ಹದಿನೆಂಟನೇ ಶತಮಾನದ ಅಂತ್ಯ ಭಾಗದಲ್ಲಿ ಭಾರತದ ಭೌಗೋಳಿಕ ವ್ಯಾಪ್ತಿಯಲ್ಲಿ ಬ್ರಿಟಿಷ್ ವಸಾಹತುಶಾಹಿ ತನ್ನ ಅಧಿಕಾರ ಹಸ್ತವನ್ನು ಎಲ್ಲೆಡೆ ಚಾಚಿಕೊಂಡಿತ್ತು. ಸುಮಾರು ಐದು ನೂರಕ್ಕೂ ಹೆಚ್ಚು ಭಾರತದ ಸ್ವತಂತ್ರ ಸಂಸ್ಥಾನಗಳು ಬ್ರಿಟಿಷ್ ಆಕ್ರಮಣಕ್ಕೆ ಹೆದರಿ ನಿದ್ದೆಗೆಟ್ಟಿದ್ದವು. ಅದಾಗಲೇ ಬಹುಪಾಲು ಸಂಸ್ಥಾನಗಳು ಅವರ ಆಳ್ವಿಕೆಯನ್ನು ಒಪ್ಪಿಕೊಂಡು ಸಾಮಂತಕ್ಕೆ ಒಳಪಟ್ಟಿದ್ದವು. ಎಲ್ಲ ಸಂಸ್ಥಾನಗಳಲ್ಲೂ ತಮ್ಮ ಮುಂದಿನ ಅಧಿಕಾರ ಭವಿಷ್ಯದ ಕುರಿತು ಚಿಂತನ- ಮಂಥನಗಳು ನಡೆದಿದ್ದರೆ, ಮೂರು ಸಂಸ್ಥಾನಗಳಲ್ಲಿ ಮಾತ್ರ ಸದ್ದಿಲ್ಲದ ಮೌನ ಕ್ರಾಂತಿಯೊಂದು ಆರಂಭವಾಗಿತ್ತು. ಆ ಮೌನ ಕ್ರಾಂತಿಯ ಸದ್ದಿಲ್ಲದ ಸದ್ದು ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಇಡೀ ದೇಶವೇ ಆ ಕಡೆಗೆ ತಿರುಗಿ ನೋಡ ಹತ್ತಿತು.
ಹೌದು ಎಲ್ಲ ರಾಜರು, ಸಂಸ್ಥಾನಿಕರು ತಮ್ಮ ಅಧಿಕಾರ, ಅಂತಸ್ತಿನ ಭವಿಷ್ಯದ ಕುರಿತು ರಾಜ ದರ್ಬಾರಿನಲ್ಲಿ ಗಾಢವಾದ ಚಿಂತೆಯಲ್ಲಿರುವಾಗ ಮೈಸೂರು ಸಂಸ್ಥಾನ, ಕೊಲ್ಹಾಪುರ ಸಂಸ್ಥಾನ, ಮತ್ತು ಬರೋಡಾ ಸಂಸ್ಥಾನದಲ್ಲಿ ಸಾಮಾಜಿಕ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಶೋಷಿತರ ಬಾಳಿನಲ್ಲಿ ಬೆಳಕು ಹರಿಸುವ ಯೋಜನೆಗಳನ್ನು ರೂಪಿಸಿ ಪಟ್ಟಭದ್ರರ ಎಂಥ ಪ್ರತಿರೋಧವನ್ನು ಲೆಕ್ಕಿಸದೇ ಜಾರಿಗೆ ತರುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಇದು ಭಾರತದ ಭವಿಷ್ಯದ ದಿಕ್ಕನ್ನು ಬದಲಿಸುವ ಪ್ರಮುಖ ದಿಕ್ಸೂಚಿಯಾಯಿತು. ಅದೇ ಕಾರಣಕ್ಕೆ ಇಂದು ನಾಲ್ವಡಿ ಕೃಷ್ಣರಾಜ ಒಡೆಯರ ಮತ್ತು ಶಾಹು ಮಹಾರಾಜರು ಶೋಷಿತರ ಮನೆಮನೆಯ ದೀಪವಾಗಿದ್ದಾರೆ.
ಇಂಥ ಬೆಳಕಿನ ದೀಪಗಳಾಗಿರುವವರಲ್ಲಿ ಒಬ್ಬರಾಗಿರುವ ಛತ್ರಪತಿ ಶಾಹು ಮಹಾರಾಜರು ಹುಟ್ಟಿ ಇದೇ ಜೂನ್ 26ಕ್ಕೆ 147 ವರ್ಷ ತುಂಬುತ್ತವೆ. ಅವರನ್ನು ನೆನೆಯುವ ಮೂಲಕ ಅವರ ಆದರ್ಶ ಮಾರ್ಗಗಳನ್ನು, ಅವರ ದಿಟ್ಟ ನಡೆಗಳನ್ನು ರೂಢಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ನಮ್ಮೆಲ್ಲರಿಗೂ ಗೊತ್ತಿರುವಂತೆ ಶಾಹು ಮಹಾರಾಜರು ಅಂಬೇಡ್ಕರ್ ಅವರಿಗೆ ಶಿಕ್ಷಣಕ್ಕಾಗಿ, ಮೂಕನಾಯಕ ಪತ್ರಿಕೆಗಾಗಿ ಹಾಗೂ ಅವರ ಹೋರಾಟಗಳಿಗಾಗಿ ಸಾಕಷ್ಟು ಸಹಾಯ ಮಾಡಿದ್ದಲ್ಲದೇ ಸ್ವತಃ ಅವರೇ ಚಳುವಳಿಯ ಭಾಗವಾಗಿದ್ದರು. ಶೂದ್ರರು, ದಲಿತರ ಏಳ್ಗೆಗಾಗಿ ಮೇಲ್ವರ್ಗದವರ ವಿರೋಧವನ್ನು ಲೆಕ್ಕಿಸದೇ ಸಾಕಷ್ಟು ಶ್ರಮಿಸುತ್ತಿದ್ದರು. ಶಾಹು ಸಹಾಯವಿಲ್ಲದಿದ್ದರೇ ಅಂಬೇಡ್ಕರ್ ಎಂಬ ಆಗಸದೆತ್ತರದ ಆಲ ಹೇಗಿರುತ್ತಿತ್ತು ಎಂದು ಕಲ್ಪಿಸಿಕೊಳ್ಳುವುದು ಕಷ್ಟ. ಅಂಥ ಅಂತಃಕರಣದ ಶಾಹು ಮಹಾರಾಜರ ನಿಜವಾದ ಹೆಸರು ಯಶವಂತರಾವ್ ಘಾಟ್ಗೆ. ಅವರ ತಂದೆ ಜಯಸಿಂಗ್ ರಾವ್ ಕೊಲ್ಹಾಪುರ ಸಂಸ್ಥಾನದ ಕಾಗಲ್ ಪ್ರದೇಶದ ಮುಖ್ಯಸ್ಥರಾಗಿದ್ದರು ಮತ್ತು ಶಾಹು ವಂಶದ ರಕ್ತಸಂಬಂಧಿಕರಾಗಿದ್ದರು. ತಾಯಿ ರಾಧಾಬಾಯಿ ಕರ್ನಾಟಕದ ಬಾಗಲಕೋಟ ಜಿಲ್ಲೆಯ ಮುಧೋಳದ ಅತ್ಯಂತ ಪ್ರತಿಷ್ಠಿತ ಘೋರ್ಪಡೆ ರಾಜಮನೆತನದವರು.
ಇವರಿಗೆ 1874 ಜೂನ್ 26 ರಂದು ಯಶವಂತರಾವ್ ಘಾಟ್ಗೆ ಜನಿಸುತ್ತಾರೆ. ದುರಂತವೆಂದರೆ ಇವರು ಮೂರು ವರ್ಷದವರಿರುವಾಗಲೇ ಇವರ ತಾಯಿ ರಾಧಾಬಾಯಿ ತೀರಿಹೋಗುತ್ತಾರೆ. ಮಗು ಯಶವಂತರಾವ್ ತಾಯಿ ಪ್ರೀತಿಯಿಂದ ವಂಚಿತರಾಗಿ ಬೆಳೆಯುತ್ತಾರೆ. ಹತ್ತು ವರ್ಷಗಳಾಗುವವರೆಗೂ ತಂದೆಯ ಆರೈಕೆಯಲ್ಲೇ ಬೆಳೆದು ಆರಂಭಿಕ ಶಿಕ್ಷಣ ಪೂರೈಸುತ್ತಾರೆ.
ಕೊಲ್ಹಾಪುರದ ಆಗಿನ ರಾಜರಾಗಿದ್ದ ಶಿವಾಜಿ –IV ಅವರು ಅಚಾನಕ್ಕಾಗಿ ಅಕಾಲಿಕ ಮರಣ ಹೊಂದುತ್ತಾರೆ. ಆಗ ಅವರ ಪತ್ನಿ ಮಹಾರಾಣಿ ಆನಂದಿಬಾಯಿಯವರಿಗೆ ಸಂಸ್ಥಾನದ ಅಧಿಕಾರ ಉಳಿಸಿಕೊಂಡು ಮುಂದುವರೆಸಿಕೊಂಡು ಹೋಗಲು ಆಗಿನ ಬ್ರಿಟಿಷ್ ಕಾನೂನಿನನ್ವಯ ಅನಿವಾರ್ಯವಾಗಿ ರಕ್ತ ಸಂಬಂಧಿಕರಲ್ಲಿ ಯಾರನ್ನಾದರೂ ದತ್ತು ಪಡೆಯುವ ಅನಿವಾರ್ಯತೆ ಎದುರಾಗುತ್ತದೆ. ಆಗ ಅವರು ಆಯ್ಕೆ ಮಾಡಿಕೊಳ್ಳುವುದು ಸಂಬಂಧಿಯಾದ, ತಾಯಿಯನ್ನು ಕಳೆದುಕೊಂಡು ಬೆಳೆಯುತ್ತಿದ್ದ ಯಶವಂತ ರಾವ್ ಅವರನ್ನು. ದತ್ತು ಪ್ರಕ್ರಿಯೆಗಳೆಲ್ಲ ಮುಗಿದ ನಂತರ ಮಹಾರಾಣಿಯವರ ಉಸ್ತುವಾರಿಯಲ್ಲಿ ಅವರ ಶಿಕ್ಷಣ ಮುಂದುವರೆಯುತ್ತದೆ.
ರಾಜಕೋಟ್ ನ ರಾಜಕುಮಾರ ಕಾಲೇಜಿನಲ್ಲಿ ಪದವಿ ಪಡೆದ ಇವರು ನಂತರ ಆಡಳಿತಾತ್ಮಕ ತರಬೇತಿ ಹಾಗೂ ಅಧ್ಯಯನಕ್ಕೆ ಕರ್ನಾಟಕದ ಧಾರವಾಡಕ್ಕೆ ಬರುತ್ತಾರೆ. ಅಲ್ಲಿ ಕಿಟೆಲ್ ಕಾಲೇಜಿನಲ್ಲಿ ಅವರ ಆಡಳಿತ ಹಾಗೂ ಶೈಕ್ಷಣಿಕ ಅಧ್ಯಯನ ಮುಂದುವರೆಯುತ್ತದೆ. ಅಲ್ಲಿಯವರೆಗೂ ಕೇವಲ ರಾಜಮನೆತನ, ಅರಮನೆಯ ಸಂಬಂಧಿಕರ ಕುಡಿಯಾಗಿದ್ದ, ನಂತರ ದತ್ತು ಆಗಿ ರಾಜನಾಗುವ ತಯಾರಿಯಲ್ಲಿದ್ದ ಯಶವಂತರಾವ್ ಧಾರವಾಡಕ್ಕೆ ಬಂದ ನಂತರ ಸಾಮಾಜಿಕ ಚಿಂತಕರಾಗಿ ಬದಲಾಗುತ್ತ ಬದಲಾವಣೆಯ ಕನಸು ಕಾಣತೊಡಗಿದರು.
ಅವರ ಈ ಬದಲಾವಣೆಗೆ ಬಹು ಮುಖ್ಯ ಕಾರಣ ಅವರ ಗುರು ಮತ್ತು ಆಡಳಿತ ತರಬೇತುದಾರರಾದ ಭಾರತೀಯ ನಾಗರಿಕ ಸೇವೆಯ ಅಧಿಕಾರಿಯಾಗಿದ್ದ ಸರ್ ಸ್ಟುವರ್ಟ್ ಫ್ರೇಸರ್.
ಭಾರತದ ಜಾತಿ ತಾರತಮ್ಯ, ಜನಾಂಗೀಯ ಭಿನ್ನತೆಗಳು, ಅಧಿಕಾರದ ಅಸಮಾನತೆ, ಇಲ್ಲಿನ ಸಾಂಸ್ಕೃತಿಕ ಕವಲುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದ ಫ್ರೇಸರ್ ಅವರು ಶಾಹು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಇಬ್ಬರಲ್ಲೂ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಿ ಸಮಾನತೆಯ ಕನಸಿನ ಬೀಜಗಳನ್ನು ಬಿತ್ತಿದರು. ನಾಲ್ವಡಿಯವರೂ ಸಹ ಅಪ್ರಾಪ್ತ ವಯಸ್ಸಿನಲ್ಲೇ ಪಟ್ಟಕ್ಕೇರುವ ಅನಿವಾರ್ಯತೆ ಎದುರಾಗಿ ಅವರಿಗೂ ಫ್ರೇಸರ್ ಅವರಿಗೂ ತರಬೇತುದಾರರು. ಹೀಗೆ ತರಬೇತಿ ಅನುಭವ, ಬದಲಾವಣೆಯ ಆಶಯಗಳನ್ನು ಹೊತ್ತ ಶಾಹು ಅವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಅಂದರೆ 1894ರಲ್ಲಿ ರಾಜ್ಯಭಾರ ಶುರು ಮಾಡುತ್ತಾರೆ. ಮುಂದೆ ಫ್ರೇಸರ್ ಅವರು ನಿವೃತ್ತರಾಗಿ ತಮ್ಮ ದೇಶಕ್ಕೆ ಮರಳಿದರೂ ಶಾಹು ಅವರ 28 ವರ್ಷಗಳ ಆಡಳಿತಾವಧಿಗೂ ಅವರು ನಿರಂತರ ಮಾರ್ಗದರ್ಶನ ನೀಡುತ್ತಾರೆ.
ಶಾಹು ಮಹಾರಾಜರಿಗೆ ತಮ್ಮ 17ನೇ ವರ್ಷದಲ್ಲೇ 1891ರಲ್ಲಿ ಬರೋಡಾ ಸಂಸ್ಥಾನಕ್ಕೆ ಸೇರಿದ ಗುನಜಿ ರಾವ್ ಎಂಬುವವರ 12 ವರ್ಷದ ಮಗಳು ಲಕ್ಷ್ಮಿಬಾಯಿ ಕಾನ್ವಿಕರ್ ಎಂಬುವವರೊಂದಿಗೆ ಮದುವೆಯಾಗುತ್ತದೆ. ಮುಂದೆ ರಾಜಾರಾಮ್, ಮಹಾರಾಜಕುಮಾರ ಶಿವಾಜಿ, ರಾಧಾಬಾಯಿ, ರಾಜಕುಮಾರಿ ಅವುಬಾಯಿ ಎಂಬ ನಾಲ್ಕು ಮಕ್ಕಳ ಜನನವಾಗುತ್ತದೆ.
ಭಾರತದ ಸಂವಿಧಾನ ಬರೆದ, ಸಾಮಾಜಿಕ ಬಲಾವಣೆಗೆ ಬದುಕಿನುದ್ದಕ್ಕೂ ಹೋರಾಡಿದ ಅಂಬೇಡ್ಕರ್ ಅವರ ಹಿಂದೆ ಶಾಹು ದೊಡ್ಡ ಶಕ್ತಿಯಾಗಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ವಿದೇಶದಿಂದ ಮರಳಿ ಬರುವ ಅನಿವಾರ್ಯತೆ ಇದ್ದ ಸಂದರ್ಭದಲ್ಲಿ ಶಾಹು ಅವರು ಅಂಬೇಡ್ಕರ್ ಅವರಿಗೆ ಮಾತ್ರವಲ್ಲ ಮನೆ ಹುಡುಕಿಕೊಂಡು ಹೋಗಿ ಕುಟುಂಬದವರಿಗೂ ಸಾಕಷ್ಟು ಸಹಾಯ ಮಾಡಿದವರು. ಮೂಕನಾಯಕ ಪತ್ರಿಕೆ ಆರಂಭಿಸಲು ಬಂಡವಾಳ ತೊಡಗಿಸಿದ್ದು, ನಿಮ್ನ ವರ್ಗಗಳ ಸಮಾವೇಶ ನಡೆಸಿ ಅದಕ್ಕೆ ಅಂಬೇಡ್ಕರ್ ಅವರನ್ನು ಕರೆಸಿ ಜನರಿಗೆಲ್ಲ ಪರಿಚಯಿಸಿ ಇವರೇ ನಿಮ್ಮ ನಿಜವಾದ ನಾಯಕರು, ಇವರಿಂದ ಮಾತ್ರ ನಿಮ್ಮ ಬದಲಾವಣೆ ಸಾಧ್ಯ, ಇನ್ನು ಮುಂದೇ ನೀವೆಲ್ಲ ಅಂಬೇಡ್ಕರರನ್ನು ಅನುಸರಿಸಬೇಕೆಂದು ಹೇಳಿ ಶೋಷಿತ ಸಮುದಾಯಗಳಿಗೆ ಕೊನೆ ಇರದ ದನಿಯೊಂದನ್ನು ನೀಡಿದ್ದು ಶಾಹು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ.
ತಮ್ಮ ಸಂಸ್ಥಾನದಲ್ಲಿ ಸಾವಿರಾರು ವರ್ಷಗಳಿಂದ ಶಿಕ್ಷಣ ವಂಚಿತ ಶೂದ್ರ ಹಾಗೂ ಅಸ್ಪೃಶ್ಯ ಸಮುದಾಯಗಳಿಗೆ ಕಡ್ಡಾಯ ಹಾಗೂ ಉಚಿತ ಶಿಕ್ಷಣ ನೀತಿಯನ್ನು ಜಾರಿಗೆ ತಂದದ್ದು ಆಗಿನ ಕಾಲದ ಅಸಾಮಾನ್ಯ ನಿರ್ಧಾರಗಳಲ್ಲೊಂದು. ಮಗುವನ್ನು ಶಾಲೆಗೆ ಕಳಿಸದವರಿಗೆ ತಿಂಗಳಿಗೆ ಒಂದು ರೂಪಾಯಿ ದಂಡ ಹಾಕುವ ದಂಡ ಬೀಸಿ ಕತ್ತಲ ಗುಡಿಸಲುಗಳಲ್ಲೂ ಅಕ್ಷರದ ಬೆಳಕನ್ನು ಬಿತ್ತಿದರು.
ಮಹಿಳೆಯರು ಪುರುಷರ ಸೇವೆ ಮಾಡಿಕೊಂಡು ಅಡುಗೆ ಮನೆಯ ಚಾಕರಿಯಲ್ಲಿ ಮುಳುಗಿ ಹೋಗುವುದೇ ಆದರ್ಶವಾಗಿದ್ದ ಸಂದರ್ಭದಲ್ಲಿ 1919ರಲ್ಲಿ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದು ಈ ಕಾಲಕ್ಕೂ ಬೆರಗು ಮೂಡಿಸುವಂಥದ್ದು. ಅದಕ್ಕಿಂತ ದಿಟ್ಟತನವೆಂದರೆ 1917ರಲ್ಲಿ ವಿಧವಾ ಮರು ವಿವಾಹ ಕಾಯ್ದೆಯನ್ನು ಜಾರಿ ತಂದದ್ದು ಜೊತೆಗೆ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಅಂತರ್ಜಾತಿ ವಿವಾಹಗಳನ್ನು ಬೆಂಬಲಿಸಿದರು. ಇದು ಈಗ ಸುಲಭವೆನಿಸಬಹುದು. ಆದರೆ ಸಂಸ್ಥಾನಗಳ ಎಲ್ಲ ಹಂತಗಳಲ್ಲೂ ಮೇಲ್ಜಾತಿಯವರೇ ಅಧಿಕಾರದಲ್ಲಿ ಕುಳಿತು ತಾರತಮ್ಯವನ್ನೇ ನೈತಿಕತೆ ಎಂಬಂತೆ ಸಾಮಾಜಿಕ ಮಾನ್ಯತೆ ದೊರಕಿಸಿದ್ದ ಕಾಲದಲ್ಲಿ ಇದು ಬಹುದೊಡ್ಡ ಕ್ರಾಂತಿಕಾರಿ ಹೆಜ್ಜೆ.
ಬಹು ಜನರ ರಾಜಕೀಯ ಪ್ರಾತಿನಿಧ್ಯ ಸ್ಥಾಪನೆಗೆ ನಿಪ್ಪಾಣಿಯಲ್ಲಿ ತರಬೇತಿ ಅಕಾಡೆಮಿಯ ಸ್ಥಾಪನೆ, ಎಲ್ಲ ಸಮುದಾಯಗಳ ಪಾಲ್ಗೊಳ್ಳುವಿಕೆಯಲ್ಲಿ ಜವಳಿ ವ್ಯಾಪಾರ ಕೇಂದ್ರಗಳು, ರೈತರ ಸಹಕಾರಿ ಸಂಘಗಳು, ಕೃಷಿ ಸಂಶೋಧನಾ ಕೇಂದ್ರಗಳು, ರಾಧಾನಗರಿ ಅಣೆಕಟ್ಟು ಹೀಗೆ ನೂರಾರು ಜನಪರ ಕಾರ್ಯಯೋಜನೆಗಳಿಗೆ ಚಾಲನೆ ನೀಡಿದ್ದ ಬಹುಜನರ, ಶೋಷಿತರ, ಅಬಲ ಮಹಿಳೆಯರ ಆಶಾಕಿರಣವಾಗಿದ್ದ ರಾಜರ್ಷಿ ಛತ್ರಪತಿ ಶಾಹು ಮಹಾರಾಜರು ಕೇವಲ ತಮ್ಮ 48ನೇ ವಯಸ್ಸಿನಲ್ಲಿ ತಮ್ಮ ಕಾರ್ಯಗಳನ್ನು ಅರ್ಧಕ್ಕೆ ಬಿಟ್ಟು ಅಕಾಲಿಕ ಮರಣಕ್ಕಿಡಾಗುತ್ತಾರೆ. ಆದರೆ ಅವರು ಕಂಡ ಕನಸುಗಳು, ರೂಪಿಸಿದ ಯೋಜನೆಗಳು, ಶೋಷಿತರ ವಿಮೋಚನೆಗೆ ಅವರು ಕೈಗೊಂಡ ಕಾರ್ಯಗಳು ಮುಂದೆ ಅಂಬೇಡ್ಕರ್ ಅವರು ನಡೆಸಿದ ಹೋರಾಟಗಳ ಮೂಲಕ, ಅವರ ಚಿಂತನೆಗಳ ಮೂಲಕ ಸಾಕಾರದೆಡೆಗೆ ಸಾಗಿದವು. ನಮ್ಮೆಲ್ಲರಿಗಾಗಿ ಪರಿತಪಿಸಿದ ಜನರ ರಾಜ ಶಾಹು ಅವರ ಇಡೀ ಬದುಕನ್ನು ತಿಳಿಯುವುದು, ಅವರ ವಿಚಾರಗಳ ಕುರಿತು ಚಿಂತಿಸುವುದು, ತೋರಿದ ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯ. 147ನೇ ಅವರ ಜನ್ಮದಿನದ ಈ ಸಂದರ್ಭದಲ್ಲಿ ನಾವು ನೀವೆಲ್ಲರೂ ಈ ಕುರಿತು ಚಿಂತಿಸೋಣ.
- ಮಹಾಲಿಂಗಪ್ಪ ಆಲಬಾಳ, ಸಾಂಸ್ಕೃತಿಕ ಚಿಂತಕರು