ಯತೆಯ ಕತ್ತಲಲ್ಲಿ ಮುಳುಗಿಹೋಯಿತು. ಈ ಅನ್ಯಾಯಗಳ ಬಗ್ಗೆ ದನಿ ಎತ್ತುವವರು ಯಾರೇ ಇರಲಿ ಅವರ ಮೇಲೆ ಕೊಲೆ ಪಿತೂರಿಗಳು ನಡೆದೇ ಇದ್ದವು. ತುಕಾರಾಮನಂಥಾ ಮಾನವೀಯನ ಅಂತ್ಯ ಹೇಗಾಯಿತು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆತ ಬದುಕಿರುವವರೆಗೂ ಕಾಡಿದ ಪುರೋಹಿತರು ಜ್ಯೋತಿಭಾ ಮತ್ತು ಸಾವಿತ್ರಿಬಾಯಿ ಫುಲೆಯವರನ್ನೇನೂ ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ. ಅಂಬೇಡ್ಕರರ ಹತ್ಯೆಯ ಯತ್ನಗಳು ನಡೆಯದೇ ಇರಲಿಲ್ಲ. ಶಾಹೂ ಅವರ ಕೊಲೆಗೂ ನಡೆದ ಸಂಚುಗಳು ಒಂದೆರೆಡಲ್ಲ. ಇದು ಕೇವಲ ಒಬ್ಬ ವ್ಯಕ್ತಿಯನ್ನು ಕೊಲ್ಲುವ ಪ್ರಯತ್ನವಾಗಿರಲಿಲ್ಲ. ಇಡೀ ಶೋಷಿತ ಸಮುದಾಯಗಳು ಮೇಲೆ ಏಳಲೇಬಾರದೆಂಬುದೇ ಇದರ ಹಿಂದಿರುವ ಉದ್ದೇಶವಾಗಿತ್ತು. ಸದಾ ಹಗೆಗಳು ಸುತ್ತುವರೆದಿದ್ದರೂ ಶಾಹೂ ಎದೆಗುಂದಲಿಲ್ಲ. ಶಾಹು ಕೊಲ್ಲಾಪುರ ಸಂಸ್ಥಾನದ ರಾಜ ಮಾತ್ರವಾಗಿರದೇ ಇಡೀ ಇಂಡಿಯಾದ ರಾಜನಾಗಿರುತ್ತಿದ್ದರೆ ಭಾರತೀಯ ಸಮಾಜದ ದಿಕ್ಕೇ ಬದಲಾಗಿರುತ್ತಿತ್ತು. ಶಾಹೂ 1917ರಲ್ಲಿ ತಮ್ಮ ಸಂಸ್ಥಾನದ ಶೂದ್ರರಿಗೆ 50% ಮೀಸಲಾತಿಯನ್ನು ಘೋಷಿಸಿದಾಗ ಬುದ್ಧಿವಂತ ವರ್ಗವೊಂದೇ ಎಲ್ಲಾ ಸೌಲಭ್ಯಗಳನ್ನು ಉಣ್ಣಲು ದೇವಲೋಕದಿಂದಲೇ ಆದೇಶ ಪಡೆದವರು ಎಂದು ಭಾವಿಸಿದ್ದ ಪುರೋಹಿತರು ಉರಿದುಹೋದರು. ಪೇಶ್ವಾಯಿಗಳ ಉತ್ತರಾಧಿಕಾರಿಗಳ ಗತವೈಭವಕ್ಕೆ ಶಾಹು ಈ ಮೂಲಕ ಬಲವಾದ ಏಟು ಕೊಟ್ಟಿದ್ದರು. ತಿಲಕರಿಗೆ ಇದು ಹಿಡಿಸಲಿಲ್ಲ ಹಿಂದೂಧರ್ಮದ ಪುನರುತ್ಥಾನವಾಗಬೇಕು ಎನ್ನುವವರು ಸ್ಥರವ್ಯವಸ್ಥೆಯಲ್ಲಿ ಬದಲಾವಣೆಗಳಾಗುವುದನ್ನು ಸಹಿಸಲು ತಯಾರಿರಲಿಲ್ಲ. ಬಹುಶಃ ಇದೇ ಬಾಲಗಂಗಾಧರ ತಿಲಕ್ ಮುನ್ನೆಲೆಗೆ ತಂದ ವಿನಾಯಕ ಉತ್ಸವ ಶಾಹೂ ಮಹಾರಾಜರ ಸುಧಾರಣೆಗಳನ್ನು ಹೊಸಕಿಹಾಕುವ ಹಿಂದುತ್ವದ ಹಾರ್ಡ್ಕೋರ್ ಅಸ್ತ್ರವೂ ಆಗಿರಲಿಕ್ಕೆ ಸಾಧ್ಯತೆ ಇದೆ.
ಶಾಹು ಸಂಪ್ರದಾಯವಾದಿಗಳು ಸುತ್ತುವರೆದಿದ್ದ ಅಧಿಕಾರದ ವರ್ತುಲದಲ್ಲಿ ಸುಧಾರಕನಾಗಿ ನಡೆಸಿದ ಸಾಮಾಜಿಕ ಕ್ರಾಂತಿ ಅತ್ಯಂತ ಮಾನವೀಯ ಮಾತ್ರವಲ್ಲ ವೈಜ್ಞಾನಿಕವಾದುದೂ ಆಗಿತ್ತು. ಅಸ್ಪೃಶ್ಯರಿಗಾಗಿ 18 ಪ್ರತ್ಯೇಕ ಶಾಲೆಗಳನ್ನು, ಮತ್ತೆ ಶೂದ್ರರಿಗಾಗಿ 22 ಅಸ್ಪೃಶ್ಯರಿಗಾಗಿ 27 ಶಾಲೆಗಳನ್ನು ತೆರೆದು ಶತಮಾನಗಳಿಂದ ಶಿಕ್ಷಣವಂಚಿತರಾಗಿದ್ದ ನಿಮ್ನ ವರ್ಗಗಳಿಗೆ ಬೆಳಕಾದರು. ಶಂಬೂಕನ ತಲೆಯನ್ನು ಏಕಲವ್ಯನ ಬೆರಳನ್ನು ಕಿತ್ತುಕೊಂಡ ವರ್ಗ ಈಗ ಶಾಹೂ ಅವರ ಜೀವ ಕಿತ್ತುಕೊಳ್ಳಲೂ ಪ್ರಯತ್ನಿಸಿತು. ಅವರು ಪ್ರಯಾಣಿಸುತ್ತಿದ್ದ ರೈಲಿಗೆ ಬಾಂಬ್ ಇಟ್ಟು ಕೊಲ್ಲಲು ಯತ್ನಿಸಿದ್ದು ವಿಫಲವಾಯಿತು. ಇಂತಹ ಎಷ್ಟೋ ಯತ್ನಗಳು ನಡೆದವು. ಸಾವಿಗಂಜದೆ ಶಾಹೂ ತನ್ನ ಶೋಷಿತ ಜನರನ್ನು ಬದುಕಿಸಲು ಬದುಕಿದರು. ಜ್ಯೋತಿಭಾ ಫುಲೆ ಅವರು ಸ್ಥಾಪಿಸಿದ್ದ ‘ಸತ್ಯಶೋಧಕ ಸಮಾಜ’ವನ್ನು ಮುನ್ನಡೆಸಲು ಆಸ್ಥೆ ತೋರಿ ‘ಶಾಹು ಸತ್ಯಶೋಧಕ ಸಮಾಜ’ವಾಗಿ ಪುನರ್ ರೂಪಿಸಿದರು. ‘ಮಹರ್ ವತನ್ ಪದ್ಧತಿ’ಯ ರದ್ಧತಿ ಪರಂಪರಾನುಗತವಾಗಿ ಊಳಿಗದ ಆಳುಗಳಾಗಿ ಅಸ್ತಿತ್ವವೇ ಇಲ್ಲದಂತೆ ಬದುಕುತ್ತಿದ್ದ ಅಸ್ಪೃಶ್ಯರನ್ನು ಬಿಡುಗಡೆಗೊಳಿಸಲು ಕಾರಣವಾಯಿತು. ಆ ಮೂಲಕ ಜೀತಪದ್ಧತಿ ನಿಷೇಧವಾಯ್ತು. ತಾನೊಬ್ಬನೇ ಹೋರಾಡಿದರೆ ಸಾಲದು ಜನತೆಯು ಸಮಾಜ ಪರಿವರ್ತನೆಯ ಭಾಗವಾಗಬೇಕು ಎಂಬ ಸಲುವಾಗಿಯೇ ಪತ್ರಿಕೆಗಳನ್ನು ಓದಲಿಕ್ಕಾಗಿ ಕರೆಕೊಟ್ಟರು. ಜನರಲ್ಲಿ ಓದನ್ನು ಪ್ರೋತ್ಸಾಹಿಸಲು ಪತ್ರಿಕೆ ಓದಲಿಕ್ಕಾಗೇ ಪ್ರೋತ್ಸಾಹಧನವನ್ನು ನೀಡಿದರು ಶಾಹೂ. ಇದು ಎಲ್ಲಿಯೂ ಯಾರೂ ಯೋಚಿಸಿರದ ಸಂಗತಿ, ಯಾರೂ ಮಾಡಿರದ ಕೆಲಸ. ತನ್ನ ಅರಮನೆಯ ಮೂಲಕವೇ ಅಸ್ಪೃಶ್ಯತೆಯ ನಾಶ ಕಾರ್ಯಕ್ಕೆ ಮೊದಲಿಟ್ಟ ಮಹಾರಾಜರು ಅರಮನೆಯ ಗೇಟಿನಲ್ಲಿ ಅಸ್ಪೃಶ್ಯ ಜಾತಿಯವನು ಕ್ಯಾಂಟೀನು ನಡೆಸಲು ಯೋಜಿಸಿ ಆ ಕ್ಯಾಂಟೀನಿನಲ್ಲಿ ಚಹಾ ತಿಂಡಿ ತಿಂದೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶಿಸಿದ್ದು ಚರಿತ್ರೆಯ ಮಹತ್ವಪೂರ್ಣ ಘಟನೆ. ಅಂತರ್ಜಾತಿ ವಿವಾಹ ಕಾಯ್ದೆಯನ್ನು ಜಾರಿಗೊಳಿಸಿ ಜಾತಿ ನಾಶಕ್ಕೆ ಮತ್ತೊಂದು ಕ್ರಾಂತಿಕಾರಿ ಮುನ್ನುಡಿ ಬರೆದರು. ವಿಧವಾ ವಿವಾಹ ಕಾಯ್ದೆ, ಬ್ಯಾಂಕ್ ಆಫ್ ಮಹಾರಾಷ್ಟ್ರಾ ಸ್ಥಾಪನೆ, ನೀರಾವರಿ, ಕೃಷಿ ಅಭಿವೃದ್ಧಿ, ಉಳುವವರಿಗೆ ಉಚಿತ ಭೂಮಿ, ಸಹಕಾರಿ ಸಾಲಸೌಲಭ್ಯಗಳನ್ನು ಕೊಡಮಾಡುವ ಮೂಲಕ ವಿಕಲಾವಸ್ಥೆಯಲ್ಲಿದ್ದ ಸಮಾಜಕ್ಕೆ ನವ ಚೈತನ್ಯ ತುಂಬಿದರು. ಬ್ರಾಹ್ಮಣೇತರ ಚಳುವಳಿಯ ಮುಖ್ಯವಾಹಿನಿ ಆಗಿದ್ದ ಜಸ್ಟೀಸ್ ಪಾರ್ಟಿಯ ಮುಖಂಡರ ಜೊತೆ ಪತ್ರವ್ಯವಹಾರಗಳನ್ನು ನಡೆಸಿ ತಮ್ಮ ಚಳುವಳಿಯು ವಿಶಾಲ ವ್ಯಾಪಿಯಾಗಬೇಕೆಂದು ತುಡಿದರು. ದೇಶದ ಸುಮಾರು ಐದುನೂರಕ್ಕೂ ಹೆಚ್ಚು ಸಣ್ಣ ದೊಡ್ಡ ಸಂಸ್ಥಾನಗಳಲ್ಲಿ ಕೇವಲ ನೂರು ಸಂಸ್ಥಾನಗಳಲ್ಲಿ ಇಂತಹ ಸುಧಾರಕ ರಾಜರು ಬಂದಿರುತ್ತಿದ್ದರೆ ಇಂದು ಭಾರತದ ದಿಕ್ಕು ಬದಲಾಗಿರುತ್ತಿತ್ತು. ಶಾಹು ಅವರಿಗೆ ತನ್ನ ಕಷ್ಟಪಡುತ್ತಿರುವ ಜನರ ಪರವಾದ ವಿಮೋಚನೆಯ ಹೋರಾಟ ದೇಶವ್ಯಾಪಿಯಾಗಿ ಹಬ್ಬಬೇಕೆಂಬ ಮಹದಾಸೆ ಇತ್ತು. ಕೊಲ್ಲಾಪುರ ಸಂಸ್ಥಾನದ ರಾಜನಾದುದರಿಂದ ಅವರು ಅಷ್ಟರಲ್ಲೇ ಆ ಮಹಾನ್ ಕಾರ್ಯ ಮಾಡುತ್ತಾ ದೇಶದ ಸಮಸ್ತ ಶೋಷಿತರಿಗೂ ಒಬ್ಬ ಮಹಾನಾಯಕನನ್ನು ಪರಿಚಯಿಸಿದರು. ಆ ಕಾಲಕ್ಕೆ ದೇಶವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ ದಮನಿತರ ವಿಮೋಚನೆಗಾಗಿ ಕಿಡಿಯಾಗಿ ಸಿಡಿಯುತ್ತಿದ್ದ ಬಾಬಾ ಸಾಹೇಬ ಅಂಬೇಡ್ಕರರನ್ನು ಪರಿಚಯಿಸಿದರು. ಅಂಬೇಡ್ಕರರ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿದರು. ಆ ಮೂಲಕ ಕ್ರಾಂತಿಕಾರಿ ಹೋರಾಟಕ್ಕೆ ನಾಂದಿಹಾಡಿದವರೇ ಶಾಹೂ. ಶಾಹು ಅವರಿಗೂ ಅಂಬೇಡ್ಕರರಿಗೂ ಮಹತ್ವಪೂರ್ಣ ಪತ್ರ ವ್ಯವಹಾರಗಳು ನಡೆದವು. ಈ ದೇಶಕ್ಕೆ ಈ ಮಹಾಜ್ಞಾನಿಯ ಅವಶ್ಯಕತೆ ಇದೆ ಎಂದೇ ಭಾವಿಸಿದ್ದ ಶಾಹೂ ಅಂಬೇಡ್ಕರರ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡಿದರು, ರಾಜಬೆಂಬಲ ಕೊಟ್ಟರು. ತತ್ಪರಿಣಾಮವೇ ಅಂಬೇಡ್ಕರ್ ದಮನಿತರ ದೊಡ್ಡ ದನಿಯಾಗಿ ರೂಪುಗೊಳ್ಳುವಂತಾಯಿತು. ಭಾರತದ ಇಂದಿನ ಸಂವಿಧಾನ ಅಂಬೇಡ್ಕರ್ ಕೊಟ್ಟರೂ ಆ ಸಂವಿಧಾನದ ಶಿಲ್ಪಿಯನ್ನು ಶಾಹೂ ಕೊಟ್ಟರು.
ದೇಶ ಆಳೋ ದೊರೆಗಳೆಲ್ಲಾ ಶಾಹುವಂತಿರಲಿಲ್ಲ. ಕೇವಲ ಮೈಸೂರು ಕೊಲ್ಲಾಪುರ ಬರೋಡಾ ಸಂಸ್ಥಾನದ ಸಮಕಾಲೀನ ಅರಸರು ಈ ಕ್ರಾಂತಿಯ ದೀಪವಾದರು. ಮೈಸೂರು ಭಾಗದಲ್ಲಿ ನಾಲ್ವಡಿಯವರು ‘ನಾಲ್ವಡಿ ಭೂಪ ಮನೆಮನೆ ದೀಪ’ವಾದರೆ ಕೊಲ್ಲಾಪುರದಲ್ಲಿ ‘ಶಾಹೂ ಭೂಪ ಮನೆ ಮನೆ ದೀಪ’ವಾದರು. ಈ ದೀಪಗಳ ಹಿಂದಿನ ಧೀಶಕ್ತಿ ಸರ್ ಸ್ಟುವರ್ಟ್ ಫ್ರೇಜರ್ ಆಗಿದ್ದರು. ಶಾಹೂ ಎಂದರೆ ಮಹಾರಾಜ ಮಾತ್ರವಲ್ಲ ‘ಮಹಾ ಮಾನವ’ ಶಾಹೂ ಎಂದರೆ, ‘ತನ್ನ ಪ್ರಜೆಗಳೆಂಬ ಮಕ್ಕಳೆಲ್ಲರಿಗೂ ಸಮಾನತೆಯ ತುತ್ತು ನೀಡಿದ ತಾಯಿ ಹಕ್ಕಿ.’
– ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು