October 1, 2023 7:08 am

ಜನತೆಯ ಕವಿ ಡಾ. ಸಿದ್ದಲಿಂಗಯ್ಯ

ಬೆಂಗಳೂರು: ಪ್ರಾಣದ ಹರಣದ ಘಳಿಗೆಯ ಒಳಗೆ, ಬಾಳ ರಮ್ಯತೆಯ ಚಿಮ್ಮಿಸಿ ಹಾರುವ ಹಳದಿ ಚಿಟ್ಟೆಗಳೇ ಕಾಡದಿರಿ ಎಂಬ ಸಾಲುಗಳು ಸೌಂದರ್ಯವೆಂಬುದು ಶೋಷಿತನಿಗೆ ಹೇಗೆ ಕಾಣಿಸುತ್ತದೆ ಎಂಬ ಪ್ರಶ್ನೆ ಹಾಕಿಕೊಂಡಾಗ ಭಾರತದ ಇಡಿಯ ಕಾವ್ಯ ಮೀಮಾಂಸೆಯೇ ತಲೆ ಕೆಳಗಾಗಿ ನಿಂತುಕೊಳ್ಳುತ್ತದೆ. ಉದಾಹರಣೆಗೆ ದೇವಸ್ಥಾನದ  ಕಟ್ಟಡದ ಬಗ್ಗೆ ನಾವು ಬರೆಯುತ್ತೇವೆ. ಆದರೆ ಭಾರತದ ದೊಡ್ಡ ಜನವರ್ಗವಾದ ದಲಿತರಿಗೆ ಪ್ರವೇಶವೇ ಇಲ್ಲವಲ್ಲ. ಹಾಗಾಗಿ ಶೋಷಿತನಿಗೆ ಅದು ಅನ್ಯವೆನಿಸುತ್ತದೆ ಎಂದು ದೆಹಲಿ ಜೆ ಎನ್ ಯು ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ದಿನಾಂಕ 19.09.2021ರಂದು ಆಯೋಜಿಸಿದ್ದ ಬಂಧುತ್ವ ಬೆಳಕು ಉಪನ್ಯಾಸ ಸರಣಿಯ ವಿಷಯ “ ಜನತೆಯ ಕವಿ ಡಾ. ಸಿದ್ದಲಿಂಗಯ್ಯ: ಸಾಹಿತ್ಯ ಮತ್ತು ಚಳುವಳಿಗೆ ಡಾ.ಸಿದ್ದಲಿಂಗಯ್ಯನವರ ಕೊಡುಗೆ” ಕುರಿತು ಮಾತಾಡಿದ ಅವರು, ಸಿದ್ದಲಿಂಗಯ್ಯನಂಥ ಕವಿ ಬರಲು ಭಾರತ 3 ಸಾವಿರ ವರ್ಷ ಕಾಯಬೇಕಾಯಿತು. ಮಂಚನಹಳ್ಳಿಯಲ್ಲಿ ಕವಿಗಳು ಜನಿಸಿದರು. ಒಂದು ಚರಿತ್ರೆ ತನ್ನ ಅಗತ್ಯತೆಗಳಿಗೆ ಅನುಗುಣವಾಗಿ ಸೃಷ್ಟಿಸಿದ ಒಬ್ಬ ಮಹಾಕವಿ ಜನತೆಯ ಕವಿ ಡಾ. ಸಿದ್ದಲಿಂಗಯ್ಯ ಎಂದರು.

ದೇಶದ ಉಜ್ವಲತೆಯ ಬಗ್ಗೆ ಭಾಷಣ ಮಾಡುವವನಿಗೆ ತಾನೊಂದು ಪ್ರಶ್ನೆ ಕೇಳಿದೆ. ಇಷ್ಟೆಲ್ಲ ಉಜ್ವಲವಾಗಿರುವ ದೇಶದಲ್ಲಿ ಮಲ ಹೊರುವ ಸಮುದಾಯವನ್ನೇಕೆ ಸೃಷ್ಟಿಸಿದಿರಿ ಎಂದು. 1973ರಲ್ಲಿ ಬಸವಲಿಂಗಯ್ಯ ಅವರು ಮಲ ಹೊರುವ  ಪದ್ಧತಿಯನ್ನು ನಿಷೇಧಿಸಿದರು. ಕಾಂಗ್ರೆಸ್ ಸರಕಾರದ ಹಿಂದುಳಿದ ವರ್ಗದ ನೀತಿಗಳಿಂದ ದೇಶದ ತಳ ಸಮುದಾಯಗಳಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.

1973, 1974, 1975ನೇ ಇಸವಿಗಳಲ್ಲಿ ನಡೆದ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳ ಮೇಲೆ ದೊಡ್ಡ ಸಂಶೋಧನೆಯನ್ನೇ ಮಾಡಬಹುದು.  ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು, ಒದೆಸಿಕೊಂಡು ಒರಗಿದೋರು,  ಕಾಲು ಕೈ ಹಿಡಿಯೋರು, ಕೈ ಮಡಗಿಸಿಕೊಳ್ಳೋರು ಭಕ್ತರಪ್ಪ ಭಕ್ತರೋ ನನ್ನ ಜನಗಳು ಎಂಬ ಸಾಲುಗಳು ಶೋಷಿತರ ಬದುಕನ್ನು ಕಣ್ಣಮುಂದೆ ತಂದುಬಿಡುತ್ತವೆ. ಹಾಗಾಗಿ ಓದುವ ಶೋಷಿತರಿಗೆ ಇದು ತಮ್ಮದೇ ಕವನ ಅನಿಸಿಕೊಳ್ಳುತ್ತದೆ.  ಪರಮಾತ್ಮನ ಹೆಸರು ಹೇಳಿ ಪರಮಾನ್ನ ಉಂಡ ಜನಕೆ ಬೂಟು ಮೆಟ್ಟು ಹೊಲಿದೋರು ನನ್ನ ಜನಗಳು ಎಂಬುದು ಶೋಷಿತರ ಆತ್ಮಕಥೆಯಾಗಿದೆ ಎಂದರು.

ಕವಿಗಳು ಜೀವ ಚೈತನ್ಯವಾಗಿದ್ದರು. ಉಪದೇಶವು ನಮಗೆ ಬೇಡ ಬೇಕು ನಮಗೆ ಅನ್ನವು ಎಂಬ ಕವನದ ಮೂಲಕ ತುರ್ತು ಪರಿಸ್ಥಿತಿಯನ್ನು ಪ್ರತಿರೋಧಿಸಿದ್ದಿದೆ. ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ ಎಂದು ಅದ್ಭುತ ಸಾಲುಗಳ ಮೂಲಕ ಜನ ಭಾಷೆಯನ್ನು ಬಳಸುವ ಮೂಲಕ ಜನರನ್ನು ತಲುಪಿದ ಕವಿ ಸಿದ್ದಲಿಂಗಯ್ಯ ಎಂದು ಅಭಿಪ್ರಾಯಪಟ್ಟರು.

ಇಕ್ಕರ್ಲಾ ಒದಿರ್ಲಾ ಎಂಬುದು ಪ್ರತಿಭಟನಾ ಕಾವ್ಯವಾಗಿದೆ. ಸಾವಿರಾರು ನದಿಗಳು ಆ ಕವನ ಸಂಕಲನದ ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು. ಕಪ್ಪು ಮುಖ ಬೆಳ್ಳಿ ಗಡ್ಡ ಉರಿಯುತ್ತಿರುವ ಕಂಗಳು. ಹಗಲು ರಾತ್ರಿಗಳನ್ನು ಸೀಳಿ ನಿದ್ರೆಯನ್ನು ಒದ್ದರು. ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ. ಭೂಕಂಪನವಾಯಿತು ಅವರು ಕುಣಿವ ಹುಚ್ಚಿಗೆ. ಇರುವೆಯಂತೆ ಹರಿವ ಸಾಲು ಹುಲಿ ಸಿಂಹದ ಧ್ವನಿಗಳು ಎಂಬ ಸಾಲುಗಳಲ್ಲಿನ ರೂಪಕಗಳು ಅದ್ಭುತವಾಗಿವೆ ಎಂದು ವಿವರಿಸಿದರು.

ವೆಬಿನಾರ್ ನಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯಗಳು

ನನಗೆ ಸಿದ್ದಲಿಂಗಯ್ಯನವರ ಪರಿಚಯ 1974ರಿಂದ ಇದೆ. 70ರ ದಶಕದ ಚಳುವಳಿ ಬಗ್ಗೆ ಕೃತಿ ಬರೆಯಲಾಗಿದೆ. ಪ್ರಾರಂಭದಿಂದಲೂ ಕವಿಗಳೊಡನೆ ಒಡನಾಟವಿದೆ.  ಅವರು ದಲಿತ ಚಳುವಳಿಯ ಮುಖ್ಯಭಾಗ.  ದಲಿತ ಸಂಘರ್ಷ ಸಮೀತಿ ಸಾಮೂಹಿಕ ನಾಯಕತ್ವದಲ್ಲಿ ಹುಟ್ಟಿಕೊಂಡಿತು. ಬಿ.ಕೃಷ್ಣಪ್ಪ ಭಾವುಕವಾಗಿ ಮಾತನಾಡಿದರೆ ಕವಿಗಳು ಆಕ್ರೋಶದಿಂದ ಮಾತನಾಡುತ್ತಿದ್ದರು. ಚಳುವಳಿಯ ಪ್ರಗತಿಗೆ ಅವರಿಬ್ಬರ ಕೊಡುಗೆಯಿದೆ.

ಬೂಸಾ ಚಳುವಳಿಯಲ್ಲಿ ಅವರದೆ ನೇತೃತ್ವವಿತ್ತು. ಪಂಚಮ ಪತ್ರಿಕೆಯ ಮೂಲಕ ದಲಿತ ಸಮುದಾಯಗಳ ಮೇಲೆ ನಡೆಯುತ್ತಿದ್ದ ಶೋಷಣೆಗಳ ಬಗ್ಗೆ, ಸಾಹಿತ್ಯದ ಬಗ್ಗೆ ಬರೆಯಲಾಯಿತು. ಆಂದೋಲನ ಪತ್ರಿಕೆಯ ಮೂಲಕವೂ ಸಾಹಿತ್ಯಿಕ ಚಟುವಟಿಕೆಗಳು ನಡೆದವು. ಅಂಬೇಡ್ಕರ್ ಸಾಹಿತ್ಯವನ್ನು ಕನ್ನಡಕ್ಕೆ ತಂದ ಮೇಲೆ ಎಲ್ಲಾ ಯುವಕರಿಗೆ ತಲುಪಿಸುವ ಪ್ರಯತ್ನ ಮಾಡಲಾಯಿತು. ಕರ್ನಾಟಕದಾದ್ಯಂತ ಪ್ರವಾಸ ಮಾಡಿ ದಲಿತ ಸಂಘರ್ಷ ಚಳುವಳಿಯನ್ನು ಕಟ್ಟುವಲ್ಲಿ ಸಿದ್ದಲಿಂಗಯ್ಯ ಅವರ ಕೊಡುಗೆ ಅಪಾರ.

ವಿಧಾನ ಪರಿಷತ್ ಸದಸ್ಯರಾಗಿಯೂ ಸಿದ್ದಲಿಂಗಯ್ಯ ಸೇವೆ ಸಲ್ಲಿಸಿದ್ದಾರೆ. ದೇವನೂರರನ್ನು ಒಪ್ಪಿಸಲು ವಿಫಲರಾದ ಎಂ.ಪಿ.ಪ್ರಕಾಶ್ ನಂತರ ಸಿದ್ದಲಿಂಗಯ್ಯ ಅವರನ್ನು ಒಪ್ಪಿಸಲು ಸಫಲರಾದರು. ಸದಸ್ಯರಾದ ಮೇಲೆಯೂ ಅವರು ಅಲ್ಲಿಯ ಸೌಲಭ್ಯಗಳಲ್ಲಿ ಕಳೆದು ಹೋಗದೇ ಅತ್ಯುತ್ತಮ ಭಾಷಣಗಳ ಮೂಲಕ ದಲಿತರ ಪರ ಕಾನೂನುಗಳು ರೂಪಿತವಾಗುವುದಕ್ಕೆ ನೆರವಾದರು. ಎರಡನೇ ಅವಧಿಗೆ ಅವರು ಮತ್ತೆ ಆಯ್ಕೆಯಾದರು. 12 ವರ್ಷಗಳ ಕಾಲ ಅವರು ಆ ಕಾಲಘಟ್ಟದಲ್ಲಿ ಸೇವೆ ಸಲ್ಲಿಸಿದರು.

ನಂತರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಅಭಿವೃದ್ಧಿ ಪ್ರಾಧಿಕಾರ, ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರಗಳ ಅಧ್ಯಕ್ಷರಾದರು. ಹೊಸ ಪೀಳಿಗೆ ಕವಿಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂಬುದು ವಿಪರ್ಯಾಸ. 

  • ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು

ಮೇಷ್ಟ್ರು ತಳಸಮುದಾಯಗಳ ನೋವಿನ ಸಂಗತಿಯನ್ನು ಅದ್ಭುತವಾಗಿ, ಉಗ್ರವಾಗಿ ಬರೆಯುತ್ತಿದ್ದರು. ಮೇಷ್ಟ್ರು ಯಾವಾಗಲೂ ಆಶ್ಚರ್ಯ, ಅದ್ಭುತವಾಗಿ ಕಾಣುತ್ತಾರೆ. ಯಜಮಾನಿಕೆಯನ್ನು ಬರಹದ ಮೂಲಕ ವಿರೋಧಿಸುತ್ತಿದ್ದರು. ಬರಹದಲ್ಲಿ ಗಾಂಭೀರ್ಯತೆ ತೋರಿದಷ್ಟು ವ್ಯಕ್ತಿಗತವಾಗಿ ತುಂಬಾ ಹಾಸ್ಯ ಪ್ರಜ್ಞೆಯಿಂದ ವ್ಯವಹರಿಸುತ್ತಿದ್ದರು. ಪ್ರೀತಿ, ವಿಶ್ವಾಸದಿಂದ ಮಾತನಾಡಿಸುತ್ತಿದ್ದರು.

ದೈವದ ನಂಬಿಕೆ ಮತ್ತು ಅತಿರೇಕದ ವರ್ತನೆಗಳ ನಡುವಿನ ವಿಚಾರವನ್ನು ಉಕ್ಕಡಗಾತ್ರಿಯ ಸಂದರ್ಭದಲ್ಲಿ ಹೇಳಿದ್ದರು. ಗ್ರಾಮದೇವತೆಗಳು ಹೇಗೆ ಹುಟ್ಟುತ್ತವೆ ಹಾಗೂ ಅವುಗಳಿಗೆ ಹೇಗೆ ದೈವತ್ವದ ರೂಪ ಬರುತ್ತದೆ ಎಂಬುದನ್ನು ವಿವರಿಸುತ್ತಿದ್ದರು.

ಯಾವೂದನ್ನೂ ಅತಿಯಾಗಿ ಸೀರಿಯಸ್ಸಾಗಿ ನೋಡದೇ ಅಷ್ಟೇ ಲಘುವಾಗಿಯೂ ತೆಗೆದುಕೊಳ್ಳುತ್ತಿರಲಿಲ್ಲ. ಕವಿಗಳಿಗೆ ವಿರೋಧಿಗಳಿರಲಿಲ್ಲ, ವಿಮರ್ಶಕರಿದ್ದರಷ್ಟೇ. ವಿಮರ್ಶೆಗಳನ್ನು ಅವರು ಆರೋಗ್ಯಕರವಾಗಿಯೇ ಸ್ವೀಕರಿಸುತ್ತಿದ್ದರು.

  • ಡಾ. ಕಾವಲಮ್ಮ, ಚಿಂತಕರು, ಪ್ರಾಧ್ಯಾಪಕರು

ಕವಿಗಳಿಗೆ ಸಾಹಿತ್ಯಿಕವಾಗಿ ನಾವು ಆಯೋಜಿಸಿದ ಕಾರ್ಯಕ್ರಮ ಕೊನೆಯದಾಗಿತ್ತು. ತಾವು ಬರೆದ ಪುಸ್ತಕದ ಬಗ್ಗೆ ಅವರು ಅತಿಯಾಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಶೋಷಿತ ಸಮುದಾಯದ ಮುಂಛೂಣಿಯ ಲೇಖಕರಾಗಿ ಕವಿಗಳು ಬರೆದರು. ಸಾಹಿತ್ಯದ ಒಳಗಿರುವ ಜಾತಿ ವ್ಯವಸ್ಥೆಯ ಆಚೆಗೆ ಕವಿಗಳಿಗೆ ಅಪಾರ ಓದುಗರು, ಅಭಿಮಾನಿಗಳು ಇದ್ದರು. ಬೀದಿಯಲ್ಲಿ ಬಿದ್ದವರ ಬಗ್ಗೆ ಬರೆದ ಅವರ ಸಾಹಿತ್ಯಕ್ಕೆ ಅದರದ್ದೇ ಆದ ಮಹತ್ವವಿದೆ.

  • ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ, ಅಧ್ಯಾಪಕರು

Share:

One Response

  1. ಬಿಳಿಮಲೆ ಸರ್, ‘ಹೊಸ ಪೀಳಿಗೆ ಸಿದ್ಧಲಿಂಗಯ್ಯ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ವಿಪರ್ಯಾಸ’ ಎಂದಿದ್ದೀರಿ! ಅದು ಹೇಗೆ ವಿಪರ್ತಯಾಸವೋ ನಮಗೆ ತಿಳಿಯದು. ತಮ್ಮ ಕೊನೆಯ ದಿನಗಳಲ್ಲಿ ತತ್ವ-ಸಿದ್ಧಾಂತಕ್ಕೂ ತಾನು ಬರೆದ ಕಾವ್ಯಕ್ಕೂ ಸಂಬಂಧವೇ ಇಲ್ಲದ ಹಾಗೆ ಬದುಕಿದ ಕವಿಯನ್ನು ಓದುಗರು ಮತ್ತೆ ಯಾವ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕಿತ್ತು? ನೀವು ಹೇಳುವ ಹಾಗೆ ‘ಹೊಸ ಪೀಳಿಗೆ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ’ ಎಂಬ ಮಾತು ಹಾಗೊಮ್ಮೆ ನಿಜವೇ ಆಗಿದ್ದರೆ ಕೆ.ಬಿ.ಸಿದ್ಧಯ್ಯ ಅವರಂತಹ ಹಿರಿಯ ಕವಿಗಳೇ ಸಿದ್ಧಲಿಂಗಯ್ಯ ಅವರನ್ನು “ದಲಿತ ಹಾಸ್ಯ ಕವಿ” ಎಂದು ಏಕೆ ಕರೆದರು? ಅಷ್ಟೇ ಅಲ್ಲ, ಸಿದ್ಧಲಿಂಗಯ್ಯ ಅವರು ಇತ್ತೀಚೆಗೆ ಪ್ರಕಟವಾದ ತಮ್ಮ ಸಮಗ್ರ ಕಾವ್ಯ ಸಂಕಲನ “ಬೋದಿವೃಕ್ಷದ ಕೆಳಗೆ” ಕೃತಿಯನ್ನು ಯಡಿಯೂರಪ್ಪನವರಿಗೆ ಯಾಕೆ ಅರ್ಪಣೆ ಮಾಡಿದರು? ಇದಕ್ಕೆ ಏನೆಂದು ಕರೆಯುವುದು?ತನ್ನ ಕಾವ್ಯದ ಮೂಲಕ ಒಂದು ಜನಾಂಗದ ಕಣ್ಣು ತೆರೆಸಿದ ಕವಿ, ತನ್ನ ವಯಕ್ತಿಕ ಹಿತಾಸಕ್ತಿ ಹಾಗೂ ಅಧಿಕಾರದ ಲಾಲಸೆಗೆ ಅದೇ ಜನಾಂಗದ ನೋವು, ಹಿಂಸೆ, ಅವಮಾನ, ದಬ್ಬಾಳಿಕೆಯನ್ನು ನೋಡಿಯೂ ನೋಡದ ಹಾಗೆ ಎಂತಹ ಗಂಭೀರವಾದ ಸಮಾರಂಭವಾದರೂ ಭಾಷಣ ಮಾಡುತ್ತಾ ನಗೆ’ಗಡಲಲ್ಲಿ’ ತೇಲುತ್ತಿದ್ದ ಕವಿಯನ್ನು ತರುಣರು ಹೇಗೆ ಅರ್ಥ ಮಾಡಿಕೊಳ್ಳಬೇಕಿತ್ತು?

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು