October 1, 2023 6:47 am

ಮಗಳಿಗೆ ಅಪ್ಪ ಬರೆದ ಪತ್ರಗಳು

ನನ್ನ ಮೆದುಳಿನ ಪುಸ್ತಕದ ಮನೆಯಲ್ಲಿ ಇದೊಂದು ನಾನಿರುವವರೆಗೂ ಉಳಿಯಬಲ್ಲ ಪುಸ್ತಕ

ನೆಹರೂ ನಮ್ಮ ದೇಶ ಕಂಡ ಒಬ್ಬ ದಾರ್ಶನಿಕ ನಾಯಕ. ಭಾರತ ಮಾತೆಯನ್ನು ಈ ದೇಶದ ಜನತೆಯಲ್ಲಿ ಕಂಡುಕೊಂಡ ವಿವೇಕ. ಭಾರತ ಮಾತೆಗೆ ಜಯವಾಗಲಿ ಎಂದರೆ ಅದು ನಿಮ್ಮದೇ ಜಯ ಎಂದು ಸಾರಿ ಹೇಳಿದ ಉದಾತ್ತ. ನಮ್ಮಲ್ಲಿ ಫ್ಯಾಸಿಜಂ ಬೆಳೆಯುತ್ತಿದೆ. ಅದು ಮೊದಲಿಗೆ ಮಾಡುವ ಕೆಲಸವೇ ಮಾನವೀಯವಾದ ಜೀವಪರವಾದ ಎಲ್ಲವನ್ನೂ ದಮನಿಸುವ ಸಂಚುಗಾರಿಕೆಯನ್ನು. ಭಾರತದಲ್ಲಿ ಇಂದು ನಮ್ಮ ದೇಶವನ್ನು ಕಟ್ಟಿ ಬೆಳೆಸಿದ ಮಹಾನಾಯಕನನ್ನು ಖಳನಾಯಕನಂತೆ ಬಿಂಬಿಸಿ, ನಗೆಪಾಟಲಿಗೆ ಗುರಿಯಾಗಿಸಿ ಒಂದು ವಿಷಪೂರಿತ ರಾಜಕೀಯ ವಾತಾವರಣವನ್ನು ಸೃಷ್ಟಿಸಲಾಗಿದೆ.

ಫ್ಯಾಸಿಜಂ ಯಾವತ್ತಿಗೂ ಹಾಗೇ ಚರಿತ್ರೆಯನ್ನು ತಿರುಚುವುದು, ನಿಸರ್ಗಧರ್ಮಕ್ಕೆ ವಿರುದ್ಧವಾದ ಬಲಾತ್ಕಾರದಿಂದ ಕೂಡಿದ ಹಿಂಸಾತ್ಮಕ ಸ್ವರೂಪದ ಚಟುವಟಿಕೆಗಳ ಮೂಲಕ ಅಧಿಕಾರಕ್ಕೆ ಏರಿ, ತನಗೆ ತೊಡಕಾಗಬಲ್ಲ ಎಲ್ಲವನ್ನೂ ನಾಶಪಡಿಸುವುದು; ಜನಾಂಗಿಕ ದ್ವೇಷದ ಮೂಲಕ ಒಂದು ಅಸಹಿಷ್ಣು, ಪ್ರಕ್ಷುಬ್ಧ, ಭಯಪೂರಿತ ವಾತಾವರಣ ಸೃಷ್ಠಿಸಿ, ಆ ಮೂಲಕ ಅಸಮಾನತೆಯನ್ನು ಹುಟ್ಟುಹಾಕಿ, ಅದರ ಆಧಾರದ ಮೇಲೆಯೇ ತಾನು ಮೆರೆವುದು ಅದರ ಗುಣ. ಜರ್ಮನಿಯ ಹಿಟ್ಲರ್, ಇಟಲಿಯ ಮುಸೋಲಿನಿ, ಅಫಘಾನಿನ ತಾಲಿಬಾನಿಗಳು, ಐಸಿಸ್ ಉಗ್ರರು, ಭಾರತದ ಉಗ್ರ ಧಾರ್ಮಿಕ ವಾದಿಗಳು ಇವರೆಲ್ಲರೂ ಧಾರ್ಮಿಕವಾಗಿ ಬೇರೆ ಬೇರೆಯಾಗಿದ್ದರೂ ಇವರೆಲ್ಲರ ಮೂಲ ಹಾಗೂ ಗುಣ, ಮನಸ್ಥಿತಿ ಒಂದೇ. ಅದು ಮಾನವ ಹಕ್ಕುಗಳನ್ನು ದಮನಗೈದು ಒಂದು ನಿರ್ದಿಷ್ಟ ವರ್ಗ ಅಥವಾ ಜನಾಂಗ ತಾನೇ ಶ್ರೇಷ್ಠವೆಂದು ಎಲ್ಲವೂ ತನ್ನ ಅಧೀನವಾಗಿ ಬಿದ್ದಿರಬೇಕೆಂದು ಮೆರೆದಾಡುವುದು. ಇದರ ಭಾಗವಾಗಿಯೇ ನೆಹರೂ ಅವರ ವ್ಯಕ್ತಿತ್ವದ ತೇಜೋವಧೆ, ಗಾಂಧಿ ವ್ಯಕ್ತಿತ್ವದ ತೇಜೋವಧೆ; ಹೀಗೆ ಎಲ್ಲ ಮಹನೀಯರ ವ್ಯಕ್ತಿತ್ವ ಮತ್ತು ವಿಚಾರಗಳ ತೇಜೋವಧೆಗೆ ಇಳಿದಿರುವುದು ನಮ್ಮ ದೇಶದಲ್ಲೊಂದು ಸಾಂಕ್ರಾಮಿಕ ರೋಗವಾಗಿ ಹಬ್ಬುತ್ತಿದೆ. ಈ ದ್ವೇಷಪೂರಿತ ವಿಷಾಣು ಮಾನವಕೃತವೇ ಆಗಿದೆ.

ನೆಹರೂ ಅವರ ಕುರಿತ ಪರ ವಿರೋಧದ ಲೇಖನಗಳನ್ನು, ಭಾಷಣಗಳನ್ನು ನಾನು ಆಗಾಗ ಕೇಳಿದ್ದೆ. ಇತ್ತೀಚೆಗಷ್ಟೇ ನೆಹರೂ ಅವರನ್ನು ಓದಬೇಕೆಂಬ ಹಂಬಲ ತೀವ್ರವಾಗಿ ಕಾಡತೊಡಗಿತು. ಅವರೇ ಕಟ್ಟಿದ ನ್ಯಾಷನಲ್ ಬುಕ್ ಟ್ರಸ್ಟಿನ ಅವರ ಭಾಷಣಗಳ ಕುರಿತ ಕನ್ನಡ ಪುಸ್ತಕವೊಂದನ್ನು ಕೊಂಡು ಓದಿದೆ. ಇದರಿಂದ ನೆಹರೂ ಓದಿನ ತುಡಿತ ನನ್ನಲ್ಲಿ ಹೆಚ್ಚಾಯಿತು. ಅವರ ಭಾರತದರ್ಶನ (ಡಿಸ್ಕವರಿ ಆಫ್ ಇಂಡಿಯಾ) ಕೃತಿ ಓದತೊಡಗಿದ ಮೇಲಂತೂ ಅವರ ಅಸಾಧಾರಣ ಪ್ರತಿಭೆ, ಉದಾತ್ತ ವ್ಯಕ್ತಿತ್ವ, ಅವರ ಜ್ಞಾನದ ದೂರದೃಷ್ಟಿಯ ಅಸಾಧಾರಣ ಶಕ್ತಿ ನನ್ನನ್ನು ಅಗಾಧವಾಗಿ ಪ್ರಭಾವಿಸಿಬಿಟ್ಟಿತು ಹಿಡಿದಿಟ್ಟಿತು. ವೈವಿಧ್ಯಮಯ ದೇಶವಾದ ಸಾವಿರಾರು ವರ್ಷಗಳ ಚರಿತ್ರೆಯನ್ನು ತನ್ನೊಳಗೆ ಗರ್ಭೀಕರಿಸಿಕೊಂಡ ಭಾರತದ ಅಂತರಂಗವನ್ನು ಅಂತಸ್ಸತ್ವವನ್ನು ನೆಹರು ಅವರಷ್ಟು ಗಾಢವಾಗಿ ಅರ್ಥ ಮಾಡಿಕೊಂಡವರು ವಿರಳ (ಅಂಬೇಡ್ಕರ್ ಹೊರತುಪಡಿಸಿ) ಎನಿಸಿತು.

ಈ ದೇಶದ ಬಗ್ಗೆ ಇಲ್ಲಿಯ ಜನರ ಬಗ್ಗೆ ನೆಹರೂ ಅವರಿಗಿರುವ ಸ್ಪಷ್ಟತೆಯೇ ನೆಹರೂ ಈ ದೇಶವನ್ನು ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಮೇಲೆತ್ತುವಲ್ಲಿ ಅಲಿಪ್ತನೀತಿ ಎಂಬ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದು ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎನಿಸುತ್ತದೆ. ನೆಹರೂ ಬರಿಯ ರಾಜಕಾರಣಿ ಮಾತ್ರವೇ ಆಗಿರಲಿಲ್ಲ, ಅವರೊಬ್ಬ ಇತಿಹಾಸಕಾರ, ಸಂಸ್ಕೃತಿ ಚಿಂತಕ, ಆರ್ಥಿಕ ತಜ್ಞ, ಹೆಸರಲ್ಲಿ ಮಾತ್ರವೇ ಪಂಡಿತನಲ್ಲ. ನೆಹರು ನಮಗೆ ಅರ್ಥವಾಗಬೇಕಾದರೆ ಮೊದಲು ನಾವು ಅವರ ಬರೆಹಗಳಿಗೆ ಹೋಗಬೇಕು. ಬರಹಗಳಲ್ಲಿ ಅಡಗಿರುವ ನೆಹರೂ ಅವರನ್ನು ಭಾರತದ ಪ್ರತಿಯೊಬ್ಬ ಯುವಕರಿಗೂ ತಲುಪಿಸುವ ಕೆಲಸವಾಗಬೇಕು.‌

ಇತ್ತೀಚೆಗೆ ನಾನು ಓದಿದ ಪುಸ್ತಕದ ಕುರಿತು ಹೇಳುತ್ತೇನೆ. ಅದು ತನ್ನ ಮಗಳು ಇಂದಿರೆಗೆ ತಂದೆ ನೆಹರೂ ಬರೆದ ಪತ್ರಗಳ ಸಂಕಲನ. ಹತ್ತುವರ್ಷದ ಮಗಳು ಇಂದಿರಾ ೧೯೨೮ರ ಬೇಸಗೆಯಲ್ಲಿ ದೂರದ ಹಿಮಾಲಯದ ಮಸ್ಸೂರಿಯಲ್ಲಿದ್ದಾಳೆ. ತಂದೆ ಬಯಲು ಪ್ರದೇಶದ ಅಲಹಾಬಾದಿನಲ್ಲಿದ್ದಾನೆ. ಆತನಿಗೆ ತನ್ನ ಮಗಳನ್ನು ಮಾತನಾಡಿಸಬೇಕಾಗಿದೆ. ಅದಕ್ಕಾಗಿ ಆಕೆಗೆ ಪತ್ರದ ಮೇಲೊಂದು ಪತ್ರಗಳನ್ನು ಬರೆಯುತ್ತಾರೆ. ಆ ಪತ್ರಗಳ ಸಂಕಲನವೇ ‘ಮಗಳಿಗೆ ಅಪ್ಪ ಬರೆದ ಪತ್ರಗಳು’ ೧೧೯ ಪುಟಗಳ ಈ ಪುಟ್ಟ ಪುಸ್ತಕದಲ್ಲಿ ೩೧ ಪತ್ರಗಳಿವೆ. ಮಗಳ ಯೋಗಕ್ಷೇಮ ವಿಚಾರಿಸಿ ಆಕೆಗೆ ಆರೋಗ್ಯ ಜಾಗೃತಿ ಹೇಳುವ, ಇಲ್ಲವೇ ಮಗಳನ್ನು ಕಾಣುವ ಸೇರುವ ತಂದೆಯಾದವನ ಭಾವುಕ ಪರಿವೇಷದ ಬರೆಹಗಳಲ್ಲ ಇವು. ಬದಲಿಗೆ ತನ್ನ ಮಗಳನ್ನು ಭಾರತದ ಅತ್ಯುತ್ತಮ ಪ್ರಜೆಯಾಗಿ ರೂಪಿಸುವ ಆಕೆಯನ್ನು ಮನುಷ್ಯಪ್ರೇಮದ ಹಾದಿಯಲ್ಲಿ ನಡೆಸುವ ಉದ್ಧೇಶದಿಂದಲೇ ಬರೆದ ಪತ್ರಗಳಿವು. ನೆಹರು ತನ್ನ ಮಗಳು ಮಾತ್ರವಲ್ಲ ದೇಶದ ಪ್ರತಿಯೊಂದು ಮಗವೂ ಹೀಗೆ ರೂಪುಗೊಳ್ಳಬೇಕು; ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳನ್ನು ಇಂತಹದ್ದೊಂದು ಚಿಂತನ ಮಾರ್ಗದಲ್ಲಿ ನಡೆಸುವಂತಾಗಬೇಕು ಎಂದೇ ಕನಸಿದ್ದವರು. ಎಲ್ಲರಿಗೂ ತಿಳಿದಿರುವ ಹಾಗೆ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ. ಅವರು ಮಕ್ಕಳ ಪ್ರೀತಿಯ ಚಾಚಾ. ಅವರ ಜನುಮದಿನ ಮಕ್ಕಳ ದಿನಾಚರಣೆಯಾಗಿ ಆಚರಣೆಗೊಳ್ಳುತ್ತಿದೆ. ನಾವೆಲ್ಲರೂ ಮಕ್ಕಳ ದಿನಾಚರಣೆಯೆಂದು ಶಾಲೆಯ ಮೇಷ್ಟ್ರು ಹೇಳುವ ಚಾಚಾ ನೆಹರುವಿನ ಕಥೆ ಕೇಳುತ್ತಾ, ಆ ದಿನ ಸಿಹಿಸಿಹಿಯಾದ ಚಾಕಲೇಟು ತಿಂದು ಸಂಭ್ರಮಿಸುತ್ತಲೇ ಬೆಳೆದವರು. ನೆಹರು ತಮ್ಮ ಮಗಳಿಗೆ ಬರೆದ ಪತ್ರಗಳು ಕೇವಲ ಅವರ ಮಗಳಿಗೆ ಸೀಮಿತವಾಗಲಾರವು. ಅಪ್ಪ – ಮಗಳ ಕರುಳಬಳ್ಳಿಯ ಸಂಬಂಧದಾಚೆ ಈ ದೇಶದ ಎಲ್ಲ ಮಕ್ಕಳಿಗೂ ಈ ಪತ್ರಗಳು ಸಲ್ಲುವವು. ಮಕ್ಕಳು ಮಾತ್ರವಲ್ಲ ಎಲ್ಲ ವಯಸ್ಸಿನವರೂ ಓದಬೇಕಾದ ಪತ್ರಗಳಿವು. ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಇಂತಹ ಪುಸ್ತಕಗಳನ್ನು ಕೊಟ್ಟು ಓದಿಸಬೇಕು.

ನೆಹರೂ ಇಂದಿರೆಗೆ ಮೊದಲ ಪತ್ರದಲ್ಲಿ ಹೇಳುತ್ತಾರೆ, “ಈ ಪತ್ರದಲ್ಲಿ ನಾನು ನಿನಗೆ ಸ್ವಲ್ಪವನ್ನು ಮಾತ್ರ ಹೇಳಬಲ್ಲೆ. ಅದು ಸ್ವಲ್ಪವೇ ಆದರೂ ನಿನಗೆ ಮೆಚ್ಚಿಗೆಯಾಗಿ ಈ ಜಗತ್ತನ್ನು ಒಟ್ಟಾಗಿ ನೋಡುವುದಕ್ಕೂ ಅದರಲ್ಲಿರುವ ಬೇರೆಬೇರೆ ಜನರು ನಮ್ಮ ಸಹೋದರ ಸಹೋದರಿಯರೆಂದು ತಿಳಿಯುವುದಕ್ಕೂ ನಿನ್ನನ್ನು ತೊಡಗಿಸುವುದೆಂದು ನನ್ನ ನಂಬಿಕೆ” ಬೆಳೆಯುವ ಮಗಳು ಮುಂದೆ ಏನಾಗಬೇಕೆಂಬುದರ ಮುನ್ನೋಟ ಈ ಮಾತಿನಲ್ಲಿದೆ. ಮಕ್ಕಳಲ್ಲಿ ಎಳವೆಯಲ್ಲೇ ಜಗತ್ತನ್ನು ಪೂರ್ಣದೃಷ್ಟಿಯಿಂದ ನೋಡುವ ಮನೋಭಾವವನ್ನು ನಾವು ಬೆಳೆಸದೇ ಹೋದರೆ ಅವರು ಸಂಕುಚಿತರೂ ಮಾತಾಂಧರೂ ಜಾತಿವಾದಿಗಳೂ ವರ್ಗವಾದಿಗಳೂ ನಂಜಿನ ಮುಳ್ಳುಗಳೂ ಆಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಈಗ ನಮ್ಮಲ್ಲಿ ದಲಿತರು ಮುಸ್ಲಿಮರು ಈ ದೇಶದ ಮೂಲನಿವಾಸಿಗಳಲ್ಲ ಎಂದು ಈ ದೇಶದ ಮೂಲ ನಿವಾಸಿಗಳಲ್ಲದವರೇ ಹೇಳುತ್ತಿರುವ, ಹಿಟ್ಲರನ ಜನಾಂಗಿಕ ದ್ವೇಷವನ್ನು ಸಿದ್ಧಾಂತವಾಗಿಸಿಕೊಂಡು ಹಸಿಹಸಿ ಸುಳ್ಳು ಮತ್ತು ಕ್ರೌರ್ಯದ ಮೂಲಕ ಇಡೀ ದೇಶದ ದಲಿತ ಶೂದ್ರ ಅಲ್ಪಸಂಖ್ಯಾತರು ಮಹಿಳೆಯರ ಚರಮಗೀತೆ ಹಾಡಲು ಹೊರಟಿರುವವರ ಆಟಾಟೋಪಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ. ನಮ್ಮ ಮಕ್ಕಳನ್ನು ಜನಾಂಗಿಕವಾದದ, ಧಾರ್ಮಿಕವಾದ ಹಿಂಸಾತ್ಮಕ ಕೃತ್ಯಗಳಿಗೆ ಆಯುಧಗಳನ್ನಾಗಿ ಪ್ರಯೋಗಿಸಿ ಮತ್ತದೇ ಗುಲಾಮಗಿರಿ ಅಸ್ಪೃಶ್ಯತೆ, ಊಳಿಗಮಾನ್ಯ ವ್ಯವಸ್ಥೆ, ಬಂಡವಾಳಶಾಹಿಯ ಕಪಿಮುಷ್ಟಿ ಎಲ್ಲವುಗಳ ಗಾಣದ ಅರಗಳಿಗೆ ಸಿಕ್ಕಿಸಿ ನುರಿಸುವ ಎಲ್ಲ ದಾರಿಗಳನ್ನು ಮುಕ್ತವಾಗಿಸಿಕೊಳ್ಳುತ್ತಿರುವ ಫ್ಯಾಸಿಸ್ಟ್ ಅಧಿಕಾರದ ಹೆಡೆಯ ಕೆಳಗೆ ನಾವು ಬಂದು ನಿಂತಿದ್ದೇವೆ.

ಭೂಮಿಯ ಹುಟ್ಟು, ರಚನೆ ಅದರ ಆರಂಭದ ಸ್ಥಿತಿ, ಭೂಮಿಯ ಮೇಲೆ ಜೀವಸೃಷ್ಟಿ, ಅಣು ಕಣ, ಪ್ರಾಣಿಗಳು, ಮೊದಲ ಜೀವಿಗಳು, ಮಾನವನ ಉಗಮ, ಮೂಲ, ನಿಸರ್ಗದೊಂದಿಗಿನ ಅವನ ಹೋರಾಟದ ಬದುಕು, ಆತನ ವಿಕಾಸ, ಅವನು ಬದುಕಿದ ನೆಲೆಗಳು, ಅವನ‌ ಕಲೆ, ಅವನು ಕಂಡುಕೊಂಡ ವಿಜ್ಞಾನ, ಮಾನವರು ಜನಾಂಗಗಳಾಗಿ ಪ್ರತ್ಯೇಕಗೊಂಡ ಬಗೆ, ಅವರ ಬಣ್ಣ ಭಾಷೆ ದೈಹಿಕ ರಚನೆಗಳ ಹಿಂದಿನ ವೈಜ್ಞಾನಿಕ ಕಾರಣಗಳು, ಜನಾಂಗಗಳು, ಭಾಷೆಗಳು, ಭಾಷಾ ಬಳಗಗಳು, ನಾಗರಿಕನಾಗುವತ್ತ ಅವನ ಪಯಣ, ನಾಗರಿಕತೆ ಎಂದರೆ ಏನು, ಜಗತ್ತಿನ ನಾಗರಿಕತೆಗಳು, ಅವುಗಳ ಚರಿತ್ರೆ, ಅವುಗಳ ಜನಜೀವನ, ಭೂಮಿ ಮತ್ತು ಭೂಮಿಯ ಒಡೆತನ ಹೇಗೆ ಆರಂಭವಾಯ್ತು, ನಾಯಕ, ಗೌಡ, ಯಜಮಾನ ಅಥವಾ ಒಡೆಯ ಹೇಗಾದನು, ಗುಲಾಮಗಿರಿ ಹೇಗೆ ಹುಟ್ಟಿತು, ವಿಕೇಂದ್ರೀಕೃತ ಭೂಮಿ, ಸಂಪತ್ತು ಉತ್ಪಾದನೆ ಹೇಗೆ ಕೇಂದ್ರೀಕರಣವಾಯಿತು, ಧರ್ಮಗಳ ಉದಯ, ಅವುಗಳ ಮೂಲ ಉದ್ಧೇಶ, ಶ್ರಮ ವಿಭಾಗ ಹೇಗಾಯಿತು, ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು, ಅರಸೊತ್ತಿಗೆ ಹೇಗೆ ಮೊದಲಾಯಿತು, ಹೇಗೆ ಬುದ್ಧಿವಂತರು ಮುಗ್ಧರನ್ನು ವಂಚಿಸುತ್ತಾ ಆಸ್ತಿಯನ್ನು ಸಂಪತ್ತನ್ನು ಅಧಿಕಾರವನ್ನು ತನ್ನ ವಯಕ್ತಿಕ ಸ್ವತ್ತನ್ನಾಗಿಸಿಕೊಳ್ಳುತ್ತಾ ಅದರ ಆಧಾರದಲ್ಲಿ ಅಧಿಕಾರ ಸ್ಥಾಪಿಸಿ ತಾನೇ ಕಾನೂನು ತಾನೇ ಪರಮೇಶ್ವರನಾದ ಎಂಬುದನ್ನು ಆ ಮೂಲಕ ದುಡಿಯುವ ಶ್ರಮಜೀವಿ ವರ್ಗವನ್ನು ಹೇಗೆ ಹುಟ್ಟುಹಾಕಲಾಯಿತು ಎಂಬುದನ್ನು, ಸಂಸ್ಕೃತಿಗಳು, ದೊಡ್ಡ ದೊಡ್ಡ ನಗರಗಳು, ಅವುಗಳ ಬೆಳವಣಿಗೆ, ನಾಶ, ಅವುಗಳ ಉತ್ಖನನ, ಅವುಗಳ ಅಧ್ಯಯನ, ಜಗತ್ತಿನ ಪ್ರಾಚೀನ ನಾಗರಿಕತೆಗಳ ಬೆಳವಣಿಗೆ, ಸಂಬಂಧ, ಸಾಂಸ್ಕೃತಿಕ ಕೊಡುಕೊಳೆ, ಸಾಮ್ಯತೆ, ಸಂಕರ, ಕಡಲ ಸಾಹಸಿಗರು, ಭಾಷೆ ಲಿಪಿಗಳ ಹುಟ್ಟು, ಜನವರ್ಗಗಳು, ಅರಸರು, ಅರಸೊತ್ತಿಗೆ ಪರಂಪರೆಯ ಆರಂಭ, ಗುಡಿಗಳು ಪೂಜಾರಿಗಳ ಸೃಷ್ಟಿ. ಶೋಷಕರು, ಶೋಷಿತರು, ಜನಾಂಗಗಳ ವಲಸೆ, ಆರ್ಯರೆಂದರೆ ಯಾರು? ಅವರು ಭಾರತಕ್ಕೆ ಎಲ್ಲಿಂದ ಬಂದರು? ಅವರ ಮೂಲ ಯಾವುದು? ಅವರ ಗುಣ ಲಕ್ಷಣ ಬಣ್ಣ ಭಾಷೆ ಸಾಹಿತ್ಯಗಳು ಯಾವುವು? ಅವರಿಂದ ಇಲ್ಲಿಯ ಮೂಲದವರಾದ ದ್ರಾವಿಡರ ಮೇಲಾದ ದಾಳಿಗಳು, ಕೃಷಿಯ ಹುಟ್ಟು, ಆಹಾರ ಸಂಗ್ರಹಣೆ, ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳನ್ನು ಸರಳವಾದ ಪ್ರೀತಿಯ ಭಾಷೆಯಲ್ಲಿ ಬರೆಯುತ್ತಾರೆ‌.

ಹೀಗೆ ಮಗಳಿಗೆ ೩೧ ಪತ್ರಗಳನ್ನು ಬರೆದಿರುವ ನೆಹರೂ ತಾವು ಬರೆಯುವ ಪ್ರತಿ ಪತ್ರದಲ್ಲೂ ಮನುಷ್ಯನ ಮೂಲ ಒಂದೇ ಎಂದೂ, ಭೇದಗಳೆಲ್ಲವೂ ಅವನದೇ ಸೃಷ್ಟಿಯೆಂದೂ, ಈ ಕಾಲಕ್ಕೆ ಅವು ಸಲ್ಲವೆಂದೂ ಮಾರ್ಮಿಕವಾಗಿ ಕಿವಿಮಾತು ಹೇಳುತ್ತಾರೆ‌. ವರ್ಗಗಳು ಹೇಗಾದವೆಂದು ಹೇಳುತ್ತಾ, “ಹೊಲಗೆಲಸ ಮಾಡುವ ಒಕ್ಕಲಿಗರೂ, ಪಟ್ಟಣಗಳಲ್ಲಿ ದುಡಿಯುವ ಕೂಲಿಕಾರರೂ ಕೊನೆಯವರು. ಇದೇ ದೊಡ್ಡದಾದ ಪಂಗಡ. ಬೇರೆ ವರ್ಗದವರೆಲ್ಲರೂ ಇವರ ಗಳಿಕೆಯೊಳಗಿನ ಏನನ್ನಾದರೂ ಪಡೆಯಲು ಹವಣಿಸುವವರೇ” ಎನ್ನುತ್ತಾರೆ. ಪುರೋಹಿತಶಾಹಿ, ರಾಜಶಾಹಿ ಮತ್ತು ಬಂಡವಾಳಶಾಹಿ ಹೇಗೆ ಜನಶೋಷಕರಾಗಿ ವರ್ತಿಸುತ್ತಾರೆಂಬುದ‌ನ್ನು ತಾನು ದುಡಿಯುವ ಒಕ್ಕಲಿಗರ ಕೂಲಿಕಾರರ ಪರವಾಗಿ ಯೋಚಿಸಬೇಕೆಂಬುದನ್ನು ಮಾರ್ಮಿಕವಾಗಿ ಹೇಳುತ್ತಾರೆ‌. ಆರ್ಯರು ಹೇಗಿದ್ದರು ಎಂಬುದನ್ನು ಹೇಳುತ್ತಾ, “ತಾವು ಉತ್ತಮರೆಂದು ಆರ್ಯರು ಹೆಮ್ಮೆಪಡುತ್ತಿದ್ದುದರಿಂದ ಅವರು ಭಾರತದ ಉಳಿದ ಜನರೊಂದಿಗೆ ಬೆರೆತು ಹೋಗಲು ಹೆದರುತ್ತಿದ್ದರು. ಹೀಗೆ ಬೆರಿಕೆಯಾಗಬಾರದೆಂದು ಅವರು ಕಟ್ಟಳೆಗಳನ್ನು ಮಾಡಿಕೊಂಡರು. ಆದುದರಿಂದ ಆರ್ಯರು ಅನ್ಯರೊಂದಿಗೆ ಮದುವೆಯಾಗುತ್ತಿರಲಿಲ್ಲ. ಇದೇ ಪದ್ದತಿ ಬೆಳೆದು ಎಷ್ಟೋ ಕಾಲದ ನಂತರ ಈಗಿನ ಜಾತಿಗಳಾದುವು. ಆದರೆ ಈಗಿನ ಕಾಲದಲ್ಲಿ ಈ ಜಾತಿ ಪದ್ಧತಿ ಬಹಳ ನಗೆಚಾಟಿಕೆಯ ಮಾತಾಗಿದೆ. ಎಷ್ಟೋ ಜನರು ಎರಡನೆಯವರೊಂದಿಗೆ ಉಣ್ಣುವುದಕ್ಕೂ ಅವರನ್ನು ಮುಟ್ಟುವುದಕ್ಕೂ ಹೆದರುತ್ತಾರೆ. ಸುದೈವದಿಂದ ಈಗ ಇದು ಕಡಿಮೆಯಾಗುತ್ತಿದೆ”. ನೆಹರೂ ಲೋಕದೃಷ್ಟಿ ಹೀಗಿತ್ತು ಅವರು ವರ್ಣ ವರ್ಗ ಜಾತಿ ಮೀರಿದ ಧರ್ಮನಿರಪೇಕ್ಷವಾದ ಭಾರವೊಂದರ ಕನಸು ಕಟ್ಟಿದ್ದರು; ಮಾತ್ರವಲ್ಲದೆ ತನ್ನ ಮಗಳು ಇದನ್ನು ಮೊದಲು ತಿಳಿದವಳಾಗಿರಬೇಕೆಂದು ಹಂಬಲಿಸಿಯೇ ಹೀಗೆ ವಿಶಿಷ್ಟ ಪತ್ರಗಳನ್ನು ಬರೆದಿದ್ದರು. ಹತ್ತು ವರ್ಷದ ಮಗಳ ಮಾನಸಿಕತೆಯನ್ನು ಪ್ರಭಾವಿಸುವ ಒಂದು ಮಮತೆಯ ಭಾಷೆ ಮುನ್ನೋಟ ಈ ಪತ್ರಗಳಲ್ಲಿದೆ.

ನೆಹರೂ ಅವರೇ ಹೇಳಿರುವಂತೆ, “ಇವು ಹತ್ತು ವರುಷದ ಚಿಕ್ಕ ಹುಡುಗಿಯೊಬ್ಬಳಿಗೆ ಬರೆದ ನಮ್ಮ ನಮ್ಮೊಳಗಿನ ಕಾಗದಗಳು, ತಮ್ಮ ಸಲಹೆಗಳ ಮೂಲಕ ನನ್ನ ಆದರಕ್ಕೆ ಪಾತ್ರರಾದ ಸ್ನೇಹಿತರು ಈ ಓಲೆಗಳಲ್ಲಿ ಕೆಲವು ಗುಣಗಳನ್ನು ಕಂಡು ಇವುಗಳನ್ನು ಹತ್ತು ಜನರೆದುರು ಇಡಲು ನನಗೆ ಸೂಚಿಸಿದರು. ಉಳಿದ ಹುಡುಗರೂ ಹುಡುಗಿಯರೂ ಇವುಗಳನ್ನು ಮೆಚ್ಚುವರೋ ಇಲ್ಲವೊ ನನಗೆ ತಿಳಿಯದು. ಆದರೆ ಇವುಗಳನ್ನು ಓದಿದವರು ಈ ಜಗತ್ತೆಂದರೆ ಬೇರೆ ಬೇರೆ ರಾಷ್ಟ್ರಗಳ ದೊಡ್ಡ ಕುಟುಂಬವೆಂದು ತಿಳಿಯಲು ಕಲಿಯುವರೆಂದು ನನ್ನ ನಂಬುಗೆ.” ನೆಹರು ಅವರೊಳಗಿನ ವಿಶ್ವಮಾನವ ಪ್ರಕಟವಾಗುವ ಬಗೆ ಇದು.

ಇಂದು ಜಗತ್ತನ್ನು ಜನಾಂಗಿಕವಾದ ಯುದ್ಧಪಿಪಾಸುತನ, ಆಯುಧಗಳ ವ್ಯಾಪಾರದ ಮಾಫಿಯಾ, ಧಾರ್ಮಿಕ ಅಂಧಕಾರ ಮುಸುಕಿ ಜನ ನರಳತೊಡಗಿದ್ದಾರೆ‌. ಜಗತ್ತಿನ ಮೇಲ್ವರ್ಗಗಳು ಮಾತ್ರ ಜಗತ್ತಿನ ಶ್ರಮಜೀವಿಗಳನ್ನು ಸಾಮಾನ್ಯ ಜನರನ್ನು ಮಹಿಳೆ ಮಕ್ಕಳು ಎಲ್ಲರನ್ನೂ ತಮ್ಮ ಅಧಿಕಾರ ದಾಹದ ತಮ್ಮ ಸುಖದ ದಾಹದ ಕಾರಣಕ್ಕೆ ಅತ್ಯಂತ ನಿಕೃಷ್ಟವಾಗಿ ದಮನಿಸುತ್ತಿದ್ದಾರೆ‌‌. ಯಾವತ್ತೂ ಯುದ್ಧ ಪರವಲ್ಲದ ನೆಹರೂ ಈ ಜಗತ್ತೆಂದರೆ ಒಂದು ಕುಟುಂಬ, ಇಲ್ಲಿ ಮನುಷ್ಯರು ಶಾಂತಿ ಪ್ರೀತಿ ಸಹನೆ ಸಹಕಾರಗಳಿಂದ ಬದುಕಿ ಬಾಳಬೇಕು ಎಂದುಕೊಂಡವರು. ಅದಕ್ಕಾಗಿಯೇ ಪರಸ್ಪರ ಬಡಿದಾಡುತ್ತಿದ್ದ ಧೂರ್ತ ದೇಶಗಳ ಬಣದಿಂದ ದೂರ ಉಳಿದು ಅಲಿಪ್ತನೀತಿಯನ್ನು ರೂಪಿಸಿ ಜಗತ್ತಿಗೆ ಕೊಟ್ಟರು. ನೆಹರೂ ಪ್ರಕಾರ ನಾಗರಿಕತೆ ಎಂದರೆ ಮನುಷ್ಯರು “ಕಾಡುನಡತೆಗಳನ್ನು ಬಿಟ್ಟು ಒಳ್ಳೆಯವುಗಳನ್ನು ಅಂಗೀಕರಿಸಿದ ಸ್ಥಿತಿ. ನಾಗರಿಕತೆ ಈ ಕಾಡು ಸ್ಥಿತಿಗೆ ವಿರುದ್ಧವಾದುದು. ಕಾಡುಸ್ಥಿತಿಯಿಂದ ನಾವು ಎಷ್ಟೆಷ್ಟು ದೂರ ಸಾಗಿ ಬರುವೆವೋ ಅಷ್ಟಷ್ಟು ಹೆಚ್ಚಾಗಿ ಸುಸಂಸ್ಕೃತರಾಗುವೆವು”.

ಜಗತ್ತಿನಲ್ಲಿ ನಡೆದ ಎರಡು ಮಹಾ ಯುದ್ಧಗಳಲ್ಲಿ ಒಂದು ದೇಶದ ಜನ ಮತ್ತೊಂದು ದೇಶದ ಜನರನ್ನು ಆದಷ್ಟು ಸಂಖ್ಯೆಯಲ್ಲಿ ಕೊಲ್ಲಲು ಹವಣಿಸಿದರು, ಕೊಂದರು. ಜಗತ್ತನ್ನೆ ಮಾನವ ರಕ್ತದ ಸಮುದ್ರವನ್ನಾಗಿಸಿದರು. ಅಮಾಯಕ ಜನರ ಹೆಣಗಳನ್ನು ಆ ರಕ್ತ ಸಮುದ್ರದ ನಡುಗಡ್ಡೆಯಂತೆ ರಾಶಿ ಒಟ್ಟಿದರು. ಹಸಿವು ಬಡತನ ದಾರಿದ್ರ್ಯ ರೋಗರುಜಿನ ಭಯೋತ್ಪಾದನೆ ಅಶಾಂತಿ ಎಲ್ಲವನ್ನೂ ತಂದೊಡ್ಡಿದರು. ಹಿಟ್ಲರ್ ಯಹೂದ್ಯರ ಚಂಡಾಡಿದ, ಜಪಾನಿಗರು ಚೀನಿಯರ ಚೆಂಡಾಡಿದರು, ಸ್ಪೇನಿಷರು ರೆಡ್ ಇಂಡಿಯನ್ನರ ಚೆಂಡಾಡಿದರು, ಅಮೇರಿಕನ್ನರು ಜಪಾನಿಗರ ಸುಟ್ಟು ಬೂದಿ ಮಾಡಿದರು. ಇದು ಈಗಲೂ ನಿಂತಿಲ್ಲ. ಐಸಿಸ್ ಉಗ್ರರ ಕ್ರೌರ್ಯ ತಾಲಿಬಾನಿಗಳ ಮನುಕುಲ ಹೇಸುವ ಕೊಲೆಕಾಂಡ ಒಂದೇ ಎರಡೇ? ನಾವು ನಾಗರಿಕ ಸ್ಥಿತಿಯಿಂದ ಅನಾಗರಿಕ ಸ್ಥಿತಿಗೆ ಹೊರಟಿದ್ದೇವಲ್ಲ! ನಮ್ಮ ದೇಶವೇನು ಕಡಿಮೆಯೇ? ದೇವರು ಧರ್ಮ ಜಾತಿ ಲಿಂಗ ವರ್ಗದ ಹೆಸರಲ್ಲಿ ಇಲ್ಲಿ ಯಾವ ಭರವಸೆಯೂ ಉಳಿದಿಲ್ಲ. ಈ ದೇಶವೂ ಅಧಃಪತನದತ್ತ ಓಡುತ್ತಿರುವ ಹುಚ್ಚು ಕುದುರೆ.

ನೆಹರೂ ಪತ್ರಗಳು ನಮಗೆ ನೆಹರೂ ಎಂಬ ಅಚ್ಚರಿಯನ್ನು ನೆಹರೂ ಎಂಬ ವಿವೇಕವನ್ನು ದಾರ್ಶನಿಕನನ್ನು, ಇತಿಹಾಸಕಾರನನ್ನು, ಸಂಸ್ಕೃತಿ ಚಿಂತಕನನ್ನು, ಮಾನವತಾವಾದಿಯನ್ನು ತೆರೆದಿಡುತ್ತವೆ. ಇಂತಹ ಪುಸ್ತಕಗಳು ಹೆಚ್ಚು ಹೆಚ್ಚು ಜನರ ಕೈ ಸೇರಬೇಕು; ಅದರಲ್ಲೂ ನಮ್ಮ ಮಕ್ಕಳ ಕೈ ಸೇರಬೇಕು‌. ಪೋಷಕರು ಮಕ್ಕಳ ಕೈಗೆ ಇಂತಹಾ ಪುಸ್ತಕಗಳನ್ನು ಒದಗಿಸಬೇಕು.‌ ಬರಿಯ ಅಕ್ಷರ ರೂಪವಲ್ಲದೆ ಈ ಪುಸ್ತಕಗಳು ಧ್ವನಿ ಸುರುಳಿಯ ರೂಪದಲ್ಲಿ, ಸಾಕ್ಷ್ಯ ಚಿತ್ರದ ರೂಪದಲ್ಲಿ ದೇಶದಲ್ಲಿರುವ ಎಲ್ಲಾ ಭಾಷೆಗಳಲ್ಲಿಯೂ ಎಲ್ಲರಿಗೂ ತಲುಪುವಂತಾಗಬೇಕು. ಪುಸ್ತಕವನ್ನು ಋತುಮಾನದವರು ಸುಂದರವಾಗಿ ಮುದ್ರಿಸಿದ್ದಾರೆ. ಕಪಟರಾಳ ಕೃಷ್ಣರಾಯರು ಸೊಗಸಾಗಿ ಕನ್ನಡಿಸಿದ್ದಾರೆ.

  • ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು