ನಾಗರಿಕತೆಯ ಬೆಳವಣಿಗೆಯಲ್ಲಿ ಐದು ಪರಿಚ್ಛೇದಗಳನ್ನು ಕಾಣುತ್ತೇವೆ. ಅವುಗಳೆಂದರೆ:
1) ಪ್ರಾಚೀನ ಸಮುದಾಯಗಳು
2) ಗುಲಾಮ ಪದ್ಧತಿ
3) ಪಾಳೆಗಾರ ಪದ್ಧತಿ
4) ಪ್ರಜಾಪ್ರಭುತ್ವ ಪದ್ಧತಿ
5) ಸಮಾಜವಾದಿ ಪದ್ಧತಿ
ಪ್ರತಿಯೊಂದು ಪರಿಚ್ಛೇದದಲ್ಲಿ ಒಂದಲ್ಲ ಒಂದು ರೀತಿಯ ಆಡಳಿತವನ್ನು ಕಾಣುತ್ತೇವೆ. ಆಡಳಿತವೆಂದರೆ ಸಮಾಜಕ್ಕೆ ಬೇಕಾದ ಕಾನೂನುಗಳ ರಚನೆ, ಅವುಗಳ ಜಾರಿ ಮತ್ತು ಅವುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ವಿಧಿಸುವುದು. ಅನೇಕ ವರ್ಷಗಳ ಕಾಲ ಈ ಮೂರು ಕೆಲಸಗಳು ಒಬ್ಬರಲ್ಲೇ ಕೇಂದ್ರೀಕೃತವಾಗಿದ್ದವು. 18ನೇ ಶತಮಾನದ ಮಧ್ಯಭಾಗದಲ್ಲಿ ಇದನ್ನು ವಿಕೇಂದ್ರೀಕರಿಸಲಾಯಿತು. 1947ರಲ್ಲಿ ನಾವು ಸ್ವಾತಂತ್ರ್ಯ ಪಡೆದೆವು, 1950ರಲ್ಲಿ ಲಿಖಿತ ಸಂವಿಧಾನವನ್ನು ಒಪ್ಪಿ ನಾವು ಗಣರಾಜ್ಯವಾದೆವು.
ಭಾರತ ದೇಶದಲ್ಲಿ ಭಾರತದ ಜನರು ಸಾರ್ವಭೌಮರು, ನಮ್ಮ ಸಂವಿಧಾನ ಸರ್ವಶ್ರೇಷ್ಠ. ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸುವ ಕೆಲಸವನ್ನು ಶಾಸಕಾಂಗಕ್ಕೆ, ಕಾನೂನುಗಳನ್ನು ಜಾರಿಗೊಳಿಸುವ ಕೆಲಸವನ್ನು ಕಾರ್ಯಾಂಗಕ್ಕೆ ಮತ್ತು ಕಾನೂನುಗಳ, ವ್ಯಾಖ್ಯಾನ ಹಾಗೂ ಅವುಗಳ ಸಿಂಧುತ್ವ ಮತ್ತು ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ವಿಧಿಸುವ ಕೆಲಸವನ್ನು ನ್ಯಾಯಾಂಗಕ್ಕೆ ವಹಿಸಲಾಗಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಯೊಂದು ಅಂಗದ ಕೆಲಸ, ಅವುಗಳ ಜವಾಬ್ದಾರಿ ಮತ್ತು ಕಾರ್ಯವ್ಯಾಪ್ತಿಯನ್ನು ತಿಳಿಯಪಡಿಸಲಾಗಿದೆ. ಈ ಅಂಗಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸ್ವತಂತ್ರ ಮತ್ತು ಸಮಾನ.
ಆದರೆ ಕಳೆದ 12 ವರ್ಷಗಳ ಅನುಭವದಿಂದ ನಾವು ಕಂಡುಕೊಂಡ ಸತ್ಯವೆಂದರೆ ಒಂದು ಅಂಗ ಬೇರೆ ಅಂಗಗಳಗಿಂತ ಶ್ರೇಷ್ಠವೆಂದು, ಒಬ್ಬರು ಮತ್ತೊಬ್ಬರ ಮೇಲೆ ಹಿಡಿತವನ್ನು ಸಾಧಿಸಲು ಪ್ರಯತ್ನಿಸಿರುವುದು, ಒಬ್ಬರು ಇನ್ನೊಬ್ಬರ ಕಾರ್ಯಕ್ಷೇತ್ರದಲ್ಲಿ ಅತಿಕ್ರಮಣವನ್ನು ಮಾಡಿದ್ದು, ಈ ಕಸರತ್ತಿನಿಂದ ನಮ್ಮ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿದೆ.
1950ರಲ್ಲಿ ತಮಿಳುನಾಡು ಸರ್ಕಾರ ವೃತ್ತಿ ಶಿಕ್ಷಣದಲ್ಲಿ ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ಮತ್ತು ದಲಿತರಿಗೆ ನೀಡಿದ ಮೀಸಲಾತಿಯನ್ನು ಸರ್ವೋಚ್ಛ ನ್ಯಾಯಾಲಯವು ಚಂಪಕಂ ದೊರೈರಾಜ್ ಪ್ರಕರಣದಲ್ಲಿ ರದ್ದುಪಡಿಸಿತು. ಪಂಜಾಬ್ ಸರ್ಕಾರ ತಂದ ಭೂಮಿತಿ ಶಾಸನವನ್ನು ಗೋಲಕನಾಥ್ ಪ್ರಕರಣದಲ್ಲಿ ರದ್ದುಪಡಿಸಿತು. ಕೇರಳ ಸರ್ಕಾರ ತಂದ ಭೂ ಸುಧಾರಣೆ ಕಾಯ್ದೆಯನ್ನು ಕೇಶವಾನಂದ ಭಾರತಿ ಮಹಾಸ್ವಾಮಿಗಳು ಪ್ರಕರಣದಲ್ಲಿ ರದ್ದುಪಡಿಸಲಾಯಿತು. ಕೇಂದ್ರ ಸರ್ಕಾರ ತಂದ ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ಕೂಪರ್ ಕೇಸ್‌ನಲ್ಲಿ ರದ್ದುಪಡಿಸಲಾಯಿತು. ಈ ರೀತಿ ಶಾಸಕಾಂಗ ತಂದ ಜನಪರ ಮತ್ತು ಪ್ರಗತಿಪರ ಕಾಯ್ದೆಗಳನ್ನು ನ್ಯಾಯಾಂಗ ರದ್ದುಪಡಿಸಿತು. ಆದರೆ ಶಾಸಕಾಂಗ ಸಂವಿಧಾನಕ್ಕೆ ತಿದ್ದುಪಡಿ ತಂದರೂ ಈ ತೀರ್ಪುಗಳನ್ನು ಶೂನ್ಯೀಕರಿಸಿ ತಾವು ಮಾಡಿದ ಕಾನೂನುಗಳನ್ನು ಅನುಷ್ಠಾನಗೊಳಿಸಿತು.
ನಂತರದ ದಿನಗಳಲ್ಲಿ ಶಾಸಕಾಂಗ ಸಂವಿಧಾನದ 24ನೇ, 25ನೇ ಮತ್ತು 42ನೇ ತಿದ್ದುಪಡಿಗಳನ್ನು ತರುವುದರ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿತು. ನ್ಯಾಯಮೂರ್ತಿಗಳ ನೇಮಕಾತಿ, ವರ್ಗಾವಣೆ ಮತ್ತು ಬಡ್ತಿ ವಿಷಯಗಳಲ್ಲಿ ಕಾರ್ಯಾಂಗ ತನ್ನ ಮೇಲುಗೈಯ್ಯನ್ನು ಸಾಧಿಸಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಯಿತು. ಮೂರನೇ ಹಂತದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ವೈಫಲ್ಯದಿಂದ ನ್ಯಾಯಾಂಗದ ಕ್ರಿಯಾಶೀಲತೆಗೆ ದಾರಿಮಾಡಿಕೊಟ್ಟಿತು. ಪ್ರಾರಂಭದಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ ಒಳೆಯ ಕೆಲಸ ಮಾಡಿತು ಮತ್ತು ದೇಶದ ಜನ ಅದನ್ನು ಸ್ವಾಗತಿಸಿದರು. ಪ್ರಮುಖವಾದ ಕೆಲವು ತೀರ್ಪುಗಳೆಂದರೆ:
ಜೀವಿಸುವ ಹಕ್ಕು, ಮಾನವ ಘನತೆಯಿಂದ ಬದುಕುವ ಹಕ್ಕು, ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯ ಹಕ್ಕು, ಮಹಿಳೆಯರನ್ನು ಸಭ್ಯತೆ ಮತ್ತು ಸೂಕ್ತ ಘನತೆಯಿಂದ ನಡೆಸಿಕೊಳ್ಳುವ ಹಕ್ಕು, ತಿಳಿದುಕೊಳ್ಳುವ ಹಕ್ಕು, ಮಾಹಿತಿ ಹಕ್ಕು, ಶವವನ್ನು ಗೌರವಪೂರಕವಾಗಿ ಸಂಸ್ಕಾರ ಮಾಡುವ ಹಕ್ಕು, ವಿದೇಶಿ ಪ್ರವಾಸದ ಹಕ್ಕು, ಒಬ್ಬನು ಕುಟುಂಬ ಮತ್ತು ಅವನ ಬಳಗದ ಜೊತೆ ಬೆರೆಯುವ ಹಕ್ಕು, ಏಕಾಂತ ಬಂಧನದ ವಿರುದ್ಧದ ಹಕ್ಕು, ವಿಚಾರಣೆ ಇಲ್ಲದೆ ಸೆರೆಯಲ್ಲಿರುವುದರ ವಿರುದ್ಧದ ಹಕ್ಕು, ಬೇಡಿ ತೊಡಿಸುವುದರ ವಿರುದ್ಧದ ಹಕ್ಕು, ಅಭಿರಕ್ಷೆಯಲ್ಲಿರುವಾಗ ಹಿಂಸೆ ಮತ್ತು ಚಿತ್ರಹಿಂಸೆ ನೀಡುವುದರ ವಿರುದ್ಧದ ಹಕ್ಕು, ಜೀವಿಸುವ ಹಕ್ಕು, ಮೂಲ ಸೌಕರ್ಯಗಳ ಹಕ್ಕನ್ನು ಒಳಗೊಳ್ಳುತ್ತದೆ.
ಆಹಾರ, ಬಟ್ಟೆ ಮತ್ತು ವಸತಿಯ ಹಕ್ಕನ್ನು ಜೀವಿಸುವ ಹಕ್ಕು ಒಳಗೊಂಡಿರುತ್ತದೆ. ಉಚಿತ ಕಾನೂನು ನೆರವು ಹಕ್ಕು, ಜೀತ ಪದ್ಧತಿಗೆ ಒಳಪಡದಿರುವ ಹಕ್ಕು, ವೈದ್ಯಕೀಯ ನೆರವು ಹಕ್ಕು, ಆರೋಗ್ಯಕರ ಪರಿಸರ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು.
ಕ್ರಮೇಣ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳನ್ನು ಸ್ವಂತ ಹಿತಾಸಕ್ತಿ ಸಾಧನೆಗಾಗಿ, ರಾಜಕೀಯ ಉದ್ದೇಶದ ಸಾಧನೆಗಾಗಿ, ಪ್ರಚಾರ ಪಡೆಯಲೆಂದು ಮತ್ತು ಹಣಗಳಿಕೆಗಾಗಿ ದುರುಪಯೋಗಪಡಿಸಿಕೊಳ್ಳಲಾಯಿತು. ಮತ್ತೊಂದು ಕಡೆ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಹೆಸರಿನಲ್ಲಿ ನ್ಯಾಯಾಲಯಗಳು, ಮಿತಿಮೀರಿದ ಕ್ರಿಯಾಶೀಲತೆಯಲ್ಲಿ ತೊಡಗಿದವು. ನ್ಯಾಯಾಲಯಗಳು ಕಾನೂನುಗಳನ್ನು ರಚಿಸುವ, ಕಾನೂನುಗಳಿಗೆ ತಿದ್ದುಪಡಿ ಮಾಡುವ, ಕಾರ್ಯಾಂಗದ ಕೆಲಸದಲ್ಲಿ ಅತಿಕ್ರಮಣ ಮಾಡುವ ಕೆಲಸಕ್ಕೂ ಕೈಹಾಕಿದ್ದನ್ನು ಕಾಣಬಹುದು. ರಸ್ತೆಯನ್ನು ಮಾಡಿ, ಶಾಲೆಯನ್ನು ಕಟ್ಟಿ, ಆಸ್ಪತ್ರೆಯನ್ನು ಕಟ್ಟಿ, ಬಸ್ಸುಗಳನ್ನು ಓಡಿಸಿ, ಬಸ್‌ಗಳಿಗೆ ಹಸಿರು ಬಣ್ಣ ಹಚ್ಚಿ, ಇತ್ಯಾದಿಯಾಗಿ ಆದೇಶಗಳನ್ನು ಹೊರಡಿಸಿದ್ದನ್ನು ಕಾಣಬಹುದು.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮುಂದಿನ ದಾರಿ ಹೇಗಿರಬೇಕು ಎಂಬುದು ಮುಖ್ಯ.
- ಶಾಸಕಾಂಗ ಮತ್ತು ಕಾರ್ಯಾಂಗವನ್ನು ಬಲಹೀನಗೊಳಿಸಿ ನ್ಯಾಯಾಂಗ ವನ್ನು ಬಲಿಷ್ಠಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯ ಕರವಾದ ಬೆಳವಣಿಗೆಯಲ್ಲ.
- ಶಾಸಕಾಂಗ ಮತ್ತು ಕಾರ್ಯಾಂಗಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಮತ್ತು ತಮ್ಮ ಕಾರ್ಯವ್ಯಾಪ್ತಿಗೆ ಬರುವ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಮತ್ತು ಸವಾಲುಗಳನ್ನು ಹಿಮ್ಮೆಟ್ಟಿಸಬೇಕು. ಸಂವಿಧಾನದಲ್ಲಿ ತಿಳಿಯಪಡಿಸಿರುವ ಕರ್ತವ್ಯವನ್ನು ನಿರ್ವಹಿಸಬೇಕು.
- ಇಂದು ನ್ಯಾಯಾಂಗದ ಕ್ರಿಯಾಶೀಲತೆಯ ಅವಶ್ಯಕತೆ ಇದೆ ಮತ್ತು ಅದು ಮುಂದುವರಿಯಲೂಬೇಕು. ಆದರೆ ಮಿತಿಮೀರಿದ ಕ್ರಿಯಾಶೀಲತೆ ಮತ್ತು ಇತರೆ ಅಂಗಗಳ ಕೆಲಸದಲ್ಲಿ ಅತಿಕ್ರಮಣ ನಿಲ್ಲಬೇಕು. ಇಲ್ಲವಾದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹಾನಿಕಾರಕ.
- ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಂದಕ್ಕೆ ಪೂರಕವಾಗಿ ಮತ್ತೊಂದು ಕೆಲಸ ಮಾಡಿ ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸಬೇಕು.