March 25, 2023 4:44 pm

ಕನಕನ ರಾಮಧಾನ್ಯ ಚರಿತ್ರೆಯ ಹೊಳಹುಗಳು

Dr. Pradeep Malgudi

ಕನ್ನಡ ಸ್ನಾತಕೋತ್ತರ ಪದವೀಧರರಾದ ಡಾ. ಪ್ರದೀಪ್ ಮಾಲ್ಗುಡಿಯವರು ಬೆಂಗಳೂರಿನಲ್ಲಿ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಎಂ.ಫಿಲ್, ಪಿಎಚ್.ಡಿ., ಪದವಿಗಳನ್ನು ಕನ್ನಡ ವಿವಿಯಿಂದ ಪಡೆದಿದ್ದಾರೆ. ಅನಂತರ ಮೈಸೂರಿನ ಕನ್ನಡ ಜನಮನ, ರಾಜ್ಯಧರ್ಮ ಪತ್ರಿಕೆಗಳ ಸಂಪಾದಕೀಯ ಪುಟ ನಿರ್ವಹಣೆ, ಸುದ್ದಿ ಟಿವಿಯಲ್ಲಿ ಇನ್ ಪುಟ್ ಮುಖ್ಯಸ್ಥ, ಡೆಮಾಕ್ರಟಿಕ್ ಟಿವಿಯಲ್ಲಿ ಕಾರ್ಯನಿರ್ವಹಾಕ ಸಂಪಾದಕ ಮತ್ತು ಜನಸಂಸ್ಕೃತಿ ಮಾಸಿಕ ಹಾಗೂ ಮಾಲ್ಗುಡಿ ಎಕ್ಸ್ ಪ್ರೆಸ್ ವೆಬ್ ತಾಣದ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಕಾಂಗ್ರೆಸ್ ಸೇವಾದಳ, ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳ ನಡುವೆ ಜನರ ನೆಮ್ಮದಿಯ ಜೀವನ ಕರಗುತ್ತಿದೆ. ಜಾಹೀರಾತು ಪ್ರಪಂಚ ವಿಶ್ವವನ್ನು ಆಳುತ್ತಿರುವ ಪರಿಣಾಮದಿಂದ ‘ಸಮ್ಮತಿ’ ಪಡೆಯುವ ಅಥವಾ ಅದನ್ನು ‘ಉತ್ಪಾದಿಸುವ’ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಇದಕ್ಕೆ ಬೃಹತ್ ಬಂಡವಾಳ ಹೂಡಿರುವ ದೇಶಗಳ ನವ ಸಾಮ್ರಾಜ್ಯಶಾಹಿ ಧೋರಣೆಯೇ ಕಾರಣ. ಬೃಹತ್ ಕೈಗಾರಿಕೆಗಳ ಲಾಭದಾಸೆಗೆ ದೇಶೀ ಉದ್ದಿಮೆಗಳು, ಆಹಾರ ಪದ್ಧತಿ, ಚಿಂತನ ಕ್ರಮಗಳು ನಶಿಸುತ್ತಿವೆ. ಈಗಾಗಲೇ ಉತ್ಪಾದಿಸಲ್ಪಟ್ಟಿರುವ ವಸ್ತುಗಳಿಗೆ ಮಾರುಕಟ್ಟೆ ಸೃಷ್ಟಿಸುವ ಕೆಲಸವನ್ನು ಜಾಹೀರಾತುಗಳು ಮಾಡುತ್ತಿವೆ. ಇದರಿಂದ ಕನ್ನಡ, ಕನ್ನಡ ಸಂವೇದನೆಗಳೂ ಪರಿಧಿಗೆ ತಳ್ಳಲ್ಪಟ್ಟಿವೆ. ಇಂಥ ಹೊತ್ತಿನಲ್ಲಿ ಮಧ್ಯಕಾಲದಲ್ಲಿ ಅಸ್ತಿತ್ವದಲ್ಲಿದ್ದ ವಿವಿಧ ಸಂಘರ್ಷದ ಸ್ವರೂಪವನ್ನು ದಾಖಲಿಸಲು ಇತಿಹಾಸವು ಸೋತಿರುವಲ್ಲಿ ಕನಕದಾಸನ ರಾಮಧಾನ್ಯ ಚರಿತ್ರೆ ಕೃತಿ ಗೆದ್ದಿದೆ.

ರಂಗನಾಥ ಕಂಟನಕುಂಟೆಯವರ “ರಾಮಧಾನ್ಯ, ಮಾರುಕಟ್ಟೆ ಮತ್ತು ಆಹಾರ ರಾಜಕಾರಣದ ಹೊಸ ಸವಾಲು” ಎಂಬ ಲೇಖನದಲ್ಲಿ ವ್ಯಕ್ತವಾಗಿರುವ “ಕಳೆದ ಹಲವು ಶತಮಾನಗಳ ಹಿಂದೆ ಕವಿ ಇಲ್ಲವೆ ಸಂತನೊಬ್ಬ ಎತ್ತಿದ ಸಾಮಾಜಿಕ ಅಸಮಾನತೆಯ ಪ್ರಶ್ನೆ ನಮ್ಮ ಸಮಾಜದಲ್ಲಿ ಬಗೆಹರಿಯದೇ ಉಳಿದಿರುವುದನ್ನು ಇದು ಸೂಚಿಸುತ್ತದೆ. ಇಂತಹ ಹಲವು ಸಾಮಾಜಿಕ ಸಮಸ್ಯೆಗಳನ್ನು ಕುರಿತು ಬುದ್ದನಿಂದ ಆರಂಭವಾಗಿ ಅಂಬೇಡ್ಕರ್ ಮತ್ತು ಆ ನಂತರದಲ್ಲಿ ಎತ್ತಿರುವ ಅನೇಕ ಪ್ರಶ್ನೆಗಳು ಬಗೆಹರಿಯದೆ ಹಾಗೆಯೇ ಉಳಿದಿವೆ”ಎಂಬ ಅಂಶ ಸಮಾಜದ ಸ್ಥಗಿತ ಸ್ಥಿತಿಯನ್ನು ಕುರಿತ ಅಭಿಪ್ರಾಯವಾಗಿದೆ. ಭಾರತದಲ್ಲಿ ಸಣ್ಣ ಪ್ರಮಾಣದ ಚಲನೆಗೂ ದೀರ್ಘ ಕಾಲಾವಕಾಶ ಅವಶ್ಯಕವಾಗಿದೆ. ಜಾತಿ, ಲಿಂಗ, ಧರ್ಮ ತಾರತಮ್ಯ ಹಾಗೂ ಸಾಮಾಜಿಕ ಅಸಮಾನತೆಯನ್ನು ಕಾವ್ಯದ ಮೂಲಕ ವಿರೋಧಿಸಿದ ಕೃತಿಕಾರರು, ಚಳವಳಿಗಾರರನ್ನೂ ಒಳಗೊಂಡು ಎಲ್ಲರನ್ನೂ ಮತ್ತೆ ಸ್ಥಗಿತ ಸ್ಥಿತಿಯತ್ತ ಎಳೆಯುತ್ತಿರುವ ಸಾಮಾಜಿಕ ಸನ್ನಿವೇಶವಿದೆ. ಒಬ್ಬಿಬ್ಬರಿಂದ ನಡೆಯುತ್ತಿರುವ ಕೊಳೆ ತೊಳೆಯುವ ಕೆಲಸದಲ್ಲಿ ಯಶಸ್ಸು ಸಾಧಿಸಲು ಇನ್ನೆಷ್ಟು ಶತಮಾನಗಳು ಬೇಕೋ? ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾಲಕಾಲಕ್ಕೆ ಕನಕನಂಥವರು ದುಡಿಯುತ್ತಿರುವುದು ಆಶಾದಾಯಕ ಬೆಳವಣಿಗೆ.

“ಹರಿದಾಸರ ವೈಶ್ಣವ ಭಕ್ತಿಪರಂಪರೆಯಲ್ಲಿ ಕನಕ ಒಂಟಿಯಾಗಿ ತನ್ನ ಸಾಮಾಜಿಕ ನ್ಯಾಯದ ಹೋರಾಟವನ್ನು ನಡೆಸಿದವನು. ಉಳಿದ ಹರಿದಾಸರಿಂದ ಅವನಿಗೆ ಅಂತಹ ಬೆಂಬಲ ಇದ್ದಂತೆ ಕಾಣವುದಿಲ್ಲ”ಎಂಬ ಕಂಟನಕುಂಟೆಯವರ ಅಭಿಪ್ರಾಯವೂ ಸಮಂಜಸವಾಗಿದೆ. ತಾನು ಬದುಕಿರುವ ಸಮಾಜದ ಇತಿಮಿತಿಗಳಿಗೆ ಕನ್ನಡ ಹಿಡಿಯುವ ಕೆಲಸ ಮಾಡುವವರು ಎಲ್ಲ ಕಾಲದಲ್ಲೂ ಅಲ್ಪಸಂಖ್ಯಾತರೇ ಆಗಿರುತ್ತಾರೆ. ಆದರೆ ಅವರಿಗೆ ತಾನು ಹೇಳಬೇಕಿರುವುದನ್ನು ಹೇಳುವವರ ಸಂಖ್ಯೆ ಕಡಿಮೆ. ಬಸವ, ಸರ್ವಜ್ಞ ಕನಕರಂಥವರದು ಮೆದು ದನಿಯಾಗಿದ್ದರೂ ಅವರಲ್ಲಿ ಸ್ಪಷ್ಟತೆ ಇದೆ. ಅದಕ್ಕೆ ರಾಮಧಾನ್ಯ ಚರಿತ್ರೆಯೂ ಸಾಕ್ಷಿ.

ಗಮನಾರ್ಹ ಸಂಗತಿಯೆಂದರೆ: ಆಧುನಿಕ ಪೂರ್ವದಲ್ಲಿ ಲೋಕವಿರೋಧಿ – ನಿಲುವು ತಳೆಯಬೇಕಾದ ಅನಿವಾರ್ಯ ಸಂದರ್ಭದಲ್ಲಿ ಏಕಾಂಗಿಯಾಗಿ ಹೋರಾಡಿದವರಿದ್ದಾರೆ. ಇಂತಹ ಪ್ರಸಂಗಗಳು ಎದುರಾದಾಗ ಕೆಲವೇ ವ್ಯಕ್ತಿಗಳು ಸಮಷ್ಟಿಯ ಹಿತಕ್ಕಾಗಿ ಲೋಕವಿರೋಧಿ ಪಟ್ಟವನ್ನು ಕಟ್ಟಿಕೊಳ್ಳಲು ಸಿದ್ಧರಾಗುತ್ತಾರೆ. ಜೊತೆಗೆ ತಮ್ಮ ನಿಲುವನ್ನು ಯಾವುದೇ ಮರ್ಜಿ, ಮುಲಾಜು, ರಾಜಿಗೆ ಒಳಗಾಗದೆ ಪ್ರತಿಪಾದಿಸಿದ್ದಾರೆ. ಇದಕ್ಕೆ ವಚನಕಾರರು, ದಾಸರು, ಸರ್ವಜ್ಞ, ನೀಲಗಾರರು, ಜನಪದ ಕವಿಗಳು, ಎಮ್ಮೆ ಬಸವ, ಕಡಕೋಳ ಮಡಿವಾಳಪ್ಪ, ಶಿಶುನಾಳ ಷರೀಫರನ್ನೂ ಒಳಗೊಂಡಂತೆ ಅನೇಕರು ಉದಾಹರಣೆಯಾಗುತ್ತಾರೆ. ಇವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ವಿಷಮ ಸಂದರ್ಭವನ್ನು ಎದುರಿಸಿದ್ದಾರೆ. ಅದರ ಪರಿಣಾಮದಿಂದ ಅವರ ರಚನೆಗಳಲ್ಲಿ ಬೆಡಗು, ಅನ್ನೋಕ್ತಿ, ಲೌಕಿಕ ಮತ್ತು ಅಲೌಕಿಕ ವಸ್ತುಗಳ ಮೇಳೈಕೆ ಕಂಡುಬರುತ್ತದೆ. ಆಧುನಿಕ ಸಂದರ್ಭದಲ್ಲಿ ಕುವೆಂಪು, ಶಿವರಾಮ ಕಾರಂತ, ಲಂಕೇಶ್, ದೇವನೂರ ಮಹಾದೇವ ಮೊದಲಾದವರು ಬೆಡಗಿನ ಮೊರೆ ಹೋಗದೆ ನೇರವಾಗಿ ತಮ್ಮ ಬರಹ ಮತ್ತು ಭಾಷಣಗಳಿಂದ ಹಿಂದಿನವರ ಕೈಂಕರ್ಯವನ್ನು ಮುಂದುವರೆಸಿದರು.

ಸಮಕಾಲೀನ ಸಂದರ್ಭದಲ್ಲಿ ಆಚರಣೆಯಲ್ಲಿರುವ ಜೀವವಿರೋಧಿ ನಿಲುವುಗಳು, ಸ್ವಜನ ಪಕ್ಷಪಾತ, ಜಾತೀಯತೆ, ಸ್ವಾರ್ಥ, ಭ್ರಷ್ಟಾಚಾರ ಮೊದಲಾದವುಗಳು ಉತ್ತುಂಗ ಸ್ಥಿತಿ ತಲುಪಿದಾಗಲೆಲ್ಲ ಪ್ರತಿಭಾಶಾಲಿಗಳಿಗೆ ಸದ್ಯದ ಭಾಷೆಯಲ್ಲೇ ತನ್ನ ತುಡಿತವನ್ನು ಹೊಸದಾಗಿ ಹೊಸೆಯುವ ಸವಾಲು ಎದುರಾಗುತ್ತದೆ. ಇಲ್ಲಿ ಜಾತಿ, ಸಮಾಜ, ಆರ್ಥಿಕ, ರಾಜಕೀಯ ಕಾರಣಗಳೆಲ್ಲವೂ ಅವರಿಗೆ ಅನೇಕ ಮಿತಿಗಳನ್ನೂ ಹೇರುತ್ತಿರುತ್ತವೆ. ಅದಕ್ಕಾಗಿ ಅವರ ಕ್ರಿಯಾಶೀಲತೆ ಪರಿಚಿತವಾಗಿರುವುದನ್ನೇ, ಸ್ವತಃ ಮನುಷ್ಯರು ಅನುಭವಿಸುತ್ತಿರುವುದನ್ನೇ ಮಂಡಿಸಲು ಭಾಷೆಯನ್ನು ವಿಶಿಷ್ಟವಾಗಿ ಮಾನವೀಯ ಧೋರಣೆಯ ಪ್ರತಿಪಾದನೆಗೆ ಬಳಸುತ್ತಾರೆ. ಅದರಲ್ಲೂ ಅನುಭಾವಿ ಸಾಹಿತ್ಯ ಇದರ ಮೊರೆಹೋಗುವುದು ಸಾಮಾನ್ಯ ಸಂಗತಿ.

ಇನ್ನು ಪರಿಧಿಯಲ್ಲಿರುವವರ ಪರವಾಗಿ ಕನಕದಾಸನ ತತ್ವಚಿಂತನೆ ಇರುವುದು ಅವನ ಕೀರ್ತನೆಗಳು ಮತ್ತು ರಾಮಧಾನ್ಯ ಚರಿತ್ರೆಯಲ್ಲಿ ವ್ಯಕ್ತವಾಗಿದೆ. ರಾಗಿಯನ್ನು ಆಹಾರ ರಾಜಕಾರಣದ ವಸ್ತುವಾಗಿ ಕನಕದಾಸ ಮಂಡಿಸಿಲ್ಲ. ತತ್ಕಾಲದ ಸಾಮಾಜಿಕ ಸಂಘರ್ಷಕ್ಕೆ ರಾಗಿ ಮತ್ತು ಭತ್ತದ ಸಂವಾದ ಬಳಕೆಯಾಗಿರುವುದು ಮಹತ್ವದ್ದು.

ಆಧುನಿಕೋತ್ತರದಲ್ಲಿ ಉಂಟಾಗಿರುವ ಆಹಾರ ಸಂಬಂಧೀ ಶ್ರೇಣೀಕರಣಕ್ಕೂ ಆಧುನಿಕಪೂರ್ವದ ಶ್ರೇಣೀಕರಣಕ್ಕೂ ಸಂಬಂಧ ಕಲ್ಪಿಸುವುದನ್ನು ಕನಕನ ಚಿಂತನೆಯನ್ನು ಮುಂದುವರಿಸುವ ಕ್ರಿಯೆಯಾಗಿ ಪರಿಭಾವಿಸಬಹುದು. ಆದರೆ ಅದಕ್ಕಿಂತ ಸಂಕೀರ್ಣ ಸ್ಥಿತಿಯಲ್ಲಿ ಇಂದಿನ ಪರಿಸ್ಥಿತಿ ಇದೆ. ಇಲ್ಲಿ ಎಲ್ಲವೂ ಮಾರಾಟದ ಸರಕಾಗಿ ಬದಲಾಗಿದೆ. ತಾಯ್ತನವನ್ನೇ ಬಾಡಿಗೆ ಪಡೆಯುವ ತಂತ್ರಜ್ಞಾನದ ಬೆಳವಣಿಗೆ ಒಂದು ಕಡೆ, ಮಾಹಿತಿ ತಂತ್ರಜ್ಞಾನದಿಂದ ಜಗತ್ತು ಹಳ್ಳಿಯಾಗಿದೆ ಎಂಬ ಕಟ್ಟುವಿಕೆ ಒಂದು ಕಡೆ ನಡೆಯುತ್ತಿದೆ. ಆದರೆ ಜಗತ್ತು ಹತ್ತಿರವಾಗುತ್ತ ಮನಸುಗಳು ದೂರವಾಗುತ್ತಿರುವುದು ದುರಂತ. ವಿದ್ಯುನ್ಮಾನ ಯಂತ್ರೋಪಕರಣಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಯುವ ಮತ್ತು ಅದಕ್ಕಿಂತ ಹಿಂದಿನ ಜನಾಂಗ ಸಮಕಾಲೀನ ತುರ್ತುಗಳಿಂದ ವಿಮುಖವಾಗಿದೆ. ಫೇಸ್‌ಬುಕ್, ವಾಟ್ಸ್ ಅಪ್‌ಗಳಲ್ಲಿರುವ ಆತ್ಮೀಯತೆ ಎದುರುಬದುರಾದಾಗ ಇಲ್ಲವಾಗುತ್ತಿದೆ. ಇವುಗಳು ಕೂಡ ಏಕರೂಪೀ ಮಾದರಿಯ ನಿರ್ಮಾಣಕ್ಕೆ ಕಾರಣವಾಗುತ್ತಿವೆ. ಅದರಲ್ಲೂ ವಿಜ್ಞಾನ, ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಪುರೋಹಿತಶಾಹಿ ಮನಸ್ಥಿತಿಯ ವ್ಯಕ್ತಿಗಳು ಸಾಮಾಜಿಕ ಸಮಸ್ಯೆಗಳನ್ನು ಅಪ್ರಸ್ತುತ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಅನ್ನಭಾಗ್ಯ’ದ ವಿರುದ್ಧ ಫೇಸ್‌ಬುಕ್‌ನಲ್ಲಿ ದೊಡ್ಡಮಟ್ಟದ ಚರ್ಚೆಗಳು ನಡೆದರೆ, ಮಡೆಸ್ನಾನದ ವಿರುದ್ಧ ವಿವಾದಾಸ್ಪದ ‘ಭೂ ಸ್ವಾಧೀನ ಕಾಯ್ದೆ’ಯ ವಿರುದ್ಧ ಸೊಲ್ಲೆತ್ತುವವರ ಸಂಖ್ಯೆ ಬೆರಳೆಣಿಕೆಯಷ್ಟು ಪ್ರಮಾಣದಲ್ಲಿರುತ್ತದೆ. ಸದ್ಯದ ಎರಡು ಜನಾಂಗದವರ ಆದ್ಯತೆಗಳು ಬದಲಾಗಿರುವುದರಿಂದ ಕನಕನಂಥವರ ಸಾಮಾಜಿಕ ಬದಲಾವಣೆಯ ಆಶಯಗಳು ಮುನ್ನೆಲೆಗೆ ಬರುತ್ತಿಲ್ಲ. ಇವೆಲ್ಲದರ ಪರಿಣಾಮ ಸಮಾಜ ಸ್ಥಗಿತ ಸ್ಥಿತಿಯಲ್ಲೇ ಇದೆ. ಕಳೆದ ಎರಡೂವರೆ, ಮೂರು ದಶಕಗಳಿಂದ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ‘ಒತ್ತು’ ಕೇವಲ ‘ಜನರ ಕಣ್ಣೊರೆಸುವ’ ಮತ್ತು ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಅಭಿವೃದ್ಧಿ ಸಾಧಿಸಿದೆ’ ಎಂಬ ದಾಖಲೆಗಳಿಗಾಗಿ ಕೆಲಸ ಮಾಡಿವೆ. ಆದರೆ ಮೂಲಭೂತ ಅವಶ್ಯಕತೆಗಳಾದ ನೀರು, ಊಟ, ವಸತಿ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ದೇಶ ಇನ್ನೂ ಶತಮಾನಗಳಷ್ಟು ಹಿಂದುಳಿದಿದೆ. ಬಾಹ್ಯಾಕಾಶಕ್ಕೆ ತೆರಳಿ ಅನ್ಯಗ್ರಹಗಳಲ್ಲಿ ಜೀವಿಗಳ ಕುರುಹುಗಳನ್ನು ಅರಸುತ್ತಿರುವ ಮಾನವ ಸಾಹಸ ಗಮನಾರ್ಹ ಸಾಧನೆಯಾದರೂ ಭೂಮಿಯ ಮೇಲಿರುವ ಸಹಮಾನವ ಜೀವಿಗಳ ಪರಿಸ್ಥಿತಿ ಸುಧಾರಣೆಯೆಡೆಗೆ ಅವಜ್ಞೆ ಮೂಡಿರುವುದು ವಿಪರ್ಯಾಸದ ಸಂಗತಿ. ಈ ಯಾವ ತಂತ್ರಜ್ಞಾನಗಳ ಅನ್ವೇಷಣೆ ಇಲ್ಲದಿರುವ ಸಂದರ್ಭದಲ್ಲಿ ಕನಕದಾಸ ರಚಿಸಿರುವ ರಾಮಧಾನ್ಯ ಚರಿತ್ರೆಯಲ್ಲಿ ಶೋಷಿತ ಸಮುದಾಯದ ಪರ ಚಿಂತನೆ ಇದೆ.

ರಂಗನಾಥ ಕಂಟನಕುಂಟೆಯವರು ರಾಗಿಯನ್ನು ವಾಣಿಜ್ಯ ಬೆಳೆಯಾಗಿಸುವಲ್ಲಿನ ವೈಫಲ್ಯದ ಕಡೆಗೆ ಗಮನ ಸೆಳೆದಿದ್ದಾರೆ. ಆದರೆ ಇದಕ್ಕೆ ಅನೇಕ ಸಮಸ್ಯೆಗಳಿವೆ. ಕಾರಣ ರಾಗಿಯ ಇಳುವರಿ ಕಡಿಮೆ. ಆದರೆ ಅದಕ್ಕೆ ಬೇಡಿಕೆಯೇ ಇಲ್ಲವೆಂದಲ್ಲ. ಬಡವರ, ರಾಮ ಮೆಚ್ಚಿದ ರಾಗಿ ಇಂದು ಡಯಾಬೀಟೀಸ್ ರೋಗಿಗಳ ಆಹಾರವಾಗಿ ಮಾರುಕಟ್ಟೆಯಲ್ಲಿ ವಿಸ್ತರಿಸಿದೆ. ರಾಗಿ ಮುದ್ದೆ ಮತ್ತು ರೊಟ್ಟಿಯಿಂದ ಪ್ರಮೋಷನ್ ಪಡೆದು ಸದ್ಯಕ್ಕೆ ದೋಸೆ, ಇಡ್ಲಿ, ಬಿಸ್ಕೆಟ್, ಮಾಲ್ಟ್, ಮಿಕ್ಸ್ಚರ್ (ಖಾರ), ಪ್ಲೇಕ್ಸ್, ಶಾವಿಗೆ, ಹಪ್ಪಳ ಮೊದಲಾದ ಆಹಾರ ಮತ್ತು ಪಾನೀಯ ರೂಪದಲ್ಲಿ ಲಭ್ಯವಿದೆ. ರಂಗನಾಥ ಕಂಟನಕುಂಟೆಯವರ ವಾದದಂತೆ ಮಾರುಕಟ್ಟೆಯಲ್ಲಿ ರಾಗಿ ಹಿಂದುಳಿದಿಲ್ಲ. ಆರೋಗ್ಯದ ಕಾರಣದಿಂದ ರಾಗಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಬಹು ರಾಷ್ಟ್ರೀಯ ಕಂಪೆನಿಗಳು ರಾಗಿ ಉತ್ಪನ್ನಗಳನ್ನು ಉತ್ಪಾದಿಸಿ ದೇಶೀ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿವೆ. ಈ ಪ್ರತಿಕ್ರಿಯೆ ಬರೆಯುವ ಹೊತ್ತಿಗೆ ಮಾರುಕಟ್ಟೆಯಲ್ಲಿ ರಾಗಿಯ ಬೆಲೆ 25-50 ರೂಪಾಯಿಗಳಿದ್ದರೆ, ರಾಗಿ ಹಿಟ್ಟಿನ ಬೆಲೆ 50 ರೂಪಾಯಿಯಾಗಿದೆ. ಆದರೆ ರಾಗಿ ಉತ್ಪನ್ನಗಳ ಬೆಲೆ ಮಧ್ಯಮ ವರ್ಗದವರ ಕೈಗೆಟುಕುತ್ತಿಲ್ಲವೆಂಬ ವಾದವನ್ನು ಒಪ್ಪಲಾಗದು.

ರಂಗನಾಥ ಕಂಟನಕುಂಟೆಯವರು ವ್ಯಕ್ತಪಡಿಸಿರುವಂತೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ನೀಡುವುದರ ಬದಲು ರಾಗಿ ನೀಡುವುದು ಅಸಾಧ್ಯದ ಮಾತು. ಏಕೆಂದರೆ ಎಕರೆಗೆ 23-25 ಕ್ವಿಂಟಾಲ್ ಬೆಳೆಯುವ ಅಕ್ಕಿಗೂ, 13-15 ಕ್ವಿಂಟಾಲ್ ಬೆಳೆಯುವ ಜೋಳಕ್ಕೂ, 8-10 ಕ್ವಿಂಟಾಲ್ ಬೆಳೆಯುವ ರಾಗಿಗೂ ನಡುವೆ ಅಗಾಧ ಅಂತರವಿದೆ. ರಾಜ್ಯದಲ್ಲಿರುವ ಒಂದು ಕೋಟಿ ಪಡಿತರ ಚೀಟಿದಾರರಿಗೆ ಅನ್ನಭಾಗ್ಯದ ಬದಲು ರಾಗಿಭಾಗ್ಯ ಕರುಣಿಸಲು ಸರ್ಕಾರ ಮುಂದಾಗುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ಶಕ್ತಿಗಳು ದೇಶೀ ಸಮುದಾಯಗಳನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳಲು ಆರಂಭಿಸಿ ಸುಮಾರು 3 ದಶಕಗಳಾಗುತ್ತಿವೆ. ಗ್ಯಾಟ್ ಒಪ್ಪಂದದ ನಂತರ ದೇಶೀ ಸಮುದಾಯಗಳ ಉಳಿವಿನ ಹೋರಾಟ ಆರಂಭವಾಗಿದೆ.

ಕೇಂದ್ರ ಸರ್ಕಾರದ ‘ಭೂಸ್ವಾಧೀನ ಕಾಯ್ದೆ’, ‘ಮೇಕ್ ಇನ್ ಇಂಡಿಯಾ’ದಂತಹ ಯೋಜನೆಗಳು ಕೇವಲ ಕನ್ನಡಿಗರನ್ನಷ್ಟೇ ಅಲ್ಲ, ಇಡೀ ಭಾರತೀಯ ರೈತ ಸಂಕುಲಕ್ಕೆ ಮಾರಕವಾಗುವ ದಿನಗಳು ದೂರವಿಲ್ಲ. ಭೂ ಸ್ವಾಧೀನ ಕಾಯ್ದೆ ಜಾರಿಯಾದರೆ ದೇಶದ ಆರ್ಥಿಕತೆ ಕುಸಿಯುವುದರೊಂದಿಗೆ ಆಹಾರ ಭದ್ರತೆಗೆ ಧಕ್ಕೆಯುಂಟಾಗುತ್ತದೆ. ಸ್ವಾವಲಂಬಿ ರೈತರು ಪರಾವಲಂಬಿಗಳಾಗುತ್ತಾರೆ. ಮೇಕ್ ಇನ್ ಇಂಡಿಯಾ ಕರೆಗೆ ಓಗೊಟ್ಟ ವಿದೇಶೀ ಕಂಪೆನಿಗಳು ಭಾರತವನ್ನು ಉತ್ಪಾದನೆ ಮಾಡಲು ಬಳಸಿಕೊಳ್ಳುತ್ತವೆ. ಕಾರಣ ಮುಂದುವರೆದ ರಾಷ್ಟ್ರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನೂರೆಂಟು ಕಾನೂನುಗಳಿವೆ. ಆ ಕಾನೂನುಗಳ ಪ್ರಕಾರ ಅಲ್ಲಿ ಉತ್ಪಾದನೆಯ ಖರ್ಚು ಹೆಚ್ಚುತ್ತದೆ. ಜತೆಗೆ ಅಲ್ಲಿನ ವೇತನವೂ ಡಾಲರ್‌ಗಳ ಲೆಕ್ಕದಲ್ಲಿ ಸಂದಾಯವಾಗಬೇಕು. ಆದರೆ ಭಾರತದಲ್ಲಿ ಕನಿಷ್ಠ ಕೂಲಿಗೆ ಗರಿಷ್ಠ ದುಡಿಮೆ ಮಾಡಲು ಅಪಾರವಾದ ಶ್ರಮಿಕರಿದ್ದಾರೆ. ಭೂಸ್ವಾಧೀನ ಕಾಯ್ದೆ ಜಾರಿಯಾದರೆ ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಬರುವ ವಿದೇಶೀ ಉತ್ಪಾದಕ ವಲಯಗಳಿಗೆ ಈಗಿರುವ ಕೂಲಿಗಿಂತ ಕನಿಷ್ಠ ದರದಲ್ಲಿ ಭೂಮಿ ಕಳೆದುಕೊಂಡ ಕೂಲಿಗಳು ಲಭಿಸುತ್ತಾರೆ. ಜತೆಗೆ ದೇಶದಲ್ಲಿರುವ ಅಪಾರ ಪ್ರಮಾಣದ ಅದಿರು, ಕಚ್ಚಾವಸ್ತುಗಳನ್ನು ಕಡಿಮೆ ದರದಲ್ಲಿ ಕೊಂಡು, ಇಲ್ಲಿಯೇ ಉತ್ಪಾದನೆ ಮಾಡಿ ಗಂಗಾನದಿ ಕೊಳಚೆ ಚರಂಡಿಯಾಗಿರುವಂತೆ ಇಡೀ ದೇಶದ ನದಿಗಳನ್ನೆಲ್ಲ ಚರಂಡಿಯಾಗಿಸಿ, ವಾತಾವರಣವನ್ನು ಹಾಳು ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಇಂತಹ ಜನವಿರೋಧಿ, ಪರಿಸರ ವಿರೋಧಿ, ದೇಶವಿರೋಧಿ ಯೋಜನೆಗಳು ಅಪಾಯಕಾರಿ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವ ಹೊತ್ತಿನಲ್ಲಿ ವೈಚಾರಿಕ ಆಲೋಚನೆಗಳನ್ನು ಜನರಿಗೆ ತಲುಪಿಸುವ, ಆ ಮೂಲಕ ಜಾಗೃತಿ ಮೂಡಿಸುವ ಸಾಧ್ಯತೆಗಳನ್ನು ಶೋಧಿಸಬೇಕಿದೆ. ಇದಕ್ಕೆ ಕನಕನ ಸಾಹಿತ್ಯಕ ರೂಪಕಗಳು ದಾರಿದೀಪವಾಗುತ್ತವೆ. ಎಲ್ಲೆಲ್ಲೂ ಹೆದ್ದಾರಿಗಳು ನಿರ್ಮಾಣವಾಗುತ್ತಿರುವ ಹೊತ್ತಿನಲ್ಲಿ ಅಲ್ಲಿನ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಬಲಿಯಾಗುತ್ತಿರುವ ನಾಯಿಗಳ ಶವ ನಮಗೆ ಎಚ್ಚರ ನೀಡಬೇಕಿದೆ. ಅದರ ಜತೆಗೆ ಹಳ್ಳಿಗಳು ಮಾಯವಾಗುತ್ತ, ಅಳಿದುಳಿದ ಹಳ್ಳಿಗಳು ವಯೋವೃದ್ಧರಿಂದ ತುಂಬಿಕೊಳ್ಳುತ್ತಿರುವುದನ್ನು ವಿವೇಕದ ಕಣ್ಣಿನಿಂದ ನೋಡುವ ತಿಳಿವಳಿಕೆ ಮೂಡಬೇಕಿದೆ. ಇಲ್ಲಿ ಕೇವಲ ರಾಗಿ ಬೆಳೆಯುವವರಷ್ಟೇ ಅಥವಾ ಉಣ್ಣುವವರಷ್ಟೇ ಸಂತ್ರಸ್ತರಾಗುವುದಿಲ್ಲ. ಕನಕದಾಸನ ರಾಗಿಯ ಸಮಸ್ಯೆ ಇಂದು ಎಲ್ಲ ಬೆಳೆಗಳಿಗೂ ಅನ್ವಯಿಸುತ್ತದೆ. ಸ್ಥಾನಾಂತರದ ಪ್ರಶ್ನೆ ರಾಗಿ ಮತ್ತು ಭತ್ತಕ್ಕಿಂತ ರೈತನಿಗೆ ಹೆಚ್ಚು ಅನ್ವಯವಾಗುತ್ತದೆ.

ದೂರದೃಷ್ಟಿರಹಿತ ಮತ್ತು ಸ್ವಾರ್ಥ ರಾಜಕಾರಣದ ಫಲವಾಗಿ ರೈತರ ಸಮಸ್ಯೆಗಳು ದಿನಗಳೆದಂತೆ ಬೃಹದಾಕಾರ ತಾಳುತ್ತಿವೆ. ಆದರೆ ಸರ್ಕಾರಗಳು ಬೆಂಬಲ ಬೆಲೆ ಘೋಷಿಸುವಷ್ಟಕ್ಕೆ ಸೀಮಿತವಾಗುತ್ತಿವೆ. ರಂಗನಾಥ ಕಂಟನಕುಂಟೆಯವರು ಹೇಳುವಂತೆ ಕೃಷಿಗೆ ಸಹಾಯಧನ, ಪ್ರೋತ್ಸಾಹಧನ ನೀಡುವುದನ್ನು ಹಂತಹಂತವಾಗಿ ಕಡಿತಗೊಳಿಸಲಾಗುತ್ತಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಶಕ್ತಿಗಳು ಕಾರಣ. ಭಾರತದಂತಹ ಅಭಿವೃದ್ಧಿ ಶೀಲ ಮತ್ತು ತೃತೀಯ ರಾಷ್ಟ್ರಗಳನ್ನು ಬೃಹತ್ ಬಂಡವಾಳ ಹೂಡಿ ನಿರ್ಮಾಣ ಮಾಡಿರುವ ಉತ್ಪನ್ನಗಳನ್ನು ಕೊಳ್ಳುವ ಗ್ರಾಹಕರನ್ನಾಗಿಸಿಕೊಳ್ಳುವ ಹುನ್ನಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಂದ ಮರೆಮಾಚುತ್ತಿವೆ. ಗ್ಯಾಸ್ ಸಿಲಿಂಡರ್‌ನಲ್ಲಿ ಸಬ್ಸಿಡಿ ಪಡೆಯುವವರು, ಡಿಸ್ಕೌಂಟ್ ಸೇಲ್‌ನಲ್ಲಿ ಸರಕುಗಳನ್ನು ಕೊಳ್ಳುವವರು, ಆನ್‌ಲೈನ್‌ನಲ್ಲಿ ಒಂದೇ ಗಂಟೆಗೆ ಆಫರ್‌ನಲ್ಲಿ ವಸ್ತುಗಳನ್ನು ಕೊಳ್ಳಲು ಮುಗಿಬೀಳುವವರು ರೈತರಿಗೆ ಸಬ್ಸಿಡಿ ಕೊಡಿಸುವುದನ್ನು, ಅನ್ನಭಾಗ್ಯದಂತಹ ಹಸಿವು ತಣಿಸುವ ಯೋಜನೆಗಳನ್ನು ವಿರೋಧಿಸುವ ಕೆಟ್ಟ ಸಂಪ್ರದಾಯ ರೂಪುಗೊಳ್ಳುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಸದ್ಯಕ್ಕೆ ಸೃಷ್ಟಿಯಾಗಿದೆ.

ಸಂಕೀರ್ಣ ಸಮಾಜದಲ್ಲಿ ತನಗನಿಸಿದ್ದನ್ನು ಪ್ರಖರವಾಗಿ ಮಂಡಿಸಲು ಕನಕದಾಸ ‘ರಾಮಧಾನ್ಯ ಚರಿತ್ರೆ’ ಕೃತಿಯನ್ನು ಬಳಸಿಕೊಂಡಿದ್ದಾನೆ. ಸಾಮಾಜಿಕ ಸನ್ನಿವೇಶದಲ್ಲಿ ಜಾತಿಯ ಮೇಲರಿಮೆ ಮತ್ತು ಉದ್ಭವಿಸಿರುವ ವಿಷಮ ಪರಿಸ್ಥಿತಿಯನ್ನು ದಾಖಲಿಸುವಲ್ಲಿ ಈ ಕೃತಿ ಯಶಸ್ವಿಯಾಗಿದೆ. ಈ ಕೃತಿ ಮೇಲ್ದಾತಿ – ಕೆಳಜಾತಿ – ಜಾತಿಯ ಮೇಲರಿಮೆ ಮತ್ತು ಕೀಳರಿಮೆಗಳೆರಡೂ ಕಲ್ಪಿತ ವಾಸ್ತವ. ಇದು ಯಾವಾಗ ಬೇಕಾದರೂ ಕ್ರಿಯಾಶೀಲವಾಗಬಹುದು. ಅಷ್ಟೇ ಬೇಗ ನಿಷ್ಕ್ರಿಯವಾದಂತೆ ಭಾಸವಾಗುತ್ತದೆ ಎಂಬ ಸಂಗತಿಯನ್ನು ದಾಖಲಿಸುತ್ತದೆ. ಆದರೆ ಜಾತಿ ಪ್ರಜ್ಞೆ ಅಂತಸ್ತವಾಗಿ ಒಂದಿಲ್ಲೊಂದು ರೀತಿಯಲ್ಲಿ ಪ್ರವಹಿಸುತ್ತಲೇ ಇರುವುದು ಭಾರತದ ದುರಂತ. ಕನ್ನಡದ ಕೆಲವು ಸಂಶೋಧಕರು ಈ ಕೃತಿಯಲ್ಲಿ – ಶ್ರೀಮಂತ-ಬಡವ (ಚಿದಾನಂದಮೂರ್ತಿ), ಸ್ಪಶ್ಯ-ಅಸ್ಪೃಶ್ಯ, ಬಂಡಾಯದ ದನಿ (ಹಿ.ಶಿ.ರಾಮಚಂದ್ರೇಗೌಡ), ಕನ್ನಡ ಸಂಸ್ಕೃತ (ಸಾ.ಶಿ.ಮರುಳಯ್ಯ), ಸ್ವಾನುಭವದ ಅಭಿವ್ಯಕ್ತಿ (ಡಿ.ಕೆ.ರಾಜೇಂದ್ರ) ಮೊದಲಾದ ರೂಪಗಳಲ್ಲಿ ಕಂಡಿದ್ದಾರೆ. ಈ ಎಲ್ಲವುಗಳನ್ನು ಒಳಗೊಳ್ಳುವ ಅರ್ಥಸಾಧ್ಯತೆಗಳನ್ನು ಹೊಂದಿರುವುದೇ ಈ ಕಾವ್ಯದ ವೈಶಿಷ್ಟ್ಯತೆ.

ಇವುಗಳ ಜತೆಗೆ ಕಪ್ಪು-ಬಿಳುಪು ಮತ್ತು ಉತ್ತರ – ದಕ್ಷಿಣ, ಆರ್ಯ – ದ್ರಾವಿಡ ಎಂಬ ವಿಷಯಗಳಡಿಯಲ್ಲೂ ರಾಮಧಾನ್ಯ ಚರಿತ್ರೆ ಚರ್ಚೆಯನ್ನು ವಿಸ್ತರಿಸಬಹುದು. ಕಪ್ಪು ಬಣ್ಣದ ರಾಗಿ ಮತ್ತು ಬಿಳಿ ಬಣ್ಣದ ಅಕ್ಕಿಯ ನಡುವೆ ನಡೆಯವ ವರ್ಣ ಸಂಘರ್ಷದ ರೂಪಕವಾಗಿ ಅಧ್ಯಯನ ನಡೆದಿಲ್ಲ. ಅಲ್ಲದೇ ಭತ್ತ ಉತ್ತರ ಭಾರತದ ಬೆಳೆ, ರಾಗಿ ದಕ್ಷಿಣ ಭಾರತದ ಬೆಳೆ. ಆದರೆ ಉತ್ತರದಿಂದ ದಕ್ಷಿಣಕ್ಕೆ ಬಂದ ಭತ್ತ ಶ್ರೇಷ್ಠ, ದಕ್ಷಿಣದ ಬೆಳೆಯಾದ ರಾಗಿ ಕನಿಷ್ಠ ಎಂಬ ರೂಪಣೆಯನ್ನು ವಿರೋಧಿಸಲು ಕನಕದಾಸ ಪ್ರಯತ್ನಿಸಿದ್ದಾನೆ. ಈ ಕುರಿತು ಚರ್ಚೆ ನಡೆಯಬೇಕಿದೆ.

ಪುರೋಹಿತಶಾಹಿಯಲ್ಲಿ ಆರಂಭದಿಂದಲೂ ನೆಲೆಸಿರುವ, ಇಂದಿಗೂ ಮುಂದುವರಿದಿರುವ ಬಹಿಷ್ಕರಿಸುವ ಮನಸ್ಥಿತಿಯನ್ನು ಭತ್ತದ ಮಾತುಗಳಲ್ಲಿ ಸ್ಪುಟವಾಗಿ ಕನಕದಾಸ ಸೃಷ್ಟಿಸಿದ್ದಾನೆ. ಮತಿಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ (36), ಬಾಹಿರ ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ (37), ನೀನಯೋಗ್ಯನು ಭ್ರಷ್ಟ ತೊಲಗೆಂದ (39), ನೀನೆನಗೆ ಸರಿಯೇ ಭ್ರಷ್ಟ ತೊಲಗೆಂದ (42), ನೀನಾವ ಮಾನ್ಯನು ಕಡೆಗೆ ತೊಲಗೆಂದ (43) ಎಂದು ಆರು ಬಾರಿ ರಾಗಿಯನ್ನು ಬಹಿಷ್ಕರಿಸುತ್ತಾನೆ. ಜತೆಗೆ ನೈವೇದ್ಯ ತಾನೆಹೆನೆಂದನಾ ವ್ರಿಹಿಗ (38), ಲೋಕದೊಳಾರು ಸರಿಯಿಂತೆಂದನಾ ವ್ರಿಹಿಗ (40), ಸಿರಿಯ ಸಂಪತ್ತಾಯವನು ಕೇಳೆಂದನಾ ವ್ರಿಹಿಗ (41) ಎಂದು ಮೂರು ಬಾರಿ ತನ್ನ ಮೇಲರಿಮೆಯನ್ನು ಸಾಧಿಸಲು ಪ್ರಯತ್ನಿಸಿದರೆ, ರಾಗಿ ನಿರ್ದಯನಲ್ಲ ತಾ ನಿನ್ನಂತೆ ಎಲೆ ಕುಟಿಲಾತ್ಮ ಹೋಗೆಂದ (48) ಕೇವಲ ಒಮ್ಮೆ ಹೋಗು ಎನ್ನುತ್ತಾನೆ. ಉಳಿದಂತೆ ನಿನ್ನೊಡನೆ ಮಾತೇಕೆ (44), ನಿನ್ನ ಜನ್ಮ ನಿರರ್ಥಕ (45), ದುರಾತ್ಮ ನಿನ್ನೊಳು ಮಾತದೇಕೆಂದ (46) ಮೊದಲಾದ ಪದ್ಯಗಳಲ್ಲಿ ಭತ್ತದ ಮಿತಿಗಳನ್ನು ತೋರಿಸಲಾಗಿದೆ. ಈ ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ (47) ಎನ್ನುವುದರಲ್ಲಿ ರಾಗಿಯ ಮೇಲ್ಮೆಯನ್ನು ಪ್ರತಿಪಾದಿಸಲಾಗಿದೆ. (ಕಂಸದಲ್ಲಿರುವ ಸಂಖ್ಯೆಗಳು ಕನಕದಾಸರ ಕಾವ್ಯ ಭಾಗ 1, ಸಂ: ಸಾ.ಶಿ.ಮರುಳಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 2012 ಕೃತಿಯ ರಾಮಧಾನ್ಯ ಚರಿತ್ರೆಯ ಷಟ್ಪದಿಯ ಸಂಖ್ಯೆ)

ಭಕ್ತಿ ಮತ್ತು ಅನುಭಾವ ಸಾಹಿತ್ಯದಲ್ಲಿ ಸಾಮಾನ್ಯವಾಗಿರುವ ಅಂಶವೆಂದರೆ ಲೋಕದಲ್ಲಿ ಈಗಾಗಲೇ ಬಳಕೆಯಲ್ಲಿರುವ ಪ್ರಸಿದ್ಧ ಪ್ರತಿಮೆಗಳ ಮೂಲಕ ತಾನು ಹೇಳಬೇಕಿರುವುದನ್ನು ವಸ್ತುಪ್ರತಿರೂಪವಾಗಿಸಿಕೊಳ್ಳುವುದು. ಇದಕ್ಕೆ ಕಾರಣ ತಾನು ಹೇಳುತ್ತಿರುವುದನ್ನು ಪ್ರಜ್ಞಾಪೂರ್ವಕವಾಗಿ ಅಪವ್ಯಾಖ್ಯಾನಿಸುವ ಸಾಧ್ಯತೆಗಳು ದಟ್ಟವಾಗಿರುವುದು. ಇಂತಹ ಪರಿಸ್ಥಿತಿಯನ್ನು ತಮ್ಮ ಸಾಮಾಜಿಕ ತಿಳಿವಳಿಕೆಯಿಂದ ಮನಗಂಡಿರುವುದರಿಂದ ಅನ್ಯೋಕ್ತಿ, ಪ್ರಾಣಿ, ಪಕ್ಷಿ, ಧಾನ್ಯ ಮೊದಲಾದ ಪಾತ್ರಗಳ ಮೂಲಕ ಮಾತನಾಡಿಸುವ ತಂತ್ರವನ್ನು ಬಳಸಿಕೊಳ್ಳಲಾಗಿದೆ. ಧಾನ್ಯಗಳ ಮೂಲಕ ಮಾತನಾಡಿಸುವ ತಂತ್ರ ಪ್ರಾಯಶಃ ಕನಕದಾಸನ ರಾಮಧಾನ್ಯ ಚರಿತೆಯಲ್ಲೇ ಮೊದಲನೆಯದಾಗಿರಬಹುದು.

  • ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರತಿಕ್ರಿಯೆ

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ