ಸ್ವಾತಂತ್ರ್ಯ ಹೋರಾಟ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

9ನೇ ಶತಮಾನದ ಮಧ್ಯಭಾಗದಿಂದ 20ನೇ ಶತಮಾನದ ಮಧ್ಯಭಾಗದವರೆಗೆ ಭಾರತ ಪರಕೀಯರ ಆಳ್ವಿಕೆಗೆ ಒಳಪಟ್ಟಿತ್ತು. ಭಾರತದ ಸ್ವಾತಂತ್ರ್ಯ ಹೋರಾಟ ಯಾವಾಗ ಆರಂಭವಾಯಿತು, ಎಲ್ಲಿ ಆರಂಭವಾಯಿತು ಮತ್ತು ಹೇಗೆ ಆರಂಭವಾಯಿತು ಎಂದು ಖಚಿತವಾಗಿ ಹೇಳುವುದು ಸಾಧ್ಯವಾಗದು. ಪರಕೀಯರ ಆಕ್ರಮಣವನ್ನು ವಿರೋಧಿಸುತ್ತಾ, ಹೋರಾಡಿದ ಎಲ್ಲಾ ಘಟನೆಗಳನ್ನು ಸ್ವಾತಂತ್ರ್ಯ ಹೋರಾಟದ ಭಾಗವೆಂದೆ ಪರಿಗಣಿಸಬೇಕಾಗುತ್ತದೆ.

ಭಾರತದ ಸ್ವಾತಂತ್ರ್ಯ ಹೋರಾಟ ಒಂದು ದೀರ್ಘಕಾಲದ ಹೋರಾಟ. ಶತಮಾನಕ್ಕಿಂತಲೂ ಹೆಚ್ಚು ಕಾಲಾವಧಿಯ ಹೋರಾಟ. ತಲೆಮಾರುಗಳ ಹೋರಾಟ. ಎಲ್ಲಾ ಧರ್ಮ, ಜಾತಿ, ಭಾಷೆ ಹಾಗೂ ವರ್ಗದ ಜನರ ಹೋರಾಟ. ಅಲ್ಪಸಂಖ್ಯಾತರು, ಗಿರಿಜನರು, ದಲಿತರು ಮತ್ತು ದಮನಿತರ ಹೋರಾಟ. ವಿದ್ಯಾರ್ಥಿ ಯುವಜನರು, ಮಹಿಳೆಯರು, ಕಾರ್ಮಿಕರು, ರೈತರು, ಎದೆಸೆಟೆಸಿ ನಡೆಸಿದ ಹೋರಾಟವದು. ಅನೇಕ ಕಷ್ಟ ಕಾರ್ಪಣ್ಯಗಳ, ನೋವು, ತ್ಯಾಗ, ಬಲಿದಾನಗಳಿಂದ ಕೂಡಿದ ಹೋರಾಟ. ಇಡೀ ಸಾಮ್ರಾಜ್ಯಶಾಹಿ ಜಗತ್ತನ್ನೇ ನಡುಗಿಸಿದಂತಹ ಹೋರಾಟ.

ನಮ್ಮ ಸ್ವಾತಂತ್ರ್ಯ ಚಳುವಳಿ ಒಬ್ಬ ವ್ಯಕ್ತಿಯಿಂದ ನಡೆದ ಹೋರಾಟವಲ್ಲ ಅಥವಾ ಒಂದು ಸಮಸ್ಯೆಗಾಗಿ ನಡೆದ ಹೋರಾಟವಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೆ ಅದೊಂದು ಆರ್ಥಿಕ ಮತ್ತು ಸಾಮಾಜಿಕ ಹೋರಾಟವೂ ಆಗಿತ್ತು. ಬ್ರಿಟಿಷ್ ವಸಾಹತುಶಾಹಿಯ ವಿರುದ್ದದ ಹೋರಾಟವು ಒಂದು ಕಡೆ ರಾಜಕೀಯ ಅಧಿಕಾರ ನಮಗೆ ಬರಬೇಕೆಂದು ನಡೆದರೆ, ಮತ್ತೊಂದು ಕಡೆ ಪಾಳೆಗಾರಿ ಪದ್ಧತಿ ಹೋಗಬೇಕು, ಉಳುವವನಿಗೆ ಭೂಮಿ ದೊರೆಯಬೇಕು, ದುಡಿಯುವ ಕೈಗಳಿಗೆ ಕೆಲಸ ಬೇಕು, ದುಡಿಮೆಗೆ ಸಮಾನವಾದಂತ ಕೂಲಿ ಬೇಕೆಂಬ ಆರ್ಥಿಕ ಹೋರಾಟವು ನಡೆಯಿತು. ಜೊತೆ ಜೊತೆಯಲ್ಲಿ ಸಾಮಾಜಿಕ ಅನಿಷ್ಟಗಳಾದ ಸತಿ ಸಹಗಮನ, ಅಸ್ಪೃಶ್ಯತೆ, ವರದಕ್ಷಿಣೆ, ಬಾಲ್ಯ ವಿವಾಹ ಇತ್ಯಾದಿಗಳ ವಿರುದ್ಧವೂ ಹೋರಾಟಗಳು ನಡೆದವು.

ಬ್ರಿಟಿಷರು ಭಾರತದಲ್ಲಿ ಸಾಮೂಹಿಕ ಶಿಕ್ಷಣ ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಓದುವ ದೊಡ್ಡ ಜನ ಸಮುದಾಯ ಹುಟ್ಟಿಕೊಂಡಿತು. ಓದುವವರಿಗೆ ಬೇಕಾದ ಪತ್ರಿಕೆಗಳು ಹುಟ್ಟಿಕೊಂಡವು. ಪತ್ರಿಕೋದ್ಯಮ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದೀವಟಿಗೆಯಂತೆ ಕೆಲಸ ಮಾಡಿದೆ. ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸುವುದನ್ನು ಸಹಿಸಲಾಗದ ಬ್ರಿಟಿಷ್ ಸರ್ಕಾರ ಪತ್ರಿಕೆಗಳ ಮೇಲೆ ದಾಳಿ ನಡೆಸಿತು. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಪತ್ರಿಕಾ ಸ್ವಾತಂತ್ರ್ಯದ ಹೋರಾಟ ಇವೆರಡೂ ಜೊತೆ ಜೊತೆಯಲ್ಲಿ ನಡೆದು ಬಂದಿದ್ದು ಗಮನಾರ್ಹ.

ರಾಜ ಮಹಾರಾಜರುಗಳು ಅರೆ ಮನಸ್ಸಿನಿಂದ ಯುದ್ಧ, ಅರೆ ಮನಸ್ಸಿನಿಂದ ರಾಜ್ಯಾಡಳಿತ ಮಾಡಿಕೊಂಡು ಬ್ರಿಟಿಷ್ ಆಳ್ವಿಕೆಯೊಂದಿಕೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುವಾಗಲೇ ಆದಿವಾಸಿಗಳು ತಮ್ಮ ಶಕ್ತಿಯನ್ನೆಲ್ಲಾ ಕ್ರೋಢೀಕರಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಬಿಹಾರದ ಛೋಟನಾಗಪುರ ದಂಗೆ, 1831ರ ಬಿಹಾರಿನ ಕೋಲರ ದಂಗೆ, 1855ರ ಸಂತಾಲರ ದಂಗೆ, 1899ರ ಮುಂಡರ ದಂಗೆ, ಈಶಾನ್ಯ ಭಾರತದ ಜಯಂತಿಯ ಜನರು ಮತ್ತು ನಾಗಾಗಳ ದಂಗೆಗಳು, ಆಂಧ್ರದ ರಂಪ ಜೋಡಾವರಂನಲ್ಲಿ 1922-24ರಲ್ಲಿ ಅಲ್ಲೂರಿ ಸೀತಾರಾಮರಾಜು ನಡೆಸಿದ ಹೋರಾಟ, ಮುಂಬಯಿ ಪ್ರದೇಶದ ವಾರ್ಲಿ ಜನರ ಹೋರಾಟ ಇತ್ಯಾದಿಗಳು ಆದಿವಾಸಿ ಬುಡಕಟ್ಟುಗಳು ಬ್ರಿಟಿಷರ ವಿರುದ್ಧ ನಡೆಸಿದ ಅಪ್ರತಿಮ ಹೋರಾಟಗಳಾಗಿವೆ.

ಬ್ರಿಟಿಷರ ಆಳ್ವಿಕೆಯ ವಿರುದ್ಧವಾಗಿ ರೈತ ಹೋರಾಟಗಳು ಮಹತ್ತರ ಪಾತ್ರ ವಹಿಸಿವೆ. 1859ರ ಬಂಗಾಳದ ನೀಲಿ ಬೆಳಗಾರರ ಹೋರಾಟ, ತೇಭಾಗ ಹೋರಾಟ, ಚೌರಿಚೌರದ ಹೋರಾಟ, ಗುಜರಾತಿನ ಬರ್ಡೋಲಿ ರೈತರ ಹೋರಾಟ, ತೆಲಂಗಾಣ ಹೋರಾಟ, ಕೇರಳದ ಕಯ್ಯೂರು ಇತ್ಯಾದಿ ರೈತ ಹೋರಾಟಗಳು ಚಾರಿತ್ರಿಕವಾದವು.

19ನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರು ಚಹ, ನೀಲಿ, ಅಫೀಮು, ಹತ್ತಿ ಮುಂತಾದ ಬೆಳೆಗಳ ತೋಟಗಳನ್ನು ಅಭಿವೃದ್ಧಿಪಡಿಸಿದರು. ಕಚ್ಚಾ ಮಾಲು ಸಾಗಿಸಲು ರೈಲು ಮತ್ತು ಬಂದರುಗಳನ್ನು ಸ್ಥಾಪನೆ ಮಾಡಿದರು. ಕಲ್ಕತ್ತೆಯ ಸುತ್ತ ಸೆಣಬು ಕಾರ್ಖಾನೆಗಳು ಹುಟ್ಟಿಕೊಂಡವು. ಮುಂಬಯಿ ಮತ್ತು ಅಹಮದಾಬಾದ್ ಪ್ರದೇಶಗಳಲ್ಲಿ ಜವಳಿ ಉದ್ಯಮ ಬೆಳೆಯಿತು. ಇದರ ಪರಿಣಾಮವಾಗಿ ಭಾರತದಲ್ಲಿ ಆಧುನಿಕ ಕಾರ್ಮಿಕ ವರ್ಗ ರೂಪಗೊಂಡಿತು. ಕಡಿಮೆ ಕೂಲಿ, ಮಿತಿಯಿಲ್ಲದ ದುಡಿಮೆ, ಹೀನವಾದ ವಸತಿ ಸೌಕರ್ಯ, ಮಾಲೀಕರ ದಬ್ಬಾಳಿಕೆ ಕಾರ್ಮಿಕರನ್ನು ಹೈರಾಣುಗೊಳಿಸಿದವು. ಇವುಗಳ ವಿರುದ್ಧ ಕಾರ್ಮಿಕರು ಹೋರಾಟ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.

ಆರಂಭದ ಹಂತದಲ್ಲಿ ಕಾರ್ಮಿಕರು ತಮಗೆ ತಿಳಿದ ರೀತಿಯಲ್ಲಿ ಹೋರಾಟ ಪ್ರಾರಂಭಿಸಿದರು. ಮುಂದುವರೆದು ಕಾರ್ಮಿಕ ಸಂಘಗಳು ಹುಟ್ಟಿಕೊಂಡವು. ಕ್ರಮೇಣ ಸ್ವಾತಂತ್ರ್ಯ ಹೋರಾಟ ಮತ್ತು ಕಾರ್ಮಿಕರ ಹೋರಾಟ ಪರಸ್ಪರ ಹತ್ತಿರಕ್ಕೆ ಬಂದವು ಮತ್ತು ಕಾರ್ಮಿಕ ವರ್ಗವು ಸ್ವಾತಂತ್ರ್ಯ ಹೋರಾಟದಲ್ಲಿ ಗಣನೀಯ ಪಾತ್ರ ವಹಿಸಿತು. ವಿದ್ಯಾರ್ಥಿ-ಯುವ ಜನರೂ, ಮಹಿಳೆಯರೂ ಹೋರಾಟದ ಕಣಕ್ಕೆ ಧುಮುಕಿದರು. ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕದ ಹೋರಾಟಗಳಲ್ಲಿ ಗಳಿಸಿದ ಅಮೂಲ್ಯ ಅನುಭವದೊಂದಿಗೆ ಭಾರತಕ್ಕೆ ಬಂದರು. ಚಂಪಾರಣ್ಯದ ನೀಲಿಗೇಣಿ ರೈತರ ಹೋರಾಟ, ಖೇಡಾ ಜಿಲ್ಲೆಯ ರೈತರ ಕರ ನಿರಾಕರಣ ಚಳವಳಿ ಮತ್ತು ಅಹಮದಾಬಾದಿನ ಕಾರ್ಮಿಕರ ಪರ ಉಪವಾಸ ಸತ್ಯಾಗ್ರಹಗಳಲ್ಲಿ ಗಾಂಧೀಜಿ ಮುಂದಾಳತ್ವ ವಹಿಸಿದರು. ಈ ಹೋರಾಟಗಳು ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರಿ ಗಾಂಧೀಜಿಯವರನ್ನು ರಾಷ್ಟ್ರನಾಯಕನ ಸ್ಥಾನಕ್ಕೆ ಏರಿಸಿತು. ಮುಂದೆ ದೇಶದಲ್ಲಿ ಜನಾಂದೋಲನಗಳು ಪ್ರಾರಂಭವಾದವು. ಅಸಹಕಾರ ಚಳುವಳಿ, ಕಾಯಿದೆ ಭಂಗ ಚಳುವಳಿ, ಉಪ್ಪಿನ ಸತ್ಯಾಗ್ರಹ, ವಿದೇಶಿ ವಸ್ತುಗಳ ಬಹಿಷ್ಕಾರ, ಕ್ವಿಟ್ ಇಂಡಿಯಾ ಚಳುವಳಿ ಇತ್ಯಾದಿಯಾಗಿ ಅನೇಕ ಹೋರಾಟಗಳು ಬ್ರಿಟಿಷರು ಭಾರತ ಬಿಟ್ಟು ಹೋಗುವಂತಹ ಪರಿಸ್ಥಿತಿಯನ್ನು ನಿರ್ಮಾಣಮಾಡಿದವು. ಕೊನೆಗೆ 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರ ದೇಶವಾಯಿತು.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]