December 3, 2023 7:10 am

ದಲಿತ ಮುಖ್ಯಮಂತ್ರಿ ಚರ್ಚೆ ರಾಜಕೀಯ ಪಂಥಾಹ್ವಾನಕ್ಕೆ ಸೀಮಿತ

ದಲಿತ ಮುಖ್ಯಮಂತ್ರಿ ಚರ್ಚೆ ರಾಜಕೀಯ ಪಂಥಾಹ್ವಾನಕ್ಕೆ ಸೀಮಿತ

  • ಕೆ.ಎಸ್ ಸತೀಶ್ ಕುಮಾರ್, ಜಿಲ್ಲಾ ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ಹಾಸನ

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಂಥಾಹ್ವಾನದ ವಿಚಾರ ಬಂದ ಸಂದರ್ಭದಲ್ಲಿ ಅಯಾ ರಾಜಕೀಯ ಪಕ್ಷಗಳು ‘ದಲಿತ ಮುಖ್ಯಮಂತ್ರಿ’ ಎಂಬ ವಿಷಯವನ್ನು ಮುನ್ನೆಲೆಗೆ ತರುತ್ತವೆ.

ಕಳೆದ ಒಂದು ದಶಕದಿಂದ ಇಂತಹ ಒಂದು ಬಾಯಿ ಚಪಲದ ಮಾತನ್ನು ಪಂಥಾಹ್ವಾನಕ್ಕಾಗಿ ಪರಸ್ಪರ ಬಳಸಿಕೊಳ್ಲಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ, ನಾಡಿನ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ, ಈ ವಿಷಯದಲ್ಲಿ ದಲಿತರ ಸಾಮರ್ಥ್ಯ, ಅರ್ಹತೆಗಳನ್ನು ಗೌಣವಾಗಿಸುವ ಪ್ರಯತ್ನ ಗಳು ಇವೆ ಎಂಬ ಅರ್ಥದಲ್ಲಿ ತಣ್ಣಗೆ ಹೇಳಿದ್ದರು.

ಇತ್ತೀಚೆಗೆ ಕೆಲವೊಂದು ವಿಷಯಗಳನ್ನು, ಅಪಾರ್ಥ, ಇಲ್ಲವೇ ಅಪವ್ಯಾಖ್ಯಾನಗೊಳಿಸಲಾಗುತ್ತದೆ. ನಂತರ ಅದನ್ನು ನಿರಂತರ ಬಳಸುತ್ತಾ ಅಪವ್ಯಾಖ್ಯಾನಗಳನ್ನೇ  ಸತ್ಯ ಎಂದು ಬಿಂಬಿಸುವ ಪ್ರವೃತ್ತಿ ಬೆಳೆದು ಬಂದಿದೆ.

ಈ ಕಾರಣಕ್ಕೆ ಬೇರುಮಟ್ಟದಿಂದ ನರನಾಡಿಗಳಲ್ಲಿ, ದಲಿತ ವಿರೋಧಿ ಅಜೆಂಡಾ ಇಟ್ಟುಕೊಂಡವರೂ, ದಲಿತ ಮುಖ್ಯಮಂತ್ರಿ ವಿಚಾರವನ್ನು ಬಿಡುಬೀಸಾಗಿ ಮಾತನಾಡಬಲ್ಲರು.

ಹುಟ್ಟಿನಿಂದ ದಲಿತ ವ್ಯಕ್ತಿಯಾದವರು, ಮುಖ್ಯಮಂತ್ರಿಯಾಗಬೇಕೆ ಅಥವಾ ದಲಿತ ಪ್ರಜ್ಞೆ ಇರುವ ವ್ಯಕ್ತಿ ಆಗಬೇಕೆ? ಇಲ್ಲಿ ಎರಡನೇ ವಿಚಾರ ಗೌಣವಾಗಿಬಿಡುತ್ತಿದೆ. ಮೇಲ್ನೋಟಕ್ಕೆ ಯಾರು ಬಸವಣ್ಣ, ಅಂಬೇಡ್ಕರ್ ಮಾರ್ಗವನ್ನು ಜೀವನದ ಮಾರ್ಗವಾಗಿ ಆರಾಧಕರಾಗಿದ್ದರೆ ಅವರಿಗೆ ದಲಿತಪ್ರಜ್ಞೆ ಇದೆ ಎನ್ನುವುದು ಸರಳ ಸತ್ಯ. ದಲಿತ ಪ್ರಜ್ಞೆ ಇರುವ ವ್ಯಕ್ತಿ ಜೀವವಿರೋಧಿ ಸನಾತನ ಮೌಲ್ಯಗಳನ್ನು ತಿರಸ್ಕರಿಸುತ್ತಾನೆ. ಪ್ರತಿಕ್ಷಣವು ಭೌತಿಕ ಪರಿವರ್ತನೆಯ ವೈಜ್ಞಾನಿಕ ತರ್ಕಕ್ಕೆ ಬದ್ದನಾಗಿರುತ್ತಾನೆ. ಹುಟ್ಟಿನಿಂದ ದಲಿತನಾದ ವ್ಯಕ್ತಿ ಸನಾತನ ಮೌಲ್ಯಗಳ ಆರಾಧಕನಾಗಿದ್ದರೂ, ಆತನನ್ನು ದಲಿತ ಪ್ರಜ್ಞೆ ಉಳ್ಳವ ಎಂದು ಹೇಳಲಾದೀತೆ?

ಹೀಗಾಗಿ ದಲಿತ ಪ್ರಜ್ಞೆ ಎನ್ನುವುದು ವಿಶ್ವ ಮಾನವ ಪ್ರಜ್ಞೆ. ಸಾವಿರಾರು ವರ್ಷಗಳಿಂದ ವೈದಿಕರು, ಶೋಷಿತರ ಬೌದ್ಧಿಕತೆಯ ಮೇಲೆ ಹಾಕಿರುವ ಸಂಕೋಲೆಗಳನ್ನು ಕಿತ್ತೆಸೆದು, ಜಾತಿಮತಗಳಿಲ್ಲದ, ವರ್ಗಗಳಿಲ್ಲದ, ಸಮಸಮಾಜಕ್ಕಾಗಿ ಅಂತರಂಗ ಬಹಿರಂಗದಲ್ಲಿ ತುಡಿಯುವುದೇ ದಲಿತ ಪ್ರಜ್ಞೆ. ಈ ರೀತಿಯ ವ್ಯಕ್ತಿತ್ವದಲ್ಲೇ ನೋಡುವುದಾದರೆ, ಅಲ್ಲಮ, ಬಸವಣ್ಣ, ಕನಕದಾಸ, ಮಲೆಮಹದೇಶ್ವರ, ಸಿದ್ದಪ್ಪಾಜಿಯಿಂದ ಹಿಡಿದು, ಇತ್ತೀಚಿನ ಕುದ್ಮುಲ್ ರಂಗರಾವ್, ಕುವೆಂಪು, ದೇವರಾಜ ಅರಸರ ತನಕವೂ, ತತ್ವಜ್ಞಾನಿಗಳು, ರಾಜಕಾರಣಿಗಳು ಸಿಗುತ್ತಾರೆ.

ಇದನ್ನು ಜಾತ್ಯತೀತ ಪರಂಪರೆಯ ನಾಯಕರು ನಿರೂಪಿಸದಿದ್ದಲ್ಲಿ, ಸನಾತನವಾದಿಗಳನ್ನು ಎದುರಿಸಲಾಗದು. ಹುಟ್ಟಿನಿಂದ ದಲಿತರಾಗಿರುವವರಿಗೆ, ರಾಷ್ಟ್ರಪತಿ, ರಾಜ್ಯಪಾಲ, ಉಪಮುಖ್ಯಮಂತ್ರಿ ಮುಂತಾದ ಹುದ್ದೆಗಳನ್ನು ನೀಡಿರುವ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಾರೆ. ಸರಳ ಸಮರ್ಥನೆಗೆ ಇಳಿದು ಬಿಡುತ್ತಾರೆ.

ಕನ್ನಡ ನೆಲದಲ್ಲಿ, ಹನ್ನೆರಡನೇ ಶತಮಾನವನ್ನು ಹೊರತುಪಡಿಸಿದರೆ, ಇತ್ತೀಚೆಗೆ ಎಪ್ಪತ್ತರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿನ ಸಂದರ್ಭದಲ್ಲಿ ದಲಿತ ಪ್ರಜ್ಞೆ ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದನ್ನು ಗಮನಿಸಬಹುದು.

ಶೋಷಿತ ಜನಾಂಗವನ್ನು ಒಂದು ವಿಶಾಲ ನೆಲೆಯ ಮೇಲೆ ಸಮಗ್ರ ದೃಷ್ಟಿಕೋನದಡಿಯಲ್ಲಿ ಒಗ್ಗೂಡಿಸಿದ ಪ್ರಾಮಾಣಿಕ ಪ್ರಯತ್ನವದು. ಪ್ರತಿ ಕಾರ್ಯಕರ್ತನಿಗೂ ತಾನು ಹುಟ್ಟಿದ ಜಾತಿ ಮರೆತು, ಮತ್ತೊಬ್ಬನ ಜಾತಿಯನ್ನು ಕುತೂಹಲಕ್ಕೂ, ಕೇಳದಂತಹ, ಇವ ನಮ್ಮವ ಎಂಬ ಜನಾಂಗ ಪ್ರಜ್ಞೆ ಒಡಮೂಡಿತ್ತು.

ಈ ಕಾರಣಕ್ಕೆ, ಕೋಲಾರದ ಹುಣಸಿಕೋಟೆಯ ಶೇಷಗಿರಿಯಪ್ಪನನ್ನು ಭೂಮಾಲೀಕರು ಕಗ್ಗೊಲೆ ಮಾಡಿದಾಗ, ಅನುಸೂಯಮ್ಮನ ಮೆಲೆ ಪೈಶಾಚಿಕ ಅತ್ಯಾಚಾರವಾದಾಗ, ಸುಮಾರು ಐದುಸಾವಿರಕ್ಕೂ ಹೆಚ್ಚು ದಲಿತರು ಕೋಲಾರದಿಂದ ಬೆಂಗಳೂರು ವಿಧಾನಸೌದದವರೆಗೆ ಪಾದಯಾತ್ರೆ ಮಾಡಲು ಪ್ರೇರೇಪಿಸಿದ್ದು ಈ ದಲಿತ ಪ್ರಜ್ಞೆಯೇ. ಏಕೆಂದರೆ ದೌರ್ಜನ್ಯಕ್ಕೆ ಒಳಗಾದವರು ಹುಟ್ಟಿನಿಂದ ದಲಿತರಾಗಿರಲಿಲ್ಲ.

ಸಾಮಾಜಿಕ ಭೂಪಟದಲ್ಲಿ ಚಹರೆಗಳೆ ಇಲ್ಲದ ಹಿಂದುಳಿದ ವರ್ಗಗಳಿಗೆ ವಿ.ಪಿ.ಸಿಂಗ್ ಮಂಡಲ ಆಯೋಗದ ವರದಿ ಜಾರಿಗೊಳಿಸಿದಾಗ, ಅದನ್ನು ಜಾರಿ ಮಾಡಲು ಆಗ್ರಹಿಸಿ ಬೀದಿಗೆ ಇಳಿದಿದ್ದೇ ದಸಂಸ. ಶೋಷಿತರೆಲ್ಲರು ನಮ್ಮವರು ಎಂಬ ಔದಾರ್ಯ ದಲಿತ ಪ್ರಜ್ಞೆಯಲ್ಲಿದೆ. ಕಾಲಾನಂತರದಲ್ಲಿ ಸಂಘಟನೆ ವಿಘಟನೆಗೊಂಡಂತೆ ದಲಿತ ಪ್ರಜ್ಞೆ ಮಾಯವಾಗಿ ಜಾತಿ ಪ್ರಜ್ಞೆ ಒಡಮೂಡಿದ್ದೇ ಐತಿಹಾಸಿಕ ದುರಂತವೂ ಆಗಿದೆ.

ದಲಿತರ ಮೂಲಭೂತ ಹಕ್ಕುಗಳಾದ, ಶಿಕ್ಷಣ ಉದ್ಯೋಗ ಮತ್ತು ರಾಜಕೀಯದಲ್ಲಿನ ಮೀಸಲಾತಿ ಅವರಿಗೆ ಸೂಕ್ತ ಸ್ಥಾನಮಾನ ಪ್ರಾತಿನಿಧ್ಯಗಳನ್ನು ನೀಡಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವ ಅವಕಾಶಗಳನ್ನು ನೀಡಿದೆ. ಆದರೆ ಮೀಸಲಾತಿ ಎಂಬ ಊರುಗೋಲು ಅದರಾಚೆಗೂ ಯೋಚಿಸದಂತೆ, ಅಗಾಧ ಪ್ರತಿಭೆ ಇದ್ದರೂ, ಸ್ಪರ್ಧಾತ್ಮಕ ಜಗತ್ತಿಗೆ ಧುಮುಕದಂತೆ ಮಿತಿ ಹೇರಿದೆಯೇನೊ ಅನ್ನಿಸುತ್ತದೆ.

ಮೀಸಲಾತಿ ಹೊರತುಪಡಿಸಿದರೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲಾರೆವು, ದಲಿತೇತರರು ನಮ್ಮನ್ನು ತುಳಿಯುತ್ತಾರೆ ಎಂಬ ಸ್ವಾನುಕಂಪ, ಆಳದಲ್ಲಿ ಸ್ವಲ್ಪಮಟ್ಟಿಗೆ ಭೀತಿಯನ್ನೋ, ಕೀಳರಿಮೆಯನ್ನೋ ಸೃಷ್ಟಿಸಿದೆ. ಮೀಸಲಾತಿ ಎಂಬುದೇ ನೂರಾರು ಒಳ ಜಾತಿಗಳ ಒಡಕಿಗೂ ಶೀತಲ ಸಂಘರ್ಷಕ್ಕೂ ಕಾರಣವಾಗಿರುವುದು ಮತ್ತೊಂದು ದುರಂತ.

ಮೀಸಲಾತಿಯ ಫಲಾನುಭವಿಗಳೇ ಆದ ನೌಕರಶಾಹಿ ಮೇಲ್ವರ್ಗಗಳನ್ನು ಅನುಕರಿಸಲು ಹೋಗಿ ದಲಿತ ಪ್ರಜ್ಞೆ ಕಳೆದುಕೊಂಡರು. ತಮಗಿಂತ ಅಸಹಾಯಕ ಜನ ವರ್ಗಗಳನ್ನು ಮೆಲೆತ್ತುವ ಔದಾರ್ಯ ತೊರದೇ ಇರುವುದು ಮೀಸಲಾತಿಯ ವೈಫಲ್ಯ ಎನ್ನಲಾಗದು.

ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಬಹುತೇಕ ವಯಕ್ತಿಕ ಏಳಿಗೆಯನ್ನೋ ಅದನ್ನು ಮೀರಿ ಸ್ವಜಾತಿಯ ಏಳಿಗೆಯನ್ನು ಪರಿಗಣಿಸಿದರೆ ಹೊರತು ಒಟ್ಟು ಜನಾಂಗವೆಂಬ ಸಮಷ್ಟಿ ದೃಷ್ಟಿ ಅವರಲ್ಲಿ ಉಳಿಯಲಿಲ್ಲ. ವೈಯಕ್ತಿಕವಾಗಿ ಸಜ್ಜನರಿರಬಹುದು. ಆದರೆ ಮೀಸಲಾತಿ ಪರಿಕಲ್ಪನೆಯನ್ನೇ ಅದರ ಫಲಾನುಭವಿಗಳೇ ಅನರ್ಥಗೊಳಿಸುವುದು ಐತಿಹಾಸಿಕ ಪ್ರಮಾದವೆನ್ನಿಸುತ್ತದೆ.

ಇದರ ಪರಿಣಾಮ ಸಮಗ್ರ ದಲಿತ ಜನಾಂಗದೊಳಗೆ ಇರುವ ಅಸ್ಪೃಶ್ಯ ಮತ್ತು ಸ್ಪೃಶ್ಯ ಜಾತಿಗಳಲ್ಲಿ ವಿನಾಕಾರಣವಾದ ಒಡಕು ಮೂಡಿದೆ. ಅಸ್ಪೃಶ್ಯ ಜಾತಿಗಳೊಳಗೂ ಪಾಲುದಾರಿಕೆ ಹೆಸರಲ್ಲಿ ಒಡಕು ಮೂಡಿದೆ. ನೂರಾರು ಜಾತಿಗಳು ತಮ್ಮ ಅಸ್ತಿತ್ವಕ್ಕೆ ಹೋರಾಡುತ್ತಿವೆ. ಈ ವಿಘಟನೆಯ ಪರಿಣಾಮ ಮನುವಾದ ವ್ಯಾಪಕವಾಗಿ ಸಂವಿಧಾನದ ಔಚಿತ್ಯ ವನ್ನೇ ಪ್ರಶ್ನಿಸುವ ಪರಿಸ್ಥಿತಿ ತಲೆದೋರಿದೆ.

ಈ ಸಂದರ್ಭದ ದಲಿತ ರಾಜಕಾರಣ ಎಂದರೆ ಶೋಷಿತರನ್ನು ಸಾಮಾಜಿಕವಾಗಿ ಒಂದು ನೆಲೆಗೆ ತಂದು, ಅವರ ಸಮಗ್ರ ಕಲ್ಯಾಣದ ಕಾರ್ಯಸೂಚಿ ಇರುವ ರಾಜಕಾರಣ. ಮನುವಾದದ ವಿರುದ್ದ ಅಂಬೇಡ್ಕರ್ ಮತ್ತು ತದನಂತರದಲ್ಲಿ ಕಾನ್ಷಿರಾಂ ಮಾಡಿದ ರಾಜಕಾರಣ.

ಬಿ.ಎಸ್.ಪಿ. ಆರಂಭದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರನ್ನು ಒಳಗೊಂಡ ದಲಿತ ರಾಜಕಾರಣ ಆರಂಭಿಸಿತು. ಆದರೆ ಅದು ಮಾರ್ಗವನ್ನು ಮರೆತು ಅಧಿಕಾರವನ್ನು ಮಾತ್ರ ಗುರಿಯಾಗಿಟ್ಟುಕೊಂಡಿದ್ದರಿಂದ ವೈಫಲ್ಯ ಕಂಡಿತು.

ಜನಸಂಖ್ಯೆಯ ಶೇ. 12ರಷ್ಟಿರುವವರು 6 ಬಾರಿ ಮುಖ್ಯಮಂತ್ರಿಯಾದರು, ಶೇ. 16ರಷ್ಟಿರುವವರು 10 ಬಾರಿ ಮುಖ್ಯಮಂತ್ರಿಯಾದರು. ಶೇ. 3ರಷ್ಟಿರುವವರು  3 ಬಾರಿ ಅಧಿಕಾರ ಪಡೆದರು. ಶೇ. 30ರಷ್ಟಿರುವ  ದಲಿತರು ಒಂದೇ ಒಂದು ಬಾರಿಯೂ ಮುಖ್ಯಮಂತ್ರಿಯಾಗಲಿಲ್ಲ. ಈ ರೀತಿ ಅಂಕಿ ಅಂಶಗಳನ್ನು ಆಧರಿಸಿದ ವಿಶ್ಲೇಷಣೆಗಳಿವೆ.

ಸ್ವಾತಂತ್ರ್ಯಾನಂತರದ 70 ವರ್ಷಗಳಲ್ಲಿ, ಸಾರ್ವಜನಿಕ ಕ್ಷೇತ್ರಗಳ ಎಲ್ಲ ರಂಗಗಳಲ್ಲೂ ದಲಿತರ  ಪೂರ್ಣ ಪ್ರಮಾಣದ ಪಾಲ್ಗೊಳ್ಳುವಿಕೆ ಸಾಧ್ಯವಾಗಿಲ್ಲ. ಕೃಷಿ, ಕೈಗಾರಿಕೆ, ಶಿಕ್ಷಣ, ಸಹಕಾರ, ವೈದ್ಯಕೀಯ ಇನ್ನಿತರೆ ಉದ್ಯಮ ಕ್ಷೇತ್ರಗಳಲ್ಲಿ ದಲಿತರ ಪಾಲ್ಗೊಳ್ಳುವಿಕೆ ಅತ್ಯಂತ ಕಡಿಮೆ ಎಂದೇ ಹೇಳಬಹುದು. ಉಳಿದ ವರ್ಗಗಳು ಹಂತ ಹಂತವಾಗಿ ಈ ಕ್ಷೇತ್ರಗಳನ್ನು ಆವರಿಸಿವೆ. ಇದು ಅಧಿಕಾರ ರಾಜಕಾರಣದಲ್ಲಿರುವ ದಲಿತರ ವೈಫಲ್ಯವೋ, ಮೀಸಲಾತಿಯ ಮೀರದ ಅಧೈರ್ಯವೊ ಎಂಬ ಬಗ್ಗೆ ಅವಲೋಕನ ನಡೆಯಬೇಕು.

ದಲಿತ ಮುಖ್ಯಮಂತ್ರಿ ಯಾರಾಗಬೇಕೆಂಬ ಪ್ರಶ್ನೆಯೊಳಗೆ  ಈ ಎಲ್ಕ ವಿಶ್ಲೇಷಣೆಗಳು ಅಡಕಗೊಂಡರೆ, ಆ ವಿಚಾರಕ್ಕೆ  ಒಂದು ಘನತೆ ಬರಲು ಸಾಧ್ಯ ಎನ್ನಿಸುತ್ತದೆ.

Share:

One Response

  1. Timely wriye up . Observation in the article is absolutly correct. When CM post comes daliths will be in last bench. It applies to all politicle party including cong , bjp & jds . Same is the fate of minoritirs specially muslims .

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು