‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ’ ಎಂದು ಕನ್ನಡಿಗರಿಗೆ ಧರ್ಮ ಸಹಿಷ್ಣುತೆಯ ಸಂದೇಶ ಸಾರಿದ್ದು ನಮ್ಮ ಪ್ರಾಚೀನ ಕವಿ ಶ್ರೀವಿಜಯ. ನಾವು ಮತ್ತೊಬ್ಬರ ವಿಚಾರವನ್ನು ಧರ್ಮವನ್ನು ಸಹಿಸಿಕೊಳ್ಳಬೇಕು ಅಥವಾ ಸಹನೆಯಿಂದ ಕಾಣಬೇಕು ಅದೇ ನಿಜವಾದ ಕಸವರ (ಚಿನ್ನ ಅಥವಾ ಸಂಪತ್ತು) ಎಂಬ ಮಾನವಧರ್ಮ ಘೋಷಣೆಯ ಹಿಂದೆ ಬೌದ್ಧ ಮತ್ತು ಜೈನ ಧರ್ಮಗಳ ಧಾರೆ ಇದೆ. ಕನ್ನಡಿಗರಲ್ಲಿ ಇಂತಹ ಮಾನವೀಯ ಮೌಲ್ಯವನ್ನು ಬೌದ್ಧ ಜೈನ ಮತ್ತು ಬಸವಧಾರೆಗಳು ಬಿತ್ತಿ ಹೋದ ಫಲವೇ ಸಾವಿರಾರು ವರ್ಷಗಳಿಂದ ಇಲ್ಲಿ ಧರ್ಮಸಹಿಷ್ಣುತೆ ನೆಲೆಗೊಳ್ಳಲು ಕಾರಣವಾಗಿದೆ. ಆದರೂ ಧರ್ಮ ಧರ್ಮಗಳ ನಡುವೆ ನಡೆಯಬಾರದಷ್ಟು ಹಿಂಸಾಚಾರ ನಡೆದದ್ದಕ್ಕೂ ಸಾಕಷ್ಟು ಉದಾಹರಣೆಗಳು ಸಾಕ್ಷಿಗಳು ನಮಗೆ ಸಿಕ್ಕುತ್ತವೆ. ಆದರೂ ಕನ್ನಡದ ಅಥವಾ ಕನ್ನಡಿಗರ ಮೂಲ ಗುಣಸತ್ವವೇ ಸಹಿಷ್ಣುತಾ ಭಾವ. ಅದು “ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ” ಎಂಬ ಉನ್ನತ ಮಟ್ಟದ ವಿಶ್ವಮಾನವ ತತ್ವದೆತ್ತರಕ್ಕೆ ಏರುವವರೆಗೆ ಪರಿಣಮಿಸಿದೆ.
ನಮ್ಮ ಸಾಹಿತ್ಯ ನಮ್ಮ ಬದುಕು ನಮ್ಮ ತತ್ವಜ್ಞಾನ ವೈಚಾರಿಕತೆ ಎಲ್ಲದರಲ್ಲೂ ಸಾವಿರಾರು ವರ್ಷಗಳಿಂದ ಹರಿದು ಬಂದಿರುವುದು ಈ ಆದರ್ಶ ತತ್ವಗಳೇ ಆಗಿವೆ. ಕಾಲಕಾಲಕ್ಕೆ ಅವನ್ನು ಕಾಪಿಟ್ಟುಕೊಂಡು ಕನ್ನಡ ನಾಡನ್ನು ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ವಿಭಿನ್ನವಾಗಿ ನಿರ್ಮಿಸಲು ಸಾಧ್ಯವಾಯಿತು. ಆದರೆ ಈಗ ಕನ್ನಡಿಗರ ಸ್ವಾಭಿಮಾನ ಸತ್ತಂತಹ ಸ್ಥಿತಿ ತಲುಪಿದೆ. ಕನ್ನಡಿಗರಲ್ಲಿ ಸಹಿಷ್ಣುತೆ ಮರೆಯಾಗಿ ಧರ್ಮದ್ವೇಷ ಕೋಮು ಭಾವನೆಗಳು ಹೊಗೆಯಾಡುತ್ತಿವೆ. ಅಧಿಕಾರದ ರಾಜಕಾರಣ ನಾಡಿನ ಪರಂಪರೆಯನ್ನು ಮರೆತು ನಾಡಿನ ಹೃದಯದ ಭಾವನೆಗೆ ವಿರುದ್ಧವಾದ ಅಸಹಿಷ್ಣುತೆ ಧಾರ್ಮಿಕ ದ್ವೇಷಗಳನ್ನು ಮುಂದು ಮಾಡಿ ಎಲ್ಲೆಂದರಲ್ಲಿ ಹಿಂಸಾಚಾರ ದ್ವೇಷ ಅಸೂಯೆ ಅಶಾಂತಿಗಳನ್ನು ಬಿತ್ತಿ ಬೆಳೆಯುತ್ತಿದೆ. ಕನ್ನಡಿಗರೇ ಕನ್ನಡದ ಕೊಲೆಗಾರರಾಗಿ ಉತ್ತರದ ಗುಲಾಮಗಿರಿಯನ್ನು ಆತ್ಯಂತಿಕವಾದ ಸ್ವಾಮಿನಿಷ್ಠೆಯಿಂದ ಮಾಡುತ್ತಿದ್ದಾರೆ. ತಮ್ಮ ನಾಯಕರನ್ನು ಸಂತುಷ್ಟಗೊಳಿಸಲು ಅವರು ಹೇಳಿದ್ದನ್ನೆಲ್ಲಾ ಶಿರಸಾವಹಿಸಿ ಪಾಲಿಸುತ್ತಿದ್ದಾರೆ. ಹಿಂದಿ ಹೇರಿಕೆಗೆ ದಕ್ಷಿಣದ ಬೇರೆಲ್ಲ ರಾಜ್ಯಗಳಿಗಿಂತ ಮೊದಲು ಹೆಗಲು ಕೊಡುತ್ತಿರುವುದು ನಮ್ಮವರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಪ್ಪಿಕೊಂಡು ದಿಲ್ಲಿಯ ಅಂತಃಕ್ಕರಣವಿಲ್ಲದ ತಮ್ಮ ದೊರೆಯ ಕೃಪೆಗಾಗಿಯೋ, ಕೆಂಗಣ್ಣಿಗೆ ಬೆದರಿಯೋ ಅಥವಾ ಸಂಘ ಪರಿವಾರದ ಮೌಖಿಕ ಆದೇಶದ ಪರಿಪಾಲನೆಗಾಗಿಯೋ, ಅಧಿಕಾರವನ್ನು ಉಳಿಸಿಕೊಳ್ಳಲಿಕ್ಕಾಗಿಯೋ ತಾಯ್ನಾಡಿಗೆ ಎಗ್ಗಿಲ್ಲದೆ ದ್ರೋಹ ಬಗೆಯುವ ಕೃತ್ಯಗಳಲ್ಲಿ ಮುಳುಗಿಹೋಗಿದ್ದಾರೆ. ಕೋಮು ಬೆಂಕಿಯ ತಿದಿ ಊದುವುದರಲ್ಲಿ ನಮ್ಮವರು ಉತ್ತರದವರನ್ನು ಮೀರಿಸುತ್ತಿದ್ದಾರೆ. ರೈತರಿಗೆ ಮುಳುವಾಗುವ ತಿದ್ದುಪಡಿಗಳ ಬೆಂಬಲಿಗರಾಗಿ, ಜನ ತಮ್ಮ ಪಾಡಿಗೆ ತಾವು ಕೂಡಿ ಬದುಕುವ ಸೇರಿ ಆಚರಿಸುವ ಹಬ್ಬ ಉತ್ಸವ ತೀರ್ಥಕ್ಷೇತ್ರಗಳು ಎಲ್ಲೆಂದರಲ್ಲಿ ದ್ವೇಷದ ಕಲ್ಲು ಎಸೆದು ವಿಕೃತಿ ಮೆರೆಯುತ್ತಿದ್ದಾರೆ.
ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಪೋಷಿಸಬೇಕಾದ ಆಯಕಟ್ಟಿನ ಜಾಗಗಳಲ್ಲಿ ಧರ್ಮಾಂಧರನ್ನು ಅಧಿಕಾರ ಕೊಟ್ಟು ಕೂರಿಸಲಾಗಿದೆ. ಜನಾಂಗಿಕ ದ್ವೇಷಿಗಳನ್ನು, ಹಿಂದೀ ಗುಲಾಮರನ್ನು, ಮತಾಂಧರನ್ನು ಪ್ರಶಸ್ತಿ ಪುರಸ್ಕಾರಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಸಾವಿರಾರು ವರ್ಷಗಳಿಂದ ಜೀವಪರ ಚಿಂತನೆಗಳನ್ನು ಮೂಲದನಿಯಾಗಿಟ್ಟುಕೊಂಡು ಮೂಡಿ ಬಂದ ಕಾವ್ಯ, ಕತೆ, ವಿಮರ್ಶೆ, ಸಂಶೋಧನೆ, ಸಾಹಿತ್ಯಗಳನ್ನು ಗಾಳಿಗೆ ತೂರಿ ಎಲ್ಲವನ್ನೂ ವೈದಿಕ ಧರ್ಮದ ಮೂಸೆಯಲ್ಲಿ ಜನಾಂಗಿಕ ದ್ವೇಷದ ಆಧಾರದಲ್ಲಿ ಕಲುಷಿತ ಗೊಳಿಸುವ ಅಪ್ರಸ್ತುತಗೊಳಿಸುವ ವಿಷಪೂರಿತ ವಿಚಾರಗಳನ್ನು ತೂರಿಸುವ ಕೆಲಸ ಭರಾಟೆಯಿಂದಲೇ ಸಾಗಿದೆ.
ಎದೆ ಸೀಳಿದರೆ ನಾಗಪುರದ ವಿಷ ತುಂಬಿಕೊಂಡವರು ಹುಸಿ ಕನ್ನಡ ಭಕ್ತರಾಗಿ, ಕನ್ನಡದ ನಿಜ ಧ್ಯೇಯ ಧೋರಣೆಗಳಿಗೆ ಕಂಠಕರಾಗಿ ಕುಣಿಯುತ್ತಿರುವ ಕೆಲವರನ್ನು ಆಳುವ ಸರ್ಕಾರ ಕನ್ನಡೋದ್ಧಾರಕರೆಂದು ಮೆರೆಸುತ್ತಿರುವ ಈ ಹೊತ್ತಿನಲ್ಲಿ ನಮ್ಮಂತವರು ಅಸಹಾಯಕರಾಗಿ ನೋಡುವ ಸ್ಥಿತಿ ಬಂದು ಒದಗಿದೆ. ಇವರೆಲ್ಲ ಕನ್ನಡ ಸಂಸ್ಕೃತಿಯನ್ನು ಕಟ್ಟುತ್ತಿಲ್ಲ ಬೆಳೆಸುತ್ತಿಲ್ಲ. ಸ್ಪಷ್ಟವಾಗಿ ಕನ್ನಡಿಗರ ಸಾವಿರಾರು ವರ್ಷಗಳ ‘ಪರ ವಿಚಾರ ಪರ ಧರ್ಮಗಳನ್ನು ಸಹಿಷ್ಣುತೆಯಿಂದ ನೋಡುವುದೇ ಮನುಷ್ಯನಿಗೆ ನಿಜವಾದ ಸಂಪದ’, ‘ಮನುಷ್ಯಜಾತಿ ತಾನೊಂದೇ ವಲಂ’, ‘ಮಾನುಷ್ಯರೆಲ್ಲರೂ ಒಂದೆ ಕೀಳ್ಮೇಲ್ ಇಲ್ಲ’, ದಯವೇ ಧರ್ಮದ ಮೂಲ’, ‘ದೇವನೊಲಿದವನ ಕುಲವೇ ಸತ್ಕುಲ’, ‘ಕುಲಂ ಕುಲಮಲ್ತು ಛಲಂ ಕುಲಂ ಅಭಿಮಾನಮ್ ಕುಲಂ, ಅಣ್ಮು ಕುಲಂ’, ‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?’, ‘ಜಲವೇ ಸಕಲ ಕುಲಕೆ ತಾಯಲ್ಲವೆ?’ ‘ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿ ಇರುತಿರಲು ನಡುವೆ ಕುಲ ಎತ್ತಣದು ಸರ್ವಜ್ಞ’ ಎಂಬ ಎಲ್ಲಾ ಮಾನವ ಕುಲ ಉದ್ಧಾರದ ಉದಾತ್ತ ಚಿಂತನೆಗಳನ್ನು ವ್ಯವಸ್ಥಿತವಾಗಿ ಹೊಸಕಿ ಹಾಕುವ ಕುಕಾರ್ಯ ನಿಮಗ್ನರಾಗಿದ್ದಾರೆ. ಕನ್ನಡವನ್ನು ಕನ್ನಡದ ಜನತೆಯನ್ನು ಈ ನಾಗಪುರದ ಹಾಳು ಹುತ್ತದಿಂದ ಹರಿದು ಬಂದು ಮೆರೆಯುತ್ತಿರುವ ಕೊಳಕು ಮಂಡಲದ ಹಾವುಗಳಿಂದ ರಕ್ಷಿಸಬೇಕಾಗಿದೆ.
ವಿದ್ಯಾರ್ಥಿಗಳು, ಯುವ ಜನರು, ಓದು ಬರೆಹ ಬರುವ ಬರದ ಎಲ್ಲರೂ ರೈತರು ಕಾರ್ಮಿಕರು ಎಲ್ಲರೂ ಕನ್ನಡದ ಸಾವಿರಾರು ವರ್ಷದ ಪರಂಪರೆಯ ಜೀವಸತ್ವ ಯಾವುದಾಗಿತ್ತು ಎಂಬುದನ್ನು ಓದಿ ತಿಳಿಯುವಂತಾಗಬೇಕು. ಈ ನೆಲದ ಬೌದ್ಧ ಜೈನ ಶೈವ ವೀರಶೈವ ಸೂಫಿ ಧಾರೆಗಳು ನಮ್ಮ ಬದುಕನ್ನು ರೂಪಿಸಿವೆ. ನಮ್ಮ ಬದುಕನ್ನು ಬೆಸೆದಿವೆ. ಪುಲಕೇಶಿ, ರವಿಕೀರ್ತಿ, ಕಪ್ಪೆ ಅರಭಟ್ಟ, ನೃಪತುಂಗ, ಚಾವುಂಡರಾಯ, ಅತ್ತಿಮಬ್ಬೆ, ಪಂಪ, ನಯಸೇನ, ಬಸವ, ಅಲ್ಲಮ , ಅಕ್ಕ, ಹಜರತ್ ಖ್ವಾಜಾ ಬಂದೇ ನವಾಜ್ ಗೇಸುದರಾಸ್, ಶರಣಬಸವೇಶ್ವರ, ನಾರಣಪ್ಪ, ಹರಿಹರ ಕನಕ, ಷರೀಫ, ಸರ್ವಜ್ಞ, ಮಲೆಯ ಮಹದೇಶ್ವರ, ಜುಂಜಪ್ಪ, ಮಂಟೇಸ್ವಾಮಿ ಇವರೆಲ್ಲರ ಬದುಕು ಭಾವ ಬರೆಹ ನಮ್ಮನ್ನು ಬೀದರಿನ ತುದಿಯಿಂದ ಕೊಳ್ಳೆಗಾಲದ ತುದಿವರೆಗೆ ಒಂದೇ ಭಾವದ ದಾರದಲ್ಲಿ ದರ್ಜಿಯಂತೆ ಬೆಸೆದಿದೆ. ನೇಕಾರನಂತೆ ಸಮನ್ವಯತೆಯ ಬಣ್ಣ ಬಣ್ಣದ ದಾರದ ಬಟ್ಟೆ ನೇಯ್ದು ಏಕತ್ರಗೊಳಿಸಿದೆ. ಈ ಏಕತೆ ಈ ಭಾವೈಕ್ಯತೆಯನ್ನು ಮಣ್ಣುಗೂಡಿಸುವ ಯಾವುದೇ ಶಕ್ತಿಗಳನ್ನು ಓಡಿಸಬೇಕಿದೆ.
ಆರ್ಯ ವೈದಿಕ ಸಂಸ್ಕೃತಿಯ ಎಲ್ಲ ಶೋಷಕ ಚಿಂತನೆಗಳನ್ನು ಹೇರಿ ಮಹಿಳಾ ಪರವಾದ, ದಲಿತ ಪರವಾದ, ರೈತ ಪರವಾದ, ಡೆಮಾಕ್ರಟಿಕ್ ಧಾರೆಗಳುಳ್ಳ, ಸಮತಾವಾದದ ಸಾರವುಳ್ಳ, ದನಿ ಇಲ್ಲದವರ ದನಿಯಾಗಿರುವ, ಕಾಯಕದ ಕಾರ್ಮಿಕ ನಾಡಿಯಾಗಿರುವ, ವರ್ಣ ವರ್ಗ ವ್ಯವಸ್ಥೆಯ ಕತ್ತು ಹಿಸುಕಿ ಸಮಾನತೆಯ ದನಿಯನ್ನು ಶತಮಾನಗಳಿಂದ ಉಳಿಸಿಕೊಂಡಿರುವ ಕನ್ನಡ ಸಂಸ್ಕೃತಿಯನ್ನು ಇನ್ನಿಲ್ಲವಾಗಿಸುವ ಕುತಂತ್ರಿಗಳನ್ನು ಹಿಮ್ಮೆಟ್ಟಿಸದಿದ್ದರೆ ಸಾವಿರಾರು ವರ್ಷಗಳ ಹಿಂದೆ ಅದು ಹೇಗೆ ಆರ್ಯರಿಗೆ ಸೋತು ಗುಲಾಮರಾದೆವೋ ಈಗಲೂ ಸೋತು ಗುಲಾಮರಾಗಬೇಕಾದೀತು…
ಕನ್ನಡ ಒಂದು ಭಾಷೆಯಾಗಿ ಮಾತ್ರವಲ್ಲ ಒಂದು ಬದುಕಾಗಿ ವಿಶ್ವ ಮಾನವ ಧರ್ಮದ ದನಿಯಾಗಿ ಉಳಿಯಬೇಕು…