October 1, 2023 8:15 am

ಲಿಂಗ ಸಮಾನತೆಗೊಂದು ಬೌದ್ಧ ಚೌಕಟ್ಟು

ಲಿಂಗ ಸಮಾನತೆಗೊಂದು ಬೌದ್ಧ ಚೌಕಟ್ಟು

ಡಾ.ಲೀಲಾಸಂಪಿಗೆ, ಚಿಂತಕರು, ಬರಹಗಾರರು

ಮಹಿಳೆಯರ ಸ್ಥಿತಿಗತಿಯನ್ನು ವಾಸ್ತವತೆಯ ನೆಲೆಗಟ್ಟಿನಲ್ಲಿ ನೇರವಾದ, ವೈಜ್ಞಾನಿಕವಾದ ದೂರದೃಷ್ಟಿಯನ್ನೊಳಗೊಂಡ ಸೂತ್ರಗಳಲ್ಲಿ ವಿಶ್ಲೇಷಿಸಿದ ಬುದ್ಧ ಸೈದ್ಧಾಂತಿಕವಾಗಿ ಸ್ಪಟಿಕದಂತೆ ಈ ಸಮಾಜದ ಕಣ್ತೆರಿಸಿದ್ದಾನೆ.  ಅಷ್ಟೇ ಅಲ್ಲ, ಮಹಿಳಾ ಸಬಲೀಕರಣದ ಪ್ರಯತ್ನ ಮಾಡುವ ಎಲ್ಲರಿಗೂ ಬುದ್ಧ ಮಾದರಿಯಾಗಿ ನಿಲ್ಲುತ್ತಾನೆ. 

ಬುದ್ಧ ಎಂದೊಡನೆ ಯಶೋಧರೆ ತಳುಕು ಹಾಕಿಕೊಂಡು ಬಿಡುತ್ತಿದ್ದಳು.  ಹಾಗೆ ಯೋಚಿಸಿದಾಗಲೆಲ್ಲಾ ಬುದ್ಧನೊಂದಿಗಿನ ಜಿದ್ದು ಹೆಚ್ಚಾಗುತ್ತಲೇ ಹೋಗುತ್ತಿತ್ತು.  ಅದೇ ಪ್ರಶ್ನೆಗಳು ನನ್ನನ್ನು ಕಾಡುತ್ತಲೇ ಇದ್ದವು.  ಆಳವಾಗಿ ಬುದ್ಧನನ್ನು ಒಳಹೊಕ್ಕಾಗ ಬುದ್ಧ ಬಿಚ್ಚಿಕೊಂಡ ಜಗತ್ತೇ ಬೇರೆ.  ಯಶೋಧರೆಯ ಜಗತ್ತನ್ನು ತೊರೆದು, ಜಗತ್ತಿನ ಯಶೋಧರೆಯರ ಬದುಕನ್ನು ತೆರೆದ  ಪರಿ ಅಚ್ಚರಿ ಮೂಡಿಸುವಂತದ್ದು.

ಕ್ರಿ.ಪೂ. 6ನೇ ಶತಮಾನದಲ್ಲಿ ಸಾಮಾಜಿಕ ಸ್ಥಿತಿಗತಿಗಳು ಬಹಳ ಅರಾಜಕವಾಗಿದ್ದವು. ರಾಜಪ್ರಭುತ್ವ ತನ್ನ ಅಟ್ಡಹಾಸ  ಮೆರೆಯುವುದರೊಂದಿಗೆ ನೂರಾರು ಬುಡಕಟ್ಟುಗಳು ಕ್ಷೀಣವಾಗುತ್ತಿದ್ದವು.  ರಾಜಪ್ರಭುತ್ವವು  ರಾಜ್ಯ ವಿಸ್ತರಣೆಗಾಗಿ ನಿರ್ದಾಕ್ಷಿಣ್ಯವಾಗಿ ಬುಡಕಟ್ಟುಗಳ ಮೇಲೆ ಎರಗಿದ್ದವು.  ಇದರಿಂದಾಗಿ ಜನಸಾಮಾನ್ಯರ ಬದುಕುಗಳು ಅಶಾಂತಿಯಿಂದ ದುಸ್ತರವಾದವು.  ಹಿಂಸೆ, ಕ್ರೌರ್ಯ, ಲೈಂಗಿಕ ಅತ್ಯಾಚಾರಗಳು, ಪರಸ್ಪರ ದ್ವೇಷಾಸೂಯೆಗಳು ತಾಂಡವವಾಡಿದವು.  ಸರಳತೆ ಮತ್ತು ಜೀವನಪ್ರೀತಿಯನ್ನು ತಮ್ಮ ಶಕ್ತಿಯನ್ನಾಗಿಸಿಕೊಂಡು ಬದುಕುತ್ತಿದ್ದ ಜನರು ಅಂತಹ ಅರಾಜಕ ಪರಿಸ್ಥಿತಿಯಿಂದ ತತ್ತರಿಸಿದರು. 

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬೌದ್ಧಧರ್ಮ ಉದಯವಾಯಿತು. ಆ ಧರ್ಮದ ಆಗಮನ ಜನರಲ್ಲಿ ಚೈತನ್ಯ ತುಂಬುವುದರೊಂದಿಗೆ ಆಕರ್ಷಣೀಯವೂ ಆಯಿತು.  ಅಂದಿನ ಸಮಾಜವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ವೈದಿಕ ಧರ್ಮ ಮತ್ತು ಸಂಸ್ಕೃತಿಯನ್ನು ಮೊದಲು ಬೌದ್ಧಧರ್ಮ ಪ್ರತಿಭಟಿಸಿತು.  ಬೌದ್ಧ ಸಂಘಗಳು ದಿನದಿಂದ ದಿನಕ್ಕೆ ಗಟ್ಟಿಯಾಗತೊಡಗಿದವು.  ಸಮಾಜದ ಎಲ್ಲ ವರ್ಗಗಳಿಂದ,  ಜಾತಿಗಳಿಂದ ಬಂದವರು ಬೌದ್ಧ ಸಂಘ ಸೇರತೊಡಗಿದರು.

ಅಲ್ಲಿ  ಅಸ್ಪೃಶ್ಯತೆ,  ಜಾತೀಯತೆಯ ಸುಳಿವೂ ಇರದಂತೆ ಬೌದ್ಧ ಸಂಘಗಳನ್ನು ಬೆಳೆಸಲಾಯಿತು. ಆದರೆ ಬೌದ್ಧ ಸಂಘಗಳಿಗೆ ಸೇರಲು ಉತ್ಸುಕರಾಗಿ ಬಂದ ಮಹಿಳೆಯರಿಗೇನೂ ಆದರದ ಸ್ವಾಗತ ಸಿಗಲಿಲ್ಲ!  ‘ಸಾಕಷ್ಟು ಮಹಿಳೆಯರು ಸಂಘ ಸೇರಲು ಬರುತ್ತಿದ್ದಾರೆ,  ಅವರನ್ನು ಸೇರಿಸಿಕೊಳ್ಳುವ ಬಗ್ಗೆ ನಿನ್ನ ಅಭಿಪ್ರಾಯವೇನು’ ಎಂದು ಬುದ್ಧನ ಶಿಷ್ಯ ಆನಂದ ಪ್ರಶ್ನಿಸಿದ. ‘ಮಹಿಳೆಯರೊಂದಿಗೆ ಬಹಳ ಜಾಗ್ರತೆಯಿಂದಿರಬೇಕು ಮತ್ತು ಮಹಿಳೆಯರು ಸಂಘಕ್ಕೆ ಸೇರುತ್ತಾರೆ ಎಂದರೆ ಸಂಘದ ಆಯುಷ್ಯ ಅರ್ಧಕ್ಕೆ ಮುಗಿಯುವುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಬುದ್ಧ!!

ನಂತರ ಬುದ್ಧ ಆಲೋಚಿಸಿದ… ಈ ಸಮಾಜದ ಎಲ್ಲ ದೌರ್ಜನ್ಯಗಳಿಗೂ ಮೊದಲು ಬಲಿಯಾಗುವವಳು ಮಹಿಳೆ.   ತನ್ನ ಸಾಮರ್ಥ್ಯದೊಂದಿಗೆ ಬದುಕುವ ಪರಿ ಕಂಡುಕೊಳ್ಳುವ ಮೂಲಕ ಅವಳನ್ನು ಸಬಲೀಕರಿಸುವ  ಉತ್ಕಟತೆ ಅವನಲ್ಲಿ ಬಂದಿತು. ಬುದ್ಧ ತನ್ನ ನಿಲುವನ್ನು ಬದಲಿಸಿಕೊಂಡ.  ನೂರಾರು ಮಹಿಳೆಯರು ಬೌದ್ಧ  ಸಂಘಗಳನ್ನು ಸೇರಿದರು. ಅನೇಕ ಕಲಾವಿದೆಯರು, ವಾರಾಂಗನೆಯರೂ ಬಂದರು. ಕಲೆ ಮತ್ತು ಸಂಸ್ಕೃತಿಯ ಸಂಕೇತಗಳಾದ ಅವರನ್ನು ಸಹಿಷ್ಣುತೆಯಿಂದ ನಡೆಸಿಕೊಂಡ ಮನೋಭಾವ ಅವರ ಬದುಕನ್ನೇ ಬದಲಿಸಿಬಿಟ್ಟಿತು.  ಪ್ರಸಿದ್ಧ ವೇಶ್ಯೆ ಆಮ್ರಪಾಲಿ ಬುದ್ಧನ ಸ್ನೇಹ ಹೊಂದಿದಳು.  ಸಾಂಪ್ರದಾಯಿಕವಲ್ಲದ ಘಟನೆಗಳನ್ನು ದಾಖಲಿಸಿರುವ ಜಾತಕ ಕತೆಗಳಲ್ಲಿ ಕಂಡುಬರುವಂತೆ ಈ ವರ್ಗದ ಮಹಿಳೆಯರು ಧಾರ್ಮಿಕ,  ಮೃದುಸ್ವಭಾವದ ಹಾಗೂ ಉನ್ನತ ಧ್ಯೇಯ ಧೋರಣೆಯಿಂದ ಮಾರ್ಗದರ್ಶಿತರಾದರು.  ವೃತ್ತಿಪರ ಕಲಾವಿದೆಯರಿಗೆ ಸಮಾಜದಲ್ಲೊಂದು ಶ್ರೇಷ್ಠ ಸ್ಥಾನ ಸಿಕ್ಕಿತು. 

ಪದ್ಮಾವತಿ, ರುಕ್ಷಿದಾಸಿ, ಸಾರ್ಥಕ, ಭಿಕ್ಷುಣಿ ಶುಭಾ, ಬುದ್ಧ ಕುಂಡಲ,  ಕೇಶ ಮುಂತಾದ ಭಿಕ್ಷುಣಿಯರು ಮನುಷ್ಯ ಸಮಾನತೆಯ ಆಶಯದ ಹಾಡುಗಳನ್ನು ರಚಿಸಿದರು. ಅಮ್ರಪಾಲಿ, ಪದುಮಾವತಿ, ವಿಮಲಾ, ಅರ್ಧ ಕಾಶಿ ಮೊದಲಾದ ವೇಶ್ಯೆಯರು ಬೌದ್ಧಧರ್ಮವನ್ನು ಸ್ವೀಕರಿಸಿ ಭಿಕ್ಷುಣಿಯರಾಗಿ ಬದುಕ ಬದಲಿಸಿ ನಡೆದರು.  ಹೀಗೆ ಹೇಗೆ ವೃತ್ತಿ ವರ್ಗ ಜಾತಿ ಅಂತಸ್ತು ಯಾವ ಭೇದಗಳಿಲ್ಲದೆ ಸಂಘಗಳಲ್ಲಿ ಮಹಿಳೆಯರು ಸ್ವತಂತ್ರವನ್ನು ಅನುಭವಿಸಿದರು. ಇದು ಅವರ ಬದುಕಿಗೆ ಒಂದು ಹೊಸ ಚಾಲನೆಯನ್ನು ತಂದುಕೊಟ್ಟಿತು. ಬುದ್ಧನಿಗಿದ್ದ ಮಾನವ ಪ್ರೀತಿ, ಗೌರವ ಸ್ತ್ರೀಯರ ಘನತೆಯನ್ನು ಎತ್ತರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿತು. ಸತಿ, ಬಾಲ್ಯವಿವಾಹ ಅಲ್ಲಿ ತ್ಯಾಜ್ಯವಾದವು. ವೈಯಕ್ತಿಕ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಾದ ಬೌದ್ಧ ಸಂಘದ ಮಹಿಳೆ ಅಂದಿನ ಸಾಮಾಜಿಕ ದುಃಸ್ಥಿತಿಯಿಂದ ಹೊರಬಂದು ಉಸಿರಾಡುವಂತಾಯಿತು. ತಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವಲ್ಲಿ ಸಿಕ್ಕ ಅವಕಾಶದಿಂದಾಗಿ ಮಹಿಳೆಯರು ಧನ್ಯತಾಭಾವ ಹೊಂದಿದ್ದರು. ಈ ಸಂಭ್ರಮ ಸಮಾಜವನ್ನು ಸುಸ್ಥಿತಿಗೆ ತರುವಲ್ಲಿ ಶ್ರಮಿಸಿತು.                               

ವಿವಾಹದ ಬಗ್ಗೆಯೂ ಬೌದ್ಧ ಧರ್ಮ ಬಹಳ ಸ್ಪಷ್ಟವಾದ, ಕ್ರಾಂತಿಕಾರಿಯಾದ ನಿಲುವನ್ನು ಹೊಂದಿತ್ತು. ವಿವಾಹವೆಂಬುದು ನಿರ್ಬಂಧವೇನೂ ಅಲ್ಲ. ಬಲವಂತದ ಪ್ರಯೋಗವೂ ಅಲ್ಲ.  ಪರಸ್ಪರ ಹೆಣ್ಣು-ಗಂಡು ಸಮಾನವಾದ, ಸ್ಪಷ್ಟ ಹಕ್ಕು- ಕರ್ತವ್ಯಗಳನ್ನು  ಹೊಂದಿ ಅರ್ಥಮಾಡಿಕೊಂಡು ಸ್ವೀಕರಿಸುವ ನಿರ್ಧಾರವೇ ‘ವಿವಾಹ’  ಎಂದು ವಿವಾಹಕ್ಕೆ ಒಂದು ಹೊಸ ಆಯಾಮವನ್ನೇ ನೀಡಲಾಯಿತು. ಶತಶತಮಾನಗಳ ಹಿಂದೆಯೇ ಬುದ್ಧ ಮಹಿಳೆಯ ಸಬಲೀಕರಣದ ಬಗ್ಗೆ ಆರೋಗ್ಯಕರವಾದ ಬದ್ಧತೆಯ ಅಭಿಪ್ರಾಯಗಳನ್ನು ಹೊಂದಿದ್ದ.  ಸಬಲೀಕರಣದ ಬಗ್ಗೆ ನಾವು ಮಾತನಾಡುವುದಕ್ಕೂ ಮತ್ತು ವಾಸ್ತವ ಸಬಲೀಕರಣಕ್ಕೆ ನಡುವೆ ಒಂದು ದೊಡ್ಡ ಕಂದಕವಿದೆ ಎಂದು ವಿಶ್ಲೇಷಿಸಿದ ಬುದ್ಧನ ವಿಶ್ಲೇಷಣೆ ಅಕ್ಷರಶಃ ಇಂದಿಗೂ ಪ್ರಸ್ತುತವಾಗಿದೆ.                          

ಸಾಮಾನ್ಯವಾಗಿ ಮಹಿಳೆಯ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ನಿರ್ಧರಿಸುವ, ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಆತ್ಮ ಸಾಕ್ಷಾತ್ಕಾರ ಪಡೆಯುವುದೇ ಮಹಿಳಾ ಸಬಲೀಕರಣ.  ಸಿದ್ಧಾಂತದ ಮಟ್ಟಕ್ಕೆ ಈ ಆಶಯ ಸಾಧ್ಯವಾದರೂ ಪ್ರಾಯೋಗಿಕವಾಗಿ ಇಂದಿಗೂ ಇದು ಅವಾಸ್ತವವಾಗಿದೆ.  ಮಹಿಳಾ ಸಬಲೀಕರಣ ಅವಳ ಸಾಮರ್ಥ್ಯ ಅಥವಾ ಪ್ರತಿಭೆಗೆ ಮಾತ್ರ ಸಂಬಂಧಿಸಿದ್ದಲ್ಲ. ಜೊತೆಯಲ್ಲಿ ಸಾಮಾಜಿಕ ಪದ್ಧತಿಗಳು, ಆಚಾರ-ವಿಚಾರಗಳು ಮತ್ತು ಧರ್ಮ ಮುಂತಾದವುಗಳು ಈ ವಿಕಾಸಗಳನ್ನು ನಿಯಂತ್ರಿಸುತ್ತಿರುತ್ತವೆ. ಹಾಗಾಗಿ ಮಹಿಳಾ ಸಬಲೀಕರಣ ಎನ್ನುವುದು ಏಕಮುಖವಾದುದಲ್ಲ ಎಂಬುದನ್ನು ಬುದ್ಧ ಸವಿವರವಾಗಿ ಅಂದೇ ಜಗತ್ತಿನೆದುರು ತೆರೆದಿಟ್ಟಿದ್ದಾನೆ. ಮಹಿಳೆಯ ಸಬಲೀಕರಣದ ಆಶಯ ಮತ್ತು ವಾಸ್ತವತೆಯ ಮಧ್ಯೆ ಇರುವ ಕಂದಕವನ್ನು ಸರಿಸಲು ಬುದ್ಧ ಎರಡು ಸೂತ್ರಗಳ ಮೂಲಕ ಹೆಜ್ಜೆ ಮೂಡಿಸುತ್ತಾನೆ.  ಹಾಗೆಯೇ ಮಹಿಳೆಯ ಸಬಲೀಕರಣದಲ್ಲಿ ಮಹಿಳೆಯ ಮತ್ತು ಸಮಾಜದ ಎರಡು ಪಾತ್ರಗಳನ್ನು,  ಹೊಣೆಗಳನ್ನು   ತೆರೆದಿಟ್ಟಿದ್ದಾನೆ.

ಮೊದಲನೆಯದಾಗಿ, ಮಹಿಳೆ ತನ್ನ ಬಗ್ಗೆ ತಾನು ತಿಳಿದಿರುವ ತಪ್ಪುಗ್ರಹಿಕೆಯನ್ನು ವಿವರಿಸುತ್ತದೆ.  ತನ್ನ ಬಗ್ಗೆಯೇ ತನ್ನದೇ ದೃಷ್ಟಿಕೋನ  ಹೊಂದಿರುವುದು.  ಇದನ್ನೇ ಆತ್ಮೀಯ ದೃಷ್ಟಿ ಎನ್ನುವುದು. ಮಹಿಳೆಗೂ ಒಳ್ಳೆಯ ಮತ್ತು ಕೆಟ್ಟ  ಗುಣಗಳಿರುತ್ತವೆಯೇ ಹೊರತು ತಾಯಿ, ಸಹೋದರಿ, ಪತ್ನಿ ಮುಂತಾದ ಗುಣಗಳಿಲ್ಲ.  ಸಮಾಜ ಈ ಗುಣಗಳನ್ನು ಆರೋಪಿಸಿರುವುದು. ಮಾನವ ಸಮಾಜ ರೂಪಿತವಾದವುಗಳು.  ಯಾವ ಮಹಿಳೆಯ ಆದರ್ಶಗಳಿಗೆ ಅರ್ಪಿಸಿಕೊಂಡಿರುತ್ತಾಳೆ,  ಅವಳನ್ನು ಈ ಸಮಾಜ ವಿಜೃಭಿಸುತ್ತದೆ. (ಉದಾ: ಸತಿ)  ಮಹಿಳೆ ಈ ಸಾಮಾಜಿಕ ಕಟ್ಟಳೆಗಳು, ಮೌಲ್ಯಗಳು ಅಪೇಕ್ಷಿಸುವುದನ್ನು ಸಾಕಾರಗೊಳಿಸುವುದೇ  ತನ್ನ ಬದುಕಿನ ಗುರಿ ಎಂದು ನಂಬಿ ಬಿಟ್ಟಿದ್ದಾಳೆ. ಈ ಅಪ್ರಜ್ಞಾವಂತಿಕೆಯನ್ನೇ ಕ್ಲೇಶಾವರ್ಣ ಎನ್ನುವುದು. ಇದೇ  ಪೂರೈಸಲಾರದ, ನಿಯಂತ್ರಿಸಲಾರದ ಆಕಾಂಕ್ಷೆಯನ್ನು ಉತ್ತೇಜಿಸುತ್ತದೆ. ಒಳ್ಳೆಯ ಮಗಳು, ಒಳ್ಳೆಯ ಪತ್ನಿ ಹೀಗೆ ಈ ತಪ್ಪುಗ್ರಹಿಕೆಯೇ ತೃಷ್ಣವನ್ನು(ದಾಹ) ಹೆಚ್ಚಿಸುತ್ತದೆ.  ಅದಕ್ಕೋಸ್ಕರವೇ ಈ  ಪಾತ್ರಗಳನ್ನು ನಿರ್ವಹಿಸಲು ಸದಾ  ಹೆಣಗಾಡುತ್ತಾಳೆ. ಈ ವ್ಯವಸ್ಥೆಯೂ ಅವಳನ್ನು ಹಾಗೆ ನಂಬಿಸಿಬಿಟ್ಟಿದೆ. ಈ ಮೇಲೆ ಹೇಳಿದ ಪಾತ್ರಗಳನ್ನು ನಿರ್ವಹಿಸಲೋಸುಗವೇ ಮಹಿಳೆ ತನ್ನ  ಜೀವನ ಸವೆಸುವುದೇ ಎಲ್ಲ ನೋವಿಗೆ ಕಾರಣ. ಹಾಗೆಂದ ಮಾತ್ರಕ್ಕೆ ಮಹಿಳೆ ಎಲ್ಲವನ್ನೂ ಕೊಡವಿಕೊಳ್ಳಬೇಕೆಂದು ಅರ್ಥವಲ್ಲ. ಆದರೆ ಅದರ ಟೊಳ್ಳುತನವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ ಎಂದರ್ಥ.  ಇದರಿಂದಲೇ ಮಹಿಳೆಯ ನಡವಳಿಕೆಗಳು ನಿರ್ಧಾರವಾಗುತ್ತವೆ. ಮಾನಸಿಕವಾಗಿ ಮಹಿಳೆ ತನ್ನ ಸಾಮರ್ಥ್ಯಗಳನ್ನು ಸ್ವಗ್ರಹಿಸುವುದು; ಸಾಮಾಜಿಕವಾದ, ಸಾಂಸ್ಕೃತಿಕವಾದ ಕಟ್ಟುಪಾಡುಗಳ ಸವಾಲುಗಳನ್ನು ಮೀರಲು ಬೇಕಾದಂತಹ ಸಾಮರ್ಥ್ಯ ಮತ್ತು ಶಕ್ತಿ ಪಡೆದುಕೊಳ್ಳುವುದೇ ಮಹಿಳೆಯ ಸಬಲೀಕರಣ. ಇದು  ಅವಳೊಳಗೇ ಮೂಡಿಬರಬೇಕಾದ ಆತ್ಮವಿಶ್ವಾಸ.  ಇದನ್ನು ಅರ್ಥಮಾಡಿಕೊಳ್ಳದೆ ಮಹಿಳೆಯ ಸಬಲೀಕರಣ ಸಾಧ್ಯವಿಲ್ಲ.

ಎರಡನೆಯದಾಗಿ, ಬಾಹ್ಯ ಜಗತ್ತಿನಲ್ಲಿ ಕೆಲವು ಗುಣಗಳನ್ನು ನಂಬಿರುತ್ತೇವೆ.  ಆದರೆ ಅವು ಸ್ವಭಾವತಃ ಗುಣಗಳಲ್ಲ. ಅವು ಬಾಹ್ಯ ಜಗತ್ತಿನಲ್ಲಿ ಇರುವುದೂ ಇಲ್ಲ. ಅವುಗಳು ಕಾಲ್ಪನಿಕ ಪರಿಕಲ್ಪನೆಗಳು. ಈ ನಿಟ್ಟಿನಲ್ಲಿ ಮಹಿಳೆ ಸಮಾಜ ಪರಸ್ಪರ ಅರ್ಥೈಸುವಿಕೆಯ ಪರಿಧಿಯಲ್ಲಿ ಇರುವಂತಹದು. ತಿಳಿದುಕೊಳ್ಳುವವರು/ ತಿಳಿದು ಕೊಳ್ಳುವುದು….  ಇವೆರಡರ ಮಧ್ಯೆ ದೊಡ್ಡ ಕಂದಕವಿದೆ. ಇದನ್ನು ಅರ್ಥೈಸುವುದೇ ಗ್ನೇಯಾವರ್ಣ.

  1. ಮಹಿಳೆ ತನ್ನನ್ನು ತಾನು  ಅರ್ಥ ಮಾಡಿಕೊಂಡಿದ್ದಾಳೆ. ಚೈತನ್ಯ ತುಂಬಿದೆ.  ಆದರೆ ಸಮಾಜ ಅದನ್ನು ಸ್ವೀಕರಿಸಲು ತಯಾರಿಲ್ಲ.
  2. ಸಮಾಜ ಮಹಿಳೆಯ ಸಬಲೀಕರಣಕ್ಕೆ ಎಲ್ಲಾ ಅವಕಾಶಗಳನ್ನು ಕಲ್ಪಿಸಲು ಸಿದ್ಧವಾಗಿದೆ. ಆದರೆ ಮಹಿಳೆ ಸಿದ್ಧವಾಗಿಲ್ಲ. ಈ ಎರಡೂ ಸಂದರ್ಭದಲ್ಲಿಯೂ ಮಹಿಳೆಯ ಸಬಲೀಕರಣ ಸಾಧ್ಯವಿಲ್ಲ.            

ಆದ್ದರಿಂದ ಈ ಕೆಳಗಿನ ಮೂರೂ ಅಂಶಗಳು ಮಹಿಳೆಯರ ಸಬಲೀಕರಣದ ಆಧಾರ ಸ್ಥಂಭಗಳಾಗುತ್ತವೆ.             

  1. ಮಹಿಳೆ ತನ್ನನ್ನು ತಾನು ಹೇಗೆ ಪರಿಗಣಿಸುತ್ತಾಳೆ  (ಅವಳ ಬಗ್ಗೆ ಅವಳಿಗಿರುವ ಮನೋಭಾವ)
  2. ಸಮಾಜದ ಬಗ್ಗೆ ಮಹಿಳೆಯ ಮನೋಭಾವ.            
  3. ಮಹಿಳೆಯ ಬಗ್ಗೆ ಸಮಾಜದ ದೃಷ್ಟಿಕೋನ.                               

ಮಹಿಳೆ ತನ್ನನ್ನು ಅರ್ಥೈಸಿಕೊಂಡರೂ ಸಮಾಜ ಅದನ್ನು ಸ್ವೀಕರಿಸಲು ತಯಾರಿಲ್ಲದ ಪರಿಸ್ಥಿತಿಯಲ್ಲಿಯೂ ಯಾವುದೇ ಸಬಲೀಕರಣ ಸಾಧ್ಯವಿಲ್ಲ ಎಂದು ಬುದ್ಧ ಪ್ರತಿಪಾದಿಸುತ್ತಾನೆ. ಈ ಸಮಾಜ ತಲತಲಾಂತರದಿಂದ ಒಂದು ಸಾಂಪ್ರದಾಯಿಕ ಚೌಕಟ್ಟಿನಲ್ಲಿಯೇ ಮಹಿಳೆಯನ್ನು ನೋಡುವುದನ್ನು ನಂಬಿಕೊಂಡು ಬಂದಿದೆ. ಈ ದೃಷ್ಟಿಕೋನದಿಂದಲೇ ಮಹಿಳೆಯನ್ನು ಸ್ವೀಕರಿಸುವುದು ಕೂಡ. ಆದ್ದರಿಂದಲೇ ಮಹಿಳೆಯನ್ನು ಇಂಥವರ ತಾಯಿಯೆಂದೋ /  ಪತ್ನಿಯೆಂದೋ /  ಮಗಳೆಂದೋ /  ಪರಿಚಯಿಸುವುದು.  ಈ ಪಾತ್ರಗಳಿಲ್ಲದೆ  ಮಹಿಳೆಯ ಪರಿಚಯವೇ ದುಸ್ತರ. ಈ ಪಾತ್ರಗಳು ಅಥವಾ ಈ ಗುಣಗಳು ಅವಳಿಗೆ ಈ ಸಮಾಜದ ಸಂಪರ್ಕಕ್ಕೆ ಬಂದ ನಂತರವೇ ಬರುವುದು. ಜನ್ಮತಃ ಬಂದವುಗಳಲ್ಲ. ಹೇರಲ್ಪಟ್ಟವು. ಬಂಧುತ್ವದ ಸಂಬಂಧದ ಆಧಾರದ ಮೇಲೆ ನಿರ್ಧರಿತವಾಗುವ ಪರಿಚಯಗಳು ಜನ್ಮಾಪಿ ಗುಣಗಳಲ್ಲ. ನಂತರದಲ್ಲಿ ಅಗತ್ಯ ಲಕ್ಷಣಗಳು ಎಂದು ಘೋಷಿಸಲ್ಪಟ್ಟವುಗಳು. ಮಹಿಳೆ ಮತ್ತು ಪುರುಷರ ಮಧ್ಯೆ ಭಿನ್ನತೆ ತಂದಿಟ್ಟ ಈ ಸಾಮಾಜಿಕ ಮೌಲ್ಯಗಳು ಅವಳನ್ನು ಈ ಸಮಾಜದ ಪಾಲುದಾರಳೆಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಹಿಳೆಯ ಸ್ವಭಾವದ ಬಗ್ಗೆ ಸಮಾಜಕ್ಕೆ / ಪುರುಷನಿಗೆ ಇರುವ ತಪ್ಪು ಗ್ರಹಿಕೆಯೇ – ಗ್ನೇಯಾವರ್ಣ.  ‘ಇನ್ನು ಮಹಿಳೆಯ ಸಬಲೀಕರಣಕ್ಕೆ ಎಲ್ಲಾ ಅವಕಾಶ ಕಲ್ಪಿಸಲು ಸಮಾಜ ಸಿದ್ಧವಿದ್ದರೂ ಮಹಿಳೆ ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲ’ ಎನ್ನುವುದೂ ಕೂಡ ಸಬಲೀಕರಣ ಪ್ರಕ್ರಿಯೆಯಲ್ಲಿ ತುಂಬಾ ಮುಖ್ಯವಾಗುತ್ತದೆ.

ಬಾಲ್ಯದಿಂದಲೇ ಭಾರತ ನಾರೀ  ಸಂಸ್ಕೃತಿಯನ್ನು ರೂಢಿಸಿಕೊಳ್ಳುವುದು, ಅಂದರೆ ಪುರುಷ ರಕ್ಷಿಸುತ್ತಾನೆ ಅದಕ್ಕೆ ಪ್ರತಿಯಾಗಿ ಅವಳು ಸೇವೆ ಒದಗಿಸಬೇಕು. ಎಲ್ಲ ಕಾಲದಲ್ಲೂ ಅವನು ರಕ್ಷಣೆ ಮಾಡಿಕೊಂಡಿರಬೇಕು ಎನ್ನುವ ಸಂಸ್ಕೃತಿ,  ಸಾಮಾಜಿಕ ರೂಢೀಕರಣ ಅವಳನ್ನು ಹಾಗೆಯೇ ನಂಬಿಸಿದೆ. ಇನ್ನೊಂದು ಮುಖದಲ್ಲಿ ಸಂಪ್ರದಾಯ ಅವಳ ಮೇಲೆ ಹೇರುವ ದೃಷ್ಟಿಕೋನ ಕೂಡ. ಸಮಾಜದ ಬಗ್ಗೆ ಮಹಿಳೆಗಿರುವ ದೃಷ್ಟಿಯನ್ನೇ ‘ಧರ್ಮಾತ್ಮಯ ದೃಷ್ಟಿ’ ಎಂದಿರುವುದು.  ಅವಳ ಈ ದೃಷ್ಟಿಕೋನವೇ ಪುರುಷ ಮತ್ತು ಮಹಿಳೆಯರನ್ನು ಬೇರೆಬೇರೆಯಾಗಿ ವಿಂಗಡಿಸಿರುವುದು. ಈ ಸ್ಥಿತಿಯಲ್ಲಿರುವ ಮಹಿಳೆ ಸಮಾಜ ಅವಕಾಶವನ್ನು ಆಹ್ವಾನಿಸಿದರೂ ಸಾಂಪ್ರದಾಯಿಕ ಚೌಕಟ್ಟನ್ನು ಮುರಿಯಲು ಅನ್ಯಮನಸ್ಕಳಾಗಿರುತ್ತಾಳೆ. ಆ ಮನೋಭಾವವೇ ಅವಳನ್ನು ಹೀಗೆ ರೂಪಿಸಿದೆ.

ಈ ಮೇಲಿನ ಎರಡೂ ಗುಣಗಳೂ ಕೂಡ ಮನುಷ್ಯನ ಹುಟ್ಟಿನಿಂದ ಬಂದ ಗುಣಗಳಲ್ಲ.  ಇಬ್ಬರೂ ಈ ವಿಚಾರದಲ್ಲಿ ಅಪ್ರಜ್ಞರು, ನಾನೇ ರಕ್ಷಣೆ ಒದಗಿಸಬೇಕು, ಹಾಗೇ ಅವಳು ಸೇವೆ ಮಾಡಬೇಕು ಎನ್ನುವ ತಿಳುವಳಿಕೆ ಮಹಿಳಾ ಸಬಲೀಕರಣಕ್ಕೆ ಒಂದು ದೊಡ್ಡ ತೊಡರಾಗುತ್ತದೆ. ಹೀಗೆ ಮಹಿಳೆಯ ಸಬಲೀಕರಣ ಎನ್ನುವುದು ಬಹಳ ಸಂಕೀರ್ಣವಾದದ್ದು. ಹಾಗೆಯೇ ಮನೋಭಾವಗಳ, ಸಂಪ್ರದಾಯಗಳ, ಸಮಾಜದ, ಸಂಸ್ಕೃತಿಯ ಎಲ್ಲ ಮುಖಗಳಲ್ಲೂ ಅಡಗಿರುವಂತದ್ದು ಎನ್ನುವ ಸ್ಪಷ್ಟತೆಯನ್ನು ಬುದ್ಧ ಎಳೆಎಳೆಯಾಗಿ ಬಿಡಿಸುತ್ತಾ ನಿರೂಪಿಸಿದ್ದಾನೆ. ಈ ವಿಚಾರಗಳು ಲಿಂಗಸಮಾನತೆಯ ಆಶಯಗಳಿಗೆ, ಆ ನಿಟ್ಟಿನ ಚಳವಳಿಗಳಿಗೆ ಅತ್ಯಗತ್ಯವಾದ ಸೂತ್ರಗಳಾಗಿವೆ.    

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು