October 1, 2023 8:11 am

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೆಡಿಷನ್

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ದೀರ್ಘಕಾಲದ ಹೋರಾಟಗಳ ಮೂಲಕ ಜಗತ್ತಿನ ಜನರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹೋರಾಟ ಇವೆರೆಡೂ ಜೊತೆಜೊತೆಯಲ್ಲಿ ನಡೆದು ಬಂದಿದ್ದು ಗಮನಾರ್ಹ.

ದೇಶದ ಜನರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವುದು ಸ್ವಾತಂತ್ರ್ಯ ಹೋರಾಟದ ಗುರಿಗಳಲ್ಲಿ ಒಂದಾಗಿತ್ತು. ನಮ್ಮ ಸ್ವಾತಂತ್ರ್ಯ ಚಳುವಳಿಯ ಗುರಿಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮಗೆ ಒಂದು ಸಂವಿಧಾನದ ಅವಶ್ಯಕತೆ ಅನಿವಾರ್ಯವಾಯಿತು. ಸಂವಿಧಾನದ ರಚನಾಕಾರರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾತಾಂತ್ರಿಕ ವ್ಯವಸ್ಥೆಯ ತಳಹದಿ ಎಂಬ ಸ್ಪಷ್ಟ ಕಲ್ಪನೆ ಇತ್ತು. ಈ ಅಂಶವನ್ನು ನಮ್ಮ ಸಂವಿಧಾನದ ಅನುಚ್ಛೇದ-19(1) (ಎ)ರ ಅಡಿಯಲ್ಲಿ ಅಳವಡಿಸಲಾಗಿದೆ. ಈ ಹಕ್ಕು ತನ್ನಷ್ಟಕ್ಕೆ ಪೂರ್ಣವಾದದ್ದಲ್ಲ.

ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಲು ಈ ಹಕ್ಕಿನ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ. ದೇಶದ ಭದ್ರತೆ, ವಿದೇಶಗಳ ಜೊತೆಗಿನ ಬಾಂಧವ್ಯ, ಸುವ್ಯವಸ್ಥೆ ಮತ್ತು ನೈತಿಕತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಬಂಧಗಳನ್ನು ವಿಧಿಸಬಹುದು. ಅನುಚ್ಛೇದ 19ರಲ್ಲಿ ನೀಡಿರುವ ಮೂಲಭೂತ ಹಕ್ಕಾದ ವಾಕ್ ಸ್ವಾತಂತ್ರ್ಯವು ಭಿನ್ನಾಭಿಪ್ರಾಯವನ್ನು ಹೊಂದಿರುವ ಸ್ವಾತಂತ್ರ್ಯವನ್ನು ಒಳಗೊಂಡಿದೆ. ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಅಧಿಕಾರವನ್ನು ನಮ್ಮ ಸಂವಿಧಾನವು ಮಾನ್ಯಮಾಡುವುದಿಲ್ಲ. ಭಿನ್ನಾಭಿಪ್ರಾಯಗಳ ಬಗೆಗಿನ ಅಸಹನೆ ಪ್ರಜಾತಾಂತ್ರಿಕ ವ್ಯವಸ್ಥೆಗೆ ಅಪಾಯಕಾರಿ. ಈ ಹಕ್ಕಿಗೆ ಹಿಂದಿನ ಕಾಲದ ಕಟ್ಟಳೆಗಳಾಗಲಿ, ವರ್ತಮಾನದ ಕೋಳಗಳಾಗಲಿ ಇರಬಾರದು. ಫ್ರೆಂಚ್ ಚಿಂತಕ ವಾಲ್ಟೇರ್ ಹೇಳುವಂತೆ, “ನೀನು ಹೇಳುವ ಒಂದು ಮಾತನ್ನೂ ನಾನು ಒಪ್ಪುವುದಿಲ್ಲ. ಆದರೆ ಅಭಿಪ್ರಾಯವನ್ನು ವ್ಯಕ್ತಪಡಿಸುವ ನಿನ್ನ ಹಕ್ಕನ್ನು ನನ್ನ ಸಾವಿನವರೆಗೂ ನಾನು ಸಮರ್ಥಿಸುತ್ತೇನೆ” ಎಂಬ ಮಾತು ಗಮನಾರ್ಹ.

ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವ್ಯಕ್ತಿ ಸ್ವಾತಂತ್ರ್ಯವು ಮೊದಲನೆಯ ಹೆಜ್ಜೆ. ಹಾಗಾಗಿ ಯಾವ ಸಂಪ್ರದಾಯಗಳನ್ನು ವಿರೋಧಿಸಿದರೂ ಸರಿಯೇ! ವ್ಯಕ್ತಿಯು ಸತ್ಯಕ್ಕಾಗಿ ನಡೆಸುವ ಹುಡುಕಾಟದ ಸ್ವಾತಂತ್ರ್ಯ ಮೊಟಕುಗೊಳ್ಳಬಾರದು. ಎಲ್ಲ ಪ್ರಮುಖ ವಿಷಯಗಳ ಬಗ್ಗೆಯೂ ಮುಕ್ತ ಚರ್ಚೆ ನಡೆಯಬೇಕು. ಪ್ರಗತಿ ಸಾಧ್ಯವಾಗುವುದು ಪರಂಪರೆಯನ್ನು ಒಪ್ಪಿಕೊಳ್ಳುವುದರ ಮೂಲಕವಲ್ಲ; ಬದಲಾಗಿ ಜನರ ಅಭಿಪ್ರಾಯಗಳು ಬದಲಾಗುವಷ್ಟರ ಮಟ್ಟಿಗೆ ಹೊಸ ವಿಷಯಗಳನ್ನು, ವೈಜ್ಞಾನಿಕ ಚಿಂತನೆಯ ಆಧಾರದ ಮೇಲೆ ಮಂಡಿಸುವ ಮೂಲಕ, ವ್ಯಕ್ತಿಯ ಚಿಂತನಾಕ್ರಮ ವೃದ್ಧಿಗೊಳ್ಳಲು, ವೈಚಾರಿಕತೆ ಅರಳಲು, ಬೌದ್ಧಿಕ ಜಗತ್ತು ವಿಸ್ತಾರಗೊಳ್ಳಲು ಮತ್ತು ವ್ಯಕ್ತಿತ್ವ ಪರಿಪಕ್ವಗೊಳ್ಳಲು ಎಲ್ಲ ರೀತಿಯ ಅಭಿಪ್ರಾಯಗಳೂ ತಿಳಿದಿರಬೇಕು.

ಜ್ಞಾನ ಅಥವಾ ವಿವೇಕ ಆಕಾಶದಿಂದ ಉದುರುವುದಿಲ್ಲ. ಅವು ಸಿದ್ಧ ವಸ್ತುಗಳೂ ಅಲ್ಲ, ಇಂದಿನ ಅಗತ್ಯಕ್ಕೆ ತಕ್ಕಂತೆ ನಮ್ಮ ಅನುಭವದ ಜ್ಞಾನವನ್ನು ಹರಿತಗೊಳಿಸಿದಾಗ ಸಮಕಾಲೀನ ಸತ್ಯವು ಗೋಚರಿಸುತ್ತದೆ. ಮಾನವನ ಅನುಭವ ಜ್ಞಾನವನ್ನು ವಿಮರ್ಶೆಗೆ ಒಳಪಡಿಸಿದಾಗ ಪ್ರಗತಿಪರ ಚಿಂತನೆ ಎಂದು ಕರೆಯಲಾಗುವ ವೈಚಾರಿಕತೆಯು ಉಗಮವಾಗುವುದು. ಮಾನವನ ನಾಗರಿಕತೆ ಬೇಟೆಯಾಡುವ ಕಾಲದಿಂದ ಇಂದಿನ ಅತ್ಯಂತ ಆಧುನಿಕ, ವೈಜ್ಞಾನಿಕ ಯುಗವನ್ನು ಮುಟ್ಟಿರುವುದು ಈ ಪ್ರಕ್ರಿಯೆಯ ಮೂಲಕವೆ. ಆದರೆ ವಿಮರ್ಶೆಯ ಬಗ್ಗೆ, ನಾವು ಅತ್ಯಂತ ಜಾಗರೂಕರಾಗಿರಬೇಕಾಗಿರುತ್ತದೆ. ಅದು ಅನಾರೋಗ್ಯಕರ ಮತ್ತು ವಿನಾಶಕಾರಿಯಾಗಿರಬಾರದು, ವ್ಯಕ್ತಿಗಳನ್ನು ಅಥವಾ ಸಮುದಾಯಗಳನ್ನು ಆವಮಾನಿಸುವ, ಒಡೆಯುವ ಉದ್ದೇಶದ್ದಾಗಿರಬಾರದು. ಇಂದಿಗಿಂತಲೂ ಉತ್ತಮ ಸ್ಥಿತಿಗೆ ನಮ್ಮನ್ನು ಕೊಂಡೊಯ್ಯುವ, ಈಗಿನ ತಪ್ಪು ಗಳನ್ನು ಸರಿಪಡಿಸುವ ವಿಮರ್ಶೆಯಾಗಿರಬೇಕು. ಇಂಥ ಆರೋಗ್ಯಕರ ವಿಮರ್ಶೆಯನ್ನು ತಾಳ್ಮೆಯಿಂದ, ಸ್ವಾಗತಿಸಬೇಕಾದದ್ದು ಸಮಾಜದ ಕರ್ತವ್ಯ.

ಭಾರತದಲ್ಲಿ ಸತ್ಯಶೋಧನೆ ಮತ್ತು ಅಂಧಶ್ರದ್ಧೆಗೆ ಸವಾಲುಗಳನ್ನು ಒಡ್ಡಿದ ಮಹಾನ್ ಇತಿಹಾಸವೇ ಇದೆ. ಚಾರ್ವಾಕ, ಗೌತಮಬುದ್ಧ, ಬಸವೇಶ್ವರ, ಅಂಬೇಡ್ಕರ್, ಪಂಡಿತ್ ನೆಹರು, ಕುವೆಂಪು ಇನ್ನೂ ಅನೇಕ ಮಹನೀಯರು ತಮ್ಮ ಜೀವನ ಕಾಲದ ಸಾಂಪ್ರದಾಯಿಕ ಚಿಂತನೆಯಂದ ದೂರ ಸರಿದವರೇ. ಬ್ರಿಟಿಷರು ಭಾರತದಲ್ಲಿ ತಮ್ಮ ರಾಜ್ಯವನ್ನು ವಿಸ್ತರಿಸುತ್ತ ಹೋದ ಹಾಗೆ ಅವರ ವಿರುದ್ಧವಾದ ಹೋರಾಟಗಳೂ ನಡೆಯುತ್ತಾ ಹೋದವು.

1857ರ ಸಿಪಾಯಿ ದಂಗೆಯ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವು ಕೊನೆಗೊಂಡು ಭಾರತ ದೇಶವು ಇಂಗ್ಲೆಂಡಿನ ಮಹಾರಾಣಿಯವರ ನೇರ ಆಡಳಿತಕ್ಕೆ ಒಳಪಟ್ಟಿತು. 1858ರಲ್ಲಿ ಬ್ರಿಟಿಷ್ ಮಾದರಿಯ ನ್ಯಾಯಾಲಯಗಳ ಸ್ಥಾಪನಾ ಕಾರ್ಯವು ಪ್ರಾರಂಭವಾಯಿತು. ಈ ನ್ಯಾಯಾಲಯಗಳ ಮುಖಾಂತರ ಸಿವಿಲ್ ಮತ್ತು ಕ್ರಿಮಿನಲ್ ವಿಧಾನಾತ್ಮಕ ಕಾನೂನುಗಳನ್ನು ಜಾರಿಗೆ ತರಲಾಯಿತು. ಬ್ರಿಟಿಷರ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುತ್ತಿದ್ದ ಪತ್ರಿಕೆಗಳ ಮೇಲೆ ದಾಳಿ ಪ್ರಾರಂಭವಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬ್ರಿಟಿಷರು ಸುಮಾರು 15 ರೀತಿಯ ವಿವಿಧ ಕಾನೂನುಗಳನ್ನು ಜಾರಿಗೊಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಬಾಯಿ ಮುಚ್ಚಿಸಲು ಕ್ರಿಮಿನಲ್‌ ವಿಧಾನಾತ್ಮಕ ಕಾಯ್ದೆಗೆ ತಿದ್ದುಪಡಿ ತಂದು ಕಲಂ 124(ಎ) ಸೇರಿಸಿದರು. According to Sec. 124(A) of IPC, an individual can be charged with sedition only if his/her speech ‘attempts to bring into hatred or contempt, or excites or disaffection towards the government’, ಈ ಕಲಂನ್ನು ಬಳಸಿ ಬ್ರಿಟಿಷರು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಮೊಕದ್ದಮೆಗಳನ್ನು ಹೂಡಿದರು. ಅವರುಗಳ ಪೈಕಿ ಪ್ರಮುಖರೆಂದರೆ ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧಿ, ಅನಿಬೆಸೆಂಟ್, ವಿರೇಂದ್ರ ದತ್ ಮಜಮುದಾರ್ ಇತ್ಯಾದಿಯವರು.

ಸ್ವಾತಂತ್ರ್ಯ ಬಂದನಂತರ ನಮ್ಮ ಸರ್ಕಾರಗಳು ಇಂತಹ ಅಮಾನವೀಯ ಬರ್ಬರ ಮತ್ತು ದಮನಕಾರಿ ಕಾನೂನನ್ನು ಮುಂದುವರಿಸಿಕೊಂಡು ಬಂದಿದ್ದು ದುರದೃಷ್ಟಕರ. ನಮ್ಮ ಸರ್ಕಾರದ ಅತಿರೇಕಗಳನ್ನು ಪ್ರಶ್ನಿಸಲು ಪ್ರಯತ್ನಿಸಿದ ವ್ಯಕ್ತಿಗಳನ್ನು ಈ ಕಲಂನ್ನು ಬಳಸಿ ಬಂಧಿಸಿ, ಜೈಲಿಗೆ ಕಳಿಸಿ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ದೇಶದ ಗಮನವನ್ನು ಸೆಳೆದ ಪ್ರಕರಣಗಳೆಂದರೆ 2007ರಲ್ಲಿ ಬಿನಾಯಕ್‌ ಸೆನ್, 2010ರಲ್ಲಿ ಅರುಂಧತಿರಾಯ್, 2012ರಲ್ಲಿ ಅಸೀಮ್ ತ್ರಿವೇದಿ, 2015ರಲ್ಲಿ ತಮಿಳು ಕಲಾವಿದ ಕೋವನ್, 2018ರಲ್ಲಿ ಗುಜರಾತಿನ ಹಾರ್ದಿಕ್ ಪಟೇಲ್, ನಗರ ನಕ್ಸಲ್‌ವಾದಿಗಳೆಂದು ವಿಲ್ಸನ್, ಸುಧೀರ್ ದಾವಲೆ, ಸೋನಾ ಸೆನ್, ಮಹೇಶ ರಾವತ್, ಸುರೇಂದ್ರ ಗಾದಲಗ್, ವರವರರಾವ್‌ ಮೊದಲಾದವರನ್ನು ಬಂಧಿಸಲಾಗಿದೆ. ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಕನ್ನಯ ಕುಮಾರ್ ಮತ್ತು ಇತರರು, ಪೌರತ್ವ ಕಾಯಿದೆ ತಿದ್ದುಪಡಿಯ ವಿರುದ್ಧ ಪ್ರತಿಭಟಿಸಿದ ನೂರಾರು ಚಳುವಳಿಗಾರರ ವಿರುದ್ಧವು ಸಹ ದೇಶದ್ರೋಹದ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ಸಾಹಿತಿಗಳ, ಕಲಾವಿದರ, ಜನಪರ ನಾಯಕರ ವಿರುದ್ಧ ಬಳಸಲಾಗುತ್ತಿದೆ. ಸ್ವಾತಂತ್ರ್ಯದ ನಂತರ ಈ ಕಲಂನ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಿದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ದಮನಕಾರಿ ಕಲಂನ ಅಗತ್ಯ ಇದೆಯೇ?

ವಿಶ್ವದ ಇತರೆ ಪ್ರಜಾಪ್ರಭುತ್ವ ದೇಶಗಳಾದ ಇಂಗ್ಲೆಂಡ್, ಅಮೆರಿಕ, ನ್ಯೂಜಿಲೆಂಡ್ ದೇಶಗಳು ಇಂತಹ ಕಾನೂನನ್ನು ಕೊನೆಗಾಣಿಸಿವೆ. ಇಂತಹ ಕಾನೂನನ್ನು ಭಾರತವೂ ಸಹ ಕೊನೆಗಾಣಿಸಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು