October 1, 2023 7:34 am

ಚಳುವಳಿಗಳ ಕುರಿತು ಆಂತರ್ಯ ಗೊತ್ತಿಲ್ಲದವರು ಮಾತಾಡುತ್ತಾರೆ: ಡಾ.ರಾಜಪ್ಪ ದಳವಾಯಿ

ಚಿತ್ರದುರ್ಗ: ಸಾಮಾನ್ಯವಾಗಿ ಚಳುವಳಿಗಳ ಕುರಿತು ಆಂತರ್ಯ ಗೊತ್ತಿರುವವರಿಗಿಂತ ಗೊತ್ತಿಲ್ಲದವರು ಮಾತಾಡುತ್ತಾರೆ ಎಂದು ನಾಟಕಕಾರ ಡಾ.ರಾಜಪ್ಪ ದಳವಾಯಿ ಹೇಳಿದರು.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಬಂಧುತ್ವ ಸಂಘಟನೆ ವಿಷಯದ ಕುರಿತು ಮಾತನಾಡಿದ ಅವರು, ಚಳುವಳಿಗೆ ವೀಳ್ಯ ಕೊಟ್ಟು ಕರೆಯಲು ಸತ್ಯನಾರಾಯಣ ಪೂಜೆಯಲ್ಲ. ನಿಮಗೆ ಬೇಕಿದ್ದರೆ ಬನ್ನಿ ಚಳುವಳಿ ಸೇರಿಕೊಳ್ಳಿ ಎಂದರು.

ಇಂದು ಚಳುವಳಿಗೆ ಬರುವವರು ನಾಳೆಯೇ ಅಧಿಕಾರ ಹಿಡಿಯಲು ಹವಣಿಸುತ್ತಾರೆ. ಇಂದು ಬಂದು ವೇದಿಕೆಯೇರಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ, ಸಮಯ ಬೇಕು. 1987ರಲ್ಲಿ ಕನ್ನಡ ಅತಿಥಿ ಉಪನ್ಯಾಸಕನಾಗಿದ್ದಾಗ ನಮ್ಮ ಮೇಲೆ ನಡೆಯುತ್ತಿದ್ದ ಶೋಷಣೆ ವಿರುದ್ಧ ಜೀವರಾಜ್ ಆಳ್ವ ಅವರ ಬಳಿ ಹೋದಾಗ ನಿನಗೆ ಸೀಟ್ ಕೊಡ್ತೀನಿ, ಚುನಾವಣೆಗೆ ನಿಲ್ಲು ಎಂದರು. ನಾನು ಅದು ನನ್ನ ಕೆಲಸವಲ್ಲ ಎಂದೆ. 22 ವರ್ಷಗಳ ನಂತರ ಅವರನ್ನು ನೋಡಿದಾಗ ಹಿಂಡಿಹಿಪ್ಪೆಯಾಗಿ ವೀಲ್ ಚೇರ್ ನಲ್ಲಿದ್ದರು. ಅಂದಿನ ಹೋರಾಟ 8500 ಜನ ಅಧ್ಯಾಪಕರು ಖಾಯಂ ಆದರು. ಚಳುವಳಿ ವೈಯಕ್ತಿಕವಾಗಿ ಆರಂಭವಾಗಿ ಸಾಮುದಾಯಿಕವಾಗಿ ಬೆಳೆಯುತ್ತದೆ ಎಂದರು.

ಸತೀಶ್ ಜಾರಕಿಹೊಳಿಯವರು ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಆಧರಿಸಿ ಮಾನವ ಬಂಧುತ್ವ ವೇದಿಕೆಯನ್ನು ಆರಂಭಿಸಿದರು. ಇದು ಮೂಢನಂಬಿಕೆ ವಿರುದ್ಧವಾಗಿ ಚಳುವಳಿ ನಡೆಸುತ್ತಿದ್ದಾರೆ. ಇದು ಮೊದಲನೆಯದಲ್ಲ. ಜ್ಞಾನವಿಜ್ಞಾನ ಸಮಿತಿಯಿಂದ ಸರ್ಕಾರ ಎಚ್.ನರಸಿಂಹಯ್ಯನವರ ನೇತೃತ್ವದಲ್ಲಿ ನಡೆಯಿತು ಎಂದರು.

ಎಷ್ಟೊ ಜನ ಸ್ಮಶಾನ, ಪೊಲೀಸ್ ಸ್ಟೇಷನ್ ಕಂಡರೆ ಭೀತಿಪಡುತ್ತಾರೆ. ಸ್ಮಶಾನದ ಕಡೆಗೆ ತಿರುಗಿಯೂ ನೋಡುವುದಿಲ್ಲ. ಶಿಕ್ಷಣ ಪಡೆದವರಲ್ಲೂ ಇಂತಹ ನಡೆ ಇದೆ. ಓದಿದವರೆಲ್ಲ ಯೋಚಿಸಿದ್ದರೆ ದೇಶದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಅಂತವರನ್ನು ಸ್ಮಶಾನಕ್ಕೆ ಕರೆದು, ಊಟಮಾಡಿಸುವುದು, ಮಲಗಿಸುವುದು ಮಹತ್ವದ ಕೆಲಸ. ಸತೀಶ್ ಜಾರಕಿಹೊಳಿಯವವರ ಕನಸನ್ನು ನನಸಾಗಿಸಲು ರವೀಂದ್ರ ನಾಯ್ಕರ್ ಸೇರಿದಂತೆ ಇನ್ನಿತರರು ಹಗಲುರಾತ್ರಿ ದುಡಿಯುತ್ತಿದ್ದಾರೆ ಎಂದರು.

80ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿಯವರು ಶಿಬಿರಗಳು ನಡೆದವು. ಅದೇ ಮಾದರಿಯಲ್ಲಿ ಶಿಬಿರಗಳನ್ನು ನಡೆಸುವುದು ಅಗತ್ಯವಿದೆ. ಸಂಘಟನೆಯನ್ನೇ ನಿರಂತರವಾಗಿ ಮಾಡುವಿರೋ ಮುಂದುವರೆದು ರಾಜಕೀಯ ಮಾಡುವಿರೊ ಅಥವಾ ಬೇರೆಯವರಿಗೆ ಅಧಿಕಾರ ಕೊಡುವಿರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ದಲಿತ ಸಂಘಟನೆಗಳು ಹೆಚ್ಚಾಗಿರುವ ಕುರಿತು ತಕರಾರು ತೆಗೆಯುತ್ತಾರೆ. ಆದರೆ ದಲಿತರ ಸಮಸ್ಯೆಗಳನ್ನು ನೋಡಿದರೆ ಆ ಸಂಖ್ಯೆ ಏನೂ ಅಲ್ಲ ಎಂದರು.

ಶಾಮನೂರು ಶಿವಶಂಕರಪ್ಪನವರು ಎಂಎಲ್ ಎ ಟಿಕೆಟ್ ಕೇಳಿದಾಗ ದೇವರಾಜು ಅರಸು ಅವರು ಇನ್ನೊಂದು ಕಾಲೇಜು ತೆರೆಯಲು ಅವಕಾಶ ಕೊಡೋಣ. ಟಿಕೆಟ್ ಬೇಡ ಎಂದರು. ಏಕೆಂದರೆ ಸಂಪತ್ತು ಇರುವವರ ಕೈಯಲ್ಲಿ ಅಧಿಕಾರ ಸಿಗಬಾರದು. ಇಂದು ಸಾಮಾಜಿಕ ಹೋರಾಟವನ್ನು ಅಪ್ರಸ್ತುತಗೊಳಿಸುವ ಮಾತುಗಳನ್ನು ಆಡುತ್ತಾರೆ. ಇಂದು ಕುದ್ಮುಲ್ ರಂಗರಾವ್ ಸೇರಿದಂತೆ ದಲಿತ, ಸಾಮಾಜಿಕ ಹೋರಾಟಗಾರರ ಬದುಕನ್ನು ನೋಡಬೇಕು ಎಂದರು.

ನಾವು ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿದವರಲ್ಲ. ಆದರೆ ಜಾತಿ ಗರ್ವ, ಅಹಂಕಾರ, ದರ್ಪ ಬೇಕಿಲ್ಲ. ಯಾವುದೇ ಜಾತಿ ಮೇಲುಕೀಳಲ್ಲ. ಸಂಸ್ಕೃತಿಯಲ್ಲಿ ಎಲ್ಲರೂ ಮುಖ್ಯ, ಯಾರೂ ಅಮುಖ್ಯರಲ್ಲ. ಕೆಲವರು ದೊಡ್ಡ ಜಾತಿಯವರು ಮನೆಗೆ ಬಂದರೆ ನೀವು ನಮ್ಮ ಮನೆಯೊಳಗೆ ಬರಬೇಡಿ, ನಮಗೆ ಒಳ್ಳೆಯದಾಗುವುದಿಲ್ಲ ಎನ್ನುತ್ತಾರೆ ಎಂದರು.

ನಾಯಕನಾದವನಿಗೆ ಸಾಂಸ್ಕೃತಿಕ ಬೇರು ಗೊತ್ತಿರಬೇಕು. ಅಧಿಕಾರದ ವ್ಯಾಮೋಹ ಇರಬಾರದು. ನೀವು ಒಳ್ಳೆಯ ಕಾರ್ಯಕರ್ತರಾದರೆ ಒಳ್ಳೆಯ ನಾಯಕರಾಗುತ್ತೀರಿ. ನಾನು ದಸಂಸ ಸೇರಿದಂತೆ ಅನೇಕ ಸಂಘಟನೆಗಳ ಜೊತೆಗೆ ಇದ್ದೇನೆ. ಲಂಕೇಶರ ಪ್ರಗತಿರಂಗದ ಜೊತೆ ಇದ್ದೆ. ಸಮಸ್ಯೆ ಬಂದಾಗ ನಾಯಕತ್ವ ಗೊತ್ತಾಗುತ್ತದೆ. ನಾವು ಯಾವ ಸಮಸ್ಯೆಯನ್ನೂ ಅಂಟಿಸಿಕೊಳ್ಳುವುದಿಲ್ಲವೆಂದರೆ ನಾಯಕರಾಗಲು ಸಾಧ್ಯವಿಲ್ಲ. ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು ಎಂದು ಆಲೋಚಿಸಬೇಕು ಎಂದರು.

ಕಷ್ಟಕರ ಸಮಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ಮುಖ್ಯ. ಮನುಷ್ಯತ್ವವನ್ನು ರೂಢಿಸಿಕೊಂಡರೆ ಒಳ್ಳೆಯ ನಾಯಕನಾಗಬಹುದು. ನಾಯಕತ್ವ ಸುಮ್ಮನೆ ಬರುವುದಲ್ಲ. ಹಿಂಬಾಲಕರು ತಮ್ಮ ನಾಯಕನನ್ನು ಆರಿಸಿಕೊಳ್ಳುತ್ತಾರೆ. ಗಾಂಧಿ, ಅಂಬೇಡ್ಕರ್ ಉದಾಹರಣೆ. ಅಂಬೇಡ್ಕರ್ ವಿಶ್ವನಾಯಕನಾಗಿದ್ದು ಸಾಮಾನ್ಯ ಸಂಗತಿಯಲ್ಲ. ಒಬ್ಬರಿಗೆ ಉಪ್ಪು, ಒಬ್ಬರಿಗೆ ನೀರು ಮುಖ್ಯವಾಯಿತು. ಇಂತಹ ಮಹಾನ್ ವ್ಯಕ್ತಿ ನಮ್ಮ ವಿಶ್ವವಿದ್ಯಾಲಯದಲ್ಲಿ ಓದಿ ಹೋಗಿದ್ದಾರೆ ಎಂಬುದಕ್ಕೆ ಹೆಮ್ಮೆ ಪಡುತ್ತೇವೆ ಎಂದು ಅಂಬೇಡ್ಕರ್ ಕುರಿತು ಹೇಳಿದೆ ಎಂದರು.

ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ನಮ್ಮ ದೇಶದ ಸಂವಿಧಾನದಲ್ಲಿದೆ. ಯಾರು ನಾಯಕರಾಗಬಯಸುವಿರಿ ಅಂಬೇಡ್ಕರ್ ಅವರ ಕೃತಿಗಳನ್ನು ಓದಿ. ಜಬರ್ ದಸ್ತ್ ಆಗಿ ಕೇಳಬೇಕಾದ ಪ್ರಶ್ನೆಗಳನ್ನು ಸರಿಯಾದ ಮಾದರಿಯಲ್ಲಿ ಕೇಳಬೇಕು. ನಾವು ಮಾತಾಡಬೇಕಾದಾಗ ಮೌನವಾಗಿ, ಮೌನವಾಗಿರುವಾಗ ಮಾತಾಡುತ್ತೇವೆ. ಯಾವಾಗ ಏನು ಮಾಡಬೇಕು ಎಂದು ಅರಿಯಬೇಕು ಎಂದರು.

ಸಂಘಟನೆ ಯಾವಾಗಲೂ ನಡೆಯುವ ಚಟುವಟಿಕೆ. ಒದೆರೆಡು ದಿನಗಳದ್ದಲ್ಲ; ವರ್ಷಗಳ ಕಾಲ ಇದು ಬೆಳೆಯುತ್ತದೆ. ಕೆಲವು ಉದ್ದೇಶಗಳಿಂದ ಕೆಲವರು ಸಂಘಟನೆಗೆ ಬರುತ್ತಾರೆ. ಸಂಘಟನೆ, ಚಳುವಳಿಯಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು. ಯಂಗ್ ಬ್ಲಡ್ ಸಮಯದಲ್ಲಿ ಸಮಾಜದ ಕುರಿತು ಚಿಂತಿಸಬೇಕು. 25 ವರ್ಷದವರಲ್ಲಿ ಯಾರನ್ನು ಮದುವೆಯಾಗಬೇಕು ಮತ್ತು ಸಮಾಜವನ್ನು ಏನಾದರೂ ಮಾಡಿ ಬದಲಾವವಣೆ ಮಾಡಬೇಕು ಎಂದು ಆಲೋಚನೆ ಇರುತ್ತದೆ. ಯುವಕರಾಗಿದ್ದಾಗ ತೆಗೆದುಕೊಂಡಿರುವ ನಿರ್ಧಾರವನ್ನು ನಡುವಯಸ್ಸಿನಲ್ಲಿ ನಾನು ಹಾಗೆ ಮಾಡಬಾರದಿತ್ತು, ಹೀಗೆ ಮಾಡಬಾರದಿತ್ತು ಎಂದು ಆಲೋಚಿಸುತ್ತಾರೆ. ಕಾರ್ಯಕರ್ತರು, ನಾಯಕರು ಶಿಸ್ತು ಪಾಲಿಸಬೇಕು. ಅಧಿಕಾರ ಇದ್ದಾಗ ಮಾತ್ರ ವಿಜೃಂಭಿಸುವವರು ನಾಯಕರಲ್ಲ. ಅಧಿಕಾರವಿಲ್ಲದಿದ್ದರೂ ಜನರ ಜೊತೆಗೆ ಇರಬೇಕು ಎಂದರು.

ಇಂದು ಸಂಘಟನೆ ತುಂಬಾ ಕಷ್ಟ. ಹತ್ತಿಪ್ಪತ್ತು ಜನರನ್ನು ಸೇರಿಸುವುದು ಕಷ್ಟ. ಒಡೆಯುವ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಬಂಧುತ್ವವನ್ನು ಕಟ್ಟೋಣ. ನಾವು ಮುಂದಿನ ದಿನಗಳಲ್ಲಿ ಸುಂದರವಾದ ದಿನಗಳನ್ನು ಕಾಣಲು ಸಾಧ್ಯ ಎಂದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು