ನಮ್ಮ ದೇಶದ ಪ.ಜಾ, ಪ.ಪಂಗಡ ಮತ್ತು ಹಿಂದುಳಿದ ವರ್ಗದ ಜನರು ಮೀಸಲಾತಿಯ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ರಾಜಕೀಯ, ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದ್ದರ ಪರಿಣಾಮವಾಗಿ ಈ ವರ್ಗಗಳಲ್ಲಿ ಸಾಮಾಜಿಕ ಚಲನಶೀಲತೆಯನ್ನು ಕಾಣಬಹುದು. ಈ ಮುಖಾಂತರ ಈ ವರ್ಗಗಳು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸ್ವಲ್ಪ ಮಟ್ಟಿಗೆ ಸಬಲೀಕರಣಗೊಂಡಿವೆ.
ಆದರೆ ಈ ವರ್ಗದ ಮಹಿಳೆಯರು, ಆದಿವಾಸಿಗಳು, ಅಲೆಮಾರಿಗಳು, ಅರೆ ಅಲೆಮಾರಿಗಳು, ದೇವದಾಸಿಯರು, ಸಫಾಯಿ ಕರ್ಮಚಾರಿಗಳು, ಕೊಳಚೆ ಪ್ರದೇಶದ ನಿವಾಸಿಗಳು ಇತ್ಯಾದಿ ಸಣ್ಣ ಮತ್ತು ಅತಿಸಣ್ಣ ಜಾತಿಗಳ ಪರಿಸ್ಥಿತಿ ಗಂಭೀರವಾಗಿದೆ ಮತ್ತು ಇವರ ಜೀವನ ಇನ್ನೂ ಹೀನಾಯವಾಗಿದೆ. ಇವರ ಮತ್ತು ಇವರ ಮಕ್ಕಳ ಶೈಕ್ಷಣಿಕ ಮಟ್ಟ ಬಹಳ ಕಡಿಮೆ ಇದೆ. ತತ್ಪರಿಣಾಮವಾಗಿ ಉನ್ನತ ಶಿಕ್ಷಣವಿಲ್ಲ ಮತ್ತು ಸರ್ಕಾರಿ ಉದ್ಯೋಗವಿಲ್ಲ. ಅಪ್ಪಿತಪ್ಪಿ ಕೆಲವರು ಉನ್ನತ ಶಿಕ್ಷಣ ಪಡೆದಿದ್ದರೂ ಸಹ ಈ ವರ್ಗದ ಬಲಿಷ್ಠರ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ವರ್ಗದ ಅನೇಕ ಸಣ್ಣ ಜಾತಿಗಳು ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಚುನಾವಣೆಗಳಲ್ಲಿ ಗೆಲ್ಲಲಿಲ್ಲ. ಕಳೆದ 15 ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿ ಇದ್ದರೂ ಸಹ ಈ ಸವಲತ್ತು ಈ ವರ್ಗಗಳಿಗೆ ತಲುಪಲೇ ಇಲ್ಲ.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟು ಮಹಿಳೆಯರು. ಮಹಿಳೆಯರಿಗೆ ಉನ್ನತ ಶಿಕ್ಷಣದಲ್ಲಿ ಮತ್ತು ಸರ್ಕಾರಿ ಉದ್ಯೋಗದಲ್ಲಿ ಸಮತಲ ಮೀಸಲಾತಿಯನ್ನು ನೀಡಲಾಗಿದೆ. ಆದರೆ ಮಹಿಳೆಯರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಆದರೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ನೀಡಿಲ್ಲ. ಈ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆ. ಈ ಕಾರಣಗಳಿಂದ ಮಹಿಳೆಯರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ರಾಜಕೀಯ, ಶೈಕ್ಷಣಿಕ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸೇರಿಸಿ ಎಂಬ ಧ್ವನಿ ಕೇಳಿಬರುತ್ತಿದೆ.
ಅಲ್ಪಸಂಖ್ಯಾತರಲ್ಲಿ ಅನೇಕ ಜಾತಿಗಳಿವೆ. ಇಲ್ಲಿಯೂ ಕೂಡ ಜಾತಿ ಅಸಮಾನತೆ ಇದೆ. ನ್ಯಾಯಮೂರ್ತಿ ಸಾಚಾರ್ ಆಯೋಗ 2006ರ ತನ್ನ ವರದಿಯಲ್ಲಿ ಭಾರತದ ಅಲ್ಪಸಂಖ್ಯಾತ ಮುಸ್ಲಿಂರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಜನರಿದ್ದಾರೆ ಎಂದು ಹೇಳಿದೆ. ಮುಂದುವರಿದು ಇಲ್ಲಿನ ಕೆಳಜಾತಿಗಳ ಬದುಕು ದಲಿತರಿಗಿಂತ ಹೀನಾಯವಾಗಿದೆಯೆಂದು ತಿಳಿಯಪಡಿಸಿದೆ. ಇಲ್ಲಿನ ಕೆಳಜಾತಿಯ ಜನರ ಶೈಕ್ಷಣಿಕ ಮಟ್ಟ ಬಹಳ ಕಡಿಮೆ. ತತ್ಪರಿಣಾಮವಾಗಿ ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗವಿಲ್ಲ. ಈ ಜನರಿಗೆ ಮೀಸಲಾತಿ ತಲುಪಲೇ ಇಲ್ಲ.
ಕೇವಲ ಮೀಸಲಾತಿ ವಂಚಿತ ಸಮುದಾಯಗಳಿಗೆ ಮಾತ್ರ ಮೀಸಲಾತಿ ಕೊಡಿ ಎಂಬ ಹೋರಾಟ ಮಾಡಲು ನೈತಿಕ ಹಕ್ಕಿದೆ. ಇವರ ಧ್ವನಿ ಯಾರಿಗೂ ಕೇಳಿಸುತ್ತಿಲ್ಲ. ಇದರ ಬಗ್ಗೆ ಪ್ರಜ್ಞಾವಂತ ಸಮಾಜ ಗಂಭೀರವಾಗಿ ಚಿಂತಿಸಬೇಕಾಗಿದೆ. ಮೀಸಲಾತಿಗೆ ಸಂಬಂಧಿಸಿದ ಚರ್ಚೆಯಲ್ಲಿ ಈ ವಂಚಿತರಿಗೆ ಮೀಸಲಾತಿಯನ್ನು ತಲುಪಿಸುವುದರ ಬಗ್ಗೆ ಮೊದಲನೇ ಆದ್ಯತೆ ಸಿಗಬೇಕಾಗಿದೆ. ಸರ್ಕಾರಗಳು, ರಾಜಕೀಯ ಇಚ್ಛಾಶಕ್ತಿಯನ್ನು ತೋರಿ ಈ ದೌರ್ಭಾಗ್ಯರಿಗೆ ಮೀಸಲಾತಿ ಸವಲತ್ತನ್ನು ತಲುಪಿಸುವ ಕಾನೂನುಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ಈ ಕೆಲಸ ತುರ್ತಾಗಿ ನಡೆಯಬೇಕಾಗಿದೆ.