March 25, 2023 4:49 pm

ಭಾರತೀಯರ ಬದುಕು ಅಂಚಿಗೆ ಬಂದು ನಿಂತಿದೆ

ಕೆ.ಎಸ್.ಸತೀಶ್ ಕುಮಾರ್, ಮಾನವ ಬಂಧುತ್ವ ವೇದಿಕೆ ಸಂಚಾಲಕ, ಮಂಗಳೂರು ವಿಭಾಗ

ಸ್ವಾತಂತ್ರ್ಯ ಬಂದು 74 ವರ್ಷಗಳಾಗುತ್ತಿವೆ. ಭಾರತೀಯರ ಬದುಕು ಯಾವ ಆಯಾಮದಲ್ಲಿ ನೋಡಿದರು ತದ ಅಂಚಿಗೆ ಬಂದು ನಿಂತಿದೆ.

ಈ ಸಂದರ್ಭದಲ್ಲಿ ಪಂಚೇಂದ್ರಿಯಗಳನ್ನು ಕಳೆದುಕೊಂಡಿರುವ ಪ್ರಭುತ್ವ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವನ್ನು ನಡೆಸಬಹುದು. ರೋಗಗ್ರಸ್ತ ದೇಹಕ್ಕೆ ಪೌಡರು ಕ್ರೀಮುಗಳನ್ನು ಬಳಿದು, ವಿಶ್ವಮಟ್ಟದಲ್ಲಿ ಸಶಕ್ತ ದೇಶ ಎಂದು ತೋರಿಸಿಕೊಳ್ಳಲುಬಹುದು.

ಜಗತ್ತಿನ 10 ಶ್ರೀಮಂತರಲ್ಲಿ ಎಷ್ಟು ಜನ ಭಾರತೀಯರಿದ್ದಾರೆ. ಶಸ್ತ್ರಾಸ್ತ್ರ ಉಗ್ರಾಣದಲ್ಲಿ ಎಷ್ಟು ಶಸ್ತ್ರಗಳಿವೆ. ಎಷ್ಟು ಸಾರ್ವಜನಿಕ ಉದ್ದಿಮೆಗಳನ್ನು ಕೊಂದು ರಣಹದ್ದುಗಳಿಗೆ ಇಟ್ಟಿದ್ದೇವೆ. ಗಂಗಾನದಿಯಲ್ಲಿ ಹೆಣಗಳನ್ನು ತೇಲಿಸುವ ಮೂಲಕ, ಕೊರೊನವನ್ನು ಹೇಗೆ ಹಿಮ್ಮೆಟ್ಟಿಸಿದ್ದೇವೆ, ಬಡತನ, ನಿರುದ್ಯೋಗ, ದಲಿತ ಮುಂತಾದ ಪದಗಳು ದೇಶಕ್ಕೆ ಅಪಮಾನಕರವಾಗಿರುವುದರಿಂದ ಆ ಪದಗಳನ್ನೇ ನಿಷೇಧಿಸಿದ್ದೇವೆ. ಅದನ್ನು ಬಳಸುವವರನ್ನು ದೇಶದ್ರೋಹಿಗಳೆಂದು ಪರಿಗಣಿಸಿದ್ದೇವೆ. ಮುಂತಾದ ಮಾನದಂಡಗಳನ್ನು ಇಟ್ಟುಕೊಂಡು, ಮೈಕಿನ ಮುಂದೆ ನಿಂತು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳಬಹುದು.

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತವನ್ನು ಹಾವಾಡಿಗರ ದೇಶ ಎಂದೇ ಹೀಗೆಳೆಯುತ್ತಿದ್ದರು ಎಂದು ಕೇಳಿದ್ದೇವೆ. ಇದಕ್ಕೆ ಕಾರಣವೂ ಇದ್ದೀತು. ಕಿತ್ತು ತಿನ್ನುವ ಬಡತನ, ರೋಗ ರುಜಿನ, ಆಹಾರಕೊರತೆ, ಶೂನ್ಯಮಟ್ಟದ ಶಿಕ್ಷಣ, ಜಾತೀಯತೆ, ಮೌಢ್ಯ, ಕಂದಾಚಾರಗಳು, ಈ ಉಪಖಂಡದಲ್ಲಿ ತುಂಬಿ, ಅರಾಜಕ ಜೀವನಕ್ರಮವೊಂದು ಅಸ್ತಿತ್ವದಲ್ಲಿತ್ತು.

ಮಹಾ ವೈಜ್ಞಾನಿಕ ವಾದಿಯಾಗಿದ್ದ ಮೊದಲ ಪ್ರಧಾನಿ ನೆಹರು, ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದರು. ಕೇವಲ ಮೂರುನಾಲ್ಕು ದಶಕಗಳ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಉದ್ದಿಮೆ, ನೀರಾವರಿ, ಕೃಷಿ, ರಕ್ಷಣೆ ಹೀಗೆ ಸಮಸ್ತ ರಂಗದಲ್ಲೂ ದೇಶ, ಗಮನಾರ್ಹ ಸಾಧನೆ ಮಾಡಿರುವ ಬಗ್ಗೆ ಹೆಜ್ಜೆ ಹೆಜ್ಜೆಗೂ ಪುರಾವೆಗಳು ಸಿಗುತ್ತವೆ. ಅವರು ರೂಪಿಸಿದ ಪಂಚವಾರ್ಷಿಕ ಯೋಜನೆಗಳೇ ಈ ದೇಶವನ್ನು ಹಾವಾಡಿಗರ ಸ್ಥಿತಿಯಿಂದ ನಾಗರೀಕ ಸ್ಥಿತಿಗೆ ಕೊಂಡೊಯ್ದಿರುವುದನ್ನು ಯಾರೂ ಅಲ್ಲಗಳೆಯಲಾರರು.

ಅವರು ಅನುಸರಿಸಿದ ಸಮ್ಮಿಶ್ರ ಆರ್ಥಿಕ ನೀತಿಯ ಬಗ್ಗೆ ಕಟುಟೀಕೆಗಳು ಇದ್ದವು. ಅವರು ಆರಂಭಿಸಿದ ಬೃಹತ್ ಕೈಗಾರಿಕೆಗಳು, ನಗರೀಕರಣ ಬಂಡವಾಳ ಶಾಹಿಗಳ ಪರವಾಗಿದ್ದವು. ಅವರು ಊಳಿಗಮಾನ್ಯ ವ್ಯವಸ್ಥೆ ಪರವಿದ್ದರು. ಗ್ರಾಮೀಣ ಭಾರತವನ್ನು ನಿರ್ಲಕ್ಷಿಸಿದರು ಮುಂತಾದ ಟೀಕೆಗಳಿದ್ದವು. ನೆಹರು ಅವರ ರಾಜನೀತಿ ವಿರುದ್ದ ತತ್ವಜ್ಞಾನಿಗಳಾದ ಅಂಬೇಡ್ಕರ್, ಲೋಹಿಯಾರಂತವರು ಇದ್ದಿದ್ದು ಪ್ರಜಾಪ್ರಭುತ್ವದ ಬೆರಗು ಎನ್ನಬಹುದು.

ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ನೆಹರು ಅವರಿಗೆ ಅಪಾರ ಗೌರವ ಇದ್ದ ಕಾರಣಕ್ಕೆ ಸಂಸತ್ತಿನಲ್ಲಿ ವೈಚಾರಿಕ ಸಂಘರ್ಷದ ಬೆಳಕು ತುಂಬಿ, ಜನತಂತ್ರ ವ್ಯವಸ್ಥೆಯ ಒಂದು ಮಾದರಿಯನ್ನು ಸೃಷ್ಟಿಸಿತ್ತು.

ಕೇವಲ ಏಳು ದಶಕಗಳ ಅವಧಿಯಲ್ಲಿ ಈ ಮಾದರಿಯ ಅಧಃಪತನದ ಸ್ಥಿತಿಯಲ್ಲಿ ಇದ್ದೇವೆ. ಪ್ರಜಾಪ್ರಭುತ್ವದ ಜೀವಾಳವೂ ದಿಕ್ಸೂಚಿಯೂ ಅಗಬೇಕಿದ್ದ ಸಂವಿಧಾನ ಕೋಮಾ ಸ್ಥಿತಿಯಲ್ಲಿದೆ ಎಂಬುದು ಜಗತ್ತಿಗೇ ಅರ್ಥವಾಗಿದೆ. ಆದರೆ ದೇಶದ ಅರ್ಧದಷ್ಟು ಜನರಿಗೆ ಅರ್ಥವಾಗದೇ ಇರುವುದೇ ಈ ಸಂದರ್ಭದ ದುರಂತ.

ರಾಜಕಾರಣ ಅಥವಾ ರಾಜಕೀಯ ಎಂಬ ಪದಗುಚ್ಛಗಳು ಅಪಾರ್ಥಕ್ಕೆ ಒಳಗಾಗಿವೆ. ಇದಕ್ಕೆ ವ್ಯಕ್ತಿಗಳು ಕಾರಣವಿರಬಹುದು. ಬದಲಿಗೆ ಇಲ್ಲಿ ರಾಜನೀತಿ ಎಂದುಕೊಳ್ಳೋಣ. ರಾಜನೀತಿಗೆ ಪ್ರಪಂಚದಾದ್ಯಂತ ಉನ್ನತ ಸ್ಥಾನವಿದೆ. ಏಕೆಂದರೆ ಒಂದು ದೇಶದ ಏಳಿಗೆಗೆ ರಾಜನೀತಿಯೇ ಕಾರಣವಾಗುತ್ತದೆ. ರಾಜಕೀಯ ಪಕ್ಷಗಳು ನೀತಿಯನ್ನು ರೂಪಿಸುತ್ತವೆ.

ಚುನಾವಣಾ ಆಯೋಗದ ಪ್ರಕಾರ ದೇಶದಲ್ಲಿ 2698 ರಾಜಕೀಯ ಪಕ್ಷಗಳು ನೋಂದಣಿಯಾಗಿವೆ. ಪ್ರಸ್ತುತ ಎಂಟು ರಾಷ್ಟ್ರೀಯ ಪಕ್ಷಗಳು, 52 ಪ್ರಾದೇಶಿಕ ಪಕ್ಷಗಳು ಸಕ್ರಿಯವಾಗಿವೆ.

ರಾಜಕೀಯ ಪಕ್ಷ ಎಂದರೆ ನಿರ್ದಿಷ್ಟ ಸಿದ್ದಾಂತಗಳನ್ನು ಒಪ್ಪುವ ಅಥವಾ ಬದ್ದರಾಗುವ, ಪಾಲಿಸುವ ಅಥವಾ ಅನುಸರಿಸುವ ಜನರ ಗುಂಪು ಎಂದು ಸರಳವಾಗಿ ಅಂದುಕೊಳ್ಳೋಣ.

ಬಿಜೆಪಿಯನ್ನು ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳು ಘೋಷಣೆ ಮಾಡಿಕೊಂಡಿರುವ ಸಿದ್ಧಾಂತಗಳು, ಸಂವಿಧಾನದ ಆಶಯಗಳನ್ನು ಪ್ರತಿಧ್ವನಿಸುತ್ತವೆ. ಅಂದರೆ ಸಂವಿಧಾನಕ್ಕೆ ಬದ್ಧವಾಗಿವೆ.

ಸಮಾಜವಾದ, ಸಮತಾವಾದ, ಜ್ಯಾತ್ಯತೀತತೆ, ಸಾಮಾಜಿಕ ನ್ಯಾಯ, ಆರ್ಥಿಕ ಉದಾರವಾದ, ಕೋಮುವಾದಿ ವಿರೋಧಿ ಮುಂತಾದ ಸಿದ್ದಾಂತಗಳನ್ನು ಘೋಷಿಸಿಕೊಂಡಿವೆ.

1949 ನವೆಂಬರ್ 26ರಂದು ಬಾಬಾಸಾಹೇಬರು, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ, ದಿಕ್ಸೂಚಿ, ಮಾರ್ಗಸೂಚಿ, ಕಾನೂನು ಗ್ರಂಥವನ್ನು ಸಮರ್ಪಿಸಿದರು.

“ಭಾರತದ ಜನತೆಯಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಧರ್ಮನಿರಪೇಕ್ಷ” ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿ ಜನತೆಯಾದ ನಾವು ಪೋಷಿಸಿ ಕೊಳ್ಳುತ್ತೇವೆ ಎನ್ನುವುದೇ ಸಂವಿಧಾನದ ಸಾರ.

ಬಾಬಾಸಾಹೇಬರು ಸಂವಿಧಾನ ಸಮರ್ಪಿಸಿದ ಸಂದರ್ಭದಲ್ಲಿ, ಜನಸಂಘದ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ನ ಮುಖವಾಣಿ, ಆರ್ಗನೈಸರ್ ಪತ್ರಿಕೆ ಅಗ್ರ ಲೇಖನವೊಂದನ್ನು ಬರೆದು ಇದು ಈ ದೇಶದ  ಸಂವಿಧಾನವಲ್ಲ. ಪಾಶ್ಚ್ಯಾತ್ಯರ ಸಂವಿಧಾನ ಎಂದು ಟೀಕಿಸಿತು. ಇದರ ಅರ್ಥ ಮನುವಾದವೇ ನಮ್ಮ ಸಂವಿಧಾನ ಎಂದು.

ಆರೆಸೆಸ್, ತನ್ನ ರಾಜಕೀಯ ಪಕ್ಷವನ್ನಾಗಿ 1951ರಲ್ಲಿ ಭಾರತೀಯ ಜನಸಂಘವನ್ನು ಅಸ್ತಿತ್ವಕ್ಕೆ ತಂದಿತು. ಆ ಸಂದರ್ಭದಲ್ಲಿ ಹಿಂದೂ ರಾಷ್ಟ್ರೀಯತೆ ಎಂಬ ಸಿದ್ಧಾಂತವನ್ನು ಘೋಷಿಸಿತು. 1965ರಲ್ಲಿ ದೀನ ದಯಾಳ ಉಪಾಧ್ಯಾಯ ಎಂಬುವವರು ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳು ಎಂಬ ಅವಿಭಾಜ್ಯ ಮಾನವತಾವಾದ ಎಂಬ ಮತ್ತೊಂದು ಸಿದ್ಧಾಂತವನ್ನು ಸೇರಿಸಿದರು. ಈ ರಾಜಕೀಯ ಪಕ್ಷದ ಸಿದ್ಧಾಂತಗಳನ್ನು ರೂಪಿಸಿದವರು ಎಲ್ಲರೂ ವೈದಿಕರೇ. ಒಬ್ಬ ಶೂದ್ರನು ಇಲ್ಲ ಎಂಬುದನ್ನು ಮರೆಯಲಾಗದು. ಜನಸಂಘ ಭಾರತೀಯ ಜನತಾ ಪಕ್ಷವಾಗಿ ರೂಪಾಂತರವಾದಾಗ ಅದಕ್ಕೆ ಆಧುನಿಕ ಉದಾರೀಕರಣ ಎಂಬ ಸಿದ್ಧಾಂತವು ಸೇರ್ಪಡೆಯಾಯಿತು. ಅಂಬಾನಿ, ಅದಾನಿಗಳು ಈ ಸಿದ್ದಾಂತದ ನೇರ ಫಲಾನುಭವಿಗಳಾಗಿದ್ದಾರೆ.

ಇದೇನೆ ಇರಲಿ. ಸಂವಿಧಾನ ಸ್ಪಷ್ಟವಾಗಿ ತನ್ನ ಆಶಯದಲ್ಲೇ “ಧರ್ಮ ನಿರಪೇಕ್ಷ” ಎನ್ನುವುದನ್ನು ಒತ್ತಿ ಹೇಳಿದೆ. ಇದರರ್ಥ ಆಡಳಿತದಲ್ಲಿ ಅಥವಾ ಪ್ರಭುತ್ವದಲ್ಲಿ ಯಾವುದೇ ಧರ್ಮದ ವಿಚಾರ ಇರದು. ಆದರೆ ಹಿಂದು ರಾಷ್ಟ್ರೀಯ ವಾದ ಎನ್ನುವ ಸಿದ್ದಾಂತವೇ ಸಂವಿಧಾನವನ್ನು ಪ್ರತಿರೋಧಿಸುವಂತಹದ್ದು.

1975ರಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗದೇ ಇದ್ದರೆ, ಬಿಜೆಪಿ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ, ಜನಸಂಘವಾಗಿ ಮುಂದುವರೆಯುತ್ತಿತ್ತೇನೊ. ಏಕೆಂದರೆ ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ, ಸಮಾಜವಾದಿಗಳೊ, ಸಮತಾವಾದಿಗಳೊ ಇರುತ್ತಿದ್ದರು. ಅರವತ್ತರ ದಶಕದಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ, ಸಮಾಜವಾದಿಗಳೇ ಇದ್ದ ಸಂಸ್ಥಾ ಕಾಂಗ್ರೆಸ್ ವಿರೋಧ ಪಕ್ಷವಾಯಿತು.

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಜನತಂತ್ರ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಸರ್ವಾಧಿಕಾರಿಯಾದರು. ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಸಮಾಜವಾದಿಗಳು ಕಮ್ಯುನಿಸ್ಟರು ದೇಶವ್ಯಾಪಿ ಚಳುವಳಿ ರೂಪಿಸಿದರು. ಈ ಚಳುವಳಿಯೊಳಗೆ ಜನ ಸಂಘವು ಸೇರಿಕೊಂಡಿತ್ತು. ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಗುರಿಯೊಂದೇ ಈ ಚಳುವಳಿಗೆ ಇತ್ತು. ಆ ಸಂದರ್ಭದಲ್ಲಿ ಅವರವರ ರಾಜಕೀಯ ಸಿದ್ಧಾಂತಗಳು ಗೌಣವಾದವು.

ಈ ಚಳುವಳಿಯನ್ನು ಮುನ್ನಡೆಸಿದವರು ಜಯಪ್ರಕಾಶ ನಾರಾಯಣ, ಆಚಾರ್ಯ ಜೆಬಿ ಕೃಪಲಾನಿ ಜನತಾ ಪಕ್ಷವನ್ನು ಸ್ಥಾಪಿಸಿದರು. ಆ ಸಂದರ್ಭದಲ್ಲಿ ಭಾರತೀಯ ಲೋಕದಳ, ಸಂಸ್ಥಾ ಕಾಂಗ್ರೆಸ್, ಮತ್ತು ಜನಸಂಘ ವಿಲೀನವಾದವು.

1977ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೂ, ಮುಂಛೂಣಿಯಲ್ಲಿಯಲ್ಲಿದ್ದವರು ಸಮಾಜವಾದಿಗಳು. ಜೆಪಿ, ಕೃಪಲಾನಿ, ಮಧು ದಂಡವತೆ, ಚರಣ್ ಸಿಂಗ್, ರಾಜ್ ನಾರಾಯಣ್, ಜಾರ್ಜ್ ಫರ್ನಾಂಡೀಸ್, ಚಂದ್ರಶೇಖರ್, ಜಗಜೀವನರಾಂ ಕರ್ಪೂರಿ ಠಾಕೂರ್ ಮುಂತಾದವರ ನಾಯಕತ್ವದಲ್ಲಿ ಇತ್ತು. ಜನಸಂಘದ ಪ್ರಮುಖ ನಾಯಕರೆಂದರೆ, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ ಅಡ್ವಾಣಿ.

1980ರವೇಳೆಗೆ ಸಮಾಜವಾದಿಗಳ ತಾತ್ವಿಕ ಮತ್ತು ವೈಯಕ್ತಿಕ ಸಂಘರ್ಷ ತಾರಕಕ್ಕೆ ಹೋಗಿ ಜನತಾಪಕ್ಷ ವಿಭಜನೆಯಾಯಿತು. ಅಲ್ಲಿ ಅಳಿದು ಉಳಿದಿದ್ದ ಕಾಂಗ್ರೆಸ್ ವಿರೋಧಿಗಳನ್ನು ಸಂಘಟಿಸಿ, ಅಟಲ್ ಮತ್ತು ಅಡ್ವಾಣಿ ಭಾರತಿಯ ಜನತಾಪಕ್ಷವನ್ನು ಸ್ಥಾಪಿಸಿದರು.

1990ರವರೆಗೂ ನೇರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. 1988ರಲ್ಲಿ ಕಾಂಗ್ರೆಸ್ ನಿಂದ ಹೊರಬಂದಿದ್ದ ವಿ.ಪಿ.ಸಿಂಗ್ ತಮ್ಮ ಜನಮೋರ್ಚಾವನ್ನು ಲೋಕದಳದೊಂದಿಗೆ ವಿಲೀನ ಮಾಡಿ, ಜನತಾದಳವನ್ನು ಅಸ್ತಿತ್ವಕ್ಕೆ ತಂದಿದ್ದರು. 1989ರಲ್ಲಿ ಕೇಂದ್ರದಲ್ಲಿ ಬಹುಮತ ಇಲ್ಲದಿದ್ದ ಸಂದರ್ಭದಲ್ಲಿ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಯತ್ನಿಸಿದರು. ಆ ಸಂದರ್ಭ ಬಿಜೆಪಿ ಭಾರಿ ವಿರೋಧ ಪ್ರಕಟಿಸಿತು. 1990ರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ, ಅಡ್ವಾಣಿ ರಥಯಾತ್ರೆ ಆರಂಭಿಸಿದಾಗ ವಿ.ಪಿ.ಸಿಂಗ್ ಅದನ್ನು ತಡೆದರು. ಇದರಿಂದ ಕುಪಿತಗೊಂಡ ಬಿಜೆಪಿ, ವಿ.ಪಿ.ಸಿಂಗ್ ಸರ್ಕಾರವನ್ನು 1990ರಲ್ಲಿ ಕೆಡವಿತು. ಅಲ್ಲಿಂದ ಬಿಜೆಪಿಯ ನಿಜ ಅರ್ಥದ ಹಿಂದೂ ರಾಜಕಾರಣ ಆರಂಭವಾಯಿತು. ನಂತರ ಎರಡು ಬಾರಿ ಇತರೆ ರಾಜಕೀಯ ಪಕ್ಷಗಳ ನೆರವಿನಿಂದ ಕೇಂದ್ರದಲ್ಲಿ ಅಧಿಕಾರವನ್ನು ನಡೆಸಿದರು. 2014ರ ವೇಳೆಗೆ ದೇಶದ ರಾಜಕಾರಣವನ್ನು ಕೈಗೆ ತೆಗೆದುಕೊಂಡರು.

ಹಿಂದೂ ರಾಷ್ಟ್ರೀಯತೆ ಸಿದ್ದಾಂತವನ್ನು ಮುಂದಿಟ್ಟು ಬಿಜೆಪಿ ಪಕ್ಷ ಈ ಮಟ್ಟಕ್ಕೆ ಬೆಳೆಯಿತು ಎನ್ನಲು ಸಾಧ್ಯವಿಲ್ಸ. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ಆರ್.ಜೆ.ಡಿ, ಸಮಾಜವಾದಿ ಪಕ್ಷವನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಪಕ್ಷಗಳು ಬಿಜೆಪಿ ಬೆಳವಣಿಗೆಗೆ ನೀರೆರೆದಿವೆ.

ಧರ್ಮನಿರಪೇಕ್ಷ ತತ್ವವನ್ನು ನಾಶಗೊಳಿಸುವುದರ ಮೂಲಕ, ಸಂವಿಧಾನದ ಶ್ವಾಸವನ್ನು ಕಿತ್ತುಹಾಕಲಾಗಿದೆ. ಈಗ ಗಣರಾಜ್ಯದ ಒಂದೊಂದೇ ಅಡಿಗಲ್ಲನ್ನು ಶಿಥಿಲಗೊಳಿಸಲಾಗುತ್ತಿದೆ. ದೇಶವನ್ನು ಕತ್ತಲಲ್ಲಿಟ್ಟು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುವಂತಾಗಿದೆ. ನೂತನ ಶಿಕ್ಷಣ ನೀತಿಯು ಇದೇ ಮಾರ್ಗದಲ್ಲಿದೆ.

ಹಿಂದೂರಾಷ್ಟ್ರ ನಿರ್ಮಾಣದ ಬೌದ್ಧಿಕ ಜೀತದಾಳುಗಳಾಗಿರುವ, ಹಿಂದುಳಿದ ವರ್ಗಗಳ ಮತ್ತು ದಲಿತ ಮುಖಂಡರು ವಿಭ್ರಮೆಯಲ್ಲಿ ಸಂವಿಧಾನವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಬಡಬಡಿಸುತ್ತಿದ್ದಾರೆ. ಅಸಲಿಗೆ ಪ್ರಭುತ್ವ ಸಂವಿಧಾನವನ್ನು ಮುಟ್ಟುತ್ತಲೇ ಇಲ್ಲ. ಕೋಮಾದಲ್ಲಿರುವ ಜನ ವರ್ಗಗಳನ್ನು ಜಾಗೃತಗೊಳಿಸುವುದೇ ಜನತಂತ್ರವಾದಿಗಳ ಎದುರಿನ ಮೊದಲ ಸವಾಲು ಆಗಿದೆ.

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ