ಸಮಾಜದ ಈವರೆಗಿನ ಲಿಖಿತ ಚರಿತ್ರೆಯು ಪರಸ್ಪರ ವಿರೋಧಿ ವರ್ಗಗಳ ನಡುವಿನ ಸಂಘರ್ಷದ ಕಥೆಯಾಗಿದೆ. ಈ ಸಂಘರ್ಷವು ಒಂದು ಸಾಮಾಜಿಕ ವ್ಯವಸ್ಥೆಯು ನಶಿಸಿ ಬೇರೊಂದು ವ್ಯವಸ್ಥೆಯು ಅಸ್ತಿತ್ವಕ್ಕೆ ಬರಲು ಕಾರಣವಾಗುತ್ತದೆ. ಹೀಗೆಯೇ ಗುಲಾಮಗಿರಿ ಸಮಾಜವು ಸಾಮಂತಶಾಹಿ ಸಮಾಜಕ್ಕೆ, ಸಾಮಂತ ಶಾಹಿ ಸಮಾಜವು ಬಂಡವಾಳಶಾಹಿ ಸಮಾಜಕ್ಕೆ ದಾರಿ ಮಾಡಿಕೊಟ್ಟವು. ಜಗತ್ತಿನ ಒಂದು ಭಾಗದಲ್ಲಿ ಬಂಡವಾಳಶಾಹಿ ಪದ್ಧತಿ ಜಾರಿಯಲ್ಲಿರುವಾಗಲೇ ಮತ್ತೊಂದು ಭಾಗದಲ್ಲಿ ಸಮಾಜವಾದಿ ವ್ಯವಸ್ಥೆ ಜಾರಿಗೆ ಬಂದಿತು. ಇಂದು ಜಗತ್ತಿನ ಬಹುಪಾಲು ದೇಶಗಳಲ್ಲಿ ಬಂಡವಾಳಶಾಹಿ ಪದ್ಧತಿ ಜಾರಿಯಲ್ಲಿದ್ದರೆ, ಕೆಲವೇ ದೇಶಗಳಲ್ಲಿ ಸಮಾಜವಾದಿ ವ್ಯವಸ್ಥೆ ಜಾರಿಯಲ್ಲಿದೆ. ಉದಾಹರಣೆಗೆ ಚೀನಾ, ಕ್ಯೂಬಾ, ಲಾವೋಸ್, ವಿಯೆಟ್ನಾಂ.
‘ಪ್ರಜಾಪ್ರಭುತ್ವ’ ಮತ್ತು ‘ಸಮಾಜವಾದ’ ಎಂಬ ರಾಜಕೀಯ ವ್ಯವಸ್ಥೆಗಳಲ್ಲಿ ಜನರ ನಡುವಿನ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳನ್ನು ನಿಯಂತ್ರಿಸುವ ಕೆಲಸವನ್ನು ಪ್ರಭುತ್ವನಿರ್ವಹಿಸುತ್ತದೆ. ಪ್ರಭುತ್ವಕ್ಕೆ ತನ್ನ ಅಧಿಕಾರ ಚಲಾಯಿಸಲು ಕೆಲವು ನಿಯಮಗಳ ಮತ್ತು ಕಾನೂನುಗಳ ಅಗತ್ಯವಿದೆ ಎಂದು ಕಂಡುಬಂತು. ಯಾವುದೇ ಪ್ರಭುತ್ವ ನಿರಂಕುಶವಾಗಿ ಅಧಿಕಾರ ಚಲಾಯಿಸದಂತೆ ನಿಯಂತ್ರಿಸಲು ಕಾನೂನುಗಳ ಅಗತ್ಯವಿದೆ. ಈ ಕಾನೂನುಗಳ ತಾಯಿಯೇ ಸಂವಿಧಾನ. ಯಾವ ದೇಶವು ಸ್ವತಂತ್ರವಾಗಿದ್ದು, ಲಿಖಿತ ಸಂವಿಧಾನವನ್ನು ಹೊಂದಿದ್ದು ಅದರಂತೆ ದೇಶದ ಆಡಳಿತವನ್ನು ನಡೆಸುತ್ತದೋ ಅಂತಹ ದೇಶವನ್ನು ಗಣರಾಜ್ಯವೆಂದು ಕರೆಯಲಾಗುತ್ತದೆ. ಎಲ್ಲಾ ಸ್ವತಂತ್ರ ದೇಶಗಳು ಗಣರಾಜ್ಯಗಳಲ್ಲ. ಆದರೆ, ಎಲ್ಲಾ ಗಣರಾಜ್ಯಗಳು ಸ್ವತಂತ್ರವಾದ ದೇಶಗಳು.
1. ಇಂಗ್ಲೆಂಡಿನ ಮ್ಯಾಗ್ನಕಾರ್ಟ: 13ನೇ ಶತಮಾನದ ಪ್ರಾರಂಭದಲ್ಲಿ ಇಂಗ್ಲೆಂಡಿನ ದೊರೆ ಕಿಂಗ್‌ಜಾನ್ ಮತ್ತು ಅಲ್ಲಿನ ಜಹಗೀರುದಾರರಿಗೆ ನಡೆದ ಸಂಘರ್ಷದ ಫಲವಾಗಿ ಜಗತ್ತಿನ ಮೊದಲನೆ ಸಂವಿಧಾನವೆಂದು ಕರೆಯಲ್ಪಡುವ ‘ಮ್ಯಾಗ್ನಕಾರ್ಟ’ ಕ್ರಿ.ಶ. 1215ರಲ್ಲಿ ರಚನೆಯಾಯಿತು. ನ್ಯಾಯಾಂಗದ ದಂತಕತೆಯೆಂದು ಕರೆಯಲ್ಪಡುವ ಇಂಗ್ಲೆಂಡಿನ ನ್ಯಾಯಮೂರ್ತಿ ಲಾರ್ಡ್ ಡೆನ್ನಿಂಗ್ ಮ್ಯಾಗ್ನಕಾರ್ಟವನ್ನು ‘ಎಲ್ಲ ಕಾಲದ ಶ್ರೇಷ್ಠ ಸಾಂವಿಧಾನಿಕ ದಾಖಲೆ… ನಿರಂಕುಶ ಪ್ರಭುವಿನ ಸ್ವೇಚ್ಛಾಚಾರದ ಎದುರು ವ್ಯಕ್ತಿ ಸ್ವಾತಂತ್ರ್ಯದ ಅಡಿಪಾಯ’ ಎಂದು ಬಣ್ಣಿಸುತ್ತಾರೆ. “The greatest constitutional document of all times… the foundation of the freedom of the individual against the arbitrary of despot”.
ಈ ಮ್ಯಾಗ್ನಕಾರ್ಟದ ಪ್ರಮುಖ ಅಂಶಗಳು:
1) ಕಿಂಗ್‌ಜಾನ್ ದೊರೆಯ ಅಧಿಕಾರಕ್ಕೆ ಕಡಿವಾಣ ಹಾಕಲಾಯಿತು.
2) ನ್ಯಾಯಾಂಗವನ್ನು ಬಲಪಡಿಸಲಾಯಿತು.
3) ಗುಲಾಮರನ್ನು ಹೊರತುಪಡಿಸಿ ಉಳಿದವರನ್ನು ಶಿಕ್ಷಿಸಬೇಕಾದರೆ ಅಥವಾ ದಂಡ ವಿಧಿಸಬೇಕಾದರೆ ನ್ಯಾಯಾಂಗದ ಪ್ರಕ್ರಿಯೆಗೆ ಒಳಪಡಿಸುವುದನ್ನು ಕಡ್ಡಾಯ ಮಾಡಲಾಯಿತು.
4) ಜಹಗೀರುದಾರರಿಗೆ ಕೆಲವು ರಾಜಕೀಯ ಹಕ್ಕುಗಳನ್ನು ನೀಡಲಾಯಿತು.
5) ‘ಜನರ ನ್ಯಾಯದ ಹಕ್ಕನ್ನು ಯಾರಿಗೂ ಮಾರಾಟ ಮಾಡುವುದಿಲ್ಲ, ವಿಳಂಬ ಮಾಡುವುದಿಲ್ಲ ಹಾಗೂ ನಿರಾಕರಿಸುವುದಿಲ್ಲ’ ಎಂದು ಘೋಷಿಸಲಾಯಿತು. (To no one will we sell, to no one deny or delay right to justice)
2. ಅಮೇರಿಕದ ಸಂವಿಧಾನ: 1776ರಲ್ಲಿ ನಡೆದ ಅಮೇರಿಕ ದೇಶದ ಮಹಾನ್ ಕ್ರಾಂತಿಯ ಮಹಾನ್ ಘೋಷಣೆಯೆಂದರೆ ‘ಎಲ್ಲಾ ಮನುಷ್ಯರನ್ನು ಸಮಾನವಾಗಿ ಸೃಷ್ಟಿಸಲಾಗಿದೆ’ (All men are created equal). ಈ ಕ್ರಾಂತಿಯ ನಂತರ ಅಮೇರಿಕದ ಎಲ್ಲ ರಾಜ್ಯಗಳು ತಮ್ಮ ತಮ್ಮ ಸಂವಿಧಾನಗಳನ್ನು ರಚಿಸಿಕೊಂಡವು. ನಂತರದ ದಿನಗಳಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನವು ರಚನೆಯಾಯಿತು. ಈ ಸಂವಿಧಾನದ ಮುಖ್ಯಾಂಶಗಳೆಂದರೆ:
1) ಅಮೆರಿಕ ದೇಶದಲ್ಲಿ ವಸಾಹತುಶಾಹಿ ಪದ್ಧತಿಯ ರದ್ದುಪಡಿಸುವಿಕೆ
2) ಪ್ರಜಾಪ್ರಭುತ್ವವೆಂಬ ರಾಜಕೀಯ ವ್ಯವಸ್ಥೆಯ ಸ್ಥಾಪನೆ
3) ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಪ್ರತ್ಯೇಕ ಮತ್ತು ಸ್ವತಂತ್ರ ಆಡಳಿತಾಂಗಗಳ ರಚನೆ
4) ರಾಜಕೀಯ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ವೃತ್ತಿ ಸ್ವಾತಂತ್ರ್ಯ, ವಾಸಸ್ಥಳದ ಸ್ವಾತಂತ್ರ್ಯ, ಸಂಚರಿಸುವ ಸ್ವಾತಂತ್ರ್ಯ ಇತ್ಯಾದಿಗಳ ಘೋಷಣೆ
ಆದರೆ, ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಸಂವಿಧಾನದ ಹೊರತಾಗಿಯೂ ಅಮೇರಿಕದಲ್ಲಿ ಗುಲಾಮ ಪದ್ಧತಿ, ವರ್ಣಬೇಧ, ವರ್ಗಬೇಧ, ಲಿಂಗಬೇಧ ಇತ್ಯಾದಿ ಆಸಮಾನತೆಗಳು ಮುಂದುವರೆದವು.
3. ಫ್ರಾನ್ಸ್ ಸಂವಿಧಾನ: ಫ್ರೆಂಚ್ ಮಹಾಕ್ರಾಂತಿಯು 1789ರಲ್ಲಿ ಪ್ರಾರಂಭವಾಗಿ 1799ರಲ್ಲಿ ಕೊನೆಗೊಂಡಿತು. ಈ ಮಹಾಕ್ರಾಂತಿಯ ಮಹಾನ್ ಘೋಷಣೆಯೆಂದರೆ ‘ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ” (Liberty, Fraternity and Equality). ಈ ಕ್ರಾಂತಿಯ ಪರಿಣಾಮವಾಗಿ ರೂಪುಗೊಂಡ ಕಾನೂನುಗಳೆಂದರೆ:
1. ರಾಜರ ಮತ್ತು ಪಾಳೆಗಾರರ ಆಳ್ವಿಕೆ ರದ್ದು
2. ಚುನಾಯಿತ ಸರ್ಕಾರಗಳು ಅಸ್ತಿತ್ವಕ್ಕೆ
3. ಪಾಳೆಗಾರರಿಗೆ ಮತ್ತು ಕ್ರೈಸ್ತ ದೇವಾಲಯಗಳಿಗೆ ಕೊಡಬೇಕಾದ ಸಾಲ ಮನ್ನಾ
4. ರಾಜವಂಶಸ್ಥರು ಮತ್ತು ಕ್ರೈಸ್ತ ದೇವಾಲಯಗಳಿಗೆ ಸೇರಿದ ಭೂಮಿಯ ರಾಷ್ಟ್ರೀಕರಣ
5. ಖಾಸಗಿ ಕಂದಾಯ ವಸೂಲಾತಿ ಪದ್ಧತಿ ರದ್ದು
6. ಜನಸಾಮಾನ್ಯರಿಗೆ ರಾಜಕೀಯ ಹಕ್ಕುಗಳ ವಿಸ್ತರಣೆ
4. ಸೋವಿಯತ್ ರಷ್ಯಾದ ಸಂವಿಧಾನ: 1917ರಲ್ಲಿ ನಡೆದ ರಷ್ಯಾ ಕ್ರಾಂತಿಯು ಜಗತ್ತಿಗೆ ನೀಡಿದ ಮಹಾನ್ ಘೋಷಣೆ- ‘ಸಾಮರ್ಥ್ಯಕ್ಕೆ ಅನುಸಾರವಾಗಿ ದುಡಿಯಬೇಕು, ಅಗತ್ಯಕ್ಕೆ ಅನುಸಾರವಾಗಿ ಗಳಿಸಬೇಕು’. (Each according to one’s ability, each according to one’s need). ರಷ್ಯಾ ದೇಶದ ಈ ಕ್ರಾಂತಿ ಜಗತ್ತಿನ ಚಿಂತನೆಯನ್ನೇ ಬದಲಾಯಿಸಿತು. ಈ ಕ್ರಾಂತಿಯ ಪರಿಣಾಮವಾಗಿ-
1. ಝಾರ್ ದೊರೆಗಳ ಆಡಳಿತ ಕೊನೆಗೊಂಡು, ಜಗತ್ತಿನಲ್ಲಿ ಮೊದಲ ಬಾರಿಗೆ ಕಾರ್ಮಿಕರ ಮುಖಂಡತ್ವದ ಸಮಾಜವಾದಿ ಸರ್ಕಾರ ಅಧಿಕಾರಕ್ಕೆ ಬಂತು. ಸಮಾಜವಾದಿ ಸಂವಿಧಾನ ರಚನೆಯಾಯಿತು.
2. ರಾಜ್ಯವೆಂದರೆ ದೇಶದ ಗಡಿಯ ರಕ್ಷಣೆ, ವಿಸ್ತರಣೆ ಮತ್ತು ಒಳದಂಗೆಗಳ ನಿಯಂತ್ರಣ ಎಂಬ ವ್ಯಾಖ್ಯಾನ ಮರುಪರಿಶೀಲನೆಗೆ ಗುರಿಯಾಗಿ, ಜನರ ಕನಿಷ್ಠ ಅಗತ್ಯಗಳಾದ ಆಹಾರ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ, ಇತ್ಯಾದಿಗಳನ್ನು ಪೂರೈಸುವುದು ರಾಜ್ಯದ (ಸರ್ಕಾರದ)ಕರ್ತವ್ಯ ಎಂಬ ಕಲ್ಯಾಣ ರಾಜ್ಯದ ಪರಿಕಲ್ಪನೆ ಜಾರಿಗೆ ಬಂದಿತು.
3. ಪರಿಪೂರ್ಣ ಪ್ರಜಾಪ್ರಭುತ್ವಕ್ಕೆ ರಾಜಕೀಯ ಹಕ್ಕುಗಳ ಜೊತೆಗೆ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ನೀಡಬೇಕು ಎನ್ನುವ ತಾತ್ಪರ್ಯ ನೀಡಲಾಯಿತು.
4. ಭೂಮಿ, ನೀರು, ಖನಿಜ ಹಾಗೂ ಇತರೆ ನೈಸರ್ಗಿಕ ಸಂಪತ್ತು ಇಡೀ ಸಮುದಾಯಕ್ಕೆ ಸೇರಿದ್ದು, ಪ್ರತಿಯೊಬ್ಬ ಪ್ರಜೆಗೂ ಇದರಲ್ಲಿ ಹಕ್ಕು ಇದೆ ಎಂದು ಘೋಷಿಸಲಾಯಿತು.
5. ವರ್ಗ ಭೇದ, ವರ್ಣ ಭೇದ ಮತ್ತು ಲಿಂಗ ಭೇದವನ್ನು ರದ್ದುಮಾಡಿ ಸಮಾನತೆಯನ್ನು ಸಾರಲಾಯಿತು.
6. ‘ಧರ್ಮವು ವ್ಯಕ್ತಿಯ ಖಾಸಗಿ ಹಕ್ಕು’ ಎಂದು ಘೋಷಿಸಿ, ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸಲಾಯಿತು. ನಿಜವಾದ ಅರ್ಥದಲ್ಲಿ ಧರ್ಮನಿರಪೇಕ್ಷತೆ/ಜಾತ್ಯತೀತತೆ ಜಾರಿಗೆ ಬಂದಿತು.
7. ಆಹಾರ, ಬಟ್ಟೆ, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಇತ್ಯಾದಿಗಳು ಮೂಲಭೂತ ಹಕ್ಕುಗಳಾದವು.
8. ದುಡಿದು ತಿನ್ನುವುದು ಕರ್ತವ್ಯ ಎಂದು ಘೋಷಿಸಲಾಯಿತು.
9. ಜನರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರಲಾಯಿತು.
10. ಜಗತ್ತಿನ ಯಾವುದೇ ದೇಶದಲ್ಲಿ ನಡೆಯುವ ಸ್ವಾತಂತ್ರ್ಯ ಹೋರಾಟಗಳಿಗೆ ಮತ್ತು ವಿಮೋಚನಾ ಹೋರಾಟಗಳಿಗೆ ಬೆಂಬಲ ಸೂಚಿಸಲಾಯಿತು.
ಅಮೇರಿಕ, ಫ್ರಾನ್ಸ್ ಮತ್ತು ರಷ್ಯಾ ದೇಶದ ಕ್ರಾಂತಿಗಳು ಜಗತ್ತಿನ ಇತರೆ ದೇಶಗಳ ಮೇಲೆ ಪರಿಣಾಮ ಬೀರಿದವು. 20ನೇ ಶತಮಾನದ ಪ್ರಾರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಸ್ವತಂತ್ರ ರಾಷ್ಟ್ರಗಳಿದ್ದವು. ಕ್ರಮೇಣ ಇತರ ದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟಗಳು ಮತ್ತು ವಿಮೋಚನಾ ಹೋರಾಟಗಳು ಬೆಳೆದುಬಂದವು. ಇದರ ಪರಿಣಾಮವಾಗಿ ಇಂದು ವಿಶ್ವದಲ್ಲಿ 195 ಸ್ವತಂತ್ರ ದೇಶಗಳಿವೆ. ಇವುಗಳ ಪೈಕಿ ಸುಮಾರು 176 ದೇಶಗಳು ಪ್ರತ್ಯೇಕವಾದ ಸಂವಿಧಾನಗಳನ್ನು ರಚಿಸಿಕೊಂಡಿವೆ. ಕೆಲವು ದೇಶಗಳು ಬೇರೆ ದೇಶಗಳ ಸಂವಿಧಾನಗಳನ್ನು ಅಳವಡಿಸಿಕೊಂಡಿವೆ. ಹೀಗೆ ವಿಶ್ವದ ಬಹುಪಾಲು ದೇಶಗಳು ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿವೆ.

ಭಾರತ ಸಂವಿಧಾನಕ್ಕೆ ಪ್ರೇರಣೆ: ಭಾರತದ ಸಂವಿಧಾನಕ್ಕೆ ಪ್ರೇರಣೆ ನೀಡಿರುವುದು ಬ್ರಿಟನ್, ಅಮೇರಿಕಾ, ಫ್ರಾನ್ಸ್, ಐರ್ಲೆಂಡ್, ಕೆನಡಾ, ಸೋವಿಯತ್ ರಷ್ಯಾದ ಸಂವಿಧಾನಗಳು. ಪಂಚವಾರ್ಷಿಕ ಯೋಜನೆಯ ಪರಿಕಲ್ಪನೆಯನ್ನು ಸೋವಿಯತ್ ರಷ್ಯಾದ ಸಂವಿಧಾನದಿಂದಲೂ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳ ಪರಿಕಲ್ಪನೆಯನ್ನು ಐರ್ಲೆಂಡ್‌ನ ಸಂವಿಧಾನದಿಂದಲೂ, ‘ವಿ, ದಿ ಪೀಪಲ್’ ಎಂಬ ನುಡಿಗಟ್ಟನ್ನು ಅಮೇರಿಕಾದ ಸಂವಿಧಾನದಿಂದಲೂ, ಲಿಬರ್ಟಿ – ಈಕ್ವಾಲಿಟಿ ಮತ್ತು ಫ್ರ್ಯಾಟರ್ನಿಟಿ ಎಂಬ ಪರಿಕಲ್ಪನೆಯನ್ನು ಫ್ರಾನ್ಸ್‌ನ ಸಂವಿಧಾನದಿಂದಲೂ ಪಡೆಯಲಾಗಿದೆ.








