December 3, 2023 6:29 am

ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ಮಸೂದೆ ಮತ್ತು ಅದರ ಪರಿಣಾಮಗಳು

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಸರಕಾರಗಳು ಕಾನೂನುಗಳನ್ನು ಚರ್ಚೆ ಮಾಡದೆಯೇ ಜಾರಿಗೊಳಿಸುತ್ತಿವೆ. ವಿದ್ಯುತ್ ಕಾಯಿದೆಯೂ ಹಾಗೆಯೇ ಎಂದು ಕೃಷಿ ಮತ್ತು ಆಹಾರ ತಜ್ಞ ಕೆ.ಸಿ.ರಘು ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಗಸ್ಟ್ 14, 2021ರಂದು ಆಯೋಜಿಸಲಾಗಿದ್ದ ಬಂಧುತ್ವ ಬೆಳಕು ಉಪನ್ಯಾಸ ಮಾಲಿಕೆಯ ವೆಬಿನಾರ್ ಸರಣಿಯಲ್ಲಿ “ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ಮಸೂದೆ ಮತ್ತು ಅದರ ಪರಿಣಾಮಗಳು” ಕುರಿತು ಆಹಾರ ಮತ್ತು ಕೃಷಿ ತಜ್ಞ ಕೆ.ಸಿ.ರಘು ಉಪನ್ಯಾಸ ನೀಡಿದರು.

ವೆಬಿನಾರ್ ನಲ್ಲಿ ರೈತ ನಾಯಕ ಬಡಗಲಪುರ ನಾಗೇಂದ್ರಪ್ಪ, ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು, ಯುವ ರೈತ ಮುಖಂಡ ಟಿ.ಯಶವಂತ್‌ ಪ್ರತಿಕ್ರಿಯೆ ನೀಡಿದರು. ‌

ವೆಬಿನಾರ್ ನಲ್ಲಿ ವಿಷಯ ಮಂಡಿಸಿದ ಕೆ.ಸಿ.ರಘು, ವಿದ್ಯುತ್ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಚಾರ್ಜಿಂದ ಹಿಡಿದು ದೇಶದಲ್ಲಿ ಸಾಕಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದೇವೆ. ಲೆಕ್ಕಾಚಾರಗಳು ತಪ್ಪಾಗುತ್ತಿವೆ, ಮನೆ ಮನೆಗೆ ವಿದ್ಯುತ್ ಪೂರೈಕೆಯಲ್ಲಿ ನಾವು ಇನ್ನೂ ಯಶಸ್ವಿಯಾಗಿಲ್ಲ. ತಲಾವಾರು ವಿದ್ಯುತ್ ಬಳಕೆ ದೇಶದಲ್ಲಿ ಪ್ರತಿ ಮನುಷ್ಯ 3050 ಯೂನಿಟ್ ಬಳಕೆ ಮಾಡುತ್ತಿದ್ದಾನೆ ಎಂದರು.

ಯಾವ ದೇಶ ಜಗತ್ತಿನ ಸರಾಸರಿಗಿಂತ ಕಡಿಮೆ ಬಳಸುತ್ತಿದೆಯೋ ಅದು ಇನ್ನೂ ಬಡ ದೇಶ ಅಥವಾ ಮೂಲಭೂತ ಸೌಲಭ್ಯಗಳಿಂದ ನಲುಗುತ್ತಿದೆ ಎಂದರ್ಥ. ಹಗಲು ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸುವ ಸರಕಾರಗಳು ರಾತ್ರಿ ಹೊತ್ತು ರೈತರಿಗೆ ನೀಡುತ್ತವೆ. ಆದರೆ ಹಾವು, ಚೇಳುಗಳಿಂದ ಕಚ್ಚಿಸಿಕೊಂಡು ಸಾಯುವ ರೈತರ ಸಂಖ್ಯೆ 1.5 ಸಾವಿರಕ್ಕೂ ಆಧಿಕವಾಗಿದೆ ಎಂದರು.

ಇನ್ನೂ ವ್ಯವಸ್ಥೆಯನ್ನು ಕಟ್ಟಬೇಕಾದ ಸಂದರ್ಭದಲ್ಲಿ ಖಾಸಗೀಕರಣ ಸರಿಯಲ್ಲ. 11 – 12 ರೂಪಾಯಿ ಪ್ರತಿ ಯೂನಿಟ್ ಗೆ ಭಾರತದಲ್ಲಿ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದೆ. ಚೈನಾದಲ್ಲಿ ಇದು 4 ರೂಪಾಯಿ ಅಷ್ಟೇ ಇದೆ. ವಿದ್ಯುತ್ ಸಂಸ್ಥೆಗಳು ನಷ್ಟದಲ್ಲಿವೆ ನಿಜ ಆದರೆ ಪರಿಹಾರ ಸೂಚಿಸುವವರೇ ಸಮಸ್ಯೆಗೆ ಕಾರಣಕರ್ತರಾಗಿದ್ದಾರೆ ಎಂದರು.

ಪರ್ಯಾಯ ಶಕ್ತಿಗಳಿಗೂ ಗಮನಹರಿಸಬೇಕು. ಸೆಸ್ ಹಾಕಿ ಲಕ್ಷ ಕೋಟಿಗಳಷ್ಟು ಸಂಗ್ರಹಿಸಿ ರಾಜ್ಯ ಸರಕಾರಗಳಿಗೆ ಕಡಿಮೆ ಕೊಟ್ಟು ಕೇಂದ್ರವೇ ಉಳಿಸಿಕೊಳ್ಳುತ್ತದೆ. ಸರಕಾರಗಳು, ರಾಜಕೀಯ ಪಕ್ಷಗಳು ಶ್ರೀಮಂತವಾಗುತ್ತಿವೆಯೇ ಹೊರತು ಪ್ರಜೆಗಳಿಗಲ್ಲ. ನಷ್ಟಗಳನ್ನು ಕಡಿಮೆ ಮಾಡಿದರೆ ದರ ಕಡಿಮೆಯಾಗುತ್ತದೆ. ಹೂಡಿಕೆ ಬೇಕು ಅದರ ಕೊರತೆಯಿಂದಲೇ ಮೂಲಭೂತ ಸೌಕರ್ಯಗಳ ಪೂರೈಕೆಯಲ್ಲಿ ನಾವು ವಿಫಲವಾಗುತ್ತಿದ್ದೇವೆ ಎಂದರು.

ಖಾಸಗೀಕರಣ ಯಾವುದೇ ಕ್ಷೇತ್ರದಲ್ಲಿ ಬಂದರೂ ಅದು ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ಅವರು ಉಳ್ಳವರಿಗೆ ಮಾತ್ರ ಸರಿಯಾಗಿ ಸೇವೆ ನೀಡಲು ಸ್ಪರ್ಧಿಸುತ್ತಾರಷ್ಟೇ. ಕನಿಷ್ಠ ಪ್ರಾಥಮಿಕ ಬಡ್ಡಿದರಕ್ಕಿಂತ ಕಡಿಮೆ ದರದಲ್ಲಿ ಉದ್ಯಮಿಗಳಿಗೆ ಸಾಲ ನೀಡಿ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಹೆಚ್ಚು ಬಡ್ಡಿದರದಲ್ಲಿ ಸಾಲ ನೀಡುತ್ತಾರೆ. ಇದೇ ಖಾಸಗೀಕರಣದ ಸಂದರ್ಭದಲ್ಲಿಯೂ ಮುಂದುವರೆಯುತ್ತೆ ಎಂದರು.

ವೈಜ್ಞಾನಿಕ ದರ ನಿರ್ವಹಣೆ ಕೂಡ ಮಾಡುವುದಿಲ್ಲ. ಪ್ರತಿ ವರ್ಷ ರೈತರು 4 ಲಕ್ಷ ಕೋಟಿ ನಷ್ಟ ಅನುಭವಿಸುತ್ತಾರೆ. ಇದಕ್ಕೆ ಕೂಡ ದರದಲ್ಲಿಯ ಅವೈಜ್ಞಾನಿಕತೆಯೇ ಕಾರಣ. ರೈತರಿಗೆ ತಮ್ಮ ಹೊಲದಲ್ಲಿಯೇ ಸೌರ ವಿದ್ಯುತ್ ಉತ್ಪಾದನೆಗೆ ನೆರವಾಗಬೇಕು. ಅವರಿಂದಲೇ ವಿದ್ಯುತ್ ಖರೀದಿಸುವಂತಾಗಬೇಕು. ಅಡುಗೆ ಇಂಧನದ ಪರಿಸ್ಥಿತಿಯೂ ಹಾಗೆಯೇ ಇದೆ. ಇಲ್ಲಿಯೂ ಸಬ್ಸಿಡಿ ಹೋಗಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳು ಕೇವಲ ಎರಡು ಸಿಲಿಂಡರ್ ಕೊಳ್ಳುತ್ತಿದ್ದಾರೆ. ಖಾಸಗೀಕರಣ ಎಂದೂ ಪರಿಹಾರವಲ್ಲ. ಬಡವರಿಗೆ ಮೂಲಭೂತ ಅವಶ್ಯಕತೆಯನ್ನು ಉಚಿತವಾಗಿ ನೀಡಿದರೂ ತಪ್ಪೇನಲ್ಲ ಎಂದರು.

ವೆಬಿನಾರ್ ನಲ್ಲಿ ಪ್ರತಿಕ್ರಿಯಿಸಿದ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ

ಮೂಲಭೂತವಾಗಿ ಸಮಸ್ಯೆಗಳನ್ನು ಹುಡುಕಿ ಪರಿಹಾರಗಳನ್ನು ಕಂಡುಕೊಳ್ಳಬೇಕು. 1910ರಲ್ಲಿ ವಿದ್ಯುತ್ ಕಾಯಿದೆ ಬಂತು. ವಾಜಪೇಯಿ ಸರಕಾರ ಸ್ವಲ್ಪ ಬದಲಾವಣೆ ಮಾಡಿತು. ಈಗ ಬ್ರಿಟಿಷರಗಿದ್ದಷ್ಟು ಕೂಡ ಕಾಳಜಿಯಿಲ್ಲದೇ ಸಂಪೂರ್ಣ ಬದಲಾಯಿಸಲು ಸರಕಾರ ಹೊರಟಿದೆ. ಇವತ್ತು ಕೃಷಿ ಕ್ಷೇತ್ರ, ಸಾರ್ವಜನಿಕ ಸಂಪತ್ತು ಖಾಸಗೀಕರಣ ಆಗುತ್ತಿವೆ. ಸ್ವತಂತ್ರಪೂರ್ವ ಆಶೋತ್ತರಗಳಿಗೆ ವಿರುದ್ಧವಾಗಿ ಇವತ್ತು ಸರಕಾರಗಳು ನಡೆಯುತ್ತಿವೆ. ಬಂಡವಾಳಶಾಹಿ ಪರವಾಗಿರುವ ಪ್ರಭುತ್ವ ಅಸಮಾನತೆಯನ್ನು ಇರಿಸಿದೆ. ಬೆರಳೆಣಿಕೆಯಷ್ಟಿರುವ ಖಾಸಗಿ ವ್ಯಕ್ತಿಗಳ ಆದಾಯ, ಆಸ್ತಿ ಮಾತ್ರ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರಗಳು ತರುತ್ತಿರುವ ನೀತಿ, ಯೋಜನೆಗಳೆಲ್ಲವೂ ಜನ ವಿರೋಧಿ, ಸಂವಿಧಾನ ವಿರೋಧಿಯಾಗಿಯೇ ರೂಪುಗೊಳ್ಳುತ್ತಿವೆ. ವಿದ್ಯುತ್ ಮೇಲೆ ಕೃಷಿ ಸೇರಿ ಎಲ್ಲ ವಲಯಗಳೂ ಅವಲಂಬಿತವಾಗಿದೆ. ಬಂಗಾರಪ್ಪ ಸರಕಾರ 10 ಎಚ್.ಪಿ ಅಷ್ಟು ಪಂಪಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ಒಪ್ಪಿಕೊಂಡಿತು. ಎಮ್ ಎಸ್ ಪಿ ಅವೈಜ್ಞಾನಿಕವಾಗಿದೆ. ಕನಿಷ್ಠ ಕಾನೂನಾತ್ಮಕ ರೂಪ ಕೊಡಲು ಆಗುತ್ತಿಲ್ಲ. ಪ್ರಿಪೈಡ್ ಮೀಟರ್ ಹಾಕಿದರೆ ರೈತರು ಎಲ್ಲಿ ಹೋಗಬೇಕು? ಕಾಯಿದೆಗಳ ಮೂಲಕ ಬಡವರನ್ನು, ಸಣ್ಣಪುಟ್ಟ ಉದ್ದಿಮೆಗಳನ್ನು, ಕೆಲಸಗಾರರನ್ನು ಸಂಕಷ್ಟಕ್ಕೆ ಸಿಲುಕಿಸುವುದು ವಿದ್ಯುತ್ ಕಾಯಿದೆಯ ದುರುದ್ಧೇಶ. 

  • ಬಡಗಲಪುರ ನಾಗೇಂದ್ರ, ರೈತ ಹೋರಾಟಗಾರರು

ವಿದ್ಯುತ್ ಮಸೂದೆ-2021 ವಾಪಸ್ ಪಡೆಯುವಂತೆ ಕಳೆದ 8 ತಿಂಗಳಿನಿಂದ 500ಕ್ಕೂ ಹೆಚ್ಚು ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ವಿದ್ಯುತ್ ಮಸೂದೆಯನ್ನು ಕೃಷಿ ಕಾನೂನುಗಳಿಂದ ಬೇರ್ಪಡಿಸಿ ನೋಡಲಾಗದು. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರನ್ನು ಕೃಷಿ ರಂಗದಿಂದ ಒಕ್ಕಲೆಬ್ಬಿಸುವ  ಕೃಷಿ ಕಾಯಿದೆಗಳಿಗೆ ಪೂರಕವಾಗಿಯೇ ಈ ವಿದ್ಯುತ್ ಕಾಯಿದೆ ಇದೆ. ನವ ಉದಾರೀಕರಣ ಆರ್ಥಿಕ ನೀತಿಗಳ ಪರವಾಗಿ ಪ್ರತಿಯೊಂದು ರಂಗದಲ್ಲಿ ಕಾರ್ಪೊರೇಟ್ ದೈತ್ಯರಿಗೆ ಅನುಕೂಲ ಮಾಡಲು ಕಾಯಿದೆಗಳು ರೂಪುಗೊಳ್ಳುತ್ತಿವೆ. ವಿದ್ಯುತ್ ರಂಗದಲ್ಲಿ 2003ರ ಕಾಯಿದೆಯ ಮುಂದುವರಿಕೆಯೇ ಈ 2021ರ ಕಾಯಿದೆ. ಯಾವ ದೇಶಕ್ಕಾದರೂ ಇವರು ವಿದ್ಯುತ್ ನೀಡಬಹುದು. ಪೂರೈಕೆ ಮತ್ತು ಬೇಡಿಕೆಯ ನಿಯಂತ್ರಣ ಸರಕಾರದ ಕೈ ತಪ್ಪಿದ್ದು ಖಾಸಗೀಕರಣದಿಂದ ಲಾಭಕೋರತನ ಬರುತ್ತದೆ. ವಿದ್ಯುತ್ ಖರೀದಿಗಳ ಹಗರಣಗಳನ್ನು ನಾವು ನೋಡಿದ್ದೇವೆ. ಹಾಗೆಯೇ ಪರಿಸರ ನಾಶವೂ ಹೆಚ್ಚಾಗುತ್ತದೆ. ವಿದ್ಯುತ್ ದರ ಏರಿಕೆಯ ಪ್ರಸ್ತಾಪ ಬಂದಾಗ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸುವ ವ್ಯವಸ್ಥೆ ಇತ್ತು ಅದು ರದ್ದಾಗುತ್ತದೆ. ಕೃಷಿಕರು, ಸಣ್ಣಪುಟ್ಟ ಕೈಗಾರಿಕೆಗಳ ಅಹವಾಲುಗಳಿಗೂ ಅವಕಾಶ ಇರುವುದಿಲ್ಲ. ಸಬ್ಸಿಡಿ ಕೂಡ ಇರುವುದಿಲ್ಲ.

ಚಿಲ್ಲರೆ ವಹಿವಾಟಿನ ಮೇಲೆ ನಿಯಂತ್ರಣ ಸಾಧಿಸಿದ ರೀತಿಯಲ್ಲಿಯೇ ಇಲ್ಲಿಯೂ. ಎಲೆಕ್ಟ್ರಿಕ್ ಮೋಟಾರುಗಳು ಬರುವುದರಿಂದ ರಸ್ತೆಗಳಲ್ಲಿ ಅವುಗಳ ಚಾರ್ಜಿಂಗ್ ಪಾಯಿಂಟ್ ನಿರ್ಮಿಸುವುದರಿಂದ ಆಟೊಮೊಬೈಲ್ ಇಂಡಸ್ಟ್ರಿಗಳ ಸ್ವಾರ್ಥವಿದೆ.

  • ಟಿ.ಯಶವಂತ, ಮುಖಂಡರು, ವಿದ್ಯಾರ್ಥಿ ಸಂಘಟನೆ

ಕಾರ್ಪೋರೇಟ್ ಶಕ್ತಿಗಳ ಪರವಾಗಿ ಹೇಗೆ ಉದಾರೀಕರಣವನ್ನು ತಿರುಚುವ ಹುನ್ನಾರ ಅಡಗಿದೆ ಎಂಬುದನ್ನು ಅರಿಯಲು ಈ ವಿದ್ಯುತ್ ಕಾಯಿದೆಯನ್ನು ಕೃಷಿ ಕಾಯಿದೆಗಳೊಂದಿಗೆ ಸೇರಿಸಿ ನೋಡಬೇಕಾಗುತ್ತದೆ. ಸರಕಾರದ್ದೇ ಹೇಳಿಕೆಗಳನ್ನು ಆಧರಿಸಿಯೇ ಈ ಕಾಯಿದೆಗಳು ಹೇಗೆ ರೈತ ವಿರೋಧಿ ಎಂಬುದನ್ನು ಹೇಳಬಹುದು. ಖಾಸಗಿಯವರು ಯಾವುದೇ ಸಬ್ಸಿಡಿ ನೀಡದೇ ಖರ್ಚಾದ ವಿದ್ಯುತ್ತಿಗೆ ಪೂರ್ಣ ಪ್ರಮಾಣದ ದರ ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ. ರೈತರ ಪಂಪಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ನಿಗದಿಪಡಿಸಿದ ದರದಂತೆ ಪೂರ್ಣ ಪ್ರಮಾಣದ ಬಿಲ್ ಕಟ್ಟಬೇಕಾಗುತ್ತದೆ. ಎಲ್ಲ ವಿದ್ಯುತ್ತನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದು ಅವರ ಉದ್ಧೇಶವಾಗಿದೆ. ನಿರ್ದಿಷ್ಟ ಭೂಮಿಗೆ ಏಕರೂಪದ ಸಬ್ಸಿಡಿ ಅವರ ಯೋಜನೆ. ರೈತ ಕಾರ್ಪೋರೇಟ್ ಶಕ್ತಿಗಳ ಕೈ ಕೆಳಗೆ ದುಡಿಯುವ ಪರಿಸ್ಥಿತಿ ಎದುರಾಗುತ್ತದೆ.

  • ರಾಜಾರಾಮ ತಲ್ಲೂರ್, ಚಿಂತಕರು, ಹಿರಿಯ ಪತ್ರಕರ್ತರು

ವಿದ್ಯುತ್ ವಿತರಣೆ ಜಾಲದಲ್ಲಿ ಕೆಲಸ ಮಾಡುತ್ತಿರುವ 60 ಸಾವಿರ ಕಾರ್ಮಿಕರು, 40 ಸಾವಿರ ಪಿಂಚಣಿ ಪಡೆಯುವವರಿದ್ದೀವಿ. ಆದರೆ ಸಣ್ಣಪುಟ್ಟ ಉದ್ದಿಮೆದಾರರು, ಜನ ಬೆಂಬಲದ ಹೊರತಾಗಿ ನಾವು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹಿಂದಿನಂತೆ ಈಗ ವಿದ್ಯುತ್ ಕಳುವು ಇಲ್ಲ. ಭಾರತದಲ್ಲಿ ಒಂದು ಸಾವಿರ ಗ್ರಾಹಕರಿಗೆ 10 ಜನ ಕೆಲಸ ಮಾಡಬೇಕು ಎಂಬುದು ನಿಯಮ. ಆದರೆ 2.5 ಕೋಟಿ ಕರ್ನಾಟಕದ ಗ್ರಾಹಕರಿಗೆ ಕೇವಲ 50 ಸಾವಿರ ಕೆಲಸಗಾರರು ಇದ್ದೀವಿ. 1.50 ಲಕ್ಷ ಜನ ಕೆಲಸಗಾರರು ಇರಬೇಕಾಗಿತ್ತು. ವಿದ್ಯುತ್ ಕಳುವು, ಹೆಚ್ಚು ಸಿಬ್ಬಂದಿ ಎಂದು ನಷ್ಟವಾಗುತ್ತಿಲ್ಲ. ದಿನಕ್ಕೊಬ್ಬ ನೌಕರ ವಿದ್ಯುತ್ ಇಲಾಖೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾನೆ. 1898ರಿಂದ ಕರ್ನಾಟಕದಲ್ಲಿ ಇಲಾಖೆ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದೆ.  ನೂರಾರು ಜನ ಪ್ರಾಣ ಕಳೆದುಕೊಂಡಿದ್ದೀವಿ. ಸೇವೆ ಸಲ್ಲಿಸಿದ್ದೀವಿ. ಸ್ಕೀಮುಗಳಿಂದ ಮತ್ತು ಖರೀದಿಯಲ್ಲಿನ ಹಗರಣಗಳಿಂದ ನಷ್ಟವಾಗುತ್ತಿದೆ.

  • ಮಹಮ್ಮದ ಸಮೀವುಲ್ಲಾ, ವಿದ್ಯುತ್ ಕಾರ್ಮಿಕರ ಸಂಘಟನೆಯ ನಾಯಕ

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು