April 20, 2024 5:52 pm

ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?: ನ್ಯಾ. ನಾಗಮೋಹನ್ ದಾಸ್

ಬೆಂಗಳೂರು: ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡಾ ಅರ್ಧದಷ್ಟು ಮಹಿಳೆಯರಿದ್ದಾರೆ. ಆದರೆ ಜಗತ್ತಿನ ಎಲ್ಲೆಡೆ ಎಲ್ಲ ಕಾಲಕ್ಕೂ ಎರಡನೆಯ ದರ್ಜೆಯ ಲಿಂಗ ಎಂದೇ ನಡೆಸಿಕೊಳ್ಳಲಾಗುತ್ತಿದೆ. ಇದಕ್ಕೆ ಮೂಢನಂಬಿಕೆ, ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಅಸಮಾನತೆಗಳೇ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ನಾಗಮೋಹನ್ ದಾಸ್ ಹೇಳಿದರು.

11/09/2021ರಂದು ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಬಂಧುತ್ವ ಬೆಳಕು ವೆಬಿನಾರ್ ಸರಣಿಯಲ್ಲಿ “ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?” ವಿಷಯದ ಕುರಿತು ಮಾತಾಡಿದ ಅವರು,  ಬುದ್ಧ, ಬಸವ ಕಾಲದಿಂದಲೂ ಇದರ ವಿರುದ್ಧ ಬಂಡಾಯವಿದೆ. ಇತಿಹಾಸದುದ್ದಕ್ಕೂ ಲಿಂಗ ಅಸಮಾನತೆಯ ವಿರುದ್ಧ ಧ್ವನಿಯಿದೆ ಎಂದರು.

ಸತಿ ಪದ್ಧತಿ, ವಿಧವೆಯರಿಗೆ ಮರು ಮದುವೆಯ ಅವಕಾಶ, ಅಸ್ಪೃಶ್ಯತೆ ನಿವಾರಣೆ, ಬಾಲ್ಯ ವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಸ್ವತಂತ್ರಪೂರ್ವದಲ್ಲಿ ಕಾನೂನುಗಳು ಬಂದಿವೆ. ಪುರುಷರಿಗೆ ನೀಡಿದ ಮತದಾನದ ಹಕ್ಕು, ಮೂಲಭೂತ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದ್ದೇವೆ. ಕಾನೂನಿನ ದೃಷ್ಟಿಯಲ್ಲಿ ನೋಡಿಯೇ ಸಮಾನ ಅವಕಾಶ, ಮೀಸಲಾತಿ ನೀಡಲಾಗಿದೆ. ಮಹಿಳಾ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ನ್ಯಾಯಾಧೀಶರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರ ಪ್ರವೇಶವಾಗಿದೆ ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾನೂನಿನ ತೊಡಕುಗಳು ಕೂಡ ಕಾರಣ. ತಿದ್ದುಪಡಿಗಳ ಮೂಲಕ ನ್ಯೂನ್ಯತೆಗಳನ್ನು ಸರಿಪಡಿಸುವ ಕೆಲಸ ಮಾಡಲಾಗಿದೆ. ಸುಮಾರು 45 ವರ್ಷಗಳಲ್ಲಿ 1200 ಪಟ್ಟು ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಎಲ್ಲವೂ ದಾಖಲಾಗುವುದಿಲ್ಲ. ಕಾನೂನುಗಳನ್ನು ಅನುಷ್ಠಾನಗೊಳಿಸುವ ಇಚ್ಚಾಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.

ಜಾತಿ, ವರ್ಗ ಅಸಮಾನತೆಯಿಂದ ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳು ಹೆಚ್ಚಾಗಿ ಬಡ ಮತ್ತು ದಲಿತ ಕುಟುಂಬದವರೇ ಆಗಿರುತ್ತಾರೆ.  ಸ್ವಾತಂತ್ರ್ಯಾನಂತರ ಕೋಮುಗಲಭೆಯಲ್ಲಿ 10 ಲಕ್ಷ ಜನ ಸತ್ತರು. ಮಹಿಳೆಯರು ಹೆಚ್ಚು ಬಲಿಯಾಗುತ್ತರೆಂಬುದು ಗಮನಾರ್ಹ. ಪುರುಷ ಮತ್ತು ಮಹಿಳೆಯರ ಅನುಪಾತದಲ್ಲಿ ಏರುಪೇರಾಗುತ್ತಿದೆ. ಇದರಿಂದ ಕೂಡ ಅಪಾಯಗಳಿವೆ. ಈ ಅನುಪಾತವನ್ನು ನಾವು ಸರಿಪಡಿಸಿಕೊಳ್ಳಬೇಕಿದೆ ಎಂದರು.

ಮಹಿಳೆಯ ದುಡಿಮೆಗೆ ನಾವು ಬೆಲೆ ಕಟ್ಟುತ್ತಿಲ್ಲ. ಅವರನ್ನು ನಾವು ಆರ್ಥಿಕವಾಗಿ ಅಸಮಾನವಾಗಿ ಇಟ್ಟಿದ್ದೇವೆ. ಧಾರ್ಮಿಕ ಫರ್ಮಾನುಗಳ ಮೂಲಕ ಮಹಿಳೆಯರನ್ನು ಅವಕಾಶಗಳಿಂದ ದೂರ ಇಡುತ್ತಿದ್ದೇವೆ. ಸಾಮಾಜಿಕ ಅನಿಷ್ಟ ಮೌಲ್ಯಗಳನ್ನು ಬಿತ್ತುವುದರ ಮೂಲಕ ನಾವು ಅವರನ್ನು ಬಲಿಪಶು ಮಾಡುತ್ತಿದ್ದೇವೆ. ಮಹಿಳೆಯರ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಹೆಚ್ಚಿಸುವ ಕೆಲಸ ಆಗಬೇಕಿದೆ ಎಂದರು.

ಸಂಪತ್ತಿನ ಸಮಾನ ಹಿಡಿತ, ಸಾಮಾಜಿಕ ಮೌಲ್ಯಗಳ ಮೂಲಕ, ಕಾನೂನಿನ ಮೂಲಕ ಮಹಿಳೆಯರ ಹಿತ ಕಾಪಾಡಿ ರಕ್ಷಣೆ ನೀಡಬೇಕಿರುವುದು ಅತ್ಯವಶ್ಯ. ಅವರಲ್ಲಿಯ ಭೀತಿಯನ್ನು ಹೋಗಲಾಡಿಸಿ ಧೈರ್ಯವನ್ನು ತುಂಬುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ

ಕಾನೂನು ವ್ಯವಸ್ಥೆಯ ಭಾಗವೇ ಆಗಿದೆ. ಮೂಲಭೂತ ಹಕ್ಕುಗಳಲ್ಲಿ ಲಿಂಗ ಸಮಾನತೆಯೂ ಸೇರಿದೆ. ಶತಶತಮಾನಗಳಿಂದ ಮಹಿಳೆ ಸ್ವಾತಂತ್ರ್ಯ, ಸಮಾನತೆಗಾಗಿ ಹೋರಾಡುತ್ತಿದ್ದಾಳೆ. ಎಲ್ಲ ಧರ್ಮ ಶಾಸ್ತ್ರಗಳೂ ಆತ್ಮಕ್ಕೆ ಗಂಡು ಹೆಣ್ಣೆಂಬ ಬೇಧವಿಲ್ಲ ಎಂದು ಹೇಳಿದ್ದಾರೆ. ವಿಶ್ವಸಂಸ್ಥೇ ಮಹಿಳಾ ದಿನಾಚರಣೆ ಘೋಷಿಸಿದ್ದರೂ ಮಹಿಳೆಯರಿಗೆ ಇನ್ನೂ ಗಂಡಿಗೆ ಸಮಾನವಾಗಿ ಬದುಕಲು ಸಾಧ್ಯವಾಗಿಲ್ಲ. ಚರಿತ್ರೆಯುದ್ದಕ್ಕೂ ದ್ರೌಪದಿ, ಸೀತೆ, ಶೂರ್ಪನಖಿ, ಅಹಲ್ಯೆ ಈ ಎಲ್ಲರ ಪಾತ್ರಗಳನ್ನು ಗಮನಿಸಿದಾಗ ಪುರುಷ ಪ್ರಧಾನ ವ್ಯವಸ್ಥೆ ಅವರ ಮೇಲೆ ಮಾಡಿದ ಅನ್ಯಾಯಗಳು ಅರ್ಥವಾಗುತ್ತವೆ.

ತಾಲೀಬಾನಿಗಳ ಹಿಡಿತಕ್ಕೆ ಸಿಲುಕಿ ನಲುಗುತ್ತಿರುವ ಅಫಘಾನಿನ ಮಹಿಳೆಯರ ಪರಿಸ್ಥಿತಿ ಚಿಂತಾಜನಕ. ಪ್ರತಿವರ್ಷ ಮಹಿಳೆಯರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ನಡೆಯುತ್ತಿವೆ. ಎಲ್ಲ ಮುಂದುವರೆದ ರಾಷ್ಟ್ರಗಳಲ್ಲಿಯೂ ಇದು ಹೊರತಾಗಿಲ್ಲ. ಅಮೆರಿಕೆಯಂತಹ ರಾಷ್ಟ್ರಗಳಲ್ಲಿ ಮಹಿಳೆಯರ ವ್ಯಾಪಾರ ತಲೆ ನೋವಾಗಿದೆ. ಎಷ್ಟೇ ಕಾನೂನುಗಳಿದ್ದರೂ ದೌರ್ಜನ್ಯಗಳಿಗೆ ನಿಖರ ಕಾರಣ ಸಿಗುತ್ತಿಲ್ಲ. ಪುರುಷನ ಮೇಲರಿಮೆ, ಅತಿಯಾದ ಭೋಗಿಸುವ ಮನಸ್ಥಿತಿ ಇವೆಲ್ಲವೂ ಕಾರಣಗಳಾಗಿವೆ. ಪ್ರಾರಂಭದಿಂದಲೇ ಗಂಡಿನಲ್ಲಿ ಹೆಣ್ಣಿನ ಬಗ್ಗೆ ಗೌರವ ಭಾವನೆಯನ್ನು ಮೂಡಿಸುವುದು ಅಗತ್ಯ.

  • ಡಾ. ತಮಿಳ್ ಸೆಲ್ವಿ, ಕನ್ನಡ ವಿಭಾಗದ ಮುಖ್ಯಸ್ಥರು, ಮದ್ರಾಸ್ ವಿಶ್ವವಿದ್ಯಾಲಯ

ನಾವೇ ಆಯ್ಕೆ ಮಾಡಿದ ಪ್ರತಿನಿಧಿಗಳು ತಮಗೆ ಬೇಕಾದಂತವರನ್ನು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಹೀಗಾದಾಗ ಅಪರಾಧಿಗಳ ಪರ ಬಲಾಢ್ಯರು ನಿಂತುಕೊಳ್ಳುತ್ತಾರೆ. ಇದರಿಂದ ಸಂತ್ರಸ್ಥೆಗೆ ಹೇಗೆ ನ್ಯಾಯ ಸಿಗುತ್ತೆ? ಅತ್ಯಾಚಾರದ ಹಲವು ಪ್ರಕರಣಗಳಲ್ಲಿ ನಾವು ಇದನ್ನು ನೋಡಿದ್ದೇವೆ. ಸಂತ್ರಸ್ಥೆಯನ್ನೇ ಅಪರಾಧಿಯಾಗಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತದೆ. ನೈತಿಕ ಮೌಲ್ಯಗಳನ್ನು ನಾವು ತರಬೇಕು. ಕೋರ್ಟಿನ ವಿಳಂಬ ನೀತಿಯಿಂದ ನ್ಯಾಯ ಪ್ರಕ್ರಿಯೆ ವಿಳಂಬವಾದಷ್ಟೂ ಸಾಕ್ಷ್ಯ ನಾಶಕ್ಕೆ ದಾರಿಯಾಗುತ್ತದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ವ್ಯವಸ್ಥೆಯ ಅಗತ್ಯತೆ ನಮಗಿದೆ.

  • ಕೆ. ಷರೀಫಾ, ಕವಯಿತ್ರಿ

ದೆಹಲಿಯ ಡಿಸಿಡಿ ನೌಕರಸ್ಥೆಯೋರ್ವಳ ಮೃತ ದೇಹ ಹರ್ಯಾಣಾದಲ್ಲಿ ಸಿಗುತ್ತದೆ. ಆಕೆಯ ಇಡೀ ಬದುಕನ್ನು ಕಟ್ಟಿಕೊಟ್ಟ ಅವಳ ತಂದೆ ತಾಯಿಗೆ ಹೇಗಾಗಬೇಡ? ಸಾಮೂಹಿಕ ಅತ್ಯಾಚಾರವಾಗಿರುತ್ತದೆ.  ಇಡೀ ದೇಹವನ್ನು ವಿಕೃತಗೊಳಿಸಿರುತ್ತಾರೆ. ಮೈಸೂರಿನಲ್ಲಿ, ಘಟಪ್ರಭಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಕೂಡ ಹೀಗೆಯೇ. ರಾಷ್ಟ್ರೀಯ ಮಹಿಳಾ ಆಯೋಗ ಕೊಟ್ಟಿರುವ ವರದಿಯ ಪ್ರಕಾರ ಶೇ. 46ರಷ್ಟು ದೌರ್ಜನ್ಯ ಈ ಎಂಟು ತಿಂಗಳಲ್ಲಿ ಏರಿಕೆಯಾಗಿದೆ. ಸುಮಾರು 19,950 ಪ್ರಕರಣಗಳು ವರದಿಯಾಗಿವೆ. 10,084 ಪ್ರಕರಣಗಳು ಯುಪಿಯಲ್ಲಿ ವರದಿಯಾಗಿವೆ. ಸಾಮೂಹಿಕ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಇವೆಲ್ಲವನ್ನೂ ಹೇಗೆ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ನಾವು ಚರ್ಚಿಸಬೇಕು.

  • ಡಾ. ಲೀಲಾ ಸಂಪಿಗೆ, ಸಾಮಾಜಿಕ ಹೋರಾಟಗಾರರು

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ