ಭಾರತದ ಸಂವಿಧಾನ ರಚನೆಯ ಇತಿಹಾಸ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಸಂವಿಧಾನ ಸಭೆ: ಭಾರತದ ಸಂವಿಧಾನ ರಚನೆಯ ಇತಿಹಾಸ 20ನೇ ಶತಮಾನದ ಪ್ರಾರಂಭದಲ್ಲಿ ಶುರುವಾಗುತ್ತದೆ. ಭಾರತದ ಸಂವಿಧಾನಕ್ಕೆ ಅಡಿಪಾಯ ಹಾಕಿದ ಮೊತ್ತ ಮೊದಲ ದಾಖಲೆಗಳೆಂದರೆ ಬ್ರಿಟಿಷ್ ಕೌನ್ಸಿಲ್ ಕಾನೂನುಗಳು. ಇವು ಬ್ರಿಟಿಷ್ ಸಂಸತ್ತು ತನ್ನ ಆಳ್ವಿಕೆಯಲ್ಲಿದ್ದ ಭಾರತಕ್ಕಾಗಿ ಹೊರಡಿಸಿದ ಕಾನೂನುಗಳಾಗಿದ್ದವು. ಪ್ರಾರಂಭದಲ್ಲಿ ಬ್ರಿಟಿಷರ ಈ ಕಾನೂನು ರಚನೆಯ ಹಕ್ಕನ್ನು ಒಪ್ಪಿಕೊಂಡಿದ್ದ ಭಾರತೀಯರು, ಇದರ ಜೊತೆಗೆ ಇನ್ನೂ ಉತ್ತಮವಾದ ಕಾನೂನುಗಳನ್ನು ರಚಿಸಬೇಕು ಎಂಬ ಬೇಡಿಕೆ ಮಂಡಿಸಿದ್ದರು. 1920ರಲ್ಲಿ ಮೋತಿಲಾಲ್ ನೆಹರು ಹಾಗೂ ಮತ್ತಿತರ ಮುಖಂಡರು ‘ಭಾರತಕ್ಕೆ ಒಂದು ಪ್ರತ್ಯೇಕ ಸಂವಿಧಾನ ಬೇಕು ಮತ್ತು ಅದನ್ನು ಭಾರತೀಯರೇ ರಚಿಸಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟರು. 1928ರಲ್ಲಿ ಮೋತಿಲಾಲ್ ನೆಹರು ಅವರ ನೇತೃತ್ವದಲ್ಲಿ ಭಾರತಕ್ಕೆ ಒಂದು ಸಂವಿಧಾನವನ್ನು ಸಿದ್ಧಪಡಿಸಲಾಯಿತು. ಇದು ‘ನೆಹರು ವರದಿ’ ಎಂದೇ ಜನಪ್ರಿಯವಾಯಿತು. ಈ ವರದಿಯು ಮೂಲಭೂತ ಹಕ್ಕುಗಳು, ಸಂಸದೀಯ ವ್ಯವಸ್ಥೆ, ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು, ಭಾಷಾವಾರು ಪ್ರಾಂತ್ಯಗಳ ರಚನೆ ಮತ್ತು ಸ್ವತಂತ್ರ ನ್ಯಾಯಾಂಗದ ರಚನೆಗಳನ್ನು ಶಿಫಾರಸ್ಸು ಮಾಡಿತು. ಆದರೆ ಬ್ರಿಟಿಷ್ ಸರ್ಕಾರ ಮೋತಿಲಾಲ್ ನೆಹರು ಅವರ ವರದಿಯನ್ನು ನಿರಾಕರಿಸಿತು. ಹಾಗಾಗಿ ಇದು ಕಾಗದದ ಮೇಲೆಯೇ ಉಳಿಯಿತು.

1933ರಲ್ಲಿ ಜವಾಹರಲಾಲ್ ನೆಹರು ಅವರು ಮತ್ತೆ ಭಾರತಕ್ಕೆ ಒಂದು ಸಂವಿಧಾನ ರಚನೆಯಾಗ ಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು. ಮತ್ತು ಅದನ್ನು ರಚಿಸಲು ಭಾರತೀಯರೇ ಚುನಾಯಿಸಿದ ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ 1934ರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ಸಂವಿಧಾನ ಸಮಿತಿಯನ್ನು ಚುನಾಯಿಸುವಂತೆ ಒತ್ತಾಯಿಸಿ ಒಂದು ಗೊತ್ತುವಳಿಯನ್ನು ಅಂಗೀಕರಿಸಿತು. ಬ್ರಿಟಿಷ್ ಸರ್ಕಾರ ಈ ಬೇಡಿಕೆಯನ್ನು ತತ್ವಶಃ ಒಪ್ಪಿದರೂ, ಎರಡನೇ ಮಹಾಯುದ್ಧದ ನೆಪದಲ್ಲಿ ಅನುಷ್ಠಾನಗೊಳಿಸಲಿಲ್ಲ.

ಎರಡನೇ ಮಹಾಯುದ್ಧ ಮುಗಿದ ನಂತರ 1945ರಲ್ಲಿ ಇಂಗ್ಲೆಂಡಿನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದು ಲೇಬರ್ ಪಕ್ಷ ಅಧಿಕಾರಕ್ಕೆ ಬಂತು. ಕ್ಲೆಮೆಂಟ್ ಆಟ್ಲಿ ಎಂಬಾತ ಬ್ರಿಟಿಷ್ ಪ್ರಧಾನಮಂತ್ರಿಯಾದರು. ಅವರು 1946ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಭರವಸೆಯನ್ನು ಹಾಗೂ ಅದಕ್ಕೆ ಪೂರಕವಾಗಿ ಸಂವಿಧಾನ ಸಭೆಯನ್ನು ರಚಿಸಿಕೊಳ್ಳಲು ಅನುಮತಿಯನ್ನು ನೀಡಿದರು. ಅದರಂತೆ 1946ರಲ್ಲಿ ಚುನಾವಣೆಯ ಮೂಲಕ 389 ಮುಖಂಡರನ್ನೊಳಗೊಂಡ ಒಂದು ಸಂವಿಧಾನ ಸಭೆಯನ್ನು ರಚಿಸಲಾಯಿತು. (ಮುಂದೆ ಈ ಸಭೆಯ ಸದಸ್ಯರ ಸಂಖ್ಯೆ 272ಕ್ಕೆ ಇಳಿಯಿತು.) ಇದರಲ್ಲಿ ಪ್ರಮುಖ ರಾಜಕೀಯ ಮುಖಂಡರು, ಕಾಂಗ್ರೆಸ್ ಪಕ್ಷದವರು, ಕಮ್ಯುನಿಷ್ಟರು, ಸಮಾಜವಾದಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು, ವಿಭಿನ್ನ ಆರ್ಥಿಕ ಮತ್ತು ರಾಜಕೀಯ ಸಿದ್ಧಾಂತಗಳವರು, ಭಿನ್ನ ಪಂಥಗಳಿಗೆ ಸೇರಿದವರು, ಹಿಂದುಗಳು, ಮುಸಲ್ಮಾನರು, ಕ್ರಿಶ್ಚಿಯನ್ನರು, ಪಾರ್ಸಿಗಳು, ನಾಸ್ತಿಕರು ಮತ್ತು ವಿಭಿನ್ನ ಸಾಮಾಜಿಕ ವರ್ಗಗಳಿಗೆ ಸೇರಿದವರು, ಶ್ರೀಮಂತರು, ಮಧ್ಯಮ ವರ್ಗದವರು, ಹಿಂದುಳಿದ ವರ್ಗದವರು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದವರು ಎಲ್ಲರೂ ಈ ಸಮಿತಿಯಲ್ಲಿದ್ದರು. ಸಂವಿಧಾನ ಸಭೆಯ ಸದಸ್ಯರು ಡಾ. ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಚುನಾಯಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

(i) ಸಂವಿಧಾನ ರಚನಾಕಾರರ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳು

1. 1776ರ ಅಮೇರಿಕ ಕ್ರಾಂತಿಯ ಘೋಷಣೆ ‘ಸೃಷ್ಟಿಯಲ್ಲಿ ಎಲ್ಲ ಮನುಷ್ಯರು ಸಮಾನರು’, 1789ರ ಫ್ರೆಂಚ್ ಕ್ರಾಂತಿಯ ಘೋಷಣೆ ‘ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ’, 1917ರ ರಷ್ಯಾ ಕ್ರಾಂತಿಯ ಘೋಷಣೆ ‘ಅವರವರ ಸಾಮರ್ಥ್ಯಕ್ಕನುಸಾರವಾಗಿ ದುಡಿಯಬೇಕು, ಅಗತ್ಯಕ್ಕೆ ಅನುಸಾರವಾಗಿ ಪಡೆಯಬೇಕು’ ಮತ್ತು 1948ರ ವಿಶ್ವಸಂಸ್ಥೆಯ ‘ಮಾನವ ಹಕ್ಕುಗಳ’ ಘೋಷಣೆಗಳು.

2. ನಮ್ಮ ಸಂವಿಧಾನ ರಚನೆ ಪ್ರಾರಂಭಿಸುವ ವೇಳೆಗಾಗಲೇ ಅಮೇರಿಕ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸೋವಿಯತ್ ರಷ್ಯಾ, ಕೆನಡಾ, ಐರ್ಲೆಂಡ್ ಮುಂತಾದ ದೇಶಗಳಲ್ಲಿ ರಚನೆಯಾಗಿ, ಅನುಷ್ಠಾನಗೊಂಡಿದ್ದ ಸಂವಿಧಾನಗಳಲ್ಲಿ ಅಡಕವಾಗಿದ್ದ ಉತ್ತಮ ಅಂಶಗಳು.

3. ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಪ್ರಶ್ನೆಗಳು ಎದುರಾಗಿದ್ದವು. ಈ ಪ್ರಶ್ನೆಗಳಿಗೆ ಈ ದೇಶದ ಜನ ಕಂಡುಕೊಂಡಂತಹ ಉತ್ತರಗಳು ನಮ್ಮ ರಾಷ್ಟ್ರೀಯ ಚಳುವಳಿಯ ಗುರಿಗಳಾದವು. ಈ ಗುರಿಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಸಂವಿಧಾನ ರಚನಕಾರರ ಕರ್ತವ್ಯವಾಯಿತು.

ಉದಾಹರಣೆಗೆ:ಅ. ಬ್ರಿಟಿಷರನ್ನು ಈ ದೇಶದಿಂದ ಹೊರದೂಡಿದ ನಂತರ ರಾಜಕೀಯ ಅಧಿಕಾರ ಯಾರ ಕೈಗೆ ಹೋಗಬೇಕು? ಮಹಾತ್ಮ ಗಾಂಧಿಯವರನ್ನು ಒಬ್ಬ ಸಾಮ್ರಾಟನನ್ನಾಗಿ, ಜವಾಹರಲಾಲ್ ನೆಹರೂರವರನ್ನು ಒಬ್ಬ ಚಕ್ರವರ್ತಿಯನ್ನಾಗಿ ಮಾಡೋಣವೇ?

ಉತ್ತರ: ನಮಗೆ ಸಾಮ್ರಾಟರು, ಚಕ್ರವರ್ತಿಗಳು, ರಾಜ ಮಹಾರಾಜರುಗಳು ಬೇಡ.

ಪಾಳೇಗಾರಿ ಪದ್ಧತಿ ರದ್ದಾಗಬೇಕು, ರಾಜಕೀಯ ಅಧಿಕಾರ ಪ್ರಜೆಗಳ ಕೈಗೆ ಬರಬೇಕು. ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಮಾಡುವುದು ರಾಷ್ಟ್ರೀಯ ಚಳುವಳಿಯ ಮುಖ್ಯ ಗುರಿಯಾಯಿತು.

ಆ. ಬಹುಸಂಖ್ಯಾತ ಹಿಂದುಗಳಿರುವ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಘೋಷಿಸೋಣವೇ?

ಉತ್ತರ: ಎಲ್ಲಾ ಧರ್ಮದ, ಜಾತಿಯ, ಭಾಷೆಯ ಜನರು ಭುಜಕ್ಕೆ ಭುಜ ಕೊಟ್ಟು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಇತಿಹಾಸ ಈ ದೇಶದ್ದು. ಅನೇಕ ಶತಮಾನಗಳ ಕಾಲ ಅನೇಕ ಧರ್ಮದ ಜನರು ಭಾರತ ದೇಶದಲ್ಲಿ ಒಟ್ಟಿಗೆ ಬಾಳಿದ ಮತ್ತು ಎಲ್ಲರೂ ಕೂಡಿ ದೇಶವನ್ನು ಕಟ್ಟಿದ ಇತಿಹಾಸ ಇದೆ. ಹಾಗಾಗಿ ನಮಗೆ ಹಿಂದು ರಾಷ್ಟ್ರ ಬೇಡ, ಕ್ರೈಸ್ತ ರಾಷ್ಟ್ರ ಬೇಡ, ಇಸ್ಲಾಂ ರಾಷ್ಟ್ರ ಬೇಡ, ಸಿಖ್ ರಾಷ್ಟ್ರ ಬೇಡ. ಬದಲಾಗಿ ನಮಗೆ ಜಾತ್ಯತೀತ ಹಾಗೂ ಧರ್ಮನಿರಪೇಕ್ಷ ರಾಷ್ಟ್ರ ಬೇಕು. ಅದರಂತೆ ಧರ್ಮನಿರಪೇಕ್ಷಿತ ಮತ್ತು ಜಾತ್ಯತೀತ ರಾಷ್ಟ್ರದ ಧ್ಯೇಯ ನಮ್ಮ ಸ್ವಾತಂತ್ರ್ಯ ಚಳುವಳಿಯ ಮಹತ್ತರ ಗುರಿಯಾಯಿತು.

ಇ. ತೋಳ್ಬಲ ಮತ್ತು ಬುದ್ಧಿಮತ್ತೆ ಅಥವಾ ಪ್ರತಿಭೆಯ ಆಧಾರದ ಮೇಲೆ ದೇಶವನ್ನು ನಡೆಸಬೇಕೆ?

ಉತ್ತರ: ಈ ದೇಶದಲ್ಲಿ ಅನೇಕ ಜಾತಿಗಳಿವೆ. ಇಲ್ಲಿ ಮೇಲ್ಜಾತಿಗಳು ಮೇಲ್ವರ್ಗಗಳಾಗಿವೆ, ಕೆಳಜಾತಿಗಳು ಕೆಳವರ್ಗಗಳಾಗಿವೆ. ಜಾತಿ ಜಾತಿಗಳ ನಡುವೆ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗಳಿವೆ. ಈ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರಬೇಕೆಂಬುದು ನಮ್ಮ ಸ್ವಾತಂತ್ರ್ಯ ಹೋರಾಟದ ಬಯಕೆಯಾಗಿತ್ತು. ದೇಶವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಎಲ್ಲಾ ಜಾತಿಯ, ಸಾಮರ್ಥ್ಯದ ಜನ ಭಾಗಿಯಾಗಬೇಕು ಎನ್ನುವುದು ಆಶಯವಾಗಿತ್ತು. ಹಾಗಾಗಿ ಸಾಮಾಜಿಕ ನ್ಯಾಯವು ನಮ್ಮ ಸ್ವಾತಂತ್ರ್ಯ ಚಳುವಳಿಯ ಗುರಿಯಾಯಿತು.

ಈ. ರಾಜಧಾನಿಯಾದ ದೆಹಲಿಯಲ್ಲಿ ಒಂದು ಬಲಾಢ್ಯವಾದ ಕೇಂದ್ರ ಸರ್ಕಾರ ರಚಿಸಿ, ಇಡೀ ದೇಶದ ಆಡಳಿತ ನಡೆಸೋಣವೇ?

ಉತ್ತರ: ಈ ದೇಶದ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಭಾಷೆ ಇದೆ. ಭಿನ್ನವಾದ ಸಂಸ್ಕೃತಿ, ಉಪಸಂಸ್ಕೃತಿ, ಆಚರಣೆಗಳು ಇವೆ. ಇಂತಹ ವೈವಿಧ್ಯಮಯವಾದ ದೇಶವನ್ನು ಒಂದು ಕೇಂದ್ರಿತ ಸರ್ಕಾರದಿಂದ ಆಳುವುದು ಸೂಕ್ತವಲ್ಲ ಹಾಗೂ ಸಾಧ್ಯವೂ ಇಲ್ಲ. ಹಾಗೆಯೇ, ಒಂದು ಭಾಷೆ ಮಾತನಾಡುವ ಪ್ರದೇಶವನ್ನು ಒಂದು ದೇಶವೆಂದು ಘೋಷಿಸಿದರೆ, ಸಮಗ್ರ ಭಾರತ ನಿರ್ಮಾಣ ಸಾಧ್ಯವಾಗುವುದಿಲ್ಲ. ಆದ್ದರಿಂದ ಇಲ್ಲಿ ನಮಗೆ ಬಲಿಷ್ಠವಾದ ಕೇಂದ್ರ ಸರ್ಕಾರ ಹಾಗೂ ಭಾಷಾವಾರು ರಾಜ್ಯ ಸರ್ಕಾರಗಳು ಬೇಕು ಎನ್ನಲಾಯಿತು. ಹೀಗೆ ಒಂದು ಒಕ್ಕೂಟ (ಫೆಡರಲ್) ವ್ಯವಸ್ಥೆ ನಮ್ಮ ರಾಷ್ಟ್ರೀಯ ಚಳುವಳಿಯ ಗುರಿಯಾಯಿತು.

ಸ್ವಾತಂತ್ರ್ಯ ಗಳಿಸಿದ ನಂತರ ಬಡತನ, ಸಾಮಾಜಿಕ ಪಿಡುಗುಗಳು, ಶೋಷಣೆ ಮತ್ತು ಅಸಮಾನತೆಯನ್ನು ಹೋಗಲಾಡಿಸುವುದಾಗಿ ನಮ್ಮ ಮುಖಂಡರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಚನ ನೀಡಿದ್ದರು. ಅಲ್ಲದೇ, ಉಳುವವನಿಗೇ ಭೂಮಿಯನ್ನು, ಎಲ್ಲರಿಗೂ ಶಿಕ್ಷಣವನ್ನು, ಉದ್ಯೋಗವನ್ನು, ಕಾನೂನಿನ ಮುಂದೆ ಸಮಾನತೆಯನ್ನು ದೊರಕಿಸಿ ಕೊಡುವುದಾಗಿ ಸಹ ಭರವಸೆ ನೀಡಿದ್ದರು. ಸ್ವಾತಂತ್ರ್ಯ ಬಂದಾಗ ನಮ್ಮದು ಬಡ ರಾಷ್ಟ್ರವಾಗಿತ್ತು.

ದೇಶವು ಕೃಷಿ ಆರ್ಥಿಕತೆಯನ್ನು ಅವಲಂಬಿಸಿತ್ತು. ಬಡತನ, ಹಸಿವು, ಆಹಾರದ ಕೊರತೆ, ಕನಿಷ್ಠ ಜೀವನ ಮಟ್ಟ, ಅತ್ಯಲ್ಪ ಮೂಲ ಸೌಕರ್ಯಗಳು, ಅನಕ್ಷರತೆ, ಮೌಢ್ಯ, ನಿರುದ್ಯೋಗ, ಮುಂತಾದ ಸಮಸ್ಯೆಗಳು ಅಗಾಧವಾಗಿದ್ದವು. ಸ್ವಾತಂತ್ರ್ಯ ಹೋರಾಟದಲ್ಲಿ ನೀಡಿದ ವಚನವನ್ನು ಉಳಿಸಿಕೊಳ್ಳಬೇಕಾದುದು ಮತ್ತು ದೇಶದ ಮುಂದಿದ್ದ ಸಮಸ್ಯೆಗಳನ್ನು ಎದುರಿಸಬೇಕಾದುದು ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಸವಾಲು ನಮ್ಮ ಸಂವಿಧಾನ ರಚನಕಾರರ ಮೇಲೆ ಇತ್ತು. ಈ ಕಾರಣಕ್ಕಾಗಿಯೇ ಕಡ್ಡಾಯವಾಗಿ ಜಾರಿಗೊಳಿಸಬೇಕಾದ (enforceable) ಮತ್ತು ಸಾಂದರ್ಭಿಕವಾಗಿ ಜಾರಿಗೊಳಿಸಬಹುದಾದ (non-enforceable) ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಲಾಯಿತು.

(ii) ಕರಡು ಸಂವಿಧಾನ ಅಳವಡಿಕೆ:1946 ಜುಲೈ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸಂವಿಧಾನ ಸಭೆಗೆ 296 ಸದಸ್ಯರನ್ನು ಆಯ್ಕೆ ಮಾಡಲಾಯಿತು. ಕೆಲವು ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಬೆಳವಣಿಗೆಗಳ ಕಾರಣ ಮುಸ್ಲಿಮ್ ಲೀಗ್ ಸದಸ್ಯರು ಸಂವಿಧಾನ ಸಭೆಗಳಲ್ಲಿ ಭಾಗವಹಿಸಲು ನಿರಾಕರಿಸಿದರು. ಉಳಿದ 272 ಸದಸ್ಯರು 1946ರ ಡಿಸೆಂಬರ್ 6ರಂದು ಮೊದಲನೆ ಸಭೆ ಸೇರಿ ಸಂವಿಧಾನ ರಚನೆ ಕೆಲಸವನ್ನು ಪ್ರಾರಂಭಿಸಿದರು. ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ರೂಪುಗೊಂಡ ಸಂವಿಧಾನದ ಮೊದಲ ಕರಡನ್ನು 1948ರ ಫೆಬ್ರವರಿ 21ರಂದು ಭಾರತದ ಜನತೆಯ ಮುಂದಿಟ್ಟು ಚರ್ಚೆಗೆ ಅವಕಾಶವನ್ನು ಕಲ್ಪಿಸಲಾಯಿತು. ಜನತೆ ಈ ಕರಡು ಸಂವಿಧಾನವನ್ನು ಚರ್ಚಿಸಿ 7,635 ತಿದ್ದುಪಡಿಗಳನ್ನು ಸೂಚಿಸಿದರು. ಈ ತಿದ್ದುಪಡಿಗಳನ್ನು ಪರಿಶೀಲಿಸಿ ಸೂಕ್ತವಾದವುಗಳನ್ನು ಒಪ್ಪಿ 1949 ನವೆಂಬರ್ 26ರಂದು ಅಂತಿಮ ಕರಡನ್ನು ಭಾರತ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಐತಿಹಾಸಿಕ ದಿನದ ನೆನಪಿನಲ್ಲಿ ಪ್ರತಿವರ್ಷ ನವೆಂಬ‌ರ್ ತಿಂಗಳ 26ನೇ ದಿನವನ್ನು ‘ಕಾನೂನು ದಿನ’ (Law Day) ಎಂದು ಆಚರಿಸಲಾಗುತ್ತಿದೆ. ಈಗ 2015ರಿಂದ ಈ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಪುನ‌ರ್ ಘೋಷಿಸಲಾಗಿದೆ. ಹೀಗೆ 2 ವರ್ಷ 11 ತಿಂಗಳು 17 ದಿವಸಗಳ ಪರಿಶ್ರಮದ ಫಲವಾಗಿ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ ರಚನೆಯಾಯಿತು.

ಸಂವಿಧಾನ ರಚನಾ ಸಭೆಯಲ್ಲಿ 272 ಜನ ಸದಸ್ಯರು ಇದ್ದರೂ ಸಹ ಕೆಲವು ಸದಸ್ಯರು ಹೆಚ್ಚು ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಿನಕ್ಕೆ 18 ಗಂಟೆಗಳಿಗೂ ಹೆಚ್ಚು ಕೆಲಸ ನಿರ್ವಹಿಸಬೇಕಾಯಿತು. ಭಾರತದ ಸಂವಿಧಾನ ರಚನೆಗೆ ಅಂಬೇಡ್ಕರ್ ಅವರ ಕೊಡುಗೆ ಬಗ್ಗೆ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. “(ಸಂವಿಧಾನ ಸಭೆಯ) ಅಧ್ಯಕ್ಷನಾಗಿ ಪ್ರತಿದಿನದ ಚಟುವಟಿಕೆಗಳನ್ನು ಬಹಳ ಕೂಲಂಕುಷವಾಗಿ ಗಮನಿಸಿದ್ದೇನೆ. ಸಂವಿಧಾನ ಕರಡು ರಚನೆ ಸಮಿತಿ ಮತ್ತು ವಿಶೇಷವಾಗಿ ಅದರ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್ ಅವರು ಇಷ್ಟು ಶ್ರದ್ಧೆ ಮತ್ತು ಉತ್ಸುಕತೆಯಿಂದ ಈ ಕಾರ್ಯವನ್ನು ನಡೆಸಿದ್ದಕ್ಕೆ ಎಲ್ಲರಿಗಿಂತ ಹೆಚ್ಚು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಡಾ.ಬಿ.ಆರ್.ಅಂಬೇಡ್ಕರ್‌ ರವರನ್ನು ಕರಡು ರಚನೆ ಸಮಿತಿಗೆ ಸೇರಿಸಿದ್ದು ಮತ್ತು ಅದರ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು ಮಾಡಿದ ಅತ್ಯುತ್ತಮ ಕೆಲಸ”

ಸಂವಿಧಾನ ಸಭೆಯ ಉಪಾಧ್ಯಕ್ಷರೂ, ಕರಡು ರಚನಾ ಸಮಿತಿಯ ಸದಸ್ಯರೂ ಆಗಿದ್ದ ಶ್ರೀ ಟಿ.ಟಿ.ಕೃಷ್ಣಮಾಚಾರಿ ಹೇಳುತ್ತಾರೆ: “ಸಂವಿಧಾನ ಕರಡು ಸಮಿತಿಗೆ ನೇಮಿಸಿದ 7 ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು ಮತ್ತು ಆ ಜಾಗವನ್ನು ಮತ್ತೆ ತುಂಬಲಾಯಿತು ಎಂಬುದು ಈ ಸದನಕ್ಕೆ ತಿಳಿದಿರಬಹುದು. ಆದರೆ ಒಬ್ಬರು ಮರಣವನ್ನಪ್ಪಿದರು ಮತ್ತೆ ಆ ಜಾಗಕ್ಕೆ ಯಾರನ್ನೂ ತುಂಬಲಿಲ್ಲ. ಮತ್ತೊಬ್ಬರು ಅಮೇರಿಕಾದಲ್ಲೇ ಇದ್ದರು; ಅವರ ಜಾಗವನ್ನು ಬೇರೆಯವರಿಂದ ತುಂಬಲಿಲ್ಲ. ಮತ್ತೊಬ್ಬರು ರಾಜ್ಯದ ಆಡಳಿತ ಕಾರ್ಯಗಳಲ್ಲಿ ನಿರತರಾಗಿದ್ದರು. ಮತ್ತೇ ಒಬ್ಬರು ಅಥವಾ ಇಬ್ಬರು ದೆಹಲಿಯಿಂದ ದೂರವೇ ಉಳಿದರು; ಕಾರಣ ಅವರ ಆರೋಗ್ಯ ಅವರನ್ನು ಅನುಮತಿಸಲಿಲ್ಲ. ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ.ಅಂಬೇಡ್ಕರ್‌ರವರ ಮೇಲೆ ಬಿತ್ತು ಮತ್ತು ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲ ಯಾವುದೇ ಅನುಮಾನಗಳಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು”

1947ರ ಆಗಸ್ಟ್ 15ರಂದು ಬ್ರಿಟಿಷರಿಂದ ಸ್ವತಂತ್ರವಾದ ಭಾರತವು, 1950ರ ಜನವರಿ 26ರಂದು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಜಾರಿಗೆ ತರುವುದರ ಮೂಲಕ ಗಣರಾಜ್ಯವಾಯಿತು. ಹಿಂದೆ 1930ರ ಜನವರಿ 26ರಂದು ‘ಪೂರ್ಣ ಸ್ವರಾಜ್ಯ’ ಬೇಕೆಂಬ ಹೋರಾಟ ಪ್ರಾರಂಭವಾದ ಕಾರಣ ಅದರ ನೆನಪಿಗಾಗಿ 1950ರ ಜನವರಿ 26ರಂದು ನಮ್ಮ ಸಂವಿಧಾನವನ್ನು ಜಾರಿಗೆ ತರಲಾಯಿತು.

ಸಂವಿಧಾನ ಸಭೆಯ ಸದಸ್ಯರಾಗಿದ್ದು, ಸಂವಿಧಾನ ರಚನೆಗೆ ಕೊಡುಗೆ ನೀಡಿರುವ ಹದಿನೈದು ಮಹಿಳೆಯರು:ದಾಕ್ಷಾಯಿಣಿ ವೇಲಾಯುಧನ್ (ಮದ್ರಾಸ್ ಪ್ರಾಂತ್ಯ), ಬೇಗಂ ಐಜಾಜ್ ರಸೂಲ್ (ಪಂಜಾಬ್ ಪ್ರಾಂತ್ಯ), ದುರ್ಗಾಬಾಯಿ ದೇಶ್‌ಮುಖ್ (ಆಂಧ್ರ ಪ್ರಾಂತ್ಯ), ಹನ್ಸ ಮೆಹ್ತಾ (ಮುಂಬೈ ಪ್ರಾಂತ್ಯ), ಅಮೃತ್‌ ಕೌರ್ (ಉತ್ತರ ಪ್ರದೇಶ), ಅಮ್ಮು ಸ್ವಾಮಿನಾಥನ್ ಮತ್ತು ಆ್ಯನಿ ಮಸ್ಕರೇನಸ್ (ಕೇರಳ ಪ್ರಾಂತ್ಯ), ವಿಜಯಲಕ್ಷ್ಮಿ ಪಂಡಿತ್, ಸುಚೇತಾ ಕೃಪಲಾನಿ (ಪಂಜಾಬ್), ರೇಣುಕಾ ರಾಯ್, ಪೂರ್ಣಿಮಾ ಬ್ಯಾನರ್ಜಿ (ಉತ್ತರ ಪ್ರದೇಶ), ಕಮಲಾ ಚೌಧರಿ (ಉತ್ತರ ಪ್ರದೇಶ), ಲೀಲಾ ರಾಯ್. ಮಾಲತಿ ಚೌಧರಿ (ಬಿಹಾರ) ಮತ್ತು ಸರೋಜಿನಿ ನಾಯ್ಡು. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಈ ಮಹಿಳೆಯರು ಸ್ವತಃ ಬಾಲ್ಯ ವಿವಾಹ, ವೈಧವ್ಯ, ಕೌಟುಂಬಿಕ ದೌರ್ಜನ್ಯ, ಹಿಂಸೆ, ಆಸ್ತಿ ಕಬಳಿಕೆ, ಜಾತಿ ದಬ್ಬಾಳಿಕೆಗಳಿಗೆ ಗುರಿಯಾಗಿದ್ದರು.

ಭಾರತ ಸಂವಿಧಾನವನ್ನು ತಮ್ಮ ಸುಂದರವಾದ ಕೈಬರಹದಿಂದ ನಿರೂಪಿಸಿದವರು ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾ. 479 ಪುಟಗಳ ಹೊತ್ತಿಗೆಯನ್ನು ಬರೆಯಲು ಪ್ರೇಮ್ ಬಿಹಾರಿ ಅವರಿಗೆ ತಗುಲಿದ್ದು 6 ತಿಂಗಳ ಅವಧಿ ಹಾಗೂ 254 ಪೆನ್ ನಿಬ್‌ಗಳು. ದೆಹಲಿಯ ಸೆಂಟ್ ಸ್ಟೀಫನ್‌ಸನ್ ಕಾಲೇಜಿನ ಪದವೀಧರರಾದ ಪ್ರೇಮ್ ಬಿಹಾರಿಯವರಿಗೆ ಸಂವಿಧಾನವನ್ನು ಬರೆಯುವ ಜವಾಬ್ದಾರಿ ವಹಿಸಿದಾಗ ರೋಮಾಂಚಿತರಾಗಿ, ಈ ಕೆಲಸಕ್ಕೆ ಯಾವುದೇ ಹಣ ತೆಗೆದುಕೊಳ್ಳಲು ನಿರಾಕರಿಸಿದರು. ಗೌರವಧನ ಸ್ವೀಕರಿಸುವಂತೆ ಜವಾಹರ್ ಲಾಲ್ ನೆಹರೂ ಅವರು ಆಗ್ರಹಿಸಿದಾಗ ಅವರು ಹಣಕ್ಕೆ ಬದಲಾಗಿ ಸಂವಿಧಾನದ ಪ್ರತಿಪುಟದ ಅಂತ್ಯದಲ್ಲಿ ತಮ್ಮ ಹೆಸರನ್ನು ಹಾಗೂ ಕೊನೆಯ ಪುಟದಲ್ಲಿ ತಮ್ಮ ಹೆಸರಿನ ಜೊತೆಗೆ ತಮ್ಮ ತಾತನ ಹೆಸರು ಬರೆಯಲು ಅನುಮತಿ ಕೋರಿದರಂತೆ. ಹಾಗೂ ನೆಹರೂ ಸಮ್ಮತಿಸಿದರು ಎನ್ನುತ್ತವೆ ಇತಿಹಾಸದ ಪುಸ್ತಕಗಳು. ಸಂವಿಧಾನಕ್ಕೆ ಸುಂದರ ಕಲೆಯ ಸ್ಪರ್ಶ ನೀಡಿದವರು ನಂದಲಾಲ್ ಬೋಸ್ ಅವರು. ರವೀಂದ್ರನಾಥ್ ಠಾಗೂರ್ ಅವರಿಂದ ಪ್ರೇರಣೆ ಪಡೆದಿದ್ದ ನಂದಲಾಲ್ ಅವರು ಶಾಂತಿನಿಕೇತನದ ಪ್ರಾಂಶುಪಾಲರಾಗಿದ್ದರು. ದೇಶದ ಮಹಾನ್ ಕಲಾವಿದರಲ್ಲಿ ಒಬ್ಬರಾದ ನಂದಲಾಲ್ ಅವರು ತಮ್ಮ ಶಿಷ್ಯರೊಡಗೂಡಿ ಸಂವಿಧಾನಕ್ಕೆ ಕಲೆಯ ಚಿತ್ತಾರ ಮಾಡಿರುವುದಲ್ಲದೆ ಭಾರತ ರತ್ನವೂ ಸೇರಿದಂತೆ ಹಲವು ರಾಷ್ಟ್ರೀಯ ಪ್ರಶಸ್ತಿಗಳ ಚಿಹ್ನೆಯನ್ನೂ ರೂಪಿಸಿದವರು.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]