March 25, 2023 5:08 pm

ಶಾಂತಕ್ರಾಂತಿಯ ಮಹಾನುಭಾವ ಬ್ರಹ್ಮಶ್ರೀ ನಾರಾಯಣಗುರುಗಳು…

  • ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

ಕೇರಳದ ಕಠೋರ ಜಾತಿವಾದಿಗಳ ನಡುವೆ ಸೌಮ್ಯವಾಗಿ ಸಿಡಿದೆದ್ದು ಜಾತಿ ಶೋಷಣೆಯ ಅಡಿಯಲ್ಲಿ ಹೀನಾಯ ಸ್ಥಿತಿಯಲ್ಲಿ ನರಳುತ್ತಿದ್ದ ಈಳವ ಜಾತಿಯ ಮೊದಲಾದ ದಮನಿತ ಸಮುದಾಯಗಳ ಜನತೆಯ ಕತ್ತಲೆಯನ್ನು ಕಳೆದ ಕ್ರಾಂತಿಯ ಸೂರ್ಯ. ಪುರೋಹಿತರ ದೇವಾಲಯಗಳನ್ನು ನಿರಾಕರಿಸಿ ದೇವಾಲಯದ ಪರಿಕಲ್ಪನೆಯನ್ನೇ ಬದಲಾಯಿಸಿ ದೇವರು ಧರ್ಮ ಆಧ್ಯಾತ್ಮದ ಮೂಲಕವೇ ಮಾನವೀಯವಾದ ಪ್ರಗತಿಪರ ಸಮಾಜ ನಿರ್ಮಿಸಿದ ನಾಯಕ ದಾರ್ಶನಿಕ. ನಾರಾಯಣ ಗುರುಗಳ ಹೋರಾಟದ ಬದುಕು ಅವರ ಚಿಂತನೆಗಳು ಈ ಹೊತ್ತಿನ ನಮ್ಮ ಹದಗೆಟ್ಟ ಪೀಳಿಗೆಯನ್ನು ಬೆಳಕಿನೆಡೆಗೆ ಒಯ್ಯಬಲ್ಲವು. ಧಾರ್ಮಿಕ ಅಂಧಾಕಾರ, ಜಾತಿ ಮೌಢ್ಯ ಹಣದ ದಾಹ, ಹಿಂಗಾಲದ ಶೋಷಣೆಯ ಬದುಕಿನ ಮರೆವು ಇಂದಿನ ನಮ್ಮ ಹಿಂದುಳಿದ ವರ್ಗಗಳನ್ನು ಮತ್ತೂ ಮೇಲ್ಜಾತಿಗಳ ಅಧಿಕಾರದ ಕಟ್ಟೆ ಕಾಯುವ ಗುಲಾಮರನ್ನಾಗಿಸಿವೆ. ನಾವೀಗ ಬೌದ್ಧಿಕ ಗುಲಾಮಗಿರಿಗೆ ಒಳಗಾಗಿದ್ದೇವೆ. ಒಮ್ಮೆ ನಮ್ಮ ಚರಿತ್ರೆಯನ್ನು ತಿರುಗಿ ನೋಡಿದರೆ ಧುತ್ತನೆ ಗೋಚರವಾಗುವುದು ಒಂದು ಕಾಲದಲ್ಲಿ ಮುಟ್ಟಿಸಿಕೊಳ್ಳದವರಾಗಿದ್ದ, ಗೇಣಿ ರೈತರಾಗಿದ್ದ, ಅಕ್ಷರ ಕಲಿಯಲು ಅವಕಾಶವೇ ಇಲ್ಲದ, ಬಡತನವು ನಮ್ಮ ಹೆಗಲ ಮೇಲೆ ಸೊಂಟ ಮುರಿದುಕೊಂಡು ಬಿದ್ದಿದ್ದ, ಹುಲ್ಲು ಗುಡಿಸಲಿನ, ಹರಕು ಬಟ್ಟೆಯ, ಒಂದು ಹೊತ್ತಿಗಿದ್ದರೆ ಮತ್ತೊಂದು ಹೊತ್ತಿಗಿಲ್ಲದ, ಪ್ರತ್ಯೇಕವಾಗಿ, ಕೇವಲ ಕೂಲಿಗಳಾಗಿ, ಭೂಮಿಯ ಹಕ್ಕು ಇಲ್ಲದ, ಮೈ ತುಂಬ ಬಟ್ಟೆ ಉಡುವ ಅವಕಾಶವೂ ಇಲ್ಲದ, ದೇವಾಲಯಗಳಿಗೆ ಪ್ರವೇಷವಿಲ್ಲದ, ಪೌಷ್ಠಿಕ ಆಹಾರವಿಲ್ಲದ ದಾರಿದ್ರ್ಯಪೂರ್ಣ ದಯನೀಯ ಬದುಕು. ಆ ಬದುಕಿನ ಚಿತ್ರಣಗಳು ಇಂದಿನ ಸುಖಪುರುಷರಾಗಿರುವ ನಮ್ಮ ದಲಿತ – ಹಿಂದುಳಿದ ವರ್ಗಗಳ ಯುವ ಜನತೆಗೆ ಗೋಚರಿಸುವುದಿಲ್ಲ. ಅಂದು ನಾರಾಯಣಗುರುಗಳು ಅನುಸರಿಸಿದ ಹಿಂದುತ್ವಕ್ಕೂ ಇಂದು ಕೇರಳ ಕರ್ನಾಟಕ ಮೊದಲಾದ ಭಾಗದ ಈಳವ, ದೀವ, ಈಡಿಗ, ಪೂಜಾರ, ಬಿಲ್ಲವ, ಈಳಿಗ, ಮೊದಲಾದ ಜಾತಿಯ ಯುವಕರು ಹಾಗೂ ಇತರೆಲ್ಲ ಕೆಳವರ್ಗದ ಯುವ ಜನತೆಯು ಹಿಂಬಾಲಿಸಿಕೊಂಡು ಹೊರಟಿರುವ ಹಿಂದುತ್ವಕ್ಕೂ ಅಪಾರ ವ್ಯತ್ಯಾಸವಿದೆ ಮತ್ತೂ ಪುರೋಹಿತರು ಹೆಣೆದ ಜೇಡರಬಲೆಗೇ ಬೀಳುತ್ತಿದ್ದೇವೆ.

ಈಗ ಕೇರಳದ ಬಗ್ಗೆ ಬರೋಣ,

ಭಾರತ ಅದರಲ್ಲೂ ಭಾರತದ ಹಿಂದೂ ಧರ್ಮ ಜಾತಿ ವ್ಯವಸ್ಥೆಯ ಆಧಾರದ ಮೇಲೆಯೇ ನಿಂತಿರುವ ಜಗತ್ತಿನ ಏಕಮಾತ್ರ ಧರ್ಮ. ಚಾತುರ್ವರ್ಣವೆಂಬ ನಾಲ್ಕಂತಸ್ತಿನ ಸೌಧ. ಈ ಸೌಧದಲ್ಲಿ ಅಡಿಪಾಯವಾಗಿರುವ ಶೂದ್ರರದ್ದು ಮೇಲಿನವರಿಂದ ತುಳಿಸಿಕೊಳ್ಳುವುದೇ ಕರ್ಮವಾಗಿ ಹೋಗಿದೆ. ಯಾರು ಎಲ್ಲಿರುತ್ತಾರೋ ಅಲ್ಲಿಯೇ ಇರಬೇಕು. ಅಲ್ಲಿಯೇ ಇರಿಸಲಾಯಿತು. ಬ್ರಾಹ್ಮಣ ಮತ್ತು ಕ್ಷತ್ರಿಯ ಈ ಎರಡೂ ವರ್ಗಗಳು ಶಾಸ್ತ್ರ ಮತ್ತು ಶಸ್ತ್ರ ಬಲದ ಮೂಲಕ ಈ ದೇಶದ ಮೂಲ ನಿವಾಸಿಗಳಾದ ದುಡಿಯುವ ಸಮುದಾಯಗಳನ್ನು ಯಾವುದೇ ಬಗೆಯ ಹಕ್ಕು ಮತ್ತು ಅಧಿಕಾರಗಳನ್ನು ಕೊಡದೆ ತಮ್ಮ ಸುಖದ ಚಾಕರಿಕಾರರನ್ನಾಗಿಯೇ ಇಟ್ಟುಕೊಳ್ಳಲಾಯಿತು. ವೃತ್ತಿಯನ್ನು ವೃತ್ತಿ ಮಾಡುವವರನ್ನೂ ಕೀಳುಮಟ್ಟದಲ್ಲಿ ನಡೆಸಿಕೊಳ್ಳುವ ಅಮಾನವೀಯ ಪದ್ಧತಿಯನ್ನು ಹುಟ್ಟು ಹಾಕಲಾಯಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಿ ನೋಡಿದರೂ ಈ ದೇಶ ವರ್ಣ ವೃತ್ತಿ ಲಿಂಗದ ಆಧಾರದ ಮೇಲೆ ಒಡೆಯಲ್ಪಟ್ಟಿದೆ. ಕೇರಳ ಇದಕ್ಕೆ ಹೊರತಲ್ಲ. ಅಲ್ಲಿಯ ಕಡಲ ಕಿನಾರೆ ಗಿರಿಶೃಂಗಗಳು ತೆಂಗು ಅಡಿಕೆ ಕಾಫಿ ಮೆಣಸು ಬನಗಳು, ಅಭೇದ್ಯ ಕಾಡುಗಳು, ಹೊಳೆ ಸರೋವರ ಕೆರೆ ನಿಸರ್ಗಧಾಮಗಳು ದೇಶಪ್ರಸಿದ್ಧ ದೇವಾಲಯಗಳು ನಮ್ಮನ್ನು ಮನಸೋಲಿಸುತ್ತವೆ ನಿಜ. ಆದರೆ ಅವುಗಳ ಮರೆಯಲ್ಲಿ ಅಡಗಿರುವ ಭೀಕರ ಜಾತಿ ವ್ಯವಸ್ಥೆ ಬಡತನ ಶೋಷಣೆ ಮಾತ್ರ ಎಲ್ಲರ ಗಮನದಿಂದ ದೂರವಾಗಿಯೇ ಉಳಿದಿವೆ. ಕೇರಳದ ನಂಬೂದಿರಿ ಎಂಬ ಮಡಿವಂತರೂ ಭೂಮಾಲಕರೂ ಆದ ಬ್ರಾಹ್ಮಣರು ಹಾಗೂ ನಂಬಿಯಾರ್ ಎಂಬ ಭೂಮಾಲಕ ಜನಾಂಗವು ಅಲ್ಲಿ ಮಕ್ಕಳಾದ ಈಳವ (ಕರ್ನಾಟಕದ ದೀವ, ಈಡಿಗ, ಬಿಲ್ಲವ) ಜಾತಿ ಮೊದಲಾದ ಕೆಳ ಜಾತಿಗಳನ್ನು ಶತಮಾನಗಳಿಂದ ನಡೆಸಿಕೊಂಡ ರೀತಿ ಮಾತ್ರ ಅತ್ಯಂತ ಹೇಯ ಮಾದರಿಯದಾಗಿತ್ತು. ಅಲ್ಲಿ ಈ ಮೇಲ್ಜಾತಿಗಳ ಜಮೀನಿನಲ್ಲಿ ಈಳವರು ಗೇಣಿದಾರರಾಗಿ, ಇಲ್ಲವೇ ಗುಲಾಮರಾಗಿ ದುಡಿಯಬೇಕಿತ್ತು. ಈ ಜಾತಿಯ ಪುರುಷ ಮತ್ತು ಮಹಿಳೆಯರು ಸೊಂಟದ ಭಾಗವನ್ನು ಹೊರತುಪಡಿಸಿ ದೇಹದ ಉಳಿದ ಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವಂತಿರಲಿಲ್ಲ. ಅಂದರೆ ಸೊಂಟದಿಂದ ಮೇಲ್ಭಾಗ ಹಾಗೂ ಮೊಣಕಾಲಿನಿಂದ ಕೆಳ ಭಾಗ ವಸ್ತ್ರವಿಲ್ಲದೇ ಇರಬೇಕಾದ ಸ್ಥಿತಿ ಇತ್ತು. ಮಹಿಳೆಯರು ಒಂದು ವೇಳೆ ಸೊಂಟದ ಮೇಲೆ ವಸ್ತ್ರವನ್ನು ಧರಿಸಿದರೆ ಅದು ಅಪರಾಧವೆಂದು ಪರಿಗಣಿಸಲ್ಪಡುತ್ತಿತ್ತು. ವಸ್ತ್ರ ಹೊದ್ದದ್ದಕ್ಕಾಗಿ ‘ಮೊಲಕ್ಕರಂ’ ಅಥವಾ ‘ಮೊಲೆಗಂದಾಯ’ವನ್ನು ಆ ಮಹಿಳೆಯ ಮೇಲೆ ವಿಧಿಸುತ್ತಿದ್ದರು. ನಂಬೂದಿರಿ ಬ್ರಾಹ್ಮಣರು ಹಾಗೂ ನಂಬಿಯಾರರು ಹಣ ಜಾತಿ ಮತ್ತು ರಾಜಕೀಯ ಬಲದ ಆಧಾರದ ಮೇಲೆ ನಡೆಸುತ್ತಿದ್ದ ಈ ನಿಕೃಷ್ಟ ಪದ್ಧತಿಯನ್ನು ನಿಷೇಧಿಸಿದವನು ಮೈಸೂರು ಅರಸ ಫತೇ ಅಲಿ ಟಿಪ್ಪು ಸುಲ್ತಾನ್. ಟಿಪ್ಪು ಮಲಬಾರ್ ನ ದಂಗೆಯನ್ನು (ದಂಗೆಕೋರರು ಈ ನಂಬೂದಿರಿ ಮತ್ತು ನಂಬಿಯಾರ್ ಗಳೇ ಆಗಿದ್ದರು) ಅಡಗಿಸಲು ಹೋದಾಗಲೊಮ್ಮೆ ಈ ಅನಿಷ್ಟ ಪದ್ಧತಿ ಅಲ್ಲಿ ಆಚರಣೆಯಲ್ಲಿರುವುದು ಅವನ ಕಣ್ಣಿಗೆ ಬಿತ್ತು. ಈ ಪದ್ಧತಿಯನ್ನು  ಕಣ್ಣಾರೆ ಕಂಡ ಆತ ವ್ಯಾಕುಲಗೊಂಡ ಹಾಗೂ ಮೇಲ್ಜಾತಿಗಳ ಈ ದೌರ್ಜನ್ಯ ಅವನನ್ನು ಕ್ರುದ್ಧನಾಗುವಂತೆ ಮಾಡಿತು. ಆ ಹೀನ ಪದ್ಧತಿಯನ್ನು ಕೂಡಲೇ ಜಾರಿಗೆ ಬರುವಂತೆ ಆತ ನಿಷೇಧಿಸಿದ. ಅಷ್ಟೇ ಅಲ್ಲದೆ ಶ್ರೀರಂಗಪಟ್ಟಣದಿಂದ ಗಾಡಿಗಳ ಮೇಲೆ ವಸ್ತ್ರಗಳನ್ನು ಹೇರಿ ಕಳಿಸಿದ. ಆದೇಶವನ್ನು ಉಲ್ಲಂಘಿಸಿದರೆ, ‘ಮೊಲೆಗಂದಾಯ’ ಹೇರುವ ಮೂಲಕ ಹಾಗೂ ಒಂದು ನಿರ್ದಿಷ್ಟ ಜನಾಂಗವನ್ನು ಗುರಿಯಾಗಿಟ್ಟುಕೊಂಡು ಈ ಹೀನ ಪದ್ಧತಿಯನ್ನು ಆಚರಿಸುವಂತೆ ಬಲವಂತಪಡಿಸುವವರಿಗೂ ಹಾಗೂ ವಸ್ತ್ರವನ್ನು ಉಟ್ಟುಕೊಳ್ಳದವರಿಗೂ ಶಿಕ್ಷೆ ವಿಧಿಸಲಾಗುವುದೆಂದು ಎಚ್ಚರಿಕೆಯ ಸಂದೇಶ ನೀಡಿದ. ಆದರೆ 1799 ರ ಮೇ 4 ನೆ ತಾರೀಕು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಬ್ರಿಟೀಷರಿಂದ ಹತ್ಯೆಯಾದ ಬಳಿಕ ಕೇರಳ ಮಲಬಾರಿನ ನಂಬೂದಿರಿ ಬ್ರಾಹ್ಮಣರು ಹಾಗೂ ನಂಬಿಯಾರ್ ಗಳು ತಮ್ಮ ಹಳೆಯ ಚಾಳಿಯನ್ನು ಶುರುವಿಟ್ಟರು. ನಂಬಿಯಾರ್ ಒಬ್ಬನ ಕಿರುಕುಳವನ್ನು ತಾಳಲಾರದೆ ಈಳವರ ನಂಗೇಲಿ ಎಂಬ ಹೆಣ್ಣುಮಗಳೊಬ್ಬಳು ತನ್ನ ಮೊಲೆಗಳನ್ನೇ ಕೊಯ್ದುಕೊಂಡು ಪ್ರತಿಭಟಿಸಿದ ಘಟನೆ ನಡೆದುಹೋಯಿತು. ಉರಿಯುವ ಹೆಂಡತಿಯ ಚಿತೆಗೆ ಆಕೆಯ ಗಂಡನೂ ಹಾರಿ ಪ್ರಾಣ ಬಿಟ್ಟನೆಂದು ಹೇಳಲಾಗುತ್ತದೆ. ಇದು ಇಡೀ ಕೇರಳದ ಶೋಷಿತ ಸಮುದಾಯಗಳನ್ನು ರೊಚ್ಚಿಗೆಬ್ಬಿಸಿತು. ಇಂತಹಾ ಒಂದೆರೆಡು ಘಟನೆಗಳಲ್ಲ ಕೇರಳದ ಆ ಚೆಲುವಿನ ಭ್ರಮಾಲೋಕದ ಮರೆಯಲ್ಲಿ ಅಡಗಿರುವ ಕಟು ಸತ್ಯ ಇದು.

ಹತ್ತೊಂಬತ್ತನೇ ಶತಮಾನದಲ್ಲಿ ಅಂದರೆ ಇಲ್ಲಿ ಸುಮಾರು ಇನ್ನೂರು ವರ್ಷಗಳ ಹಿಂದೆ ಫ್ರಾನ್ಸಿಸ್ ಬುಕಾನನ್ ಎಂಬಾತ ಅಂದಿನ ಭಾರತದ ಗೌರ್ನರ್ ಜನರಲ್ ಮಾರ್ಕಿಸ್ ವೆಲ್ಲಿಸ್ಲಿಯ ಆದೇಶದ ಅನ್ವಯ ಮೈಸೂರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿದ್ದ ಪ್ರದೇಶಗಳ ಸರ್ವೇ ಕೈಗೊಳ್ಳುತ್ತಾನೆ. ಮದ್ರಾಸಿನಿಂದ ಪ್ರವಾಸ ಆರಂಭಿಸುವ ಆತ ಮೈಸೂರು, ಕೆನರಾ (ಕನ್ನಡ ಜಿಲ್ಲೆಗಳು) ಮತ್ತು  ಕೇರಳದ ಮಲಬಾರ್ ಜಿಲ್ಲೆಗಳಲ್ಲಿ ಸುತ್ತಾಡುತ್ತಾನೆ. ಆತ 1807 ರಲ್ಲಿ, ‘ಎ ಜರ್ನಿ ಫ್ರಮ್ ಮಡ್ರಾಸ್ ತ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ, ಆ್ಯಂಡ್ ಮಲಬಾರ್’ ಎಂಬ ಮಹತ್ವದ ಮೂರು ಸಂಪುಟಗಳನ್ನು ಪ್ರಕಟಿಸುತ್ತಾನೆ. ಈ ಕೃತಿಗಳಲ್ಲಿ ಆತ ಮಲಬಾರ್ ಕೆನರಾ ಜಿಲ್ಲೆಗಳಲ್ಲಿಯ ಸಾಮಾಜಿಕ ಧಾರ್ಮಿಕ ಸಂಗತಿಗಳನ್ನು ದಾಖಲಿಸಿದ್ದಾನೆ. ಹಳೆ ಪೈಕದವರು, ಈಳವರು, ದೀವರು ಇತರೇ ನಿಮ್ನ ವರ್ಗಗಳು ಹಾಗೂ ಮೇಲ್ಜಾತಿಗಳು ಗುಲಾಮಗಿರಿ ಗೇಣಿ ಪದ್ಧತಿಗೆ ಬಲಿಯಾಗಿ ಪಡುತ್ತಿದ್ದ ನೈಜ ಸಂಗತಿಗಳನ್ನು ನಿರೂಪಿಸಿದ್ದಾನೆ. ಜಮೀನ್ದಾರರು ಮಹಿಳೆಯರು, ಕೂಲಿ ವ್ಯವಸ್ಥೆ, ಚಾಕರಿ ಮೊದಲಾದ ಗಂಭೀರ ಸಂಗತಿಗಳನ್ನು ಹೇರಳವಾಗಿ ದಾಖಲಿಸಿದ್ದಾನೆ; ಯಾರಾದರೂ ನೋಡಬಹುದು. ಇದರಿಂದ ಇನ್ನೂರು – ಇನ್ನೂರೈವತ್ತು ವರ್ಷಗಳ ಹಿಂದಿನ ತುಳಿತಕ್ಕೊಳಪಟ್ಟ ಸಮುದಾಯಗಳ ದಯನೀಯ ಸ್ಥಿತಿಯ ದರ್ಶನವಾಗುತ್ತದೆ. ಇಂತಹಾ ಸಮುದಾಯವನ್ನು ಮುನ್ನೆಲೆಗೆ ತರಬೇಕೆಂದರೆ ಅದೂ ಸಂಪ್ರದಾಯಸ್ಥ ವರ್ಗವು ಎಲ್ಲಾ ರೀತಿಯಲ್ಲೂ ಬಲಾಢ್ಯವಾಗಿರುವಾಗ ಆ ಪ್ರವಾಹದ ಎದುರು ಈಜಬೇಕೆಂದರೆ ಅದು ಸಾಮಾನ್ಯದ ಮಾತಲ್ಲ. ಅದಕ್ಕೊಬ್ಬ ಬಲವಾದ ದಾರ್ಶನಿಕನ ಅಗತ್ಯವಿತ್ತು. ನಾರಾಯಣ ಗುರು ಮೂಡಿದರು.

ಹೀಗೆ ನೊಂದ ಜನರ ಉದ್ಧಾರಕರಾಗಿ ಮೂಡಿ ಬಂದ ಬ್ರಹ್ಮಜ್ಞಾನಿ ನಾರಾಯಣಗುರುಗಳು ಈ ಮೇಲ್ಜಾತಿಗಳ ಉಪಟಳ ಕುಹಕ ಕೆಂಗಣ್ಣಿನ ತಾಪಗಳ ನಡುವೆಯೇ ಅರಳಿದ ಸಮಾನತೆಯ ಹೂವು. ಧರ್ಮ ದೇವರು ಆಧ್ಯಾತ್ಮದ ಮೂಲಕವೇ ತನ್ನ ಜನರ ಕತ್ತಲೆಯನ್ನು ವಿಮೋಚನೆ ಮಾಡಿದ ಮಹಾ ನಾಯಕ ಅವರು. ಇತ್ತ ಕರ್ನಾಟಕ ಇದಕ್ಕಿಂತ ಭಿನ್ನವಲ್ಲ‌. ಮಲೆನಾಡು ಭಾಗದಲ್ಲಿ ಯತೇಚ್ಚವಾಗಿರುವ ದೀವರನ್ನು ಕೆಲ ಭಾಗದಲ್ಲಿ ಹಳೆಪೈಕದವರು ಎಂದೇ ಕರೆಯಲಾಗುತ್ತದೆ. ಭೂ ರಹಿತರೂ ಬಡವರೂ ಶ್ರಮಜೀವಿಗಳೂ ಆಗಿದ್ದ ದೀವರನ್ನು ಮಲೆನಾಡಿನ ಮೇಲ್ಜಾತಿಗಳು ಅಸ್ಪೃಶ್ಯರನ್ನಾಗಿಯೇ ಕಾಣುವ ಜೀವಂತ ನಿದರ್ಶನಗಳು ಈಗಲೂ ಇದ್ದಾವೆ. ನಾನು ಸ್ವತಃ ಕಣ್ಣಾರೆ ಕಂಡಿದ್ದೇನೆ. ಹಳೆ ಪೈಕ (ದೀವರು)ದವರನ್ನು ಮಲೆನಾಡಿನ ಗೌಡರು ಬ್ರಾಹ್ಮಣರು ಎಷ್ಟು ಕೀಳಾಗಿ ಕಾಣುತ್ತಿದ್ದರು ಎಂಬುದನ್ನು ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು,’ ‘ಕಾನೂರು ಹೆಗ್ಗಡಿತಿ,’ ಕಾದಂಬರಿಗಳನ್ನು ಓದಿಯೇ ತಿಳಿಯಬೇಕು. ಜಾತಿಯ ಮನಸ್ಥಿತಿಗಳು ಈಗಲೂ ಸತ್ತಿಲ್ಲ ಅವುಗಳ ಸ್ವರೂಪ ಬದಲಾಗಿದೆ ಅಷ್ಟೆ.

ಹಿಂದುತ್ವದ ದಾಳಗಳಾಗಿ ಕರಾವಳಿಯ ಬಿಲ್ಲವರ ಪೂಜಾರಿಗಳ, ಮೊಗೇರರ ಹುಡುಗರು ಮಲೆನಾಡಿನ ದೀವರ ಮಡಿವಾಳರ ಕುರುಬರ ಬೇಡರ ಇತರೇ ಶೋಷಿತ ಸಮುದಾಯಗಳ ಯುವಕರು ಉಗ್ರ ಹಿಂದುತ್ವದ ಅಸ್ತ್ರಗಳಾಗಿ ಗಲಾಟೆ ಕೂನಿ ದೊಂಬಿ ಮೊದಲಾದ ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಕೇಸು ಕೋರ್ಟು ಕಚೇರಿ ನಿರುದ್ಯೋಗ, ಆತ್ಮಹತ್ಯೆ, ರೌಡಿ ಶೀಟರ್ ಇಂತಹ ಜಟಿಲ ಸಮಸ್ಯೆಗಳ ನಡುವೆ ಸಿಲುಕಿ ತಾವೂ ಹಾಳಾಗುವ ತಮ್ಮ ಕುಟುಂಬವನ್ನೂ ಸಮಾಜವನ್ನೂ ಹಾಳುಗೆಡಹುವ ದುರಂತ ಜೀವಿಗಳಾಗಿದ್ದಾರೆ‌. ಅಧಿಕಾರಕ್ಕಾಗಿ ಹಪಹಪಿಸುವ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ನಮ್ಮ ಈ ಸಮುದಾಯಗಳನ್ನು ಮಿಲಟರಿಯಾಗಿ ಪ್ರಯೋಗಿಸುತ್ತಿರುವುದು ಸುಳ್ಳಲ್ಲ. ಮಲೆನಾಡಿನ ದೀವರು ಈಡಿಗರು ಮಡಿವಾಳರು ಬಿಲ್ಲವರು ಹಾಗೂ ಇತರೆ ಯಾವುದೇ ಹಿಂದುಳಿದ ದಲಿತ ವರ್ಗಗಳಿಗೆ ಇಂದು ಭೂಮಿ ಅಧಿಕಾರ ಉದ್ಯೋಗ ಶಿಕ್ಷಣವೇನಾದರೂ ಸಿಕ್ಕಿದ್ದರೆ ಅದು ಮಾನವತಾವಾದಿ ಸಮಾಜವಾದಿ ಅಧಿಕಾರದ ಬಲದಿಂದಲೇ ಹೊರತು ಕೋಮುವಾದೀ ರಾಜಕೀಯದಿಂದ ಅಲ್ಲ. ನಮಗೆ ಬೇಕಾಗಿರುವ ಧರ್ಮ ನಾರಾಯಣ ಗುರು ಭೋಧಿಸಿದ, ಬದುಕುವ ಎಲ್ಲರನ್ನೂ ಬದುಕಲು ಬಿಡುವ, ಪ್ರೀತಿಸುವ ಉದ್ಧರಿಸುವ ಸಹಿಸಿಕೊಳ್ಳುವ ರಕ್ಷಿಸುವ ಸಹಾನುಭೂತಿಯಿಂದ ಕಾಣುವ ಮಾನವ ಧರ್ಮ.

ಜಯಂತಿ ಆಚರಣೆ ಕೇವಲ ಭಾವ ಚಿತ್ರಕ್ಕೆ ಹೂವು ಮಾಲೆ ಹಾಕುವ ದೀಪ ಧೂಪ ಬೆಳಗುವ ವೇದಿಕೆಯ ಮೇಲೆ ನಾಲ್ಕು ಜನ ಕುಳಿತು ಮೆರೆಯುವ ಆಡಂಬರವಾಗಬಾರದು. ಅವರು ಕಟ್ಟಿದ ದೇವಾಲಯಗಳ ಆಶಯ ನಮ್ಮ ಹಳ್ಳಿ ಹಳ್ಳಿಯ ದೇವಾಲಯಗಳಲ್ಲಿ ಆಚರಣೆಗೆ ಬರಬೇಕು. ದೇವರು ದೇವಾಲಯ ಯಾವುದೇ ಜಾತಿ ಧರ್ಮ ಪಂಗಡದವರ ನಿಯಂತ್ರಣದಲ್ಲಿರಬಾರದು. ಅದು ಶಿಕ್ಷೆ ವಿಧಿಸುವ ದಂಡ ಹಾಕುವ ಬಲಿ ಕೊಡುವ ಜನರನ್ನು ಸುಲಿಯುವ ಶೋಷಣೆಯ ಹಾಗೂ ಮೌಢ್ಯದ ಕೇಂದ್ರವಾಗಬಾರದು. ನಮ್ಮ ದೇವಾಲಗಳು ಹಾಗಿದ್ದಾವಾ? ನಾವೆಲ್ಲ ಇದನ್ನು ಯೋಚಿಸಬೇಕಿದೆ. ನಾರಾಯಣ ಗುರುಗಳು ಮನುಷ್ಯ ಪ್ರೇಮ ತುಂಬಿದ ತಣ್ಣನೆಯ ಕ್ರಾಂತಿಯ ಮೂಲಕ ಜ್ಞಾನದ ಬಲದಿಂದಲೇ, “ಜ್ಞಾನ ನಮ್ಮ ಜಾತಿಯ ಜನ್ಮಸಿದ್ಧವಾದ ಸ್ವತ್ತು” ಎಂದು ಭಾವಿಸಿದ್ದ ಕೇರಳದ ನಂಬೂದಿರಿಗಳಿಗೆ ತಿರುಗೇಟು ಕೊಟ್ಟು ದೇಶವಿದೇಶಗಳು ಹಾಗೂ ಇಡೀ ಭಾರತದ ಮಾನವತಾವಾದಿಗಳು ನಾಯಕರು ವಿಮೋಚಕರು ದಕ್ಷಿಣ ಭಾರತದೆಡೆ ತಿರುಗಿ ನೋಡುವಂತೆ ಮಾಡಿದ ಧೀರ ಸನ್ಯಾಸಿ. ನಾವು ಈಗಿನ ಈ ಅಧಿಕಾರದ ಲಾಲಸೆಯ ಜಾತಿ ಧರ್ಮದ ರಾಜಕೀಯ ಪಿತೂರಿಯ ಬಾಣಲೆಯಲ್ಲಿ ಕುದ್ದು ಜೀರ್ಣವಾಗುವ ಮುನ್ನ ನಾರಾಯಣ ಗುರುಗಳಂತವರ ವಿಚಾರಧಾರೆಗಳ ನೆರಳಲ್ಲಿ ಹೊಸದಾದ ಭಾರತವನ್ನು ಕಟ್ಟೋಣ ಸಹಿಷ್ಣುಗಳಾಗೋಣ.

Share:

One Response

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ