ನಮ್ಮ ದೇಶದಲ್ಲಿ ಪ.ಜಾ, ಪ.ಪಂ ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರಿ ಇಲಾಖೆಗಳಲ್ಲಿ ಮತ್ತು ಸಾರ್ವಜನಿಕ ವಲಯಗಳಲ್ಲಿನ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದು ಸಂವಿಧಾನದತ್ತ ಕ್ರಮವಾಗಿದೆ. ಆದರೆ ಒಟ್ಟು ಉದ್ಯೋಗಗಳಲ್ಲಿ ಮೀಸಲಾತಿಗೆ ಲಭ್ಯವಿರುವ ಉದ್ಯೋಗಗಳ ಪ್ರಮಾಣ ಅತ್ಯಂತ ಕಡಿಮೆ. ಕೆಳಗಿನ ಚಿತ್ರದಲ್ಲಿ ಭಾರತೀಯ ಆರ್ಥಿಕತೆಯಲ್ಲಿ ವಿವಿಧ ವಲಯಗಳಲ್ಲಿ ಹಂಚಿಕೆಯಾಗಿರುವ ಒಟ್ಟು ಉದ್ಯೋಗಗಳ ಪ್ರಮಾಣವನ್ನು ನೀಡಲಾಗಿದೆ.
ಈ ಕೆಳಗಿನ ನಕ್ಷೆಯಲ್ಲಿ ವಲಯವಾರು ಉದ್ಯೋಗಗಳ ಪ್ರಮಾಣವನ್ನು ತೋರಿಸಲಾಗಿದೆ.

ತಯಾರಿಕೆ – 11%
ನಿರ್ಮಾಣ – 11%
ವ್ಯಾಪಾರ – 9%
ಸಾರಿಗೆ – 4%
ಆತಿಥ್ಯ ಮತ್ತು ರಿಯಲ್ ಎಸ್ಟೇಟ್ – 3%
ಶಿಕ್ಷಣ-2%
ಸರ್ಕಾರ – 2%
ಕೃಷಿ – 53%
ಈ ಚಿತ್ರದಲ್ಲಿರುವ ವಿವರಗಳ ಪ್ರಕಾರ 2009-10ರಲ್ಲಿದ್ದ ಆರ್ಥಿಕತೆಯ ಒಟ್ಟು ಉದ್ಯೋಗಗಳಲ್ಲಿ, ಅತ್ಯಧಿಕ ಉದ್ಯೋಗ ನೀಡಿರುವ ಕೃಷಿಯಲ್ಲಿನ ಉದ್ಯೋಗಳ ಪ್ರಮಾಣ ಶೇ.53. ಇದೇ ರೀತಿ ತಯಾರಿಕೆ ಮತ್ತು ನಿರ್ಮಾಣ ವಲಯಗಳಲ್ಲಿ ಉದ್ಯೋಗಗಳ ಪ್ರಮಾಣ ತಲಾ ಶೇ.11. ಸೇವಾ ಕ್ಷೇತ್ರಗಳಾದ ವ್ಯಾಪಾರ, ಸಾರಿಗೆ, ಆತಿಥ್ಯ, ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ವಲಯಗಳಲ್ಲಿನ ಉದ್ಯೋಗಗಳ ಪ್ರಮಾಣ ಅನುಕ್ರಮವಾಗಿ ಶೇ.9, ಶೇ.4, ಶೇ.3. ಮತ್ತು ಶೇ.2 ಸರ್ಕಾರಿ ವಲಯದ ಉದ್ಯೋಗಗಳ ಪ್ರಮಾಣ ಶೇ.2 ಹಾಗೂ ಇತರ ಶೇ.5. ಈ ವಿವರದ ಪ್ರಕಾರ ದೇಶದ ಒಟ್ಟು ಉದ್ಯೋಗಗಳಲ್ಲಿ ಸರ್ಕಾರಿ – ಸಾರ್ವಜನಿಕ ವಲಯಗಳ ಪಾಲು ಕೇವಲ ಶೇ.2. ಸರ್ವೋಚ್ಛ ನ್ಯಾಯಾಲಯವು ನಿಗದಿಪಡಿಸಿರುವ ಮೀಸಲಾತಿ ಮಿತಿ ಶೇ.50ರ ಪ್ರಕಾರ ಸರ್ಕಾರಿ-ಸಾರ್ವಜನಿಕ ವಲಯಗಳಲ್ಲಿ ಲಭ್ಯವಿರುವ ಶೇ.2ರಷ್ಟು ಉದ್ಯೋಗಗಳಲ್ಲಿ ಪ.ಜಾ., ಪ.ಪಂ. ಮತ್ತು ಹಿಂದುಳಿದ ವರ್ಗಗಳ ಪಾಲು ಶೇ.1 ಮಾತ್ರ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅನೇಕ ಕಾರಣಗಳಿಂದಾಗಿ ಮೀಸಲಾತಿಗೆ ಲಭ್ಯವಿರುವ ಅತ್ಯಂತ ಕನಿಷ್ಠ ಪ್ರಮಾಣದ ಉದ್ಯೋಗಗಳಲ್ಲಿ ತಮ್ಮ ಪಾಲನ್ನು ಪಡೆದುಕೊಳ್ಳುವುದೂ ಸಹ ಪ.ಜಾ. ಮತ್ತು ಪ.ಪಂ. ಸಮುದಾಯಗಳಿಗೆ ಸಮಸ್ಯೆಯಾಗಿದೆ.
ಏಕೆಂದರೆ ಸರ್ಕಾರಿ-ಸಾರ್ವಜನಿಕ ವಲಯಗಳಲ್ಲಿ ಭರ್ತಿ ಮಾಡದೆ ಉಳಿದಿರುವ ಖಾಲಿ ಹುದ್ದೆಗಳ ಪ್ರಮಾಣ ಅತ್ಯಧಿಕವಾಗಿದೆ. ಇಂದು ಖಾಯಂ ಆಗಿ ಕಾರ್ಮಿಕರನ್ನು ನೌಕರರನ್ನು ನೇಮಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಸರ್ಕಾರಗಳು ಗುತ್ತಿಗೆ-ಹೊರಗುತ್ತಿಗೆ ಪದ್ಧತಿಯಲ್ಲಿ ನೇಮಕ ಮಾಡಿಕೊಳ್ಳುತ್ತಿವೆ. ಇಲ್ಲಿ ಮೀಸಲಾತಿಯನ್ನು ಪಾಲಿಸುತ್ತಿಲ್ಲ.
ಸರ್ಕಾರಿ ವ್ಯಾಪ್ತಿಯಲ್ಲಿದ್ದು ಮೀಸಲಾತಿ ಅನ್ವಯವಾಗದಿರುವ ಕ್ಷೇತ್ರಗಳೆಂದರೆ: ಸೈನ್ಯ, ರಕ್ಷಣಾ ತಂತ್ರಜ್ಞಾನ, ಸಂಶೋಧನೆ, ಅಣುಶಕ್ತಿ, ಬಾಹ್ಯಾಕಾಶ, ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಪ್ರೊಫೆಸರ್ ಹುದ್ದೆಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೈದ್ಯರ ಹುದ್ದೆಗಳು, ಇಂಜಿನಿಯರಿಂಗ್ ವಿಜ್ಞಾನ, ತಂತ್ರಜ್ಞಾನ, ಪೈಲೆಟ್ ಇತ್ಯಾದಿ ಹುದ್ದೆಗಳು.
ಸರ್ಕಾರಿ ವಲಯದಲ್ಲಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಮತ್ತು ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಳಿಗೆ ಮೀಸಲಾತಿ ಅನ್ವಯಸುವುದಿಲ್ಲ. ರಾಷ್ಟ್ರ ಮಟ್ಟ ಮತ್ತು ನಿಗಮಗಳ ನಾಮ ನಿರ್ದೇಶಿತ ಸ್ಥಾನಗಳ ನೇಮಕಾತಿ ವಿಷಯದಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ. ರಾಜ್ಯಸಭೆ, ವಿಧಾನಪರಿಷತ್ತು ಮತ್ತು ಮಂತ್ರಿಮಂಡಲದಲ್ಲಿ ಮೀಸಲಾತಿ ಇಲ್ಲ. ಸವೋಚ್ಛ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಾತಿಗೆ ಮೀಸಲಾತಿ ಅನ್ವಯಿಸುವುದಿಲ್ಲ. ಹೀಗೆ ಅನೇಕ ನಿರ್ಣಾಯಕ ಸ್ಥಾನಗಳಿಗೆ ಮೀಸಲಾತಿ ಇಲ್ಲದಿದ್ದರೂ ಮೀಸಲಾತಿ ವಿರೋಧಿ ಧ್ವನಿಯನ್ನು ಕೇಳುತ್ತಿದ್ದೇವೆ. ಈ ವಸ್ತುಸ್ಥಿತಿಯನ್ನು ಎಲ್ಲರೂ ಗಂಭೀರವಾಗಿ ಗಮನಿಸಬೇಕಾಗಿದೆ.