March 25, 2023 4:09 pm

ಕ್ರಾಂತಿಯ ಬೀಜ ಎಂದಿಗೂ ವ್ಯರ್ಥವಾಗುವುದಿಲ್ಲ

Suresha N Shikaripura

ಕನ್ನಡ ಸ್ನಾತಕೋತ್ತರ ಪದವೀಧರರಾದ ಸುರೇಶ ಎನ್ ಶಿಕಾರಿಪುರ ಇವರು ಬಹುಮುಖಿ ಅಧ್ಯಯನಕಾರರು. ಕನ್ನಡ ಸಾಹಿತ್ಯ, ವಿಮರ್ಶೆ, ಸಂಶೋಧನೆ, ಶಾಸನ, ಇತಿಹಾಸ, ರಾಜಕಾರಣ, ಪರಿಸರ, ಧರ್ಮ, ಕೃಷಿ, ಛಾಯಾಗ್ರಹಣ ಇವರ ಆಸಕ್ತಿಯ ಕ್ಷೇತ್ರಗಳು. ಸಾಗರ, ಶಿಕಾರಿಪುರ, ಧಾರವಾಡ ಮೊದಲಾದೆಡೆ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ, ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಂಪ್ರದಾಯವಾದಿ ಜಾತಿಗ್ರಸ್ಥ ಸಮಾಜದಲ್ಲಿ ನೂರಾರು ವರ್ಷಗಳ ಹಿಂದೆಯೇ ಒಂದು ಹೆಣ್ಣು, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇಟ್ಟ ದಿಟ್ಟ ಹೆಜ್ಜೆಯ ಮಹಾ ಕಥೆಯನ್ನು ಎಲ್ಲರೂ ತಿಳಿಯಲೇಬೇಕು. ಭಾರತದಲ್ಲಿ ಇಂದು ಹೆಣ್ಣು ಶಿಕ್ಷಿತಳಾಗಿ ಎಲ್ಲಾ ರಂಗದಲ್ಲೂ ತನ್ನ ಇರುವಿಕೆಯನ್ನು ಸ್ಥಾಪಿಸಿದ್ದಾಳೆಂದರೆ, ತನ್ನ ಪ್ರತಿಭೆಯ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಇಂದು ಮುನ್ನುಗ್ಗಿದ್ದಾಳೆಂದರೆ ಅದರ ಹಿಂದಿರುವ ತಾಯಿಬೇರು ಬೇರಾರೂ ಅಲ್ಲ ಅಕ್ಷರದವ್ವ ಎಂದೇ ಖ್ಯಾತಳಾಗಿರುವ ಸಾವಿತ್ರಿ ಫುಲೆ ಅವರು. ಇವರ ಈ ಹೋರಾಟ ಮುಂದೆ ಶಾಹು ಮಹರಾಜರ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂಲಕ  ಮಹಿಳಾ ಹಕ್ಕಿನ ಬಹುದೊಡ್ಡ ದನಿಯಾಗಿ ಹೊರಹೊಮ್ಮಿತು.

ಕ್ರಾಂತಿಯ ಬೀಜ ವ್ಯರ್ಥವಾಗುವುದಿಲ್ಲ. ಸಮಾಜದ ಮನಸ್ಥಿತಿ ಕೊಳೆತು ಗೊಬ್ಬರವಾದಾಗಲೇ ಕ್ರಾಂತಿಯ ಬೀಜ ಮೊಳೆತು ಸಮೃದ್ಧ ಫಸಲಾಗಿ ಎಲ್ಲೆಲ್ಲೂ ಹಬ್ಬುವುದು. ಸಾವಿತ್ರಿಯವರು ಅಂದು ಊರಿದ ಶಿಕ್ಷಣ ಕ್ರಾಂತಿಯ ಕಾಳು; ಶಾಹು, ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜರ ಕಾಲಕ್ಕೆ ಮರವಾಯಿತು. ನಮ್ಮ ಕಾಲಕ್ಕೆ ಫಲ ಕೊಡುತ್ತಿದೆ. ಆದರೆ ಈಗ ಮತ್ತದೇ ಸಂಪ್ರದಾಯವಾದಿಗಳು ಅದೇ ದೇವರು ಧರ್ಮ ಕೋಮುವಾದ ಜಾತಿಶ್ರೇಷ್ಠತೆಯ ಒಳಸಂಚುಕೋರರು ಹೂಡಿರುವ ಬಲೆಗೆ ಬಲಿ ಬಿದ್ದಿರುವವರೆಲ್ಲರೂ ಚರಿತ್ರೆಯ ಪುಟಗಳಲ್ಲೊಮ್ಮೆ ಇಣುಕಬೇಕು. ಈಗ ತಾವು ನಂಬಿರುವ ಹಾಗು ತುಂಬಿಕೊಂಡಿರುವ ಎಲ್ಲ ಭ್ರಮೆಗಳು ಕಳಚಿ ಬೀಳುತ್ತವೆ. ಮಹಿಳೆಯರೇ ಈ ಮನ್ವಂತರಕ್ಕೆ ಮುನ್ನುಡಿ ಬರೆಯಬೇಕು. ಕ್ರಾಂತಿ ಮಹಿಳೆಯಿಂದಲೇ ಆಗುವುದೆಂಬುದನ್ನು ನಾನು ನಂಬಿದ್ದೇನೆ. ಬಾಬಾ ಸಾಹೇಬರು ನಂಬಿದ್ದೂ ಇದನ್ನೇ.

ಶಿಕ್ಷಣದ ಉದ್ದೇಶ ಅಕ್ಷರ ಕಲಿತು ಡಿಗ್ರಿ ಪಡೆದು ಒಂದು ನೌಕರಿಯನ್ನು ಹಿಡಿದು ಕೈತುಂಬ ಸಂಬಳ ಪಡೆದು ತನ್ನ ಕುಟುಂಬದ ಸುಖಕ್ಕೆ ಸೀಮಿತವಾಗಿ ಬದುಕುವುದಲ್ಲ. ಮಾನವರಾಗುವುದು, ನಿರ್ವಂಚನೆ ನಿಷ್ಕಪಟ ಗುಣ ಬೆಳೆಸಿಕೊಳ್ಳುವುದು. ನೈತಿಕತೆ, ಪ್ರಾಮಾಣಿಕತೆ, ಸಹಿಷ್ಣುತೆ ಮತ್ತು ತಾಯ್ತನದ ಹೃದಯ ಬೆಳೆಸಿಕೊಳ್ಳುವುದು. ಆ ಮೂಲಕ ಸಮಾಜದ ಕತ್ತಲೆಗೆ ಬೆಳಕಾಗುವುದು. ಕಲಿತ ಶಿಕ್ಷಣದಿಂದ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಶಾಹು ಮಹರಾಜ, ಅಂಬೇಡ್ಕರ, ನಾಲ್ವಡಿ ಕೃಷ್ಣರಾಜ ಇಂತವರೆಲ್ಲ ಸಮಾಜದ ಬೆಳಕಾದರು. ಈ ಭೂಮಿಯ ಮೇಲೆ ಮಾನವ ಎಂಬ ಜೀವಿ ಎಲ್ಲಿಯವರೆಗೆ ಅಸ್ಥಿತ್ವದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಇವರೆಲ್ಲರ ವಿಚಾರಗಳೂ ಜೀವಂತ.

ಶಿಕ್ಷಣದ ಉದ್ದೇಶ ಸ್ಥಾವರವಾಗುವುದಲ್ಲ ಜಂಗಮವಾಗುವುದು. ಕುವೆಂಪು ಹೇಳುತ್ತಾರಲ್ಲ! “ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರುವುದು, ಎಲ್ಲಿಯೂ ನಿಲ್ಲದಿರುವುದು, ಮನೆಯನೆಂದು ಕಟ್ಟದಿರುವುದು, ಅನಿಕೇತನವಾಗುವುದು”. ಆದರೆ ಈಗ ಮನುಷ್ಯರನ್ನು ಸ್ಥಾವರಗಳನ್ನಾಗಿಸುವ, ಸ್ಥಾವರವಾದಿಗಳನ್ನಾಗಿಸುವ ಕೆಲಸ ಅತ್ಯಂತ ವೇಗವಾಗಿ ಸಾಗುತ್ತಿದೆ. ಅಸಹನೆ ಬಿತ್ತಲು, ಮೌಢ್ಯದೆಡೆಗೆ ನೂಕಲು, ಅಂಧಕಾರಕ್ಕೆ ತಳ್ಳಲು, ದ್ವೇಷದ ಮತ್ತು ಹಿಂಸಾಚಾರದ ಆಯುಧಗಳನ್ನಾಗಿಸಲು ಇಂದು ಶಿಕ್ಷಣವನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ‌. ಈ ಹೊತ್ತಿನಲ್ಲಿ ನಾವು ಅಬ್ರಹಾಂ ಲಿಂಕನ್ನರು ತಮ್ಮ ಮಗನ ಉಪಾಧ್ಯಾಯನಿಗೆ ಬರೆದ ಪತ್ರ ನೆನಪು ಮಾಡಿಕೊಳ್ಳಬೇಕು. ಆ ಪತ್ರ; ಶಿಕ್ಷಕನು ಕೊಡುವ ಶಿಕ್ಷಣ ಯಾವ ಮೌಲ್ಯಗಳನ್ನು ಹೊಂದಿರಬೇಕು ಎಂಬುದನ್ನು ಹೇಳುತ್ತಲೇ ಏಕಕಾಲಕ್ಕೆ ಯಾವುದು ಶಿಕ್ಷಣ, ಅದರ ಉದ್ದೇಶ ಗುರಿಗಳು ಯಾವುದಾಗಿರಬೇಕು ಎಂಬುದನ್ನೂ ಹೇಳುತ್ತಿದೆ. ಆ ಪತ್ರದ ಸಾರಾಂಶ ಇಂತಿದೆ.

“ಆತ್ಮೀಯ ಅಧ್ಯಾಪಕ ಮಿತ್ರ, ಇಂದಿನಿಂದ ನನ್ನ ಮಗನ ಶಾಲೆ ಶುರುವಾಗುತ್ತಿದೆ. ಮೊದಲ ದಿನ ಬೇರೆ, ಖಂಡಿತ ಅವನಿಗೆ ಎಲ್ಲಾ ಹೊಸದಾಗಿ ಮತ್ತು ವಿಚಿತ್ರವಾಗಿ ತೋರಬಹುದು. ದಯವಿಟ್ಟು ನನ್ನ ಮಗನನ್ನು ಮಮತೆಯಿಂದ ಕಾಣು. ಮಗುವಿಗೆ ಇದೊಂದು ಖಂಡ ಖಂಡಾಂತರವನ್ನು ದಾಟಿ ಹೋಗುವ ಸಾಹಸ ತುಂಬಿದ ಅದ್ಭುತ ಯಾನವಾಗಬಹುದು. ಆ ಸಾಹಸ ಯಾತ್ರೆಯಲ್ಲಿ ಅವನು ದುರಂತ, ಯುದ್ಧ ಮತ್ತು ಅನಂತ ದುಃಖವನ್ನೂ ಕಾಣಬಹುದು. ಹಾಗಾಗಿ ಮಗುವಿಗೆ ಈ ಜೀವನ ಕಟ್ಟಿಕೊಳ್ಳಲು ಮತ್ತು ಬಾಳಲು ನಂಬಿಕೆಯ, ಪ್ರೀತಿಯ ಮತ್ತು ಧೈರ್ಯದ ಅವಶ್ಯಕತೆ ಇದೆ, ಹಿಂದೆಂದಿಗಿಂತಲೂ ಹೆಚ್ಚು ಅಗತ್ಯ ಈಗಿನ ಕಾಲದಲ್ಲಿದೆ. ಆದಕಾರಣ ನನ್ನ ಆತ್ಮೀಯ ಅಧ್ಯಾಪಕ, ಕರುಣಾಳುವಾಗಿ ಮಗುವಿನ ಕೈ ಹಿಡಿದು ಅವನು ಕಲಿಯಬೇಕಾದುದನೆಲ್ಲಾ ತಾಳ್ಮೆಯಿಂದ, ಸಹನೆಯಿಂದ ಕಲಿಸಿಕೊಡು. ಕಲಿಕೆ ಸಮಯದಲ್ಲಿ ಆದಷ್ಟು ಮೃದುವಾಗಿರು, ಸಾಧ್ಯವಾದರೆ. ಜಗದಲ್ಲಿ ಶತ್ರುಗಳಿದ್ದಂತೆ ಮಿತ್ರರೂ ಇರುವರು. ಎಲ್ಲಾ ಮನುಷ್ಯರು ಯೋಗ್ಯರಲ್ಲ, ಸತ್ಯಸಂಧರೂ ಅಲ್ಲ, ಆದರೆ ಈ ಜಗದಲ್ಲಿ ಪ್ರತಿ ಫಟಿಂಗನಿಗೆ ಸಮನಾಗಿ ಒಬ್ಬ ಸಭ್ಯ ಮನುಷ್ಯ; ಪ್ರತಿ ಕುಟಿಲ, ದುಷ್ಟ ರಾಜಕಾರಣಿಗೆ ಸಮನಾಗಿ ನಿಷ್ಠಾವಂತ, ಸಮರ್ಪಣ ಮನೋಭಾವದ ನಾಯಕನಿರುವನು ಎಂದು ತಿಳಿವಳಿಕೆ ಕೊಡು. ಹಾಗೆಯೆ, ಎಲ್ಲೋ ಸಿಕ್ಕ ಒಂದು ರುಪಾಯಿಗಿಂತ, ದುಡಿದು ಗಳಿಸಿದ ಹತ್ತು ಪೈಸೆಯ ಮೌಲ್ಯ ಹೆಚ್ಚೆಂದು ಹೇಳಿಕೊಡು. ಸೋಲುವುದು, ಫೇಲಾಗುವುದು, ಮೋಸ ಮಾಡುವುದಕ್ಕಿಂತ ಮೇಲೆಂದು ಹೇಳಿಕೊಡು, ಸೋತಾಗ ಘನತೆಯಿಂದ ವರ್ತಿಸುವುದು ಹೇಗೆಂದು ಹೇಳಿಕೊಡು, ಹಾಗೆಯೇ ಗೆದ್ದಾಗ ಸಂತೋಷಿಸುವುದನ್ನು ಸಭ್ಯನಾಗಿ ಉಳಿಯುವುದನ್ನು ಹೇಳಿಕೊಡು. ತನ್ನ ಸಹಪಾಟಿಗಳೊಡನೆ, ಜನರೊಡನೆ ಸಭ್ಯನಾಗಿ ಮೃದುವಾಗಿ ವರ್ತಿಸುವುದು ಹೇಳಿಕೊಡು. ಹಾಗೆಯೆ ಕಠಿಣರ ಜೊತೆ ಕಠಿಣವಾಗಿ ವರ್ತಿಸುವುದನ್ನು, ಅಸೂಯೆ, ದ್ವೇಷದಿಂದ ದೂರವಿರುವುದು ಹೇಗೆಂದು ಹೇಳಿಕೊಡು. ಚಿಕ್ಕ ಮುಗುಳು ನಗೆಯ ಮಹತ್ವವನ್ನು, ಕಣ್ಣೀರು ಹಾಕುವುದು ಅವಮಾನವಲ್ಲವೆಂದು ಕಲಿಸಿಕೊಡು. ಸಾಧ್ಯವಾದರೆ, ದುಃಖದಲ್ಲಿರುವಾಗ ನಗುವುದನ್ನು ಕಲಿಸಿಕೊಡು. ಸೋತಾಗ ಸಿಗುವ ಮತ್ತೊಂದು ಅವಕಾಶ, ಸೋಲಿನಲ್ಲಿರುವ ಪಾಠ, ಅಭ್ಯುದಯದ ಬಗ್ಗೆ ಹೇಳಿಕೊಡು. ಹಾಗೆಯೆ ಗೆದ್ದಾಗ ಉಂಟಾಗುವ ಖಾಲಿತನ, ಹತಾಶೆಯ ಬಗ್ಗೆ ಕೂಡ. ಸಿನಿಕರನ್ನು ಅಲಕ್ಷಿಸುವುದನ್ನು ಕಡೆಗಣಿಸುವುದನ್ನು ಹೇಳಿಕೊಡು.

ನಿನಗೆ ಸಾಧ್ಯವಾದರೆ ಮಗುವಿಗೆ ಪುಸ್ತಕಗಳ ಅದ್ಭುತ ಲೋಕ ಪರಿಚಯಿಸು, ಆದರೆ ಆಕಾಶದಲ್ಲಿ ಹಾರುವ ಹಕ್ಕಿಯ ರಮ್ಯತೆಯ ಬಗ್ಗೆ, ಸೂರ್ಯನ ರಶ್ಮಿಯಲ್ಲಿ ಹಾರುವ ದುಂಬಿಗಳ ಝೇಂಕಾರದ ಬಗ್ಗೆ ಮತ್ತು ಹಸಿರು ಬೆಟ್ಟದಲ್ಲಿ ನಗುವ ಹೂವಿನ ಬಗ್ಗೆ ಯೋಚಿಸುವುದಕ್ಕೆ ಸಮಯ ಹೊಂದಿಸಿಕೊಳ್ಳುವುದನ್ನು ಹೇಳಿಕೊಡು. ಜಗತ್ತಿನ ಸಮಸ್ತರು ಟೀಕಿಸುವಾಗ, ಅವನ ವಿಚಾರಗಳಲ್ಲಿ ಅವನಿಗೆ ಅಚಲ ನಂಬಿಕೆ ಇಟ್ಟುಕೊಳ್ಳುವ ಬಗೆ ಅವನಿಗೆ ತಿಳಿಸಿಕೊಡು. ಕುರಿಯಂತೆ ಎಲ್ಲರೂ ಮಾಡಿದ್ದನ್ನೇ ನನ್ನ ಮಗನೂ ಅನುಕರಿಸುವುದು ಬೇಡ. ಗುಂಪಲ್ಲಿದ್ದರೂ ಸ್ಪಷ್ಟವಾಗಿ, ಸ್ವತಂತ್ರವಾಗಿ ಯೋಚಿಸುವುದನ್ನು ಹೇಳಿಕೊಡು. ಆ ಶಕ್ತಿಯನ್ನು ಅವನಲ್ಲಿ ತುಂಬು. ಎಲ್ಲರ ಅಭಿಪ್ರಾಯಗಳನ್ನು, ಮಾತನ್ನು ತಾಳ್ಮೆಯಿಂದ ಕೇಳುವುದ ಹೇಳಿಕೊಡು. ಆದರೆ ಕೇಳಿದ್ದನ್ನೆಲ್ಲ ಸೋಸಿ, ಬಸಿದು ಸತ್ಯವನ್ನು ಮತ್ತು ಒಳ್ಳೆಯದನ್ನು ಮಾತ್ರ ಗ್ರಹಿಸುವುದನ್ನು ಹೇಳಿಕೊಡು. ಅವನ ಬುದ್ಧಿವಂತಿಕೆಯನ್ನು, ಸಾಮರ್ಥ್ಯವನ್ನು ಅತ್ಯಂತ ಹೆಚ್ಚು ಮೆಚ್ಚುವ, ಹೆಚ್ಚು ಮೌಲ್ಯ ಕೊಡುವವನಿಗೆ ಮೀಸಲಿಡಲು ಹೇಳಿಕೊಡು. ಆದರೆ ತನ್ನ ಆತ್ಮ ಮತ್ತು ಹೃದಯವನ್ನ ಹಣಕ್ಕೆ ಮಾರಿಕೊಳ್ಳದಿರಲು ಹೇಳು. ನಿರ್ಭೀತಿಯಿಂದ ವರ್ತಿಸುವ ಉತ್ಸುಕತೆ, ಧೈರ್ಯದಿಂದ ವರ್ತಿಸುವ ಸಹನೆ ಹೇಳಿಕೊಡು, ತನ್ನ ಮೇಲೆ ಅಚಲ ನಂಬಿಕೆ ಬೆಳೆಸಿಕೊಳ್ಳುವ ಮಹತ್ವ ಹೇಳಿಕೊಡು. ತನ್ನ ಮೇಲೆ ಅಚಲ ನಂಬಿಕೆ ಇದ್ದವ ದೇವರನ್ನು ಮನುಕುಲವನ್ನು ಮತ್ತು ಮನುಷ್ಯತ್ವವನ್ನು ನಂಬುವನು.

ಪ್ರಿಯ ಅಧ್ಯಾಪಕ, ಇದೆಲ್ಲಾ ಹೇಳಿಕೊಡಲು ನಿನ್ನ ಶಕ್ತಿಮೀರಿ ಪ್ರಯತ್ನಿಸು. ಇದು ನನ್ನ ಆದೇಶ ಹಾಗು ನಮ್ರ ವಿನಂತಿ. ನನ್ನ ಮಗನೋ ಮುದ್ದಾದ ಪುಟ್ಟ ಹುಡುಗ, ತುಂಬಾ ಒಳ್ಳೆಯವನು ಕೂಡ”.

ಅಂದು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ಮಾಡಿದ್ದು ಇದನ್ನೇ. ಶತಮಾನಗಳ ದಾರಿದ್ರ್ಯದಿಂದ ಹೆಣ್ಣನ್ನು ಹೊರತರುವ ಮಹಾ ಕ್ರಾಂತಿ ಅದು. ಯಾವಾಗ ಶಿಕ್ಷಿತರೆಲ್ಲ ಚರಿತ್ರೆಯನ್ನು ಫ್ಯಾಕ್ಟ್ ಚೆಕ್ ಮಾಡಲು ತೊಡಗಿದರೋ ಆಗಿನಿಂದಲೇ ಮನುವಾದದ ಬೇರು ಅದುರತೊಡಗಿತು. ಇದರ ಮುಂದಾಲೋಚನೆ ಇದ್ದ ಮನುವರ್ಗ ಅಂದು ಸಾವಿತ್ರಿಬಾಯಿ ಅವರಿಗೆ ಕೊಟ್ಟ ಉಪಟಳ ಅಸಾಮಾನ್ಯವಾದುದು. ಸಮಾಜ ಯಾವಾಗ ಕೊಳೆತು ಗೊಬ್ಬರವಾಗುತ್ತದೋ ಆ ಗೊಬ್ಬರದಿಂದಲೇ ಕ್ರಾಂತಿಯ ಬೀಜ ಮೊಳೆಯುವುದು. ಸಮಾನತೆ ಹೂವನ್ನು ಅರಳಿಸುವುದು. ಜಗತ್ತಿನ ಎಲ್ಲ ದೇಶಗಳಲ್ಲೂ ನಡೆದಿರುವುದು ಇದೇ. ಸಂಪ್ರದಾಯವಾದಿಗಳು, ಪ್ರಗತಿ ವಿರೋಧಿಗಳು, ಧರ್ಮ ಮತ್ತು ಜನಾಂಗೀಯ ಮೇಲರಿಮೆಯ ಮೂಢರು ಎಲ್ಲೆಲ್ಲಿ ಅಟ್ಟಹಾಸ ಮೆರೆದರೋ ಅಲ್ಲಲ್ಲಿಂದಲೇ ಬುದ್ಧ, ಸಾಕ್ರೆಟೀಸ್, ಕೊಪರ್ನಿಕಸ್, ಗೆಲಿಲಿಯೊ, ಡಾರ್ವಿನ್, ಐನ್ಸ್ಟೀನ್, ಮಾರ್ಟಿನ್ ಲೂಥರ್, ಮಾರ್ಕ್ಸ್, ಲೆನಿನ್, ಅಂಬೇಡ್ಕರ್, ನೆಲ್ಸನ್ ಮಂಡೇಲರಂಥವರು ಉದಿಸಿ ಬಂದದ್ದು. ಜಗತ್ತಿನಲ್ಲಿ ಕೊನೆಗೂ ಸತ್ಯವೇ ನಿಂತಿರುವುದು.

ನಾವೀಗ ಯಾವ ಶಿಕ್ಷಣ ಮಾನವೀಯ ಮೌಲ್ಯಗಳನ್ನು ಬಿತ್ತುವ,  ಸಹನೆ ಮತ್ತು ಶಾಂತಿ ಪ್ರೇಮದ ಸಮಾನತೆಯ ಸಮಾಜ ಕಟ್ಟುವ ಸಾಧನವಾಗಿತ್ತೋ ಅದರ ಉದ್ದೇಶಗಳನ್ನೇ ಬುಡಮೇಲು ಮಾಡಿ ಅದೇ ಶಿಕ್ಷಣ ವ್ಯವಸ್ಥೆಯನ್ನು ಧಾರ್ಮಿಕತೆ ಮತ್ತು ಜನಾಂಗಿಕ ದ್ವೇಷದ ಸರಕಾಗಿಸುತ್ತಿರುವುದನ್ನು ನೋಡುತ್ತಿದ್ದೇವೆ. ಶಿಕ್ಷಣದ ಖಾಸಗೀಕರಣ ಮತ್ತು ಕೇಸರೀಕರಣ ಶ್ರೇಣಿ ವ್ಯವಸ್ಥೆಯನ್ನು ಮರುಸ್ಥಾಪಿಸುವ ಉದ್ದೇಶವನ್ನು ಹೊಂದಿರುವುದು ಗುಟ್ಟಾಗಿ ಉಳಿದಿಲ್ಲ. ಕಳೆದ ವರ್ಷ ಸರ್ಕಾರವೇ ಪಠ್ಯ ಪುಸ್ತಕದಲ್ಲಿ ‘ಹೊಸ ಧರ್ಮಗಳ ಉದಯ’ ಪಠ್ಯ ಭಾಗವನ್ನು ಮಕ್ಕಳಿಗೆ ಬೋಧಿಸದಿರುವಂತೆ ಆದೇಶ ಹೊರಡಿಸಿತ್ತು. ಪಠ್ಯದಿಂದ ಟಿಪ್ಪು ಸುಲ್ತಾನನ ಇತಿಹಾಸವನ್ನು ತೆಗೆದು ಹಾಕಲು ಮುಂದಾಗಿತ್ತು. ಶಾಲೆಗಳಲ್ಲಿ ಒಂದೇ ಮಾತರಂ ಹಾಡಿಸಬೇಕು, ಸದಾವತ್ಸಲೆಯ ಪಾರಾಯಣ ಮಾಡಬೇಕು ಎಂಬೆಲ್ಲಾ ಕೂಗೆದ್ದಿರುವುದು ಶಿಕ್ಷಣವನ್ನು ಧಾರ್ಮಿಕ ಮೂಲಭೂತವಾದಿಗಳನ್ನು ಸೃಷ್ಟಿಸುವ ಫ್ಯಾಕ್ಟರಿಯನ್ನಾಗಿಸುತ್ತಿರುವುದರ ಭಾಗವೇ ಆಗಿದೆ. ಎಷ್ಟೋ ಮತೀಯವಾದಿ ಹಿನ್ನೆಲೆಗೆ ಸೇರಿದ ಸಂಘ ಸಂಸ್ಥೆಗಳ ಶಾಲಾ ಕಾಲೇಜುಗಳಲ್ಲಿ ದಶಕಗಳಿಂದಲೇ ಈ ಪ್ರಾಕ್ಟೀಸ್ ನಡೆಯುತ್ತಿದೆ. ಕಾಲೇಜಿಗೆ ಕೇಸರಿ ಶಾಲು ಹೊದ್ದು ಹೋಗುವುದು, ಪ್ರತಿ ಶಾಲೆಗಳಲ್ಲೂ ತ್ರಿವರ್ಣ ಧ್ವಜ ಹಿಡಿದು ನಿಂತಿರುವ ಭಾರತ ಮಾತೆಯ ಕಲ್ಪಿತ ಚಿತ್ರವಿರುವ ಫೋಟೋಗಳು ಮರೆಯಾಗಿ ಆ ಸ್ಥಾನವನ್ನು ಭಗವಾಧ್ವಜ ಹಿಡಿದಿರುವ ಸಂಘಿ ಮಾತೆಯ ಫೋಟೋಗಳು ಆಕ್ರಮಿಸಿಕೊಂಡಿರುವುದು,  ಶಾಲೆಗಳಲ್ಲಿ ಅದ್ದೂರಿಯಾಗಿ ಆಚರಿಸುವ ಕೃಷ್ಣ ಜನ್ಮಾಷ್ಠಮಿ, ಕೇಸರಿ ಬಣ್ಣದಿಂದ ಶಾಲೆಯ ಹೊರ ಗೋಡೆ ಮತ್ತು ಕೊಠಡಿಗಳನ್ನು ತುಂಬುತ್ತಿರುವುದು. ಯೋಗಭ್ಯಾಸ, ಭಗವದ್ಗೀತೆಯ ಪಠಣ, ವಿದ್ಯಾರ್ಥಿಗಳು ಗುರುಗಳಿಗೆ ಹೇಗೆ ನಮಸ್ಕರಿಸಬೇಕು, ಯಾವ ರೀತಿಯ ಬಟ್ಟೆ ಉಡಬೇಕು, ಕಾಲಿ ಹಣೆ ಬಿಟ್ಟಿರಬಾರದು, ಶಾಲೆಯಲ್ಲಿ ಪೌಷ್ಟಿಕ ಆಹಾರವಾಗಿ ಮಕ್ಕಳಿಗೆ ಮೊಟ್ಟೆ ಕೊಡಬಾರದು; ಇಂತವೆಲ್ಲಾ ಕೇಸರೀಕರಣದ ಭಾಗವೇ ಆಗಿದ್ದಾವೆ.  ಬೋಧಿಸುವ ಶಿಕ್ಷಕ ಕೂಡಾ ಇದನ್ನೇ ಕಲಿತು ಬಂದವನೇ ಆಗಿರುವ ಸಾಧ್ಯತೆಯೇ ಹೆಚ್ಚಿರುವಾಗ ಏನು ಪರಿಹಾರವಿದೆ? ಒಲೆ ಹೊತ್ತಿ ಉರಿದಡೆ ನಿಲಬಹುದಲ್ಲದೆ; ಧರೆ ಹೊತ್ತಿ ಉರಿದರೆ ನಿಲಬಾರದು. ಪಠ್ಯ ಪುಸ್ತಕದಿಂದ ಮುಂದೆ ಗಾಂಧಿಯೂ ಇಲ್ಲವಾಗಬಹುದು. ಗೋಡ್ಸೆ ಬರಬಹುದು ಎಲ್ಲ ಚಿಂತಕರೂ ವಿಜ್ಞಾನಿಗಳೂ ಸಂಶೋಧಕರೂ ದಾರ್ಶನಿಕರೂ ಮರೆಯಾಗಿ ವಿಷ್ಣುವಿನ ಹತ್ತು ಅವತಾರಗಳು, ಪುರಾಣದ ಟೊಳ್ಳು ಕತೆಗಳು, ಶನಿ ಮಹಾತ್ಮೆ, ಸತ್ಯನಾರಾಯಣ ಕಥೆ, ಪಾತಿವ್ರತ್ಯದ ಮೌಲ್ಯಗಳು, ಬಡ ಬ್ರಾಹ್ಮಣನ ಕಷ್ಟಕತೆಗಳು, ಚಾತುರ್ವರ್ಣ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ವ್ಯವಸ್ಥಿತ ಬೋಧನೆಗಳೂ ನಡೆಯಬಹುದು. ಅಂದರೆ; ಶಿಕ್ಷಣ ತನ್ನ ಮೂಲ ಆಶಯಗಳನ್ನು ಕಳೆದುಕೊಂಡು ಬಹುಸಂಖ್ಯಾತ ಶೂದ್ರ ವರ್ಗವನ್ನು ಅವರ ಹಳೆಯ ಸ್ಥಿತಿಗೆ ತಳ್ಳುವ, ಅಲ್ಪಸಂಖ್ಯಾತ ಮನುವರ್ಗವನ್ನು ಅವರ ಹಳೆಯ ವೈಭವದ ದಿನಗಳಿಗೆ ಮರಳಿಸುವ ವ್ಯವಸ್ಥಿತ ಮಾರ್ಗವಾಗುತ್ತಿದೆ.

ಇದನ್ನು ತಪ್ಪಿಸಲು ಜಾಗೃತಿಯೊಂದೇ ನೆರವಾಗಬಲ್ಲದು. ವೇದಗಳಿಗೆ ಮರಳಿ ಎಂದವರಿಗೆ ಕಿವುಡಾಗಿ ಚರಿತ್ರೆಯ ಸತ್ಯಗಳಿಗೆ ಮರಳಿ, ಬುದ್ಧನೆಡೆಗೆ ಬಸವನೆಡೆಗೆ, ಮಹಾವೀರನೆಡೆಗೆ, ಜ್ಯೋತಿಬಾ, ಸಾವಿತ್ರಿಬಾಯಿ ಫುಲೆ, ಶಾಹು, ಅಂಬೇಡ್ಕರ್, ನಾಲ್ವಡಿಯವರೆಡೆಗೆ ನಡೆಯಬೇಕು. ಶಿಕ್ಷಣವನ್ನು ಗುರುಕುಲದೆಡೆಗೆ ಒಯ್ಯುವುದ ತಡೆದು ಮನುಕುಲದೆಡೆಗೆ ಅದರ ಸಮಾನತೆ ಸಾಧಿಸುವುದರೆಡೆಗೆ ಕರೆದೊಯ್ಯಬೇಕು. ಫುಲೆ ದಂಪತಿ ಹಾಕಿದ ಬುನಾದಿ ಇದೇ ಆಗಿತ್ತು. ಇದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಅವರ ತ್ಯಾಗಕ್ಕೆ ಗೌರವ ಸಿಗುತ್ತದೆ ಮತ್ತು ಅವರ ಆಶಯಗಳನ್ನು ಈಡೇರಿಸಲು ಮಾರ್ಗ ದೊರೆಯುತ್ತದೆ.

  • ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ