October 1, 2023 7:11 am

ಕೋರೆಗಾಂವ್ ಘಟನೆಯಿಂದ ಕಲಿಯಬೇಕಾದ ಪಾಠ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು – ಡಾ. ಬಿ.ಆರ್. ಅಂಬೇಡ್ಕರ್

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು 1600ರಲ್ಲಿ ಈಸ್ಟ್ ಇಂಡಿಯಾ ಕಂಪನಿಯನ್ನು ಪ್ರಾರಂಭಿಸಿದರು. ಸುಮಾರು 150 ವರ್ಷಗಳ ಕಾಲ ವ್ಯಾಪಾರಕ್ಕೆ ಗಮನಹರಿಸಿದ ಕಂಪನಿ 1757ರ ಪ್ಲಾಸಿ ಕದನದ ನಂತರ ರಾಜ್ಯ ಕಟ್ಟುವ ಕೆಲಸಕ್ಕೆ ಮುಂದಾಯಿತು. ಇದರ ಭಾಗವಾಗಿ ಸಿಪಾಯಿ ಸೇನೆ ಕಟ್ಟುವ ಕೆಲಸ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಕಂಪನಿ ಸೈನ್ಯಕ್ಕೆ ಕೇವಲ ಅಸ್ಪೃಶ್ಯರೇ ಹೆಚ್ಚಾಗಿ ದೊರೆತಿದ್ದು ಸೋಜಿಗದ ಸಂಗತಿ. ಜಾತಿ ವ್ಯವಸ್ಥೆಯಲ್ಲಿ ಕ್ಷತ್ರಿಯರಿಗೆ ಸೀಮಿತವಾಗಿದ್ದ ಸೈನಿಕನ ಕಸುಬು ಅಸ್ಪೃಶ್ಯರಿಗೆ ಲಭಿಸಿತು. ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಲು ಅಸ್ಪಶ್ಯರ ಸೇನಾ ಬಲವೂ ಸಹ ಒಂದು ಪ್ರಮುಖ ಕಾರಣ.

18ನೇ ಶತಮಾನದಲ್ಲಿ ಮೊಘಲರ ಸಾರ್ವಭೌಮತೆಯನ್ನು ಮೊಘಲ್ ವೈಸ್‌ರಾಯ್‌ಗಳು ಕೊನೆಗಾಣಿಸಿದರು. ವೈಸ್‌ರಾಯ್‌ಗಳ ಅಧಿಕಾರವನ್ನು ಮರಾಠರು ಕೊನೆಗಾಣಿಸಿದರು. ಹೀಗೆ ಎಲ್ಲರೂ ಪರಸ್ಪರ ಸೆಣೆಸಾಟದಲ್ಲಿ ತೊಡಗಿದ್ದಾಗ ಬ್ರಿಟೀಷರು ನುಗ್ಗಿ ಇವರೆಲ್ಲರನ್ನು ದಮನ ಮಾಡಲು ಸಮರ್ಥರಾದರು. ಈ ಪ್ರಕ್ರಿಯೆಯಲ್ಲಿ ಪ್ಲಾಸಿ, ಪಾಣಿಪತ್, ಬಕ್ಸರ್, ಆಂಗ್ಲೋ-ಮೈಸೂರು ಮತ್ತು ಆಂಗ್ಲೋ-ಮರಾಠ ಯುದ್ಧಗಳು ನಿರ್ಣಾಯಕವಾಗಿದ್ದವು. ಈ ಯುದ್ಧಗಳು ಬ್ರಿಟಿಷರನ್ನು ಭಾರತದ ರಾಜಕೀಯ ರಂಗದ ಅತ್ಯಂತ ಮಹತ್ತರ ಶಕ್ತಿಯನ್ನಾಗಿ ಪರಿವರ್ತಿಸಿದವು.

ಮರಾಠದ ಮೇಲ್ಪಾತಿಯ ಪೇಶ್ವೆಗಳು ಕೆಳಜಾತಿಯ ಮಹಾರ್ (ದಲಿತ) ರನ್ನು ಅಮಾನವೀಯವಾಗಿ ನಡೆಸಿಕೊಂಡರು. ಮಹಾ‌ ಜನ ನಡೆಯುವಾಗ ತಮ್ಮ ಕೊರಳಿಗೆ ಮಣ್ಣಿನ ಗಡಿಗೆಯನ್ನು ನೇತುಹಾಕಿಕೊಂಡು ನಡೆದಾಡಬೇಕಿತ್ತು. ಈ ಮಡಿಕೆಯಲ್ಲೇ ಉಗುಳಬೇಕು. ಜೊತೆಗೆ ತಾವು ನಡೆಯುವಾಗ ಹೆಜ್ಜೆ ಗುರುತನ್ನು ಅಳಿಸಿಹಾಕಲು ಸೊಂಟಕ್ಕೊಂದು ಪೊರಕೆಯನ್ನು ಕಟ್ಟಿಕೊಳ್ಳಬೇಕಿತ್ತು. ಈ ರೀತಿಯಾಗಿ ಮಹಾರ್ ಜಾತಿಯ ಜನ ಶೋಷಣೆ, ಹಿಂಸೆ ಮತ್ತು ಅಪಮಾನವನ್ನು ಅನುಭವಿಸಿದರು. ಪೇಶ್ವೆ ರಾಜರು ಮಹಾರ್ ಸೈನಿಕರನ್ನು ತಮ್ಮ ಕಾಲಿನ ಧೂಳಿಗೆ ಸಮ, ಅವರು ನೀಚರು ಮತ್ತು ನೀಚರಾಗಿ ಮುಂದುವರಿಯಬೇಕೆಂದು ಅವಮಾನಿಸಿದರು. ಪೇಶ್ವಗಳ ಈ ವರ್ತನೆ ಮಹಾರ್ ಸೈನಿಕರಲ್ಲಿ ಕೋಪ, ನೋವು, ಕ್ರೋಧ ಕುದಿಯುವಂತೆ ಮಾಡಿ ತಮ್ಮ ಸೇಡನ್ನು ತೀರಿಸಿಕೊಳ್ಳಲು ಕಾಯುತ್ತಿದ್ದರು.

ಬ್ರಿಟಿಷರು, ಮರಾಠರನ್ನು ಸೋಲಿಸಲು ಮೂರು ಯುದ್ಧಗಳನ್ನು ಮಾಡಬೇಕಾಯಿತು. ಕೊನೆಯ ಮತ್ತು ಮೂರನೇ ಆಂಗ್ಲೋ-ಮರಾಠಾ ಯುದ್ಧ 1817 ಮತ್ತು 1818ರಲ್ಲಿ ನಡೆಯಿತು. ಇದರ ಒಂದು ಭಾಗವೇ 1818 ಜನವರಿ 1 ರಂದು ನಡೆದ ಕೋರೆಗಾಂವ್ ಯುದ್ಧ. ಈ ಯುದ್ಧದಲ್ಲಿ ಬ್ರಿಟಿಷರ 800 ಸೈನಿಕರು ಪೇಶ್ವೆಗಳ 28 ಸಾವಿರ ಸೈನಿಕರನ್ನು ಸೋಲಿಸಿದರು. ಇದಕ್ಕೆ ಪ್ರಮುಖ ಕಾರಣ ಬ್ರಿಟಿಷರ ಸೈನ್ಯದಲ್ಲಿದ್ದ 500 ಜನ ಮಹಾರ್ ಸೈನಿಕರು. ಕೆಚ್ಚೆದೆಯಿಂದ ವೀರಾವೇಶವಾಗಿ

ರಣರಂಗದಲ್ಲಿ ಕಾದಾಡಿ 22 ಸೈನಿಕರು ಪ್ರಾಣವನ್ನು ತ್ಯಾಗ ಮಾಡಿದರು. ವಿಜಯದ ಸವಿನೆನಪಿಗಾಗಿ ಕೋರೆಗಾಂವ್‌ನಲ್ಲಿ ಬ್ರಿಟೀಷರು ವಿಜಯ ಸ್ತಂಭದ ಸ್ಮಾರಕವನ್ನು ನಿರ್ಮಿಸಿದರು.

ಭಾರತ ದೇಶದ ಇತಿಹಾಸದಲ್ಲಿ ಕಳೆದು ಹೋಗಿದ್ದ ಕೋರೆಗಾಂವ್ ಯುದ್ಧದಲ್ಲಿ ಮಹಾ‌ರ್ ಸೈನಿಕರ ಧೈರ್ಯ, ಸಾಹಸ, ವೀರಾವೇಶ ಮತ್ತು ತ್ಯಾಗಗಳನ್ನು ಅಧ್ಯಯನ ಮಾಡಿ ಬೆಳಕಿಗೆ ತಂದವರು ಡಾ. ಬಿ.ಆರ್.ಅಂಬೇಡ್ಕರ್‌ವರು. 1927ರಲ್ಲಿ ಕೋರೆಗಾಂವ್‌ಗೆ ಭೇಟಿ ನೀಡಿ ತಮ್ಮ ನಮನವನ್ನು ಸಲ್ಲಿಸಿದರು. ಕೋರೆಗಾಂವ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸುವುದು ದಲಿತರ ಘನತೆಯ ವಿಷಯ ಎಂಬುದಾಗಿ ಕರೆ ನೀಡಿದರು. ಅಂದಿನಿಂದ ಪ್ರತಿ ವರ್ಷ ಜನವರಿ ಒಂದನೇ ತಾರೀಕಿನಂದು ಸಾವಿರಾರು ದಲಿತರು ಕೋರೆಗಾಂವ್‌ಗೆ ಭೇಟಿ ನೀಡುತ್ತಿದ್ದಾರೆ.

ಕೋರೆಗಾಂವ್‌ನ 200ನೇ ವರ್ಷಾಚರಣೆಯನ್ನು 2018 ಜನವರಿ 1ರಂದು ಆಚರಿಸಲಾಯಿತು. ಅಂದು ಲಕ್ಷಾಂತರ ಶೋಷಿತರು, ದಲಿತರು ಮತ್ತು ಪ್ರಗತಿಪರರು ಕೋರೆಗಾಂವ್‌ನಲ್ಲಿ ಸೇರಿದರು. ಇದನ್ನು ಸಹಿಸಲಾಗದ ಸಮಾಜಘಾತಕ ಶಕ್ತಿಗಳು ಹಿಂಸೆಯನ್ನು ಪ್ರಚೋದಿಸಿ, ಗಲಭೆಗಳನ್ನು ನಡೆಸಿ, ಸಾವು ನೋವುಗಳು ಸಂಭವಿಸಿ, ಗೋಲಿಬಾರ್ ಇತ್ಯಾದಿಗಳ ಬಳಕೆಯಿಂದ ಸೇರಿದ್ದ ಜನ ಸಮೂಹವನ್ನು ಚದುರಿಸಿದರು. ಹಲವರನ್ನು ಬಂಧಿಸಿ ಜೈಲಿಗೆ ಅಟ್ಟಿದರು. ಒಂದೂವರೆ ವರ್ಷದ ನಂತರ ಭಾಗವಹಿಸಿದ್ದ ಪ್ರಗತಿಪರರನ್ನು, ಚಿಂತಕರನ್ನು ಮತ್ತು ಸಾಹಿತಿಗಳನ್ನು ಬಂಧಿಸಿ ನಗರ ನಕ್ಸಲರೆಂದು ಹಣೆ ಪಟ್ಟಿ ಕಟ್ಟಿ ಜೈಲಿಗೆ ತಳ್ಳಿದರು. ಇನ್ನೂ ಕೆಲವರು ಜಾಮೀನು ಸಿಕ್ಕದೆ ಜೈಲಿನಲ್ಲೇ ಇದ್ದಾರೆ. ನ್ಯಾಯಾಲಯಗಳು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಒಂದು ನಂಬಿಕೆಯನ್ನೇ ಅಪರಾಧವೆಂದು ಪರಿಗಣಿಸಲಾಯಿತು.

2023 ಜನವರಿ ಒಂದನೇ ದಿನದಂದು 205ನೇ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಗಿದೆ. ಅದನ್ನು ಕೇವಲ ಸ್ಮರಣೆಗಷ್ಟೇ ಸೀಮಿತ ಗೊಳಿಸದೆ ನಾವು ಕಲಿಯಬೇಕಾದ ಪಾಠ ಏನು ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ ಮುಂದಿನ ಸರಿದಾರಿಯನ್ನು ಕಂಡುಕೊಳ್ಳಬೇಕಾಗಿದೆ.

ಕಲಿಯಬೇಕಾದ ಪಾಠ

1. ಭಾರತದ ಇತಿಹಾಸವು ಹೊರದೇಶದ ಆಕ್ರಮಣಕಾರರ ಮುಂದೆ ಶರಣಾಗುವ ಇತಿಹಾಸ. ಹೊರಗಿನವರ ಆಕ್ರಮಣವನ್ನು ತಡೆಯುವ ಸಾಮರ್ಥ್ಯ ಭಾರತೀಯರಿಗೆ ಇತ್ತು. ಆದರೆ ಜಾತಿ ವ್ಯವಸ್ಥೆಯಿಂದಾಗಿ ಕ್ಷತ್ರಿಯರು ಮಾತ್ರ ಯುದ್ಧ ಮಾಡುತ್ತಿದ್ದರು. ಕ್ಷತ್ರಿಯರು ಸೋತರೆ ಇಡೀ ದೇಶವೇ ಸೋತಂತೆ ನಿರ್ಧರಿಸಲಾಯಿತು. ಈ ಕಾರಣದಿಂದ ಭಾರತ ದೇಶ ಸುಮಾರು ಒಂದು ಸಾವಿರ ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ಒಳಪಟ್ಟಿತು. ದಲಿತರಿಗೆ ಮತ್ತು ಶೂದ್ರರಿಗೆ ಯುದ್ಧದಲ್ಲಿ ಭಾಗವಹಿಸುವ ಅವಕಾಶವನ್ನು ನೀಡಿದ್ದರೆ ವಿದೇಶಿ ಆಕ್ರಮಣವನ್ನು ಹಿಮ್ಮೆಟ್ಟಿಸಬಹುದಾಗಿತ್ತು.

2. ಭಾರತ ದೇಶದ ದಲಿತ ಮತ್ತು ಶೂದ್ರರಲ್ಲಿರುವ ಪ್ರತಿಭೆ, ಸಾಮರ್ಥ್ಯ ಮತ್ತು ತ್ಯಾಗ ಮನೋಭಾವವನ್ನು ಬಳಸಿಕೊಳ್ಳಲೇ ಇಲ್ಲ. ಇದನ್ನು ಗುರುತಿಸಿ ಬಳಸಿಕೊಂಡ ಬ್ರಿಟಿಷರು ಭಾರತವನ್ನು ಸುಮಾರು ಎರಡು ಶತಮಾನಗಳ ಕಾಲ ಆಳಿದರು.

3. ಕೋರೆಗಾಂವ್ ಕದನ ಕೇವಲ ಬ್ರಿಟಿಷರ ಮತ್ತು ಪೇಶ್ವೆಗಳ ನಡುವೆ ನಡೆದ ಕದನವಾಗದೇ ಅಸ್ಪೃಶ್ಯತೆ, ಶೋಷಣೆ, ಅಸಮಾನತೆ, ಅವಮಾನ, ಅಪಮಾನಗಳ ವಿರುದ್ಧ ನಡೆದ ಯುದ್ಧವಾಗಿತ್ತು.

4. ಕೋರೆಗಾಂವ್ ಕದನದ ಯೋಧರ ಧೈರ್ಯ, ಶೌರ್ಯ, ತ್ಯಾಗಗಳಿಂದ ಸ್ಫೂರ್ತಿ ಪಡೆದು ಶೂದ್ರರು, ದಲಿತರು ಮತ್ತು ಅಲ್ಪಸಂಖ್ಯಾತರು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಂಘಟಿಸಿ ತಮ್ಮ ಧ್ವನಿಯನ್ನು ಎತ್ತಬೇಕಾಗಿದೆ ಮತ್ತು ಐಕ್ಯ ಹೋರಾಟಗಳನ್ನು ಮುನ್ನಡೆಸಬೇಕಾಗಿದೆ.

5. 2018 ಜನವರಿ ಒಂದರಂದು ನಡೆದ ಕೋರೆಗಾಂವ್ ಶಾಂತಿಯುತ ಸಮಾರಂಭವನ್ನು. ಸಮಾಜ ಘಾತಕ ಶಕ್ತಿಗಳು ಶಾಂತಿ ಮಾಡುವುದರಲ್ಲಿ ಯಶಸ್ವಿಯಾಗಿರಬಹುದು. ಅಂದರೆ ಇಂದು ಕೋರೆಗಾಂವ್ ಆಚರಣೆಯನ್ನು ದೇಶದ ಮೂಲೆ ಮೂಲೆಗಳಲ್ಲಿ ಆಚರಿಸುತ್ತಿದ್ದಾರೆ. ಕೇವಲ ಕೋರೆಗಾಂವನಲ್ಲಿ ಇದ್ದ ವಿಜಯಸ್ತಂಭ ದೇಶದ ಮೂಲೆ ಮೂಲೆಯಲ್ಲಿ ಸ್ಥಾಪಿಸಲಾಗಿದೆ. ಈ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಿಲ್ಲ.

6. ಎಲ್ಲಿಯವರೆಗೆ ಜಾತಿ ಅಸಮಾನತೆ ಮುಂದುವರಿಯುತ್ತೋ ಅಲ್ಲಿಯವರೆಗೆ ಸಮಾನತೆಗಾಗಿ ನಿರಂತರ ಹಂಬಲವನ್ನು ಹೊಸಕಿ ಹಾಕಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಬೌದ್ಧಿಕ ಚಿಂತನೆಯ ಮೇಲೆ ದಾಳಿ ನಡೆಯುತ್ತದೋ ಅಲ್ಲಿಯವರೆಗೆ ಜ್ಞಾನ ಮತ್ತು ಸತ್ಯಕ್ಕಾಗಿ ಹುಡುಕಾಟ ನಡೆಯುತ್ತಿರುತ್ತದೆ. ಇತಿಹಾಸದ ಈ ಪಾಠವನ್ನು ತಿಳಿದು ನಾವು ನಮ್ಮ ಮುಂದಿನ ಹೆಜ್ಜೆಗಳನ್ನು ಇಡಬೇಕಾಗಿದೆ. ಸಂವಿಧಾನ ಜಾರಿಗೆ ಬಂದ ನಂತರ ಶೂದ್ರರ ಮತ್ತು ದಲಿತರ ಬದುಕಿನಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣಬಹುದು. ಸಂವಿಧಾನವನ್ನು ಓದಬೇಕು, ಅರ್ಥ ಮಾಡಿಕೊಳ್ಳಬೇಕು, ಮೂಲ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆಯವುದೇ ನಮ್ಮ ಮುಂದಿರುವ ಜವಾಬ್ದಾರಿ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು