December 3, 2023 6:51 am

ಭಾರತದ ದುರ್ಗೆ ಇಂದಿರಾ ಪ್ರಿಯದರ್ಶಿನಿ

Suresha N Shikaripura

ಕನ್ನಡ ಸ್ನಾತಕೋತ್ತರ ಪದವೀಧರರಾದ ಸುರೇಶ ಎನ್ ಶಿಕಾರಿಪುರ ಇವರು ಬಹುಮುಖಿ ಅಧ್ಯಯನಕಾರರು. ಕನ್ನಡ ಸಾಹಿತ್ಯ, ವಿಮರ್ಶೆ, ಸಂಶೋಧನೆ, ಶಾಸನ, ಇತಿಹಾಸ, ರಾಜಕಾರಣ, ಪರಿಸರ, ಧರ್ಮ, ಕೃಷಿ, ಛಾಯಾಗ್ರಹಣ ಇವರ ಆಸಕ್ತಿಯ ಕ್ಷೇತ್ರಗಳು. ಸಾಗರ, ಶಿಕಾರಿಪುರ, ಧಾರವಾಡ ಮೊದಲಾದೆಡೆ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಡಾ.ಎನ್.ಎಸ್.ಹರ್ಡೀಕರ್ ಕಾಂಗ್ರೆಸ್ ಸೇವಾದಳ, ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನೆಹರೂ ನಂತರ ಮುರಾರ್ಜಿ ದೇಸಾಯಿ ಪ್ರಧಾನಿ ಹುದ್ದೆಯ ಪೈಪೋಟಿಯಲ್ಲಿದ್ದರು. ನೆಹರೂ ಅವರನ್ನು ಕಾಂಗ್ರೆಸ್ ನ ಸದಸ್ಯರು ಮುಂದಿನ ಪ್ರಧಾನಿ ಯಾರಾಗಬೇಕೆಂದು ಕೇಳಿದಾಗ ನೆಹರು ಯಾರ ಹೆಸರನ್ನೂ ಸೂಚಿಸುವುದಿಲ್ಲ. ಇದು ರಾಜಪ್ರಭುತ್ವವಲ್ಲ ಇಲ್ಲಿ ಅರಸೊತ್ತಿಗೆಯ ಆಡಳಿತ ನಡೆಯುತ್ತಿಲ್ಲ. ಇದು ಪ್ರಜಾಪ್ರಭುತ್ವ. ಮುಂದಿನ ದೇಶದ ಪ್ರಧಾನಿಯನ್ನು ಜನತೆ ಆಯ್ಕೆ ಮಾಡುತ್ತಾರೆನ್ನುವುದೇ ನೆಹರೂ ಅಭಿಪ್ರಾಯವಾಗಿತ್ತು. ನೆಹರು ಗತಿಸಿದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಮುರಾರ್ಜಿ ದೇಸಾಯಿಯವರ ನಡುವೆ ಪ್ರಧಾನಿ ಹುದ್ದೆಗಾಗಿ ಪೈಪೋಟಿ ಏರ್ಪಟ್ಟಿತು. ಕಾಂಗ್ರೆಸ್ ನ ದೊಡ್ಡ ಗುಂಪು ಶಾಸ್ತ್ರೀಜಿಯವರ ಪರವಾಗಿ ನಿಂತಿತು.‌ ಮುರಾರ್ಜಿ ದೇಸಾಯಿ ಕಾಂಗ್ರೆಸ್ ಒಳಗಿನ ಬಲಪಂಥೀಯ ಮನಸ್ಥಿಯವರಾಗಿದ್ದುದೇ ಜಾತ್ಯತೀತರೆಲ್ಲ ಒಂದೆಡೆ ಸೇರಲು ಕಾರಣವಾದುದು.‌ ಮುರಾರ್ಜಿ ದೇಸಾಯಿಯವರನ್ನು ತಡೆದು ಶಾಸ್ತ್ರೀಜಿಯವರನ್ನು ಪ್ರಧಾನಿಯಾಗಿಸುವಲ್ಲಿ ಅಂದು ಕಾಂಗ್ರೆಸ್ ನ ದೈತ್ಯ ಶಕ್ತಿಯಾಗಿ ಬೆಳೆದಿದ್ದ ನಾಯಕ ಕಾಮರಾಜ್ ನಾಡಾರ್ ಅವರು ಬಹು ಮುಖ್ಯ ಪಾತ್ರವಹಿಸಿದ್ದರು. ಶಾಸ್ತ್ರೀ ಭಾರತದ ಎರಡನೇ ಪ್ರಧಾನಿಯಾದ ಹೊಸದರಲ್ಲಿ ತಮ್ಮ ಸಂಪುಟದಲ್ಲಿ ಇಂದಿರಾಗಾಂಧಿ ಎಂಬ ಯುವತಿಗೂ ಮಂತ್ರಿಯಾಗಿ ಸೇವೆ ಸಲ್ಲಿಸಲು ಸ್ವತಃ ತಾವೇ ಆಸಕ್ತಿ ವಹಿಸಿ ಕರೆತಂದರು. ನೆಹರು ಅವರ ಮೇಲಿದ್ದ ಗೌರವ ಅಭಿಮಾನಗಳು ಇದಕ್ಕೆ ಕಾರಣವಿರಬಹುದು. ಮುಂದೆ ಶಾಸ್ತ್ರೀಜಿ ಹೃದಯಾಘಾತದಿಂದ ತೀರಿಹೋದಾಗ ದೇಶದ ಚುಕ್ಕಾಣಿ ಯಾರ ಕೈಗೆ ಎಂಬ ಪ್ರಶ್ನೆ. ಮತ್ತೆ ಪ್ರಧಾನಿಯಾಗಲು ಹೊರಟದ್ದು ಮುರಾರ್ಜಿ ದೇಸಾಯಿ. ಇದನ್ನು ತಪ್ಪಿಸಲು ಮತ್ತದೇ ರಾಜಕೀಯ ಯತ್ನಗಳು ಆರಂಭವಾಗಿ ಯುವತಿ ಇಂದಿರೆಯನ್ನು ಪ್ರಧಾನಿ ಹುದ್ದೆಯ ಚುನಾವಣೆಗೆ ಆರಿಸಲಾಯಿತು. ದೇಸಾಯಿ ಮತ್ತು ಇಂದಿರಾಗಾಂಧಿಯವರ ನಡುವೆ ನಡೆದ ಸ್ಪರ್ಧೆಯಲ್ಲಿ ದೇಸಾಯಿ  ಸುಮಾರು 150 ಮತ ಗಳಿಸಿದರೆ ಇಂದಿರಾ ಸುಮಾರು 350ಕ್ಕಿಂತ ಹೆಚ್ಚು ಮತ ಪಡೆದು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದರು.

ಇಂದಿರಾ ಪ್ರಧಾನಿಯಾದ ಹೊಸದರಲ್ಲಿ ಕಾಂಗ್ರೆಸ್ ನ ಕೆಲವು ಹಿರಿಯರು ವಿರೋಧ ಪಕ್ಷದವರು ಆಕೆಯನ್ನು ಗೌರವಿಸುತ್ತಿರಲಿಲ್ಲ. ಒಬ್ಬ ಹೆಣ್ಣಿನ ಕೈ ಕೆಳಗೆ ಕೆಲಸ ಮಾಡಬೇಕೇ? ಇಷ್ಟು ವಯಸ್ಸು ರಾಜಕೀಯ ಅನುಭವ ಇರುವ ನಾವು ಈ ಅನನುಭವಿ ಹುಡುಗಿಯ ಆಜ್ಞೆ ಪಾಲಿಸುತ್ತಾ ಆಕೆಯ ಅಧೀನದಲ್ಲಿ ಕೆಲಸ ಮಾಡಬೇಕೇ ಎಂಬುದೇ ಈ ಅಗೌರವಕ್ಕೆ ಕಾರಣವಾಗಿತ್ತು.‌ ಇಂದಿರೆಯ ಮೊದಮೊದಲ ವರ್ಷಗಳ ಆಡಳಿತ ಆಂತರಿಕ ಅಸಮಧಾನ ಉದಾಸೀನ ಬೇಕಂತಲೇ ಅಸಹಕಾರದಿಂದ ನಡೆದುಕೊಳ್ಳುತ್ತಿದ್ದ ಸಹೋದ್ಯೋಗಿ ಮಂತ್ರಿಮಂಡಲ ಒಂದೆಡೆಯಾದರೆ; ಅತೀ ಚಿಕ್ಕ ವಯಸ್ಸಿಗೆ ದೊಡ್ಡ ಹುದ್ದೆಯನ್ನು ನಿಭಾಯಿಸುವ ಸವಾಲು ಮತ್ತೊಂಡೆಯದಾಗಿತ್ತು.‌ ಇಂದಿರಾ ಹಂತಹಂತವಾಗಿ ಬಲಗೊಳ್ಳುತ್ತಾ ನಡೆದರು. ರಾಜಕಾರಣದಲ್ಲಿ ತಂದೆಯಿಂದ ಬಂದಿದ್ದ ಜ್ಞಾನ ಒಳನೋಟಗಳು ಆಕೆಯನ್ನು ಪರಿಪಕ್ವ ರಾಜಕೀಯ ಮುತ್ಸದ್ದಿಯಾಗಿಸುವಲ್ಲಿ ಪರಿಣಾಮ ಬೀರಿದ್ದವು.‌ ನೆಹರೂ ಅವರಂತೆಯೇ ದೇಶದ ಇತಿಹಾಸ ಪ್ರಪಂಚದ ಇತಿಹಾಸ ಸ್ವಾತಂತ್ರ್ಯ ಚಳುವಳಿಯಲ್ಲಿ ತಂದೆ ಮಹಾತ್ಮಾ ಗಾಂಧಿ, ಶಾಸ್ತ್ರೀ, ಪಟೇಲ್ ಮೊದಲಾದ ನಾಯಕರ ಒಡನಾಟದಿಂದ ಗಳಿಸಿದ್ದ ತಿಳುವಳಿಕೆ ಅನುಭವಗಳನ್ನೇ ತನ್ನ ಆಡಳಿತ ಸೂತ್ರಕ್ಕೆ ಕೈದೀವಿಗೆಯಾಗಿಸಿಕೊಂಡರು.

ಇಂದಿರಾ 20 ಅಂಶಗಳ ಕಾರ್ಯಕ್ರಮಗಳ ಮೂಲಕ ಈ ದೇಶದ ರೈತರು, ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು, ಮಹಿಳೆಯರು, ಜೀತದಾಳುಗಳು, ಗೃಹಕೈಗಾರಿಕೆಗಳು ಮೊದಲಾದವರ ಅಭಿವೃದ್ಧಿಗಾಗಿ ವೈಜ್ಞಾನಿಕವಾಗಿ ಶ್ರಮಿಸಿದ್ದಾರೆ. ಇಂದು ಕೇಂದ್ರ ಸರ್ಕಾರ ಭೂಸ್ವಾಧೀನ ಕಾಯ್ದೆಯ ಮೂಲಕ ರೈತರನ್ನು ವಂಚಿಸಿ ಉಳುವ ಭೂಮಿಯ ಒಡೆತನವನ್ನು ಬೆಳೆಯುವ ಬೆಳೆಸಿನ ಹಕ್ಕುದಾರಿಕೆಯನ್ನು ಕಾರ್ಪೊರೇಟ್ ಕಂಪನಿಗಳು, ರಿಯಲ್ ಎಸ್ಟೇಟ್ ಕುಳಗಳಿಗೆ ಬಲಿಹಾಕಲು ಹೊರಟು ನೂರಾರು ಜನರ ಸಾವು ನೋವು ನಷ್ಟ ಬಲಿದಾನದ ವರ್ಷಾವಧಿಯ ಹೋರಾಟದ ನಂತರ ಹಿಂದೆ ಸರಿದಿದೆ. ದೇಶದ ಜನತೆ ಇಂದಿರೆಯನ್ನು ಈಗ ಸ್ಮರಿಸಬೇಕು.‌ ಇಂದಿರಾ ಜಾರಿಗೆ ತಂದ ‘ಉಳುವವನೇ ಹೊಲದೊಡೆಯ’ ಕಾನೂನು ರೈತರನ್ನೇ ತಾವು ಉಳುತ್ತಿದ್ದ ಭೂಮಿಯ ಮಾಲಕನನ್ನಾಗಿಸಿದ್ದ ಧೀಮಂತೆ. 1972ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ನಡೆದ ಪಾಕ್ ವಿರುದ್ಧದ ಯುದ್ಧದಲ್ಲಿ ಇಂದಿರಾ ಮೆರೆದ ರಾಜಕೀಯ ಚಾಣಾಕ್ಷತೆ ಅಂತಿಂಥಾದ್ದಲ್ಲ. ಮುಂದೆ ಭಾರತಕ್ಕೆ ಮುಳುವಾಗಲಿದ್ದ ಬ್ರಿಟೀಷ್ ಮತ್ತು ಸಂಘಪರಿವಾರದ ಕುತಂತ್ರದ ಕೂಸಾಗಿ ಹುಟ್ಟಿದ್ದ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನವೆಂಬ ವಿಷಬಳ್ಳಿಯ ಬುಡವನ್ನೇ ಕತ್ತರಿಸಿದ್ದರು. ಪ್ರಪಂಚದ ಇತಿಹಾಸದಲ್ಲೇ ಶತ್ರು ರಾಷ್ಟ್ರದ ಸುಮಾರು 96 ಸಾವಿರ ಜನ ಸೈನಿಕರನ್ನು ಮಂಡಿ ಊರಿಸಿ ಶರಾಣಗತರನ್ನಾಗಿಸಿದ ಮತ್ತೊಂದು ಚರಿತ್ರೆ ಇಲ್ಲ. ಇಂದಿರಾ ಇದನ್ನು ಸಾಧ್ಯವಾಗಿಸಿದ್ದರು. ಇದು ಈವರೆಗೆ ಮತ್ತಾರಿಗೂ ಸಾಧ್ಯವಾಗಿಲ್ಲ. ಬಾಂಗ್ಲಾ ಈಗಲೂ ಪಾಕಿಸ್ತಾನದ ಭಾಗವಾಗಿದ್ದಿದ್ದರೆ ಭಾರತದ ಸುತ್ತ ಭಯಾನಕ ಚಕ್ರವ್ಯೂಹವೇ ರಚನೆಯಾಗುತ್ತಿತ್ತು. ಭಾರತ ರಕ್ಷಣೆಗಾಗಿ ಈಗಿನದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತಿತ್ತು. ಚೀನಾ ಈಗ ಭಾರತದ ಗಡಿಯೊಳಗೆ ನುಸುಳಿ ಗ್ರಾಮವನ್ನೇ ನಿರ್ಮಿಸಿಯಾಗಿದೆ. ಪ್ರಧಾನಿ ಮೋದಿಯವರ ವೀರತ್ವದ ಗುಣಗಾನ ನಡೆಯುತ್ತಿದೆ. ದೇಶದ ಭದ್ರತೆ ಕುಸಿದು ಬಿದ್ದಿದೆ. ಇಂದಿರೆಯ ಎದೆಗಾರಿಕೆ, ಇಂದಿರೆಯ ಮುತ್ಸದ್ದಿತನ ಇವರನ್ನು ಈಗ ಅಣಕಿಸುತ್ತಿದೆ. ಜಗತ್ತನ್ನು ಪುರುಷ ಅಹಂ ಆವರಿಸಿಕೊಂಡು ಆಳುತ್ತಿರುವ ಈ ಹೊತ್ತಿನಲ್ಲಿ, ಬಡ ದೇಶದ ಮಹಿಳೆಯೊಬ್ಬಳು ದೇಶದ ಅತ್ಯುನ್ನತ ಹುದ್ದೆಗೆ ಏರಿ ದೇಶವನ್ನು ಜಾಗತಿಕ ಶಕ್ತಿಯಾಗಿಸುವಲ್ಲಿ, ಸ್ವಾವಲಂಬಿಯಾಗಿಸುವಲ್ಲಿ, ತೋರಿದ ಕಾಳಜಿ, ದಿಟ್ಟತನ, ಮಾಡಿದ ಸಾಹಸ, ರೋಮಾಂಚಕಾರಿಯಾದುದು, ಮೈ ನವಿರೇಳಿಸುವಂತದು, ಇಂದಿರೆಯ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಇಂದು ನಮ್ಮ‌ನ್ನು ಎಂತೆಂಥಾ ಕುತಂತ್ರಿಗಳು, ನಯವಂಚಕರು, ವಿದ್ರೋಹಿಗಳು ಆಳುವಂತಾಯಿತಲ್ಲ ಎಂದು ವಿಷಾದವಾಗುತ್ತದೆ.

ಪಂಜಾಬ್ ಪ್ರತ್ಯೇಕತೆಗಾಗಿ ಹೊತ್ತಿ ಉರಿಯುತ್ತಿದ್ದಾಗ ಇಂದಿರಾ ಅಲ್ಲದೆ ಬೇರೆಯವರು ಪ್ರಧಾನಿಯಾಗಿ ಇರುತ್ತಿದ್ದರೆ ಬಹುಶಃ ಅದೊಂದು ಉರಿ ಈಗಲೂ ಆರುತ್ತಿದ್ದಿಲ್ಲ. ಆಪರೇಷನ್ ಬ್ಲೂ ಸ್ಟಾರ್ ಮೂಲಕ ಗುರುದ್ವಾರದಲ್ಲಿ ಅಡಗಿ ಕೂತಿದ್ದ ಬಿಂದ್ರನ್ ವಾಲೆ ಮೊದಲಾದ ಪಂಜಾಬ್ ಪ್ರತ್ಯೇಕತಾವಾದಿಗಳನ್ನು ದಮನ ಮಾಡಿ ಪಂಜಾಬನ್ನು ಉಳಿಸಿಕೊಂಡದ್ದೂ ಮಹಾ ಸಾಹಸವೇ ಆಗಿದೆ. ಪಂಜಾಬ್ ಪ್ರತ್ಯೇಕತಾವಾದಿಗಳ ಹಿಂದೆ ಪಾಕಿಸ್ತಾನದ ಪಿತೂರಿ ಇತ್ತು. ಪಾಕ್ ಗುಪ್ತಚರ ಸಂಸ್ಥೆ ISI ನ ಕೈವಾಡವಿತ್ತು. ಪಾಕ್ ನಿಂದ ಶಸ್ತ್ರಾಸ್ತ್ರಗಳು ಬಂಡುಕೋರರ ದಾಳಿಗಳಿಗೆ ಸರಬರಾಜಾಗುತ್ತಿದ್ದವು. ಇಂದಿರಾ ಆ ಪ್ರತ್ಯೇಕತವಾದಿಗಳನ್ನು ಹತ್ತಿಕ್ಕಿ ನಿಜವಾಗಲೂ ಗೆದ್ದಿದ್ದು ಅಥವಾ ಭಾರತವನ್ನು ಗೆಲ್ಲಿಸಿದ್ದು ಪಾಕಿಸ್ತಾನದ ಈ ತೆರೆಮರೆಯ ಯುದ್ಧದ ವಿರುದ್ಧ. ಈ ಗೆಲುವಿಗಾಗಿ ಇಂದಿರೆಯೇ ಪ್ರಾಣ ಕೊಡಬೇಕಾಯಿತು. ತನ್ನ ಅಂಗರಕ್ಷಕರನ್ನಾಗಿ ನೇಮಿಸಿಕೊಂಡಿದ್ದ ಸಿಖ್ ಯೋಧರಿಂದಲೇ ತನ್ನ ಜೀವಕ್ಕೆ ಕುತ್ತು ಕಾದಿದೆ ಎಂದು ಗುಪ್ತಚರ ಇಲಾಖೆಯ ಸೂಚನೆ ಇದ್ದಾಗಲೂ, ತಾನು ಅವರನ್ನು ತೆಗೆದು ಹಾಕಿದರೆ ಪಂಜಾಬಿನ ಜನ ತನ್ನ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ, ಪಂಜಾಬಿಗಳನ್ನು ಅನುಮಾನಿಸಿದಂತೆಯೂ ಅವಮಾನಿಸಿದಂತೆಯೂ ಆಗುತ್ತದೆ. ಪಂಜಾಬ್ ಭಾರತದ ಭಾಗ ಎಂದು ಪ್ರತಿಪಾದಿಸುವ ಸರ್ಕಾರದ ಮುಖ್ಯಸ್ಥೆಯಾದ ತಾನೇ ಪರಕೀಯವಾಗಿ ನೋಡಿದಂತಾಗುತ್ತದೆ ಎಂಬ ಕಾರಣಕ್ಕೆ ಜೀವದ ಆಸೆ ಬಿಟ್ಟು ನಡೆದುಕೊಳ್ಳುತ್ತಾರೆ‌. ದೇಶವನ್ನು ಶತ್ರು ಬಾಧೆಯಿಂದ ರಕ್ಷಿಸಬೇಕಾದರೆ ಪರಮಾಣುಶಕ್ತಿಯನ್ನು ಸಾಧಿಸಲೇಬೇಕೆಂದು ತೀರ್ಮಾನಿಸಿ ಜಾಗತಿಕ ಪ್ರತಿರೋಧಕ್ಕೂ ಜಗ್ಗದೆ, ಅಣ್ವಸ್ತ್ರ ಶೋಧನೆಗೆ ಚಾಲನೆ ನೀಡಿ ಭಾರತದ ಶಕ್ತಿಯನ್ನು ಜಗತ್ತಿಗೆ ಎತ್ತಿ ತೋರಿಸುತ್ತಾರೆ. ಭಾರತ ಅಣ್ವಸ್ತ್ರ ಹೊಂದುವುದು ತನ್ನ ರಕ್ಷಣೆಗಾಗಿಯೋ ಹೊರತು ಪರರ ಮೇಲೆ ವಿನಾಕಾರಣ ದಾಳಿ ಎಸಗಲಲ್ಲ ಎಂದು ಸಾರುತ್ತಾರೆ. ಪಂಜಾಬಿನಲ್ಲಿ ಬಂಡುಕೋರರ ಮೇಲೆ ಆಪರೇಷನ್ ಬ್ಲೂಸ್ಟಾರ್ ನಡೆದ ಕೇವಲ ನಾಲ್ಕೇ ತಿಂಗಳಲ್ಲಿ ಇಂದಿರೆಯ ಹತ್ಯೆ ನಡೆದುಹೋಗುತ್ತದೆ. 1984, ಅಕ್ಟೋಬರ್ 31 ರ ಬೆಳಗ್ಗೆ ಸುಮಾರು 09 ಗಂಟೆ, 20 ನಿಮಿಷದ ವೇಳೆಗೆ ತಮ್ಮ ಸಿಖ್ ಭದ್ರತಾ ಸಿಬ್ಬಂದಿಯಿಂದಲೇ ಹತರಾಗುತ್ತಾರೆ. ಶತ್ವಂತ್ ಸಿಂಗ್ ಮತ್ತು ಬೀತ್ ಸಿಂಗ್ ಎಂಬ ಅಂಗರಕ್ಷರೇ ಅತ್ಯಂತ ದಾರುಣವಾಗಿ ಗುಂಡಿನ ಮಳೆಗರೆಯುತ್ತಾರೆ. ಮೂವತ್ತು ಗುಂಡುಗಳು ಇಂದಿರೆಯ ದೇಹವನ್ನು ಛಿದ್ರಗೊಳಿಸುತ್ತವೆ. 23 ಗುಂಡುಗಳು ದೇಹವನ್ನು ತೂರಿಕೊಂಡು ಹೊರ ಬಂದರೆ 7 ಗುಂಡುಗಳು ದೇಹದಲ್ಲೇ ಉಳಿಯುತ್ತವೆ.

ಇಂದಿರೆಗೆ ಭಾರತದ ರಾಜಕೀಯ ಇತಿಹಾಸದಲ್ಲಿ ದುರ್ಗೆಯ ಸ್ಥಾನವಿದೆ. ದೇಶದ ರಕ್ಷಣೆ, ದೇಶದ ಮಕ್ಕಳಾದ ರೈತರು ಬಡವರ ರಕ್ಷಣೆಯ ವಿಚಾರ ಬಂದಾಗ ಆಕೆ ದುರ್ಗೆಯಾಗಿಯೇ ನಡೆದುಕೊಂಡು ತೀರ್ಮಾನ ತೆಗೆದುಕೊಂಡಿದ್ದಾರೆ. ‘ಉಳುವವನೇ ಹೊಲದೊಡೆಯ’ ಈ ದೇಶದ ಫ್ಯೂಡಲ್ ಜಾತಿಗಳನ್ನು ಎದುರು ಹಾಕಿಕೊಂಡು ಬಡವರ ಪರವಾಗಿ ತೆಗೆದುಕೊಂಡ ಅಸಾಮಾನ್ಯ ನಿರ್ಧಾರವಾಗಿತ್ತು. ಬ್ಯಾಂಕುಗಳ ರಾಷ್ಟ್ರೀಕರಣದ ಮೂಲಕ ಲೇವಾದೇವಿಗಳಿಂದ ಬಡ್ಡಿ ದಂಧೆಯ ದೂರ್ತರಿಂದ ರಕ್ಷಿಸಿ ರೈತರನ್ನು ಸಾಮಾನ್ಯ ಜನರನ್ನು ಉದ್ಧರಿಸುವ ಮಹತ್ವಪೂರ್ಣ ಯೋಜನೆಯಾಗಿತ್ತು. ಉಳ್ಳವರ ಪ್ರತಿನಿಧಿಗಳಾಗಿದ್ದ ದೊಡ್ಡ ದೊಡ್ಡ ಬ್ಯಾಂಕುಗಳು ಎಲ್ಲರಿಗೂ ನಿಲುಕುವಂತೆ ಮಾಡಿದ್ದು ಇದೇ ಇಂದಿರಾ.

ಇಂದು ಇಂದಿರೆಯನ್ನು‌ ನೆನೆಯದಿದ್ದರೆ ಆತ್ಮವಂಚನೆಯಾದೀತು. ಭಾರತದ ಉದ್ಧಾರಕ್ಕೆ ನೆಹರೂ ಕುಟುಂಬದ ಕೊಡುಗೆ ದೊಡ್ಡದಿದೆ. ತ್ಯಾಗ ಎಂಬುದು ಮೋತಿಲಾಲರಿಂದಲೇ ಆ ಕುಟುಂಬಕ್ಕೆ ಬಳುವಳಿಯಾಗಿ ಬಂದಿದೆ. ಇದು ಕುಟುಂಬ ಒಂದರ ಗುಣಗಾನವಲ್ಲ. ಸ್ವತಂತ್ರ ಭಾರತವನ್ನು ಮುನ್ನೆಡೆಸುವ ಶಕ್ತಿ ಅರ್ಹತೆ ಅಂದು ಇದ್ದದ್ದು‌ ಪಂಡಿತ ಜವಹರಲಾಲ್ ನೆಹರೂ ಅವರಿಗೆ ಮಾತ್ರ. ಅಂದಿನ ನಾಯಕರನೇಕರಿಗೆ ಪ್ರಧಾನಿಯಾಗುವ ಅವಕಾಶಗಳಿದ್ದಾಗಲೂ ಅವರೆಲ್ಲರೂ ಸೂಚಿಸಿದ್ದು ನೆಹರೂ ಅವರನ್ನು. ನೆಹರು ಭಾರತಕ್ಕೆ ಇಂದಿರೆಯನ್ನು ಕೊಟ್ಟರು. ಗಂಡುಮಕ್ಕಳಿಲ್ಲ. ನೆಹರು ಸ್ವಾತಂತ್ರ್ಯ ಚಳುವಳಿಯ ಬಿರುಸಿನ ಹೋರಾಟ ಓಡಾಟ ಜೈಲುವಾಸದ ನಡುವೆಯೂ ಮಗಳು ಇಂದಿರೆಯನ್ನು ರೂಪಿಸಿದ್ದರು. ಈ ದೇಶದ ಜನತೆಯನ್ನು ಈ ದೇಶದ ಇತಿಹಾಸವನ್ನು ಜಗತ್ತಿನ ಇತಿಹಾಸವನ್ನು ಹೇಗೆ ನೋಡಬೇಕೆಂದು ಕಲಿಸಿದ್ದರು. ಇಂದಿರೆ ಅಪ್ಪನಿಂದ ಬಳುವಳಿಯಾಗಿ ಅಧಿಕಾರವನ್ನು ಪಡೆಯಲಿಲ್ಲ.

ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು  

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು