ಬೆಂಗಳೂರು: ಬ್ರಿಟಿಷರು ಭಾರತದಲ್ಲಿ 1931ರಲ್ಲಿ ಜಾತಿ ಗಣತಿ ನಡೆಸಿದ್ದಾರೆ. ಆದರೆ ಇವತ್ತಿನ ತಂತ್ರಜ್ಞಾನ ಅವತ್ತು ಇರಲಿಲ್ಲ. ಹಾಗಾಗಿ ಅದು ಅಷ್ಟು ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು.
ಸೆಪ್ಟಂಬರ್ 4, 2021ರಂದು ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆದ ಬಂಧುತ್ವ ಬೆಳಕು ವಿಶೇಷ ವೆಬಿನಾರ್ ಸರಣಿಯಲ್ಲಿ “ಜಾತಿವಾರು ಆರ್ಥಿಕ – ಸಾಮಾಜಿಕ ಸಮೀಕ್ಷೆ ಮತ್ತು ಸಾಮಾಜಿಕ ನ್ಯಾಯ” ವಿಷಯದ ಕುರಿತು ಮಾತಾಡಿದ ಅವರು, 1941ರಲ್ಲಿ ನಡೆದ ಮಾಹಿತಿ ಸಂಗ್ರಹ ಪೂರ್ಣಗೊಂಡಿಲ್ಲ. 1951ರಲ್ಲಿಯೂ ಅಷ್ಟೇ. ಜಾತಿಗಣತಿ ಎಂದರೆ ಹಿಂದುಳಿದವರಿಗೆ ಸಮಬಂಧಿಸಿದ್ದು ಎಂಬ ತಪ್ಪು ಕಲ್ಪನೆ ಇದೆ. ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಯುತ್ತದೆ. ಆದರೆ ಜಾತಿ ಒಳಗೊಂಡು ಸಮೀಕ್ಷೆ ನಡೆಯಬೇಕಿದೆ. ಬಿ. ಪಿ. ಮಂಡಲ್ ಆಯೋಗ 1980ರಲ್ಲಿ ವರದಿ ಸಲ್ಲಿಸಿದ್ದು 1990ರಲ್ಲಿ ಅದನ್ನು ವಿ. ಪಿ. ಸಿಂಗ್ ಒಪ್ಪಿಕೊಳ್ಳುತ್ತಾರೆ. ನ್ಯಾಯಾಲಯದಲ್ಲಿ ಮಂಡಲ್ ಜಡ್ಜಮೆಂಟ್ ಬರುತ್ತದೆ ಎಂದರು.
ನಾಲ್ವಡಿ ಕೃಷ್ಣಾರಾಜ ಒಡೆಯರ್ ಅವರ ಕಾಲದಿಂದಲೂ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಒತ್ತು ಇದೆ. ಹಾವನೂರ ಆಯೋಗ ಬರುತ್ತದೆ. ಅದರ ವರದಿಯೂ ಸಲ್ಲಿಕೆಯಾಗುತ್ತದೆ. ಶಾಶ್ವತ ಹಿಂದುಳಿದ ಆಯೋಗವೂ ಕರ್ನಾಟಕದಲ್ಲಿದೆ. ಜಾತಿವಾರು ಮೀಸಲಾತಿ ನೀಡಲು ಜಾತಿಗಣತಿ ಆಧಾರವಾಗುತ್ತದೆ. ಸಿದ್ಧರಾಮಯ್ಯ ಸರಕಾರ ಜಾತಿ ಗಣತಿಗೆ ಮುಂದಾಗುತ್ತದೆ. ಜಾತಿ ಗಣತಿ ದತ್ತಾಂಶಗಳನ್ನು ಮನೆ ಮನೆಗೆ ತರಳಿ ಕಲೆ ಹಾಕಬೇಕು. ಅದನ್ನು ಪರಾಮರ್ಶೆ ಮಾಡಬೇಕು. 2018ರ ಸಮೀಕ್ಷೆ ಮುಗಿದಿದೆ ಎಂದು ಹೇಳಲಾಗುತ್ತಿದೆ. ಆದರೆ Analysis ನಡೆದಿಲ್ಲ. ಕಾಂತರಾಜ ವರದಿ ವೈಜ್ಞಾನಿಕವಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ಹಲವು ರಾಜ್ಯಗಳಲ್ಲಿ ಮೀಸಲಾತಿಯ ಕೂಗು ಎದ್ದಿದೆ. ಆದರೆ ಆ ಯಾವ ಸಮುದಾಯಗಳಿಗೆ ಮೀಸಲಾತಿ ನೀಡಲು ಜಾತಿ ಗಣತಿಯು ಆಧಾರವಾಗಬಲ್ಲುದು? ಹಾಗಾಗಿ ಜಾತಿ ಗಣತಿ ಅತ್ಯವಶ್ಯವಾಗಿದೆ. ಜಾತಿ ಗಣತಿ ವೈಜ್ಞಾನಿಕವಾಗಿ ಮೀಸಲಾತಿಯನ್ನು ನಿರ್ಧಾರ ಮಾಡಲು ಅತ್ಯವಶ್ಯಕವಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಜಾತಿ ಗಣತಿ ನಡೆದಿದೆ. 2014ರಲ್ಲಿ ಸರಕಾರ ಬಿದ್ದ ನಂತರ ಅದನ್ನು ಸಲ್ಲಿಸಿದ್ದಾರೆ. ಆದರೆ ಅದರಲ್ಲಿ ಜಾತಿ ಬಿಟ್ಟು ಸಾಮಾಜಿಕ-ಆರ್ಥಿಕ ಗಣತಿಯನ್ನು ಮಾತ್ರ ಘೋಷಿಸಿದ್ದಾರೆ ಎಂದರು.
ಕಾನೂನಿನ ಮೂಲಕ ಮೀಸಲಾತಿ ನೀಡಿದಾಗ ಉದ್ಯೋಗದಲ್ಲಿ ಪ್ರಾತಿನಿಧ್ಯ, ಶಿಕ್ಷಣದಲ್ಲಿ ಪ್ರಾತಿನಿಧ್ಯ ಇಂಥವೆಲ್ಲ ಸಾಮಾಜಿಕ ಅಸಮಾನತೆಯನ್ನು ನಿಯಂತ್ರಣ ಮಾಡಲು ಸಹಕಾರಿಯಾಗಿವೆ. ಜಾತಿ ಗಣತಿ ಮಾಡದ್ದಕ್ಕೆ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಜಾತಿಗಳಲ್ಲಿಯೇ ಗುಂಪುಗಳಾಗಿ ಪ್ರತ್ಯೇಕ ಮೀಸಲಾತಿಗೆ ಹೋರಾಟ ಮಾಡುತ್ತಿವೆ ಎಂದರು.
ವೆಬಿನಾರ್ ನಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ
ಹೊಸ ಪೀಳಿಗೆ ತಳ ಸಮುದಾಯಗಳ ಯುವಕರ ಮಾನಸಿಕ ಸ್ಥಿತಿಯನ್ನು ನಾವು ಗಮನಿಸಬೇಕು. ಕಳೆದ ನಾಲ್ಕು ದಶಕಗಳಲ್ಲಿ ಭಾರತದಲ್ಲಿ ಆಗಿರುವ ಸಾಮಾಜಿಕ, ಆರ್ಥಿಕ ಬದಲಾವಣೆಗಳನ್ನು ನಾವು ಗಮನಿಸಿದಾಗ ವಿಶೇಷವಾಗಿ ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮೀಸಲಾತಿಗಳು ಒಂದಷ್ಟು ನಮ್ಮನ್ನು ಮುಖ್ಯ ವಾಹಿನಿಗೆ ಬರಲು ಅವಕಾಶ ಮಾಡಿಕೊಟ್ಟಿವೆ. ಆದರೆ ಪರಿಸ್ಥಿತಿ ಮಾತ್ರ ಇನ್ನೂ ಭೀಕರವಾಗಿಯೇ ಇದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲೆಂದೇ ಕಾಲೇಕರ್ ವರದಿ ಸಲ್ಲಿಕೆಯಾಗಿದ್ದು. ಆದರೆ ಕಾಲೇಕರ ಬಗ್ಗೆಯೇ ವಿರೋಧ ವ್ಯಕ್ತವಾಗುತ್ತದೆ.
ಸರಕಾರಗಳು ಅಧಿಕಾರ ಶಕ್ತಿಯಿಂದ ನಮ್ಮನ್ನು ರಕ್ಷಣೆ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರಿಗೆ ಇರುವಷ್ಟು ಮೀಸಲಾತಿಯ ಬಗ್ಗೆ ಕಾಳಜಿ ಬೇರೆಯವರಿಗಿಲ್ಲ. ಬಾಬಾಸಾಹೇಬರ ಜಾತಿ ವಿನಾಶವನ್ನು ಸಂಪತ್ತಿನ ಸಮಾನ ಅವಕಾಶ, ಶಿಕ್ಷಣ, ಉದ್ಯೋಗದ ಮೀಸಲಾತಿಯಿಂದ ಯಶ ಸಾಧಿಸಲು ಸಾಧ್ಯವಾಗುತ್ತದೆ. ಐಕ್ಯತೆಯ ಹೋರಾಟದಿಂದ ಮಾತ್ರ ನಾವು ಇಂಥ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಚರ್ಚೆ, ಸಂವಾದಗಳ ಜೊತೆಗೆ ಜನಶಕ್ತಿಯನ್ನು ರೂಪಿಸಿ ಸಮಸ್ಯೆಗಳ ಪರಿಹಾರಕ್ಕೆ ನಾವು ಪ್ರಯತ್ನಿಸಬೇಕು.
- ಮಾವಳ್ಳಿ ಶಂಕರ್, ರಾಜ್ಯ ಪ್ರಧಾನ ಸಂಚಾಲಕರು, ದಸಂಸ (ಅಂಬೇಡ್ಕರ್ ವಾದ)
ಪ್ರಶ್ನೆಗಳು:
1. ಜಾತಿ ಗಣತಿ ಆಗಿರುವಾಗ ಕೆಲ ಸಮುದಾಯಗಳು ಒಳ ಮೀಸಲಾತಿ ಕೇಳುತ್ತಿವೆ ಹೇಗೆ?
ಉತ್ತರ: ಮೀಸಲಾತಿಯ ಮುಂದುವರೆದ ಭಾಗವೇ ಒಳ ಮೀಸಲಾತಿ. ಇದನ್ನು ನಿರ್ಲಕ್ಷಿಸುವಂತಿಲ್ಲ. ಹಿಂದುಳಿದ ಜಾತಿಗಳಲ್ಲಿ ವರ್ಗೀಕರಿಸಿ ಒಳ ಮೀಸಲಾತಿ ಕೊಡಲು ಅವಕಾಶವಿದೆ.
2. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಪಡೆಯಲು ಯಾವ ಪ್ರಯತ್ನಗಳು ನಡೆದಿವೆ? ಮತ್ತು ಅವುಗಳು ಪರಿಹಾರ ಸೂಚಿಸಬಲ್ಲುವೇ?
ಉತ್ತರ: ವಿಪರೀತ ಖಾಸಗೀಕರಣದಿಂದ ಸರಕಾರಿ ಕೆಲಸಗಳು ಖಾಸಗಿಯವರಿಗೆ ಹೋಗುತ್ತಿವೆ. ಸರಕಾರದ ಹಣದಲ್ಲಿಯೇ ಕೆಲ ಯೋಜನೆಗಳನ್ನು ನಡೆಸುತ್ತಿದ್ದರೂ ಅಲ್ಲಿ ಯಾವುದೇ ಮೀಸಲಾತಿ ಪರಿಗಣಿತವಾಗುವುದಿಲ್ಲ.