ಭಾರತದಲ್ಲಿನ ಜನಾಂಗಗಳನ್ನು ಅಧ್ಯಯನ ಮಾಡಿದ ಭಾರತ ಮಾನವಶಾಸ್ತ್ರ ಇಲಾಖೆಯು ‘ಭಾರತದ ಜನತೆ’ ಎಂಬ ಪುಸ್ತಕ ಮಾಲೆಯಲ್ಲಿ ಭಾರತೀಯ ಸಮಾಜ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ವಿವರಿಸಿದೆ. ಸಾವಿರಾರು ವರ್ಷಗಳ ಹಿಂದೆ ಅಲೆಮಾರಿ ಮಾನವರು ಆಹಾರವನ್ನು ಹುಡುಕಿಕೊಂಡು ಭಾರತವನ್ನು ಪ್ರವೇಶಿಸಿದರು. ನಂತರದ ದಿನಗಳಲ್ಲಿ ಭಾರತದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಮತ್ತು ಜೀವನದಿಗಳನ್ನು ಹುಡುಕಿಕೊಂಡು ಹೊರಗಿನಿಂದ ಕೃಷಿಕರು ಬಂದರು. ನಾಗರೀಕತೆ ಬೆಳೆದಂತೆ ಬೇರೆ ಬೇರೆ ದೇಶಗಳಿಂದ ವ್ಯಾಪಾರಸ್ಥರು, ಪ್ರವಾಸಿಗರು, ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳು, ದಾಳಿಕೋರರು ಮತ್ತು ಆಕ್ರಮಣಕಾರರಾಗಿ ಹೊರಗಿನಿಂದ ಭಾರತಕ್ಕೆ ಪ್ರವೆಶಿಸಿದರು. ಈ ರೀತಿ ಬಂದವರು ಪ್ರೋಟೊ- ಅಸ್ಟಾಲಾಯ್ಡ್, ಪ್ಯಾಲಿಯೋ-ಮೆಡಿಟರೇನಿಯನ್, ಕಾಕಸಾಯಿಡ್, ನೀ್ರೋಯ್ ಡ್ ಮತ್ತು ಮಂಗೋಲಿಯಡ್ ಜನಾಂಗಕ್ಕೆ ಸೇರಿದವರಾಗಿದ್ದರು.
ಇವರು ಬೇರೆ ಬೇರೆ ದೇಶಗಳು, ಅಂದರೆ ಆರ್ಯರು, ಪರ್ಷಿಯ, ಗ್ರೀಕ್, ಅರಬ್ಬರು, ಟರ್ಕಿ, ಆಫ್ರಿಕಾ, ಮಂಗೋಲಿಯ, ಯುರೋಪ್ ಇತ್ಯಾದಿ ದೇಶಗಳಿಂದ ಬಂದರು. ಇವರು ಇಂಡೋ-ಆರ್ಯನ್, ಟಿಬೆಟೋ-ಬರ್ಮೀಸ್, ಇಂಡೋ ಯುರೋಪಿಯನ್, ದ್ರಾವಿಡ, ಆಸ್ಟೋ-ಏಷಿಯಾಟಿಕ್, ಅಂಡಮಾನಿಸ್ ಮತ್ತು ಇಂಡೋ-ಇರಾನಿಯನ್ನಂತಹ ವಿವಿಧ ಭಾಷಾ ಕುಟುಂಬಗಳಿಗೆ ಸೇರಿದವರು. ಹೀಗೆ ಬೇರೆ ಬೇರೆ ಕಾರಣಕ್ಕಾಗಿ, ಬೇರೆ ಬೇರೆ ಕಾಲಮಾನದಲ್ಲಿ ಬೇರೆ ಬೇರೆ ಜನಾಂಗೀಯ, ರಾಷ್ಟ್ರೀಯ ಹಾಗೂ ಭಾಷಾ ಕುಟುಂಬಗಳಿಗೆ ಸೇರಿದ ಜನ ಹೊರಗಿನಿಂದ ಭಾರತಕ್ಕೆ ಬಂದರು. ಹೊರಗಿನಿಂದ ಬಂದ ಬಹುಪಾಲು ಜನರು ತಮ್ಮ ಮೂಲ ದೇಶಗಳಿಗೆ ಹಿಂದಿರುಗದೆ ಭಾರತದಲ್ಲೇ ನೆಲೆಸಿದರು. ಸ್ಥಳೀಯರು ಮತ್ತು ಹೊರಗಿನಿಂದ ಬಂದವರು ಒಬ್ಬರಲ್ಲಿ ಮತ್ತೊಬ್ಬರು ಬೆರೆತು ಹೋದರು (intermingle). ಇದರ ಪರಿಣಾಮವಾಗಿ ಭಾರತ ದೇಶದಲ್ಲಿ ಸುಮಾರು 4,635 ಜಾತಿಗಳು, ಉಪಜಾತಿಗಳು ಇವೆ. ಇಂದು ಎಲ್ಲಿಯೂ ಯಾವುದೇ ಜನಾಂಗೀಯ ಅಥವಾ ರಾಷ್ಟ್ರೀಯತೆಯ ಮೂಲ ಲಕ್ಷಣಗಳು ಗೋಚರಿಸುವುದಿಲ್ಲ. ಬದಲಾಗಿ ಜನಾಂಗೀಯ ಸಮ್ಮಿಶ್ರಣಗಳನ್ನು ಇಡೀ ದೇಶದಲ್ಲಿ ಕಾಣಬಹುದು. ಈ ಚಾರಿತ್ರಿಕ ಸತ್ಯವನ್ನು ಮರೆತವರು ಅಂತರ್‌ಜಾತೀಯ ಮದುವೆಗಳನ್ನು ವಿರೋಧಿಸುತ್ತಾರೆ. ಮತ್ತು ಅಂತರ್‌ಧರ್ಮೀಯ ಮದುವೆಗಳನ್ನು ವಿರೋಧಿಸುತ್ತಾರೆ.
ನಾಗರೀಕತೆಯ ಪ್ರಾರಂಭದಲ್ಲಿ ಶುರುವಾದ ಅಂತರ್‌ಜಾತೀಯ ಮತ್ತು ಅಂತ ಧರ್ಮೀಯ ಮದುವೆಗಳು ಇಂದಿಗೂ ಮುಂದುವರೆದುಕೊಂಡು ಬರುತ್ತಿವೆ. ಇತಿಹಾಸದ ಉದ್ದಕ್ಕೂ ಅಲ್ಲಿ ಇಲ್ಲಿ ಸ್ವಲ್ಪ ಅಡೆತಡೆಗಳು ಬಂದರೂ ನಿಲ್ಲಿಸಲು ಸಾಧ್ಯವಾಗಿಲ್ಲ ಮತ್ತು ಸಾಧ್ಯವಾಗದೂ ಕೂಡ. ಕ್ರಿಸ್ತಪೂರ್ವ 300ರಲ್ಲಿ ಚಂದ್ರಗುಪ್ತ ಮೌರ್ಯ ಗ್ರೀಕ್ ದೇಶದ ರಾಜಕುಮಾರಿ ಹೆಲನಾಳನ್ನು ಮದುವೆಯಾದ, ಬಿಂದುಸಾರ ಪರ್ಪಿಯಯ ದೇಶದ ನೂರ್ ಎಂಬ ಮಹಿಳೆಯನ್ನು ಮದುವೆಯಾದ, ಮೊಘಲ್ ದೊರೆ ಅಕ್ಬರ್ ಹಿಂದು ಮಹಿಳೆಯರನ್ನು ಮದುವೆಯಾಗಿದ್ದ, ಬಿಜಾಪುರ ಸುಲ್ತಾನ ಆದಿಲ್ ಶಾ ಹಿಂದು ಮಹಿಳೆಯನ್ನು ಮದುವೆಯಾಗಿದ್ದ. ಹೀಗೆ ಇತಿಹಾಸದ ಉದ್ದಕ್ಕೂ ಅಂತರ್‌ಜಾತಿಯ ಮತ್ತು ಅಂತರ್‌ಧರ್ಮೀಯ ಮದುವೆಗಳನ್ನು ಕಾಣಬಹುದು.
ಸಮಕಾಲೀನ ಸಂದರ್ಭದಲ್ಲಿ ಇಂದಿರಗಾಂಧಿಯವರು ಫಿರೋಜ್ ಗಾಂಧಿಯವರನ್ನ(ಪಾರ್ಸಿ), ರಾಜೀವಗಾಂಧಿ ಸೋನಿಯಾ ಗಾಂಧಿಯವರನ್ನು(ಕ್ರಿಶ್ಚಿಯನ್), ಪ್ರಿಯಾಂಕ ಗಾಂಧಿ ರಾಬರ್ಟ್ ವಡೋದರವರನ್ನು(ಕ್ರಿಶ್ಚಿಯನ್) ಮದುವೆಯಾದರು. ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದ ಅಶೋಕ ಸಿಂಘಾಲ್ ಅವರ ಮಗಳು ಸೀಮಾ ಮದುವೆಯಾಗಿದ್ದು ಇಂದು ಕೇಂದ್ರ ಸಚಿವರಾಗಿರುವ ಮುಕ್ತಾರ್ ಅಬ್ಬಾಸ್ ನಖ್ವಿ (ಈಗ ಅವರು ಮಾಜಿ ಸಚಿವ) ಅವರನ್ನು, ಮುರಳಿ ಮನೋಹರ ಜೋಶಿಯವರ ಮಗಳು ರೇಣು ಮದುವೆಯಾಗಿರುವುದು ಶಹನವಾಝ್ ಹುಸೇನ್ ರವರನ್ನು, ಎಲ್.ಕೆ.ಅಡ್ವಾಣಿ ಮಗಳು ಪ್ರತಿಭಾ ಮದುವೆಯಾಗಿರುವುದು ಅಲ್ತಾಫ್ ಹುಸೈನ್‌ರವರನ್ನು, ಸುಬ್ರಹ್ಮಣ್ಯಸ್ವಾಮಿ ಅವರ ಮಗಳು ಮದುವೆಯಾಗಿರುವುದು ನದೀಮ್ ಹೈದರ್, ಭಾಳಾ ಠಾಕ್ರೆ ಮೊಮ್ಮಗಳು ಮದುವೆಯಾಗಿರುವುದು ಅಶ್ವಾಕ್ ಎಂಬುವರೊಂದಿಗೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ವಿಐಪಿಗಳು ಅಂತರಧರ್ಮೀಯ ಮದುವೆ ಮಾಡಿಕೊಂಡರೆ, ಲವ್ ಜಿಹಾದ್ ಆಗುವುದಿಲ್ಲ. ಆದರೆ ಮಧ್ಯಮ ಮತ್ತು ಕೆಳವರ್ಗದವರು ಅಂತರ ಧರ್ಮೀಯ ಮದುವೆ ಮಾಡಿಕೊಂಡರೆ ಲವ್ ಜಿಹಾದ್ ಮತ್ತು ಅಂತರ ಜಾತೀಯ ಮದುವೆಯಾದರೆ ಮರ್ಯಾದ ಹತ್ಯೆ ಎನ್ನುತ್ತಾರೆ?
ಶಿಕ್ಷಣ, ಆರ್ಥಿಕ ಸ್ವಾವಲಂಬನೆ, ನಗರೀಕರಣ, ಕಾನೂನಿನ ರಕ್ಷಣೆ ಸಂವಿಧಾನದ ಹಕ್ಕುಗಳು ಇತ್ಯಾದಿಗಳ ಪರಿಣಾಮವಾಗಿ ಅಂತ ಧರ್ಮೀಯ ಮತ್ತು ಅಂತರ್‌ಜಾತೀಯ ಮದುವೆಗಳು ಹೆಚ್ಚುತ್ತಿವೆ. ಕರ್ನಾಟಕದ ಗ್ರಾಮಾಂತರ ಪ್ರದೇಶದಲ್ಲಿ ವಾಸ ಮಾಡುವ ಹವ್ಯಕ ಬ್ರಾಹ್ಮಣ ಯುವಕರಿಗೆ ಅದೇ ಜಾತಿಯ ಹೆಣ್ಣು ಮಕ್ಕಳು ಸಿಗದೆ ಇತರೆ ಜಾತಿಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಬಹುದೆಂದು ಜಾತಿಯ ಗುರುಗಳು ಮತ್ತು ಮುಖಂಡರು ಸಮ್ಮತಿಸಿದ್ದಾರೆ. ಇಂತಹ ಬೆಳವಣಿಗೆಗಳನ್ನು ಯಾರೂ ತಡೆಯಲಿಕ್ಕೆ ಸಾಧ್ಯವಿಲ್ಲ. ಬದಲಾದ ಸನ್ನಿವೇಶಗಳಿಗೆ ತಕ್ಕಂತೆ ನಾವು ಸಹ ಬದಲಾಗಬೇಕಾಗುತ್ತೆ ಎಂಬ ಸತ್ಯವನ್ನು ಯಾರು ಮರೆಯಬಾರದು.
ವಿಶ್ವಸಂಸ್ಥೆ 1948 ಡಿಸೆಂಬರ್ 10 ರಂದು ಮಾನವ ಹಕ್ಕುಗಳನ್ನು ಘೋಷಿಸಿತು. ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಮಾನವ ಹಕ್ಕುಗಳೆಂದರೆ:
- ತನ್ನ ಖಾಸಗಿ ವಿಚಾರಗಳಲ್ಲಿ, ಕೌಟುಂಬಿಕ ವಿಚಾರಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಇತರರು ಅತಿಕ್ರಮಿಸದೆ ಇರುವ ಹಕ್ಕು
- ಮದುವೆ ಮಾಡಿಕೊಂಡು ಸಂಸಾರ ಮಾಡುವ ಹಕ್ಕು
- ಧಾರ್ಮಿಕ ಹಕ್ಕು
ತನಗೆ ಇಷ್ಟ ಬಂದವರನ್ನು ಪ್ರೀತಿಸಿ, ಮದುವೆಯಾಗಿ, ಸಂಸಾರ ಮಾಡುವುದು ಒಂದು ಮಾನವ ಹಕ್ಕು. ಇಲ್ಲಿ ಯಾವುದೇ ಧರ್ಮ, ಜಾತಿ, ವರ್ಗ ಇತ್ಯಾದಿಗಳಿಗೆ ಸ್ಥಾನವಿಲ್ಲ. ಪ್ರತಿಯೊಬ್ಬರಿಗೂ ಈ ಸ್ವಾತಂತ್ರ್ಯವಿದೆ. ಭಾರತ ವಿಶ್ವಸಂಸ್ಥೆಯ ರಾಷ್ಟ್ರಗಳಲ್ಲಿ ಒಂದು. ಮಾನವ ಹಕ್ಕುಗಳನ್ನು ಭಾರತದಲ್ಲಿ ಜಾರಿಗೊಳಿಸುತ್ತೇವೆಂದು ನಮ್ಮ ಸರ್ಕಾರ ಒಪ್ಪಿ ಸಹಿ ಮಾಡಿದೆ. ಇದರ ವಿರುದ್ಧ ಭಾರತ ಸರ್ಕಾರವಾಗಲೀ ಅಥವಾ ರಾಜ್ಯ ಸರ್ಕಾರಗಳಾಗಲೀ ಯಾವುದೇ ಕಾನೂನು ರಚಿಸಿ ಜಾರಿಗೊಳಿಸುವುದು ಅಸಿಂಧು.
ಭಾರತ ಸಂವಿಧಾನದ ಪೀಠಿಕೆಯಲ್ಲಿ ಸಮಸ್ತ ಪ್ರಜೆಗಳಿಗೆ ವಿಚಾರ ಮಾಡುವ, ಅಭಿವ್ಯಕ್ತಿಸುವ, ನಂಬುವ ಸ್ವಾತಂತ್ರ್ಯವನ್ನು ನೀಡಿದೆ. ಪ್ರತಿಯೊಬ್ಬ ಪ್ರಜೆಯ ವೈಯಕ್ತಿಕ ಘನತೆಯನ್ನು ಮನ್ನಿಸಿ ಅದರೊಂದಿಗೆ ದೇಶದ ಏಕತೆ ಮತ್ತು ಅಖಂಡತೆಯನ್ನು ಸಾಧಿಸಲು ಶ್ರಮಿಸಿ, ಭ್ರಾತೃತ್ವ ಭಾವನೆಯನ್ನು ಎಲ್ಲರ ಮಧ್ಯೆ ಪಸರಿಸುವುದು ಬಹುಮುಖ್ಯ ಉದ್ದೇಶವಾಗಿದೆ. ಪ್ರತಿಯೋರ್ವ ಪ್ರಜೆಯ ವ್ಯಕ್ತಿತ್ವ ಪರಿಪೂರ್ಣವಾಗಿ ಬೆಳೆದು ವಿಕಾಸವಾಗಲೆಂದು ಮೂಲಭೂತ ಹಕ್ಕುಗಳನ್ನು ಸಂವಿಧಾನವು ನೀಡಿದೆ. ಅವುಗಳೆಂದರೆ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರದ ಹಕ್ಕು, ಮೂಲಭೂತ ಹಕ್ಕುಗಳ ರೀತಿಯಲ್ಲಿಯೇ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ನಿಗದಿಪಡಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಕರ್ತವ್ಯಗಳೆಂದರೆ:
- ಧರ್ಮ, ಭಾಷೆ, ಪ್ರಾದೇಶಿಕತೆ, ಜಾತಿ ಮತ್ತು ಪಂಗಡಗಳ ಎಲ್ಲೆ ಮೀರಿ ಸಮಸ್ತ ಭಾರತೀಯರಲ್ಲಿ ಸಹೋದರ ಭಾವನೆಯನ್ನು ಬೆಳೆಸುವುದು ಹಾಗೂ ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸುವುದು.
- ಬಹುತ್ವದ ಸಂಸ್ಕೃತಿಯನ್ನು, ಪರಂಪರೆಯನ್ನು ಗೌರವಿಸುವುದು ಹಾಗೂ ರಕ್ಷಿಸುವುದು.
ಭಾರತ ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಹಕ್ಕು ಎಂದರೆ ತನಗೆ ಇಷ್ಟ ಬಂದ ಧರ್ಮವನ್ನು ನಂಬುವ, ಪಾಲಿಸುವ, ಪ್ರಚಾರ ಮಾಡುವ, ಮತಾಂತರಗೊಳ್ಳುವ, ಹೊಸದೊಂದು ಧರ್ಮವನ್ನು ಸ್ಥಾಪಿಸುವ ಅಥವಾ ನಾನು ಯಾವುದೇ ಧರ್ಮಕ್ಕೆ ಸೇರಿದವನಲ್ಲ ಎಂದು ಘೋಷಿಸಿಕೊಳ್ಳುವ ಹಕ್ಕನ್ನು ಒಳಗೊಂಡಿದೆ. ಆದರೆ ಯಾವುದೇ ಒತ್ತಡದಿಂದ ಅಥವಾ ಆಸೆ ಆಮಿಷದಿಂದ ಮತಾಂತರ ಮಾಡುವಂತಿಲ್ಲ. ಸ್ವಾತಂತ್ರ್ಯದ ಹಕ್ಕು ಎಂದರೆ ತನಗೆ ಇಷ್ಟ ಬಂದವರನ್ನು ಪ್ರೀತಿಸುವುದು, ಮದುವೆಯಾಗುವುದು, ಸಂಸಾರ ಮಾಡುವುದು, ಮಕ್ಕಳನ್ನು ಪಡೆಯುವುದು ಇತ್ಯಾದಿಗಳನ್ನು ಒಳಗೊಂಡಿದೆ. ಅಂತರ್‌ಧರ್ಮೀಯ ಅಥವಾ ಅಂತರ್ ಜಾತೀಯ ಮದುವೆಗಳನ್ನು ನಿರ್ಬಂಧಿಸುವ ಯಾವುದೇ ಕಾನೂನು ಸಂವಿಧಾನಬಾಹಿರ.
ಅಂತರ್ ಧರ್ಮೀಯ ಮದುವೆ, ನೋಂದಾವಣೆ, ಮಕ್ಕಳ ಸುಪರ್ದು, ಜೀವನಾಂಶ, ವಿಚ್ಛೇದನ ಇತ್ಯಾದಿಗಳ ನಿರ್ವಹಣೆಗೆ ಕೇಂದ್ರ ಸರ್ಕಾರ 1954ರಲ್ಲಿ ವಿಶೇಷ ಮದುವೆ ಕಾಯ್ದೆ (Special Marriage Act)ಯನ್ನು ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ಅಂತರಧರ್ಮೀಯ ಮದುವೆಯನ್ನು ನೋಂದಾವಣೆ ಮಾಡಲು 30 ದಿವಸಗಳ ಮುಂಚೆ ನೋಟೀಸನ್ನು ಕೊಡಬೇಕು. ಅದನ್ನು ನೋಟಿಸ್ ಬೋರ್ಡ್‌ನಲ್ಲಿ ಸಾರ್ವಜನಿಕರ ಅವಗಾಹನೆಗೆ ತರಬೇಕು. ಯಾವುದಾದರೂ ತಕರಾರು ಬಂದರೆ ಅದನ್ನು 30 ದಿವಸಗಳಲ್ಲಿ ವಿಲೆ ಮಾಡಬೇಕು. ಅದರ ಮೇಲೆ ಅಪೀಲು ಇತ್ಯಾದಿಗಳ ಕಾರಣದಿಂದ ವಿಳಂಬವಾಗುತ್ತಿದೆ, ಕೆಲವು ಸಲ ಪೋಷಕರಿಂದ, ಸಂಬಂಧಿಗಳಿಂದ, ಮೂಲಭೂತವಾದಿಗಳಿಂದ ಮದುವೆಗೆ ಅಡಚಣೆ, ಬೆದರಿಕೆ, ದೈಹಿಕ ದಾಳಿ, ಕೊಲೆ ಇತ್ಯಾದಿಗಳಲ್ಲಿ ಪರಿಣಮಿಸಿದೆ. ಈ ನ್ಯೂನತೆಗಳಿಂದ ಬಹಳಷ್ಟು ಜನ ಈ ಕಾಯ್ದೆಯಲ್ಲಿ ಮದುವೆ ನೋಂದಾಯಿಸಲು ಮುಂದಾಗುತ್ತಿಲ್ಲ. ಹೊಸದೊಂದು ಕಾನೂನು ತರುವ ಬದಲು ಹಳೆ ಕಾನೂನಿಗೆ ಸೂಕ್ತ ತಿದ್ದುಪಡಿಗಳನ್ನು ತಂದು ನ್ಯೂನತೆಗಳನ್ನು ಸರಿಪಡಿಸಬೇಕಾಗಿದೆ.
ಇತರೆ ಧರ್ಮದವರು ಹಿಂದು ಧರ್ಮಕ್ಕೆ ಮತಾಂತರಗೊಳ್ಳಲು ಅವಕಾಶವಿಲ್ಲ. ಒಂದು ವೇಳೆ ಮತಾಂತರಗೊಂಡರೂ ಹಿಂದೂ ಧರ್ಮದ ಯಾವ ಜಾತಿಯಲ್ಲಿ ಅವರನ್ನು ಸೇರಿಸಬೇಕೆಂಬ ಗೊಂದಲವಿದೆ. ಆದರೆ ಹಿಂದುಗಳು ಇತರೆ ಧರ್ಮಗಳಿಗೆ ಮತಾಂತರಗೊಳ್ಳಲು ಅವಕಾಶವಿದೆ. ಈ ಕಾರಣದಿಂದ ಅನೇಕ ಹಿಂದು ಯುವತಿಯರು ಮತ್ತು ಯುವಕರು ಇತರೆ ಧರ್ಮಗಳಿಗೆ ಮತಾಂತರಗೊಳ್ಳುತ್ತಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಆಗಸ್ಟ್ 2020 ರಂದು ಅಲಹಾಬಾದ್ ಹೈಕೋರ್ಟ್ ನ ಏಕಸದಸ್ಯ ಪೀಠ ಒಂದು ತೀರ್ಪಿನಲ್ಲಿ “ಮದುವೆಯನ್ನು ಗುರಿಯಾಗಿಸಿಕೊಂಡು ನಡೆಯುವ ಮತಾಂತರ ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದೆ. ಈ ತೀರ್ಪನ್ನು ಆಧರಿಸಿ ಉತ್ತರ ಪ್ರದೇಶರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿ ಹೊಸ ಕಾನೂನು ಜಾರಿಗೆ ತಂದಿದೆ. ಇಂತಹುದೇ ಕಾನೂನು ತರಲು ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯ ಸರ್ಕಾರಗಳು ಮುಂದಾಗಿವೆ. ಆದರೆ ಇದೇ ನವೆಂಬರ್ 2020 ರಂದು ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠ ಏಕಸದಸ್ಯ ಪೀಠದ ತೀರ್ಪು ಕಾನೂನು ಬಾಹಿರ ಎಂದು ರದ್ದುಗೊಳಿಸಿದೆ. ಮುಂದುವರೆದು “ಸ್ವಇಚ್ಛೆಯಿಂದ ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗುವ ಹಾಗೂ ತನಗೆ ಇಷ್ಟ ಬಂದವರನ್ನು ಮದುವೆಯಾಗುವ ಹಕ್ಕು ಪ್ರತಿಯೋರ್ವ ಪ್ರಾಪ್ತ ವಯಸ್ಕರಿಗೆ ಸಂವಿಧಾನ ನೀಡಿದೆ. ಈ ರೀತಿಯ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರ್ಕಾರಕ್ಕಾಗಲೀ ಅಥವಾ ಸಮಾಜಕ್ಕಾಗಲೀ ಇಲ್ಲ” ಎಂದು ಸ್ಪಷ್ಟಪಡಿಸಿದೆ. ಇಂತಹದೇ ತೀರ್ಪುಗಳನ್ನು ದೆಹಲಿ ಮತ್ತು ಕರ್ನಾಟಕ ಹೈಕೋರ್ಟ್‌ಗಳು ನೀಡಿವೆ. ಆದ್ದರಿಂದ ಮದುವೆಗಾಗಿ ನಡೆಯುವ ಮತಾಂತರ ಹಾಗೂ ಮದುವೆ ಎರಡನ್ನು ನಿಷೇಧಿಸುವ ಕಾನೂನುಗಳು ಪ್ರಜಾಪ್ರಭುತ್ವ ಸ್ವಾತಂತ್ರ್ಯ, ಜಾತ್ಯತೀತ, ಬಹುತ್ವ ಎಂಬ ಮೌಲ್ಯಗಳಿಗೆ ವಿರುದ್ಧವಾದವು.
ಈ ರೀತಿಯ ಕಾನೂನುಗಳನ್ನು ಮಹಿಳೆಯರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ತರಲಾಗುತ್ತಿದೆ ಎಂಬ ವಾದ ಸತ್ಯಕ್ಕೆ ದೂರವಾದದ್ದು ಮತ್ತು ಶುದ್ಧ ಸುಳ್ಳು. ಭ್ರೂಣ ಹತ್ಯೆ, ಮರ್ಯಾದ ಹತ್ಯೆ, ವರದಕ್ಷಿಣೆ ಹತ್ಯೆ, ಅತ್ಯಾಚಾರಕ್ಕೆ ಬಲಿಯಾಗಿ ಪ್ರತಿವರ್ಷ ಲಕ್ಷಾಂತರ ಮಹಿಳೆಯರು ಸಾಯುತ್ತಿದ್ದಾರೆ. ವೇಶ್ಯಾವಾಟಿಕೆ, ಬಾಲ್ಯ ವಿವಾಹಗಳು, ಅನಾರೋಗ್ಯ, ಅಪೌಷ್ಟಿಕತೆ, ಕೊಂಡು ತಂದ ಹೆಂಡತಿಯರು, ಬಾಡಿಗೆ ತಾಯಿ ಇತ್ಯಾದಿಯಾಗಿ ಕೋಟಿ ಕೋಟಿ ಮಹಿಳೆಯರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರಗಳು ಈ ಸಾವುಗಳನ್ನು ತಡೆದು ಸಂಕಷ್ಟಗಳನ್ನು ನಿವಾರಣೆ ಮಾಡಿ ಮಹಿಳೆಯರ ಹಿತವನ್ನು ಕಾಪಾಡಲಿ.
ಈ ದೇಶದಲ್ಲಿ ಇಂತಹ ಕಾನೂನುಗಳ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚು. ಖಂಡಿತವಾಗಿಯೂ ಉತ್ತರಪ್ರದೇಶ ರಾಜ್ಯ ಸರ್ಕಾರ ತಂದಿರುವ ಮತ್ತು ಇತರೆ ರಾಜ್ಯಗಳು ತರಲು ಮುಂದಾಗಿರುವ ಕಾನೂನುಗಳು ದುರ್ಬಳಕೆಯಾಗಿ ಮಹಿಳೆಯರ ಸ್ವಾತಂತ್ರವನ್ನು ಕಸಿದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇವು ಜನರ ಐಕ್ಯತೆಯನ್ನು ಮುರಿದು ದ್ವೇಷ, ಹಿಂಸೆ, ಅಸೂಯೆ ಅಪನಂಬಿಕೆಗಳನ್ನು ಹುಟ್ಟು ಹಾಕುತ್ತವೆ. ಜನರ ಗಮನವನ್ನು ಬದುಕಿನ ವಿಷಯಗಳಿಂದ ಭಾವನಾತ್ಮಕ ವಿಷಯಗಳ ಬಗ್ಗೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಕೂಡಿವೆ. ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೆ ಅಂತರ್ ಜಾತೀಯ ಮದುವೆಗಳಿಗೂ ಅಡ್ಡಿಪಡಿಸುತ್ತಾರೆ. ನಾವು ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು, ಯಾವಾಗ- ಹೇಗೆ ಮದುವೆಯಾಗಬೇಕು, ಎಷ್ಟು ಮಕ್ಕಳನ್ನು ಪಡೆಯಬೇಕೆಂಬ ವಿಷಯಗಳನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ತಟಸ್ಥರಾಗಿರಬಾರದು. ಬಾಯಿಗೆ ಹಾಕಿರುವ ಬೀಗವನ್ನು ಮುರಿದು ನಾವು ನಮ್ಮ ಧ್ವನಿಯನ್ನು ಎತ್ತಬೇಕು.