ಭಾರತದ ಸಂವಿಧಾನದಲ್ಲಿ ರಾಜಕೀಯ, ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ಒದಗಿಸಲಾಗಿದೆ. ಅನುಚ್ಛೇದ 15ರಲ್ಲಿ ಶಿಕ್ಷಣಕ್ಕೆ ಮತ್ತು ಅನುಚ್ಛೇದ 16ರಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಪ.ಜಾ., ಪ.ಪಂ., ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಸರ್ಕಾರ ಒದಗಿಸಬಹುದೆಂದು ಸ್ಪಷ್ಟಪಡಿಸಿದೆ. ಇದನ್ನು ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ಯಾವ ರೀತಿ ಜಾರಿ ಮಾಡಿದೆ ಎಂಬುದನ್ನು ತಿಳಿಯೋಣ.
ಭಾರತ ಸರ್ಕಾರ–ಮೀಸಲಾತಿ
1. ಕೇಂದ್ರ ಸರ್ಕಾರವು 21-09-1947ರಲ್ಲಿ ಒಂದು ಅಧಿಸೂಚನೆ ಹೊರಡಿಸಿ ಸರ್ಕಾರಿ ನೇಮಕಾತಿಯ ಮುಕ್ತ ಸ್ಪರ್ಧೆಯಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಶೇ.12.5ರಷ್ಟು ಮೀಸಲಾತಿ ನೀಡುವಂತೆ ಸೂಚಿಸಿತು. ಮುಕ್ತ ಸ್ಪರ್ಧೆ ಅಲ್ಲದೆ ಇತರೆ ನೇಮಕಾತಿ ಆಗಿದ್ದಲ್ಲಿ ಈ ಪ್ರಮಾಣ ಶೇ.16.66ರಷ್ಟು ಇರಬೇಕೆಂದು ಸೂಚಿಸಿತು.
2. 13-09-1950ರ ನಿರ್ಣಯದಲ್ಲಿ ಪ.ಪಂ.ಕ್ಕೆ ಶೇ.5ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತು.ಈ ಮೀಸಲಾತಿ ಈಗಾಗಲೇ ಪ.ಜಾ.ಗೆ ನಿಗದಿಪಡಿಸಿರುವ ಮೀಸಲಾತಿಯನ್ನು ಹೊರತುಪಡಿಸಿರುತ್ತದೆ.
3. 25-03-1970ರಂದು 1961ರ ಜನಗಣತಿಯ ಜನಸಂಖ್ಯೆಗೆ ಅನುಗುಣವಾಗಿ ಪ.ಜಾ.ಯ ಮೀಸಲಾತಿ ಪ್ರಮಾಣವನ್ನು ಶೇ.12.5 ರಿಂದ ಶೇ.15ಕ್ಕೆ ಮತ್ತು ಪ.ಪಂ.ದ ಮೀಸಲಾತಿಯನ್ನು ಶೇ.5 ರಿಂದ ಶೇ.7.5ಕ್ಕೆ ಪರಿಷ್ಕರಿಸಲಾಯಿತು.
4. 13–08-1990ರ ಆದೇಶದಂತೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನೀಡಬೇಕೆಂದು ತಿಳಿಯಪಡಿಸಿದೆ.
5. 2018ರಲ್ಲಿ ಸಂವಿಧಾನಕ್ಕೆ 103ನೇ ತಿದ್ದುಪಡಿ ತರುವುದರ ಮುಖಾಂತರ ಅನುಚ್ಛೇದ 15(6) ಮತ್ತು ಅನುಚ್ಛೇದ 16(6) ಸೇರಿಸಿ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ. ಈಗಾಗಲೇ ಮೀಸಲಾತಿಯ ಸವಲತ್ತನ್ನು ಪಡೆಯುತ್ತಿರುವ ಯಾವ ಜಾತಿಯೂ ಈ ಮೀಸಲಾತಿಗೆ ಅರ್ಹವಲ್ಲವೆಂದು ತಿಳಿಯಪಡಿಸಿದೆ.
ಕೇಂದ್ರ ಸರ್ಕಾರದ ಪ್ರವರ್ಗವಾರು ಮೀಸಲಾತಿ ವಿವರದ ನಕ್ಷೆ

ಪರಿಶಿಷ್ಟ ಪಂಗಡ – 7.5%
ಪರಿಶಿಷ್ಟ ಜಾತಿ – 15%
ಹಿಂದುಳಿದ ವರ್ಗ – 27%
ಸಾಮಾನ್ಯ ವರ್ಗದ ಬಡವರು – 10%
ಸಾಮಾನ್ಯ ವರ್ಗ – 40.5%
ಕರ್ನಾಟಕ ರಾಜ್ಯ ಸರ್ಕಾರ – ಮೀಸಲಾತಿ
1. ರಾಷ್ಟ್ರಪತಿಗಳ 10-08-1950ರ ಆದೇಶದ ಮೇರೆಗೆ ಅಂದಿನ ಮೈಸೂರು ರಾಜ್ಯದಲ್ಲಿ ಪ.ಜಾ.ಗಳಿಗೆ ಶೇ.18ರಷ್ಟು ಮೀಸಲಾತಿಯನ್ನು ಒದಗಿಸಲಾಯಿತು.
2. ರಾಷ್ಟ್ರಪತಿಗಳ 29-10-1956ರ ಆದೇಶದಂತೆ ಪ.ಜಾ.ಗೆ ಶೇ.15 ಮತ್ತು ಪ.ಪಂ.ಕ್ಕೆ ಶೇ. 3ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ನೀಡಲಾಯಿತು.
3. ರಾಜ್ಯ ಸರ್ಕಾರದ 04-02-1958ರ ಆದೇಶದಂತೆ ಇತರೆ ಹಿಂದುಳಿದ ವರ್ಗಗಳಿಗೆ ಶೇ.57ರಷ್ಟು ಮೀಸಲಾತಿಯನ್ನು ನೀಡಲಾಯಿತು. ಮುಂದೆ ಸರ್ವೋಚ್ಛ ನ್ಯಾಯಾಲಯವು ಬಾಲಾಜಿ ಪ್ರಕರಣದಲ್ಲಿ ಒಟ್ಟು ಮೀಸಲಾತಿಯು ಶೇ.50ನ್ನು ಮೀರಬಾರದು ಎಂಬ ನಿಬಂಧನೆ ಮಾಡಿದ ಪರಿಣಾಮವಾಗಿ ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಪ್ರಮಾಣವನ್ನು ಶೇ.57ರಿಂದ ಶೇ. 32ಕ್ಕೆ ಇಳಿಸಲಾಗಿದೆ. ಇಂದು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದವರು ಶೇ.32 ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ.
4. ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ 103ನೇ ತಿದ್ದುಪಡಿಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ. ಇದರಂತೆ ಸಾಮಾನ್ಯ ವರ್ಗದಲ್ಲಿನ ಆರ್ಥಿಕವಾಗಿ ಹಿಂದುಳಿದವರು ಶೇ.10ರಷ್ಟು ಮೀಸಲಾತಿಯನ್ನು ಅನುಭವಿಸಲಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಜಾತಿವಾರು ಮೀಸಲಾತಿ ಪಟ್ಟಿ ಬೇರೆ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ ಸಂಸ್ಥೆಗಳ ಮೀಸಲಾತಿ ಜಾತಿ ಪಟ್ಟಿಯೇ ಬೇರೆ.
ರಾಜ ಸರ್ಕಾರದ ಪ್ರವರ್ಗವಾರು ಮೀಸಲಾತಿ ವಿವರದ ನಕ್ಷೆ

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗ – 10%
ಹಿಂದುಳಿದ ವರ್ಗ – 32%
ಪರಿಶಿಷ್ಟ ಜಾತಿ – 15%
ಪರಿಶಿಷ್ಟ ಪಂಗಡ – 3%
ಸಾಮಾನ್ಯ ವರ್ಗ – 40%
ಪ.ಜಾ., ಪ.ಪಂ. ಮತ್ತು ಅತಿ ಹಿಂದುಳಿದ ವರ್ಗಗಳಿಗೆ 1950ರ ನಂತರ ಹಂತಹಂತವಾಗಿ ಹೆಚ್ಚು ಹೆಚ್ಚು ಜಾತಿಗಳನ್ನು ಸೇರಿಸಲಾಯಿತು. 1956ರ ರಾಜ್ಯಗಳ ಮರುವಿಂಗಡಣೆಯ ಪರಿಣಾಮವಾಗಿ ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಕೂರ್ಗ್ ರಾಜ್ಯದ ಜಿಲ್ಲೆಗಳು ಸೇರ್ಪಡೆಯಾದವು. ತತ್ಪರಿಣಾಮವಾಗಿ ಹೊಸ ಜಿಲ್ಲೆಗಳಲ್ಲಿ ಇದ್ದ ಜಾತಿಗಳನ್ನು ಹಳೆಯ ಜಾತಿಗಳ ಪಟ್ಟಿಗೆ ಸೇರಿಸಲಾಯಿತು. ಕೆಲವು ಜಾತಿಗಳು ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದ್ದವು. 1956ರ The area restriction removal ಆದೇಶದಿಂದ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದ್ದ ಕೆಲವು ಜಾತಿಗಳನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದ ಪರಿಣಾಮವಾಗಿ ಅನೇಕ ಜಾತಿಗಳನ್ನು ಹಳೆಯ ಪಟ್ಟಿಗೆ ಸೇರಿಸಲಾಯಿತು. ಸಮಾನಾಂತರ ಹೆಸರಿನಿಂದ ಕರೆಯಲ್ಪಡುವ ಕೆಲವು ಜಾತಿಗಳನ್ನು ಹಳೆಯ ಜಾತಿಗಳ ಪಟ್ಟಿಗೆ ಸೇರಿಸಲಾಯಿತು. ಕೆಲವು ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಪ.ಜಾ. ಮತ್ತು ಪ.ಪಂ.ದ ಪಟ್ಟಿಗೆ ಸೇರಿಸಲಾಗಿದೆ.
ಅನುಬಂಧ II ರಲ್ಲಿ ಪರಿಶಿಷ್ಟ ಜಾತಿಗಳ, ಅನುಬಂಧ III ರಲ್ಲಿ ಪರಿಶಿಷ್ಟ ಪಂಗಡಗಳ, ಅನುಬಂಧ IV ರಲ್ಲಿ ಹಿಂದುಳಿದ ವರ್ಗಗಳ ಮತ್ತು ಅನುಬಂಧ V ರಲ್ಲಿ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದ ಜಾತಿಗಳ ಹೆಸರುಗಳನ್ನು ನೀಡಲಾಗಿದೆ.
ಪ.ಜಾ, ಪ.ಪಂ. ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯನ್ನು ‘ಲಂಬರೂಪಿ ಮೀಸಲಾತಿ’ (Vertical) ಎಂದು ಕರೆಯಲಾಗುತ್ತದೆ. ಈ ಸಮುದಾಯಗಳಿಗೆ ನೀಡಿದ ಮೀಸಲಾತಿಯಲ್ಲಿ ವಿಕಲಚೇತನರಿಗೆ, ಮಾಜಿ ಸೈನಿಕರಿಗೆ, ಗ್ರಾಮೀಣ ಅಭ್ಯರ್ಥಿಗಳಿಗೆ, ಮಹಿಳೆಯರಿಗೆ ಮುಂತಾದವರಿಗೆ ನೀಡುವ ಮೀಸಲಾತಿಯನ್ನು ‘ಸಮತಲ ಮೀಸಲಾತಿ’ (Horizontal) ಎಂದು ಕರೆಯಲಾಗುತ್ತದೆ. ಸರ್ಕಾರದ ಮೀಸಲಾತಿ ನೀತಿಯಿಂದಾಗಿ ದೇಶದ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಧರ್ಮ, ಜಾತಿ, ಪಂಗಡಗಳು ಮತ್ತು ಪ್ರಾಂತ್ಯಗಳು ಇಂದು ಒಂದಲ್ಲ ಒಂದು ರೀತಿಯಾಗಿ ಮೀಸಲಾತಿ ಸವಲತ್ತು ಪಡೆಯುತ್ತಿವೆ. ಇಂದು ಮೀಸಲಾತಿ ಯಾವ ಯಾವ ಸಮುದಾಯಗಳಿಗೆ ದೊರೆಯುತ್ತಿದೆ ಎಂಬ ಪ್ರಶ್ನೆಗಿಂತ ಯಾವ ಸಮುದಾಯಗಳಿಗೆ ದೊರೆಯುತ್ತಿಲ್ಲ ಎಂಬ ಪ್ರಶ್ನೆಯು ಹೆಚ್ಚು ಸಮಂಜಸವಾಗಿದೆ. ಇಷ್ಟಾದರೂ ಪ. ಜಾ. ಮತ್ತು ಪ.ಪಂ.ಗಳಿಗೆ ನೀಡುತ್ತಿರುವ ಮೀಸಲಾತಿ ಬಗ್ಗೆ ಸಮಾಜದ ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾಗುತ್ತಲೇ ಇದೆ. ಮೀಸಲಾತಿ ವಿರೋಧಿಸುವವರು ಈ ಸತ್ಯ ಸಂಗತಿಯನ್ನು ತಿಳಿಯಬೇಕು.