March 25, 2023 4:29 pm

ಬಹುಜನ ಭಾರತ ಬಹುತ್ವ ಭಾರತ ಮುಳುಗುತ್ತಿದೆ

ನಮ್ಮ ಸಮುದಾಯಗಳಿಗೆ ಯಾವುದು ಆದ್ಯತೆಯಾಗಬೇಕಿತ್ತೋ ಅದು ಕಾಲ ಕಸಕ್ಕಿಂತ ಕಡೆಯಾಗಿದೆ‌. ಯಾವುದು ಮುಂದೆ ಅವರನ್ನು ಆಹುತಿ ತೆಗೆದುಕೊಳ್ಳಲಿದೆಯೋ ಅದರ ಮೋಹದ ಮತ್ತೇ ಸುಖವಾಗಿದೆ. ಈಗಾಗಲೇ ಇವರ ಅಸ್ತಿತ್ವದ ಗೋಣಿಗೆ ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ಕುಡುಗೋಲು ಇಟ್ಟಿದೆ. ಬಹಳೇ ಜನ ಬಾಬಾಸಾಹೇಬರ ಬಗ್ಗೆ ತೆವಲಿಗಾಗಿ ಮಾತಾಡೋದು, ದಿನಾಚರಣೆಗಳನ್ನ ಆಚರಿಸೋದು. ಬಾಬಾ ಸಾಹೇಬರ ಚಿಂತನೆಗಳನ್ನ ಅವರು ಹಾಕಿದ ಬುನಾದಿಯನ್ನ ನಾಶ ಮಾಡಲು ಹೊರಟಿರುವ ದುಷ್ಟ ಶಕ್ತಿಗಳ ಜೊತೆ ಕೈಜೋಡಿಸೋದು. ಇದರಿಂದ ಅಂಬೇಡ್ಕರರಿಗೇನೂ ನಷ್ಟವಿಲ್ಲ. ಎಲ್ಲಾ ದಲಿತ ಶೂದ್ರ ಹಿಂದುಳಿದ ಸಮುದಾಯಗಳಿಗೇ ಆಪತ್ತು. ಈಗ ಈ ಸಮುದಾಯಗಳು ಆಪತ್ತಿನ ಹೊಸ್ತಿಲಲ್ಲಿದ್ದಾವೆ. ಗೋಶಾಲೆ ಮಾಡಿ ದನಾ ಕಾಯ್ಕೊಂಡು ಇರಲಿ ಬಿಡಿ. ಪುರೋಹಿತರ ಬಾಡಿಗಾರ್ಡುಗಳಾಗಿ ಗೇಟ್ ಕೀಪರ್ಗಳಾಗಿ ಕಳೆದು ಹೋದ ತಮ್ಮ ಹಳೆಯ ಬದುಕನ್ನ ನೆನೆಸಿಕೊಂಡು ಮುಂದೆ ಪ್ರಾಪ್ತವಾಗಲಿರುವ ನರಕದ ಎಣ್ಣೆಕೊಪ್ಪರಿಗೆಯಲ್ಲಿ ಬೇಯಲಿ ಬಿಡಿ.

ದಲಿತರಿಗೆ ಸರ್ಕಾರಿ ನೌಕರಿ ಸ್ಥಾನಮಾನ ಗೌರವ ಮನ್ನಣೆಗಳನ್ನು ಆರ್ಥಿಕ ಸಬಲತೆಯನ್ನು ತಂದುಕೊಟ್ಟದ್ದು ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವವಾದೀ ಸಮಾಜವಾದಿ ಸಮತಾವಾದಿ ರಾಜಕೀಯ ವ್ಯವಸ್ಥೆಯೇ ಹೊರತು, ಹಿಂದುತ್ವವಲ್ಲ ಗೋವುಗಳಲ್ಲ ರಾಮಮಂದಿರವಲ್ಲ ಗೋಡ್ಸೆ ಗೋಳ್ವಲಾಲ್ಕರ್ ಅಲ್ಲ.

ಈ ಸರಳ ಸತ್ಯ ಅರ್ಥ ಮಾಡಿಕೊಳ್ಳಲಾಗದ ಶೂದ್ರ ಮತ್ತು ದಲಿತ (ಮಹಿಳೆಯೂ ದಲಿತಳೇ ಆಕೆಯನ್ನೂ ಸೇರಿ) ಸಮುದಾಯಗಳು ಅಧಃಪತನದ ಹಾದಿಯಲ್ಲಿ ಕಸಾಯಿಖಾನೆಯ ಕಡೆ ಚಲಿಸುವ ನಿಜವಾದ ಗೋವುಗಳೇ ಆಗಿವೆ. ಸುಪ್ರೀಂ ಕೋರ್ಟ್  ಮೊನ್ನೆ ಮೀಸಲಾತಿಯನ್ನು ಪ್ರಶ್ನಿಸಿದೆ. ಇಲ್ಲಿ ಸಮಾಜದಲ್ಲಿ ಜಾತಿಯೇ ನಾಶವಾಗಿಲ್ಲ. ಜಾತಿ ಬಾಣಲೆಯಲ್ಲಿ ದಲಿತರು ಶೂದ್ರರು ಬೇಯುವುದು ತಪ್ಪಿಲ್ಲ‌. ಅಲೆಮಾರಿಗಳು ಅಲೆಯುತ್ತಲೇ ಇದ್ದಾರೆ. ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ನಡೆಯುತ್ತಲೇ ಇದೆ. ದೇವಾಲಯ ಪ್ರವೇಶ ನಿಷೇಧ, ಅಂತರ್ಜಾತಿ ವಿವಾಹವಾದರೆ ಅವಮರ್ಯಾದಾ ಹತ್ಯೆ, ಲೈಂಗಿಕ ದುರ್ಬಳಕೆ ಅಥವಾ ದಾಸ್ಯಕ್ಕೆ ಒಳಪಡಿಸಿರುವುದು, ಅನಕ್ಷರತೆ ದಾರಿದ್ರ್ಯ ಬಡತನಗಳು ಕಿತ್ತು ತಿನ್ನುತ್ತಿವೆ. ಅತ್ತ ಕೋರ್ಟ್ ಮೀಸಲಾತಿಯನ್ನು ಪ್ರಶ್ನಿಸಿದೆ. ಮಾಧ್ಯಮಗಳು ಅದನ್ನು ‘ಮಹತ್ವದ ಪ್ರಶ್ನೆ’ ಎಂಬ ಟೈಟಲ್ ಅಡಿಯಲ್ಲಿ ಸುದ್ಧಿ ಮಾಡುತ್ತವೆ‌. ಅಂದರೆ ಮೀಸಲಾತಿ ತೆಗೆಯುವುದು ಮಹತ್ವದ ಪ್ರಶ್ನೆ. ವಿದ್ಯಾವಂತ ಶೂದ್ರರು ದಲಿತರು ಯುವಕರು ಜಾತಿ ಧರ್ಮದ ಮಂಪರಿನಿಂದ ಹೊರಬಂದು ಇದನ್ನು ನೋಡಲು ಅರ್ಥ ಮಾಡಿಕೊಳ್ಳುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತಯಾರಿಲ್ಲ‌.

ಚರಿತ್ರೆಯ ಉದ್ದಕ್ಕೂ ನಾವು ಸೋತಿದ್ದು ಪುರೋಹಿತಶಾಹಿ ಬಲಪಂಥೀಯರಿಂದ ಅಲ್ಲ. ನಮ್ಮದೇ ದೌರ್ಬಲ್ಯಗಳಿಂದ. ನಮ್ಮ ಸ್ವಾರ್ಥ, ಗುಲಾಮ ಮನಸ್ಥಿತಿ, ಹುಂಬತನ, ಅಂಧಾರಾಧನೆ, ಮೌಢ್ಯ, ಅನಕ್ಷರತೆ, ಅನೈಕ್ಯತೆ ಇವುಗಳಿಂದಲೇ. ಕನಕದಾಸರು, ‘ಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು’ ಎಂದೆನ್ನುವ ಹಾಗೆ ಒಟ್ಟಾಗಿರಲೊಲ್ಲದ ನಾವು ಹುಲಿಗಿಕ್ಕಿದ ಮೇವಲ್ಲ ನಾವೇ ಹುಲಿಗೆ ಬಲಿಯಾಗ ಹೊರಟಿರುವ ದಡ್ಡರು. ರೆಕ್ಕೆ ಕತ್ತರಿಸಿ ಹಾಕಿದರೂ ಹಕ್ಕಿ ಹಾರುವ ಯತ್ನ ನಿಲ್ಲಿಸುವುದಿಲ್ಲ ಸಾಯುವವರೆಗೂ ಹಾರುವ ಕನಸು ಕಾಣುತ್ತಲೇ, ಹಾರಲು ಪ್ರಯತ್ನಿಸುತ್ತಲೇ ಕೊನೆಯುಸಿರೆಳೆಯುತ್ತದೆ.

ನಮಗೆ ಹಕ್ಕಿಗಿರುವ ಸ್ವಾತಂತ್ರ್ಯದ ಪ್ರೇಮವಿಲ್ಲ ಪ್ರಯತ್ನವಿಲ್ಲ. ಯಾಕೆಂದರೆ ಸ್ವಾತಂತ್ರವೆಂದರೇನು ಬಿಡುಗಡೆಯೆಂದರೇನು ಸ್ವಾಭಿಮಾನವೆಂದರೇನು ಬದುಕುವ ಹಕ್ಕು ಎಂದರೇನು, ಸಮಾನತೆ ಎಂದರೇನು ಎಂಬ ಪ್ರಶ್ನೆಗಳೇ ಏಳದಂತೆ ನಮ್ಮ ಸಮುದಾಯಗಳ ಮಿದುಳನ್ನು ಪುರೋಹಿತಶಾಹಿ ಹೊಸೆದು ರೂಪಿಸುತ್ತದೆ. ನಮ್ಮ ಸಮುದಾಯಗಳಿಗೆ ನಮ್ಮ ಸಮುದಾಯಗಳ ನಾಯಕರುಗಳೇ ವಂಚಿಸಿದ್ದಾರೆ, ದಲಿತ ಶೂದ್ರ ಜನಾಂಗದ ಉನ್ನತ ಅಧಿಕಾರಿಗಳೇ ಕೈ ಬಿಟ್ಟಿದ್ದಾರೆ. ಪ್ರಶಸ್ತಿಗಾಗಿ ಅಧಿಕಾರಕ್ಕಾಗಿ ಹೆಂಡಕ್ಕಾಗಿ ವೈಯಕ್ತಿಕ ಲಾಭಕ್ಕಾಗಿ, ತಮ್ಮನ್ನು ತಾವೇ ಮಾರಿಕೊಂಡ, ಅಡವಿಟ್ಟುಕೊಂಡ, ರಾಜಕಾರಣಿಗಳು, ಹೋರಾಟಗಾರರು, ಅಧಿಕಾರಿಗಳು, ಸಂಘಟನೆಗಳು ನಮ್ಮಲ್ಲಿವೇ. ಈ ಶತ್ರುಗಳೇ ಈ ವಿದ್ರೋಹಿಗಳೇ ಇಂದು ತಮ್ಮ ತಮ್ಮ ಸಮುದಾಯಗಳನ್ನು ಕೈಬಿಟ್ಟು ನವಬ್ರಾಹ್ಮಣರಾಗಿ ಢೋಂಗಿ ಭಾಷಣಕಾರರಾಗಿ, ಢೋಂಗಿ ವಿಚಾರವಾದಿಗಳಾಗಿ ಕವಿಗಳಾಗಿ ಮುಖಂಡರಾಗಿ ತಾವೇ ಮುಂಚೂಣಿಯಲ್ಲಿ ನಿತ್ತು ದಿಕ್ಕುತಪ್ಪಿಸುತ್ತಿದ್ದಾರೆ‌.

ಇವರೆಲ್ಲ ಅಂಬೇಡ್ಕರ್ ಎಳೆದ ತೇರನ್ನು ಮುಂದೆ ಎಳೆಯಲಾರರು. ಹಾಗೆಯೇ ಇದ್ದರೆ ಇರಲಿ ಎಂದೂ ಕೈ ಬಿಡಲೊಲ್ಲರು. ಬದಲಿಗೆ ತೇರಿನ ಅಚ್ಚನ್ನೇ ಮುರಿಯುವ ದುರುಳತನ ಬೆಳೆಸಿಕೊಂಡಿದ್ದಾರೆ. ಅಂಬೇಡ್ಕರ್ ಅವರಿಗೂ ಹಾಗೂ ಭಾರತದ ಸಂವಿಧಾನಕ್ಕೂ ದ್ರೋಹ ಎಸಗುತ್ತಿರುವವರು ಸಾಮಾನ್ಯ ದಲಿತ ಶೂದ್ರ ಜನರಲ್ಲ. ಅವರೊಳಗಿನ ಕೆಲವು ಡೋಂಗಿಗಳು. ಹೀಗೆ ಪುರೋಹಿತ ಮತ್ತು ಬಂಡವಾಳಶಾಹಿ ಹಾಗೂ ನಮ್ಮ ಸಮುದಾಯಗಳ ನಂಬಲರ್ಹವಲ್ಲದ ಕೆಲವು ಅವಕಾಶವಾದಿಗಳು ಈ ಎರಡೂ ಕಡೆಯ ವಿದ್ರೋಹಗಳಿಂದ ಭಾರತದ ಬಹುಜನರ ಬಾಳು ಬಹುತ್ವ ಭಾರತ ಮುಳುಗುತ್ತಿದೆ.

– ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ