October 1, 2023 8:34 am

ಕೊರೊನಾ: ಜನರಲ್ಲಿನ ಭಯ, ಆತಂಕ ಮತ್ತು ಪರಿಹಾರಗಳು

ಬೆಂಗಳೂರು: ವೇದ ಕಾಲದಿಂದ ಪ್ರಸನ್ನ ಕಾಯ, ಪ್ರಸನ್ನ ಮನಸು, ಪ್ರಸನ್ನ ಇಂದ್ರಿಯ, ಪ್ರಸನ್ನ ಪಂಚೇಂದ್ರಿಯಗಳು, ಪ್ರಸನ್ನ ಆತ್ಮ ಇರಬೇಕು ಎಂಬ ಮಾತಿದೆ. ಇಹ, ಭೋಗಭಾಗ್ಯದ ಚಿಂತನೆಗಳಿಗಿಂತ ಹೊರತಾಗಿರುವುದು ಆರೋಗ್ಯವಂತರ ಲಕ್ಷಣ ಎಂದು ಮಾನಸಿಕ ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ “ಕೊರೊನಾ: ಜನರಲ್ಲಿನ ಭಯ, ಆತಂಕ ಮತ್ತು ಪರಿಹಾರಗಳು” ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತಾಡಿದ ಅವರು, ಐಹಿಕ ಸುಖಕ್ಕೆ ಬೇಕಾದವುಗಳನ್ನೆಲ್ಲ ಪಡೆಯುತ್ತಿದ್ದೇವೆ. ಆದರೆ, ಸುಖ ಕ್ಷೀಣಿಸುತ್ತಿದೆ. ಐಹಿಕ ಸುಖಭೋಗಗಳತ್ತ ಗಮನಕೊಟ್ಟಿರುವ ಜನ ಆರೋಗ್ಯವನ್ನು ನಿರ್ಲಕ್ಷಿಸಿದ್ದಾರೆ. ಇದರಿಂದ ಕೊರೊನಾ ಮಾತ್ರವಲ್ಲ ಇನ್ನಿತರ ಕಾಯಿಲೆಗಳು ಕಾಡುತ್ತಿವೆ ಎಂದರು.

ದೇಶದ ಜನ ಬಹುತೇಕ ರೋಗಗಳಿಂದ ನರಳುತ್ತಿದ್ದಾರೆ. ಇದರಿಂದ ವೈದ್ಯರ ಅಪಾಯಿಂಟ್ ಮೆಂಟ್ ಪಡೆಯಲು 3 ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಿದ್ದೇವೆ. ಕರ್ನಾಟದ ಬಜೆಟ್, ದೇಶದ ಬಜೆಟ್ ನಲ್ಲಿ ಶೇ. 2ಕ್ಕಿಂತ ಕಡಿಮೆ ಆದಾಯವನ್ನು ಆರೋಗ್ಯ ಮತ್ತು ಶಿಕ್ಷಣಕ್ಕೆ ವಿನಿಯೋಗಿಸುತತ್ತಿದ್ದೇವೆ. ಖಾಸಗಿಯವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ನಮಗೆ ಶಾಲೆ, ಆಸ್ಪತ್ರೆಗಳನ್ನು ನಡೆಸಲಾಗುವುದಿಲ್ಲ ಎಂದು ಬಿಟ್ಟುಕೊಟ್ಟಿದ್ದೇವೆ. ಇದು ಒಳ್ಳೆಯ ಲಕ್ಷಣವಲ್ಲ. ಖಾಸಗಿಯವರು ಲಾಭಕ್ಕಾಗಿ ಕೆಲಸ ಮಾಡುತ್ತಾರೆ. ಅವರಿಗೆ ನಮ್ಮ ಆರೋಗ್ಯ, ಶಿಕ್ಷಣದ ಕುರಿತು ಕಾಳಜಿ ಇರುವುದಿಲ್ಲ. ಆದ್ದರಿಂದ ಇವೆರೆಡೂ ಕ್ಷೇತ್ರ ದುಬಾಯಿಯಾಗಿವೆ. ಸಗಿಯಲ್ಲಿ ಕೋವಿಡ್ ವ್ಯಾಕ್ಸಿನ್ ಗೆ 1.5 ಸಾವಿರದವರೆಗೆ ನೀಡಬೇಕಿದೆ ಎಂದರು.

ಕೋವಿಡ್ ಜಾಗತಿಕ ರೋಗ. ಬಂದು ಒಂದೂವರೆ ವರ್ಷವಾಯಿತು. ಇನ್ನೂ ಎಷ್ಟು ದಿವಸ ಇರುತ್ತದೆ, ಎಷ್ಟು ಅಲೆ ಬರುತ್ತವೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲಲ್ಲ. ಕೊರೊನಾ ವೈರಸ್ ನಮ್ಮೊಂದಿಗೆ ಇರಲು ಬಂದಿದೆ. ಹೋಗಲು ಬಂದಿಲ್ಲ. ಪರಿಣಾಮಕಾರಿ ವ್ಯಾಕ್ಸಿನ್ ಸಿಕ್ಕರೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಅದರಿಂದ ಮುಕ್ತವಾವಾಗಬಹುದು ಎಂದರು.

ಜನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿಲ್ಲ. ನಮಗೆ ಸ್ವಾತಂತ್ರ್ಯವಿಲ್ಲ. ಮಕ್ಕಳೂ ಸೇರಿದಂತೆ ಗೃಹಬಂಧನದಲ್ಲಿದ್ದೇವೆ. ನಿನ್ನೆವರೆಗೂ ಜನ ಮನೆಯಲ್ಲಿರಿ ಎಂದು ಸರ್ಕಾರ ಹೇಳಿತ್ತು. ಇದ್ದೆವು. ಯಾವುದೇ ಪ್ರಾಣಿ ಸ್ವಚ್ಛಂದವಾಗಿ ಇರಲು ಅಪೇಕ್ಷಿಸುತ್ತದೆ. ಆದರೆ, ಕೊರೊನಾ ಕಾರಣದಿಂದಾಗಿ ಯಾವುದೇ ಸಾಮಾಜಿಕ ಚಟುವಟಿಕೆ ಇಲ್ಲ. ಮದುವೆ, ನಾಮಕರಣವಿಲ್ಲ. ಬೇರೆಯವರ ಮನೆಗಳಿಗೆ ಹೋಗುವಂತಿಲ್ಲ. ಒಟ್ಟಿಗೆ ಸೇರಿ ಸಂತೋಷಪಡುವಂತಿಲ್ಲ. ಬಹಳ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಅನೇಕ ತಳವರ್ಗದ ಜನ ಊಟಕ್ಕೂ ಕಿಟ್ ಗಾಗಿ ಉದ್ದ ಸರದಿಯಲ್ಲಿ ನಿಲ್ಲಬೇಕಾಗಿದೆ. ಗಾರ್ಮೆಂಟ್ ನ ಉದ್ಯೋಗಿಯೊಬ್ಬರನ್ನು ಗಂಡ ಬಿಟ್ಟಿದ್ದಾನೆ. ಅವರು 3 ದಿನ ಕಿಟ್ ಗಾಗಿ ಸರದಿಯಲ್ಲಿ ನಿಂತರು. ಕಿಟ್ ಸಿಕ್ಕಿಲ್ಲ. ಮನೆ ಬಾಡಿಗೆ ಇದ್ದವರು ಬಿಟ್ಟು ಹೋಗಿದ್ದಾರೆ. ನಮ್ಮ ಬಂಧುಮಿತ್ರರು, ಕಲಾವಿದರು, ನಾಯಕರು ಬಲಿಯಾಗುತ್ತಿದ್ದಾರೆ ಎಂದರು.

ರಾಜ್ಯದಲ್ಲಿ 35,000 ಜನ ಬಲಿಯಾಗಿದ್ದಾರೆ. ಇಲ್ಲವಾದಲ್ಲಿ ಈ ಸಾವುಗಳು ಸಂಭವಿಸುತ್ತಿರಲಿಲ್ಲ. ಮನೆಯಲ್ಲಿ ಒಬ್ಬ ವ್ಯಕ್ತಿ ಬಲಿಯಾದರೆ ತುಂಬಾ ಸಮಸ್ಯೆಯಾಗುತ್ತದೆ. ಸರ್ಕಾರ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಹೇಳಿದೆ. ಇದು ಬಹಳ ಸ್ವಾಗತಾರ್ಹ ಎಂದರು.

ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇದೇ ಮೊದಲ ಬಾರಿ ಆಡಳಿತ ಮತ್ತು ವೈದ್ಯಕೀಯ ಎಷ್ಟು ಸಮರ್ಥವಾಗಿರಬೇಕೋ ಅಷ್ಟು ಇಲ್ಲ ಎಂಬುದು ಗೊತ್ತಾಗಿದೆ. ಆಂಬುಲೆನ್ಸ್ ನವನು ದುಡ್ಡು ಕೇಳುತ್ತಾನೆ. ಆಸ್ಪತ್ರೆಯಲ್ಲಿ ಬೆಡ್ ಸಿಗಲು ವಶೀಲಿಬಾಜಿ ಮಾಡಬೇಕಾಗುತ್ತದೆ. ಡಾ. ಸಿದ್ದಲಿಂಗಯ್ಯನವರಿಗೆ ಕೂಡ ಇಂತಹ ಪರಿಸ್ಥಿತಿ ಬಂತು. ಆದರೂ ಅವರನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

ಮನಸು ಪ್ರಕ್ಷುಬ್ಧವಾಗಿದೆ. ಈಗ ಕೆಲವರು ಟಿವಿ ನೋಡುವುದನ್ನು ಬಿಟ್ಟಿದ್ದೇವೆ ಎಂದರು. ಟಿವಿಯಲ್ಲಿ ದುಃಖದ ಸುದ್ದಿಗಳೇ ಪ್ರಸಾರವಾಗುತ್ತಿವೆ. ನಮಗೂ ಇಂತಹ ಪರಿಸ್ಥಿತಿ ಬಂದು ಏನಾಗುತ್ತದೋ ಎಂದು ಭಯಕ್ಕೆ ಒಳಗಾಗಿದ್ದಾರೆ. ಮನಸು ಪ್ರಸನ್ನ, ಪ್ರಶಾಂತವಾಗಿಲ್ಲವೆಂದರೆ, ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನೇಕ ಔಷಧಿಗಳನ್ನು ನೋಡುತ್ತಿದ್ದೀರಿ. ಔಷಧಿ, ಟಾನಿಕ್, ಪುಡಿಗಳಿಂದ ಒಂದೆರಡು ದಿವಸಕ್ಕೆ ತಕ್ಷಣ ರೋಗನಿರೋಧಕ ಲಕ್ಷಣ ಬರುವುದಿಲ್ಲ ಎಂದರು.

ಸಹಜವಾಗಿ ಉದ್ಭವವಾಗುವ ದುಃಖ, ನೋವುಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದು ಮುಖ್ಯ. ಬಹುತೇಕರು ಸರ್ವನಾಶದ ಕಾಲ ಬಂದಿದೆ. ಯಾರಿಗೆ ಏನಾಗುತ್ತದೆ ಗೊತ್ತಿಲ್ಲ. ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ವೈದ್ಯರ ಮೇಲೆ ಹಲ್ಲೆಯಾಗುತ್ತದೆ. ಕೋಪಾವೇಶವನ್ನು ಈ ಕೊರೊನಾ ಸಮಯದಲ್ಲಿ ನೋಡುತ್ತಿದ್ದೇವೆ. ದೇಶದಲ್ಲಿ ಕೊರೊನಾ ಅಲೆ ಬಂದ ನಂತರ 1000 ಕ್ಕಿಂತ ಹೆಚ್ಚು ವೈದ್ಯಕೀಯ ಸಿಬ್ಬಂದಿ ಬಲಿಯಾಗಿದ್ದಾರೆ. ಒಬ್ಬ ವೈದ್ಯ ತಪ್ಪು ಮಾಡಿದರೆ ಹಲ್ಲೆ ಮಾಡುತ್ತೇವೆ. ಮಡಿದವರನ್ನು ನಾವ್ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಇದರಿಂದ ನಾವು ಹೊರಬರುವುದು ಹೇಗೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಭಾವನೆಗಳು ಮೆದುಳಿನ ಲಿಂಬಿಕ್ ಸಿಸ್ಟಮ್ ನಲ್ಲಿ ಹುಟ್ಟಿ, ಮುಂಭಾಗದಿಂದ ನಿರ್ದೇಶಿಸಲ್ಪಡುತ್ತದೆ. ನೀವು ಶಾಂತಚಿತ್ತವಾಗಿದ್ದರೆ ಹಸಿವು, ನಿದ್ರೆ, ಮೈಥುನ ಮತ್ತಿತರ ಭಾವನೆಗಳು ಬರುತ್ತವೆ. ಕೊರೊನಾಗಿಂತ ಮಾನಸಿಕ ಭಯ ದೊಡ್ಡದು. ಇದರೊಂದಿಗೆ ಕೊರೊನಾ ಸೇರಿಕೊಂಡರೆ ಇನ್ನಷ್ಟು ಭಯ ಸೇರಿಕೊಳ್ಳುತ್ತದೆ. ಅತ್ಯಂತ ದೊಡ್ಡ ಮೆದುಳಿರುವುದು ಮನುಷ್ಯರಿಗೆ ಮಾತ್ರ. ಇದು ಯೋಚನೆಗೆ, ವಿವೇಚನೆಗೆ, ಚಿಂತನೆಗೆ ಕಾರಣ. ಹಸಿವಾಗಿದೆ, ಏನು ಊಟ ಮಾಡಬೇಕು, ಎಷ್ಟು ಮಾಡಬೇಕು ಎಂದು ಅರಿವಾಗುತ್ತದೆ. ಆದರೂ ಬಿಪಿ, ಶುಗರ್ ಇರುವವರು ಏನನ್ನು ತಿನ್ನಬಾರದೋ ಅದನ್ನೇ ತಿನ್ನುತ್ತಾರೆ ಎಂದರು.

ಕೊರೊನಾ ಕುರಿತು ಅನೇಕ ಸುಳ್ಳುಗಳು ಹಂಚಿಕೆಯಾಗುತ್ತಿವೆ. ಯಾವುದನ್ನು ಮಾಡಬೇಕೋ ಅದನ್ನು ಮಾಡುತ್ತಿಲ್ಲ. ಮಾರಮ್ಮನ ಪೂಜೆ, ಲಿಂಬೆರಸ ಮೂಗಿಗೆ ಹಾಕಿಕೊಳ್ಳುವುದು ಇತ್ಯಾದಿ ಸಲಹೆಗಳನ್ನು ಹಲವರು ಕೊಟ್ಟಿದ್ದಾರೆ. ಯಾವುದು ಸರಿ, ತಪ್ಪು ಎಂಬ ವಿವೇಚನೆ ಉಪಯೋಗಿಸುವ ಗೋಜಿಗೆ ಹೋಗುವುದಿಲ್ಲ ಎಂದರು.

ಕೆಲವರು ಕೊರೊನಾ ಪಾಸಿಟಿವ್ ಬಂದರೆ ಬಚ್ಚಿಟ್ಟುಕೊಳ್ಳುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ನೆಗೆಟಿವ್ ಥಿಂಕಿಂಗ್ ಜಾಸ್ತಿಯಾಗಿದೆ. ಹತ್ತು ಕಂತುಗಳಲ್ಲಿ ಈ ವೆಬಿನಾರ್ ಮೂಲಕ ಜನಸಾಮಾನ್ಯರಿಗೆ ಸರಿಯಾದ ವಿಷಯವನ್ನು ತಜ್ಞರಿಂದ ಕೊಡುತ್ತಿರುವುದು ಶ್ಲಾಘನೀಯ ಎಂದರು.

ಕೋವಿಡ್ ಇರಲಿ, ಯಾವುದೇ ಭಾವನೆ ಬರಲಿ, ಸಕಾರಾತ್ಮಕ ಭಾವನೆಗಳು ನಮ್ಮನ್ನು ಶಾಂತಗೊಳಿಸುತ್ತದೆ. ಮಕ್ಕಳಿಂದ ಇಳಿವಯಸ್ಸಿನವರೆಗೆ ಮನಸಿನಲ್ಲಿ ಸಕಾರಾತ್ಮಕ ಭಾವನೆ ಮತ್ತು ಪ್ರೀತಿ ಇರುವಂತೆ ನೋಡಿಕೊಳ್ಳಿ. ನೆರೆಹೊರೆ, ಮನೆಯವರೊಂದಿಗೆ ಸ್ನೇಹ, ಪ್ರೀತಿಯಿಂದ ಇರೋಣ. ಇಂತಹ ಸಮಯದಲ್ಲಿ ಇದೆಲ್ಲ ಅತ್ಯವಶ್ಯ ಎಂದರು.

ಇಂದು ಇತಿಮಿತಿಯಲ್ಲಿ ನಾವೆಲ್ಲ ಸಂತೋಷದಿಂದ ಇರುವುದು ಹೇಗೆ? ಹೊರಗೆ ಹೋಗುವಂತಿಲ್ಲ. ಆದಾಯ ಕಡಿತವಾಗಿದೆ, ಮೂಲಸೌಕರ್ಯಗಳನ್ನು ಹೊಂದಿಸಿಕೊಂಡು ಸಂತೋಷಪಡಬೇಕು. ದಯವೇ ಧರ್ಮದ ಮೂಲವಯ್ಯ ಎಂಬಂತೆ ಕೆಲವರು ನೆರವು ನೀಡುತ್ತಿದ್ದಾರೆ. ಕಷ್ಟದಲ್ಲಿರುವವರಿಗೆ ನೀವು ದಯೆ ತೋರಿದರೆ, ಅವರು ನೀವೇ ಭಗವಂತ ಎನ್ನುತ್ತಾರೆ. ಒಂದು ತುತ್ತು, ನೂರು ರೂ. ದಾನ ಮಾಡಿ. ಅದರಿಂದ ಸಂತೋಷ ಸಿಗುತ್ತದೆ ಎಂದರು.

ಧೈರ್ಯಂ ಸರ್ವತ್ರ ಸಾಧನಂ. ನೀವು ಧೈರ್ಯದಿಂದ ಇದ್ದರೆ ಹುಲಿಯನ್ನೂ ಹೆದರಿಸುತ್ತೀರಿ, ಹೆದರಿದರೆ ಇಲಿಗೂ ನೀವು ಹೆದರುತ್ತೀರಿ. ಕೊರೊನಾ ಈಗ ಹುಲಿಯಂತೆ ಬಂದಿದೆ. ನೀವು ಅದರ ವಿರುದ್ಧ ಹೋರಾಡಬೇಕು. ಪಾಸಿಟಿವ್ ಬಂದರೆ ಹೆದರಬೇಡಿ. ಬಂದವರಿಗೆ ಕೂಡ ನೀವು ಧೈರ್ಯ ಹೇಳಿ. ಶಾಂತತೆ ಮತ್ತು ತಾಳ್ಮೆ ಅಗತ್ಯ. ತಾಳಿದವನು ಬಾಳಿಯಾನು ಎಂಬ ನಾಣ್ಣುಡಿ ಇದೆ. ಮನೆಯಲ್ಲಿ ಅನೇಕರು ನಿರ್ಲಕ್ಷಿಸುತ್ತಿದ್ದಾರೆ. ಡೊಮೆಸ್ಟಿಕ್ ವಯಲೆನ್ಸ್ ಜಾಸ್ತಿಯಾಗಿದೆ. ಮೊದಲು ಹೊರಗೆ ಹೋಗುತ್ತಿದ್ದರು. ಈಗ ಜೊತೆಯಲ್ಲೇ ಇರಬೇಕು. ಸಂಬಾಳಿಸಬೇಕು. ಇದಕ್ಕೆ ತಾಳ್ಮೆ ಕಲಿಯಬೇಕು. ತಾಳ್ಮೆ ಕಳೆದುಕೊಂಡರೆ ಹಿಂಸೆ ಜಾಸ್ತಿಯಾಗುತ್ತದೆ. ನೆಗೆಟಿವ್ ಚಿಂತನೆಯನ್ನು ಬಿಡೋಣ ಎಂದರು.

ಒಂದು ಹೆಣ್ಣು ಗಂಡನನ್ನು ಕರೆದುಕೊಂಡುಬಂದು ಮಾನಸಿಕ ಅಸ್ವಸ್ಥ ಎಂದು ಸರ್ಟಿಫಿಕೇಟ್ ಕೊಡಿ ಎಂದರು. ಸೋದರ ಮಾತ್ಸರ್ಯ ಮಹಾಭಾರತ ಕಾಲದಲ್ಲಿ ನಡೆದಿದೆ. ಇನ್ನೊಬ್ಬರು ಉಪವಾಸ ಇದ್ದಾಗ ನೋಡಿ ಸುಮ್ಮನಿರುವುದು, ಪರರ ಆಹಾರ ಕಿತ್ತುಕೊಳ್ಳುವುದು ಕ್ರೌರ್ಯ. ಮನೆ ಕೆಲಸಕ್ಕೆ ಬರುತ್ತಿದ್ದವರನ್ನು ಬಿಡಿಸಿದ್ದೇವೆ, ಟೀಚರ್ ಗೆ ಕೆಲಸವಿಲ್ಲ. ಎಲ್ಲ ಕೋವಿಡ್, ಆದಾಯ  ನೆಪ ಕೊಟ್ಟು ಕ್ರೌರ್ಯದಿಂದ ವರ್ತಿಸುತ್ತಿದ್ದಾರೆ. ಸಂಬಳ ಕೊಡುತ್ತೇನೆ. ಕೊರೊನಾ ಮುಗಿದ ನಂತರ ಕೆಲಸಕ್ಕೆ ಬಾ ಎಂಬ ಔದಾರ್ಯತೆ ಬರಬೇಕು ಎಂದರು.

ಕೆಲವರಿಗೆ ಇದ್ದಕ್ಕಿದ್ದಂತೆ ಸಿಟ್ಟಿಗೇಳುತ್ತಾರೆ. ಒಂದೇ ತಾಯಿಯ ಮಕ್ಕಳಲ್ಲಿ ಕೂಡ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ವ್ಯತ್ಯಾಸವಿದೆ. ಅನೇಕ ದೇಶಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಾರೆ. ದೌರ್ಜನ್ಯ ಮಾಡುವವರು ಅಪ್ಪ, ಪೋಷಕರು, ಶಿಕ್ಷಕರೇ. ಓದ್ತೀಯೋ ಇಲ್ಲವೋ, ನೂರಕ್ಕೆ ನೂರು ತೆಗೆಯುತ್ತೀಯೋ ಇಲ್ಲವೊ ಎನ್ನುವುದು ಕೂಡ ದೌರ್ಜನ್ಯ. ಮುಂದೆ ಇಂತಹ ದೌರ್ಜನ್ಯಕ್ಕೆ ಒಳಗಾದವರು ಭವಿಷ್ಯದಲ್ಲಿ ನಿರ್ಭಾವ ಜೀವಿಗಳಾಗುತ್ತಾರೆ. ಅವರಿಗೆ ಸೋಲು, ನಿರಾಶೆಗಳು ಕಾಡುತ್ತವೆ ಎಂದರು.

ಕೊರೊನಾ ಮೊದಲ ಅಲೆಯಲ್ಲಿ ಶುಗರ್, ಬಿಪಿ, ಅಸ್ತಮಾ, ಹೃದ್ರೋಗಿಗಳು ಬಲಿಯಾದರು. ಯಾವುದೇ ರೋಗವಿದ್ದವರು ಮೊದಲು ವ್ಯಾಕ್ಸಿನ್ ತೆಗೆದುಕೊಳ್ಳಿ.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಖಿನ್ನತೆಯ ಪ್ರಮಾಣ 10ರಷ್ಟು ಇದ್ದದ್ದು 30ಕ್ಕೆ ಏರಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಸಂಬಳ ಕಡಿತ ಇತ್ಯಾದಿಗಳಿಂದ ನಿರಾಶೆಗಳಿಗೆ ಒಳಗಾಗಿದ್ದಾರೆ. ಪಿಎಚ್.ಡಿ ಮಾಡಿದವರಿಗೆ ಕೆಲಸವಿಲ್ಲ, ಹಣಕಾಸಿನ ಮುಗ್ಗಟ್ಟು ಇದೆ. ಉದಾಹರಣೆಗೆ, 44 ವರ್ಷದ ಕಟ್ಟುಮಸ್ತಾದ ವ್ಯಕ್ತಿ ಗೋಳೋ ಎಂದು ಅತ್ತ. ತಾಯಿಗೆ ಕ್ಯಾನ್ಸರ್ ಚಿಕಿತ್ಸೆಗೆ 20 ಲಕ್ಷ ಕರ್ಚಾಗಿದೆ. ತಂದೆ ಕೊರೊನಾಗೆ ಬಲಿಯಾದರು. ನಾನು ಹೇಗೆ ಬದುಕಲಿ ಎಂದರು. ಇಂತಹ ದುಃಖಗಳು ಎದುರಾಗಿವೆ ಎಂದರು.

ನಿಮ್ಮ ಸುತ್ತಮುತ್ತ ಇರುವವರು, ಮನೆಯಲ್ಲಿರುವವರನ್ನು ಗಮನಿಸಿ. ಅಳುವುದು, ಕೆಲಸ ಮಾಡದೇ ಇರುವುದು, ಸುಮ್ಮನಿರುವುದು ಮಾಡುತ್ತಾರೆ. ರೂಮ್ ಸೇರಿಕೊಳ್ಳುತ್ತಾರೆ, ಆಚೆ ಬರುವುದಿಲ್ಲ. ಯಾರೊಂದಿಗೆ ಮಾತಾಡುವುದಿಲ್ಲ, ಊಟಕ್ಕೂ ಬರುವುದಿಲ್ಲ, ಏನೂ ಮಾಡದೆ ಸುಮ್ಮನಿರುತ್ತಾರೆ. ಪರೀಕ್ಷೆ ರದ್ದಾಗಿದ್ದಕ್ಕೆ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರು.   

ಖಿನ್ನತೆಗೆ ಒಳಗಾದವರು ಮುಂದುವರೆದ ದೇಶಗಳಲ್ಲಿ ಮನೋವೈದ್ಯರ ಬಳಿ ಹೋಗುತ್ತಾರೆ. ನಮ್ಮ ದೇಶದಲ್ಲಿ ಯಾರೂ ಬರುವುದಿಲ್ಲ. ಮಾನಸಿಕ ಸಮಸ್ಯೆ, ಖಿನ್ನತೆಯಂತಹ ಖಾಯಿಲೆ ಇದೆ ಎಂದು ದೇಶದಲ್ಲಿ ನೂರಕ್ಕೆ 50ರಷ್ಟು ಜನರಿಗೆ, ವಿದ್ಯಾವಂತರಿಗೂ ಗೊತ್ತಿಲ್ಲ. ಇದಕ್ಕೆ ಔಷಧಿ, ಚಿಕಿತ್ಸೆ ಇದೆ ಎಂದು ಗೊತ್ತಿಲ್ಲ ಎಂದರು.

ಖಿನ್ನತೆ ಬಂದಾಗ ಆಹಾರ ಸೇವನೆ ಹೆಚ್ಚು ಅಥವಾ ಕಡಿಮೆಯಾಗಬಹುದು. ಖಿನ್ನತೆಗೆ ಒಳಗಾಗಿರುವವರನ್ನು ಗುರುತಿಸಿ. ಅವರೊಂದಿಗೆ ಮಾತಾಡಿ. ಮನೆಯಲ್ಲಿರುವ ಎಲ್ಲರ ಜೊತೆ ಮಾತಾಡಿ. ವೃದ್ಧರ ಜೊತೆ ಮಾತಾಡಿ. ಮಗ, ಸೊಸೆ ನಮ್ಮನ್ನು ಮಾತಾಡಿಸುವುದಿಲ್ಲ ಎನ್ನುತ್ತಾರೆ ಎಂದರು.

ಮನಸಿಗೆ ಮುದ ತರುವ ವಿಷಯಗಳಲ್ಲಿ ಆಸಕ್ತರಾಗಿ. ಸಂಗೀತ ಕೇಳಿ. ದೇಶದಲ್ಲಿ ದೇವರ ಪ್ರಾರ್ಥನೆ ಎಂದರೆ, ದೇವಸ್ಥಾನಕ್ಕೆ ಹೋಗಬೇಕು, ನೈವೇದ್ಯ ಮಾಡಬೇಕು ಇತ್ಯಾದಿ ಹೆಸರಲ್ಲಿ ಸಂಕೀರ್ಣಗೊಳಿಸಿದ್ದೇವೆ. ಖರ್ಚಿನ ಸಂಗತಿ ಮಾಡಿದ್ದೇವೆ. ಪ್ರಪಂಚವೇ ಅವನದಾಗಿರುವಾಗ ಅವನಿಗೆ ಕೊಡಲು ನಾವೆಷ್ಟರವರು. ಮಂದಿರ, ಮಸೀದಿಗಳು ಮುಚ್ಚಿವೆ. ವ್ಯಕ್ತಿ ವೈಯಕ್ತಿವಾಗಿ ಪ್ರಾರ್ಥನೆ ಮಾಡಿದರೆ ಸಾಕು. ದೇವರು ನನಗೆ ಒಳ್ಳೆಯದು ಮಾಡುತ್ತಾನೆ, ಕೆಲಸ ಕೊಡಿಸುತ್ತಾನೆ ಎಂದುಕೊಳ್ಳಿ. ಅವನು ಕೊಡಿಸುತ್ತಾನೋ ಇಲ್ಲವೋ ಅದು ಬೇರೆ. ಹಾಗೆ ಅಂದುಕೊಂಡರೆ ಸಕಾರಾತ್ಮಕವಾಗಿ ಇರಬಹುದು ಎಂದರು.

ಖಿನ್ನತೆ ಬಂದರೆ ವೈದ್ಯರನ್ನು ಸಂಪರ್ಕಿಸಿ. ಶಮನಕಾರಿ ಔಷಧಿಗಳನ್ನು ವೈದ್ಯರು ನೀಡುತ್ತಾರೆ. ಮಾನಸಿಕ ರೋಗಕ್ಕೆ ಔಷಧ ತೆಗೆದುಕೊಂಡುವರು ಅಡಿಕ್ಟ್ ಆಗುತ್ತಾರೆ ಎಂಬ ತಪ್ಪುಕಲ್ಪನೆ ಇದೆ. ಇದು ಸರಿಯಲ್ಲ. ಬೆಳಗಾವಿ, ಕಲಬುರ್ಗಿ ಮೊದಲಾದ ಎಲ್ಲ ಜಿಲ್ಲೆಗಳಲ್ಲಿ ಈಗ ಮನೋವೈದ್ಯರಿದ್ದಾರೆ. ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲೂ ವ್ಯವಸ್ಥೆಯಾಗಿದೆ. ಸಾಮಾನ್ಯ ವೈದ್ಯರೂ ಕೂಡ ಚಿಕಿತ್ಸೆ ಕೊಡುತ್ತಾರೆ ಎಂದರು.

ಕೊರೊನಾ ಸೇರಿದಂತೆ ಇನ್ನಿತರ ರೋಗಗಳನ್ನು ಆಹಾರ ಕ್ರಮದಿಂದ ಸೋಲಿಸಬಹುದು. ಸಮಯಕ್ಕೆ ಸರಿಯಾಗಿ ಹಿತಮಿತವಾಗಿ ತಿನ್ನಿ. ಹಣ್ಣು, ತಕಾರಿಗಳನ್ನು ಹೆಚ್ಚು ತಿನ್ನಿ. ಇರುವುದರಲ್ಲೇ ಇದು ಆರೋಗ್ಯಕರ. ಕರಿದ ಪದಾರ್ಥ, ಸಿಹಿ, ಮಾಂಸಾಹಾರ ಪದಾರ್ಥಗಳನ್ನು ಕಡಿಮೆ ತಿನ್ನಿ. ಜಂಕ್ ಫುಡ್ ಗಳನ್ನು ಸಂಪೂರ್ಣವಾಗಿ ತ್ಯಜಿಸಿ. ಮಕ್ಕಳಿಗೆ ಹೊಟ್ಟೆ, ಕಿಡ್ನಿ, ಲಿವರ್ ಕೆಡುತ್ತದೆ ಎಂದು ಹೇಳಿ ಎಂದರು.

ಪ್ರಸನ್ನ ಕಾಯ, ಮನಸು ಬೇಕೆಂದರೆ 10:30ಕ್ಕೆ ಮಲಗಿ, 6 ಗಂಟೆಗೆ ಎದ್ದೇಳಿ. ಕೊರೊನಾ ಸ್ವಚ್ಛತೆಯ ಪಾಠ ಕಲಿಸಿದೆ. ಒಳ್ಳೆಯ ಗಾಳಿ, ಬೆಳಕು ಇದ್ದರೆ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಬರುವುದಿಲ್ಲ. ಸಮಯ, ಶಿಸ್ತು ಪಾಲಿಸಿ.  ಷರತ್ತಿಲ್ಲದ ಪ್ರೀತಿ ಮತ್ತು ವಿಶ್ವಾಸ ಸ್ನೇಹ ಇರಲಿ. ಒಳ್ಳೆ ಮಾತು, ನಡವಳಿಕೆ ರೂಢಿಸಿಕೊಳ್ಳಿ. ನಮ್ಮವರ ಕುರಿತು ಮೆಚ್ಚುಗೆ, ಶ್ಲಾಘನೆ ಬಹಿರಂಗವಾಗಿ ಮಾಡಿ. ಟೀಕೆ, ತಿರಸ್ಕಾರವನ್ನು ಬಹಿರಂಗವಾಗಿ ಮಾಡಬೇಡಿ.

ವೆಬಿನಾರ್ ನ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ, ನಮ್ಮಲ್ಲಿ ಎಲ್ಲೋ ಅವಿತುಕೊಂಡಿದ್ದ ಖಿನ್ನತೆಯನ್ನು ಡಾ.ಸಿ.ಆರ್.ಚಂದ್ರಶೇಖರ್ ಇಲ್ಲವಾಗಿಸಿದರು. ಇದಕ್ಕಾಗಿ ಅವರಿಗೆ ಎಲ್ಲರ ಪರವಾಗಿ ಧನ್ಯವಾದಗಳು ಎಂದರು.

ಕಳೆದ ಕೆಲವು ದಿನಗಳಿಂದ ನಾವು ಹುಲು ಮಾನವರು ಎಂಬುದು ಸಾಬೀತಾಗಿದೆ. ಬೆಂದಹುಣ್ಣು ಗಾಯವಾಗಿದೆ, ಕೀವು ತುಂಬಿದೆ. ನೋಡಿದರೆ ನೋವಾಗುತ್ತದೆ ಎಂಬ ಪರಿಸ್ಥಿತಿ ಇರುವಾಗ ಬರೆ ಹಾಕಿದಂತಾಗಿದೆ. ಕೊರೊನಾ ಪೂರ್ವದಲ್ಲಿ ಭಾರತ ಅನೇಕ ಕಷ್ಟಗಳನ್ನು ಎದುರಿಸಿತ್ತು. ಸಾಮಾಜಿಕ, ಧಾರ್ಮಿಕವಾಗಿ ಕೆಟ್ಟ ಕಾಲ. ಇದರಿಂದ ಹೊರಬರಲು ಪ್ರಯತ್ನ ನಡೆದಿತ್ತು. ಇಂತಹ ಸಮಯದಲ್ಲಿ ಕೊರೊನಾ ಬಂತು. ಆಶಾ ಭಾವನೆಯಿಂದ ಮಾತ್ರ ದುರಿತ ಕಾಲದಿಂದ ಹೊರಬರಬಹುದು ಎಂದರು.

ಕೆಲವು ಅಪ್ರಿಯ ಸತ್ಯಗಳನ್ನು ಧೀರತೆಯಿಂದ ಮುಖಾಮುಖಿಯಾಗಬೇಕು. ಡೊಮೆಸ್ಟಿಕ್ ವಯಲೆನ್ಸ್ ನಾಗರಿಕ ರೂಪದಲ್ಲಿ ಕಂಡುಬರುತ್ತೆ. ಆದರೆ, ಹೆಣ್ಣುಮಕ್ಕಳು, ಮಕ್ಕಳು ಅದನ್ನು ಅನುಭವಿಸುತ್ತಿದ್ದಾರೆ. ಮನೆಕೆಲಸದವರನ್ನು ಕೆಲಸದಿಂದ ತೆಗೆದರೆ ವೇತನ ಕೊಡಬೇಕು ಎಂದು ಕಾನೂನು ರೂಪಿಸುವುದು ಪರಿಹಾರವಲ್ಲ. ಸ್ವಯಂ ಕಾನೂನು ಅಗತ್ಯ. ಮನೆಕೆಲಸದವರಿಗೆ ವೇತನ ಕೊಡುವುದು ನನ್ನ ಕರ್ತವ್ಯ ಆಗಬೇಕು, ಔದಾರ್ಯವಲ್ಲ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅರಾಜಕತೆ ಎದುರಾಗುತ್ತದೆ. ಪ್ರಜ್ಞಾಪೂರ್ಕವಾಗಿ ನಾವು ಪಕ್ಕಕ್ಕೆ ತಳ್ಳಿರುವ ಸಮಸ್ಯೆಗಳು ಇನ್ನು ಕೆಲವೇ ದಿನಗಳಲ್ಲಿ ಕೊರೊನಾಗಿಂತ ಭೀಕರವಾಗಿ ಅಪ್ಪಳಿಸುತ್ತವೆ. ಅವುಗಳೆಡೆಗೆ ಪ್ರಜ್ಞಾಪೂರ್ವಕವಾಗಿ ತುಡಿಯದಿದ್ದರೆ ಮುಂದಿನ ಕಾಯಿಲೆಗಳು ಕೊರೊನಾಗಿಂತ ಭೀಕರವಾಗಿರುತ್ತವೆ ಎಂದು ಎಚ್ಚರಿಸಿದರು.

ಕೊರೊನಾ ಕಾಲದಲ್ಲಿ ತುಂಬ ಹೆಣ್ಣು ಮಕ್ಕಳು ಖುಷಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಎಲ್ಲೋ ಕೆಲವರು ಹೆಂಗಸರಿಗೆ ನೆರವಾಗಿರಬಹುದು. ಆದರೆ ಈ ಅವಧಿಯಲ್ಲಿ ಅವರಿಗೆ ಹೊರೆ ಹೆಚ್ಚಾಗಿದೆ. ಎಷ್ಟೋ ಜನ ಬಾಲಕಾರ್ಮಿಕರಾದರು, ಮುಂದೆ ಬಾಲ್ಯವಿವಾಹ ನಡೆಯುತ್ತದೆ. ಇವುಗಳನ್ನು ತಡೆಯಲು ಯೋಚನೆ ಮಾಡಬೇಕು ಎಂದರು.

ಸಾವು, ಭಯದ ಕುರಿತು ಚಂದ್ರಶೇಖರ್ ಹೇಳಿದರು. ನಾವು ಹೋಮ್ ಐಸೋಲೇಷನ್ ಕುರಿತು ಜಾಗೃತಿ ಮೂಡಿಸುವಲ್ಲಿ ಸೊತದ್ದು ಕಾಯಿಲೆ ಹೆಚ್ಚಿಸಲು ಕಾರಣವಾಯಿತು. ನಾನು ಕೂಡ ಕೊರೊನಾ ಪೀಡಿತೆ. ಸ್ಯಾಚ್ಯುರೇಷನ್ 86, 87 ಇತ್ತು. ಯಾರಿಗೂ ಹೇಳಲಿಲ್ಲ. ಅನಗತ್ಯವಾದ ಭಯ ಸೃಷ್ಟಿಸಿಕೊಳ್ಳದೆ, ಅದರಿಂದ ಹೊರಬರಬೇಕು. ನಾನು ಹೋಮ್ ಐಸೋಲೇಷನ್ ನಲ್ಲಿದ್ದೆ. ನನ್ನ ಮನೆಯವರು ನೋಡಿಕೊಂಡದ್ದು ತುಂಬಾ ಮಹತ್ವದ್ದು. ಎಲ್ಲ ಕಾಲದಲ್ಲೂ ಪ್ರೀತಿಯನ್ನು ಉಳಿಸಿಕೊಳ್ಳಬೇಕು. ಬದುಕಿನೊಳಗ ಬಾಳೋದು ಬಾಳ ಕಷ್ಟ ಎಂಬ ಬೇಂದ್ರೆಯವರ ಮಾತಿನಂತೆ ಇರಬೇಕು ಎಂದರು.

ಕಳೆದ 2, 3 ದಶಕಗಳಿಂದ ಬೆಳೆಯುತ್ತಿರುವ ಅಸಹಿಷ್ಣುತೆಯಿಂದ ಹೊರಬರಬೇಕು. ಕೊರೊನಾ ಎನ್ನುವುದು ಮನುಷ್ಯನ ಒಳಗಿನ ಮನೋವಿಕಾರದ ದೈಹಿಕ ರೂಪ ಎನಿಸುತ್ತದೆ. ದೀರ್ಘವಾದ ಕಾಯಿಲೆ ನಮ್ಮನ್ನು ಅಪ್ಪಳಿಸಿದೆ ಎಂದರೆ, ಇದೊಂದು ಸೈಕೋಸೊಮ್ಯಾಟಿಕ್ ರೀತಿ. ಅನ್ಯ ಜಾತಿ, ಧರ್ಮದವರನ್ನು ದ್ವೇಷಿಸಿದ ಪರಿಣಾಮ ಎನಿಸುತ್ತದೆ. ನಾವೆಲ್ಲ ಒಂದೇ ಎಂದುಕೊಂಡಿದ್ದ, ಸರ್ವಜನಾಂಗದ ಶಾಂತಿಯ ತೋಟ ಎಂಬ ಆದರ್ಶದ ಕಡೆಗೆ ಮರಳಬೇಕು ಎಂದರು.

ಮನುಷ್ಯಪ್ರೀತಿ ಸುಮ್ಮನೇ ಹುಟ್ಟಿಬಿಡುವುದಿಲ್ಲ. ಎಲ್ಲಿಯವರೆಗೆ ನಮ್ಮ ಮೌಲ್ಯವ್ಯವಸ್ಥೆ, ಪ್ರಭುತ್ವ, ನಾಯಕರ ನಿರ್ಣಯಗಳು ಬದಲಾಗುವವರೆಗೆ ಅನೇಕ ಬಗೆಯ ರೋಗಗಳಿಂದ ನಾವು ನರಳುತ್ತೇವೆ. ಕೊರೊನಾ ಮಾತ್ರವಲ್ಲ ಇನ್ನಿತರ ರೋಗಗಳನ್ನು ಸೋಲಿಸಬೇಕು. ಅಂತಹ ದಾರಿಯ ಕಡೆಗೆ ದಾರಿಯನ್ನು ತೋರಿಸಿದ ಸಿ.ಆರ್.ಚಂದ್ರಶೇಖರ್ ಅವರಿಗೆ, ಮಾನವ ಬಂಧುತ್ವ ವೇದಿಕೆಯವರಿಗೆ, ಲೀಲಾ ಸಂಪಿಗೆಯವರಿಗೆ, ಅನಂತ ನಾಯಕ್ ಅವರಿಗೆ, ಸತೀಶ್ ಜಾರಕಿಹೊಳಿಯವರಿಗೆ ಧನ್ಯವಾದಗಳು ಎಂದರು.

ಕಾರ್ಯಕ್ರಮವನ್ನು ನಿರ್ವಹಿಸಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಮಹಾಲಿಂಗಪ್ಪ ಆಲಬಾಳ, ಜನಜಾಗೃತಿಯ ಭಾಗವಾಗಿ ಆರೋಗ್ಯ ಬಂಧುತ್ವ ವೆಬಿನಾರ್ ಆಯೋಜಿಸಿದೆ ಎಂದರು. ಜೊತೆಗೆ, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಎಲ್ಲರನ್ನು ಸ್ವಾಗತಿಸಿದರು. ಪ್ರಶ್ನೋತ್ತರದಲ್ಲಿ ಡಾ. ಗಿರೀಶ್ ಮೂಡ್ ಮತ್ತು ಡಾ.ಸಿ.ಆರ್.ಚಂದ್ರಶೇಖರ್ ಉತ್ತರಿಸಿದರು. 

ಕಾರ್ಯಕ್ರಮದ ಆರಂಭದಲ್ಲಿ ಈ ನೆಲ ಈ ಜಲ ಈ ಮಣ್ಣು ನಮ್ಮದು ರಕ್ಷಿಸುವ ಹೊಣೆಗಾರಿಕೆ ನೀವೇ ಹೇಳಿ ಯಾರದು ಮತ್ತು ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕಟ್ಟೇಕಟ್ಟೇ ಕಟ್ಟುತ್ತೇವ ಗೀತೆಗಳನ್ನು ಫಕೀರ್ ಹುಲಿಕೊಟ್ಟಲ್ ಹಾಡಿದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು