October 1, 2023 8:09 am

ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣ: ಡಾ.ಎಲ್.ಹನುಮಂತಯ್ಯ

lhanumathaiah rs

ಬೆಂಗಳೂರು: ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಈ ದೇಶ ಅ. 2ಕ್ಕೆ ನೆನಪು ಮಾಡಿಕೊಳ್ಳುತ್ತದೆ. ಗಾಂಧೀಜಿಯವರನ್ನು ದೇಶ ಮಹಾತ್ಮ ಎಂದು ಕರೆದಿದೆ. ಅವರನ್ನು ನಾವೆಲ್ಲ ಹಲವು ವರ್ಷಗಳಿಂದ ಮಹಾತ್ಮ ಎಂದು ಪೂಜ್ಯಭಾವದಿಂದ, ಅವರು ಕೊಟ್ಟ ಕೊಡುಗೆಯ ಮೂಲಕ ಜನರಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಅಕ್ಟೋಬರ್ 9, 2021ರಂದು ಆಯೋಜಿಸಿದ್ದ ಬಂಧುತ್ವ ಬೆಳಕು ವೆಬಿನಾರ್ ಸರಣಿಯಲ್ಲಿ “ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣ” ವಿಷಯದ ಕುರಿತು ಮಾತಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶ ಕಟ್ಟಿದ ಮಹನೀಯರಲ್ಲಿ ಒಬ್ಬರು. ಅವರು ಪ್ರಾಮಾಣಿಕತೆಗೆ ಹೆಸರಾದವರು  ಎಂದರು.

1ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ಸೌಕರ್ಯಗಳಿಲ್ಲದ ಶಾಲೆಯಲ್ಲಿ ನಾವೆಲ್ಲ ನಡೆದು ಕಿಲೋಮೀಟರ್ ಗಟ್ಟಲೆ ನಡೆಯುವಂತೆ ಅವರು ಕೂಡ ನಡೆದು ಶಾಲೆಗೆ ಹೋಗುತ್ತಿದ್ದರು. ಎಲ್ಲ ಬಡವರಂತೆ ಅವರಿಗೆ ಕೂಡ ಕಾಲಿಗೆ ಚಪ್ಪಲಿ ಇರಲಿಲ್ಲ. ಶಾಸ್ತ್ರಿಯವರು ಗಾಂಧಿಯವರ ಅಪ್ಪಟ ಅನುಯಾಯಿ. ದಂಡಿ ಸತ್ಯಾಗ್ರಹವನ್ನು ನೋಡಿ ಶಾಲೆ ತೊರೆದು ಸ್ವಾತಂತ್ರ್ಯ ಚಳವಳಿಗೆ ಧುಮುಕಿ ದೊಡ್ಡ ನಾಯಕರಾಗಿ ಬೆಳೆದರು. ಸುಮಾರು 7 ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು. ಪ್ರಾಮಾಣಿಕತೆ, ನಿಷ್ಠೆ, ಸ್ವಾತಂತ್ರ್ಯ ಕಳಕಳಿಯಿಂದ ಎಲ್ಲ ರಾಷ್ಟ್ರೀಯ ನಾಯಕರ ಗಮನಸೆಳೆದರು. ಇವರು ದೇಶದ ಪ್ರಧಾನಿಯಾಗಿ ಕೆಲವು ಕಾಲ ಮಾತ್ರ ಇದ್ದರು ಎಂದರು.

ಸಾರಿಗೆ, ಗೃಹ ಸೇರಿದಂತೆ ಶಾಸ್ತ್ರಿಯವರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಶಾಸ್ತ್ರಿಯವರು ರೈಲ್ವೇ ಸಚಿವರಾಗಿದ್ದಾಗ ರೈಲು ಅಪಘಾತವಾದಾಗ ರಾಜೀನಾಮೆ ಸಲ್ಲಿಸಿದರು.  ನಾನು ವ್ಯಕ್ತಿಯಾಗಿ ಕುಳ್ಳಗಿದ್ದೇನೆ, ನಾಲಿಗೆಯಲ್ಲಿ ಸೌಮ್ಯವಾದಿ. ಆದರೆ, ನನ್ನ ಅಂತರಂಗದಲ್ಲಿ ನಾನು ಸೌಮ್ಯವಾದಿಯಲ್ಲ; ಧೃಡ ನಿರ್ಧಾರ ಕೈಗೊಳ್ಳುವವನು ಎನ್ನುತಾರೆ ಎಂದರು.

ಆ ಸಮಯದಲ್ಲಿ ಶಾಸ್ತ್ರಿಯವರು ಅಪಘಾತಕ್ಕೆ ಕಾರಣರಲ್ಲ ಎಂಬುದು ಇಡೀ ಸದನಕ್ಕೆ ಗೊತ್ತಿದೆ. ಆದರೂ ನಾನು ಅವರ ರಾಜೀನಾಮೆಯನ್ನು ಅಂಗೀಕಾರ ಮಾಡುತ್ತಿದ್ದೇನೆ. ಏಕೆಂದರೆ ಇದೊಂದು ಘಟನೆ ಉಳಿದುಕೊಳ್ಳಲಿ ಎಂಬ ಕಾರಣಕ್ಕೆ ಅಂಗೀಕರಿಸುತ್ತೇನೆ ಎಂದು ನೆಹರು ಹೇಳಿದ್ದರು. ಮುಂದಿನ ದಿನಗಳಲ್ಲಿ ಜವಾಬ್ದಾರಿ ಹೊತ್ತ ವ್ಯಕ್ತಿಗಳು ರಾಜೀನಾಮೆ ಕೊಡಲಿ ಎಂಬ ಕಾರಣಕ್ಕೆ ರಾಜೀನಾಮೆಯನ್ನು ಅವರು ಅಂಗೀಕರಿಸಿದ್ದರು. ಆದರೆ, ಇದಾದ ನಂತರ ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ರೈಲು ಅಪಘಾತಗಳು ನಡೆದಿವೆ. ರಾಜೀನಾಮೆಯನ್ನು ಕೊಟ್ಟ ಪ್ರಕರಣ ಶಾಸ್ತ್ರಿಯವರದ್ದು ಮಾತ್ರ ಎಂದರು.

ಇಂತಹ ಶಾಸ್ತ್ರಿಯವರನ್ನು ಆರೋಪಗಳಿಗೆ ಬಳಸಿಕೊಳ್ಳುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದ ನಾಯಕರನ್ನು ಬಿಜೆಪಿಗರು ಹುಡುಕುತ್ತಿದ್ದಾರೆ. ಬಿಜೆಪಿ ಮತ್ತು ಆರ್.ಎಸ್.ಎಸ್ ತತ್ವಗಳನ್ನು ನಂಬಿದವ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಲ್ಲ ಎಂಬ ಸಂಗತಿ ಚರಿತ್ರೆಯನ್ನು ಓದಿದವರಿಗೆ ಗೊತ್ತಾಗುತ್ತದೆ ಎಂದರು.

ಇಂದು ಆರ್.ಎಸ್.ಎಸ್. ಮತ್ತು ಬಿಜೆಪಿಗರು ಮುಂಛೂಣಿಗೆ ಬಂದು, ದೇಶವನ್ನು ಕಟ್ಟಿದ ಮಹನೀಯರು ಎನ್ನುವ ರೀತಿಯಲ್ಲಿ ದೀನ್ ದಯಾಳ್ ಉಪಾಧ್ಯಾಯ, ಶಾಮ್ ಪ್ರಸಾದ್ ಮುಖರ್ಜಿ, ಸಾವರ್ಕರ್ ಅವರನ್ನು ದೇಶದ ನಿರ್ಮಾತೃಗಳು ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಅವರ ಚರಿತ್ರೆ ನಮ್ಮ ದೇಶದ ಅನೇಕರಿಗೆ ತಿಳಿದಿಲ್ಲ. ಈ ಸಂಗತಿಯನ್ನು ನಾವು ಹೆಚ್ಚು ಚರ್ಚೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದರು.

ಸಾವರ್ಕರ್ ಅವರ ಚರಿತ್ರೆಯನ್ನು ನೋಡಿದರೆ, ಅವರು ದೇಶವನ್ನು ಒಟ್ಟಿಗೆ ಕೊಂಡೊಯ್ಯಲಾರರು ಎಂಬ ಸಂಗತಿ ಗೊತ್ತಾಗುತ್ತದೆ. ಹಿಂದೂಗಳ ಆಳ್ವಿಕೆ ಈ ದೇಶಕ್ಕೆ ಇರಬೇಕು ಎನ್ನುವುದೇ ಬಿಜೆಪಿಯ ಸಿದ್ಧಾಂತ. ಅದರ ಮೂಲಬೇರಾದ ಜನಸಂಘದ ನಂಬಿಕೆ. ಇವೆಲ್ಲಕ್ಕೆ ತಾತ್ವಿಕ ನಂಬಿಕೆಯನ್ನು ಕೊಡುವ ಆರ್.ಎಸ್.ಎಸ್.ನ ಸಿದ್ಧಾಂತ ಕೂಡ ಇದೇ ಎಂದರು.

ಭಾರತದಲ್ಲಿ ಬಹುಸಂಖ್ಯಾತರು ಹಿಂದೂಗಳು ಎನ್ನುವುದು ನಿಜ. ಇದರಲ್ಲಿ 2 ಮಾತಿಲ್ಲ. ಆದರೆ, ಯಾವ ಹಿಂದೂಗಳು ಕಳೆದ ಸಾವಿರಾರು ವರ್ಷಗಳಿಂದ ದೇಶದಲ್ಲಿ ಆಳ್ವಿಕೆ ನಡೆಸಿಕೊಂಡು ಬಂದಿದ್ದಾರೆ ಎನ್ನುವುದರ ಕಡೆಗೆ ನಾವು ಗಮನಹರಿಸಬೇಕು ಎಂದರು.

ಗಾಂಧೀಜಿಯವರು, ರಾಮರಾಜ್ಯವೆಂದರೆ ಅದು ಹಿಂದೂ ರಾಜ್ಯವಲ್ಲ. ಎಲ್ಲ ಭಾರತೀಯರ ಹಸಿದ ಹೊಟ್ಟೆಯನ್ನು ತುಂಬಿಸುವ, ಎಲ್ಲರಿಗೂ ಸ್ವರಾಜ್ಯದ ಕಲ್ಪನೆ ಮೂಡಿಸುವಂತೆ ಮಾಡುವ, ಸಂವಿಧಾನಾತ್ಮಾಕ ಆಡಳಿತ ಜಾರಿಗೆ ಬರಬೇಕು ಎಂದು ಹೇಳುತ್ತಾರೆ. ಅಂದು ಬಹಳ ದೊಡ್ಡ ಸಮಸ್ಯೆಯಾಗಿದ್ದದ್ದು ಹಸಿವು. ಹಸಿವಿನಿಂದ ಜನ ಸಾಯುತ್ತಿದ್ದರು. ರೋಗರುಜಿನೆಗಳಿಗೆ ಆಸ್ಪತ್ರೆಗೆ ಹೋಗುವಂತಿರಲಿಲ್ಲ. ಶಾಲೆಗಳು ಎಲ್ಲರಿಗೂ ತೆರೆದ ಸಮಾಜವಾಗಿರಲಿಲ್ಲ. ಇಂದು ಯಾರು ಭಾರತ ಹಿಂದೂಗಳ ದೇಶವೆಂದು ಬೊಬ್ಬೆ ಹೊಡೆಯುತ್ತಿದ್ದಾರೆ ಅಥವಾ ಅದರ ಮತ್ತಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಕೆಳಸಮುದಾಯದ ಹುಡುಗರಲ್ಲಿ ನನ್ನ ವಿನಂತಿಯೇನೆಂದರೆ, ಈ ದೇಶದ ಹಿಂದೂ ರಾಷ್ಟ್ರ ಎನ್ನುವುದು ಮೇಲ್ವರ್ಗದ ಆಡಳಿತವಾಗಿತ್ತೇ ಹೊರತು ಕೆಳಜಾತಿಯವರನ್ನು ಒಳಗೊಳ್ಳುವ ಆಡಳಿತವಾಗಿರಲಿಲ್ಲ ಎನ್ನುವುದು ಬಹಳ ಸ್ಪಷ್ಟ ಸಂಗತಿ ಎಂದರು.

ತಳಸಮುದಾಯದವರು ವಿದ್ಯೆ ಕಲಿತರೆ ಶಿಕ್ಷೆ ವಿಧಿಸಲಾಗುತ್ತಿತ್ತು. ಶೂದ್ರರು ಶಿಕ್ಷಣ ಕಲಿತರೆ ಕಿವಿಗೆ ಕಾದ ಸೀಸವನ್ನು ಸುರಿಯಲಾಗುತ್ತಿತ್ತು. ಇದು ಮನುಧರ್ಮ ಶಾಸ್ತ್ರದಲ್ಲಿ ದಾಖಲಾಗಿರುವ ಸಂಗತಿ. ಇಂದು ಇದು ಅಪ್ರಸ್ತುತವಾಗುತ್ತಿದೆ ನಿಜ. ಆದರೆ, ಸಾವಿರಾರು ವರ್ಷಗಳಿಂದ ಈ ರೀತಿಯ ಆಡಳಿತವನ್ನು, ಈ ರೀತಿಯ ಕಾನೂನನ್ನು ಪಾಲನೆ ಮಾಡುವ ಭಾರತೀಯ ಸಮಾಜದ ನಾವುಗಳು, ನಾವು ಯಾವ ಕಾರಣಕ್ಕಾಗಿ ಭಾರತ ಹಿಂದೂ ರಾಷ್ಟ್ರ ಆಗಬೇಕು ಎಂಬ ಕಲ್ಪನೆಯಲ್ಲಿ ನಾವು ಹೋರಾಡಬೇಕು? ಎಂಬ ಪ್ರಶ್ನೆಯನ್ನು ನಾವೆಲ್ಲ ಕೇಳಬೇಕಾದ ಕಾಲವಿದು ಎಂದರು.

ಹಿಂದೂ ರಾಷ್ಟ್ರವಾಗಬೇಕು ಎಂದು ಹೇಳುವವರು ಅಸ್ಪೃಶ್ಯತೆ ಹೋಗಬೇಕು, ಜಾತಿವಿನಾಶ ಆಗಬೇಕು, ಎಲ್ಲ ಸಮುದಾಯಗಳಿಗೆ ಸಮಾನ ಅವಕಾಶಗಳು ಸಿಗಬೇಕು ಎಂದು ಹೇಳುವುದಿಲ್ಲ. ಇಂತಹ ಮೇಲ್ನೋಟಕ್ಕೆ ನಾವೆಲ್ಲ ಹಿಂದೂಗಳು. ಆದರೆ, ಒಳಗೆ ನಮ್ಮೊಳಗಿರುವ ಜಾತಿಗಳು ಹಾಗೆಯೇ ಇರಲಿ ಎನ್ನುವ ಪರಿಸ್ಥಿತಿ ಇದೆ. ಇದನ್ನು ಯಾವ ಹಿಂದೂ ರಾಷ್ಟ್ರವೆಂದು ಕರೆಯಬೇಕು ಎಂಬ ಪ್ರಶ್ನೆಯನ್ನು ನಾವು ಅವರನ್ನು ಕೇಳಬೇಕು ಎಂದರು.

ನೆಹರು ಅವರ ಬದಲಿಗೆ ಪಟೇಲ್ ಅವರು ಈ ದೇಶದ ಪ್ರಧಾನಿಯಾಗಿದ್ದರೆ ಈ ದೇಶ ಸ್ವರ್ಗವಾಗುತ್ತಿತ್ತು ಎನ್ನುತ್ತಾರೆ. ಇದು ಜನರ ದಾರಿ ತಪ್ಪಿಸುವ ಕ್ರಮ. ಚರಿತ್ರೆಯನ್ನು ನಾವು ಬದಲಿಸಲು ಸಾಧ್ಯವಿಲ್ಲ. ನೆಹರು ಅವರನ್ನು ತೆಗೆದು ಪಟೇಲ್ ಅವರನ್ನು ಪ್ರಧಾನಿಯನ್ನಾಗಿಸಲು ಸಾಧ್ಯವಿಲ್ಲ. ಅದು ಅವರಿಗೆ ಗೊತ್ತಿದೆ.           ಆದರೆ, ಅವರು ಪ್ರಧಾನಿಯಾಗಿದ್ದದ್ದರೆ? ಭಾರತ ಸ್ವರ್ಗವಾಗುತ್ತಿತ್ತು ಎಂಬ ಭ್ರಮೆಯನ್ನು ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆ ಒಂದೇ ಕಾರಣ, ನೆಹರು ಅವರ ಕುಟುಂಬ ಅನೇಕ ವರ್ಷಗಳ ಕಾಲ ಈ ದೇಶವನ್ನು ಆಳಿದ್ದು, ಈ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದದ್ದು, ಎಲ್ಲರಿಗೂ ಸಮಾನತೆಯನ್ನು ಕೊಡಬೇಕು ಎಂಬ ನಂಬಿಕೆಯನ್ನು ಈ ದೇಶದಲ್ಲಿ ಬಿತ್ತನೆ ಮಾಡಿದ್ದರು ಎಂದರು.

ಗಾಂಧೀಜಿ ಮತ್ತು ನೆಹರು ಅವರ ನಡುವೆ ಪತ್ರವ್ಯವಹಾರಗಳ ಕುರಿತು ಅಧ್ಯಯನವನ್ನು ನೀವು ಮಾಡಿದರೆ, ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆಯನ್ನು ನೆಹರು ಒಪ್ಪಿಯೇ ಇರಲಿಲ್ಲ. ಅವರು ಹೇಳುತ್ತಿದ್ದದ್ದು, ಈ ದೇಶದ ಗ್ರಾಮೀಣ ಜನರಿಗೆ ಎಲ್ಲ ಸೌಕರ್ಯಗಳನ್ನು ಕೊಡುವ ಮೂಲಕ ಅವರ, ಕೃಷಿಯನ್ನು ವೈಜ್ಞಾನಿಕವಾಗಿ ಬೆಳೆಯುವ ಮೂಲಕ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ನೆಹರು ನಂಬಿದ್ದರು. ಆದರೆ, ಗಾಂಧೀಜಿಯವರು ಗೃಹ ಕೈಗಾರಿಕೆಗಳ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ಮೂಲಕ ಈ ದೇಶವನ್ನು ರಾಮರಾಜ್ಯ ಮಾಡಬಹುದು ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದರು ಎಂದರು.

ಇಂದು ಪ್ರಪಂಚದ ಬೆಳವಣಿಗೆಗಳ ಮುಂದೆ ನಮ್ಮ ಗೃಹಕೈಗಾರಿಕೆಗಳು ಉಳಿಯಬೇಕಿತ್ತೋ ಅಥವಾ ದೇಶದಲ್ಲಿ ಆದ ಕೈಗಾರಿಕೀಕರಣ ಸರಿಯಾಗಿತ್ತೋ ಎನ್ನುವುದನ್ನು ನಮ್ಮ ಜನರು ಚಿಂತನೆ ಮಾಡಬೇಕು. ಇದನ್ನು ನೆಹರು ಮಾತ್ರ ಹೇಳುತ್ತಿರಲಿಲ್ಲ. ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರು ರಾಜ್ಯದಲ್ಲಿ ದಿವಾನರಾಗಿದ್ದ ಸಮಯದಲ್ಲಿ ಕೈಗಾರಿಕೀಕರಣವನ್ನು ಮಾಡಬೇಕು ಎಂಬ ಸಂಗತಿಯನ್ನು ಮಹಾರಾಜರ ಗಮನಕ್ಕೆ ತಂದರು. ಕೈಗಾರಿಕೀಕರಣ ಅಥವಾ ನಾಶ ಎಂಬುದು ವಿಶ್ವೇಶ್ವರಯ್ಯನವರ ಮಾತು. ಕೈಗಾರೀಕರಣ ಮಾಡಿ ಇಲ್ಲವಾದಲ್ಲಿ ದೇಶ ನಾಶವಾಗಬೇಕಾಗುತ್ತದೆ ಎಂಬ ಮಾತನ್ನು ಅವರು ಹೇಳಿದರು. ವಿಶ್ವೇಶ್ವರಯ್ಯ ಮತ್ತು ನೆಹರು ಅವರ ಆಲೋಚನೆಗಳು ಬಹುತೇಕ ಸಮಾನ ಚಿಂತನೆಯನ್ನು ಹೊಂದಿದ್ದವು. ಆದರೆ ಗಾಂಧೀಜಿಯವರಿಗೆ ಗುಡಿಕೈಗಾರಿಕೆಗಳು ಉಳಿಯಬೇಕು ಎಂಬ ಕನಸಿತ್ತು. ಇವು ಕೋಟ್ಯಂತರ ಜನರಿಗೆ ಉದ್ಯೋಗವನ್ನು ಕೊಡಬಲ್ಲವು, ದೇಶದ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸಬಹುದು ಎಂಬ ನಂಬಿಕೆ ಇತ್ತು. ಆದರೆ ನೆಹರು ಅವರಿಗೆ ಗಾಂಧೀಜಿಯವರ ಇಂತಹ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದ್ದದ್ದು ನಿಜ. ನೆಹರು ದೇಶದ ಪ್ರಧಾನಿಯಾಗದೆ ಇದ್ದಿದ್ದರೆ, ಈ ದೇಶ ಸಮಗ್ರ ಭಾರತದಲ್ಲಿರುವ ಈಶಾನ್ಯ ರಾಜ್ಯಗಳು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಸಂಸ್ಕೃತಿಗಳು, ಅನೇಕ ಚಿಂತನೆಗಳು, ಭಾಷೆಗಳನ್ನು ಒಟ್ಟಿಗೆ ಇಟ್ಟುಕೊಳ್ಳುವ ಕೆಲಸ ಆದದ್ದು, ನೆಹರು ಅವರ ದೂರದೃಷ್ಟಿಯಿಂದ. ಅವರ ಈ ದೃಷ್ಟಿ ಅವರ ಸಮಗ್ರ ಕೃತಿಗಳನ್ನು ಓದಿದವರಿಗೆ ಅರ್ಥವಾಗುತ್ತದೆ. ಅವರಿಗೆ ಪ್ರಪಂಚವನ್ನು ಒಂದಾಗಿ ನೋಡಬೇಕು ಎಂಬ ದೃಷ್ಟಿಕೋನವಿತ್ತು. ಆದ್ದರಿಂದ ಕಾಶ್ಮೀರವನ್ನು ಭಾರತದಲ್ಲಿ ಉಳಿಯಲು ಯಾವೆಲ್ಲ ಅವಕಾಶಗಳು ಅವತ್ತು ಇದ್ದವೋ ಅವೆಲ್ಲವನ್ನ ಮಾಡಿ ತೋರಿಸಿದವರು ಪಂಡಿತ್ ಜವಾಹರ್ ಲಾಲ್ ನೆಹರು. “ನನಗೆ ಭಾರತವೆಂದರೆ ರೈತರ ಮನೆಗಳಲ್ಲಿ ದೀಪಬೆಳಗಿಸಿರುವ ಅಣೆಕಟ್ಟೆಗಳನ್ನು ಕಟ್ಟಿದ್ದೇವಲ್ಲ ಇವು ತನ್ನ ಪಾಲಿನ ದೇವಾಲಯಗಳು” ಎಂದು ನೆಹರು ಹೇಳುತ್ತಿದ್ದರು ಎಂದರು.

ದೇಶದಲ್ಲಿ ಮಳೆಬಂದರೆ ಅತಿವೃಷ್ಟಿ ಬರದೆ ಇದ್ದರೆ ಅನಾವೃಷ್ಟಿಯಾಗುತ್ತಿತ್ತು. ಕೋಟ್ಯಂತರ ಜನ ಹಸಿವಿನಿಂದ ಬಳಲುತ್ತಿದ್ದರು, ನಾವು ಬೆಳೆಯುತ್ತಿದ್ದ ಆಹಾರ ಧಾನ್ಯಗಳು ನಮ್ಮ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿರಲಿಲ್ಲ. ಶೇ. 80ರಷ್ಟು ಜನ ಅನಕ್ಷರಸ್ಥರಾಗಿದ್ದರು. ಶೇ. 20ರಷ್ಟು ಅಕ್ಷರಸ್ಥರು ಮೇಲುಜಾತಿ, ಮೇಲುವರ್ಗದವರಾಗಿದ್ದರು. ಆದರೆ ಭಾರತದ ಮೂಲನಿವಾಸಿಗಳು ಅನಕ್ಷರತೆ, ಬಡತನ, ಮೂಢನಂಬಿಕೆಯಲ್ಲಿದ್ದರು. ನೈರ್ಮಲ್ಯ ಗೊತ್ತೇ ಇರಲಿಲ್ಲ. ಕುಡಿಯುವ ನೀರನ್ನು ಹತ್ತಾರು ಕಿಮೀ ಹೋಗಿ ತರಬೇಕಾದ ಪರಿಸ್ಥಿತಿ ಇತ್ತು. ಇವೆಲ್ಲವನ್ನೂ ನೋಡಿದರೆ ನೆಹರು ಅವರ ಆಹೊತ್ತಿನಲ್ಲಿ ಬಹಳ ಕೆಲಸ ಮಾಡಿರುವುದಕ್ಕೆ ಸಾಕ್ಷಿ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೆ ಕಿಂಚಿತ್ತೂ ಕಾಣಿಕೆ ಕೊಡದ ಸಂಘಪರಿವಾರದ ನಾಯಕರು ಇಂದು ಮುಂಛೂಣಿಯ ನಾಯಕರಾಗಿದ್ದಾರೆ. ಅವರು ಮತ್ತೆಮತ್ತೆ ಕಾಂಗ್ರೆಸ್ ಅನ್ನು ಪ್ರಶ್ನಿಸಲು ನೆಹರು ಅವರ ಎದುರಿಗೆ ಸರ್ದಾರ್ ಪಟೇಲ್ ಅವರನ್ನು ಇಡುತ್ತಾರೆ. ಶಾಸ್ತ್ರಿಯವರನ್ನು ಗಾಂಧಿಯವರಿಗಿಂತಲೂ ಶ್ರೇಷ್ಠ ನಾಯಕ ಎಂದು ಬಣ್ಣಿಸುತ್ತಾರೆ. ಶಾಸ್ತ್ರಿಯವರು ಶಾಲೆಗೆ ಹೋಗುವ ಸಮಯದಲ್ಲಿ ಗಾಂಧೀಜಿಯವರು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೂರಾರು ದಿನಗಳ ಕಾಲ ಸೆರೆವಾಸ ಮಾಡಿದ್ದರು.  ಕೋಟಿಕೋಟಿ ಜನರನ್ನು ಹಿಂಬಾಲಕರನ್ನಾಗಿ ಪಡೆದವರು. ಗಾಂಧೀಜಿಯವರ ಮೇಲೆ ದೊಡ್ಡ ನಂಬಿಕೆಯ ಕಾರಣದಿಂದಾಗಿಯೇ ಬಡವರು, ಸಿರಿವಂತರು ಎಲ್ಲರನ್ನೂ ಒಗ್ಗೂಡಿಸಿ ಸ್ವಾತಂತ್ರ್ಯ ಚಳುವಳಿಗೆ ದೇಣಿಗೆ ಕೊಡುತ್ತಿದ್ದರು. ಗಾಂಧೀಜಿಯವರ ಪ್ರಾಮಾಣಿಕತೆಯ ಬಗ್ಗೆ ಜನರಿಗೆ ಅಷ್ಟು ನಂಬಿಕೆ ಇತ್ತು ಎಂದರು.

ಇಂದು ಬಿಜೆಪಿಯ ರಾಜಕಾರಣ ನೆಹರು ಬದಲಿಗೆ ಪಟೇಲ್ ಅವರನ್ನು, ಗಾಂಧೀಜಿ ಬದಲಿಗೆ ಶಾಸ್ತ್ರಿಯವರನ್ನು ಇಟ್ಟು ಸುಳ್ಳುಗಳ ಮೂಲಕ ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದೆ. ಭಾರತೀಯ ಜನಸಮುದಾಯ ಬಹಳ ಭಾವುಕವಾದುದು. ಜಾತಿಗಳಲ್ಲಿ ಅಪಾರವಾದ ನಂಬಿಕೆ ಇರಿಸಿಕೊಂಡಿರುವವರು, ಧರ್ಮಬೀರುಗಳು, ಧಾರ್ಮಿಕವಾಗಿ ಎಂತಹ ಸುಳ್ಳುಗಳನ್ನು ಬೇಕಾದರೂ ಹೇಳಿ ನಂಬಿಸಬಹುದು. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ದೇಶವನ್ನೇ ಪ್ರಭಾವಿಸಿದ್ದ ಸ್ವಾಮಿ ವಿವೇಕಾನಂದರು. ಸನ್ಯಾಸಿಗಳನ್ನು ನಮ್ಮ ದೇಶದ ಜನ ಬಹಳ ಸುಲಭವಾಗಿ ನಂಬುತ್ತಿದ್ದರು. ಆದರ್ಶ ರಾಜಕಾರಣಿಗಳನ್ನು ನಂಬುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಸಂಪತ್ತನ್ನು ದಾನಮಾಡಿದವರಲ್ಲಿ ತುಂಬಾ ಪ್ರೀತಿ ವಿಶ್ವಾಸಗಳನ್ನು ನಮ್ಮ ದೇಶದ ಜನ ಇಟ್ಟುಕೊಂಡಿದ್ದಾರೆ. ಜನ ಭಾವುಕರಾದರೂ ಇನ್ನೊಬ್ಬರನ್ನು ದ್ವೇಷ ಮಾಡುವವರಲ್ಲ. ಆದರೆ ಸುಳ್ಳುಗಳನ್ನು ಬಹಳ ಬೇಗ ನಂಬುತ್ತಾರೆ ಎಂದರು.

ಇವತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೆಹರು ಅವರಿಗೆ ಸೋಮನಾಥ ದೇವಾಲಯವನ್ನು ಕಟ್ಟಿಸುವುದು ಯಾಕೆ ಆದ್ಯತೆಯ ವಿಷಯವಾಗಿರಲಿಲ್ಲ ಎಂದು ಪ್ರಶ್ನಿಸುತ್ತಾರೆ. ನೆಹರು ಹಿಂದೂಗಳ ಪರವಾಗಿರಲಿಲ್ಲ ಎನ್ನುತ್ತಾರೆ. ಆದರೆ, ನೆಹರು ಅವರಿಗೆ ಕೋಟ್ಯಂತರ ಜನ ಹಸಿವಿನಿಂದ ಸಾಯುತ್ತಿದ್ದಾಗ, ಕೋಟಿಕೋಟಿ ಜನರಿಗೆ ಶಿಕ್ಷಣ ಇಲ್ಲದಿದ್ದಾಗ, ಲಕ್ಷಾಂತರ ಜನರಿಗೆ ಮೈಗೆ ಬಟ್ಟೆ ಇಲ್ಲದಿದ್ದಾಗ ದೇಶದ ಸಂಪತ್ತಿನ ಆದ್ಯತೆ ಹಸಿವನ್ನು ನೀಗಿಸುವುದರ ಕಡೆಗೆ ಇರಬೇಕೋ, ಬಟ್ಟೆಯನ್ನು ಕೊಡಿಸುವುದರ ಕಡೆಗೆ ಇರಬೇಕೋ, ಸೂರನ್ನು ಒದಗಿಸುವುದರ ಕಡೆಗೆ ಇರಬೇಕೋ, ಅಕ್ಷರವನ್ನು ಕಲಿಸುವುದರ ಕಡೆಗೆ ಇರಬೇಕೋ ಯಾವುದರ ಕಡೆಗೆ ಇರಬೇಕು ಹೇಳಿ. ಅವೆಲ್ಲವನ್ನು ಬಿಟ್ಟು ದೇವಸ್ಥಾನವನ್ನು ಕಟ್ಟಿಸಬೇಕಾದ ಅಗತ್ಯ ಅವತ್ತು ನೆಹರು ಅವರಿಗೆ ಆದ್ಯತೆಯ ವಿಷಯ ಆಗಬೇಕಿತ್ತೇ? ಎಂಬ ಪ್ರಶ್ನೆಯನ್ನು ನಾವ್ಯಾರೂ ಅವರಿಗೆ ಕೇಳುವುದಿಲ್ಲ ಎಂದರು.

ನಮ್ಮ ಪ್ರಧಾನಿಗಳು ಯಾವಾಗಲೂ ಪ್ರಶ್ನೆಗಳನ್ನು ಎದುರಿಸುವುದಿಲ್ಲ. ಅವರದೇನಿದ್ದರೂ ಏಕಮುಖ. ಮನ್ ಕಿ ಬಾತ್, ಟಿವಿ ಭಾಷಣ, ದೇಶವನ್ನುದ್ದೇಶಿಸಿ ಮಾತಾಡುವುದು ಇತ್ಯಾದಿ ಎಲ್ಲವೂ ಆಧುನಿಕ ಮಾಧ್ಯಮಗಳ ಮೂಲಕ ಹೇಳುತ್ತಾರೆಯೇ ಹೊರತು ಒಂದೇ ಒಂದು ಸಣ್ಣ ಪ್ರಶ್ನೆಯನ್ನು ಅವರು ಎದುರಿಸಿದ್ದನ್ನು ನೀವು ನೋಡುವುದಿಲ್ಲ. ಕಳೆದ 7 ವರ್ಷಗಳಲ್ಲಿ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಎಷ್ಟು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ? ಎಷ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ? ಎಷ್ಟು ಜನರ ಆಶೋತ್ತರಗಳನ್ನು ನೇರವಾಗಿ ತಿಳಿದುಕೊಂಡಿದ್ದಾರೆ ಎಂದು ಕೇಳಿದರೆ ಗೊತ್ತಾಗುತ್ತದೆ. ಅವರು ಕೆಲಸ ಮಾಡುವ ಶೈಲಿ ಏಕಮುಖವಾದ ಚಿಂತನೆಯ ಮೂಲಕ ದೇಶದ ಜನರು ಸುಭಿಕ್ಷವಾಗಿದ್ದಾರೆ ಎಂದು ತಾವೇ ಭಾವಿಸಿಕೊಂಡು ಅವರಿಗೆ ಬೇಕಾದ್ದನ್ನು ಹೇಳುತ್ತಾರೆ. ಅವರು ಹೇಳಿದ ಹತ್ತಾರು ಸುಳ್ಳುಗಳನ್ನು ಎದುರಾಗುವ ಧೈರ್ಯ 6 ವರ್ಷಗಳಾದ ಮೇಲೆ ಕೂಡ ಅವರಿಗೆ ಬಂದಿಲ್ಲ ಎಂದರು.

ನೆಹರು ಅವರ ಕಾಲದಲ್ಲಿ ಈ ದೇಶದ ಬಹಳ ದೊಡ್ಡ ಸಮಸ್ಯೆ ದೇಶದ ಜನರಿಗೆ ಅಕ್ಷರವನ್ನು ಕೊಡುವುದಾಗಿತ್ತು, ಬುಡಕಟ್ಟು, ಆದಿವಾಸಿ ಜನರಿಗೆ, ಊರುಗಳಿಲ್ಲದೆ ವಾಸಮಾಡುತ್ತಿದ್ದ ಪರಿಶಿಷ್ಟ ಜನರಿಗೆ, ಊರಿನಲ್ಲಿದ್ದು ಶಾಲೆಗಳಿಗೆ ಬರದಂತಹ ಪರಿಸ್ಥಿತಿಯಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದವರಿಗೆ ಶಾಲೆಯನ್ನು ಕಟ್ಟಿ ಶಿಕ್ಷಕರನ್ನು ನೇಮಿಸಿ ಶಿಕ್ಷರಿಗೆ ಸಲಕರಣೆಗಳನ್ನು ಒದಗಿಸಿ ಇಡೀ ಭಾರತದ ಶೇ. 75ರಷ್ಟು ಜನರನ್ನು ಸಾಕ್ಷರರನ್ನಾಗಿ ಮಾಡಿದ್ದರಲ್ಲಿ ಕಾಂಗ್ರೆಸ್ ಆಳ್ವಿಕೆಯ 50 ವರ್ಷಗಳ ಬಹಳ ದೊಡ್ಡ ಪ್ರಯತ್ನವಿದೆ ಎಂದರು.

ಸ್ವಾತಂತ್ರ್ಯಾನಂತರ ನಮಗೆ ಶಿಕ್ಷಣ ದೊರೆಯದೇ ಇದ್ದಿದ್ದರೆ, ನಮ್ಮೂರಿನಲ್ಲಿ ಶಾಲೆ ಇಲ್ಲದಿದ್ದರೆ, ನಮಗೆ ಅಕ್ಷರ ಜ್ಞಾನ ಬರದೇ ಹೋಗಿದ್ದರೆ ಯಾವುದೋ ಹಳ್ಳಿ, ಕಾಡಿನಲ್ಲಿ ಕೆಲಸ ಮಾಡುತ್ತಾ ಸಗಣಿ ಎತ್ತುತ್ತಾ ದನ ಮೇಯಿಸ್ತಾ ಇರಬೇಕಾಗುತ್ತಿತ್ತು. ಆ ಅಕ್ಷರದ ಜ್ಞಾನದಿಂದ ನಾವು ವಿಧಾನಸಭೆ, ಸಂಸತ್ತನ್ನು ಪ್ರವೇಶಿಸುವ ಪ್ರಯತ್ನಮಾಡಿದ್ದೇವೆ. ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ನಾವು ಇಂದು ಕಾಣುತ್ತಿದ್ದೇವೆ. ಇದು ಕಾಂಗ್ರೆಸ್ ನ ಆಡಳಿತ ಮಾಡಿದ ಬಹಳ ಮುಖ್ಯವಾದ ಕೆಲಸ ಎಂದು ನಿಮಗೆ ಅನ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದರು.

ನೆಹರು ಅವರ ಬದಲಿಗೆ ಪಟೇಲ್ ಅವರಿದ್ದರೆ ಸೋಮನಾಥ ದೇವಾಲಯ ಕಟ್ಟಿಸುತ್ತಿದ್ದರೇ? ನಿಮಗೆ ನಿಜವಾಗಿಯೂ ಪಟೇಲರ ಮೇಲೆ ಅಷ್ಟು ಪ್ರೀತಿಯಿದ್ದರೆ ಗುಜರಾತಿನಲ್ಲಿ ಪಟೇಲರ ಹೆಸರಿನಲ್ಲಿದ್ದ ಸ್ಟೇಡಿಯಂ ಹೆಸರನ್ನು ಬದಲಾಯಿಸಿ ನರೇಂದ್ರ ಮೋದಿಯವರ ಹೆಸರಿಟ್ಟಿದ್ದೀರಲ್ಲಾ ಇದು ದೇಶಭಕ್ತರಿಗೆ, ದೇಶಕ್ಕಾಗಿ ಹೋರಾಡಿದವರಿಗೆ, ನವಭಾರತವನ್ನು ನಿರ್ಮಾಣಮಾಡಿದ ಮಹಾನಾಯಕನೊಬ್ಬನಿಗೆ ಕೊಡಬಹುದಾದ ಗೌರವವೇ? ಎಂಬ ಪ್ರಶ್ನೆಯನ್ನು ನಾವೆಲ್ಲ ಕೇಳಬೇಕಿದೆ ಎಂದರು. 

ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾದಾಗ “ಜೈಜವಾನ್ ಜೈಕಿಸಾನ್” ಎಂಬ ಘೋಷಣೆ ಕೊಟ್ಟರು. ಆ ಹೊತ್ತಿನ ತುರ್ತು ಅದಾಗಿತ್ತು. ದೇಶವನ್ನು ರಕ್ಷಿಸಿಕೊಳ್ಳಬೇಕಾದ ತುರ್ತು ನಮಗಿತ್ತು. ನಮ್ಮ ಸುತ್ತಲಿನ ರಾಷ್ಟ್ರಗಳು ಆಕ್ರಮಣ ಮಾಡುವ ಸೂಚನೆಗಳನ್ನು ನೀಡುತ್ತಿದ್ದವು. ಸೇನೆಯನ್ನು ಬಲಪಡಿಸುವ ಅಗತ್ಯವಿದೆ ಎಂಬ ಕಾರಣದಿಂದ ಶಾಸ್ತ್ರಿಯವರು ಜೈಜವಾನ್ ಎಂದರು. ಜೈ ಕಿಸಾನ್ ಎಂದು ಹೇಳಿದ್ದಕ್ಕೆ ಕಾರಣವೆಂದರೆ, ದೇಶದ ಕೃಷಿ ಸಾಂಪ್ರದಾಯಿಕ ಪದ್ಧತಿಯಲ್ಲಿ ನಡೆಯುತ್ತಿತ್ತು. ಪ್ರತಿ ಎಕರೆಗೆ 5 ಕ್ವಿಂಟಾಲ್ ರಾಗಿ ಬೆಳೆಯುವುದು ಕಷ್ಟವಾಗಿತ್ತು. ಗೋಧಿ, ಭತ್ತ ಬೆಳೆಯುವುದು ಕಷ್ಟಕರವಾಗಿತ್ತು. ಅದನ್ನು ಸುಧಾರಣೆ ಮಾಡಿದ್ದು ಶಾಸ್ತ್ರಿಯವರು ಮತ್ತು ಅವರ ನಂತರ ಅಧಿಕಾರಕ್ಕೆ ಬಂದ ಇಂದಿರಾಗಾಂಧಿಯವರ ಕಾಲದ ಹಸಿರುಕ್ರಾಂತಿ. ಹಸಿರು ಕ್ರಾಂತಿಯ ಕಾಲದಲ್ಲಿ ಕೃಷಿ ಸಚಿವರಾಗಿದ್ದವರು ಬಾಬು ಜಗಜೀವನ್ ರಾಮ್. ನವಭಾರತವನ್ನು ಕಟ್ಟಿದ ಈ ಅನೇಕ ಮಹನೀರನ್ನು ನಾವು ನೆನೆಯದೇ ಹೋದರೆ ಅಥವಾ ಅವರ ಬದಲಿಗೆ ಖಳನಾಯಕರನ್ನು ಸೃಷ್ಟಿಮಾಡುತ್ತಾ ಹೋದರೆ, ಚರಿತ್ರೆಗೆ ಅನ್ಯಾಯ ಮಾಡುತ್ತೇವೆ ಮತ್ತು ಚರಿತ್ರೆಯಲ್ಲಿ ನಡೆದ ಘಟನೆಗಳನ್ನು ತಿರುಚುವ ದುಷ್ಟ ಪ್ರಯತ್ನಗಳನ್ನೂ ಮಾಡಿದಂತಾಗುತ್ತದೆ. ಇದು ಬಿಜೆಪಿಯ ರಾಜಕಾರಣ ಎಂದರು.

ನಮ್ಮ ಸ್ವಾಮಿ ವಿವೇಕಾನಂದರನ್ನು ಅಮೆರಿಕದಲ್ಲಿ ಹಿಂದೂ ಪರಂಪರೆಯನ್ನು ಎತ್ತಿಹಿಡಿದ ಮಹಾನ್ ಸನ್ಯಾಸಿ ಎಂದು ಬಿಂಬಿಸುತ್ತಿದ್ದರು. ಅದು ಅರ್ಧಸತ್ಯ. ಪ್ರಪಂಚದಲ್ಲಿ ಶಾಂತಿ ಬೇಡುವ ಕಾಲದಲ್ಲಿ ಶಾಂತಿಯುತವಾಗಿ ಈ ದೇಶ ಇರಬೇಕು ಎಂದು ಬಯಸುವ ಸಂದರ್ಭದಲ್ಲಿ ವಿವೇಕಾನಂದರು ವಿಶ್ವಶಾಂತಿ ಸಮ್ಮೇಳನದಲ್ಲಿ ಭಾರತದ ಅನುಭಾವಿಕ ಧಾರ್ಮಿಕ ಭಾವನೆಗಳ ಪ್ರತಿಬಿಂಬವಾಗಿ ಅಲ್ಲಿ ಮಾತಾಡಿದ್ದು ನಿಜ. ಆದರೆ ಅವರು ಪೂರ್ಣ ಸತ್ಯವನ್ನು ಮಾತಾಡಿಲ್ಲ. ಭಾರತದ ಜಾತಿ ವ್ಯವಸ್ಥೆ ಕುರಿತು ಏನಾದರೂ ಮಾತಾಡಿದ್ದರೆ, ಭಾರತದ ಅಸ್ಪೃಶ್ಯತೆ ಕುರಿತು ಮಾತಾಡಿದ್ದರೆ ಅದು ಪೂರ್ಣ ಸತ್ಯವಾಗುತ್ತಿತ್ತು. ವಿವೇಕಾನಂದರು ಜಾಗತಿಕಮಟ್ಟದಲ್ಲಿ ಇನ್ನೂ ಹೆಚ್ಚಿನ ಹೊಗಳಿಕೆಗೆ ಪಾತ್ರವಾಗುತ್ತಿದ್ದರು. ಸತ್ಯ ಹೇಳಿದ್ದಾರೆ ಎಂದು ಜನ ಅವರನ್ನು ಹೊಗಳುತ್ತಿದ್ದರು. ಅವರು ಹೇಳಿದ ಸಂಗತಿಗಳು ವಿಶ್ವಮಾನ್ಯವಾಗಿದ್ದು ಏಕೆಂದರೆ, ಅವತ್ತಿನ ತುರ್ತು ವಿಶ್ವ ಶಾಂತರೀತಿಯಲ್ಲಿರಬೇಕಿತ್ತು. ಅದನ್ನಷ್ಟೇ ಸ್ವಾಮಿ ವಿವೇಕಾನಂದರು ಅಲ್ಲಿ ಹೇಳಿದರು. ಅದು ಹಿಂದೂ ಧರ್ಮದಲ್ಲಿದೆ ಎಂದು ಹೇಳಿದ್ದರೂ ಕೂಡ ನಾವೊಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಹಿಂದೂ ಧರ್ಮದ ಕುರಿತು ಬಹಳ ಹೊಗಳಿ ಮಾತಾಡಿದರೋ ಅದೇ ವಿವೇಕಾನಂದರು ಭಾರತದಲ್ಲಿ ಮತ್ತು ವಿಶ್ವದ ಬೇರೆಬೇರೆ ಭಾಗದಲ್ಲಿ ಹಿಂದೂ ಧರ್ಮದಲ್ಲಿರುವ ಒಂದೊಂದೇ ಹುಳುಕುಗಳನ್ನು ತೆಗೆದು ಜನರ ಮುಖಕ್ಕೆ ಕನ್ನಡಿಯ ರೀತಿಯಲ್ಲಿ ಹಿಡಿದಿರುವ ಕೆಲಸವನ್ನು ಅವರ ಸಮಗ್ರ ಭಾಷಣಗಳನ್ನು ಓದಿದವರಿಗೆ ಅರ್ಥವಾಗುತ್ತದೆ. ಈಗ ಆರೆಎಸ್ಸೆಸ್, ಬಿಜೆಪಿಯವರಿಗೆ ನಾವು ಇಂತಹ ವಿವೇಕಾನಂದರನ್ನು ಜಗತ್ತಿನ ಮುಂದೆ ನಿಲ್ಲಿಸಿ ದೊಡ್ಡಮನುಷ್ಯನನ್ನಾಗಿಸಬೇಕಲ್ಲ ಎಂಬ ದೂಃಖವೂ ಇರಬಹುದು. ಅವರಿಗೆ ಅಂತಹ ದುಃಖವಿಲ್ಲವೆಂದರೆ ನನಗೆ ಸಂತೋಷ. ಅವರ ಎಲ್ಲ ವಿಚಾರಗಳನ್ನೂ ಜನರಿಗೆ ಹೇಳಬೇಕು. ಹೇಗೆ ಬಿಜೆಪಿ ನೆಹರು ಮಾಡಿದ ಒಳ್ಳೆಯ ಕೆಲಸಗಳನ್ನೆಲ್ಲ ಮರೆಮಾಚಿ ನೆಹರು ಮುಸಲ್ಮಾನರಿಗೆ ಸಹಾಯಮಾಡಿದರು ಎಂಬ ಸುಳ್ಳನ್ನು ಪ್ರತಿನಿತ್ಯ ಹೇಳುತ್ತಿದ್ದಾರೆ. ನೆಹರು ಕಟ್ಟಿದ ಅಣೆಕಟ್ಟುಗಳ ಕುರಿತು, ಅವರ ವೈಜ್ಞಾನಿಕ ಕ್ರಮಗಳನ್ನು ಕುರಿತು, ಅವರು ಕಟ್ಟಿದ ವೈಜ್ಞಾನಿಕ ಸಂಸ್ಥೆಗಳ ಕುರಿತು ನಮ್ಮ ಮುಂದೆ ಹೇಳುವುದಿಲ್ಲ. ಇಡೀ ಭಾರತದಲ್ಲಿ ಅತ್ಯಂತ ಮುಂಛೂಣಿಯಲ್ಲಿರುವ ವೈಜ್ಞಾನಿಕ ಬೆಳವಣಿಗೆಯಾಗಿದ್ದರೆ ಅದಕ್ಕೆ ಕಾರಣ ನೆಹರು ಹಾಕಿರುವ ಅಡಿಗಲ್ಲು ಎನ್ನುವುದು ನಮ್ಮ ನೆನಪಿನಲ್ಲಿರಬೇಕು. ಅದನ್ನು ಪೋಷಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿಯವರು  ಸದಾ ನಮ್ಮ ನೆನಪಿನಲ್ಲಿರಬೇಕು. ಇವರು ಈ ದೇಶವನ್ನು ಕಟ್ಟಿದ ಬಹುದೊಡ್ಡ ನಿರ್ಮಾತೃಗಳು. ಸರ್ದಾರ್ ಪಟೇಲ್ ಅವರು ಕಡಿಮೆ ಎಂದು ಭಾವಿಸಬೇಕಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಗಾಂಧಿಗಿಂತ ದೊಡ್ಡವರು ಎಂಬ ಸುಳ್ಳನ್ನು ಹೇಳಬೇಕಿಲ್ಲ. ಗಾಂಧೀಜಿಯವರ ವ್ಯಕ್ತಿತ್ವ, ಆದರ್ಶಗಳು, ಚಿಂತನೆಗಳನ್ನು ಪಾಲಿಸುವವರು ನೆಹರು ಮತ್ತು ಶಾಸ್ತ್ರಿಯಾಗಿದ್ದರೆ ಹೊರತು ಆ ಚಿಂತನೆಗಳನ್ನು ದೇಶಕ್ಕೆ ಕೊಟ್ಟವರಲ್ಲ. ಆದ್ದರಿಂದ ಅಸತ್ಯಗಳನ್ನು ಸತ್ಯಗಳೆಂದೂ ಸತ್ಯಗಳನ್ನು ಅಸತ್ಯಗಳೆಂದೂ ನಿರಂತರವಾಗಿ ಪ್ರಚಾರ ಮಾಡುವ ಮೂಲಕ ಈ ದೇಶ ಅಂತಹ ಸಂಗತಿಗಳನ್ನು ನಂಬುತ್ತದೆ ಎಂಬ ಭ್ರಮೆ ಬಹಳ ವರ್ಷಗಳ ಕಾಲ ನಡೆಯದು ಎಂದರು.

ವಾಜಪೇಯಿಯವರ 5 ವರ್ಷಗಳ ಆಡಳಿತದ ನಂತರ ಭಾರತ ಪ್ರಕಾಶಿಸುತ್ತಿದೆ (ಶೈನಿಂಗ್ ಇಂಡಿಯಾ) ಎಂಬ ಸುಳ್ಳನ್ನು ಹರಿಬಿಟ್ಟರು. ಜನ ಈ ಘೋಷಣೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ನಮ್ಮ ದೇಶದ ಪರಿಸ್ಥಿತಿಯಲ್ಲಿ ಸುಳ್ಳು ಎನ್ನುವುದನ್ನು ಅವರು ವಾಜಪೇಯಿ ಸರ್ಕಾರದ ವಿರುದ್ಧ ಮತಚಲಾಯಿಸಿದರು. ಮೋದಿ ದೇಶಕ್ಕೆ ಎಲ್ಲವನ್ನು ಕೊಟ್ಟಿದ್ದಾರೆ, ಪ್ರಗತಿಪಥದತ್ತ ದೇಶವನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಯಾರಾದರೂ ಭಾವಿಸಿದ್ದರೆ ಅದು ಮೂರ್ಖತನ. ಮೋದಿಯವರು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಅವರು ಮಾಡಿದ ಭಾಷಣಗಳನ್ನು ತೆಗೆದು ಮತ್ತೊಮ್ಮೆ ಜನರಿಗೆ ಕೇಳಿಸಿಬಿಟ್ಟರೆ ಜನ ರೊಚ್ಚಿಗೆದ್ದು ನಿಲ್ಲುತ್ತಾರೆ. 2 ಕೋಟಿ ಉದ್ಯೋಗಗಳನ್ನು ಪ್ರತಿ ವರ್ಷ ಸೃಷ್ಟಿ ಮಾಡುತ್ತೇನೆ ಎಂದ ಮೋದಿಯವರು ಇವತ್ತು ಎಲ್ಲಿಯೂ ಅದರ ಕುರಿತು ಮಾತಾಡುವುದಿಲ್ಲ. ಆ ಪ್ರಶ್ನೆಗೆ ಉತ್ತರ ಅವರ ಬಳಿ ಇಲ್ಲ. ಇರುವ ಉದ್ಯೋಗಗಳನ್ನು ಕಳೆದಿರುವ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಮತ್ತು ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಹೊಸ ಕೋಟಿ ಕೋಟಿ ಉದ್ಯೋಗಳನ್ನು ಬಿಟ್ಟುಬಿಡಿ. ಲಕ್ಷ ಲಕ್ಷ ಉದ್ಯೋಗಗಳನ್ನೂ ಸೃಷ್ಟಿಸುವುದಕ್ಕೆ ಸಾಧ್ಯವಾಗಲಿಲ್ಲ. ಸಣ್ಣ ಉದ್ದಿಮೆಗಳಲ್ಲಿ ಶೇ. 50ರಷ್ಟು ಉದ್ಯೋಗಗಳು ನಷ್ಟವಾಗಿವೆ ಮತ್ತು ಕೈಗಾರಿಕೆಗಳನ್ನು ಮುಚ್ಚಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದ್ದ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿದ್ದು, ಪುನರುಜ್ಜೀವನ ಆಗುವ ಲಕ್ಷಣಗಳು ಕಾಣುತ್ತಿಲ್ಲ. ನಿರುದ್ಯೋಗ ಸಮಸ್ಯೆಗೆ ನರೇಂದ್ರಮೋದಿಯವರು ಯಾವ ಉತ್ತರವನ್ನೂ ಕೊಡದೆ, ಜನರನ್ನು ದಾರಿತಪ್ಪಿಸುವ ಸಲುವಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಮಹಾತ್ಮಾ ಗಾಂಧಿಯವರಿಗಿಂತ ದೊಡ್ಡವರು ಎಂಬ ಸುಳ್ಳನ್ನು ಮತ್ತೆಮತ್ತೆ ಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ನೆಹರು ಅವರಿಗಿಂತ ಪಟೇಲ್ ದೊಡ್ಡ ನಾಯಕರಾಗಿದ್ದರು ಎಂಬ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಪ್ರಚಾರಗಳು ನಡೆಯುತ್ತಿರುವುದು ಏಕೆ? ಈಗ ಸ್ವಾತಂತ್ರ್ಯ ಹೋರಾಟದ ಕುರಿತು ಬಿಜೆಪಿಯವರು ಎಲ್ಲಿಯೂ ಮಾತಾಡುವುದಿಲ್ಲ. ಏಕೆಂದರೆ ಜನಸಂಘದ ಅನೇಕ ನಾಯಕರು ಬ್ರಿಟಿಷ್ ಅಧಿಕಾರಿಗಳಿಗೆ ಮುಚ್ಚಳಿಕೆಯನ್ನು ಬರೆದುಕೊಟ್ಟು ನಾನು ಈ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಅವರ ಜೊತೆಗೆ ಶಾಮೀಲಾದವರು. ಇದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ಅನೇಕ ಪುಸ್ತಕಗಳು ಬಂದಿವೆ. ಅದರ ದಾಖಲೆಗಳು ನಮ್ಮ ಆರ್ಕಿಯಲಾಜಿಯಲ್ಲಿ ಲಭ್ಯವಿವೆ. ನೀವೆಲ್ಲ ಪರಿಶೀಲನೆ ಮಾಡಬಹುದು. ಆದರೆ ದೊಡ್ಡಸಂಖ್ಯೆಯಲ್ಲಿರುವ ನಮ್ಮ ಹೊಸತಲೆಮಾರಿನ ಯುವಕರಿಗೆ ಸತ್ಯಗಳ ಅರಿವಿನ ಕೊರತೆ ಇದೆ. ಬದಲಿಗೆ ಚರಿತ್ರೆಯನ್ನು ತಿರುಚಿ ಹೇಳುವ ಕುರಿತು ಆಸಕ್ತಿ ಇದೆ. ನಮ್ಮ ದೇಶದಲ್ಲಿ ಕಳೆದ 20 ವರ್ಷಗಳಲ್ಲಿ ಕೆಲವು ಚರ್ಚೆಗಳು ನಡೆಯುತ್ತಿವೆ ಎಂದರು.

ಮೀಸಲಾತಿಯಿಂದ ದೇಶ ಹಾಳಾಗುತ್ತಿದೆ. ಅದನ್ನು ತೆಗೆದುಹಾಕಬೇಕು ಎಂದು ಮೊದಲು ಹೋರಾಟ ನಡೆದದ್ದು ಗುಜರಾತ್ ನಲ್ಲಿ. ಇದಕ್ಕೆ ಬೆಂಬಲಕೊಟ್ಟವರು ಬಿಜೆಪಿಯವರು. ಇಂದು ಅದೇ ಬಿಜೆಪಿಯವರು ಹಿಂದುಳಿದ ವರ್ಗಗಳ ಚಾಂಪಿಯನ್ ಆಗಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಸಿಕ್ಕ ಸಣ್ಣ ಅವಕಾಶವನ್ನು ಬಿಡುತ್ತಿಲ್ಲ. ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲಿದ್ದ ಮೀಸಲಾತಿಯನ್ನು ಸಮಾಜದ ಎಲ್ಲ ವರ್ಗಗಳಿಗೆ ವಿಸ್ತರಿಸಿದ ಕೀರ್ತಿ ಬಿಜೆಪಿಗೆ ಬಂದಿದೆ. ತಾವು ಅಧಿಕಾರಕ್ಕೆ ಬರುವವರೆಗೆ ಮೀಸಲಾತಿ ಈ ದೇಶದ ಪ್ರತಿಭೆಯನ್ನು ಹಾಳುಮಾಡುತ್ತದೆ ಎಂದು ಪ್ರಚಾರ ಮಾಡಿದವರು, ಇವತ್ತು ಮೀಸಲಾತಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿ ಯೂ ಟರ್ನ್ ಹೊಡೆದಿರುವುದನ್ನು ನೀವು ನೋಡುತ್ತಿದ್ದೀರಿ. ಹೀಗೆ ಯೂಟರ್ನ್ ಹೊಡೆಯುವ ಕೆಲಸವನ್ನು ಚರಿತ್ರೆಯ ಎಲ್ಲ ಸಂದರ್ಭಗಳಲ್ಲಿ ಮಾಡಿರುವವರು ಜನಸಂಘದವರು. ಜನಸಂಘವನ್ನು ಇಟ್ಟುಕೊಂಡು ನೀವು ಚರಿತ್ರೆಯನ್ನು ಓದಿದರೆ, ಜಸಂಘದ ನಾಯಕರ ಚರಿತ್ರೆಯನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿದರೆ, ಅವರು ಯಾವೆಲ್ಲ ಸಂದರ್ಭಗಳಲ್ಲಿ ಹೇಗೆಲ್ಲ ಕೆಲಸ ಮಾಡುತ್ತಿದ್ದರು ಎಂಬ ಸಂಗತಿ ನಿಮ್ಮ ಗಮನಕ್ಕೆ ಬರುತ್ತದೆ ಎಂದರು.    

ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಗಾಂಧೀಜಿಯವರಿಗೆ ಹೋಲಿಸುವುದೇ ಬಿಗ್ ಕ್ರೈಮ್. ಶಾಸ್ತ್ರಿಯವರೇ, ಮಹಾತ್ಮಾ ಗಾಂಧೀಜಿಯವರು ನನ್ನ ಆಧ್ಯಾತ್ಮಿಕ ಗುರು ಎಂದು ಅವರು ಒಪ್ಪಿಕೊಂಡಿದ್ದಾರೆ. ಗಾಂಧೀಜಿಯವರು ಬೋಧಿಸಿದ್ದನ್ನು ಶಾಸ್ತ್ರಿಯವರು ಸಾಕ್ಷಾತ್ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಬಹುಷಃ ನೆಹರು ಅವರ ಮಂತ್ರಿಮಂಡಲದಲ್ಲಿದ್ದ ಎಲ್ಲ ಸಚಿವರುಗಳಲ್ಲಿ ಅತ್ಯಂತ ಪ್ರಾಮಾಣಿಕವಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿ. ಗಾಂಧೀಜಿಯವರು ಪ್ರಾಮಾಣಿಕತೆ ರಾಜಕೀಯದಲ್ಲಿ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬನ ಪ್ರತಿಜ್ಞೆಯಾಗಬೇಕು ಎಂದು ಬಯಸಿದವರು. ಮತ್ತು ತಾವು ಸ್ವತಃ ಆರೀತಿಯ ಪ್ರಾಮಾಣಿಕತೆಯಿಂದ ಬದುಕಿದವರು ಗಾಂಧೀಜಿ. ತಮ್ಮ ನಂಬಿಕೆ ತಪ್ಪಾಗಿದ್ದರೆ, ಅದನ್ನು ತಪ್ಪು ಎಂದು ಯಾರಾದರೂ ಮನವರಿಕೆ ಮಾಡಿಕೊಟ್ಟರೆ ಗಾಂಧೀಜಿಯವರು ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ದೇಶದ ಎಲ್ಲ ಜನರಿಗೆ ವಿಶೇಷವಾಗಿ ಅಸ್ಪೃಶ್ಯರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲವೆಂದರೆ ನಾನು ಯಾವ ದೇವಸ್ಥಾನಗಳಿಗೂ ಪ್ರವೇಶ ಮಾಡುವುದಿಲ್ಲ ಎಂದು ತೀರ್ಮಾನ ತೆಗೆದುಕೊಂಡು ಪುರಿಯ ಜಗನ್ನಾಥ ದೇವಾಲಯಕ್ಕೆ ಆಹ್ವಾನಿಸಿದರೂ ಹೋಗಲಿಲ್ಲ. 2ನೆಯದು ಉಡುಪಿಗೆ ಬಂದ ಸಮಯದಲ್ಲಿ ಉಡುಪಿಯ ಕೃಷ್ಣಮಂದಿರದ ಮುಂದೆಯೇ ಅವರ ವಾಹನ ಹೋಗುತ್ತಿದ್ದ ಸಮಯದಲ್ಲಿ ಅನೇಕ ಮಹನೀಯರು ಅವರನ್ನು ದಯವಿಟ್ಟು ಕೃಷ್ಣ ದೇವಸ್ಥಾನಕ್ಕೆ ಬರಬೇಕು ಎಂದು ಆಹ್ವಾನಿಸಿದ ಸಮಯದಲ್ಲಿ ಪಕ್ಕದಲ್ಲಿ ಕುಳಿತವರ ಕಿವಿಯಲ್ಲಿ ಗಾಂಧಿ ಈ ದೇವಸ್ಥಾನಕ್ಕೆ ಹರಿಜನರಿಗೆ ಪ್ರವೇಶವಿದೆಯೇ ಎಂದು ಕೇಳುತ್ತಾರೆ. ಇಲ್ಲವೆಂದು ಗೊತ್ತಾದ ನಂತರ ಆ ಸಂದರ್ಭದಲ್ಲಿ ನಾನು ಹರಿಜನರನ್ನು ದೇವಸ್ಥಾನದೊಳಗೆ ಸೇರಿಸದೆ ಇರುವ ಕಾರಣಕ್ಕೆ ಒಳಗೆ ಬರುವುದಿಲ್ಲ ಎಂದು ಹೇಳಲಿಲ್ಲ. ಅವರಿಗೂ ಮನನೋಯಿಸದ ರೀತಿಯಲ್ಲಿ ಈ ದೇವಸ್ಥಾನ ಪ್ರವೇಶ ಮಾಡುವ ಅಗತ್ಯ ನನಗಿಲ್ಲ. ನಡೆಯಿರಿ ಮುಂದಕ್ಕೆ ಎಂದು ಹೊರಟುಹೋಗುತ್ತಾರೆ. ಅದರ ಹಿಂದೆ ಇದ್ದ ಸತ್ಯವೆಂದರೆ ಎಲ್ಲ ಸಮುದಾಯಗಳಿಗೆ ದೇವಸ್ಥಾನದ ಪ್ರವೇಶದ ಅವಕಾಶ ಇಲ್ಲವಾದರೆ ನಾನು ಆ ದೇವಸ್ಥಾನಕ್ಕೆ ಪ್ರವೇಶ ಮಾಡುವುದಿಲ್ಲ ಎನ್ನುವುದು ಅವರ ತೀರ್ಮಾನವಾಗಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡ ಇದನ್ನೇ ತಮ್ಮ ಜೀವನದ ಪರಮಮಂತ್ರವಾಗಿಟ್ಟುಕೊಳ್ಳುತ್ತಾರೆ. ಈ ದೇಶದ ಬಗೆಗೆ ಅತ್ಯಂತ ಅಭಿಮಾನವಿರುವ ಮತ್ತು ಸಹನಶೀಲ ಗುಣವಿರುವ ವ್ಯಕ್ತಿ ಶಾಸ್ತ್ರಿ ಎಂದು ನೆಹರು ಹೇಳುತ್ತಾರೆ. ಇವೆಲ್ಲ ಗುಣಗಳನ್ನು ಬೋಧಿಸಿದವರು ಗಾಂಧೀಜಿ. ಹಾರ್ಡ್ ವರ್ಕ್ = ಪ್ರೇಯರ್ ಎಂದು ಗಾಂಧೀಜಿ ಹೇಳಿದ್ದರು. ಶಾಸ್ತ್ರಿಯವರು ಅದನ್ನು ಪಾಲಿಸಿದರು. ನಾನು ಪ್ರಾರ್ಥನೆ ಮಾಡುವುದೆಂದರೆ ಸದಾ ಜನಸೇವೆಯಲ್ಲಿ ತೊಡಗಿಕೊಂಡಿರುವುದು ಎಂದು ಶಾಸ್ತ್ರಿ ಹೇಳುತ್ತಾರೆ. ಭಾರತದ ಅತ್ಯುತ್ತಮ ಸಂಸ್ಕೃತಿಯನ್ನು ಶಾಸ್ತ್ರಿ ಪ್ರತಿನಿಧಿಸುತ್ತಾರೆ ಎಂದು ಗಾಂಧಿ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಹೊಗಳಿಕೆ ಯಾವುದೂ ಬೇಕಾಗಿಲ್ಲ. ಇಂದು ಬಿಜೆಪಿಯವರು ಮಾಡುತ್ತಿರುವ ಅಪಪ್ರಚಾರಗಳಿಗೆ ನಾವು ಕಿವಿಗೊಡಬೇಕಿಲ್ಲ. ಆದರೆ ಕಿವಿಗೊಡಲೇಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಪ್ರಧಾನಿಗಳು ಸುಳ್ಳುಗಳನ್ನು ಪುಂಖಾನುಪುಂಖವಾಗಿ ಹೇಳುತ್ತಿದ್ದರೆ ನಾವು ಕೇಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಇದೆ. ಸ್ವಾತಂತ್ರ್ಯ ಚಳುವಳಿ, ಅನಂತರದ ಆಡಳಿತ, ದೇಶದ ಪರಂಪರೆಯ ಬಗ್ಗೆ ಸುಳ್ಳು ಹೇಳುತ್ತಾರೆ. ದೇಶದಲ್ಲಿರುವ ಧಾರ್ಮಿಕ ಸಹಬಾಳ್ವೆಯ ಪರಂಪರೆಯನ್ನು ಒಡೆದು ಹಾಕಿ, ಅದನ್ನು ದ್ವೇಷದ ರಾಜಕಾರಣಕ್ಕೆ ತಿರುಗಿಸಿ ತಾವು ಅಧಿಕಾರಕ್ಕೆ ಬರುವ ಸಫಲ ಪ್ರಯತ್ನವನ್ನು ಈಗಾಗಲೆ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ, ಇಂದು ನಾವು ಮಾಡಬೇಕಿರುವ ಕೆಲಸ ಶಾಸ್ತ್ರಿ, ಗಾಂಧಿಯವರಿಂದ ಕಲಿಯಬೇಕಿರುವುದೇನೆಂದರೆ, ಸಹಬಾಳ್ವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಗಾಂಧೀಜಿಯವರು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆ ನಮ್ಮ ಮುಂದಿದೆ. ಗಾಂಧೀಜಿಯವರನ್ನು ಕೊಂದವನು ಹೇಳುವುದೇನೆಂದರೆ, ಹಿಂದೂ ವಿರೋಧಿಯಾಗಿದ್ದರು, ಅವರು ಮುಸಲ್ಮಾನರ ಪರವಾಗಿ ಹೋರಾಟಮಾಡುತ್ತಿದ್ದರು. ಅದಕ್ಕೆ ನಾನವರನ್ನು ಕೊಂದೆ ಎನ್ನುತ್ತಾನೆ. ನಮ್ಮ ದೇಶದಲ್ಲಿ ಬಹುಷಃ ಗಾಂಧೀಜಿಯವರಿಗಿಂತಲೂ ಪವಿತ್ರ ಹಿಂದೂ ಮತ್ತಾರೂ ಇಲ್ಲ. ಪವಿತ್ರ ಹಿಂದೂ ಎಂದರೆ ಎಲ್ಲ ಸಮುದಾಯಗಳನ್ನೂ ಗೌರವಿಸುವ “ಸರ್ವೇ ಜನಾಃ ಸುಖಿನೋ ಭವಂತು” ಇದು ಕೇವಲ ಪುಸ್ತಕದ ಬದನೆಕಾಯಿ ಆಗಬಾರದು ಎಂದು ಪ್ರಾಮಾಣಿಕವಾಗಿ ನಂಬಿದವರು ಗಾಂಧೀಜಿ, ನೆಹರು, ಶಾಸ್ತ್ರಿ, ಪಟೇಲರು. ಆದರೆ ಈ ಎಲ್ಲರ ವ್ಯಕ್ತಿತ್ವಕ್ಕೆ ಮಸಿಬಳಿಯುವ ರೀತಿಯಲ್ಲಿ ತಿರುಚಿ ಅವರನ್ನು ಖಳನಾಯಕರನ್ನಾಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಅಧಿಕಾರವನ್ನು ಉಳಿಸುವ ಕ್ರಮ ಇರಬಹುದು, ಆದರೆ ದೇಶವನ್ನು ಉಳಿಸಿಕೊಳ್ಳುವ ಕ್ರಮ ಅಲ್ಲ. ದೇಶದಲ್ಲಿ ಎಲ್ಲರೂ ನಂಬಿಕೆಯಿಂದ ಅಣ್ಣತಮ್ಮಂದಿರಂತೆ, ಗಾಂಧಿ ಕಂಡ ನಿಜವಾದ ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವ ಕ್ರಿಯೆ ಇದು ಅಲ್ಲ. ಆದ್ದರಿಂದ ಈ ಕುರಿತು ತುಂಬಾ ಎಚ್ಚರಿಕೆಯಿಂದ ನಾವು ಇರಬೇಕು. ಚರಿತ್ರೆಯಲ್ಲಿ ನಡೆದ ಪ್ರತಿಯೊಂದು ಘಟನೆಯನ್ನೂ ನಾವು ವಿಶ್ಲೇಷಣೆ ಮಾಡುವಾಗ ಅವತ್ತಿನ ಕಾಲಮಾನದಲ್ಲಿ ನಿಂತು ವಿಶ್ಲೇಷಣೆ ಮಾಡಬೇಕು. ಇವತ್ತಿಗೆ ತಂದು ವಿಶ್ಲೇಷಣೆ ಮಾಡಬಾರದು. ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ರು ಯಾರೇ ಇರಲಿ ಚರಿತ್ರೆಯ ಘಟನೆಯೊಂದನ್ನು ಅನಾಮತ್ತಾಗಿ ಎತ್ತಿಕೊಂಡು ಇವತ್ತಿನ ಸಂದರ್ಭಕ್ಕೆ ಅದನ್ನು ಇಟ್ಟು, ಇದು ಹೀಗಿರಬೇಕಾಗಿತ್ತು ಹಾಗೆ ಇದ್ದದ್ದು ತಪ್ಪು ಎಂದು ಹೇಳುವುದು ಅಭಿಪ್ರಾಯವಾದರೆ ಸಂತೋಷ. ಪುನರ್ ರೂಪಿಸುತ್ತೇವೆ ಎಂದು ಹೊರಡುವುದು ಅತ್ಯಂತ ಅಪಾಯಕಾರಿ. ಬಿಜೆಪಿ ಸರ್ಕಾರಗಳಿಗೆ ಇನ್ನೊಂದು ಚಟವಿದೆ. ಅನೇಕ ಹೆಸರುಗಳನ್ನು ಬದಲಾಯಿಸುವ ಚಟಕ್ಕೆ ಬಿಜೆಪಿಯವರು ಬಿದ್ದಿದ್ದಾರೆ. ಹೆಸರುಗಳು ಘಟನೆಗಳು ಕಾಲ ಹೇಗೆ ಬದಲಾಯಿತು ಎಂಬ ನೆನಪನ್ನು ಕೊಡುತ್ತವೆ. ಆದರೆ, ನೂರಾರು, ಸಾವಿರಾರು ವರ್ಷಗಳ ನಂತರ ನಮ್ಮ ಮಕ್ಕಳು ತಪ್ಪು ಅಭಿಪ್ರಾಯ ಹೊಂದಬಾರದು ಎಂಬ ತಿಳಿವಳಿಕೆ ಇದ್ದರೆ ಚರಿತ್ರೆಯನ್ನು ಯಥಾವತ್ತಾಗಿ ಹೇಳುವ ಕೆಲಸವನ್ನು ನಾವು ಮಾಡಬೇಕು. ಚರಿತ್ರೆಯನ್ನು ಯಥಾವತ್ತಾಗಿ ಹೇಳುವುದರಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ಚರಿತ್ರೆಯನ್ನು ನಾನು ನೋಡುವ ಕ್ರಮ ಇನ್ನೊಬ್ಬರು ನೋಡುವ ಕ್ರಮಕ್ಕಿಂತ ಭಿನ್ನ. ಕಮ್ಯುನಿಸ್ಟ್ ಚಿಂತಕ ನೋಡುವ ಕ್ರಮ ಒಬ್ಬ ಸಂಪ್ರದಾಯವಾದಿ ನೋಡುವ ಕ್ರಮಕ್ಕಿಂತ ಭಿನ್ನವಾಗಿರುತ್ತದೆ. ಹಾಗಾದರೆ ಯಾರ ಮಾತನ್ನು ಒಪ್ಪಬೇಕು? ಎಂದರೆ ಕಮ್ಯುನಿಸ್ಟ್ ಚಿಂತಕ ಈ ಘಟನೆಯನ್ನು ಹೀಗೆ ವಿಶ್ಲೇಷಿಸುತ್ತಾರೆ, ಸಾಂಪ್ರದಾಯಿಕ ಬುದ್ಧಿಜೀವಿ ಈ ಘಟನೆಯನ್ನು ಹೀಗೆ ವಿಶ್ಲೇಷಿಸುತ್ತಾರೆ ಎಂಬ ಎರಡೂ ಅಭಿಪ್ರಾಯಗಳನ್ನು ಕೊಡುವ ಮೂಲಕ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದನ್ನು ನಾವು ಅವರಿಗೆ, ಅವತ್ತಿನ ಕಾಲಮಾನದವರಿಗೆ ಬಿಡಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಅನೇಕ ಘಟನೆಗಳನ್ನು ಇಂದು ನಾನು ವಿಶ್ಲೇಷಣೆ ಮಾಡಿ ಅದು ಸರಿ, ಇದು ತಪ್ಪು ಎಂದು ಹೇಳಿದರೆ ಅದು ಮೂರ್ಖತನವಾಗುತ್ತದೆ. ಅವತ್ತಿನ ಘಟನೆ ಹೀಗಿತ್ತು, ಹೀಗಿರಬೇಕಾಗಿತ್ತು ಎನ್ನುವುದಲ್ಲ. ಆ ಘಟನೆ ಹೀಗಿತ್ತು. ಅದನ್ನು ನೀನು ಹೇಗೆ ನೋಡುವೆ, ನಾನು ಹೇಗೆ ನೋಡುವೆ, ಬಹುಸಂಖ್ಯಾತರು ಇದನ್ನು ಹೇಗೆ ನೋಡುತ್ತಾರೆ ಅನ್ನುವುದರ ಮೇಲೆ ಅಭಿಪ್ರಾಯವನ್ನು ರೂಪಿಸಬೇಕು ಎಂದರು.

ಚರಿತ್ರೆಯನ್ನು ತಿರುಚುವ ಮೂಲಕ ಹೊಸ ಸಮಾಜವನ್ನು ಕಟ್ಟುತ್ತೇವೆ ಎಂಬುದು ಶುದ್ಧಾಂಗ ಸುಳ್ಳು. ಅದು ಜನರಿಗೆ ಮಾಡುವ ಮೋಸ. ಪ್ರೀತಿಯಿರುವ ಜನರಿಗೆ, ಸಂಪ್ರದಾಯಬದ್ಧ ಜನರಿಗೆ, ನಿಜವಾಗಿಯೂ ಒಳ್ಳೆಯದನ್ನು ಮಾಡುವ, ಈ ಸಮಾಜವನ್ನು ನಿಜವಾಗಿಯೂ ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದು ಬಯಸುವ ಜನರಿಗೆ ಮಾಡುವ ಮೋಸ. ಬಿಜೆಪಿಯವರು ಇನ್ನೊಂದು ಸಂಗತಿಯನ್ನು ಹೇಳುತ್ತಾರೆ. ನಮ್ಮ ನಂಬಿಕೆಗಳಲ್ಲಿ ಬಹಳ ಸತ್ಯ ಇದೆ, ಅದಕ್ಕೆಲ್ಲ ಆಧಾರ ಇದೆ ಎಂದು ಹೇಳುತ್ತಾರೆ. ನಮ್ಮ ಅನೇಕ ಮೂಢನಂಬಿಕೆಗಳಿಗೆ, ಬಾಲ್ಯವಿವಾಹಕ್ಕೆ, ಸತಿಪದ್ಧತಿಗೆ, ಬಹುಸಂಖ್ಯಾತರು ಅಕ್ಷರವನ್ನೇ ಕಲಿಯಬಾರದು ಎಂದು ಹೇಳುವುದಕ್ಕೆ ಸತ್ಯ, ವೈಜ್ಞಾನಿಕ ಕಾರಣ ಎಲ್ಲಿದೆ? ಮನುಸ್ಮೃತಿಯಲ್ಲಿರುವ ಅನೇಕ ಅಮಾನುಷವಾದ, ಹಿಂಸಾಸ್ವರೂಪದ ನಂಬಿಕೆಗಳನ್ನು ನಾವು ಇಂದು ಏನಾದರೂ ನಮ್ಮಂತಹ ಅನಾಗರಿಕ ಸಮಾಜ ಇನ್ನೊಂದು ಇರಲು ಸಾಧ್ಯವಿಲ್ಲ. ಅದಕ್ಕೆ ಬಹಳ ಹಿಂದೆ ಅಂಬೇಡ್ಕರ್ ಅವರು, ಸಿಟ್ಟಿಗೆದ್ದು ಮನುಸ್ಮೃತಿಯನ್ನು ಸುಟ್ಟು ಹಾಕಿದರು. ಆದರೆ ಇವತ್ತು ವಿಜೃಂಭಿಸುವ ಕೆಲಸವನ್ನು ಮಾಡಲಾಗುತ್ತಿದೆ. ಘೋಡ್ಸೆಗೆ ದೇವಸ್ಥಾನ ಕಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಗಾಂಧೀಜಿಯನ್ನು ದೇಶದ್ರೋಹಿ ಎಂದು ಕರೆಯುವ ಕೆಲಸವನ್ನು ಮಾಡಲಾಗುತ್ತಿದೆ. ಒಂದು ಕಡೆ ಮಹಾತ್ಮ ಎನ್ನುವುದು, ಸ್ವಚ್ಛ ಭಾರತಕ್ಕೆ ಗಾಂಧೀಜಿಯವರ ಕನ್ನಡಕವನ್ನು ಪ್ರತಿಮೆಯಾಗಿ ಇಡುವುದು, ನಮ್ಮ ಅನೇಕ ಕೆಲಸ ಕಾರ್ಯಗಳಿಗೆ ಗಾಂಧೀಜಿಯವರು ನಮ್ಮ ರಾಮರಾಜ್ಯದ ಪರಿಕಲ್ಪನೆ ಎಂದು ಹೇಳಿ ಅವರನ್ನು ಪೂಜೆ ಮಾಡುವುದು, ಆದರೆ, ಇನ್ನೊಂದು ಕಡೆ ಘೋಡ್ಸೆಗೆ ದೇವಸ್ಥಾನ ಕಟ್ಟಿಸುವವರಿಗೆ ಪ್ರೋತ್ಸಾಹವನ್ನೂ ಕೊಡುವ ಕೆಲಸವನ್ನು ಮೌನವಾಗಿ ಸರ್ಕಾರ ಸ್ವೀಕಾರ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಸರಿ? ನಿಜವಾದ ದೇಶದ್ರೋಹಿಗಳು ಅವರಾ? ಅಥವಾ ಗಾಂಧೀಜಿ ದೇಶಪ್ರೇಮಿ, ಗಾಂಧೀಜಿ ಮಹಾತ್ಮಾ ಎಂದು ಹೇಳುವವರು ದೇಶದ್ರೋಹಿಗಳಾ? ಇದು ಇತ್ಯರ್ಥವಾಗಬೇಕಲ್ಲವೇ? ಯಾರ ಮೇಲೆ ದೇಶದ್ರೋಹದ ಆರೋಪ ಹೊರಿಸಬೇಕು ಎನ್ನುವುದನ್ನು ಚರಿತ್ರೆ ನಿರ್ಧಾರ ಮಾಡಬೇಕು. ಆದರೆ, ಇಂದು ನಾವು ಪ್ರವಾಹದ ವಿರುದ್ಧ ದಿಕ್ಕಿಗೆ ಈಜುವ ಕೆಲಸವನ್ನು ಮಾಡುತ್ತಿದ್ದೇವೆ. ಚರಿತ್ರೆಯನ್ನು ಅಪವ್ಯಾಖ್ಯಾನ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ. ಅದೇರೀತಿ ನಮ್ಮ ನಾಯಕರುಗಳನ್ನು ಖಳನಾಯಕರನ್ನಾಗಿಸುವ, ಖಳನಾಯಕರನ್ನು ನಾಯಕರನ್ನಾಗಿಸುವ ಕೆಲಸವನ್ನು ಬಲಪಂಥೀಯ ನಂಬಿಕೆ ಹೊಂದಿರುವ ರಾಜಕಾರಣ ಮಾಡುತ್ತಿದೆ.  ಇದು ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಈ ಚಿಂತನೆಯನ್ನು ಮುಂದಿನ ತಲೆಮಾರು ಪ್ರಜ್ಞಾವಂತರಾಗಿ ನಮ್ಮನ್ನು ತುಂಬಾ ದೂಷಣೆ ಮಾಡುತ್ತದೆ. ಅಧಿಕಾರಕ್ಕಾಗಿ ನಾವು ಏನು ಬೇಕಾದರೂ ಮಾಡಿದ್ದೇವೆ ಎನ್ನುವ ತಿಳಿವಳಿಕೆ ಅವರಿಗೆ ಬಂದರೆ ನಮ್ಮನ್ನೆಲ್ಲ ಪ್ರಶ್ನಿಸುತ್ತಾರೆ. ಅದಕ್ಕಿಂತ ದೊಡ್ಡ ಆಘಾತಕಾರಿ, ದೇಶದ್ರೋಹಿ ಚಿಂತನೆ ಬಹುಷಃ ಎಲ್ಲೂ ಇರಲಿಕ್ಕಿಲ್ಲ. ಈ ಕುರಿತು ನಾವು ಎಚ್ಚರಿಕೆಯಿಂದ ನಮ್ಮ ಹೊಸ ತಲೆಮಾರಿಗೆ ನಮ್ಮ ಚಿಂತನೆಗಳನ್ನು ರವಾನಿಸುವ, ನಮ್ಮ ಚಿಂತನೆಗಳನ್ನು ಮುಂದುವರೆಸುವ, ಆ ಪ್ರವಾಹವನ್ನು ಹರಿಯುವಂತೆ ಮಾಡುವ ಕೆಲಸವನ್ನು ಮಾಡಬೇಕಿದೆ. ಆ ದಿಕ್ಕಿನಲ್ಲಿ ಗಾಂಧಿ, ನೆಹರು, ಪಟೇಲ್, ಶಾಸ್ತ್ರಿ ಚಿಂತನೆಗಳು ಹೆಚ್ಚು ಮುಖ್ಯವಾಗುತ್ತವೆ ಎಂದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು