March 25, 2023 4:29 pm

ಏಕಕಾಲಕ್ಕೆ ಸತಿಹೋದ ಒಬ್ಬ ಪುರುಷನ, ಮೂವರು ಮಡದಿಯರು

Suresha N Shikaripura

ಕನ್ನಡ ಸ್ನಾತಕೋತ್ತರ ಪದವೀಧರರಾದ ಸುರೇಶ ಎನ್ ಶಿಕಾರಿಪುರ ಇವರು ಬಹುಮುಖಿ ಅಧ್ಯಯನಕಾರರು. ಕನ್ನಡ ಸಾಹಿತ್ಯ, ವಿಮರ್ಶೆ, ಸಂಶೋಧನೆ, ಶಾಸನ, ಇತಿಹಾಸ, ರಾಜಕಾರಣ, ಪರಿಸರ, ಧರ್ಮ, ಕೃಷಿ, ಛಾಯಾಗ್ರಹಣ ಇವರ ಆಸಕ್ತಿಯ ಕ್ಷೇತ್ರಗಳು. ಸಾಗರ, ಶಿಕಾರಿಪುರ, ಧಾರವಾಡ ಮೊದಲಾದೆಡೆ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ, ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮಹಾಸತಿ ಕಥನ

ಇದು ಲಿಪಿರಹಿತ ಮಹಾಸತಿಕಲ್ಲು. ನಮ್ಮ ಶಿಕಾರಿಪುರ ತಾಲ್ಲೂಕಿನ ಇನಾಂ ಬೇಗೂರು ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಪಾರ್ಶ್ವದಲ್ಲಿ ನೆಟ್ಟಿದೆ. ಶಾಸನದ ಶಿಲ್ಪ ಶೈಲಿಯನ್ನು ಗಮನಿಸಿದರೆ ಇದು ಕಲ್ಯಾಣದ ಚಾಳುಕ್ಯರ ಕಾಲದ್ದಿರಬೇಕು ಏಕೆಂದರೆ ಈ ದೇವಾಲಯದ ಮುಂದಿರುವ ಅನೇಕ ಶಾಸನಗಳು ಕಲ್ಯಾಣದ ಚಾಳುಕ್ಯರ ಕಾಲದವು. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಉದ್ದಗಲಕ್ಕೆ ಅಸಂಖ್ಯಾತ ಬಲಿದಾನದ ಶಾಸನಗಳು ಹೆಜ್ಜೆಗೊಂದೊಂದು ಸಿಗುತ್ತವೆ. ಸಾಮಾನ್ಯವಾಗಿ ವೀರಗಲ್ಲು ಬಿದ್ದರೆ ಮುಗಿಯಿತು ಹೋರಾಡಿ ಮಡಿದ ವೀರ ವಿವಾಹಿತನಾಗಿದ್ದರೆ ಏಕಕಾಲಕ್ಕೆ ಅವನ ಹೆಂಡತಿಯು ಚಿತೆ ಏರಿ ಮಹಾಸತಿಯಾಗುತ್ತಿದ್ದಳು. ಅವನಿಗೆ ಅನೇಕ ಪತ್ನಿಯರಿದ್ದರೆ ಅದರಲ್ಲಿ ಅನೇಕರೂ ಸಾಮೂಹಿಕವಾಗಿ ಸತಿಹೋದ ದಾಖಲೆಗಳಿವೆ. ಇಜಿಪ್ಟಿನ ಫೆರೋ ತೀರಿಕೊಂಡಾಗ ಆತನ ನೂರಾರು ಪತ್ನಿಯರು ಅವನೊಂದಿಗೇ ಸತಿಹೋದರು. ಅದರಲ್ಲಿ ಹದಿನಾರು ಇಪ್ಪತ್ತು ವರ್ಷದ ಚಿಕ್ಕ ಹೆಂಡತಿಯರೂ ಇದ್ದರು ಎಂಬುದನ್ನು ಕೇಳಿದರೆ ಮನಸ್ಸು ಮುದುಡಿಹೋಗುತ್ತದೆ. ಸತಿ ಪದ್ಧತಿಯಲ್ಲಿ ಜೋಹರ್ ರಾಜಸ್ಥಾನೀ ಮಹಿಳೆಯರು ಗಂಡ ಸತ್ತಾಗ ಸಾಮೂಹಿಕವಾಗಿ ಚಿತೆಯೇರುತ್ತಿದ್ದದ್ದು. ಅದನ್ನು ಹೊರತುಪಡಿಸಿ ಎರಡು ಬಗೆಯ ಮಹಾಸತಿ ಆಚರಣೆ ನಮ್ಮಲ್ಲಿದ್ದವು. ಒಂದು ಸಹಗಮನ ಮತ್ತೊಂದು ಅನುಗಮನ.

ಸಹಗಮನ – ಗಂಡ ಯುದ್ಧ ಬೇಟೆ ಇಲ್ಲವೇ ಅಪಘಾತದಂತಹಾ ಕಾರಣಗಳಿಗೆ ಸತ್ತುಹೋದರೆ ಆತನ ಚಿತೆಯೊಂದಿಗೆ ಆತನ ಪತ್ನಿ\ಯರು ಕೊಂಡಕ್ಕೆ ಹಾರಿ ಪ್ರಾಣಬಿಟ್ಟರೆ ಅದು ಸತಿ ಸಹಗಮನ. ಅಂದರೆ ತನ್ನ ಪುರುಷನ ಜೊತೆಗೇ ತಾನೂ‌ ಹೊರಟುಹೋಗುವುದು.

ಅನುಗಮನ – ಇದು ಗಂಡ ಸತ್ತ ಸುದ್ದಿ ತಿಂಗಳ ನಂತರವೋ ಆರು ತಿಂಗಳಿಗೋ ಹೀಗೆ ಬಹಳ ದಿನಗಳ ನಂತರ ಗೊತ್ತಾಗುತ್ತಿತ್ತು. ವ್ಯಾಪಾರಕ್ಕೊ ಯುದ್ಧಕ್ಕೋ ಹೋದವ ಏನಾದನೆಂದು‌ ಸುದ್ದಿ ತಿಳಿಯುವುದು ತಡವಾಗುತ್ತಿತ್ತು. ಸತ್ತವನ ಆಭರಣ, ಬಟ್ಟೆ, ಆಯುಧಗಳಲ್ಲಿ ಏನಾದರೊಂದನ್ನು ತಂದು ತೋರಿಸಿದಾಗ ಅದು ತನ್ನ ಗಂಡನದೇ ಎಂದು ಗುರುತಿಸಿ ಆತ ಹೋದ ಜಾಗಕ್ಕೇ (ಸ್ವರ್ಗ) ತಾನೂ ಹೋಗಲು ನಿರ್ಧರಿಸಿ ಚಿತೆಯೇರುತ್ತಿದ್ದದ್ದು ಅನುಗಮನ.

ಸತಿ ಪದ್ಧತಿ ಮೊದಮೊದಲು ಯುದ್ಧದಲ್ಲಿ ಮಡಿದ ವೀರನ ಜೊತೆಗೇ ಆತನ ಹೆಂಡತಿಯೂ ಕೊಂಡಕ್ಕೆ ಹಾರಿ ಪ್ರಾಣಬಿಡುತ್ತಿದ್ದ ಸ್ಥಿತಿಯಲ್ಲಿತ್ತು. ಆದರೆ ಕಾಲಕ್ರಮೇಣ ಪುರುಷ ಬೇಟೆಗೆ ಹೋಗಿ ಕಾಡು ಪ್ರಾಣಿಗಳ ದಾಳಿಯಿಂದ ಸತ್ತರೆ, ಹೊಲಕ್ಕೆ ಹೋಗಿ ಹಾವು ಕಚ್ಚಿ ಸತ್ತರೆ, ಕೊನೆಕೊನೆಗೆ ಗಂಡ ವಯಸ್ಸಾಗಿ ಸತ್ತರೂ ಸತಿಹೋಗುವ ರೂಢಿ ಬೆಳೆದುಬಿಟ್ಟಿತು. ಅವನು ಹೇಗೆ ಸತ್ತರೂ ಅದಕ್ಕೆ ವೀರಮರಣವೆಂಬ ಹಣೆಪಟ್ಟಿ ಕಟ್ಟಲಾಗುತ್ತಿತ್ತು ಎಂಬ ಸಾಧ್ಯತೆ ಅಲ್ಲಗಳೆಯಲಾಗದು. ಸಂಶೋಧಕ ಕೃಷ್ಣಮೂರ್ತಿ ಹನೂರು ಅವರು ಸಂಪಾದಿಸಿರುವ, ಐತಿಹಾಸಿಕ ಕಥನಗೀತೆಗಳ ಸಂಗ್ರಹ ‘ಕತ್ತಾಲ ದಾರಿ ದೂರ’ ಓದಿದರೆ ಮನಸ್ಸು ತಲ್ಲಣಗೊಳ್ಳುತ್ತದೆ. ಯಾವ ಭೀತಿಯೂ ಇಲ್ಲದೆ ಕೊಂಡಕ್ಕೆ ಜಿಗಿದು ಸುಟ್ಟು ಸುರುಟಿಹೋಗುವ ಹೆಣ್ಣುಮಕ್ಕಳು, ಮದುವೆಯೇ ಆಗದಿದ್ದರೂ ಮದುವೆ ಗುರುತಾಗಿದ್ದ ‘ವರ’ ಸತ್ತನೆಂಬ ಸುದ್ಧಿ ತಿಳಿದು ಕೊಂಡಕ್ಕೆ ಬಿದ್ದು ಪ್ರಾಣಕೊಟ್ಟ ಹೆಣ್ಣುಮಕ್ಕಳು, ಒಂದಾ ಎರಡಾ? ಜಿ.ಶಂ.ಪರಮಶಿವಯ್ಯರ ಜನಪದ ಖಂಡಕಾವ್ಯದ ‘ಈರೋಬಿ’ ಗಂಡ ಸತ್ತನೆಂಬ (ಇದು ಅನುಗಮನ ಮಾಸ್ತಿಕಲ್ಲು) ಸುದ್ದಿ ಕೇಳಿ ತಾನು ಸತಿ ಹೋಗಲು ನಿರ್ಧರಿಸುತ್ತಾಳೆ. ಅವಳು ಸತಿಹೋಗಬಾರದೆಂದು ತವರಿನವರೂ ಗಂಡನ ಮನೆಯವರೂ ಎಷ್ಟು ಕೇಳಿಕೊಂಡರೂ ಆಕೆ ತನ್ನ ನಿರ್ಧಾರವನ್ನು ಬದಲಿಸುವುದಿಲ್ಲ. ಆಕೆ ಸತಿಹೊರಡುವ ಅಲಂಕಾರ ಧೈರ್ಯ ಆಕೆಯ ದೃಢತೆ ಮೊದಲಾದವನ್ನು ಜನಪದರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಓದುವಾಗ ರೋಮಾಂಚನ ದುಃಖ ದಿಗಿಲು ಎಲ್ಲವೂ ಆಗುತ್ತವೆ. ಈರೋಬಿಯ ಕಥನಗೀತೆ ಏನೇ ಇರಲಿ; ಹೆಣ್ಣು ಚಿತೆಗೆ ತಾನೇ ಹೋಗಲು ಸಿದ್ದಳಾದರೂ ಅಥವಾ ಆಕೆಯನ್ನು ಬಲವಂತವಾಗಿ ಹೊಗಿಸಿದರೂ ಅದರ ಹಿಂದಿರುವುದು ಪುರುಷಪ್ರಧಾನ ವ್ಯವಸ್ಥೆ. ಹೆಣ್ಣಿಗೆ ಆಸ್ತಿಯ ಹಕ್ಕಿಲ್ಲದುದು. ಗಂಡ ಸತ್ತ ಮೇಲೆ ಬರಬಹುದಾದ ಯಾವುದೇ ಬಗೆಯ ಸಮಸ್ಯೆಗಳಿಗೆ ಹೆಣ್ಣು ಜೀವ ಬೆದರಿ ಈ ನಿರ್ಧಾರ ತೆಗೆದುಕೊಳ್ಳುತ್ತಿತ್ತು. ಸತಿ ಹೋಗುವ ಹೆಣ್ಣೊಬ್ಬಳು ಕೊಂಡದ ಎದುರು ನಿಂತು ಬೆದರಿ ಸತಿಹೋಗಲಾರೆನೆಂದು ಬೇಡಿಕೊಂಡರೂ ಬಿಡದೆ ಬಲವಂತವಾಗಿ ಆಕೆಯನ್ನು ಚಿತೆಗೆ ನೂಕಿದ ಭಯಂಕರ ಹೃದಯವಿದ್ರಾವಕ ಚಿತ್ರಣವನ್ನು ವಿದೇಶಿ ಪ್ರವಾಸಿಗನೊಬ್ಬ (ಬಹುಷಃ ಡೊಮಿಂಗೊ ಫಾಯಸ್? ಅಥವಾ ಬಾರ್ಬೊಸ?) ದಾಖಲಿಸುತ್ತಾನೆ. ಕೊಂಡಕ್ಕೆ ಬಲವಂತವಾಗಿ ದೂಡಿ ಆಕೆಯು ಮೇಲೇಳದಂತೆ ದೊಡ್ಡ ದೊಡ್ಡ ಮರದ ದಿಣ್ಣೆಗಳನ್ನು ಅವಳ ಮೇಲೆ ಎಸೆಯಲಾಗುತ್ತಿತ್ತು. ಅಷ್ಟೆ ಅಲ್ಲ ಕೊಂಡಕ್ಕೆ ಬಿದ್ದಾಕೆಯನ್ನು ದೊಡ್ಡ ದೊಡ್ಡ ಕವೆಗೋಲುಗಳನ್ನು (——<) ಹೂಡಿ ಅದುಮಿ ಹಿಡಿಯಲಾಗುತ್ತಿತ್ತು. ಮಡಿದ ವೀರನಿಗೆ ಮೂರ್ನಾಲಕ್ಕು ಮಡದಿಯರಿದ್ದರೆ ಸವತಿ ಮಾತ್ಸರ್ಯದ ದಳ್ಳುರಿಗೆ ಬಲಿಯಾಗಿ ತಮಗಾಗದ ಯಾರಾದರೊಬ್ಬಳು ಸವತಿಯನ್ನು ಚಿತೆಗೆ ಬಲಿಹಾಕುವ ಪಿತೂರಿಗಳೂ ನಡೆಯುತ್ತಿದ್ದವು. ಸಾಮಾನ್ಯವಾಗಿ ಬ್ರಾಹ್ಮಣೇತರ ಭೂಮಾಲಕ ಮತ್ತು ಯೋಧ ಇಲ್ಲವೇ ಪಾಳೆಗಾರಿ ಕುಟುಂಬಗಳಲ್ಲಿ ನಡೆಯುತ್ತಿದ್ದ ಸತಿ ಆಚರಣೆ ಬೇರೆ ಬೇರೆ ಸಮುದಾಯಗಳಿಗೂ ವಿಸ್ತರಿಸಿದೆ. ಬ್ರಾಹ್ಮಣ ಸ್ತ್ರೀಯರು ಅಪರೂಪಕ್ಕೆ ಸತಿಹೋದ ಉದಾಹರಣೆಗಳಿವೆ. ಇಬ್ಬರು ಲಂಬಾಣಿ ಹೆಣ್ಣುಮಕ್ಕಳೂ ಸತಿಹೋದ ಅಪರೂಪದ ದಾಖಲೆಗಳಿವೆ.

ಸತಿ ಪದ್ಧತಿಯಲ್ಲಿ ಗಂಡ ಸತ್ತ ಮಡದಿಯನ್ನು ಬೆಂಕಿಯಲ್ಲಿ ಮಾತ್ರವೇ ಸುಡುತ್ತಿದ್ದರೆಂದು ತಿಳಿಯಲಾಗಿದೆ; ಇದು ಅರ್ಧ ಸತ್ಯ. ಕೆಲವು ಜನಾಂಗಗಳಲ್ಲಿ ಸುಡುವ ಪದ್ಧತಿ ಇರದೇ ಹೂಳುವ ಪದ್ಧತಿ ಇದ್ದರೆ, ಮಡಿದ ವೀರನ ಶವದ ಜೊತೆಗೆ ಆತನ ಪತ್ನಿಯನ್ನೂ ಜೀವಂತ ಹುಗಿದ ಸಾಕಷ್ಟು ಉದಾಹರಣೆಗಳಿವೆ. ಮಹಾಸತಿ ಆಚರಣೆಯ ಕುರಿತು ಸಂಶೋಧಕ ಬಸವರಾಜ ಕಲ್ಗುಡಿ ಅವರು ‘ಮಹಾಸತಿ ಆಚರಣೆ’ ಅತ್ಯುತ್ತಮ ಕೃತಿಯನ್ನು ಕೊಟ್ಟಿದ್ದಾರೆ. ಈ ಕೃತಿಯು ಮಹಾಸತಿ ಆಚರಣೆಯ ಕುರಿತು ತಿಳಿಯುವವರಿಗೆ, ಚರಿತ್ರೆ ಅಧ್ಯಯನಕಾರರಿಗೆ ಒಂದು ಅತ್ಯುತ್ತಮ ಆಕರಗ್ರಂಥ. ಭಾತತದಾಚೆಗೂ ಸತಿ ಪದ್ಧತಿ ಎಲ್ಲೆಲ್ಲಿ ಹೇಗಿತ್ತೆಂಬುದನ್ನು ಚಾರಿತ್ರಿಕ ಪೌರಾಣಿಕ ಆಧಾರದ ಸಮೇತ ಕಟ್ಟಿಕೊಟ್ಟಿದ್ದಾರೆ.

ಮತ್ತೊಂದು ಮುಖ್ಯ ಸಂಗತಿ ಎಂದರೆ‌, ಸತಿ ಪದ್ಧತಿ ಮುಸ್ಲಿಮರ ದಾಳಿಯಿಂದ ಆಚರಣೆಗೆ ಬಂದಿತೆಂಬ ಹಸಿ ಸುಳ್ಳು. ಭಾರತಕ್ಕೆ ಮುಸ್ಲಿಮರು ಬರುವ ಸಾವಿರಾರು ವರ್ಷಗಳ ಪೂರ್ವದಲ್ಲೇ ರಚನೆಯಾದ ಮಹಾಭಾರತದಲ್ಲಿ ಕೌರವರ ಹೆಂಡತಿಯರು ಸತಿಹೋದರೆಂದು ಉಲ್ಲೇಖಗಳಿವೆ. ಮುಸ್ಲಿಮರು ದಕ್ಷಿಣ ಭಾರತಕ್ಕೆ ಬರುವ ಸುಮಾರು ನಾನೂರು ಐನೂರು ವರ್ಷಗಳ ಮೊದಲೇ ಸತಿಯಾದ ಮಹಿಳೆಯರ ಮಾಸ್ತಿಕಲ್ಲುಗಳು ಚೋಳ, ಪಾಂಡ್ಯ, ಚೇರ, ಪಲ್ಲವ, ಗಂಗ, ಕದಂಬ, ಸೇವುಣ, ರಾಷ್ಟ್ರಕೂಟ, ಚಾಳುಕ್ಯ ಮೊದಲಾದವರ ಕಾಲಘಟ್ಟದಲ್ಲಿ ನೂರಾರು ಸತಿಗಲ್ಲುಗಳನ್ನು ನಿಲ್ಲಿಸಲಾಗಿದೆ. 

ಸತಿ ಪದ್ಧತಿಗೆ ಕಡಿವಾಣ ಹಾಕಿದ್ದ ಮೊಘಲ್ ಸಾಮ್ರಾಟ ಔರಂಗಜೇಬ್  

ಭಾರತದಲ್ಲಿ ಪ್ರತಿನಿತ್ಯ ನೆಡೆಯುತ್ತಿದ್ದ ಈ ಭಯಾನಕ ಹತ್ಯಾಕಾಂಡವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದವನು ಇದೇ ಔರಂಗಜೇಬ. ಔರಂಗಜೇಬನ ಕುರಿತಾದ ಚರಿತ್ರೆಯ ಸಂಗತಿಗಳು ಏನೇ ಇರಲಿ; ಆತ ಸತಿಪದ್ಧತಿಯನ್ನು ನಿಷೇಧಿಸದಿದ್ದರೂ ನಿಯಂತ್ರಿಸಿದ. ಸತಿಯನ್ನು ಬಲವಂತವಾಗಿ ಆಚರಿಸದಂತೆ ಕಟ್ಟಪ್ಪಣೆ ಮಾಡಿದ್ದ ಆತ ಸತಿ ಹೋಗುವವರು ಮೊದಲು ಸರ್ಕಾರದ ಕಛೇರಿಯನ್ನು ಸಂಪರ್ಕಿಸಿ ಅಧಿಕಾರಿಗೆ ವಿಷಯ ಮುಟ್ಟಿಸಬೇಕಿತ್ತು ಹಾಗೂ ಆತನ ಒಪ್ಪಿಗೆ ಪಡೆಯಬೇಕಿತ್ತು ಸದರಿ ಅಧಿಕಾರಿಯು ಸತಿ ಹೋಗುವ ಮಹಿಳೆಯನ್ನು ಖಾಸಗಿಯಾಗಿ ಕರೆಸಿಕೊಂಡು ಆಕೆಯು ಸತಿಹೋಗದಂತೆ ಮನ ಒಲಿಸಬೇಕಿತ್ತು. ಆಕೆಗೆ ಬದುಕುವ ಜೀವನ ಆಸೆ ಬರುವಂತೆ ಮನಸ್ಸು ಪರಿವರ್ತಿಸುವ ಪ್ರಯತ್ನ ಮಾಡಬೇಕಿತ್ತು. ಆಕೆಯ ಸಂಬಂಧಿಕರನ್ನೂ ಖಾಸಗಿಯಾಗಿ ಕರೆಸಿ ತಿಳಿಹೇಳಬೇಕಿತ್ತು. ಇಷ್ಟಾದರೂ ಆಕೆಯು ನಿರ್ಧಾರ ಬದಲಿಸದಿದ್ದರೆ ಮಾತ್ರವೇ ಸತಿ ಹೋಗಲು ಆಕೆಗೆ ಪರವಾನಗಿ ಸಿಗುತ್ತಿತ್ತು. ಆಕೆ ಸತಿಹೋಗುವ ಕೊನೆ ಕ್ಷಣದವರೆಗೆ ಸರ್ಕಾರದ ಅಧಿಕಾರಿಗಳು ಅಲ್ಲಿರಬೇಕಿತ್ತು. ಆಕೆ ಬೆಂಕಿಯ ಕೊಂಡವನ್ನು ನೋಡಿ ಹೆದರಿದಳೆಂದರೆ ಬದುಕುವ ಆಸೆ ವ್ಯಕ್ತಪಡಿಸಿ ಪ್ರತಿರೋಧಿಸಿದಳೆಂದರೆ ಆಕೆಯನ್ನು ರಕ್ಷಿಸಲಾಗುತ್ತಿತ್ತು. ಇದು ಔರಂಗಜೇಬನ ಔದಾರ್ಯ. ಚರಿತ್ರೆಯನ್ನು ಹೇಗೆ ನೋಡುತ್ತೇವೋ ಹಾಗೆ ಕಾಣುತ್ತದೆ. ಹೇಗೆ ಓದುತ್ತೇವೋ ಹಾಗೆ ಅರ್ಥವಾಗುತ್ತದೆ.

ಸತಿ ಹೋಗುವ ಪ್ರದೇಶದ ಬಳಿ ಆಹುತಿಯಾಗುವ ಹೆಣ್ಣು ಹೆದರಿ ಜೀವದಾಸೆಗೆ ಬಿದ್ದು ತಪ್ಪಿಸಿಕೊಂಡು ಹೋಗಲು ಬಾರದಂತೆ ಎತ್ತೆತ್ತರದ ಬೇಲಿ ಕಟ್ಟಿ ಬಲವಾದ ದಿಡ್ಡಿಬಾಗಿಲುಗಳನ್ನು ಹಾಕುತ್ತಿದ್ದರು, ನಿರ್ಮಿಸುತ್ತಿದ್ದರು. ಕಾವಲು ನಿಲ್ಲುತ್ತಿದ್ದರು. ಕೊಂಡದಲ್ಲಿ ಧಿಗಿಧಿಗಿ ಉರಿಯುವ ಬೆಂಕಿ ಆಕೆಗೆ ಕಾಣದಂತೆ ಕಂಬಳಿಯನ್ನು ಅಡ್ಡಲಾಗಿ ಹಿಡಿದಿರುತ್ತಿದ್ದರು. ಸುತ್ತ ನೆರೆದ ಸಾವಿರಾರು ಜನ ಆಕೆಯ ಉಧೋ ಹೇಳುತ್ತಿದ್ದರು, ಜಯಜಯಕಾರ ಹಾಕುತ್ತಿದ್ದರು. ಆಕೆ ಜನರೆಡೆ ಕೈಬೀಸಿ ಅವರಿಗೆ ಆಶೀರ್ವದಿಸುತ್ತಿದ್ದಳು. ಇವೆಲ್ಲ ನೆಡೆಯುತ್ತಿದ್ದಾಗಲೇ ತನ್ನ ಮೈಮೇಲಿನ ಆಭರಣ ಮೊದಲಾದವನ್ನು ಜನರೆಡೆ ಎಸೆಯುತ್ತಿದ್ದಳು. ಬೆಂಕಿಯಲ್ಲಿ ಬಿದ್ದು ಉರಿದು ಬೂದಿಯಾಗುತ್ತಿದ್ದಳು. ಮಹಾಸತಿ ಎಂಬ ಪಟ್ಟ, ಅವಳು ಮಾಸ್ತಮ್ಮನಾಗುತ್ತಿದ್ದಳು, ತಾನು ಬೆಂದು ಮಕ್ಕಳಿಲ್ಲದ ಬಂಜೆಯರಿಗೆ ಮಕ್ಕಳಾಗದ ದಂಪತಿಗಳಿಗೆ ಮಕ್ಕಳನ್ನು ನೀಡುವ ಮಾತಾಯಿಯಾಗಿ, ಊರ ಕಾಯುವ ಶಕ್ತಿದೇವತೆಯಾಗಿ, ಹೊಲದ ಪೈರು ಪಚ್ಚೆ ಬೆಳೆಯುವ ಹುಲುಸಮ್ಮನಾಗಿ ರೂಪಾಂತರ ಹೊಂದುತ್ತಿದ್ದಳು. ಈ ಆರಾಧನೆಯ ಅಂಧಕಾರದಲ್ಲಿ ಸತ್ಯವು ಮರೆಯಾಗುತ್ತಿತ್ತು.

ಹೀಗೆ ಬಲವಂತವಾಗಿ ಸತಿಯಾಗುತ್ತಿದ್ದ ಮಹಿಳೆಯೋರ್ವಳನ್ನು ಬ್ರಿಟಿಷ್ ಮೆನ್ ಒಬ್ಬ ರಕ್ಷಿಸಿ, ಆತ ಆಕೆಯನ್ನೇ ಮದುವೆಯಾದ ಸಂಗತಿಯೂ ದಾಖಲಾಗಿದೆ. ಸ್ವಾತಾಂತ್ರ್ಯಾ ನಂತರ ಇತ್ತೀಚೆಗೆ ಸತಿಹೋದ ರಾಜಸ್ಥಾನದ ರೂಪ್ ಕನ್ವರ್ ಳ ಕರಾಳ ನೆನಪಿನ್ನೂ ಮಾಸಿಲ್ಲ. ಆದರೂ ಸತಿಯರ ಆರಾಧನೆ ನಡೆಯುತ್ತಿದೆ. ನಾನು ಸದಾ ಶ್ರದ್ಧಾಂಜಲಿ ಅರ್ಪಿಸುತ್ತೇನೆ, ಅಸಂಖ್ಯಾತ ಹೆಣ್ಣುಮಕ್ಕಳಿಗಲ್ಲ. ಚರಿತ್ರೆಯಲ್ಲಿ ಆಗಿಹೋದ ಮನುಷ್ಯತ್ವವಿಲ್ಲದ ಪುರುಷಪ್ರಧಾನ ವ್ಯವಸ್ಥೆಗೆ.

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ