September 21, 2023 11:45 pm

ಹೊತ್ತಿ ಉರಿಯುವ ಸಂಗತಿಗಳ ಕುರಿತು ಚರ್ಚೆಯಾಗಿದೆ: ಎಸ್.ಜಿ.ಸಿದ್ದರಾಮಯ್ಯ

ಚಿತ್ರದುರ್ಗ: ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಚರ್ಚೆಯಾಗಿರುವ ವಿಷಯಗಳು ಹೊತ್ತಿ ಉರಿಯುತ್ತಿರುವಂತವು. ನಮ್ಮ ಭವಿಷ್ಯದ ಜನಾಂಗಕ್ಕಾಗಿ ಅಗತ್ಯವಾದ ಚರ್ಚೆಗಳು ಇಲ್ಲಿ ನಡೆದಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭಧಲ್ಲಿ ಮಾತಾಡಿದ ಅವರು, ಭಾಷೆ ಇವತ್ತು ಪೊಳ್ಳಾಗಿದೆ. ಸುಳ್ಳು ಹೇಳುವ ಭಾಷೆ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಭಾಷೆ ಭ್ರಷ್ಟಗೊಂಡಿದೆ. ಇಲ್ಲಿ ಹೊಸ ಚೈತನ್ಯ ಕೊಡಬೇಕು ಎಂದರು.

ಸುಳ್ಳನ್ನು ಸತ್ಯವೆಂದು ಭ್ರಮಿಸಲಾಗುತ್ತಿದೆ. ಚರಿತ್ರೆಯನ್ನು ತಿರುಚಲಾಗುತ್ತಿದೆ. ಇದರಿಂದ ಸುಳ್ಳನ್ನೇ ಸತ್ಯವೆಂದು ಭ್ರಮಿಸಿ ಇಂದು ದೇಶ ದ್ವೇಷವಾಗಿ ಬದಲಾಗುತ್ತಿದೆ. ನಮ್ಮ ಮನಸು ಮಲಿನಗೊಂಡಿದೆ. ನಮ್ಮ ಮಾನಸಿಕ ಕೊಳಚೆ ಬಾಹ್ಯ ಕೊಳಚೆಗಿಂತ ಅಪಾಯಕಾರಿ ಎಂದು ವಿವೇಕಾನಂದರು ಹೇಳುತ್ತಾರೆ. ಹೆಣ್ಣುಮಕ್ಕಳನ್ನು ಹೀನಾಯವಾಗಿ ಕಂಡದ್ದರಿಂದ ಕೇರಳವನ್ನು ಹುಚ್ಚರ ರಾಜ್ಯ ಎಂದು ಅವರು ಕರೆದರು ಎಂದರು.

ಇಂದು ವಾತಾವರಣದಲ್ಲಿ ಮಲಿನತೆ ಇದೆ. ಬಂಧುತ್ವ ನಮ್ಮ ಜನರ ಪ್ರಜ್ಞೆ. ಬಂಧುತ್ವದ ನೆಲೆಯಲ್ಲಿ ನಾವು ಬದುಕಬೇಕು. ಆಚಾರಕ್ಕರಸಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು ಎಂಬ ಗೀತೆಯಂತೆ ಬದುಕಬೇಕು. ಇಂದಿನ ರಾಜಕಾರಣಿಗಳು, ಸನ್ಯಾಸಿಗಳು ದ್ವೇಷವನ್ನು ಹರಡುತ್ತಿದ್ದಾರೆ ಎಂದರು.

ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುತ್ತೇವೆ ಎಂದು ಸ್ವಾಮೀಜಿಯೊಬ್ಬ ಮಾತಾಡುತ್ತಾನೆ ಎಂದರೆ ನಾವು ಎಲ್ಲಿದ್ದೇವೆ? ಧರಿಸಿಕೊಂಡ ಕಾವಿಗೆ ಬೆಲೆ ಇಲ್ಲ. ಬಾಯಲ್ಲಿ ಏನು ಬರಬೇಕೋ ಅದರ ಬದಲು ಬೇರೆ ಬರುತ್ತಿದೆ. ಇಂತಹ ರೀತಿಯಲ್ಲಿ ಯುವಕರನ್ನು ಪ್ರಚೋದಿಸಲಾಗುತ್ತಿದೆ. ಸ್ಮಶಾನ ಕುರುಕ್ಷೇತ್ರದಲ್ಲಿ ದೆವ್ವಗಳು ನರ್ತಿಸುತ್ತ ಮಾತಾಡುತ್ತಿರುಂತೆ ತೋರುತ್ತದೆ. ಇವರು ಮನುಷ್ಯರಾ ಎಂದರು.

ಪಂಪ ಮನುಷ್ಯ ಜಾತಿಯೆಲ್ಲ ಒಂದೇ ಎಂದ. ಬಸವಣ್ಣ ದಯೆಯಿಲ್ಲದ ಧರ್ಮಯಾವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದ. ದಯೆಯಿಲ್ಲದ ಧರ್ಮ ಚಾತುರ್ವರ್ಣ ಧರ್ಮ. ಅಸ್ಪೃಶ್ಯತೆ, ಮೇಲು ಕೀಳು ಸೃಷ್ಟಿಸಿದ್ದು ಈ ಧರ್ಮ. ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟದ ಹೊರೆಯ ಹೊರಿಸಿದರಯ್ಯ, ಸಂಗಕ್ಕೆ ಹುಟ್ಟಿದ ಶಿಶು ನಾನು ಎಂದು ಬಸವಣ್ಣ ತಾನು ಎರಡನೇ ಬಾರಿ ಹುಟ್ಟಿದ್ದನ್ನು ಹೇಳುತ್ತಾರೆ. ನೀಚಾತಿನೀಚರು ಎಂದ ಜಾತಿಯ ಮಗ ಎಂದವನು ಬಸವಣ್ಣ. ಮೇಲ್ಜಾತಿಗಳಲ್ಲಿ ಬಸವಪ್ರಜ್ಞೆ ಮೂಡಬೇಕು ಎಂದರು.

ಶ್ರಮ ಮೂಲಕ ತಂದೆ ತಾಯಿಗಳು ತಮ್ಮ ಮಕ್ಕಳು ಅವರ ದಾಳಗಳಾಗದಂತೆ ನೋಡಿಕೊಳ್ಳಬೇಕು. ಮಾನವೀಯತೆ, ಬಂಧುತ್ವದ ಶಿಕ್ಷಣ ಕೊಡಿಸಿ. ದೇಶ ಮಾನವೀಯತೆ, ಬಹುತ್ವವನ್ನು ಸಂರಕ್ಷಿಸಬೇಕಿದೆ. ಇದಕ್ಕೆ ಕುವೆಂಪು ಅವರು ಮನುಜಪಥ ವಿಶ್ವಪಥದ ನಡೆ ಕೊಟ್ಟಿದ್ದಾರೆ. ಅವರು ಸರ್ವಜನಾಂಗದ ಶಾಂತಿಯ ತೋಟ ಎಂದಿದ್ದಾರೆ ಎಂದರು.

ಬಹುತ್ವದ ಅಸ್ಮಿತೆ ಭಾರತ ಅಸ್ತಿತ್ವ. ಇದಕ್ಕೆ ಬೆಂಕಿ ಇಡುವ ಕೆಲಸವನ್ನು ಮಾಡಲಾಗುತ್ತಿದೆ. ಇಂದು ದೇಶದಲ್ಲಿ ದ್ವೇಷವನ್ನು ಬೆಳೆಸಲಾಗುತ್ತಿದೆ. ಶಿಕ್ಷಣದಿಂದ ಜನರನ್ನು ದೂರಮಾಡಲಾಗುತ್ತಿದೆ. ಕೊರೊನಾ ಅವಧಿಯಲ್ಲಿ ಬಡವರ, ದಲಿತರ ಮಕ್ಕಳು ಶಿಕ್ಷಣದಿಂದ ವಂಚಿತರಾದರು ಎಂದರು.

ಶಿಕ್ಷಣದಿಂದ ವಂಚಿತವಾದ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ತಪ್ಪಿಸಲು ಎರಡೂ ಗುಂಪುಗಳ ಮೂಲಭೂತವಾದಿಗಳು, ಕರ್ಮಠ ಮನಸುಗಳು  ಪ್ರಯತ್ನಿಸುತ್ತಿವೆ. ಬಂಧುತ್ವ ವೇದಿಕೆ ಮನುಷ್ಯತ್ವದ ಬದುಕಿಗಾಗಿ ಹಾರೈಸುತ್ತಿದೆ. ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟ ಎಂದರು. ಇದೇ ನಿಟ್ಟಿನಲ್ಲಿ ವೇದಿಕೆ ಕೆಲಸ ಮಾಡುತ್ತಿದೆ ಎಂದರು.

ಅಜ್ಞಾನ, ಆವೇಶದಿಂದ ಹೊರಬಂದು ಮನುಷ್ಯರಾಗಬೇಕು. ಇಲ್ಲಿ ನೀವು ಕೇಳಿದ ವಿಷಯಗಳನ್ನು ಸಾವಿರ ಮಕ್ಕಳಿಗೆ ತಿಳಿಸಿ ಎಂದು ಅವರು ಕರೆನೀಡಿದರು.

ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ನಮ್ಮ ದೇಶದ ಸಂವಿಧಾನದಲ್ಲಿದೆ. ಯಾರು ನಾಯಕರಾಗಬಯಸುವಿರಿ ಅಂಬೇಡ್ಕರ್ ಅವರ ಕೃತಿಗಳನ್ನು ಓದಿ. ಜಬರ್ ದಸ್ತ್ ಆಗಿ ಕೇಳಬೇಕಾದ ಪ್ರಶ್ನೆಗಳನ್ನು ಸರಿಯಾದ ಮಾದರಿಯಲ್ಲಿ ಕೇಳಬೇಕು. ನಾವು ಮಾತಾಡಬೇಕಾದಾಗ ಮೌನವಾಗಿ, ಮೌನವಾಗಿರುವಾಗ ಮಾತಾಡುತ್ತೇವೆ. ಯಾವಾಗ ಏನು ಮಾಡಬೇಕು ಎಂದು ಅರಿಯಬೇಕು ಎಂದರು.

ಸಂಘಟನೆ ಯಾವಾಗಲೂ ನಡೆಯುವ ಚಟುವಟಿಕೆ. ಒದೆರೆಡು ದಿನಗಳದ್ದಲ್ಲ; ವರ್ಷಗಳ ಕಾಲ ಇದು ಬೆಳೆಯುತ್ತದೆ. ಕೆಲವು ಉದ್ದೇಶಗಳಿಂದ ಕೆಲವರು ಸಂಘಟನೆಗೆ ಬರುತ್ತಾರೆ. ಸಂಘಟನೆ, ಚಳುವಳಿಯಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು. ಯಂಗ್ ಬ್ಲಡ್ ಸಮಯದಲ್ಲಿ ಸಮಾಜದ ಕುರಿತು ಚಿಂತಿಸಬೇಕು. 25 ವರ್ಷದವರಲ್ಲಿ ಯಾರನ್ನು ಮದುವೆಯಾಗಬೇಕು ಮತ್ತು ಸಮಾಜವನ್ನು ಏನಾದರೂ ಮಾಡಿ ಬದಲಾವವಣೆ ಮಾಡಬೇಕು ಎಂದು ಆಲೋಚನೆ ಇರುತ್ತದೆ. ಯುವಕರಾಗಿದ್ದಾಗ ತೆಗೆದುಕೊಂಡಿರುವ ನಿರ್ಧಾರವನ್ನು ನಡುವಯಸ್ಸಿನಲ್ಲಿ ನಾನು ಹಾಗೆ ಮಾಡಬಾರದಿತ್ತು, ಹೀಗೆ ಮಾಡಬಾರದಿತ್ತು ಎಂದು ಆಲೋಚಿಸುತ್ತಾರೆ. ಕಾರ್ಯಕರ್ತರು, ನಾಯಕರು ಶಿಸ್ತು ಪಾಲಿಸಬೇಕು. ಅಧಿಕಾರ ಇದ್ದಾಗ ಮಾತ್ರ ವಿಜೃಂಭಿಸುವವರು ನಾಯಕರಲ್ಲ. ಅಧಿಕಾರವಿಲ್ಲದಿದ್ದರೂ ಜನರ ಜೊತೆಗೆ ಇರಬೇಕು ಎಂದರು.

ಇಂದು ಸಂಘಟನೆ ತುಂಬಾ ಕಷ್ಟ. ಹತ್ತಿಪ್ಪತ್ತು ಜನರನ್ನು ಸೇರಿಸುವುದು ಕಷ್ಟ. ಒಡೆಯುವ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಬಂಧುತ್ವವನ್ನು ಕಟ್ಟೋಣ. ನಾವು ಮುಂದಿನ ದಿನಗಳಲ್ಲಿ ಸುಂದರವಾದ ದಿನಗಳನ್ನು ಕಾಣಲು ಸಾಧ್ಯ ಎಂದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು