ಭಾರತ ದೇಶವನ್ನು ಅರ್ಥ ಮಾಡಿಕೊಳ್ಳದೆ ಭಾರತದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವೆಲ್ಲರು ನಮ್ಮ ಶಾಲೆಗಳಲ್ಲಿ ಭಾರತ ದೇಶದ ಭೌಗೋಳಿಕ ಚಿತ್ರವನ್ನು ಓದಿದ್ದೇವೆ. ಉತ್ತರಕ್ಕೆ ಹಿಮಾಲಯ ಪರ್ವತ, ದಕ್ಷಿಣಕ್ಕೆ ಹಿಂದೂ ಮಹಾಸಾಗರ, ಪೂರ್ವಕ್ಕೆ ಬಂಗಾಲ ಕೊಲ್ಲಿ, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಇದರ ಮಧ್ಯದಲ್ಲಿ ವಿಂಧ್ಯ ಪರ್ವತಗಳು, ಜೀವನದಿಗಳು ಎಂಬುದಾಗಿ. ಆದರೆ, ಭಾರತ ದೇಶವೆಂದರೆ ಕೇವಲ ಅಲ್ಲಿನ ಪರ್ವತಗಳು, ಕಣಿವೆಗಳು, ಸಾಗರ-ಸರೋವರಗಳು, ನದಿ, ಕಾಡು, ಬೆಟ್ಟ, ಗುಡ್ಡ ಮಾತ್ರವಲ್ಲ. ತೆಲುಗಿನ ಮಹಾಕವಿ ಮತ್ತು ಸಮಾಜ ಸುಧಾರಕ ವೆಂಕಟ ಅಪ್ಪಾರಾವ್ ಗುರುಜಾಡ (1862-1915) ಒಂದು ಶತಮಾನದ ಹಿಂದೆ ಹೇಳಿದಂತೆ ‘ದೇಶಮಂಟೆ ಮಟ್ಟಿ ಕಾದು, ದೇಶಮಂಟೆ ಮನುಷಲು’. ‘ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಮನುಷ್ಯರು’. ಭಾರತ ದೇಶವನ್ನು ತಿಳಿದುಕೊಳ್ಳುವುದೆಂದರೆ ಅಲ್ಲಿನ ಜನರು, ಅಲ್ಲಿನ ಇತಿಹಾಸ, ಆರ್ಥಿಕ-ಸಾಮಾಜಿಕ-ರಾಜಕೀಯ ಸಂಬಂಧಗಳು, ಧರ್ಮಾಚರಣೆಗಳು, ಸಂಸ್ಕೃತಿ, ಭಾಷೆ, ಕೃಷಿ, ಆಹಾರ ಪದ್ಧತಿ, ಇತ್ಯಾದಿಗಳನ್ನು ತಿಳಿದುಕೊಳ್ಳುವುದು. ಇವುಗಳ ಬಗ್ಗೆ ಆಳವಾದ ಅಧ್ಯಯನ ಮಾಡದಿದ್ದರೂ, ಕನಿಷ್ಠ ತಿಳುವಳಿಕೆ ಬೇಕು.
1. ಜನತೆ:ಸರಿ ಸುಮಾರು 75 ಸಾವಿರ ವರ್ಷಗಳ ಹಿಂದೆ ಅಲೆಮಾರಿ ಮಾನವರು ಆಹಾರವನ್ನು ಹುಡುಕಿಕೊಂಡು ಭಾರತವನ್ನು ಪ್ರವೇಶಿಸಿದರು. ನಂತರದ ದಿನಗಳಲ್ಲಿ ಭಾರತದ ಫಲವತ್ತಾದ ಭೂಮಿಯನ್ನು ಮತ್ತು ಜೀವನದಿಗಳನ್ನು ಹುಡುಕಿಕೊಂಡು ಹೊರಗಿನಿಂದ ಕೃಷಿಕರು ಬಂದರು. ನಾಗರಿಕತೆ ಬೆಳೆದಂತೆ ಬೇರೆಬೇರೆ ದೇಶಗಳಿಂದ ವ್ಯಾಪಾರಸ್ಥರು ಭಾರತವನ್ನು ಪ್ರವೇಶಿಸಿದರು. ಸಿಂಧು ನಾಗರಿಕತೆಯ ಕಾಲದಿಂದ ಪ್ರಾರಂಭಗೊಂಡು 18ನೇ ಶತಮಾನದ ಪ್ರಾರಂಭದವರೆಗೆ ಜಗತ್ತಿನ ಬಹುಪಾಲು ರಾಷ್ಟ್ರಗಳು ಭಾರತದ ಜೊತೆಗೆ ವ್ಯಾಪಾರ ಸಂಬಂಧಗಳನ್ನು ಇಟ್ಟುಕೊಂಡಿದ್ದವು. ಮುಖ್ಯವಾಗಿ ವಿವಿಧ ರೀತಿಯ ಜವಳಿ, ರೇಷ್ಮೆ ಬಟ್ಟೆ, ಸಾಂಬಾರ ಪದಾರ್ಥಗಳು, ಸಕ್ಕರೆ, ಇಂಡಿಗೋ, ಗಿಡಮೂಲಿಕೆಗಳು, ಆಭರಣಗಳು ಮತ್ತು ರತ್ನಗಳನ್ನು ಭಾರತ ರಫ್ತು ಮಾಡುತ್ತಿತ್ತು.
ಇಲ್ಲಿನ ಪ್ರಾಕೃತಿಕ ಸೌಂದರ್ಯ, ಕಲೆ, ವಾಸ್ತುಶಿಲ್ಪ, ವಿಜ್ಞಾನ ಇತ್ಯಾದಿಗಳನ್ನು ನೋಡಲೆಂದು ವಿವಿಧ ದೇಶಗಳಿಂದ ಪ್ರವಾಸಿಗರು ಭಾರತಕ್ಕೆ ಬಂದರು. ಹಾಗೆ ಬಂದವರಲ್ಲಿ ಪ್ರಮುಖರು ಚೀನಾ ದೇಶದ ಹ್ಯುಯನ್‌ತ್ಸಾಂಗ್ (Hiuen Tsang), ಪಹಿಯನ್ (Fa-Hien). ಇಕ್ಸಿಂಗ್ (I-tsing), ಗ್ರೀಕ್ ದೇಶದ ಮೆಗಸ್ತನೀಸ್ (Megasthenes), ಪರ್ಷಿಯಾದ ಅಲ್- ಬರೂನಿ (Al-beruni), ಮೊರೊಕ್ಕಾದ ಇಬ್ನ-ಬಟೂಟ(Ibna-batuta), ಇಟಲಿಯ ಮಾರ್ಕೊ ಪೋಲೋ (Marco polo), ರಷ್ಯಾದ ಅಫನಾಸಿ ನಿಕಿತಿನ್ (Afanasy Nikitin), ಪೋರ್ಚುಗಲ್ ನ ಡೊಮಿಂಗೋ ಪೇಸ್ (Domingo Paes).
ಜಗತ್ಪಸಿದ್ದ ವಿಶ್ವವಿದ್ಯಾಲಯಗಳಾದ ನಳಂದ, ತಕ್ಷಶಿಲೆ, ವಿಕ್ರಮಶೀಲ, ಪುಷ್ಪಗಿರಿ ಇತ್ಯಾದಿಗಳಲ್ಲಿ ಕಲೆ, ವೈದ್ಯಕೀಯ, ಖಗೋಳವಿಜ್ಞಾನ, ಗಣಿತ, ರಾಜ್ಯಶಾಸ್ತ್ರ, ಯುದ್ಧ ಪರಿಣತಿ, ಆಧ್ಯಾತ್ಮ ಇತ್ಯಾದಿ ವಿಷಯಗಳನ್ನು ಬೋಧಿಸುತ್ತಿದ್ದರು. ಭಾರತದ ಈ ವಿಶ್ವವಿದ್ಯಾಲಯಗಳಲ್ಲಿ ಜ್ಞಾನಾರ್ಜನೆ ಪಡೆಯಲು ಶ್ರೀಲಂಕಾ, ಕೊರಿಯಾ, ಜಪಾನ್, ಚೀನಾ, ಟಿಬೆಟ್, ಇಂಡೊನೇಷಿಯ, ಪರ್ಷಿಯ, ಟರ್ಕಿ, ಇತ್ಯಾದಿ ದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದರು.
ಭಾರತದಲ್ಲಿದ್ದ ಸಂಪತ್ತಿನಿಂದ ಆಕರ್ಷಿತರಾಗಿ ಅನೇಕ ವಿದೇಶಿ ರಾಜರುಗಳು ತಮ್ಮ ರಾಜ್ಯ ವಿಸ್ತರಣೆಗಾಗಿ ಭಾರತ ಪ್ರವೇಶಿಸಿದರು. ಅವರಲ್ಲಿ ಪ್ರಮುಖರೆಂದರೆ ಗ್ರೀಕರು, ಅರಬ್ಬರು, ಟರ್ಕಿಯನ್ನರು, ಮೊಘಲರು, ಖಿಲ್ಜಿಗಳು, ತುಘಲಕ್‌ರು, ಬಹಮನಿಗಳು, ಪೋರ್ಚುಗೀಸರು, ಫ್ರೆಂಚರು, ಡಚ್ಚರು ಮತ್ತು ಬ್ರಿಟಿಷರು.
ಈ ರೀತಿ ಬೇರೆಬೇರೆ ಕಾರಣಕ್ಕಾಗಿ ಮತ್ತು ಬೇರೆಬೇರೆ ಕಾಲಮಾನದಲ್ಲಿ ಹೊರಗಿನಿಂದ ಭಾರತಕ್ಕೆ ಬಂದ ಬಹುಪಾಲು ವಿದೇಶಿ ಜನರು ತಮ್ಮ ಮೂಲ ದೇಶಗಳಿಗೆ ಹಿಂದಿರುಗದೆ ಭಾರತದಲ್ಲೇ ನೆಲೆಸಿದರು. ಇಲ್ಲೇ ತಮ್ಮ ಕುಟುಂಬ ವಿಸ್ತರಿಸಿದರು. ಭಾರತದ ಮೂಲ ನಿವಾಸಿಗಳಿಗೂ, ಹೊರಗಿನವರಿಗೂ ಹೊಡೆದಾಟಗಳು ಪ್ರಾರಂಭವಾದವು. ಗೆದ್ದವರು ಸೋತವರ ಮೇಲೆ ಹಿಡಿತ ಸಾಧಿಸಿದರು. ಗೆದ್ದ ಜನಾಂಗದವರು ಸೋತವರ ಸ್ತ್ರೀಯರೊಂದಿಗೆ ಸಂಪರ್ಕ ಬೆಳೆಸುವುದರ ಮೂಲಕ ಮಿಶ್ರ ಸಂತತಿಗಳುಂಟಾದವು. ಕ್ರಮೇಣ ಮಿಶ್ರ ಸಂತತಿಗಳು ಪ್ರತ್ಯೇಕ ಬುಡಕಟ್ಟುಗಳಾಗಿ ಬೆಳೆದವು. ಭಾರತದಲ್ಲಿನ ಜನಾಂಗಗಳನ್ನು ಅಧ್ಯಯನ ಮಾಡಿದ ಭಾರತದ ಮಾನವಶಾಸ್ತ್ರ ಸರ್ವೆಕ್ಷಣಾ ಇಲಾಖೆಯು ‘ಭಾರತದ ಜನತೆ’ ಎಂಬ ಪುಸ್ತಕ ಮಾಲಿಕೆಯಲ್ಲಿ ಭಾರತೀಯ ಸಮಾಜ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ವಿವರಿಸಿದೆ. ಈ ವಿವರಣೆಯ ಕೆಲವು ಮುಖ್ಯ ಅಂಶಗಳೆಂದರೆ:
ಅ. ಭಾರತವು ಇಡೀ ವಿಶ್ವದಲ್ಲೇ ಅತ್ಯಂತ ವೈವಿಧ್ಯಮಯ ರಾಷ್ಟ್ರವಾಗಿದೆ. ಇಲ್ಲಿ ಸುಮಾರು 4,635 ಬಗೆಯ ಜನಾಂಗೀಯ ಪಂಗಡಗಳು ಇವೆ. ಇವುಗಳು ತಮ್ಮದೇ ಆದ ಅನುವಂಶೀಯ ವೈಲಕ್ಷಣಗಳು, ಭಾಷೆ, ಉಡುಪು, ಧಾರ್ಮಿಕ ಸಂಪ್ರದಾಯಗಳು, ಆಹಾರ, ಅಭಿರುಚಿಗಳು, ಕೌಟುಂಬಿಕ ಸಂಬಂಧಗಳು ಮತ್ತು ವೈವಾಹಿಕ ಆಚರಣೆಗಳನ್ನು ಹೊಂದಿವೆ.
ಆ. ಭಾರತದ ಜನತೆ ಹಲವಾರು ಜನಾಂಗೀಯ ವರ್ಣ ಸಂಕರಗಳ ಮಧ್ಯೆ ಬೆಳೆದುಬಂದಿದೆ. ಅವುಗಳೆಂದರೆ ಪ್ರೋಟೊ-ಅಸ್ಟಲಾಯ್ಡ್, ಪ್ಯಾಲಿಯೋ-ಮೆಡಿಟರೇನಿಯನ್, ಕಾಕಸಾಯಿಡ್, ನೀಗ್ರೋ ಮತ್ತು ಮಂಗೋಲಿಯನ್ನರು. ಹಾಗೆಯೇ, ಹಲವಾರು ಭಿನ್ನ ರಾಷ್ಟ್ರೀಯರು-ಆರ್ಯರು, ಪರ್ಷಿಯಾದವರು, ಗ್ರೀಕರು, ಹೂಣರು, ಅರಬ್ಬರು, ಟಿರ್ಕಿಯವರು, ಆಫ್ರಿಕಾದವರು, ಮಂಗೋಲಿಯನ್ನರು ಮತ್ತು ಯುರೋಪಿಯನ್ನರು-ಇಲ್ಲಿಗೆ ಬಂದು ನೆಲೆಸಿದ್ದಾರೆ. ಆದರೆ, ಇಂದು ಎಲ್ಲಿಯೂ ಯಾವುದೇ ಜನಾಂಗೀಯ ಅಥವಾ ರಾಷ್ಟ್ರೀಯತೆಯ ಮೂಲ ಲಕ್ಷಣಗಳು ಗೋಚರಿಸುವುದಿಲ್ಲ; ಬದಲಾಗಿ ಜನಾಂಗೀಯ ಸಮ್ಮಿಶ್ರಣಗಳನ್ನು ಇಡೀ ದೇಶದಲ್ಲಿ ಕಾಣಬಹುದು.
ಇ. ಒಂದೇ ಧರ್ಮದ ಅಥವಾ ಜಾತಿಯ ಜನರಿಗಿಂತ, ಒಂದೇ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಹೆಚ್ಚಿನ ಸಾಮ್ಯತೆಗಳು ಇರುತ್ತವೆ. ‘ಮೇಲ್ವರ್ಗ’ದ ಮತ್ತು ‘ಕೆಳವರ್ಗ’ದ ಜಾತಿಗಳ ನಡುವೆ ಯಾವುದೇ ಅನುವಂಶೀಯ ಭಿನ್ನತೆಗಳಿರುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಈ. ಪ್ರತಿಯೊಂದು ಜನಾಂಗೀಯ ಜನರು ತಮ್ಮ ವಿಮೋಚನೆ, ಬಿಡುಗಡೆ ಅಥವಾ ಹಿಜ್ರತ್ ದಿನಗಳನ್ನು ಜಾನಪದ ಗೀತೆಗಳಲ್ಲಿ, ಇತಿಹಾಸದಲ್ಲಿ ಮತ್ತು ಸಮುದಾಯದ ಹಾಡುಗಳಲ್ಲಿ ಸಂರಕ್ಷಿಸಿಕೊಂಡು ಬಂದಿದ್ದಾರೆ. ಅವರು ವಾಸವಾಗಿದ್ದ ಕಡೆಗಳಲ್ಲೆಲ್ಲಾ ನಿರ್ದಿಷ್ಟ ಪ್ರದೇಶದ ಸಂಪ್ರದಾಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ ಮತ್ತು ಸ್ಥಳೀಯ ರೂಢಿ-ಸಂಪ್ರದಾಯಗಳನ್ನು ಒಪ್ಪಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಈ ವಿಷಯದಲ್ಲಿ ಆಕ್ರಮಣಕಾರರಾಗಿ ಬಂದವರು, ಸ್ವಯಂ ಸ್ಥಳೀಯರಾಗಿದ್ದಾರೆ.
ಉ. ನಮ್ಮ ವೈವಿಧ್ಯತೆ ಮತ್ತು ಏಕತೆಯ ಲಕ್ಷಣಗಳಲ್ಲಿ ‘ಭಾಷೆ’ ಅತ್ಯಂತ ಮುಖ್ಯವಾದುದು. ಭಾರತದಲ್ಲಿ ಸುಮಾರು 325 ಭಾಷೆಗಳು ಮತ್ತು 25 ಲಿಪಿಗಳು ಇವೆ. ಇವುಗಳು ಇಂಡೋ-ಆರ್ಯನ್, ಟಿಬಿಟೋ-ಬರ್ಮೀಸ್, ಇಂಡೋ-ಯೂರೋಪಿಯನ್, ದ್ರಾವಿಡ ಭಾಷೆಗಳು, ಆಸ್ಟೋ-ಏಷಿಯಾಟಿಕ್, ಅಂಡಮಾನಿಸ್ ಮತ್ತು ಮತ್ತು ಇಂಡೋ – ಇರಾನಿಯನ್ನಂತಹ ವಿವಿಧ ಭಾಷಾ ಕುಟುಂಬಗಳಿಂದ ಬಂದಿವೆ. ನಮ್ಮ ದೇಶದ ಶೇಕಡ 65ಕ್ಕಿಂತಲೂ ಹೆಚ್ಚು ಜನರು ಕನಿಷ್ಠ ಎರಡು ಭಾಷೆಗಳನ್ನು ಮಾತನಾಡುತ್ತಾರೆ. ಬಹುತೇಕ ಎಲ್ಲಾ ಬುಡಕಟ್ಟು ಜನಾಂಗದವರು ಮೂರು ಭಾಷೆಗಳನ್ನು ಮಾತನಾಡುತ್ತಾರೆ.
ಊ. ಭಾರತದ ಜನರು ಸಾಮುದಾಯಿಕ ಬದುಕಿಗೆ ನಿಕಟವಾದವರು. ಅವರು ನಿಸರ್ಗ ಮತ್ತು ಸಾಮಾಜಿಕ ಪರಿಸರದೊಂದಿಗೆ ಸದಾ ಸಂಪರ್ಕವನ್ನು ಹೊಂದಿದವರು. ಶತಮಾನಗಳಿಂದಲೂ ಅವರು ಬದುಕು ಮತ್ತು ಹೋರಾಟಗಳಲ್ಲಿ ಒಟ್ಟಾಗಿಯೇ ಭಾಗವಹಿಸಿದ್ದಾರೆ. ಈ ಪರಸ್ಪರ ಅವಲಂಬನೆ ಮತ್ತು ಸಾಮೂಹಿಕ ಹೋರಾಟಗಳು ನಮ್ಮ ವೈವಿಧ್ಯತೆ ಹಾಗೂ ಏಕತೆಯನ್ನು ಸುಭದ್ರಗೊಳಿಸಿವೆ.
ಹೀಗೆ ವಿವಿಧ ರೀತಿಯ ನಂಬಿಕೆಗಳು, ಅಭಿಪ್ರಾಯಗಳು, ಸಂಪ್ರದಾಯ, ಆಹಾರ ಪದ್ಧತಿ, ಉಡುಪು, ಆಚಾರ-ವಿಚಾರಗಳನ್ನು ಹೊಂದಿರುವ ಜನರು ಶಾಂತಿಯಿಂದ, ನೆಮ್ಮದಿಯಿಂದ ಮತ್ತು ಭಯಭೀತಿ ಇಲ್ಲದೆ ಸಾವಿರಾರು ವರ್ಷಗಳಿಂದ ಒಟ್ಟಿಗೆ ಜೀವಿಸುತ್ತಾ ಬಂದಿದ್ದಾರೆ. ಹಾಗಾಗಿಯೇ ಭಾರತವನ್ನು ಬಹುತ್ವದ ಸಮಾಜ ಎಂದು ಕರೆಯಲಾಗಿದೆ.
2. ಇತಿಹಾಸ: ‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯವಾದುದು. ಮಾನವರ ಇತಿಹಾಸವನ್ನು ತಿಳಿದುಕೊಂಡರೆ ಮುಂದಿನ ಸರಿದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ ಸುಗಮವಾಗುತ್ತದೆ. ನಾವು ಹೊಸದೊಂದು ಸಮಾಜವನ್ನು ಕಟ್ಟಬೇಕಾದರೆ ಮಾನವ ಇತಿಹಾಸವನ್ನು ಮೆಲುಕು ಹಾಕಲೇಬೇಕು.
ಜಗತ್ತಿನ ಇತಿಹಾಸ ನಿಂತ ನೀರಲ್ಲ, ಅದೊಂದು ನಿರಂತರವಾಗಿ ಹರಿಯುವ ನದಿ. ಇತಿಹಾಸವನ್ನು ವಿಭಜಿಸಲಾಗದು. ನಮ್ಮಂತಹ ಸಾಮಾನ್ಯ ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲೆಂದು ಇತಿಹಾಸಕಾರರು ಭಾರತದ ಇತಿಹಾಸವನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ.
(i) ಪ್ರಾಚೀನ ಇತಿಹಾಸ:ಕ್ರಿ.ಪೂ. 3000ದಿಂದ ಕಿ.ಶ. 985ರವರೆಗಿನ ಕಾಲಮಾನದ ಭಾರತವನ್ನು ಪ್ರಾಚೀನ ಭಾರತ ಎಂದು ಕರೆಯಲಾಗಿದೆ. ಈ ಕಾಲಮಾನದಲ್ಲಿ ಪ್ರಮುಖವಾಗಿ ಸಿಂಧು ನಾಗರಿಕತೆ, ಮೌರ್ಯರು, ಗುಪ್ತರು, ಕುಷನರು, ಹರ್ಷವರ್ಧನರು, ರಾಷ್ಟ್ರಕೂಟರು, ಚೋಳರು, ಚಾಲುಕ್ಯರು, ಪಲ್ಲವರು, ಪಾಂಡ್ಯನ್ನರು ಭಾರತ ದೇಶವನ್ನು ಆಳಿದರು.
(ii) ಮಧ್ಯಕಾಲೀನ ಇತಿಹಾಸ:ಕ್ರಿ..ಶ. 986ರಿಂದ ಕ್ರಿ.ಶ.1756ರವರೆಗಿನ ಕಾಲಮಾನದ ಭಾರತವನ್ನು ಮಧ್ಯಕಾಲೀನ ಭಾರತ ಎಂದು ಕರೆಯಲಾಗಿದೆ. ಈ ಕಾಲಮಾನದಲ್ಲಿ ಪ್ರಮುಖವಾಗಿ ಸುಲ್ತಾನರು ಟರ್ಕಿಯನ್ನರು, ಪರ್ಷಿಯನ್ನರು, ಹೂಣರು, ತುಘಲಕರು, ಖಿಲ್ಜಿಗಳು, ಮೊಘಲರು, ಬಹಮನಿಯರು ಭಾರತ ದೇಶವನ್ನು ಆಳಿದರು.
(iii) ಆಧುನಿಕ ಇತಿಹಾಸ:ಕ್ರಿ.ಶ. 1757ರಿಂದ ಪ್ರಸ್ತುತ ದಿನದವರೆಗಿನ ಇತಿಹಾಸವನ್ನು ಆಧುನಿಕ ಭಾರತದ ಇತಿಹಾಸವೆಂದು ಕರೆಯಲಾಗಿದೆ. ಈ ಕಾಲಮಾನದಲ್ಲಿ ಪ್ರಮುಖವಾಗಿ ಫ್ರೆಂಚರು ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಭಾರತ ದೇಶವನ್ನು ಆಳಿದರು. ಪರಕೀಯರ ಆಳ್ವಿಕೆಯ ವಿರುದ್ಧ ಹೋರಾಟ ನಡೆಸಿ 1947ರಲ್ಲಿ ಭಾರತ ಸ್ವತಂತ್ರವಾಯಿತು. 1950ರಲ್ಲಿ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯವಾಯಿತು. ಇಂದು 21ನೇ ಶತಮಾನದ ಪ್ರಾರಂಭಿಕ ದಶಕಗಳಲ್ಲಿ ನಾವಿದ್ದೇವೆ.
ಹೆಚ್ಚಿನ ವಿವರಗಳಿಗೆ ಆಯಾ ಕಾಲಮಾನದ ಆಡಳಿತಗಾರರ ಚರಿತ್ರೆಯನ್ನು ಓದಿಕೊಳ್ಳಬೇಕು. ಆದರೆ ಭಾರತದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಮೇಲೆ ಹೇಳಿರುವ ಕನಿಷ್ಠ ತಿಳುವಳಿಕೆ ಅವಶ್ಯಕವಾಗಿ ಬೇಕು.
3. ಧರ್ಮಗಳು:’ಧರ್ಮ ಮನುಷ್ಯರನ್ನು ಸೃಷ್ಟಿಸಲಿಲ್ಲ. ಮನುಷ್ಯರು ಧರ್ಮವನ್ನು ಸೃಷ್ಟಿಸಿದರು.’ ನಾಗರಿಕ ಸಮಾಜದ ಉಗಮದೊಂದಿಗೇ ಧರ್ಮಗಳು ಬೆಳೆದುಬಂದವು. ಧರ್ಮದ ಇತಿಹಾಸವು ಮನುಷ್ಯರ ಸಾಮಾಜಿಕ ಹಾಗೂ ಆರ್ಥಿಕ ಕಥನವೇ ಆಗಿದೆ. ಮನುಷ್ಯರು ಮತ್ತು ಧರ್ಮಗಳ ಬೆಳವಣಿಗೆ ಜೊತೆಜೊತೆಯಲ್ಲಿ ನಡೆಯಿತು. ಜಗತ್ತಿನ ಎಲ್ಲಾ ಧರ್ಮಗಳು ಪ್ರಾರಂಭವಾಗಿದ್ದು ಜನರ ಕಣ್ಣೀರನ್ನು ಒರೆಸುವುದಕ್ಕೆ. ರೋಮ್ ನಾಗರಿಕತೆಯಲ್ಲಿ ಗುಲಾಮರ ಸಂಕಷ್ಟಗಳನ್ನು ಪರಿಹರಿಸಲೆಂದು ಕ್ರೈಸ್ತ ಧರ್ಮ ಹುಟ್ಟಿತು. ಮಧ್ಯ ಏಷ್ಯಾದಲ್ಲಿ ಕೊಲೆ, ಲೂಟಿ, ದರೋಡೆ, ಹಿಂಸೆಗಳಿಂದ ನೊಂದ ಜನರ ದುಃಖವನ್ನು ಪರಿಹರಿಸಲೆಂದೇ ಇಸ್ಲಾಂ ಧರ್ಮ ಹುಟ್ಟಿಕೊಂಡಿತು. ಭಾರತದಲ್ಲಿ ಬಲಿ, ಯಾಗ, ಯಜ್ಞ, ಹಿಂಸೆಗಳಿಗೆ ತತ್ತರಿಸಿದ ಜನರ ಕಷ್ಟವನ್ನು ಪರಿಹರಿಸಲೆಂದೇ ಜೈನ, ಬೌದ್ಧ ಧರ್ಮಗಳು ಹುಟ್ಟಿಕೊಂಡವು. ಮುಂದುವರೆದು ಇದೇ ಉದ್ದೇಶದಿಂದ ಹುಟ್ಟಿದ್ದೇ ಲಿಂಗಾಯಿತ ಧರ್ಮ ಮತ್ತು ಸಿಖ್ ಧರ್ಮ. ಆದ್ದರಿಂದಲೇ ‘ದಮನಕ್ಕೊಳಗಾದ ಜನರ ಧ್ವನಿಯೇ ಧರ್ಮ’ವೆಂದು ಹೇಳಲಾಗಿದೆ.
ಭಾರತ ದೇಶದಲ್ಲಿ ವಿವಿಧ ಧರ್ಮಗಳನ್ನು ಕಾಣಬಹುದು. ಹಿಂದು, ಜೈನ, ಬೌದ್ಧ, ಸಿಖ್ ಮತ್ತು ಲಿಂಗಾಯಿತ ಧರ್ಮಗಳು ಭಾರತ ದೇಶದಲ್ಲಿ ಜನ್ಮತಾಳಿದವು. ಕ್ರೈಸ್ತ, ಇಸ್ಲಾಂ, ಬಹಾ’ಇ ಮತ್ತು ಫಾರಸಿ ಧರ್ಮಗಳು ಹೊರಗಿನಿಂದ ಬಂದು ಭಾರತ ದೇಶದಲ್ಲಿ ಸ್ಥಾನಮಾನ ಗಳಿಸಿಕೊಂಡವು. ಈ ಧರ್ಮಗಳಲ್ಲದೆ ಭಾರತ ದೇಶದಲ್ಲಿ ಚೈತನ್ಯ ಪಂಥ, ನಾಥ ಪಂಥ, ಆರೂಢ, ಅವಧೂತ, ಶಾಕ್ತ, ಸಿದ್ಧ, ಸೂಫಿ ಪಂಥಗಳು ಉದಯವಾದವು. ಹಾಗೆಯೇ ಹಲವು ತಾತ್ವಿಕ ಧಾರೆಗಳು ಅಸ್ತಿತ್ವಗೊಂಡವು. ದೈತ, ಅದೈತ, ವಿಶಿಷ್ಟಾದ್ವತ, ಶಕ್ತಿವಿಶಿಷ್ಟಾದ್ವೈತ, ಲೋಕಾಯತ, ಚಾರ್ವಾಕ, ಸಾಂಖ್ಯ, ಅಹಮದಿಯರು, ಜ್ಯೂಡೊಯಿಸಂ, ಖಾಹಿಯ ಮೊದಲಾದ ಪಂಥಗಳು ಇವೆ. ಅಷ್ಟೇ ಪ್ರಮುಖವಾಗಿ ಗಿರಿಜನ ಬುಡಕಟ್ಟುಗಳ ಜನರು ಯಾವುದೇ ಧಾರ್ಮಿಕ ಪಂಗಡಕ್ಕೆ ಸೇರದೆ ನಿಸರ್ಗ ಸನಿಹವಾದ ಆಚರಣೆಗಳ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಶೇಕಡಾವಾರು ಧಾರ್ಮಿಕ ಜನಸಂಖ್ಯೆ ಹೀಗಿದೆ:
1. ಹಿಂದುಗಳು – 79.80
2. ಮುಸಲ್ಮಾನರು – 14.23
3. ಕ್ರೈಸ್ತರು – 2.30
4. ಸಿಖ್ಖರು – 1.72
5. ಬೌದ್ಧರು – 0.70
6. ಜೈನರು – 0.37
7. ಇತರೆ ಧರ್ಮ ಮತ್ತು ಧರ್ಮಾತೀತರು – 0.9

ಧರ್ಮವು ಕ್ರಮೇಣ ಕೆಲವೇ ಜನರ ಹಿತಾಸಕ್ತಿಯನ್ನು ಕಾಪಾಡುವ ಅಸ್ತ್ರವಾಯಿತು ಎನ್ನುವುದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಧರ್ಮವು ಅಪ್ರಜಾಪ್ರಭುತ್ವಗೊಂಡು ಮೂಲಭೂತವಾದಿಯಾಯಿತು. ಧರ್ಮ ಮತ್ತು ರಾಜಕಾರಣ ಬೆರೆತು ಕೋಮುವಾದವಾಯಿತು. ಪ್ರಪಂಚದಲ್ಲಿ ನಡೆದ ಯುದ್ಧಗಳಲ್ಲಿ ಸತ್ತ ಜನರಿಗಿಂತಲೂ ಹೆಚ್ಚಿನ ಜನರು ಮೂಲಭೂತವಾದ ಮತ್ತು ಕೋಮು ಘರ್ಷಣೆಗಳಲ್ಲಿ ಸತ್ತಿದ್ದಾರೆ.
4. ಜಾತಿಗಳು: ಭಾರತದಲ್ಲಿ ಜಾತಿಗಳು ಯಾವ ರೀತಿ ಜನ್ಮತಾಳಿದವು ಎಂದು ಖಚಿತವಾಗಿ ಹೇಳುವುದು ಬಹಳ ಕಷ್ಟ ಆದರೆ ಜಾತಿಗಳು ಏಕೆ ಹುಟ್ಟಿದವು ಮತ್ತು ಏಕೆ ಉಳಿದಿವೆ ಎಂಬುದನ್ನು ತಿಳಿಯುವುದು ಕಷ್ಟವೇನಲ್ಲ. ಅನಾದಿ ಕಾಲದಲ್ಲಿ ಹೊರಗಿನಿಂದ ಬಂದವರು ಸ್ಥಳೀಯ ಜನಾಂಗದ ಮೇಲೆ ಯುದ್ಧ ಮಾಡಿ ಗೆದ್ದು ಹಿಡಿತ ಸಾಧಿಸಿದರು. ಸೋತವರ ಬಗ್ಗೆ ತಿರಸ್ಕಾರ ಭಾವ ಹೊಂದಿ, ಅವರಲ್ಲಿ ಭಯ ಹುಟ್ಟಿಸಿ, ಕಷ್ಟದ ಹಾಗೂ ಕೊಳಕಿನ ಕೆಲಸಗಳಲ್ಲಿ ತೊಡಗಿಸಿದರು. ಈ ರೀತಿ ಒಂದು ವಿಧವಾದ ಕೆಲಸದ ವಿಭಜನೆಯನ್ನು ಮಾಡಿಕೊಂಡರು. ವಿದ್ಯೆ-ಬುದ್ಧಿಯ ಗುತ್ತಿಗೆದಾರರನ್ನಾಗಿ ಬ್ರಾಹ್ಮಣರನ್ನು, ಯುದ್ಧ ಮಾಡುವುದಕ್ಕೆ ಕ್ಷತ್ರಿಯರನ್ನು ವಾಣಿಜ್ಯ ಮತ್ತು ಕೈಗಾರಿಕೆಗಳನ್ನು ನಡೆಸುವುದಕ್ಕೆ ವೈಶ್ಯರನ್ನು ನೇಮಿಸಿದರು. ಸಾಮಾಜಿಕ ವ್ಯವಸ್ಥೆಯ ಕೊನೆಯಲ್ಲಿರುವ ಶೂದ್ರರನ್ನು ಅತ್ಯಂತ ಕಷ್ಟ ಮತ್ತು ಕೊಳಕಿನ ಕೆಲಸ ಮಾಡುವ ಗುಲಾಮರನ್ನಾಗಿ ಮಾಡಿದರು. ಈ ರೀತಿಯಾದ ಶ್ರಮ ವಿಭಜನೆಯಿಂದ ಮೊದಲ ಮೂರು ವರ್ಣಗಳು ಆಳುವವರಾಗಿಯೂ, ನಾಲ್ಕನೆಯವರು (ಶೂದ್ರರು) ಆಳಲ್ಪಟ್ಟವರಾಗಿಯೂ ರೂಪುಗೊಂಡರು. ಚಾತುರ್ವರ್ಣ್ಯದ ಹೊರಗೆ ಸಾಮಾಜಿಕ ವರ್ಗಗಳನ್ನು ನಿರ್ಮಿಸಲಾಗಿದೆ. ಅವುಗಳೆಂದರೆ: (1) ಅಪರಾಧಿ ಬುಡಕಟ್ಟುಗಳು, (2) ಆದಿವಾಸಿ ಬುಡಕಟ್ಟುಗಳು ಮತ್ತು (3) ಅಸ್ಪೃಶ್ಯರು. ಒಂದೊಂದು ಜಾತಿಗೆ ಒಂದೊಂದು ಕಸುಬು. ಈ ಕಸುಬನ್ನು ವಂಶಪಾರಂಪರ್ಯ ಪರ ಮಾಡಲಾಗಿದೆ. ಜಾತಿಯನ್ನು ಬದಲಾಯಿಸುವಂತಿಲ್ಲ, ಕಸುಬನ್ನು ಬದಲಾಯಿಸುವಂತಿಲ್ಲ. ಜಾತಿ ಜಾತಿಯ ಮಧ್ಯೆ ಸಂಬಂಧ ಬೆಳೆಸುವಂತಿಲ್ಲ ಮತ್ತು ಸಹಭೋಜನ ಮಾಡುವಂತಿಲ್ಲ. ಅಷ್ಟೇಕೆ ಸತ್ತ ಹೆಣಗಳನ್ನು ಒಂದೆ ಸ್ಮಶಾನದಲ್ಲಿ ಸುಡುವಂತಿಲ್ಲ ಅಥವಾ ಹೂಳುವಂತಿಲ್ಲ ಎನ್ನುತ್ತವೆ ಜಾತಿಯ ಕಟ್ಟುಪಾಡುಗಳು.
ಈ ಜಾತಿ ಆಧರಿತ ಅಸಮಾನತೆ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಈ ಅಸಮಾನತೆಗಳನ್ನು ಕಾಣಬಹುದು. ಈ ಜಾತಿ ವ್ಯವಸ್ಥೆಯಲ್ಲಿ ಮೇಲ್ಜಾತಿಗಳನ್ನು ಮೇಲ್ವರ್ಗಗಳೆಂದು ಮತ್ತು ಕೆಳಜಾತಿಗಳನ್ನು ಕೆಳವರ್ಗಗಳೆಂದು ಪರಿಗಣಿಸಲಾಗುತ್ತದೆ. ಇದು ಶ್ರಮ ವಿಭಜನೆಯಾಗಿರದೆ ಶ್ರಮಿಕರ ವಿಭಜನೆಯಾಗಿದೆ ಎನ್ನುವುದನ್ನು ಗಮನಿಸಬೇಕು. ಅತಿ ಹೆಚ್ಚು ಅವಿದ್ಯಾವಂತರು, ನಿರುದ್ಯೋಗಿಗಳು, ಬಡವರು, ರೋಗಗಸ್ಥರು, ವಸತಿಹೀನರು, ಭೂಹೀನರು ಎಲ್ಲಿದ್ದಾರೆಂದು ಹುಡುಕಿಕೊಂಡು ಹೋದರೆ ಅವರು ಕಾಣುವುದು ಕೆಳಜಾತಿಗಳಲ್ಲಿ. ಹೀಗೆ ಜಾತಿ ಮತ್ತು ವರ್ಗ ಬೆರೆತುಹೋಗಿರುವ ಒಂದು ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಭಾರತದಲ್ಲಿ ಕಾಣಬಹುದು.
ಜಾತಿ ಪದ್ಧತಿಯು ಆರ್ಥಿಕ ಸಂಘಟನೆಯಾಗಿ ಬಹು ಹಾನಿಕಾರಕ ವ್ಯವಸ್ಥೆಯಾಗಿದೆ. ಇದು ಮನುಷ್ಯರ ಸಹಜ ಶಕ್ತಿ ಮತ್ತು ಪ್ರತಿಭೆಗಳನ್ನು ಹತ್ತಿಕ್ಕಿ, ಕಾಲಕ್ರಮೇಣ ಅವರ ಸಾಮರ್ಥ್ಯಗಳು ನಿರುಪಯುಕ್ತವಾಗುವಂತೆ ಮಾಡಿದೆ. ಉದಾಹರಣೆಗೆ ಕ್ಷತ್ರಿಯರನ್ನು ಮಾತ್ರ ಯುದ್ಧಗಳಲ್ಲಿ ತೊಡಗಿಸಲಾಗುತ್ತಿತ್ತು. ಇತರೆ ಜಾತಿಯ ಜನರು ಶಕ್ತರಾಗಿದ್ದರೂ ಅವರನ್ನು ತೊಡಗಿಸಲಿಲ್ಲ. ಹಾಗಾಗಿ ಇತರೆ ಜಾತಿಯವರಿಗೆ ಹೊರಗಿನವರ ಆಕ್ರಮಣವನ್ನು ತಡೆಯುವ ಸಾಮರ್ಥ್ಯವಿದ್ದರೂ ತಡೆಯಲಾಗಲಿಲ್ಲ. ಕ್ಷತ್ರಿಯರು ಸೋತರೆ ಇಡೀ ಭಾರತವೇ ಸೋತಂತೆ ಮಾಡಲಾಯಿತು. ಈ ಕಾರಣದಿಂದ ಭಾರತೀಯರು ಸುಮಾರು ಒಂದು ಸಾವಿರ ವರ್ಷಗಳ ಕಾಲ ಪರಕೀಯರ ಗುಲಾಮರಾಗಿ ಬಾಳಬೇಕಾಯಿತು.
5. ನ್ಯಾಯ ವಿತರಣಾ ಪದ್ಧತಿ: ನಾಗರಿಕ ಸಮಾಜದ ಅತಿ ಮುಖ್ಯವಾದ ಲಕ್ಷಣಗಳಲ್ಲಿ ಒಂದು, ಅಲ್ಲಿನ ನಿವಾಸಿಗಳು ತಮ್ಮೊಳಗಿನ ವ್ಯಾಜ್ಯಗಳನ್ನು ಹೇಗೆ ಶಾಂತಿಯುತವಾಗಿ ಪರಿಹರಿಸಿಕೊಳ್ಳುತ್ತಾರೆ ಎಂಬುದು. ಭಾರತ ರಾಷ್ಟ್ರೀಯ ಕಾನೂನು ಆಯೋಗ ತನ್ನ ಹದಿನಾಲ್ಕನೇ ವರದಿಯಲ್ಲಿ ಪ್ರಾಚೀನ ಭಾರತದಲ್ಲಿನ ನ್ಯಾಯಾಲಯಗಳ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳುವುದಕ್ಕೆ ಆಗುವುದಿಲ್ಲವೆಂದು ತಿಳಿಸಿದೆ. ಆದರೆ ಸ್ಮೃತಿಕಾರರಾದ ನಾರದ, ಬೃಹಸ್ಪತಿ, ಮನು, ಮಾಧವ ಹಾಗೂ ಇತರರ ಬರವಣಿಗೆಗಳಿಂದ ಕಟ್ಟುನಿಟ್ಟಿನ ನ್ಯಾಯ ವಿತರಣಾ ಪದ್ಧತಿ ಇತ್ತು ಎಂದು ತಿಳಿಯುತ್ತದೆ.
ಪ್ರಾಚೀನ ಭಾರತದ ನ್ಯಾಯ ಪದ್ಧತಿಗಳು:
(i) ಸಶಿಷ್ಟ ನ್ಯಾಯಾಲಯಗಳು: ಈ ನ್ಯಾಯಾಲಯಗಳು ರಾಜರ ಅರಮನೆಯಲ್ಲಿ ಇರುತ್ತಿದ್ದವು. ಇಲ್ಲಿ ರಾಜರೆ ಸ್ವತಃ ವ್ಯಾಜ್ಯಗಳನ್ನು ತೀರ್ಮಾನ ಮಾಡುತ್ತಿದ್ದರು. ಪ್ರತಿ ದಿನ ರಾಜರು ತಮ್ಮ ಅನೇಕ ಪ್ರಮುಖ ಕೆಲಸಗಳ ಮಧ್ಯೆಯೂ ನ್ಯಾಯ ತೀರ್ಮಾನದ ಕೆಲಸಕ್ಕಾಗಿ ಸ್ವಲ್ಪ ಸಮಯವನ್ನು ವಿನಿಯೋಗಿಸುತ್ತಿದ್ದರು. ರಾಜರ ನ್ಯಾಯ ತೀರ್ಮಾನದ ಕೆಲಸವನ್ನು ಸಮರ್ಪಕವಾಗಿ ಮಾಡಲು ಕಾನೂನಿನ ರಚನೆ ಅನಿವಾರ್ಯವಾಯಿತು. ಈ ಕಾನೂನುಗಳನ್ನು ಸ್ಮೃತಿಕಾರರಾದ ಮನು, ಯಾಜ್ಞವಲ್ಕ, ಪರಾಶರ, ನಾರದ, ಬೃಹಸ್ಪತಿ, ಕಾತ್ಯಾಯನ, ಕೌಟಿಲ್ಯ ಮುಂತಾದವರು ಪ್ರಮುಖವಾಗಿ ರಚನೆ ಮಾಡಿದರು.
(ii) ಮುದ್ರಿಕ ನ್ಯಾಯಾಲಯಗಳು:ಈ ನ್ಯಾಯಾಲಯಗಳು ರಾಜರ ಪರವಾಗಿ ರಾಜಮುದ್ರಿಕೆಯನ್ನು ಬಳಸಿ ನ್ಯಾಯ ವಿತರಣೆ ಮಾಡುವ ನ್ಯಾಯಾಲಯಗಳು.
(ii) ಅಪ್ರಶಿಷ್ಟ ನ್ಯಾಯಾಲಯಗಳು: ಈ ನ್ಯಾಯಾಲಯಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಿ ಜನರಿಗೆ ನ್ಯಾಯ ವಿತರಣೆ ಮಾಡುತ್ತಿದ್ದವು. (ಸಂಚಾರಿ ನ್ಯಾಯಾಲಯ)
(iv) ಪ್ರಶಿಷ್ಟ ನ್ಯಾಯಾಲಯಗಳು: ಈ ನ್ಯಾಯಾಲಯಗಳು ಒಂದು ನಿರ್ದಿಷ್ಟ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತವೆ.
ಮೇಲಿನ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳುವ ವ್ಯಕ್ತಿಗಳಿಗೆ ಇರಬೇಕಾದ ಕೆಲವು ವಿಶೇಷ ಲಕ್ಷಣಗಳನ್ನು ಸ್ಮೃತಿಕಾರನಾದ ಕಾತ್ಯಾಯನ ಈ ರೀತಿ ಹೇಳುತ್ತಾನೆ:1) ನ್ಯಾಯಾಧೀಶರು ಕ್ರೂರಿಯಾಗಿರಬಾರದು. ಹಸನ್ಮುಖಿಯೂ, ದಯಾಳುವ ಬುದ್ದಿವಂತರೂ, ಲವಲವಿಕೆಯುಳ್ಳವರೂ ಆಗಿದ್ದು, ದುರಾಸೆ ಇಲ್ಲದವರಾಗಿರಬೇಕು. 2) ನ್ಯಾಯಾಧೀಶರು ಏಕಶಾಸ್ತ್ರ ಪಂಡಿತರಾಗಿರದೇ ಬಹುಶಾಸ್ತ್ರಗಳನ್ನು ತಿಳಿದವರಾಗಿರಬೇಕು.
ಮೇಲೆ ವಿವರಿಸಿದ ನ್ಯಾಯಾಲಯಗಳು ವಿವಿಧ ಜಾತಿಗಳ ಅರ್ಹತೆ ಮತ್ತು ಅನರ್ಹತೆಗಳ ಪ್ರಭಾವಕ್ಕೆ ಒಳಗಾಗಿದ್ದವು. ಅಪರಾಧಿ ಹಾಗೂ ಅಪರಾಧಕ್ಕೆ ಬಲಿಯಾದ ವ್ಯಕ್ತಿಯ ಜಾತಿಗೆ ಅನುಗುಣವಾಗಿ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಬ್ರಾಹ್ಮಣರು ಅಥವಾ ಕ್ಷತ್ರಿಯರು ಅಥವಾ ವೈಶ್ಯರು ಎಸಗಿದ ಅಪರಾಧಕ್ಕೆ ಕೇವಲ ದಂಡವನ್ನು ವಿಧಿಸಬಹುದಾಗಿತ್ತು. ಆದರೆ ಶೂದ್ರರು ಮಾಡಿದ ಅಂತಹುದೇ ಅಪರಾಧಕ್ಕೆ ದೈಹಿಕ ದಂಡನೆಯ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು. ಉದಾಹರಣೆಗೆ, ಬ್ರಾಹ್ಮಣರು, ಕ್ಷತ್ರಿಯ, ವೈಶ್ಯ ಅಥವಾ ಶೂದ್ರರನ್ನು ಅಪಮಾನಿಸಿದರೆ ಅದಕ್ಕೆ ಶಿಕ್ಷೆಯಾಗಿ ಅನುಕ್ರಮವಾಗಿ ಐವತ್ತು, ಇಪ್ಪತ್ತೈದು ಅಥವಾ ಹನ್ನೆರಡು ಪಟ್ಟುಗಳಷ್ಟು ದಂಡ ತೆರಬೇಕಾಗಿತ್ತು. ಜಾತಿ ಶ್ರೇಣಿಗೆ ಅನುಗುಣವಾಗಿ ಆಯಾ ಜಾತಿಗಳವರು ಸಾಲಕ್ಕೆ ಬಡ್ಡಿಯನ್ನು ಕೊಡಬೇಕಾಗಿತ್ತು. ಬ್ರಾಹ್ಮಣರು ಶೇಕಡ ಎರಡು, ವೈಶ್ಯರು ಶೇಕಡ ಮೂರು, ಕ್ಷತ್ರಿಯರು ಶೇಕಡಾ ನಾಲ್ಕು ಮತ್ತು ಶೂದ್ರರು ಶೇಕಡಾ ಹನ್ನೆರಡರಷ್ಟು ಬಡ್ಡಿ ನೀಡಬೇಕಿತ್ತು. ಕೆಳಜಾತಿಯವರ ಸಾಕ್ಷಿಗೆ ಕಡಿಮೆ ಪ್ರಾಧಾನ್ಯತೆಯನ್ನು ಮತ್ತು ಮೇಲ್ಜಾತಿಯವರ ಸಾಕ್ಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿತ್ತು. ಕೆಲವು ವ್ಯಾಜ್ಯಗಳಲ್ಲಿ ಕೆಳಜಾತಿಯವರು ಮೇಲ್ಜಾತಿಯವರು ವಿರುದ್ಧ ಸಾಕ್ಷಿಯನ್ನು ನೀಡುವಂತಿರಲಿಲ್ಲ. ಹೀಗೆ ಪ್ರಾಚೀನ ಭಾರತದಲ್ಲಿದ್ದ. ಮೇಲು ಹಂತದ ನ್ಯಾಯ ವಿತರಣಾ ಪದ್ಧತಿಯು ಜಾತಿ ಶ್ರೇಣಿಯನ್ನು ಆಧರಿಸಿದ, ಸಾಂಪ್ರದಾಯಿಕ ಮತ್ತು ಧಾರ್ಮಿಕ ಕಟ್ಟುಪಾಡುಗಳನ್ನು ಅನುಸರಿಸುತ್ತಿದ್ದ ನ್ಯಾಯ ವಿತರಣಾ ಪದ್ಧತಿಯಾಗಿತ್ತು.
ಆದರೆ ಕೆಳಹಂತದಲ್ಲಿ ಅಂದರೆ ಗ್ರಾಮಮಟ್ಟದಲ್ಲಿ ಭಿನ್ನವಾದ ನ್ಯಾಯ ವಿತರಣಾ ಪದ್ಧತಿ ಜಾರಿಯಲ್ಲಿತ್ತು. ಒಂದೇ ಕುಲಕ್ಕೆ ಅಥವಾ ಜಾತಿಗೆ ಸೇರಿದ ಜನರ ನಡುವೆ ಉಂಟಾಗುವ ವ್ಯಾಜ್ಯಗಳನ್ನು ಆ ಕುಲದ ಹಿರಿಯರು ನಿಷ್ಪಕ್ಷಪಾತವಾಗಿ ತೀರ್ಮಾನ ಮಾಡುತ್ತಿದ್ದರು. ಹಲವು ಜಾತಿಗಳ ಜನರ ನಡುವೆ ಉಂಟಾಗುವ ವ್ಯಾಜ್ಯಗಳನ್ನು ಹಳ್ಳಿಯ ಹಿರಿಯರು ತೀರ್ಮಾನ ಮಾಡುತ್ತಿದ್ದರು. ಕುಲದ ಮುಖಂಡರೇ ಆಗಲೀ ಅಥವಾ ಹಳ್ಳಿಯ ಹಿರಿಯರೇ ಆಗಲೀ – ಕಾನೂನು ವಿಚಾರಗಳಲ್ಲಿ ಪಾಂಡಿತ್ಯವನ್ನು ಪಡೆದವರಲ್ಲ. ಆದರೆ ಅವರು ಅನುಭವದ ಆಧಾರದಲ್ಲಿ, ವಾಸ್ತವಾಂಶದ ಆಧಾರದ ಮೇಲೆ ಮತ್ತು ಒಟ್ಟೂ ಸಮುದಾಯದ ಹಿತದ ಹಿನ್ನೆಲೆಯಲ್ಲಿ ವ್ಯಾಜ್ಯಗಳನ್ನು ಇತ್ಯರ್ಥ ಮಾಡುತ್ತಿದ್ದರು.
ಮಧ್ಯಕಾಲದಲ್ಲಿ ಭಾರತದಲ್ಲಿ ಆಳ್ವಿಕೆ ನಡೆಸಿದ ಮುಸಲ್ಮಾನರು ಭಾರತದ ನ್ಯಾಯ ವಿತರಣಾ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದರು. ಗ್ರಾಮ ಮಟ್ಟದ ನ್ಯಾಯ ವಿತರಣಾ ಪದ್ಧತಿಯಲ್ಲಿ ಮುಸ್ಲಿಂ ದೊರೆಗಳು ಹಸ್ತಕ್ಷೇಪ ಮಾಡಲಿಲ್ಲ. ಮೇಲ್ಮಟ್ಟದ ನ್ಯಾಯಾಲಯಗಳಲ್ಲಿ ಸಿವಿಲ್ ಪ್ರಕರಣಗಳಲ್ಲಿ ಎರಡೂ ಕಡೆ ಕಕ್ಷಿಗಾರರು ಹಿಂದುಗಳಾಗಿದ್ದರೆ ಹಿಂದು ಕಾನೂನುಗಳನ್ನು ಮತ್ತು ನಿಯಮಗಳನ್ನು ಅನುಸರಿಸಲಾಗುತ್ತಿತ್ತು ಮತ್ತು ಹಿಂದು ನ್ಯಾಯವೇತ್ತರ ಸಲಹೆ ಪಡೆಯಲಾಗುತ್ತಿತ್ತು. ಒಂದು ಕಡೆ ಹಿಂದು ಮತ್ತೊಂದು ಕಡೆ ಮುಸ್ಲಿಮರ ನಡುವೆ ಉಂಟಾದ ವ್ಯಾಜ್ಯದಲ್ಲಿ ಇಸ್ಲಾಂ ನ್ಯಾಯ ಮಂಡಳಿಗಳು ತಮ್ಮದೇ ಪ್ರತ್ಯೇಕ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದವು. ಕ್ರಿಮಿನಲ್ ವಿವಾದಗಳಲ್ಲಿ ಇಸ್ಲಾಂ ಧರ್ಮದ ಪದ್ಧತಿಯನ್ನೇ ಅನುಸರಿಸುತ್ತಿದ್ದರು.
ಆಧುನಿಕ ಭಾರತದ ಇತಿಹಾಸದಲ್ಲಿ ಬ್ರಿಟಿಷರ ಆಳ್ವಿಕೆ ಪ್ರಮುಖವಾದದ್ದು. 1601ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು. ಕ್ರಮೇಣ ಈ ಕಂಪನಿಗೆ ಶಾಸನಗಳನ್ನು ರಚಿಸುವ, ಅವುಗಳನ್ನು ಜಾರಿ ಮಾಡುವ ಮತ್ತು ಅವುಗಳನ್ನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯನ್ನು ವಿಧಿಸುವ ಅಧಿಕಾರ ನೀಡಲಾಯಿತು. ಕ್ರಿ.ಶ.1683ರಲ್ಲಿ ಕಂಪನಿಗೆ ಸೂಕ್ತವೆಂದು ತೋರಿದ ಕಡೆಯಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು. ಕ್ರಿ.ಶ. 1726ರಲ್ಲಿ ಇಂಗ್ಲೆಂಡ್ ಮಾದರಿಯಲ್ಲಿ ಅಂದಿನ ಮದರಾಸು, ಬೊಂಬಾಯಿ ಮತ್ತು ಕಲ್ಕತ್ತಾ ನಗರಗಳಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು.
ನಂತರದ ವರ್ಷಗಳಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, ವಾರಸು ಅಧಿನಿಯಮ, ಸಾಕ್ಷ್ಯ ಅಧಿನಿಯಮ, ಕರಾರುಗಳ ಅಧಿನಿಯಮ, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯಿದೆ, ಆಸ್ತಿ ವರ್ಗಾವಣೆ ಕಾಯಿದೆ, ಕಾಲಮಿತಿ ಕಾಯಿದೆ ಇತ್ಯಾದಿ ಹಲವು ಶಾಸನಗಳನ್ನು ಜಾರಿಗೆ ತರಲಾಯಿತು. ಕ್ರಮೇಣ ಸಿವಿಲ್ ನ್ಯಾಯಾಲಯಗಳು, ಕ್ರಿಮಿನಲ್ ನ್ಯಾಯಾಲಯಗಳು ಮತ್ತು ಉಚ್ಚ ನ್ಯಾಯಾಲಯಗಳನ್ನು ಪ್ರಾರಂಭಿಸಲಾಯಿತು.
ಬ್ರಿಟಿಷ್ ಮಾದರಿಯ ಶಾಸನಗಳು ಮತ್ತು ನ್ಯಾಯಾಲಯಗಳು ಪ್ರಾಚೀನ ಭಾರತದ ಅನೇಕ ಪದ್ಧತಿಗಳನ್ನು ಬದಲಾಯಿಸಿದವು ಮತ್ತು ಹಲವನ್ನು ಕೊನೆಗಾಣಿಸಿದವು. ಅದೇ ರೀತಿಯಾಗಿ ಮುಸಲ್ಮಾನರು ತಂದ ನ್ಯಾಯ ಪದ್ಧತಿಯೂ ಬದಲಾವಣೆಗೆ ಒಳಗಾದವು.
6. ಆರ್ಥಿಕ ವ್ಯವಸ್ಥೆ: ಭಾರತದ ಅರ್ಥ ವ್ಯವಸ್ಥೆಯ ಅಡಿಪಾಯ ಹಳ್ಳಿಗಳು. ಪ್ರತಿಯೊಂದು ಹಳ್ಳಿಗೂ ನಿರ್ದಿಷ್ಟ ಗಡಿ ಇದೆ. ಹಳ್ಳಿಗಳಲ್ಲಿ ಪಟೇಲ, ಶ್ಯಾನುಭೋಗ, ತೋಟಿ, ತಳವಾರ, ನೀರುಗಂಟಿಯೆಂಬ ಆಡಳಿತಗಾರರಿದ್ದರು. ಉತ್ತರ ಕರ್ನಾಟಕದಲ್ಲಿ ಗೌಡರು, ಪೊಲೀಸ್‌ಗೌಡ, ಮಾಲೀಗೌಡ, ಕುಲಕರ್ಣಿ, ತಳವಾರ, ಪಾಡೇವಾರ ಇತ್ಯಾದಿ. ಅಗಸ, ನಾಯಿಂದ, ಜ್ಯೋತಿಷಿ, ಜೋಯಿಸ, ಉಪಾಧ್ಯಾಯರೆಂಬ ವಿವಿಧ ಸೇವೆ ನೀಡುವ ಸೇವಾಗಾರರಿದ್ದರು. ನೇಗಿಲು, ಬಂಡಿ ಮುಂತಾದ ಮರಗೆಲಸಕ್ಕೆ ಬಡಗಿ, ಮಡಕೆ ಮಾಡುವ ಕುಂಬಾರ, ಚಿನ್ನ-ಬೆಳ್ಳಿ ಒಡವೆ ಮಾಡುವ ಅಕ್ಕಸಾಲಿಗ, ಚರ್ಮದ ಕೆಲಸಕ್ಕೆ ಚಮ್ಮಾರ ಎಂಬ ಕಸುಬುಗಾರರಿದ್ದರು. ಹಳ್ಳಿಯ ಬಹುತೇಕ ಜನ ಕೃಷಿಕರು. ಈ ಕೃಷಿಕರಿಗೆ ಕಸುಬುಗಾರರು, ಸೇವೆಗಾರರು ಮತ್ತು ಆಡಳಿತಗಾರರು ಸೇವೆ ನೀಡುತ್ತಿದ್ದರು. ಅದಕ್ಕೆ ಪ್ರತಿಫಲವಾಗಿ ರೈತರ ಬೆಳೆಯಲ್ಲಿ ನಿರ್ದಿಷ್ಟ ಪಾಲನ್ನು ಪಡೆಯುತ್ತಿದ್ದರು. ಈ ರೀತಿಯಲ್ಲಿ ಹಳ್ಳಿಯು ಹೆಚ್ಚು ಕಡಿಮೆ ಸ್ವಾವಲಂಬಿಯಾಗಿ ಹಾಗೂ ಸ್ವಯಂಪೂರ್ಣವಾಗಿತ್ತು. ಆದ್ದರಿಂದಲೇ ಪ್ರತಿಯೊಂದು ಹಳ್ಳಿಯನ್ನೂ ಸ್ವತಂತ್ರವಾದ ಗಣರಾಜ್ಯ ಎಂದು ಕರೆದರು.
ಹಳ್ಳಿಯ ಜೀವನಕ್ಕೆ ಪೂರಕವಾಗಿ ಬೇಕಾದ ಸಾಮಗ್ರಿಗಳನ್ನು ತಯಾರಿಸಿಕೊಡುವ ಗುಡಿ ಕೈಗಾರಿಕೆಗಳಿದ್ದವು. ಮತ್ತೊಂದು ಕಡೆ ದೊಡ್ಡ ಪ್ರಮಾಣದಲ್ಲಿ ಸೈನಕ್ಕೆ ವ್ಯಾಪಾರ ಮತ್ತು ವಿದೇಶಗಳಿಗೆ ರಫ್ತು ಮಾಡುವುದಕ್ಕೆ ಬೇಕಾಗುವಷ್ಟು ಸರಕನ್ನು ತಯಾರಿಸುವ ಕುಶಲ ಕೈಗಾರಿಕೆಗಳಿದ್ದವು.
ಹೀಗೆ ಸ್ವಯಂಪೂರ್ಣ ಗ್ರಾಮ, ಗುಡಿ ಕೈಗಾರಿಕೆಗಳು, ಕುಶಲ ಕೈಗಾರಿಕೆಗಳು, ವ್ಯಾಪಾರ, ಲೇವಾದೇವಿ ಇತ್ಯಾದಿಗಳು ಭಾರತದ ಅರ್ಥವ್ಯವಸ್ಥೆಯ ಆಧಾರ ಸ್ತಂಭಗಳಾಗಿದ್ದವು. ಜೊತೆಜೊತೆಗೇ ಶೋಷಣೆ, ಸುಲಿಗೆ, ಅತ್ಯಾಚಾರ, ಲಂಚಗುಳಿತನ ಎಲ್ಲವೂ ಇದ್ದವು. ಬಹ ಜನ ಬಡವರಾಗಿದ್ದರು; ಹಲವು ಬಗೆಯ ಪಕ್ಷಪಾತಗಳಿದ್ದವು. ಭಾರತದಲ್ಲಿ ತಯಾರಾದ ಸರಕುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೋಗಿ ದೇಶದೊಳಗೆ ಚಿನ್ನ ಬೆಳ್ಳಿ ಹರಿದು ಬರುತ್ತಿತ್ತು. ಈ ಸಂಪತ್ತು ನ್ಯಾಯವೆಂದು ಹೇಳಬಹುದಾದ ರೀತಿಯಲ್ಲಿ ಜನಸಾಮಾನ್ಯರಿಗೆ ವಿತರಣೆಯಾಗಲಿಲ್ಲ. ಆದರೆ ದೇಶದಿಂದ ಹೊರಕ್ಕೆ ಹೋಗಲಿಲ್ಲ.
ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಅರ್ಥವ್ಯವಸ್ಥೆಯ ನಶಿಸುವಿಕೆ ಅರಂಭವಾಯಿತು. ನಾನಾ ನೆಪಗಳಲ್ಲಿ ಇಲ್ಲಿನ ರಾಜರು, ನವಾಬರು ಕೂಡಿಸಿಟ್ಟಿದ್ದ ಸಂಪತ್ತನ್ನು ಬ್ರಿಟಿಷರು ಕೊಳ್ಳೆ ಹೊಡೆದರು. ಹೆಚ್ಚಿನ ಕಂದಾಯ ಮತ್ತು ವಿವಿಧ ರೀತಿಯ ತೆರಿಗೆಗಳನ್ನು ವಸೂಲಿ ಮಾಡಿ ಇಂಗ್ಲೆಂಡಿಗೆ ಕಳುಹಿಸಿದರು. ಇದರ ಪರಿಣಾಮವಾಗಿ ಕೃಷಿ ಮತ್ತು ಕುಶಲ ಕೈಗಾರಿಕೆಗಳು ನಾಶವಾದವು. ಕೋಟ್ಯಾಂತರ ಜನರನ್ನು ಕ್ಷಾಮದ ದವಡೆಗೆ ನೂಕಿದರು. ಕ್ರಮೇಣ ಭಾರತ ಬಹುದೊಡ್ಡ ಬಡವರನ್ನು ಹೊಂದಿದ ರಾಷ್ಟ್ರವಾಯಿತು.
7. ಧಾರ್ಮಿಕ ಕಟ್ಟುಪಾಡುಗಳು, ಸಾಮಾಜಿಕ ಮೌಲ್ಯಗಳು ಮತ್ತು ಮೂಢನಂಬಿಕೆಗಳು: ಭಾರತದ ಶ್ರೇಣೀಕೃತ ಜಾತಿ ಪದ್ಧತಿ ವ್ಯವಸ್ಥೆಯು ಕೆಳಹಂತದ ಜನ ಸಮುದಾಯಗಳನ್ನು ಶಿಕ್ಷಣದಿಂದ ದೂರವಿಟ್ಟಿತು. ಮಹಿಳೆಯರನ್ನು ಎರಡನೇ ದರ್ಜೆಯ ಜನರಂತೆ ಕಾಣಲಾಗುತ್ತಿತ್ತು ಹಾಗೂ ಅವರನ್ನು ಶಿಕ್ಷಣದಿಂದ ಬಹಿಷ್ಕರಿಸಲಾಗಿತ್ತು. ‘ಅಸ್ಪೃಶ್ಯರು ಸಂಸ್ಕೃತವನ್ನು ಕೇಳಿಸಿಕೊಂಡರೆ ಕಿವಿಗೆ ಕಾದ ಸೀಸ ಹೊಯ್ಯಿರಿ, ಸಂಸ್ಕೃತದಲ್ಲಿ ಮಾತನಾಡಿದರೆ ನಾಲಿಗೆಯನು ಸೀಳಿರಿ’ ಎಂದೆಲ್ಲಾ ಹೇಳಲಾಯಿತು. ಅಂದಿನ ಶಿಕ್ಷಣ ಸಂಸ್ಥೆಗಳಾದ ಗುರುಕುಲಗಳಲ್ಲಿ ಕೇವಲ ಕ್ಷತ್ರಿಯ ಮತ್ತು ಬ್ರಾಹ್ಮಣ ವರ್ಗಗಳಿಗೆ ಪ್ರವೇಶವಿತ್ತು. ಉಳಿದ ಜಾತಿಯ ಜನರಿಗೆ ಗುರುಕುಲಗಳಲ್ಲಿ ಪ್ರವೇಶ ನಿಷೇಧಿಸಲಾಗಿತ್ತು. ಏಕಲವ್ಯನಂತಹ ಅರಣ್ಯವಾಸಿಯು ತನ್ನ ಸ್ವಂತ ಪರಿಶ್ರಮದಿಂದ ವಿದ್ಯೆಯನ್ನು ಕಲಿತ ಸಂಗತಿ ನಮಗೆಲ್ಲಾ ತಿಳಿದಿದೆ. ಆದರೆ ಅದನ್ನೂ ಸಹಿಸಲಾಗದೆ ಗುರುಕಾಣಿಕೆಯ ಹೆಸರಿನಲ್ಲಿ ಅವನ ಹೆಬ್ಬೆರಳನ್ನು ಅವನ ಕೈಯಿಂದಲೆ ಕತ್ತರಿಸಿಕೊಳ್ಳುವಂತೆ ಮಾಡಲಾಯಿತು. ಹೀಗೆ ಭಾರತದ ಬಹುದೊಡ್ಡ ಜನ ವಿಭಾಗ ಸ್ವಾತಂತ್ರ್ಯಪೂರ್ವದಲ್ಲಿ ಶಿಕ್ಷಣದಿಂದ ವಂಚಿಸಲ್ಪಟ್ಟಿತ್ತು.
ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಹೀಗೆ ಒಂದಲ್ಲ ಒಂದು ಜನಸಮುದಾಯವನ್ನು ಕೆಳಸ್ತರದವರು ಎಂದು ಗುರುತಿಸಲಾಗುತ್ತಿತ್ತು. ರೋಮನ್ನರಲ್ಲಿ ಗುಲಾಮರು, ಸ್ಪಾರ್ಟನ್ನರಲ್ಲಿ ಜೀತದಾಳುಗಳು, ಬ್ರಿಟಿಷರಲ್ಲಿ ನೀಚ ವೃತ್ತಿಯವರು, ಅಮೇರಿಕದಲ್ಲಿ ನೀಗ್ರೋಗಳು ಮತ್ತು ಜರ್ಮನರಲ್ಲಿ ಯಹೂದಿಗಳು ಇದ್ದರು. ಹೀಗೆಯೇ ಭಾರತದಲ್ಲಿ ಅಸ್ಪೃಶ್ಯರು. ಕಾಲಕ್ರಮೇಣ ಗುಲಾಮಗಿರಿ, ಜೀತ ಪದ್ಧತಿ ಇವೆಲ್ಲ ಮರೆಯಾದವು. ಆದರೆ ಅಸ್ಪೃಶ್ಯತೆ ಮಾತ್ರ ಇನ್ನೂ ಉಳಿದೇ ಇದೆ. ಭಾರತದಲ್ಲಿರುವ ಅಸ್ಪೃಶ್ಯತೆ ಅಮಾನವೀಯವಾದದ್ದು. ಈ ವರ್ಗದ ಜನ ಹುಟ್ಟುವುದು ಅಸ್ಪೃಶ್ಯರಾಗಿ, ಬದುಕುವುದು ಅಸ್ಪೃಶ್ಯರಾಗಿ, ಸಾಯುವುದು ಅಸ್ಪೃಶ್ಯರಾಗಿ ಮತ್ತು ಪಡೆಯುವುದು ಅಸ್ಪೃಶ್ಯತೆಯ ಕಳಂಕ ಅಂಟಿದ ಮಕ್ಕಳನ್ನು.
ಧರ್ಮದ ಸೃಷ್ಟಿಯಲ್ಲಿ ಪುರುಷರು ಪ್ರಧಾನ ಪಾತ್ರ ವಹಿಸಿದ್ದಾರೆ. ನೂರಾರು ಕಟ್ಟುಪಾಡುಗಳನ್ನು ವಿಧಿಸಿ ಮನುಷ್ಯರು ಮನುಷ್ಯರಾಗಿ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಪುರಾಣಗಳು, ಪುಣ್ಯಕತೆಗಳು, ಮೂಢನಂಬಿಕೆಗಳು, ಸಂಪ್ರದಾಯ ಆಚರಣೆಗಳು, ಭಾವನಾತ್ಮಕ ನಂಬಿಕೆಗಳಾಗಿ ಪರಿಣಮಿಸಿದ್ದು ಶೋಷಕರನ್ನು ಮತ್ತು ಶೋಷಣಾ ವ್ಯವಸ್ಥೆಯನ್ನು ರಕ್ಷಿಸುವ ತಂತ್ರದ ಭಾಗವಾಗಿದೆ.
ಜಗತ್ತಿನ ಬಹುಪಾಲು ಧರ್ಮಗಳು ಮಹಿಳೆಯರನ್ನು ದುರ್ಬಲ ವರ್ಗದ ಒಂದು ಭಾಗವಾಗಿಯೇ ಕಾಣುತ್ತಾ ಬಂದಿವೆ. ಭಾರತದಲ್ಲಿ ಬಾಲ್ಯವಿವಾಹ, ಸತಿ ಪದ್ಧತಿ, ದೇವದಾಸಿ ಪದ್ಧತಿ, ವಿಧವೆಯರ ಮರುಮದುವೆ ನಿಷೇಧ, ವರದಕ್ಷಿಣೆ ಪದ್ಧತಿ, ಬಾಲೆಯರ ಬಲಿ ಇತ್ಯಾದಿ ಅನಿಷ್ಟ ಧಾರ್ಮಿಕ ಪದ್ಧತಿಗಳಿಂದ ಮಹಿಳೆಯರ ಶೋಷಣೆ ನಿರಂತರವಾಗಿ ಮುಂದುವರೆಯಿತು. ‘ಹೆಣ್ಣು’ ತಿಳುವಳಿಕೆ ಇಲ್ಲದವಳು, ಹೆಣ್ಣಿನ ಬುದ್ಧಿ ಮೊಣಕಾಲಿನ ಕೆಳಗೆ, ಕೆಡುಕಿಗೆ ಮೂಲ ಹೆಣ್ಣು, ಜಗತ್ತಿಗೆ ಪಾಪ ತಂದವಳು ಹೆಣ್ಣು, ಹೆಣ್ಣಿನ ಸಂಪರ್ಕ ನರಕಕ್ಕೆ ದಾರಿ, ನಗುವ ಹೆಂಗಸನ್ನು ನಂಬಬೇಡ ಎಂದೆಲ್ಲಾ ಹೇಳುತ್ತಾ ಅವಳನ್ನು ತಿರಸ್ಕಾರದಿಂದ ನೋಡುವ ಸಾಮಾಜಿಕ ಮೌಲ್ಯಗಳನ್ನು ಬಿತ್ತಲಾಗಿದೆ.
ಜಗತ್ತಿನಾದ್ಯಂತ ಎಲ್ಲ ಕಾಲಗಳಲ್ಲಿ ಎಲ್ಲ ದೇಶಗಳಲ್ಲಿ ಮತ್ತು ಸಮಾಜಗಳಲ್ಲಿ ತನ್ನದೇ ಆದ ‘ನಂಬಿಕೆ’ಗಳು ಮತ್ತು ‘ಮೂಢನಂಬಿಕೆಗಳು’ ಆಚರಣೆಯಲ್ಲಿವೆ. ಸಮಾಜದ ಬಹುಪಾಲು ಜನರು ನಿತ್ಯ ಜೀವನದ ಹೆಜ್ಜೆಹೆಜ್ಜೆಗೂ ಇವುಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ‘ನಂಬಿಕೆ’ ಮತ್ತು ‘ಮೂಢನಂಬಿಕೆ’ಗಳ ನಡುವಿನ ಗೆರೆ ಅತ್ಯಂತ ಸೂಕ್ಷ್ಮ ಮತ್ತು ಅಸ್ಪಷ್ಟ. ಅರ್ಥ ಮಾಡಿಕೊಳ್ಳಬಹುದಾದ ನಂಬಿಕೆಗಳಂತೆಯೇ ಅರ್ಥ ಮಾಡಿಕೊಳ್ಳಲಾಗದ ನಂಬಿಕೆಗಳೂ ಇವೆ. ಅದೇ ರೀತಿ ಅಮಾನವೀಯ, ಅಪಾಯಕಾರಿ, ವಿನಾಶಕಾರಿ, ಹಿಂಸಾತ್ಮಕ ಹಾಗೂ ಅನಾರೋಗ್ಯಕರ ನಂಬಿಕೆಗಳೂ ಇವೆ. ತಲತಲಾಂತರಗಳಿಂದ ಪ್ರಶ್ನಿಸದೆ ಬಂದಿರುವ ನಂಬಿಕೆಗಳು ಮತ್ತು ಸತ್ಯಾಸತ್ಯತೆಯನ್ನು ಪರೀಕ್ಷಿಸಿ ನೋಡಲು ಅಸಮರ್ಥರಾದ ಜನರ ನಂಬಿಕೆಗಳೇ ಮೂಢನಂಬಿಕೆಗಳು. ಈ ಮೂಢನಂಬಿಕೆಗಳು ಜನರ ಗಮನವನ್ನು ಸಮಸ್ಯೆಗಳ ಮೂಲದಿಂದ ದೂರ ಸೆಳೆದು ಅವರಲ್ಲಿ ಹತಾಶೆಯನ್ನು ಮೂಡಿಸುತ್ತವೆ. ಅಜ್ಞಾನ ತುಂಬಿದ ಸಾಮಾನ್ಯರನ್ನು ಇನ್ನಷ್ಟು ನಿಸ್ಸತ್ವಗೊಳಿಸಿ ಜೀವನದ ಸಾರವನ್ನು ಹೀರಿಬಿಡುತ್ತವೆ. ಪರಿಣಾಮವಾಗಿ ಜನರು ಪರಿಸ್ಥಿತಿಯನ್ನು ಮೀರಲಾಗದೆ ಅದರ ದಾಸರಾಗುತ್ತಾರೆ. ವಸ್ತುನಿಷ್ಠ ಸಾಮಾಜಿಕ ಬದಲಾವಣೆಗೆ ಬದಲಾಗಿ ಜಡ್ಡುತನವೇ ಸಾಮಾಜಿಕ ವಾಸ್ತವವಾಗುತ್ತದೆ. ಇಂಥ ಮೌಢ್ಯಗಳಿಂದಲೇ ಶೋಷಣೆ, ಗುಲಾಮಗಿರಿ, ಅಸ್ಪೃಶ್ಯತೆ, ಮೇಲು-ಕೀಳೆಂಬ ಆಲೋಚನೆಗಳು ಮುಂದುವರಿಯುತ್ತವೆ. ಭಾರತದಲ್ಲಿ ಎಣಿಸಲಾರದಷ್ಟು ಮೂಢನಂಬಿಕೆಗಳಿವೆ. ದಿನದಿಂದ ದಿನಕ್ಕೆ ಹೊಸಹೊಸ ಮೂಢನಂಬಿಕೆಗಳು ಸೇರ್ಪಡೆಯಾಗುತ್ತಿವೆ.
ಗ್ರಾಮೀಣ ಜನರು ತಮ್ಮ ಕಷ್ಟಗಳ ನಿವಾರಣೆಗೆ ಮತ್ತು ತೊಂದರೆಗಳ ಪರಿಹಾರಕ್ಕೆ ಕಾಲಕಾಲಕ್ಕೆ ಗ್ರಾಮದೇವತೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಎಲ್ಲಮ್ಮ, ಚೌಡಮ್ಮ, ನಾಗಮ್ಮ, ಪುಂಗೆಮ್ಮ, ಪ್ಲೇಗಮ್ಮ. ಸಿಡುಬಮ್ಮ, ಮಾರಮ್ಮ, ದಂಡುಮಾರಮ್ಮ, ಮೋರಿ ಮಾರಮ್ಮ ಇತ್ಯಾದಿ, ಇತ್ಯಾದಿ… ಕರ್ನಾಟಕದ ಒಂದು ಹಳ್ಳಿಯಲ್ಲಿ ‘ಏಡ್ಸಮ್ಮ’ನನ್ನು ಪ್ರತಿಷ್ಠಾಪಿಸಿ ದಿನನಿತ್ಯ ಪೂಜಿಸುತ್ತಿದ್ದಾರಂತೆ. ತಮಗೆ ಬರುವ ಸಮಸ್ಯೆಯನ್ನೇ ದೇವತೆಯಾಗಿ ಮಾರ್ಪಡಿಸಿ, ಸಮಸ್ಯೆಯನ್ನು ಪರಿಹರಿಸುವಂತೆ ಕೋರುವ ಈ ಪ್ರಯತ್ನಗಳ ಜೊತೆಗೆ, ತಮಗೆ ಉಪಕಾರ ಮಾಡಿದ ಜನರನ್ನು ದೈವಗಳೆಂದು ಪೂಜಿಸುವ ಪರಿಪಾಠವೂ ಚಾಲ್ತಿಯಲ್ಲಿದೆ.
ಭಾರತೀಯರ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು ವೈವಿಧ್ಯಮಯ. ಮುಳ್ಳಿನ ಗದ್ದಿಗೆಯ ಮೇಲೆ ನಡೆಯುವುದು, ಉರುಳುಸೇವೆ, ಬೇವಿನ ಉಡುಗೆಯ ಸೇವೆ, ಬೆತ್ತಲೆ ಸೇವೆ, ಕೆಂಡದ ಮೇಲೆ ನಡೆಯುವುದು, ಚಾಕು ಚೂರಿಗಳನ್ನು ನಾಲಿಗೆಗೆ-ಕೆನ್ನೆಗೆ ಚುಚ್ಚಿಕೊಳ್ಳುವುದು, ಹೆಣ್ಣು ಮಗುವನ್ನು ಬಲಿ ಕೊಡುವುದು ಹೀಗೆ ಲೆಕ್ಕವಿಲ್ಲದಷ್ಟು ಹರಕೆಗಳು, ಮಾಟಗಾತಿಯರು, ಬಾನಾಮತಿ, ಭೂತ, ದೆವ್ವ ಇತ್ಯಾದಿಯಾಗಿ ಅನೇಕ ನಂಬಿಕೆಗಳು ಮತ್ತು ಆಚರಣೆಗಳು ಇನ್ನೂ ಜಾರಿಯಲ್ಲಿವೆ. 20ನೇ ಶತಮಾನದ ಮಧ್ಯಭಾಗದವರೆಗೆ ಭಾರತದ ಬಹುಪಾಲು ಜನರು ಅವಿದ್ಯಾವಂತರಾಗಿ, ಅಜ್ಞಾನಿಗಳಾಗಿ ಮತ್ತು ಮೂಢನಂಬಿಕೆಗಳಿಂದ ಆವೃತರಾಗಿ ಬದುಕಿದರು. ಸ್ವಾತಂತ್ರ್ಯ ಬಂದ ನಂತರ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದ್ದರೂ, ಇವುಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕಲು ಸಾಧ್ಯವಾಗಿಲ್ಲ.








