April 20, 2024 10:18 am

ನ್ಯಾಯಾಂಗ ವಿಮರ್ಶೆ ನ್ಯಾಯಾಂಗ ನಿಂದನೆಯೇ?

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಭಾರತದ ಸರ್ವೋಚ್ಛ ನ್ಯಾಯಾಲಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಮರ್ಥವಾದ ವ್ಯಾಖ್ಯಾನ ಒದಗಿಸುವ ಮೂಲಕ ಭದ್ರವಾದ ಅಡಿಪಾಯವನ್ನು ಹಾಕಿಕೊಟ್ಟಿದೆ. ಕೆಲವು ಪ್ರಮುಖ ತೀರ್ಪುಗಳೆಂದರೆ:

1) ರಮೇಶ್‌ ಥಾಪರ್ vs ಮದ್ರಾಸ್ ಸರ್ಕಾರ – “ನಾಗರಿಕರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಹಕ್ಕು ಪತ್ರಿಕೆಗಳಿಗೆ ಮತ್ತು ಅವುಗಳ ಪ್ರಸರಣಕ್ಕೆ ಸಲ್ಲುತ್ತದೆ ಎಂದು ವ್ಯಾಖ್ಯಾನಿಸಿದೆ.

2) ಬ್ರಿಜ್ ಭೂಷಣ್ Vs ದೆಹಲಿ ಸರ್ಕಾರ ಪ್ರಕರಣದಲ್ಲಿ ಪತ್ರಿಕೆಯ ಪ್ರಕಾಶನದ ವಿರುದ್ಧ pre censorship ಹೇರಿದ್ದನ್ನು ತಳ್ಳಿಹಾಕಿತು.

3) ಸಕಾಲ ಪೇಪರ್ಸ್ VS ಭಾರತ ಸರ್ಕಾರ ಮೊಕದ್ದಮೆಯಲ್ಲಿ ಸರ್ಕಾರ ಯಾವುದೇ ನ್ಯೂಸ್ ಪೇಪರ್ ಪುಟಗಳ ಸಂಖ್ಯೆಯನ್ನು ನಿಯಂತ್ರಿಸುವುದು ಅಥವಾ ಅದರ ಪ್ರಸಾರಕ್ಕೆ ಅಡ್ಡಿಪಡಿಸುವುದಕ್ಕಾಗಿ ಯಾವುದೇ ಕಾಯ್ದೆ ಮಾಡಿದರೆ ಅದು ಅಸಂವಿಧಾನಿಕ ಎಂದು ತೀರ್ಪು ನೀಡಿತು.

4) ಕೇದಾರನಾಥ ಸಿಂಗ್ VS ಬಿಹಾರ ಸರ್ಕಾರ ಪ್ರಕರಣದಲ್ಲಿ ಸರ್ಕಾರದ ಕ್ರಮಗಳ ಬಗೆಗಿನ ಯಾವುದೇ ಟೀಕೆ ಟಿಪ್ಪಣಿ ಪ್ರತಿಕ್ರಿಯೆ ಎಷ್ಟೇ ಕಟುವಾದ ಪದಗಳನ್ನು ಹೊಂದಿರಲಿ ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಪರಿಧಿಯೊಳಗೇ ಬರುತ್ತದೆ ಎಂದು ಸ್ಪಷ್ಟೀಕರಿಸಿತು.

5) ಭಾರತೀಯ ವಿಮಾ ನಿಗಮ vs ಮನುಖಾಯ್ ಪ್ರಕರಣದಲ್ಲಿ “ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಯಾವುದೇ ಪ್ರಜಾತಂತ್ರ ಸಂಸ್ಥೆಯ ಜೀವನಾಡಿ ಇದ್ದಂತೆ, ಈ ಹಕ್ಕನ್ನು ಹತ್ತಿಕ್ಕುವ, ಬಗ್ಗು ಬಡಿಯುವ, ನಿಯಂತ್ರಿಸುವ ಯಾವುದೇ ಪ್ರಯತ್ನ ಪ್ರಜಾತಂತ್ರ ವ್ಯವಸ್ಥೆಗೆ ಸಾವಿನ ಹೊಡೆತವಾಗುತ್ತದೆ ಮತ್ತು ಈ ಧೋರಣೆ ಮುಂದೆ ಸರ್ವಾಧಿಕಾರಿ ಸರ್ಕಾರ ಬರಲು ದಾರಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟಿದೆ.

6) IR ಕೊಲ್ಲೋ vs ತಮಿಳುನಾಡು ಸರ್ಕಾರ ಪ್ರಕರಣದಲ್ಲಿ ಪತ್ರಿಕಾ ಸ್ವಾತಂತ್ರ್ಯ ಸಂವಿಧಾನದ ಮೂಲಭೂತ ತತ್ವಗಳ ಒಂದು ಭಾಗವೆನ್ನುವುದನ್ನು ಎತ್ತಿ ಹಿಡಿದಿದೆ.

ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿರುವ ಭಾರತದ ನ್ಯಾಯಾಂಗ ಅದರಲ್ಲೂ ಸರ್ವೋಚ್ಛ  ನ್ಯಾಯಾಲಯವು ತಪ್ಪುಗಳನ್ನು ಮಾಡಿಲ್ಲ ಎಂದು ಹೇಳಲಾಗದು. ಉದಾಹರಣೆಗೆ ತಮಿಳುನಾಡು ಸರ್ಕಾರ ವೃತ್ತಿಪರ ಶಿಕ್ಷಣದಲ್ಲಿ ಹಿಂದುಳಿದ ಮತ್ತು ದಲಿತರಿಗೆ ನೀಡಿದ್ದ ಮೀಸಲಾತಿಯನ್ನು ಚಂಪಕಂ ದೊರೆರಾಜು ಪ್ರಕರಣದಲ್ಲಿ ರದ್ದುಗೊಳಿಸಿತು. ಪಂಜಾಬ್ ರಾಜ್ಯ ಸರ್ಕಾರ ತಂದಿದ್ದ ಭೂಮಿತಿ ಶಾಸನವನ್ನು ಗೋಲಂಕಾನಾಥ್ ಪ್ರಕರಣದಲ್ಲಿ ರದ್ದುಗೊಳಿಸಿತು. ಬ್ಯಾಂಕ್ ರಾಷ್ಟ್ರೀಕರಣವನ್ನು ಕೂಪರ್‌ ಪ್ರಕರಣದಲ್ಲಿ ರದ್ದುಗೊಳಿಸಿತು. ಎ.ಕೆ. ಗೋಪಾಲನ್ ಪ್ರಕರಣದಲ್ಲಿ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯಲಿಲ್ಲ. ಮಿನರ್ವಾ ಮಿಲ್ಸ್ ಪ್ರಕರಣದಲ್ಲಿ ಸರ್ಕಾರದ ಸಾಮಾಜಿಕ ಹಾಗೂ ಆರ್ಥಿಕ ನೀತಿಯನ್ನು ಸಂವಿಧಾನದ ಮೂಲ ತತ್ತ್ವಗಳೆಂದು ಘೋಷಿಸಲು ಹಿಂದಕ್ಕೆ ಸರಿಯಿತು. ಶಿವಕಾಂತ ಶುಕ್ಲ ಪ್ರಕರಣದಲ್ಲಿ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿತು.

ಹೀಗೆ ಭಾರತದ ನ್ಯಾಯಾಂಗ ಈ ಹಿಂದೆ ತಪ್ಪು ಮಾಡಿದೆ, ಇಂದು ತಪ್ಪು ಮಾಡುತ್ತಿದೆ, ಮುಂದೆಯೂ ಸಹ ತಪ್ಪು ಮಾಡುವುದಿಲ್ಲ ಎಂದು ಹೇಳಲಾಗದು. ಆದರೆ ಭಾರತದ ನ್ಯಾಯಾಂಗ ಮಾಡಿರುವ ತಪ್ಪುಗಳ ಅರಿವಾದಾಗ ತಪ್ಪನ್ನು ಸರಿತಿದ್ದುಕೊಂಡು ಮುನ್ನಡೆಯುವ ಪ್ರಬುದ್ಧತೆಯನ್ನು ತೋರಿದೆ. ಇದಕ್ಕೆ ಸಾಕ್ಷಿಯೆಂದರೆ ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಇ.ಎಂ.ಎಸ್. ನಂಬೂದ್ರಿ ಪಾಡ್‌ರವರನ್ನು ನ್ಯಾಯಾಂಗ ನಿಂದನೆಗೆ ದಂಡ ವಿಧಿಸಿತು. ಹಲವು ವರ್ಷಗಳ ನಂತರ ಅಂದಿನ ಕೇಂದ್ರ ಸರ್ಕಾರದ ಕಾನೂನು ಸಚಿವರಾದ ದಿವಂಗತ ಶಿವಶಂಕರ್‌ರವರು ಅಂತಹದೆ ಹೇಳಿಕೆಯನ್ನು ನೀಡಿದಾಗ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ತೀರ್ಪು ನೀಡಿತು.

ಈ ಹಿನ್ನೆಲೆಯಲ್ಲಿ ಪ್ರಶಾಂತ್ ಭೂಷಣ್‌ರವರ ಎರಡು ಟ್ವೀಟ್‌ಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗುತ್ತದೆಯೇ ಎಂಬುದನ್ನು ನೋಡಬೇಕಾಗಿದೆ. ಈ ಟ್ವೀಟ್‌ಗಳು ಈ ರೀತಿ ಇವೆ :

“ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳ ಬಗ್ಗೆ ಬರೆಯುವಾಗ, ಹೇಗೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸದೆಯೂ ಪ್ರಜಾತಂತ್ರವನ್ನು ನಾಶ ಮಾಡಲಾಯಿತು ಎಂದು ದಾಖಲಿಸಿದಾಗ ಈ ವಿಷಯದಲ್ಲಿ ಸುಪ್ರೀಂಕೋರ್ಟಿನ ಹಿಂದಿನ ನಾಲ್ಕು ಮುಖ್ಯ ನ್ಯಾಯಾಧೀಶರ ಪಾತ್ರವನ್ನು ಗುರುತಿಸುತ್ತಾರೆ”.

ಎರಡನೆಯ ಟ್ವೀಟ್ ಇಂದಿನ ಮುಖ್ಯ ನ್ಯಾಯಮೂರ್ತಿಯವರು ಒಂದು ದುಬಾರಿ ಮೋಟಾರ್ ಸೈಕಲ್ ಮೇಲೆ ಕುಳಿತಿರುವ ಚಿತ್ರಕ್ಕೆ ಸಂಬಂಧಿಸಿದ್ದು.

ಈ ಎರಡು ಟ್ವೀಟ್‌ಗಳನ್ನು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಸರ್ವೋಚ್ಛ ನ್ಯಾಯಾಲಯ ಪ್ರಶಾಂತ್ ಭೂಷಣ್‌ರವರು ಅಪರಾಧಿಯೆಂದು ತೀರ್ಮಾನಿಸಿದೆ. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಈ ಕೆಳಗಿನ ನಾಲ್ಕು ಪ್ರಮುಖ ಕಾರಣಗಳನ್ನು ನೀಡಿದೆ :

1. ಭಾರತ ದೇಶದ ಘನತೆಗೆ ಧಕ್ಕೆಯಾಗಿದೆ.

2. ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು.

3. ನ್ಯಾಯ ವಿತರಣ ಪ್ರಕ್ರಿಯೆಗೆ ತಡೆ ಉಂಟು ಮಾಡಿದೆ.

4. ನ್ಯಾಯಾಂಗದ ಘನತೆಗೆ ಧಕ್ಕೆಯಾಗಿದೆ.

ನ್ಯಾಯಾಲಯವು ನೀಡಿರುವ ಮೊದಲ ಎರಡು ಕಾರಣಗಳು ಅಂದರೆ ದೇಶದ ಘನತೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂಥವು ಎಂಬುದು ಸತ್ಯವಾದರು ನ್ಯಾಯಾಂಗ ನಿಂದನೆಯ ವ್ಯಾಪ್ತಿಗೆ ಬರುವುದಿಲ್ಲ. ದಿನಬೆಳಗಾದರೆ ಈ ದೇಶದಲ್ಲಿ ಸಂವಿಧಾನ ವಿರೋಧಿ, ಅಪ್ರಜಾಪ್ರಭುತ್ವ ಮತ್ತು ದೇಶದ ಐಕ್ಯತೆಗೆ ಮಾರಕವಾದ ಹೇಳಿಕೆಗಳನ್ನು ಮಾತ್ರ ನೀಡುತ್ತಿಲ್ಲ ಕಾರ್ಯರೂಪಕ್ಕೂ ತರುತ್ತಿದ್ದಾರೆ. ನ್ಯಾಯಾಲಯ ಇಂತಹವರ ಬಗ್ಗೆ ಸ್ವಪ್ರೇರಣೆ ಮೊಕದ್ದಮೆಯನ್ನು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತದೆಯೇ?

ನ್ಯಾಯಾಲಯ ನೀಡಿರುವ ಕೊನೆಯ ಎರಡು ಕಾರಣಗಳು ಯಾವ ರೀತಿ ನ್ಯಾಯ ವಿತರಣೆಗೆ ಅಡ್ಡಿ ಉಂಟು ಮಾಡಿದೆಯೆಂಬುದನ್ನು ವಿವರಿಸಲಿಲ್ಲ. 2015ರಲ್ಲಿ ಸರ್ವೋಚ್ಛ ನ್ಯಾಯಾಲಯದ ನಾಲ್ಕು ಹಾಲಿ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯನ್ನು ನಡೆಸಿ ಅಂದಿನ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಹೇಳಿಕೆಯನ್ನು ನೀಡಿದರು. ಇವರ ವಿರುದ್ಧ ನ್ಯಾಯಾಲಯ ಯಾಕೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಿಲ್ಲ? 2019ರಲ್ಲಿ ಸರ್ವೋಚ್ಛ ನ್ಯಾಯಾಲಯದ ಮಹಿಳಾ ಸಿಬ್ಬಂದಿ ಅಂದಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅರ್ಜಿಯನ್ನು ನೀಡಿ ವಿಚಾರಣೆ ನಡೆಸಬೇಕೆಂದು ಕೋರಿದರು. ವಿಚಾರಣೆ ನಡೆಸಿ ಆರೋಪದಲ್ಲಿ ಸತ್ಯವಿಲ್ಲವೆಂದು ವರದಿಯನ್ನು ನೀಡಿದ ಸರ್ವೋಚ್ಛ ನ್ಯಾಯಾಲಯ ಆಕೆಯನ್ನು ಕೆಲಸಕ್ಕೆ ತೆಗೆದುಕೊಂಡಿರು. ಆದರೆ ಯಾಕೆ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಲಿಲ್ಲ? ಆಂಧ್ರ ಪದೇಶದ ಮುಖ್ಯಮಂತ್ರಿಗಳಾದ ಶ್ರೀ ಜಗನ್ ಮೋಹನ್ ರೆಡ್ಡಿಯವರು 2020 ಆಗಸ್ಟ್‌ ತಿಂಗಳಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಒಂದು ಪತ್ರ ಬರೆದು ಸರ್ವೋಚ್ಛ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳು ಮತ್ತು ಆಂಧ್ರ ಪ್ರದೇಶದ ಹೈಕೋರ್ಟಿನ ಐದು ಜನ ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು. ಆಂತರಿಕ ತನಿಖಾ ಸಮಿತಿ ವಿಚಾರಣೆ ನಡೆಸಿ ಆರೋಪಗಳಲ್ಲಿ ಹುರುಳಿಲ್ಲವೆಂದು ಹೇಳಿ ಇತ್ಯರ್ಥಗೊಳಿಸಲಾಯಿತು. ಆದರೆ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಮೇಲೆ ಯಾಕೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲಿಲ್ಲ? ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ನ್ಯಾಯಾಲಯ ತನ್ನ ಪ್ರಬುದ್ಧತೆಯನ್ನು ಪ್ರದರ್ಶಿಸಿ ಆಗಿರುವ ತಪ್ಪುಗಳನ್ನು ಸರಿ ತಿದ್ದಿಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿಯವರು 1986ರಲ್ಲಿ ಬಿಜೋ ಎಮಾನ್ಯೂಯಲ್ ಎಂಬ ಪ್ರಕರಣದಲ್ಲಿ ಈ ರೀತಿ ಹೇಳಿದ್ದಾರೆ:

“ನಮ್ಮ ಪರಂಪರೆ ಸಹನೆಯನ್ನು ಬೋಧಿಸುತ್ತದೆ. ನಮ್ಮತತ್ವ ಸಹನೆಯನ್ನು ಬೋಧಿಸುತ್ತದೆ. ನಮ್ಮ ಸಂವಿಧಾನವು ಸಹನೆಯನ್ನು ಆಚರಣೆಗೆ ತರಬೇಕೆನ್ನುತ್ತದೆ. ನಾವು ಅದನ್ನು ದುರ್ಬಲಗೊಳಿಸುವುದು ಬೇಡ”.

“Our tradition teaches tolerance

Our philosophy preaches tolerance.

Our constitution practices tolerance.

Let us not dilute it.”

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ