October 1, 2023 7:27 am

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಸ್ವಾತಂತ್ರ್ಯಾನಂತರ ದೇಶದಲ್ಲಿ ಪ.ಜಾ, ಪ.ಪಂ ಮತ್ತು ಹಿಂದುಳಿದ ವರ್ಗಗಳು ಈ ವಿವಿಧ ರೀತಿಯಲ್ಲಿ ಪ್ರಗತಿಯನ್ನು ಸಾಧಿಸಿಕೊಂಡಿವೆ. ಈ ಸಾಧನೆಯಲ್ಲಿ ಸಂವಿಧಾನದಲ್ಲಿನ ಮೀಸಲಾತಿಯ ಪಾತ್ರ ಪ್ರಮುಖವಾದದ್ದು. ಸ್ವಾತಂತ್ರ್ಯಾ ನಂತರ ಈ ವರ್ಗಗಳ ಪ್ರಗತಿ ಏನೇನೂ ಆಗಿಲ್ಲ ಎಂದರೆ ತಪ್ಪಾಗುತ್ತದೆ. ಇವರ ಪ್ರಗತಿಯನ್ನು ಮೂರು ನೆಲೆಗಳಲ್ಲಿ ಕಾಣಬಹುದು. 1) ರಾಜಕೀಯ ಪ್ರಾತಿನಿಧ್ಯ 2) ಶೈಕ್ಷಣಿಕ ಪ್ರಗತಿ ಮತ್ತು 3) ಸರ್ಕಾರದ ಉದ್ಯೋಗಗಳಲ್ಲಿ ಪ್ರಾತಿನಿಧ್ಯ.

1. ರಾಜಕೀಯ ಪ್ರಾತಿನಿಧ್ಯ

ಸಂವಿಧಾನದ ಅನುಚ್ಛೇದ 330 ಮತ್ತು 332ರ ಪ್ರಕಾರ ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಪ.ಜಾ ಮತ್ತು ಪ.ಪಂ.ಗಳಿಗೆ ಸ್ಥಾನಗಳನ್ನು ಮೀಸಲಿಡಲಾಗಿದೆ. ಇದನ್ನು ರಾಜಕೀಯ ಪ್ರಾತಿನಿಧ್ಯ ಎಂದು ಕರೆಯಬಹುದು. ಇಂದು ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪ.ಜಾ.ಗೆ 5 ಸ್ಥಾನಗಳು ಮತ್ತು ಪ.ಪಂ.ಕ್ಕೆ 2ಸ್ಥಾನಗಳನ್ನು ಮೀಸಲಿಡಲಾಗಿತ್ತು. ಇದೇ ರೀತಿ ಕರ್ನಾಟಕ ರಾಜ್ಯದ 2018ರ ವಿಧಾನಸಭಾ ಚುನಾವಣೆಯಲ್ಲಿ ಪ.ಜಾ 37 ಮತ್ತು ಪ.ಪಂ ಗಳಿಗೆ 17 ಸ್ಥಾನಗಳನ್ನು ಮೀಸಲಿಡಲಾಗಿತ್ತು. ಈ ಸಮುದಾಯಗಳು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿರುವುದು ಗಮನಾರ್ಹ ಸಾಧನೆ. ಈ ಮೀಸಲಾತಿಯು ಪ.ಜಾ ಮತ್ತು ಪ.ಪಂದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆಯಷ್ಟೇ ಅಲ್ಲದೆ ಸ್ವಾಭಿಮಾನವನ್ನು ಹೆಚ್ಚಿಸಿದೆ.ಆದರೆ ಹಿಂದುಳಿದ ವರ್ಗದವರಿಗೆ ಲೋಕಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮೀಸಲಾತಿ ನೀಡಿಲ್ಲ ಎಂಬುದನ್ನು ಗಮನಿಸಬೇಕು.

ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಪ.ಜಾ, ಪ.ಪಂ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯದ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಇದೇ ರೀತಿಯಲ್ಲಿ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್‌ ಸಂಸ್ಥೆಗಳಲ್ಲೂ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಇದರ ಪರಿಣಾಮವಾಗಿ ಈ ವರ್ಗದ ಸಾವಿರಾರು ಜನ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಪಡೆದಿದ್ದಾರೆ. ಇದು ಕೂಡ ಮೀಸಲಾತಿಯ ಮಹತ್ತರ ಸಾಧನೆ.

2. ಶೈಕ್ಷಣಿಕ ಪ್ರಗತಿ

ಸರ್ಕಾರದ ಕಾರ್ಯಕ್ರಮಗಳಾದ ವಿದ್ಯಾರ್ಥಿ ನಿಲಯಗಳು, ವಿದ್ಯಾರ್ಥಿ ವೇತನ, ವಸತಿ ಶಾಲೆಗಳು, ಪಠ್ಯ ಪುಸ್ತಕಗಳು, ಸಮವಸ್ತ್ರಗಳು, ಬಿಸಿ ಊಟ ಇತ್ಯಾದಿಗಳು ಪ.ಜಾ, ಪ.ಪಂ ಮತ್ತು ಹಿಂದುಳಿದ ವರ್ಗದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಸಮುದಾಯಗಳ ವಿದ್ಯಾರ್ಥಿಗಳು ಮಹತ್ವದ ಪ್ರಗತಿ ಸಾಧಿಸಿಕೊಂಡು ಮುಂದುವರಿಯುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗ ಈ ಸಮುದಾಯಗಳ ಸಾಕ್ಷರತೆ ಪ್ರಮಾಣ ಶೇ. 20ಕ್ಕಿಂತ ಕಡಿಮೆ ಇದ್ದಿದ್ದು ಇಂದು ಸರಾಸರಿ ಶೇ. 70ಕ್ಕೆ ಹೆಚ್ಚಿದೆ. ಪದವಿ, ಸ್ನಾತಕೋತ್ತರ, ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಇತ್ಯಾದಿಯಾಗಿ ಉನ್ನತ ಶಿಕ್ಷಣದಲ್ಲಿ ಗಣನೀಯ ಪ್ರಗತಿಯನ್ನು ಈ ಸಮುದಾಯದ ವಿದ್ಯಾರ್ಥಿಗಳು ಸಾಧಿಸಿದ್ದಾರೆ.

3. ಸರ್ಕಾರಿ ಉದ್ಯೋಗದಲ್ಲಿ ಸಾಧನೆ

ರಾಜ್ಯದ ಗ್ರೂಪ್ ಎ, ಬಿ, ಸಿ ಮತ್ತು ಡಿ ಶ್ರೇಣಿಯ ಹುದ್ದೆಗಳಲ್ಲಿ ಈ ಸಮುದಾಯಗಳು, ಪ್ರಾತಿನಿಧ್ಯವನ್ನು ಪಡೆದುಕೊಂಡಿವೆ. ಪ.ಜಾ ಮತ್ತು ಪ.ಪಂಗಳು ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಲ್ಲಿ ಅವರಿಗೆ ಮೀಸಲಿಟ್ಟ ಸ್ಥಾನಗಳಿಗಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆದುಕೊಂಡಿವೆ. ಆದರೆ ಗ್ರೂಪ್ ‘ಎ’ ಮತ್ತು ‘ಬಿ’ ಶ್ರೇಣಿಯ ಹುದ್ದೆಗಳಲ್ಲಿ ಅವರು ಅಗತ್ಯ ಪ್ರಮಾಣ (ಕೋಟಾ) ತಲುಪಿಲ್ಲ. ಆದರೆ ಗಣನೀಯ ಪ್ರಮಾಣದ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದಾರೆ.

ಮೀಸಲಾತಿಯ ಜೊತೆಗೆ ಇತರೆ ಕಾನೂನುಗಳು ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಪರಿಣಾಮವಾಗಿ ಪ.ಜಾ. ಮತ್ತು ಪ.ಪಂ. ಮತ್ತು ಹಿಂದುಳಿದ ವರ್ಗದ ಜನರ ಸ್ಥಿತಿಗತಿಗಳಲ್ಲಿ ಅನೇಕ ಸುಧಾರಣೆಗಳು ಹಾಗೂ ಅಭಿವೃದ್ಧಿಯನ್ನು ಕಾಣುತ್ತೇವೆ. ಭಾರತ ದೇಶದ ರಾಷ್ಟ್ರಪತಿ, ಉಪ ಪ್ರಧಾನಿ, ಕೇಂದ್ರ ಸರ್ಕಾರದ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು, ಶಾಸಕರುಗಳಾಗಿ ಅಲ್ಲದೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯವಾಗಿ ಪ್ರವೇಶ ಮಾಡಿ ಈ ಸಮುದಾಯಗಳವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳಾಗಿ ನ್ಯಾಯಾಂಗವನ್ನು ಪ್ರವೇಶಿಸಿದ್ದಾರೆ. ಕುಲಾಧಿಪತಿಗಳು, ಉಪಕುಲಪತಿಗಳು, ಕುಲಸಚಿವರು, ಪ್ರಾಧ್ಯಾಪಕರು, ಅಧ್ಯಾಪಕರು ಹಾಗೂ ಶಿಕ್ಷಕರುಗಳಾಗಿ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ವಿಜ್ಞಾನಿಗಳು, ಇಂಜಿನಿಯರ್‌ಗಳು, ವೈದ್ಯರು, ಐ.ಎ.ಎಸ್., ಐ.ಪಿ.ಎಸ್., ಐ.ಆರ್.ಎಸ್., ಐ.ಎಫ್.ಎಸ್. ಅಧಿಕಾರಿಗಳಾಗಿ ಆಡಳಿತದಲ್ಲಿ ಪ್ರವೇಶಿಸಿದ್ದಾರೆ. ಪತ್ರಕರ್ತರು, ಕ್ರೀಡಾಪಟುಗಳು, ಸಾಹಿತಿಗಳು, ಕಲಾವಿದರು ಹಾಗೂ ಕೈಗಾರಿಕೋದ್ಯಮಿಗಳಾಗಿ ಇಂದು ಸಮಾಜದ ಎಲ್ಲ ಕ್ಷೇತ್ರಗಳಿಗೆ ಹಾಗೂ ರಂಗಗಳಿಗೆ ಪ್ರವೇಶಿಸಿದ್ದಾರೆ. ಒಂದಷ್ಟು ಜನರಿಗೆ ಶಿಕ್ಷಣ, ಉದ್ಯೋಗ, ಮನೆ, ಭೂಮಿ, ಇತ್ಯಾದಿಗಳು ಲಭ್ಯವಾಗಿ ಇವರ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿಯನ್ನು ಕಾಣಬಹುದು. ಆದರೂ ಸಾಧಿಸಬೇಕಾದ್ದು ಬೆಟ್ಟದಷ್ಟಿದೆ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು