ನಮ್ಮ ಪೂರ್ವಜರು ವಾನರ ಅವಸ್ಥೆಯಿಂದ ಮಾನವ ಅವಸ್ಥೆಗೆ ಪರಿವರ್ತನೆ ಹೊಂದಲು ಸಾವಿರಾರು ವರ್ಷಗಳ ಕಾಲ ಹಿಡಿಯಿತು. ಭಾರತ ಉಪಖಂಡದ ಮೊದಲ ಮಾನವರು ಸುಮಾರು ಎರಡು ದಶಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡರು ಎಂದು ಅಂದಾಜು ಮಾಡಲಾಗಿದೆ. ಸರಿಸುಮಾರು 75 ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಆಧುನಿಕ ಮಾನವರ ಆಗಮನವಾಯಿತೆಂದೂ ಅಂದಾಜಿಸಲಾಗಿದೆ. ಜಗತ್ತಿನ ಸುದೀರ್ಘ ಮಾನವ ಇತಿಹಾಸದಲ್ಲಿ ಐದು ರೀತಿಯ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಗುರುತಿಸಬಹುದು:
1. ಆದಿಕಾಲದ ‘ಸಮುದಾಯ ಸಮಾಜ’: ಆದಿಕಾಲದಲ್ಲಿ ಶ್ರಮವು ಸಾಮೂಹಿಕ ಲಕ್ಷಣ ಹೊಂದಿತ್ತು. ಜನರು ಗುಂಪು ಗುಂಪುಗಳಾಗಿ, ಬುಡಕಟ್ಟುಗಳಾಗಿ ವಾಸಿಸುತ್ತಿದ್ದರು. ಅವರು ತಮ್ಮ ಆಹಾರಕ್ಕಾಗಿ ಜೊತೆಗೂಡಿ ಬೇಟೆಯಾಡುತ್ತಿದ್ದರು. ಮನೆಗಳನ್ನು ಕಟ್ಟಲು, ಉಡುಪುಗಳನ್ನು ತಯಾರಿಸಲು, ಉಪಕರಣಗಳನ್ನು ರೂಪಿಸಲು ಜೊತೆಗೂಡಿ ಕೆಲಸ ಮಾಡುತ್ತಿದ್ದರು. ನೈಸರ್ಗಿಕ ಅನಾಹುತಗಳಾದ ಪ್ರವಾಹ, ಕಾಡ್ಗಿಚ್ಚು, ಭೂಕಂಪ, ಬರಗಾಲ ಇತ್ಯಾದಿ ಸಂಕಷ್ಟಗಳನ್ನು ಎದುರಿಸಲು ಜನರು ಒಟ್ಟಿಗೆ ಜೀವಿಸುತ್ತಿದ್ದರು. ಕ್ರೂರ ಮೃಗಗಳಾದ ಹುಲಿ, ಚಿರತೆ, ಸಿಂಹ, ಆನೆ, ಇತ್ಯಾದಿಗಳನ್ನು ಎದುರಿಸಲು ಜನರು ಒಂದುಗೂಡುವ ಮೂಲಕವೇ ಸಾಧ್ಯ ಎಂಬುದನ್ನು ಅನುಭವದಿಂದ ತಿಳಿದಿದ್ದರು. ಆ ದಿನಗಳಲ್ಲಿ ಆಹಾರ, ಬಟ್ಟೆ, ವಸತಿ ಇತ್ಯಾದಿ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯ ಬಹಳ ಸೀಮಿತವಾಗಿತ್ತು. ಜನರು ತಮ್ಮ ಶಕ್ತಿಗೆ ಅನುಸಾರವಾಗಿ ದುಡಿಯುತ್ತಿದ್ದರು. ತಮಗೆ ಅಗತ್ಯವಿರುವ ಸಾಮಗ್ರಿಗಳನ್ನು ಒಟ್ಟುಗೂಡಿಸಲು ಅಥವಾ ತಯಾರಿಸಲು ಬಹಳ ಕಷ್ಟಪಡುತ್ತಿದ್ದರು. ತಮ್ಮ ದುಡಿಮೆಯ ಉತ್ಪನ್ನವನ್ನು ಅವಶ್ಯಕತೆಗೆ ಅನುಗುಣವಾಗಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಮಾನವ ಮತ್ತೊಬ್ಬ ಮಾನವನನ್ನು ಶೋಷಣೆ ಮಾಡುವ ಕುರಿತು ಅಂದು ಯಾರೂ ಯೋಚಿಸಲು ಕೂಡಾ ಸಾಧ್ಯವಿರಲಿಲ್ಲ. ಸಂಪೂರ್ಣ ಸಮಾನತೆಯ ವಾತಾವರಣ ಅಂದಿನ ಸಮಾಜದಲ್ಲಿ ಇತ್ತು.
2. ಗುಲಾಮಗಿರಿ ಸಮಾಜ: ಕಾಲಕ್ರಮೇಣ ಉತ್ಪಾದನಾ ಉಪಕರಣಗಳನ್ನು ಸುಧಾರಿಸಿದ್ದರ ಫಲವಾಗಿ ಹಾಗೂ ಕಾರ್ಯಾನುಭವ, ಜ್ಞಾನ ಹಾಗೂ ಕೌಶಲ್ಯಗಳ ಸಹಕಾರದಿಂದ ಸಮುದಾಯದಲ್ಲಿ ಶ್ರಮ ಶಕ್ತಿ ಹೆಚ್ಚಾಯಿತು. ನಿತ್ಯೋಪಯೋಗಿ ವಸ್ತುಗಳನ್ನು ಉತ್ಪಾದಿಸುವ ಸಾಮರ್ಥ್ಯವು ವೃದ್ಧಿಸಿತು. ಸ್ವಂತ ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಮಾತ್ರವಲ್ಲದೆ, ಅದಕ್ಕಿಂತಲೂ ಹೆಚ್ಚು ಸಂಪತ್ತನ್ನು ಉತ್ಪಾದಿಸುವ ಕ್ರಮ ಮೊದಲುಗೊಂಡಿತು. ಪ್ರತಿಯೊಬ್ಬರ ಉತ್ಪಾದನೆಯಲ್ಲಿ ತಮ್ಮ ಅವಶ್ಯಕತೆಗೆ ಬೇಕಾದ ಉತ್ಪಾದನೆ ಹಾಗೂ ಹೆಚ್ಚಿಗೆ ಉಳಿಯುವ ಉತ್ಪಾದನೆ ಎಂಬ ಎರಡು ವಿಭಾಗಗಳಾದವು. ಉದಾಹರಣೆಗೆ, ಒಬ್ಬರು ಒಂದು ದಿನಕ್ಕೆ 12 ಜೊತೆ ಚಪ್ಪಲಿಯನ್ನು ತಯಾರಿಸಬಲ್ಲರು; ಆದರೆ ಅವರ ಜೀವನಾವಶ್ಯಕತೆಗೆ 8 ಜೊತೆ ಚಪ್ಪಲಿಯಿಂದ ಬರುವ ಗಳಿಕೆಯೇ ಸಾಕು. ಆಗ 4 ಜೊತೆ ಚಪ್ಪಲಿಯ ಗಳಿಕೆಯು ಉಳಿತಾಯವಾಯಿತು. ಈ ಹೆಚ್ಚುವರಿ ದುಡಿಮೆ ಅಥವಾ ಉಳಿತಾಯವು ಕೆಲವೇ ವ್ಯಕ್ತಿಗಳಲ್ಲಿ ಶೇಖರಣೆಯಾಗತೊಡಗಿತು. ಹೀಗೆ ಒಬ್ಬರ ಹೆಚ್ಚುವರಿ ದುಡಿಮೆಯ ಫಲವು ದುಡಿಯುವವರಿಗೆ ದಕ್ಕದೆ, ಮತ್ತೊಬ್ಬರಿಗೆ ವರ್ಗಾಯಿಸುವುದರಿಂದ ಒಬ್ಬರು ಶೋಷಿತರು (ಬಡವರು) ಹಾಗೂ ಮತ್ತೊಬ್ಬರು ಶೋಷಕರೂ (ಶ್ರೀಮಂತರೂ) ಆಗಿರುವ ಪರಿಸ್ಥಿತಿ ಉಂಟಾಯಿತು. ಶೋಷಕರು ಶೋಷಿತರನ್ನು ಗುಲಾಮರಂತೆ ಕಾಣುತ್ತಿದ್ದರು. ಈ ಗುಲಾಮರನ್ನು ಸಂತೆಯಲ್ಲಿ ಕುರಿ, ಮೇಕೆ, ದನಕರುಗಳನ್ನು ಮಾರಾಟ ಮಾಡುವಂತೆ ಮಾರಾಟ ಮಾಡುತ್ತಿದ್ದರು. ಈ ಗುಲಾಮ ಪದ್ಧತಿಯ ದಿನಗಳಲ್ಲಿ ಕೈ ಕಸುಬುಗಳು, ವ್ಯಾಪಾರ ಹಾಗೂ ನೌಕಾಯಾನ ತ್ವರಿತಗತಿಯಲ್ಲಿ ವಿಕಾಸಗೊಂಡಿತು. ನಗರಗಳು ನಿರ್ಮಿತವಾದವು. ಗುಲಾಮಗಿರಿ ಪದ್ಧತಿಯು ಪುರಾತನ ರೋಮ್‌ನಲ್ಲಿ ಬೃಹದಾಕಾರವಾಗಿ ಬೆಳೆಯಿತು. ಈ ರೀತಿಯಾಗಿ, ಬಹುಸಂಖ್ಯೆಯಲ್ಲಿದ್ದ ಗುಲಾಮರು ಮತ್ತು ಅಲ್ಪಸಂಖ್ಯೆಯಲ್ಲಿದ್ದ ಒಡೆಯರು ಇರುವಂತಹ ಗುಲಾಮಗಿರಿ ಎಂಬ ಸಾಮಾಜಿಕ ವ್ಯವಸ್ಥೆ ಉದಯವಾಯಿತು.
3. ಸಾಮಂತಶಾಹಿ ಸಮಾಜ (ಊಳಿಗಮಾನ್ಯ ಅಥವಾ ಪಾಳೇಗಾರಿ ಸಮಾಜ:ಕ್ರಮೇಣ ಗುಲಾಮರು ಅವರ ಶ್ರಮದ ಪರಿಣಾಮಗಳಲ್ಲಿ ಆಸಕ್ತಿ ಕಳೆದುಕೊಂಡರು. ಅವರು ಆಗಾಗ್ಗೆ ಒಡೆಯರ ವಿರುದ್ಧ ಸಿಡಿದೇಳುತ್ತಿದ್ದರು. ಗುಲಾಮರ ಬಂಡಾಯಗಳನ್ನು ಹತ್ತಿಕ್ಕಲು ಹಾಗೂ ಅವರನ್ನು ನಿಯಂತ್ರಿಸಲು ಶೋಷಕರು ಕಾನೂನುಗಳನ್ನು ರಚಿಸಿದರು ಮತ್ತು ಸೈನ್ಯವನ್ನು ಬಳಕೆ ಮಾಡಿದರು. ಹೀಗೆ ವರ್ಗಗಳು ಹಾಗೂ ವರ್ಗ ಸಂಘರ್ಷಗಳು ರೂಪತಾಳಿದವು. ಬಲಪ್ರಯೋಗಕ್ಕಿಂತಲೂ ಬುದ್ಧಿಶಕ್ತಿ, ಪ್ರತಿಭೆ ಹಾಗೂ ವೈಯಕ್ತಿಕ ಸಾಮರ್ಥ್ಯವನ್ನು ಉಪಯೋಗಿಸಿದರೆ ಹೆಚ್ಚಿನ ಉತ್ಪಾದನೆಯನ್ನು ಪಡೆಯಬಹುದೆಂದು ತಿಳಿದುಬಂದಿತು. ಕ್ರಮೇಣ ಗುಲಾಮಗಿರಿಯ ಬಲಪ್ರಯೋಗದ ಶೋಷಣಾ ವ್ಯವಸ್ಥೆಯು ನಶಿಸುತ್ತಾ ಬಂದು ಅದರ ಸ್ಥಳದಲ್ಲಿ ಸಾಮಂತಶಾಹಿ ವ್ಯವಸ್ಥೆ ರೂಢಿಗೆ ಬಂದಿತು.
ಇಲ್ಲಿ ಸಾಮಂತ ರಾಜರು ಆಳುವ ವರ್ಗವಾದರು. ಆ ರಾಜರು ಭಾರಿ ಭೂಮಿ, ಜಹಗೀರ್‌ಗಳು ಮತ್ತು ಅರಮನೆಗಳ ಮಾಲೀಕರಾಗಿದ್ದರು. ಸಮಾಜದಲ್ಲಿ ಉತ್ಪಾದಕ ಶಕ್ತಿಗಳು ಬೆಳೆಯುತ್ತಲೇ ಹೋದವು. ಹೊಸ ಹೊಸ ಸಾಧನ ಸಲಕರಣೆಗಳನ್ನು ಕಂಡುಹಿಡಿಯಲಾಯಿತು. ಕಸುಬುದಾರಿಕೆಯನ್ನು ಸಂಪೂರ್ಣ ಬೆಳೆಸಲಾಯಿತು. ವ್ಯಾಪಾರ ಬೆಳೆಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆ ಅಸ್ತಿತ್ವಕ್ಕೆ ಬಂತು. ಕೈಕಸುಬು ಉತ್ಪಾದನೆಗಳಿಗೆ ಬೇಡಿಕೆ ಹೆಚ್ಚಾಯಿತು. ದೊಡ್ಡ ಪ್ರಮಾಣದ ಕೈಕೆಲಸದ ಕರ್ಮಶಾಲೆಗಳು ಕಾಣಿಸಿಕೊಂಡವು. ಕ್ರಮೇಣ ಕೈಕಸುಬುದಾರರು ಕಾರ್ಮಿಕರಾದರು; ಕರ್ಮಶಾಲೆಗಳು ಕಾರ್ಖಾನೆಗಳಾದವು.
ಸಾಮಂತರಾಜರು ಜಗತ್ತಿನ ಹೊಸ ಭೂಭಾಗಗಳನ್ನು ಪತ್ತೆ ಮಾಡಿ, ಅದರ ಮೇಲೆ ತಮ್ಮ ಹಿಡಿತವನ್ನು ಸಾಧಿಸಿದರು. ನೆರೆ ರಾಜ್ಯಗಳ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಂಡು ವಸಾಹತುಗಳನ್ನು ಸ್ಥಾಪಿಸಿದರು. ರಾಜಕೀಯ ಅಧಿಕಾರದ ಜೊತೆಗೆ ಮಾರುಕಟ್ಟೆಯ ವಿಸ್ತರಣೆಯು ಸಾಧ್ಯವಾಯಿತು.
ಈ ವ್ಯವಸ್ಥೆಯಲ್ಲಿ ರೈತರು ಸಂಪೂರ್ಣವಾಗಿ ಅವರ ಒಡೆಯರಿಗೆ ಸೇರಿದ್ದರು. ಹೆಚ್ಚಿನ ಕಾಲ ಅವರು ಸಾಮಂತ ರಾಜರಿಗಾಗಿ ದುಡಿದರು. ತಮ್ಮ ಸ್ವಂತಕ್ಕಾಗಿ ದುಡಿದದ್ದು ಸ್ವಲ್ಪ ಕಾಲ. ರೈತರು ಗುಲಾಮರಿಗಿಂತ ಹೆಚ್ಚು ಸ್ವತಂತ್ರರಾಗಿದ್ದರು. ರೈತರ ವಾಸದ ಮನೆ, ದನಕರುಗಳು, ಬೇಸಾಯದ ಉಪಕರಣಗಳು ಇತ್ಯಾದಿ ಅವರ ಸ್ವಂತ ಆಸ್ತಿಯಾಗಿತ್ತು. ರೈತರು ತಮ್ಮ ಕೃಷಿ ಉಪಕರಣಗಳನ್ನು ಹೆಚ್ಚು ಸುಧಾರಿಸಿದರು. ಶ್ರಮದಿಂದ ಉತ್ಪಾದನೆಯನ್ನು ಹೆಚ್ಚಿಸುವ ವಿಧಾನವನ್ನು ಕಂಡುಕೊಂಡರು. ಆದರೆ ಅವರ ಆದಾಯದ ಬಹುಭಾಗ ಭೂ ಮಾಲೀಕರಿಗೂ, ರಾಜರಿಗೂ, ಧರ್ಮ ಕ್ಷೇತ್ರಗಳಿಗೂ ಹಾಗೂ ಮಠಗಳಿಗೂ ಹೋಗುತ್ತಿತ್ತು.
ಕೈಗಾರಿಕೆಗಳ ಬೆಳವಣಿಗೆಯಿಂದಾಗಿ ಉತ್ಪಾದನೆ ಹೆಚ್ಚಾಯಿತು. ರೈತರು ಹೊಸ ಸಲಕರಣೆಗಳನ್ನು ಉಪಯೋಗಿಸಿದ್ದರ ಫಲವಾಗಿ ಕೃಷಿಯಲ್ಲೂ ಉತ್ಪಾದನೆ ಹೆಚ್ಚಾಯಿತು. ಆದರೆ ಈ ಮೊದಲೆ ಹೇಳಿದಂತೆ ಬಹುಪಾಲು ಆದಾಯ ರಾಜರ, ಭೂಮಾಲೀಕರ ಹಾಗೂ ಮಠಗಳ ಕೈಸೇರುತ್ತಿತ್ತು. ಸಾಮಂತಶಾಹಿಯು ಜನರ ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡಿತು. ಇದರ ಪರಿಣಾಮವಾಗಿ ಮಾರುಕಟ್ಟೆ ವಿಸ್ತಾರವಾಗಲಿಲ್ಲ. ಈ ಬಿಕ್ಕಟ್ಟು ಹೆಚ್ಚಿನ ಬೆಳವಣಿಗೆಗೆ ತಡೆಯಾಯಿತು.
ಈ ಪರಿಸ್ಥಿತಿಯಲ್ಲಿ ಬಂಡವಾಳಶಾಹಿಯು ಒಂದು ಕ್ರಾಂತಿಕಾರಿ ವರ್ಗವಾಗಿ ಚಾರಿತ್ರಿಕ ರಂಗವನ್ನು ಪ್ರವೇಶಿಸಿತು. ಬಂಡವಾಳಶಾಹಿ ವ್ಯವಸ್ಥೆಯು ಸಾಮಂತಶಾಹಿ, ಪಾಳೆಗಾರಿ ಹಾಗೂ ಊಳಿಗಮಾನ್ಯ ಪದ್ಧತಿಯನ್ನು ನಿಧಾನವಾಗಿ ಬದಿಗೆ ಸರಿಸಿ, ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.
4. ಬಂಡವಾಳಶಾಹಿ ಸಮಾಜ: ಜಗತ್ತಿನ ಎಲ್ಲ ವರ್ಗದ, ವರ್ಣದ, ಧರ್ಮದ, ಜಾತಿಯ ಹಾಗೂ ಪ್ರದೇಶದ ಜನರು ಬದುಕುವುದಕ್ಕೆ ಅಗತ್ಯವಾದ ಅನ್ನ, ಬಟ್ಟೆ, ಮನೆ, ವಾಹನ, ರೇಡಿಯೋ, ಔಷಧಿ, ಶಾಲೆ, ಸಾರಿಗೆ ಇತ್ಯಾದಿ ವಸ್ತುಗಳನ್ನು ಉತ್ಪಾದಿಸಿ ವಿತರಣೆ ಮಾಡುತ್ತಲೇ ಇರಬೇಕಾಗುತ್ತದೆ. ಈ ವಸ್ತುಗಳನ್ನು ಉತ್ಪಾದಿಸಿ ವಿತರಿಸುವುದಕ್ಕೆ ಎರಡು ಪರಿಕರಗಳು ಅತ್ಯಗತ್ಯ – ಒಂದು: ‘ಉತ್ಪಾದನಾ ಸಾಧನಗಳು’, ಎರಡು: ‘ಕಾರ್ಮಿಕರು’. ಉತ್ಪಾದನಾ ಸಾಧನಗಳೆಂದರೆ ಭೂಮಿ, ಗಣಿಗಳು, ಕಚ್ಚಾ ಸಾಮಗ್ರಿ, ಯಂತ್ರಗಳು, ಕಾರ್ಖಾನೆ, ಇತ್ಯಾದಿ. ಈ ಉತ್ಪಾದನಾ ಸಾಧನಗಳ ಜೊತೆಗೆ ಕಾರ್ಮಿಕರು ತಮ್ಮ ದೇಹಶಕ್ತಿ ಮತ್ತು ಬುದ್ಧಿಯನ್ನು ದುಡಿಸಿ ಅಗತ್ಯವಿದ್ದ ಸಾಮಗ್ರಿಗಳನ್ನು ತಯಾರಿಸುವರು.
ಯಾವ ಸಮಾಜದಲ್ಲಿ ಉತ್ಪಾದನಾ ಸಾಧನಗಳು ಅಲ್ಪಸಂಖ್ಯೆಯಲ್ಲಿರುವ ಬಂಡವಾಳಶಾಹಿಗಳ ಹಿಡಿತದಲ್ಲಿ ಇರುತ್ತದೊ ಹಾಗೂ ದುಡಿಯುವ ಜನ ವರ್ಗವು ಬಹುಸಂಖ್ಯೆಯಲ್ಲಿ ಇರುತ್ತದೋ ಅಂತಹ ಸಮಾಜವನ್ನು ಬಂಡವಾಳಶಾಹಿ ಸಮಾಜ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಜಪಾನ್, ಜರ್ಮನಿ ಹಾಗೂ ಇತರೆ ರಾಷ್ಟ್ರಗಳು.
ಬಂಡವಾಳಶಾಹಿ ಎಂಬುದು ಆರ್ಥಿಕ ವ್ಯವಸ್ಥೆ. ಈ ವ್ಯವಸ್ಥೆಯ ಸಮಕಾಲಿಕವಾಗಿ ಚಾಲ್ತಿಗೆ ಬಂದಿದ್ದು ಪ್ರಜಾಪ್ರಭುತ್ವ ಎಂಬ ರಾಜಕೀಯ ವ್ಯವಸ್ಥೆ. ಈ ರಾಜಕೀಯ ವ್ಯವಸ್ಥೆಯಲ್ಲಿ ಅನುವಂಶಿಕವಾಗಿ ಅಧಿಕಾರವನ್ನು ಪಡೆಯುವ ಸಾಮಂತಶಾಹಿ/ಪಾಳೆಗಾರಿ ಪದ್ಧತಿಯನ್ನು ರದ್ದುಗೊಳಿಸಲಾಯಿತು. ಪ್ರಜೆಗಳು ತಮಗೆ ಇಷ್ಟ ಬಂದ ವ್ಯಕ್ತಿಗಳನ್ನು ಚುನಾವಣೆಗಳ ಮೂಲಕ ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ನಿಶ್ಚಿತ ಅವಧಿಗೆ ಆಯ್ಕೆಯಾದ ಈ ಜನಪ್ರತಿನಿಧಿಗಳು ಸರಕಾರ ರಚಿಸಿ, ಶಾಸನಗಳನ್ನು ರೂಪಿಸುತ್ತಾರೆ. ಈ ಪದ್ಧತಿಯಲ್ಲಿ ಜನರು ತಮ್ಮ ಪ್ರತಿನಿಧಿಗಳ ಮೂಲಕ ತಾವೇ ಆಡಳಿತ ನಡೆಸುವ ಅಧಿಕಾರವನ್ನು ಹೊಂದಿರುತ್ತಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಗೆ ಕೆಲವು ಕನಿಷ್ಠ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ನೀಡಲಾಗುತ್ತದೆ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆ ಸೇರುವ, ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ, ಇಚ್ಛಿತ ಕೆಲಸವನ್ನು ಮಾಡುವ, ವಾಸ ಮತ್ತು ಸಂಚಾರ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಇತ್ಯಾದಿಗಳು ಪ್ರಜಾಪ್ರಭುತ್ವದ ಗುಣಲಕ್ಷಣಗಳು.
ಜನತೆಗೆ ಬೇಕಾದ ಕಾನೂನುಗಳನ್ನು ರಚಿಸುವುದಕ್ಕೆ ಶಾಸಕಾಂಗ, ರಚಿಸಿದ ಕಾನೂನುಗಳನ್ನು ಅನುಷ್ಠಾನಗೊಳಿಸಲಿಕ್ಕೆ ಕಾರ್ಯಾಂಗ ಮತ್ತು ಕಾನೂನುಗಳನ್ನು ವ್ಯಾಖ್ಯಾನ ಮಾಡುವುದಕ್ಕೆ, ಅಸಿಂಧುವೆಂದು ಕಂಡುಬಂದಲ್ಲಿ ರದ್ದುಗೊಳಿಸಲಿಕ್ಕೆ ಹಾಗೂ ಕಾನೂನನ್ನು ಉಲ್ಲಂಘಿಸಿದವರನ್ನು ಶಿಕ್ಷಿಸಲಿಕ್ಕೆ ನ್ಯಾಯಾಂಗ ಎಂಬ ಸ್ವತಂತ್ರವಾದ ಸಂಸ್ಥೆಗಳಿರುತ್ತವೆ.
ಜೊತೆಗೆ, ಈ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಬಂಡವಾಳಗಾರರು ಮತ್ತು ಬಹುಸಂಖ್ಯಾತ ದುಡಿಮೆಗಾರ ವರ್ಗಗಳ ಮಧ್ಯೆ ನಿರಂತರವಾಗಿ ಸಂಘರ್ಷ ನಡೆಯುತ್ತಿರುತ್ತದೆ. ಈ ವರ್ಗ ಸಂಘರ್ಷದಲ್ಲಿ ಬಂಡವಾಳಗಾರರು ತಾವು ಬಂಡವಾಳಗಾರರಾಗಿಯೇ ಉಳಿಯಲು ಹೆಚ್ಚೆಚ್ಚು ಲಾಭ ಗಳಿಸಲು ನಿರಂತರ ಯತ್ನಿಸುತ್ತಾರೆ. ಇತ್ತ ಕಾರ್ಮಿಕರು ಚೆನ್ನಾಗಿ ಬದುಕಲು ಉತ್ತಮ ಕೂಲಿ, ವೇತನ ಪಡೆಯಲೇಬೇಕು. ಒಬ್ಬರು ಮತ್ತೊಬ್ಬರ ಖರ್ಚಿನಿಂದ ಮಾತ್ರ ತಮ್ಮ ಹಿತ ಸಾಧಿಸಬಹುದು. ‘ಒಂದು ಕೊಳೆತರೆ ಮತ್ತೊಂದಕ್ಕೆ ಗೊಬ್ಬರ’ ಎಂಬ ಗಾದೆಯ ಹಾಗೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಒಂದು ವರ್ಗದ ಹಿತ ಇನ್ನೊಂದಕ್ಕೆ ಅಡ್ಡಿಯಾಗುತ್ತದೆ.
ಬಂಡವಾಳಗಾರರು ಶೋಷಕರು ಮತ್ತು ದುಡಿಯುವವರು ಶೋಷಿತರು. ಇವರ ನಡುವೆ ನಿರಂತರವಾಗಿ ನಡೆಯುವ ಸಂಘರ್ಷವೆ ವರ್ಗ ಹೋರಾಟ. ಈ ಹೋರಾಟವು ಜೀವನದ ಮೂರು ಮುಖ್ಯ ರಂಗಗಳಾದ ಆರ್ಥಿಕ, ರಾಜಕೀಯ ಮತ್ತು ಸೈದ್ಧಾಂತಿಕ ರಂಗಗಳಲ್ಲೂ ನಡೆಯುತ್ತದೆ. ಶೋಷಿತ ವರ್ಗವನ್ನು ದಮನಿಸಲು ಶೋಷಕ ವರ್ಗವೂ, ಶೋಷಕ ವರ್ಗದ ಸ್ಥಾನ ಪಲ್ಲಟಗೊಳಿಸಲು ಶೋಷಿತ ವರ್ಗವೂ ಸದಾ ಪ್ರಯತ್ನ ಮಾಡುತ್ತಿರುತ್ತವೆ.
5. ಸಮಾಜವಾದಿ ಸಮಾಜ: 19ನೇ ಶತಮಾನದ ಮಧ್ಯಕಾಲದಲ್ಲಿ, ದುಡಿಯುವ ವರ್ಗವು ತನ್ನ ಕಾಲ ಮೇಲೆ ತಾನು ದೃಢವಾಗಿ ನಿಂತು ಸಶಕ್ತವಾಗಿ ಪ್ರಯತ್ನಿಸಿದರೆ, ಹೊಸತೊಂದು ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯ ಎಂಬ ಭರವಸೆಯು ಬೆಳೆಯಿತು.
ಸಮಾಜವಾದಿ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳು ಅಂದರೆ, ಭೂಮಿ, ಗಣಿಗಳು, ಕಚ್ಚಾವಸ್ತುಗಳು, ಯಂತ್ರಗಳು, ಕಾರ್ಖಾನೆಗಳು, ಬ್ಯಾಂಕುಗಳು ಮೊದಲಾದವುಗಳು ಪ್ರಭುತ್ವದ (ಆಡಳಿತ ವರ್ಗ) ಹಿಡಿತದಲ್ಲಿರುತ್ತವೆ. ಸ್ವಂತ ಬಳಕೆ ಅಥವಾ ಸ್ವಂತ ಲಾಭಕ್ಕಾಗಿ ಉತ್ಪಾದನೆಯಲ್ಲಿ ತೊಡಗುವುದಕ್ಕೆ ಬದಲಾಗಿ, ಸಮಷ್ಟಿಯ ಸುಖಕ್ಕಾಗಿ ಸರ್ವರೂ ಸಾಮೂಹಿಕ ಪ್ರಯತ್ನ ಮಾಡುವುದು ಸಮಾಜವಾದದ ಮುಖ್ಯ ಲಕ್ಷಣ. ಮನುಷ್ಯರ ಮೇಲೆ ಮನುಷ್ಯರು ಅಧಿಕಾರ ನಡೆಸುವುದು ಕಡಿಮೆಯಾಗಿ, ನಿಸರ್ಗದ ಮೇಲೆ ಮನುಷ್ಯರ ಅಧಿಕಾರ ಹೆಚ್ಚುತ್ತದೆ. ಅರ್ಹರಾದ ಎಲ್ಲರಿಗೂ ತಕ್ಕಮಟ್ಟಿನ ಉದ್ಯೋಗ, ಅನ್ನ, ಬಟ್ಟೆ, ವಸತಿ, ಆರೋಗ್ಯ, ಶಿಕ್ಷಣ ಇತ್ಯಾದಿಗಳ ಭರವಸೆ ದೊರೆತು ಅನಾಥತೆ ಮತ್ತು ಅಭದ್ರತೆಗಳು ನಿವಾರಣೆಯಾಗುತ್ತವೆ. ಸಾರ್ವಜನಿಕರ ಒಳಿತಿಗಾಗಿ ಸಾರ್ವಜನಿಕರೇ ನಿರ್ವಹಿಸುವ ನಿಜವಾದ ಅರ್ಥದ ಪ್ರಜಾರಾಜ್ಯವಾಗುತ್ತದೆ.
ಈ ವ್ಯವಸ್ಥೆಯಲ್ಲಿ ವ್ಯಕ್ತಿಗಳ ಮಧ್ಯೆ ಮೇಲು-ಕೀಳು ಎಂಬುದಿಲ್ಲದೆ ತಮ್ಮ ವೈಯಕ್ತಿಕ ಅವಶ್ಯಕತೆಗಳಿಗೆ ಅಗತ್ಯವಾದ ಎಲ್ಲ ಗ್ರಾಹಕ ವಸ್ತುಗಳನ್ನು ಅಂದರೆ ಮನೆ, ಕಾರು, ಪೀಠೋಪಕರಣಗಳು, ಟೆಲಿವಿಷನ್, ಬಟ್ಟೆ ಮೊದಲಾದವುಗಳನ್ನು ಎಲ್ಲರೂ ಹೊಂದಿರಬಹುದು. ಈ ಸಮಾಜವಾದಿ ವ್ಯವಸ್ಥೆಯಲ್ಲಿ ಬಂಡವಾಳಗಾರ ವರ್ಗ ಇರುವುದಿಲ್ಲ. ಇತರರ ದುಡಿಮೆಯಿಂದ ಪರಾವಲಂಬಿ ಜೀವನ ನಡೆಸಲು ಅವಕಾಶವಿಲ್ಲ.
ಸಮಾಜವಾದಿ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿರುತ್ತವೆ. ಎಲ್ಲರೂ ಅಗತ್ಯವಾದ ವಿದ್ಯೆಯನ್ನು ಕಲಿತು ಅಗತ್ಯವಾದ ತರಬೇತಿಯನ್ನು ಪಡೆದು ಉತ್ತಮ ಜೀವನಮಟ್ಟ ತಲುಪಲು ಸೂಕ್ತ ಅವಕಾಶಗಳು ಹಾಗೂ ಸಾಧ್ಯತೆಗಳು ಮುಕ್ತವಾಗಿರುತ್ತವೆ. ಹಾಗೂ ಸಮಾಜವಾದಿ ವ್ಯವಸ್ಥೆಯಲ್ಲಿ ಒಂದೇ ಪ್ರಮಾಣದ ವರಮಾನ ಪಡೆಯುವುದಿಲ್ಲ. ಕೈ-ಕೆಲಸಗಾರರಿಗಿಂತ ಯಂತ್ರ ನಿರ್ವಾಹಕರು, ಸಾಮಾನ್ಯ ಸಂಗೀತಗಾರರಿಗಿಂತ ಶ್ರೇಷ್ಠ ಸಂಗೀತಗಾರರು, ಸ್ವಲ್ಪ ಕಲ್ಲಿದ್ದಲು ಅಗೆಯುವವರಿಗಿಂತ ಹೆಚ್ಚು ಕಲ್ಲಿದ್ದಲು ಅಗೆಯುವವರು, ಎಕರೆಗೆ 20 ಕ್ವಿಂಟಾಲ್ ಭತ್ತ ಬೆಳೆಯುವ ರೈತರಿಗಿಂತ 30 ಕ್ವಿಂಟಾಲ್ ಭತ್ತ ಬೆಳೆಯುವ ರೈತರು ಹೆಚ್ಚು ವರಮಾನ ಪಡೆಯುತ್ತಾರೆ. ಆಡಳಿತಗಾರರು, ಇಂಜಿನಿಯರುಗಳು, ಲೇಖಕರು, ಕಲಾವಿದರು, ಶಿಕ್ಷಕರು, ವೈದ್ಯರು ಹೆಚ್ಚು ಆದಾಯ ಪಡೆಯುವವರು. ಈ ವ್ಯವಸ್ಥೆಯಲ್ಲಿ ಆದಾಯದ ವ್ಯತ್ಯಾಸ ಇದ್ದರೂ, ಅವಕಾಶಗಳಲ್ಲಿ ಸಮಾನತೆಯನ್ನು ಕಾಣಬಹುದು. ಸಮಾಜವಾದಿ ಸಮಾಜದಲ್ಲಿ ‘ಸ್ವಾತಂತ್ರ್ಯ’ ಎಂಬ ಪದ ಕೇವಲ ಘೋಷಣೆಯಾಗಿ ಉಳಿಯದೆ ವಾಸ್ತವಿಕ ಅರ್ಥ ಪಡೆಯುವುದು ಬಹಳ ಮುಖ್ಯ. ಸ್ವಾತಂತ್ರ್ಯವೆಂದರೆ ಪೂರ್ಣ ಹಾಗೂ ಸಮೃದ್ಧ ಜೀವನಾವಕಾಶ. ಅಂದರೆ, ನಿತ್ಯಜೀವನಕ್ಕೆ ಬೇಕಾದ ಆಹಾರ, ಬಟ್ಟೆ, ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ ಇತ್ಯಾದಿಗಳನ್ನು ಪಡೆಯಲು ಬೇಕಾದ ಆರ್ಥಿಕ ಶಕ್ತಿ ಹಾಗೂ ಅವಕಾಶಗಳು. ಪ್ರತಿಯೊಬ್ಬರ ಸಾಂಸ್ಕೃತಿಕ, ಬೌದ್ಧಿಕ ಹಾಗೂ ಭೌತಿಕ ಬೆಳವಣಿಗೆಯೇ ನಿಜವಾದ ಸ್ವಾತಂತ್ರ್ಯ.ನ್ಯಾ. ನಾಗಮೋಹನ್ ದಾಸ್








