ಬೆಳಗಾವಿ: ದೇಶದಲ್ಲಿ ಶೋಷಿತ, ಶೂದ್ರ, ದಲಿತ ಮತ್ತು ಮಹಿಳೆಯರಿಗೆ ಶಿಕ್ಷಣ ಕೊಟ್ಟ ಶ್ರೇಯಸ್ಸು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ದಂಪತಿಗೆ ಸಲ್ಲಬೇಕು ಎಂದು ಸಂಶೋಧಕ ಡಾ.ಪ್ರದೀಪ್ ಮಾಲ್ಗುಡಿ ಹೇಳಿದರು.
ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಸಾವಿತ್ರಿ ಬಾಯಿ ಫುಲೆ ಜಯಂತಿಯಂದು ಮಾತಾಡಿದ ಅವರು, ದೇಶದಲ್ಲಿ ಶೇ. 85ರಷ್ಟು ಜನರಿಗೆ ಅಕ್ಷರ ಜ್ಞಾನ ವಂಚನೆಯ ಮೂಲಕ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯವನ್ನು ಮನುವಾದಿಗಳು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿದ ಫುಲೆ ದಂಪತಿ ಶೋಷಿತ, ಶೂದ್ರ, ದಲಿತ ಮತ್ತು ಮಹಿಳೆಯರಿಗೆ ಶಿಕ್ಷಣ ಕೊಟ್ಟರು ಎಂದರು.
ಫುಲೆ ದಂಪತಿ ಶೋಷಿತ ಸಮುದಾಯಗಳಿಗೆ ತಮ್ಮ ತನು ಮನ ಧನಗಳನ್ನು ವ್ಯಯಿಸಿ ಶಿಕ್ಷಣ ಕೊಟ್ಟರು. ಇದಕ್ಕೆ ಯಥಾಸ್ಥಿತಿವಾದಿಗಳು ನಿರಂತರವಾಗಿ ಅಡ್ಡಿಯಾದರು. ಫುಲೆ ದಂಪತಿಯನ್ನು ಅವರ ಮನೆಯಿಂದ ಹೊರಹಾಕುವಂತಹ ಪರಿಸ್ಥಿತಿಯನ್ನು ಸೃಷ್ಟಿಸಲಾಯಿತು. ಇವೆಲ್ಲವುಗಳನ್ನು ಮೀರಿ 30ಕ್ಕಿಂತ ಹೆಚ್ಚು ಶಾಲೆಗಳನ್ನು ಶೂದ್ರ, ದಲಿತ ಮತ್ತು ಮಹಿಳೆಯರ ಶಿಕ್ಷಣಕ್ಕಾಗಿ ತೆರೆದರು ಎಂದರು.
ದೇಶದ ಜನಸಂಖ್ಯೆಯ ಅರ್ಧದಷ್ಟಿದ್ದ ಮಹಿಳೆಯರಿಗೆ ಶಿಕ್ಷಣ ನಿರಾಕರಿಸುವುದರ ಜೊತೆಗೆ, ಅವರನ್ನು ಜೀವಂತವಾಗಿ ಸುಡುವ ಸತಿ ಪದ್ಧತಿ ಆಚರಣೆಯಲ್ಲಿತ್ತು. ಯಥಾಸ್ಥಿತಿವಾದಿಗಳು ಬಾಯಲ್ಲಿ ಯಾತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾಃ (ನಾರಿಯರು ಎಲ್ಲಿ ಪೂಜೆಗೊಳಗಾಗುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ) ಎಂದು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ತಮ್ಮ ಅಕ್ಕ, ತಂಗಿ, ತಾಯಿಯನ್ನ ಜೀವಂತವಾಗಿ ಸುಟ್ಟರು. ಇದನ್ನು ನಾವೆಲ್ಲ ಗರ್ವದಿಂದ ಹೇಳಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ನಾವೆಲ್ಲ ಅಕ್ಷರ ಕಲಿಯಲು ಸಾಧ್ಯವಾಗಿದ್ದು ಜೋತಿಬಾ ಫುಲೆ ದಂಪತಿಯಿಂದ. ಬಾಲ್ಯವಿವಾಹವಾಗಿದ್ದ ಜ್ಯೋತಿಬಾ ದಂಪತಿ, ಸ್ವತಃ ಶಿಕ್ಷಣ ಕಲಿಯಲು ಪ್ರಯಾಸಪಟ್ಟರು. ಯಥಾಸ್ಥಿತಿವಾದಿಗಳು ಇವರು ಕೂಡ ಶಿಕ್ಷಣ ಕಲಿಯಲು ಅಡ್ಡಿಯಾದರು. ಆದರೆ ಎಲ್ಲ ಅಡೆತಡೆಗಳನ್ನು ಎದುರಿಸಿ ಜ್ಯೋತಿಬಾ ಮತ್ತು ಸಾವಿತ್ರಿ ಬಾ ಫುಲೆ ಶಿಕ್ಷಣ ಕಲಿತು ತಳಸಮುದಾಯಗಳಿಗೆ ಶಿಕ್ಷಣ ನೀಡಿದರು ಎಂದರು.
ಫುಲೆ ದಂಪತಿ ವಿಧವಾ ವಿವಾಹಕ್ಕೆ ಉತ್ತೇಜನ, ಅಬಲಾಶ್ರಮಗಳನ್ನು ತೆರೆದು, ಶೂದ್ರ, ದಲಿತ, ಮಹಿಳೆಯರಿಗೆ ಈಗಿನ ಸರ್ಕಾರಗಳು ಕೊಡುವ ವಿದ್ಯಾರ್ಥಿ ವೇತನದ ಮಾದರಿಯಲ್ಲಿ ಸ್ಟೈಫಂಡ್ ಕೊಟ್ಟು ವಿದ್ಯೆ ಕಲಿಸಿದರು. ಇವರಿಗೆ ಹೆಗಲೆಣೆಯಾಗಿ ಫಾತಿಮಾ ಶೇಕ್ ನಿಂತರು ಎಂದರು.
ಶಾಲೆಗೆ ಬೋಧನೆಗೆ ತೆರಳುವ ಸಮಯದಲ್ಲಿ ಯಥಾಸ್ಥಿತಿವಾದಿಗಳು ಸಾವಿತ್ರಿ ಬಾಯಿ ಫುಲೆಯವರು ಶಾಲೆಗೆ ತೆರಳದಂತೆ ತಡೆಯಲು ಅನೇಕ ಹೀನ ಕೃತ್ಯಗಳಿಗೆ ಕೈಹಾಕಿದರು. ಸಾವಿತ್ರಿಯವರ ಮೇಲೆ ಸಗಣಿ ನೀರನ್ನು ಎರಚುತ್ತಾರೆ. ಆಗ ಅದಕ್ಕೆ ಕೂಡ ಪರಿಹಾರ ಕಂಡುಕೊಳ್ಳುವ ಸಾವಿತ್ರಿಯವರು, ತಮ್ಮ ಚೀಲದಲ್ಲಿ ಇನ್ನೊಂದು ಜೊತೆ ಬಟ್ಟೆಯನ್ನು ಇಟ್ಟುಕೊಂಡು ಹೋಗಿ, ಶಾಲೆಯಲ್ಲಿ ಬಟ್ಟೆ ಬದಲಿಸಿ, ಮಕ್ಕಳಿಗೆ ವಿದ್ಯೆ ಕಲಿಸಿದರು ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಮಹಾಲಿಂಗಪ್ಪ ಆಲಬಾಳ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತಂದೆ ರಾಮ್ ಜಿ ಸಕ್ಪಾಲ್ ಅವರು ಫುಲೆ ದಂಪತಿಯ ಶ್ರಮದಿಂದ ಕಲಿತರು. ಅವರು ಕಲಿತ ಕಾರಣದಿಂದಾಗಿ ಅಂಬೇಡ್ಕರ್ ಅವರು ಕಲಿತರು. ಇಲ್ಲವಾಗಿದ್ದಲ್ಲಿ ನಮಗೆಲ್ಲ ಶಿಕ್ಷಣ ಸಿಗುತ್ತಿರಲಿಲ್ಲ ಎಂದರು.
ಆಗಿನ ಕಾಲದಲ್ಲಿ ಮೇಲ್ಜಾತಿಯ ಜನ ಮಾತ್ರ ವಿದ್ಯೆ ಕಲಿಯುತ್ತಿದ್ದರು. ತಳಸಮುದಾಯದವರು ಶಿಕ್ಷಣ ಕಲಿತರೆ ಕೈ, ನಾಲಿಗೆ, ತಲೆ ಕತ್ತರಿಸುವ ಅಮಾನವೀಯ ಆಚರಣೆಗಳು ಜಾರಿಯಲ್ಲಿದ್ದವು. ರೋಗ ಬಂದರೆ ತಳಸಮುದಾಯದ ಜನರಿಗೆ ಚಿಕಿತ್ಸೆ ಸಿಗುತ್ತಿರಲಿಲ್ಲ. ದೇಶದಲ್ಲಿ ಎಲ್ಲ ಸಮುದಾಯದ ಜನರಿಗೆ ಚಿಕಿತ್ಸೆ ನೀಡಿದ ಶ್ರೇಯಸ್ಸು ಬ್ರಿಟಿಷರಿಗೆ ಸಲ್ಲಬೇಕು ಎಂದರು.
ಜನರನ್ನು ಮುಟ್ಟದೆ ದೂರ ಇಟ್ಟ ಸಮಾಜದಲ್ಲಿ ಪ್ಲೇಗ್ ನಂತಹ ಭೀಕರ ಕಾಯಿಲೆಗಳಿಂದ ಜನ ಬಲಿಯಾಗುತ್ತಿದ್ದರು. ಇಂತಹ ಸಮಯದಲ್ಲಿ ಸ್ವತಃ ಆಸ್ಪತ್ರೆಗಳನ್ನು ತೆರೆದ ಫುಲೆ ದಂಪತಿ ತೆರೆದರು. ಸ್ವತಃ ದಲಿತ ಮಗುವಿಗೆ ಪ್ಲೇಗ್ ರೋಗಕ್ಕೆ ಚಿಕಿತ್ಸೆ ನೀಡುತ್ತ ಸಾವಿತ್ರಿ ಬಾಯಿ ಫುಲೆ ಪ್ಲೇಗ್ ರೋಗಕ್ಕೆ ತುತ್ತಾದರು ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಚಿಂತಕ ಸುರೇಶ್ ಶಿಕಾರಿಪುರ, ಶೋಷಿತ ಸಮುದಾಯಗಳಿಗೆ ಬಿಡುಗಡೆಯ ಹಾದಿಯನ್ನು ತೋರಿದ ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಕೋಮು, ಜನಾಂಗ, ಧರ್ಮ ದ್ವೇಷವನ್ನು ಬಿತ್ತುವ ಕೆಲಸ ನಡೆಯುತ್ತಿದೆ ಎಂದರು.
ಸೇವೆ, ದಾನವಾಗಬೇಕಿದ್ದ ಶಿಕ್ಷಣ ಇಂದು ಶಿಕ್ಷಣ ಮಾರಾಟದ ವಸ್ತುವಾಗಿದೆ. ಶಿಕ್ಷಣ ಎಂಬುದು ಕೇವಲ ತಾನು ಮತ್ತು ತಮ್ಮ ಕುಟುಂಬದವರ ರಕ್ಷಣೆಗೆ ಎಂಬಂತಾಗಿದೆ. ಶಿಕ್ಷಣದ ಮೂಲಕ ಪದವಿ ಪಡೆದು, ಸರ್ಕಾರಿ ಉದ್ಯೋಗ ಹಿಡಿದು, ತಾನು ಮತ್ತು ತನ್ನ ಕುಟುಂಬದವರು ಚನ್ನಾಗಿದ್ದರೆ ಸಾಕು ಎಂಬಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಸಾಂಸ್ಕೃತಿ ತಂಡದ ಸಂಚಾಲಕ ಆಂಜನಪ್ಪ ಲೋಕಿಕೆರೆ, ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ ಮತ್ತು ನಿದ್ದೆ ಬಿಟ್ಟು ನೀ ಎದ್ದು ಬಾರಮ್ಮ ಕ್ರಾಂತಿಗೀತೆಯನ್ನು ಹಾಡಿದರು. ಘಟಪ್ರಭದ ಸಿಬ್ಬಂದಿ ಭಾಗವಹಿಸಿದ್ದರು.