March 25, 2023 4:08 pm

ಸ್ಟಾಲಿನ್ ಸರ್ಕಾರದ ಶ್ವೇತ ಪತ್ರ

ಸ್ಟಾಲಿನ್ ಸರ್ಕಾರದ  ಶ್ವೇತ ಪತ್ರ

  • ಕೆ.ಎಸ್.ಸತೀಶ್ ಕುಮಾರ್, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕರು

ದೇಶದ ಗಣರಾಜ್ಯ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ಒಂದು ವಿಶಿಷ್ಟ ಪರಂಪರೆಯಿದೆ. ಅದು ಸ್ವಾಯತ್ತತೆಯ ವಿಚಾರದಲ್ಲಿ ದೆಹಲಿಯ ಒಕ್ಕೂಟ ಸರ್ಕಾರದೊಂದಿಗೆ ಸುಲಭವಾಗಿ ರಾಜಿಯಾಗುವುದಿಲ್ಲ. ಮತ್ತು ತನ್ನತನವನ್ನು ಉಳಿಸಿಕೊಳ್ಳುತ್ತದೆ

ಇತ್ತೀಚಿಗೆ ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ, ತನ್ನ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಮಂಡಿಸಿತು. ದೇಶದ ಯಾವುದೇ ರಾಜ್ಯ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಮಂಡಿಸಿರುವ ಉದಾರಣೆಗಳು ಸದ್ಯಕ್ಕೆ ಕಾಣಬರುವುದಿಲ್ಲ.

ಸಾಮಾನ್ಯವಾಗಿ ಆಳುವವರು, ಭರವಸೆಗಳನ್ನು ನೀಡಿ ಜನರಲ್ಲಿ ಆಶಾವಾದ ತುಂಬುವ ಕಾಲವೊಂದಿತ್ತು. ಆದರೆ ಈಗ ಪ್ರತಿಕ್ಷಣ ಸುಳ್ಳುಗಳನ್ನು ಹೇಳಿ ಜನರನ್ನು ಭ್ರಮೆಗಳಿಗೆ ದೂಡಿ ಅವಸಾನದತ್ತ ತಳ್ಳುವ  ವಿನಾಶಕಾರಿ ಪರಂಪರೆ ಆರಂಭವಾಗಿದೆ.

ತಮಿಳುನಾಡು ಉಳಿದ ರಾಜ್ಯಗಳಿಗಿಂತ ಭಿನ್ನ ಹೇಗೆ ಎಂದರೆ, ತತ್ವಜ್ಞಾನಿ ಪೆರಿಯಾರ್ ಅವರು ರೂಪಿಸಿದ ಚಳುವಳಿಯ ಪ್ರಭಾವ ಇನ್ನೂ ಉಳಿದುಕೊಂಡಿದೆ.  ಹೀಗಾಗಿ ಜನ ಮತ್ತು ಸರ್ಕಾರದ ನಡುವೆ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಸ್ಟಾಲಿನ್ ಶ್ವೇತಪತ್ರ ಮಂಡಿಸುವ ಧೈರ್ಯ ತೋರಿದ್ದಾರೆ ಎನಿಸುತ್ತದೆ.

ಅಲ್ಲಿನ ಕೆಲವು ಮುಖ್ಯಮಂತ್ರಿಗಳು ಆಡಳಿತದಲ್ಲಿ ತಮ್ಮದೇ ಛಾಪನ್ನು ಮೂಡಿಸಿ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಕಾಮರಾಜ ನಾಡಾರ್, ಅಣ್ಣಾದೊರೈ, ಎಂಜಿಆರ್, ಕರುಣಾನಿಧಿ ಮುಂತಾದವರ ಮಾರ್ಗದಲ್ಲಿ ಸ್ಟಾಲಿನ್ ಹೆಜ್ಜೆ ಹಾಕುತ್ತಾರೋ ಕಾಯ್ದು ನೋಡಬೇಕಿದೆ.

ನೋಟು ಅಮಾನ್ಯೀಕರಣ, ದೀರ್ಘಕಾಲ ಲಾಕ್ ಡೌನ್, ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಹೀಗೆ ಹಲವು ಸಮಸ್ಯೆಗಳು ರಾಜ್ಯಗಳನ್ನು ಬಾಧಿಸುತ್ತಿವೆ. ಬಹುತೇಕ ರಾಜ್ಯ ಸರ್ಕಾರಗಳು ಆಶ್ವಾಸನೆಗಳನ್ನು ಜನರ ಮೂಗಿಗೆ ತುಪ್ಪ ಸವರಿದಂತೆ, ನೀಡುತ್ತಲೇ ಸಾಗಿವೆ. ಜನರ ಬದುಕನ್ನು ಕಟು ವಾಸ್ತವದ ನೆಲೆಯಲ್ಲಿ ವಿಮರ್ಶಿಸುವ ಧೈರ್ಯ ತೋರುವುದಿಲ್ಲ.

ಇಂತಹ ಸಂದರ್ಭದಲ್ಲಿ ತಮಿಳುನಾಡು ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರ ಮಂಡಿಸುವುದರ ಮೂಲಕ, ತನ್ನ ರಾಜ್ಯದ ಈಗಿನ ಸ್ಥಿತಿಗತಿಗಳೇನು ಎಂಬುದನ್ನು ತಿಳಿಸಿದೆ. ಸತ್ಯ ಕಹಿಯಾಗಿರುತ್ತದೆ. ಈ ಶ್ವೇತಪತ್ರ ಜನರಿಗೆ ಸಿಹಿಯಾಗೇನು ಇಲ್ಲ. ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಶ್ವೇತ ಪತ್ರ ಮಂಡಿಸುವ ಎದೆಗಾರಿಕೆ ತೋರಿದ್ದಾರೆ.

ಸರ್ಕಾರಕ್ಕೆ ಆದಾಯ ತರುವ ರಾಜಸ್ವ ಮೂಲಗಳು ಕಡಿಮೆಯಾಗಿವೆ. ರಾಜ್ಯದ ಮೇಲೆ ಸಾಲದ ಹೊರೆ ಅಧಿಕವಾಗಿದೆ. ಪ್ರತಿ ಕುಟುಂಬವು ಸರಾಸರಿಯಾಗಿ ರಾಜ್ಯ ಮತ್ತು ಕೇಂದ್ರಗಳಿಗೆ ಪ್ರತಿವರ್ಷ ಒಂದು ಲಕ್ಷ ರೂ ಪ್ರತ್ಯಕ್ಷ ಅಥವಾ ಪರೋಕ್ಷ ತೆರಿಗೆಗಳನ್ನು ನೀಡುತ್ತವೆ. ಇದಕ್ಕೆ ಪ್ರತಿಯಾಗಿ 1.6 ಲಕ್ಷ ರೂ. ಇನ್ನಿತರ ಸಬ್ಸಿಡಿ, ಆರೋಗ್ಯ, ಶಿಕ್ಷಣ, ಪಡಿತರ ಸಾರಿಗೆ ಮುಂತಾದ ಸೇವೆಗಳನ್ನು ಪಡೆಯುತ್ತದೆ.

ಪ್ರತಿ ವರ್ಷ ಆದಾಯ ಮತ್ತು ವೆಚ್ಚವನ್ನು ಸರಿದೂಗಿಸಲು ಸರ್ಕಾರ ಸಾಲ ಮಾಡುತ್ತಾ ಬಂದಿದ್ದು ಸಾಲದ ಪ್ರಮಾಣ ಪ್ರತಿ ಕುಟುಂಬದ ಮೇಲೆ 2.6 ಲಕ್ಷ ರೂ.ಗಳಾಗುತ್ತದೆ. ಈ ಸಾಲದಿಂದ ಜನರನ್ನು ಮುಕ್ತಗೊಳಿಸಲು ಸಂಪನ್ಮೂಲ ಕ್ರೋಡೀಕರಣಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ಮುಂದಾಗಿದ್ದಾರೆ.

ಪ್ರತಿ ರಾಜ್ಯ ಸರ್ಕಾರವು ಸಂಪನ್ಮೂಲ ಕ್ರೋಡೀಕರಣಕ್ಕೆ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಹಾಗೂ ಸಾರ್ವಜನಿಕ ಉದ್ದಿಮೆಗಳಂತ, ಇನ್ನಿತರೆ ಆದಾಯ ಮೂಲಗಳನ್ನು ಹೊಂದಿರುತ್ತವೆ. ಸರಕು ಮತ್ತು ಸೇವಾ ತೆರಿಗೆ(ಜಿ ಎಸ್ ಟಿ) ನೀತಿ ಜಾರಿಯಾದ ನಂತರ ರಾಜ್ಯ ಸರ್ಕಾರದ ಸಿಂಹಪಾಲು ಆದಾಯದ ಮೂಲಗಳು ಕೇಂದ್ರ ಸರ್ಕಾರಕ್ಕೆ ಸೇರುತ್ತಿವೆ.

ಸದ್ಯಕ್ಕೆ ಆಸ್ತಿತೆರಿಗೆ, ಇಂಧನಗಳ ಮೇಲೆ ತೆರಿಗೆ ಮತ್ತು ಅಬಕಾರಿ ತೆರಿಗೆ  ಇವಿಷ್ಟೇ ರಾಜ್ಯದ ಆದಾಯದ ಮೂಲಗಳಾಗಿವೆ. ಇಂಧನದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಈಗಾಗಲೇ ಪೆಟ್ರೋಲ್ ಅಥವ ಡೀಸೆಲ್ ಗಳ ಮೇಲೆ 32 ರೂ.ಗಳ ತೆರಿಗೆ ವಿಧಿಸುತ್ತಿದೆ. ಈ ತೆರಿಗೆಯಲ್ಲಿ ರಾಜ್ಯಗಳಿಗೆ ಪಾಲು ಇರುವುದಿಲ್ಲ. ಇದರ ಮೇಲೆ ಪುನಹ ತೆರಿಗೆ ವಿಧಿಸಿದರೆ ಜನ ಆರ್ಥಿಕವಾಗಿ ಸೋಲುತ್ತಾರೆ.

ಆದ್ದರಿಂದ ಉಳಿದಿರುವುದು ಒಂದೇ ದಾರಿ ಎಂದು ಮುಖ್ಯಮಂತ್ರಿ ಸ್ಟಾಲಿನ್ ಆಸ್ತಿಗಳ ಮೇಲಿನ ತೆರಿಗೆಯನ್ನು ಪುನರ್ ವಿಮರ್ಶಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ಬಡವರಿಗೆ ತೊಂದರೆಯಾಗುವುದಿಲ್ಲ. ಉಳ್ಳವರಿಗೆ ಸ್ವಲ್ಪಮಟ್ಟಿನ ಪರಿಣಾಮ ಬೀರಬಹುದು. ಮಹಾನಗರ, ನಗರ, ಪಟ್ಟಣ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಚಿರಾಸ್ತಿ ಮೌಲ್ಯೀಕರಣವನ್ನು ಪಾರದರ್ಶಕವಾಗಿ ನಡೆಸಿರುವುದಿಲ್ಲ. ವಿವಿಧ ರೀತಿಯ ಒತ್ತಡಗಳಿಂದ ಆಸ್ತಿ ತೆರಿಗೆ ಸಂಗ್ರಹದಲ್ಲಿ ಲೋಪಗಳನ್ನು ಗುರುತಿಸಲಾಗಿದೆ.

ಈ ವಿಷಯವನ್ನು 2016-17 ರಲ್ಲಿ ಮೋದಿ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಹ್ಮಣ್ಯಂ ಗುರುತಿಸಿದ್ದಾರೆ. ಅವರು ಪ್ರಸ್ತುತ ಸ್ಟಾಲಿನ್ ಸರ್ಕಾರದ ಆರ್ಥಿಕ ಸಲಹೆಗಾರರಲ್ಲಿ, ಒಬ್ಬರಾಗಿದ್ದಾರೆ. ಅವರ ಪ್ರಕಾರ ತೆರಿಗೆ ಸಂಗ್ರಹಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕಾಗುತ್ತದೆ. ಸ್ಯಾಟಲೈಟ್, ಡ್ರೋನ್ ಮುಂತಾದ ಉಪಕರಣಗಳ ಮೂಲಕ ನಗರಗಳಲ್ಲಿ ಪ್ರತಿ ಕಟ್ಟಡದ ವಿಸ್ತೀರ್ಣ ಮೌಲ್ಯಮಾಪನ ನಡೆಸಬೇಕಾಗುತ್ತದೆ. ಇದರಿಂದಾಗಿ ನಾಲ್ಕರಿಂದ ಏಳು ಪಟ್ಟು ಹೆಚ್ಚು ತೆರಿಗೆ ಸಂಗ್ರಹವಾಗಲಿದೆ.

ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ಸಂಸ್ಥೆಗಳ ಆಡಳಿತದ ವಿಚಾರಗಳಲ್ಲಿ ಹಾಗೂ ನೈಸರ್ಗಿಕ ವಿಕೋಪಗಳನ್ನು ಎದುರಿಸುವ ನಿಟ್ಟಿನಲ್ಲಿ ಕೇರಳದ ಮಾದರಿಯನ್ನು ಅನುಸರಿಸಬೇಕು. ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಸರ್ಕಾರ ಅತ್ಯಧಿಕ ಹಣ ನೀಡುತ್ತದೆ. ಅಂತೆಯೇ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಕ್ರೋಢಿಕರಣದಲ್ಲಿ ದೇಶದಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ ತಮಿಳುನಾಡು ಎರಡನೇ ಸ್ಥಾನದಲ್ಲಿದೆ.

ಇದಲ್ಲದೆ ಸಬ್ಸಿಡಿ ವಿಷಯದ ಬಗ್ಗೆಯೂ ಶ್ವೇತಪತ್ರ ಪ್ರಸ್ತಾಪಿಸುತ್ತದೆ. ವಿದ್ಯುತ್, ಸಾರಿಗೆ, ಕುಡಿಯುವ ನೀರು, ಹೀಗೆ ಹಲವಾರು ರಂಗಗಳಲ್ಲಿ ಸಬ್ಸಿಡಿಗಳಿಗೆ ಸರ್ಕಾರ ಹಣ ವೆಚ್ಚ ಮಾಡುತ್ತಿದೆ. ಈ ಸಂದರ್ಭದಲ್ಲಿ ಕೋವಿಡ್ ಸಮಸ್ಯೆಯಿಂದ ಇಡೀ ಪ್ರಪಂಚದ ಬಹುತೇಕ ದೇಶಗಳ ಆರ್ಥಿಕತೆ ಕುಸಿದಿದೆ. ಈ ಕುಸಿತದ ಪರಿಣಾಮ ಬಡವ ಮತ್ತು ಶ್ರೀಮಂತರ ನಡುವಿನ ಅಂತರವು ಹೆಚ್ಚುತ್ತಿದೆ. ಈ ಸಾಂಕ್ರಾಮಿಕದಿಂದ ಅತಿ ಹೆಚ್ಚು ಹಾನಿಗೆ ಈಡಾದವರು ಬಡವರೇ. ಸಬ್ಸಿಡಿಗಳ ಅತಿಹೆಚ್ಚು ಫಲಾನುಭವಿಗಳು ಬಡವರೇ. ಆದುದರಿಂದ ಯಾವ ಕಾರಣಕ್ಕೂ ಈ ಸಂದರ್ಭದಲ್ಲಿ ಸಬ್ಸಿಡಿ ಕಡಿತಗೊಳಿಸಲಾಗುವುದಿಲ್ಲ.

ಕೋವಿಡ್ ಸಂದರ್ಭದಲ್ಲಿ ಬಹುತೇಕ ಅರ್ಥಶಾಸ್ತ್ರಜ್ಞರು, ಸರ್ಕಾರ ಮೂಲಸೌಕರ್ಯಗಳ ಮೇಲೆ ಬಂಡವಾಳ ಹೂಡುವುದರಿಂದ ಹಣದ ಹರಿವು ಉಂಟಾಗಿ ಜನರಲ್ಲಿ ಕೊಳ್ಳುವ ಶಕ್ತಿಹೆಚ್ಚುತ್ತದೆ ಆರ್ಥಿಕ ಬಿಕ್ಕಟ್ಟು ಸುಧಾರಿಸುತ್ತದೆ ಎಂಬ ನಿಲುವು ವ್ಯಕ್ತಪಡಿಸಿದರು. ಆದರೆ ತಮಿಳುನಾಡಿನಲ್ಲಿ ಕಳೆದ ಐದು ವರ್ಷಗಳಿಂದ, ಸಂಪನ್ಮೂಲ ಕ್ರೋಢೀಕರಣ ಕ್ಷೀಣಿಸುತ್ತಾ ಬಂದು ಸಾಲದ ಪ್ರಮಾಣ ಹೆಚ್ಚಿದೆ. ಸರ್ಕಾರ ಬಿಕ್ಕಟ್ಟಿನಲ್ಲಿದೆ.

ದೇಶದ ಆರ್ಥಿಕ ದುಸ್ಥಿತಿಗೆ  ಕೋವಿಡ್ ಸಾಂಕ್ರಾಮಿಕ ಎಷ್ಟು ಕಾರಣವೋ, ಜಿ ಎಸ್ ಟಿ ಎಂಬ ಭೂತವು ಅಷ್ಟೇ ಕಾರಣವಾಗಿದೆ. ಜಿಎಸ್ಟಿ ರಾಜಕೀಯ, ಆರ್ಥಿಕತೆ, ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗಳನ್ನೇ ದ್ವಂಸಗೊಳಿಸಿದೆ. ಕೇಂದ್ರ ಹಾಗೂ ರಾಜ್ಯಗಳ ಸಂಬಂದಗಳನ್ನು ರೋಗಗ್ರಸ್ತಗೊಳಿಸಿದೆ. ಜಿ ಎಸ್ ಟಿ ಯ ಪ್ರಸ್ತುತತೆ ಮತ್ತು ಉದ್ದೇಶಗಳ ಬಗ್ಗೆ ಶ್ವೇತ ಪತ್ರ ಪ್ರಶ್ನೆಯನ್ನು ಎತ್ತಿದೆ.

2009ರಲ್ಲಿ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿ.ಎಸ್ ಟಿ ಜಾರಿಯ ಅಪಾಯಗಳ ಬಗ್ಗೆ ಎಚ್ಚರಿಸಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದನ್ನು ಶ್ವೇತ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಅರವತ್ತರ ದಶಕದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜನಾಡಾರ್ ಎಲ್ಲರನ್ನು ಒಳಗೊಳ್ಳುವ ಆರ್ಥಿಕ ನೀತಿಯನ್ನು ಪ್ರತಿಪಾದಿಸಿದ್ದರು. ಸಮೃದ್ದವಾದ ಖಾಸಗಿ ಬಂಡವಾಳವನ್ನು ಉಪಯೋಗಿಸಿ ಸಮಗ್ರ ಕಲ್ಯಾಣ ಯೊಜನೆಗಳು ರಾಜ್ಯದಲ್ಲಿ ಜಾರಿಗೊಳ್ಳಬೇಕು. ಸುಭಿಕ್ಷ ರಾಜ್ಯದ ಪರಿಕಲ್ಪನೆ ದೇಶಕ್ಜೆ ಅಂದು ಮಾದರಿಯಾಗಿತ್ತು. ಆದರೆ ಕೆಲವು ದಶಕಗಳಿಂದ ಈಚೆಗೆ ಹಿರಿಯರು ನಿರ್ಮಿಸಿಕೊಟ್ಟ ಮಾರ್ಗಗಳನ್ನು ಧಿಕ್ಕರಿಸಿ ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳಲಾಗಿದೆ. ಇದರಿಂದ ಮುಕ್ತಗೊಳಿಸಿ ರಾಜ್ಯವನ್ನು ಸರಿದಾರಿಗೆ ತರುವ ಹೊಣೆ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರ ಮೇಲೆ ಇದೆ ಎಂದು ಶ್ವೇತ ಪತ್ರ ತಿಳಿಸಿದೆ.

ಈ ಶ್ವೇತ ಪತ್ರ ರೂಪಿಸಿದ ಪಳನಿವೇಲ್ ತ್ಯಾಗರಾಜನ್ ಬಗ್ಗೆ ಎರಡು ಮಾತುಗಳು. ಐವತ್ನಾಲ್ಕರ ಹರೆಯದ ಪಳನಿವೇಲ್, ಅಮೇರಿಕಾದ ವಿಶ್ವವಿದ್ಯಾಲಯವೊಂದರಲ್ಲಿ ಹಣಕಾಸು ವಿಭಾಗದಲ್ಲಿ ಎಂಬಿಎ ಪದವಿ ಪೂರ್ಣಗೊಳಿಸಿ ಸಿಂಗಪೂರ್ ನ ಬ್ಯಾಂಕ್ ವೊಂದರಲ್ಲಿ ಪ್ರಬಂಧಕರಾಗಿದ್ದವರು. ಆ ಹುದ್ದೆಗೆ ರಾಜಿನಾಮೆ ನೀಡಿ, ರಾಜಕೀಯ ಕ್ಷೇತ್ರ ಪ್ರವೇಶಿಸಿದರು. ಮಧುರೈ ಕೇಂದ್ರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾದವರು. ಅವರ ತಂದೆ ತ್ಯಾಗರಾಜನ್ ಕರುಣಾನಿಧಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ತಾತ ಪಳನಿವೇಲ್ ಸಹ ಮೂವತ್ತರ ದಶಕದಲ್ಲಿ ಮದ್ರಾಸ್ ಪ್ರಜಾಪ್ರತಿನಿಧಿ ಸಭೆಯ ಮುಖ್ಯಮಂತ್ರಿಯಾಗಿದ್ದರು.

(ಆಧಾರ: ಪ್ರವೀಣ್ ಚಕ್ರವರ್ತಿ, ಕಾಂಗ್ರೆಸ್ ಪಕ್ಷದ ರಾಜಕೀಯ, ಅರ್ಥಿಕ ಅಂಕಿ ಅಂಶಗಳ ವಿಭಾಗದ ಮುಖ್ಯಸ್ಥರು, ದಿ ಹಿಂದೂ ಪತ್ರಿಕೆಯ ಲೇಖನ.)

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ