ಈ ಲೇಖನ ಎರಡು ಮೂರು ಪ್ರಶ್ನೆಗಳ ಸುತ್ತ ಇದೆ.
1. ಸುಮಾರು 70 ವರ್ಷಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಬಡವರ ಅಭಿವೃದ್ಧಿ ಭರವಸೆ ನೀಡಿ ಅಧಿಕಾರಕ್ಕೇರುತ್ತಿವೆ. ಆದರೆ ಇವತ್ತು ಕೂಡ ನಮ್ಮಲ್ಲಿ ಬಡತನ ನಿವಾರಣೆ ಆಗಿಲ್ಲ ಮತ್ತು ಕೋವಿಡ್ ನಂತರ ಬಡವರ ಸಂಖ್ಯೆ ಇನ್ನೂ ಹೆಚ್ಚಾಗಿದೆ.
2. ಬಡವರ ಅಭಿವೃದ್ಧಿಯೇ ಮುಖ್ಯ ಅಜೆಂಡಾ ಆಗಿರುವ ಸಂದರ್ಭದಲ್ಲೂ ಬಡತನ ಏಕೆ ನಿವಾರಣೆ ಆಗಿಲ್ಲ ಎನ್ನುವುದು ಎರಡನೇ ಪ್ರಶ್ನೆ.
3. ಬಡವರ ಅಭಿವೃದ್ಧಿ ಆಗಬೇಕಾದರೆ ಏನು ಮಾಡಬೇಕು ಎನ್ನುವುದು 3ನೇ ಪ್ರಶ್ನೆ
ರಾಜಕೀಯ ಪಕ್ಷಗಳ ಉದ್ದೇಶ
1. ಎಲ್ಲ ರಾಜಕಿಯ ಪಕ್ಷಗಳ ಉದ್ದೇಶ ಬಡವರ ಅಭಿವೃದ್ಧಿ. ಯಾವುದೇ ಪಕ್ಷ ಕೂಡ ತನ್ನ ಚುನಾವಣಾ ಪ್ರಚಾರದಲ್ಲಿ ಅಥವಾ ಪ್ರಣಾಳಿಕೆಯಲ್ಲಿ ಶ್ರೀಮಂತರ ಅಭಿವೃದ್ದಿ ತಮ್ಮ ಪಕ್ಷದ ಗುರಿ ಎಂದು ಹೇಳುವುದಿಲ್ಲ.
2. ಎಲ್ಲ ಮಾಧ್ಯಮಗಳಲ್ಲೂ ಬಡವರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳೇ ಚರ್ಚಿಸಲ್ಪಡುತ್ತಿವೆ.
3. ಇವೆಲ್ಲವನ್ನು ಬಡಜನರು ನಂಬಿದ್ದಾರೆ. ಆದುದರಿಂದಲೇ ರಾಜಕೀಯ ನಾಯಕರು ಸತ್ತಾಗ ಬಡವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಬಡವರ ಅಭಿವೃದ್ಧಿ ಆಗಿಲ್ಲ ಎಂದು ಹೇಗೆ ಹೇಳುವುದು?
ಉದ್ಯೋಗ ಇಲ್ಲದಿರುವುದು, ಆದಾಯ ಇಲ್ಲದಿರುವುದು, ವಸತಿ ಇಲ್ಲದಿರುವುದು, ಊಟಕ್ಕಿಲ್ಲದಿರುವುದು, ಆರೋಗ್ಯ ಇಲ್ಲದಿರುವುದು, ಶಿಕ್ಷಣ ಇಲ್ಲದಿರುವುದು.
4. ಬಡತನದ ಲೆಕ್ಕಾಚಾರ – 2011 ನಂತರ ಬಡತನದ ಲೆಕ್ಕಾಚಾರ ನಡೆದಿಲ್ಲ. ಈಗ ಬಡತನ ರೇಖೆಯನ್ನು ತೀರ್ಮಾನ ಮಾಡುವ ಆದಾಯ ಗ್ರಾಮೀಣ ಪ್ರದೇಶದಲ್ಲಿ ತಲಾ ಮಾಸಿಕ ರೂ. 1059 ಮತ್ತು ನಗರ ರೂ.1286. 5 ಜನರ ಒಂದು ಕುಟುಂಬದ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ. 5295, ವಾರ್ಷಿಕ ರೂ. 63540. ನಗರ ಪ್ರದೇಶದಲ್ಲಿ ರೂ. 6430, ವಾರ್ಷಿಕ ರೂ. 77160. ಕರ್ನಾಟಕದಲ್ಲಿ ಬಡತನ ರೇಖೆ ಆದಾಯ ಮಾಸಿಕ ತಲಾ ಕುಟುಂಬದ ಆದಾಯ ರೂ. 10 ಸಾವಿರಕ್ಕಿಂತ ಕಡಿಮೆ ಇರುವುದು, 5 ಎಕರೆಗಿಂತ ಕಡಿಮೆ ಭೂಮಿ, ಟೂ ವೀಲರ್ ಟಿವಿ, ಫ್ರಿಡ್ಜ್ ಇಲ್ಲದಿರುವುದು. ವರ್ಲ್ಡ್ ಬ್ಯಾಂಕ್ ಲೆಕ್ಕಾಚಾರದ ಪ್ರಕಾರ 2019ರಲ್ಲಿ ಭಾರತದ ಬಡವರ ಸಂಖ್ಯೆ 36.4 ಕೋಟಿ ಅಥವಾ ಜನಸಂಖ್ಯೆಯ ಶೇ. 28. 2020ರ ಕೋವಿಡ್ ನಂತರ ವಿಶ್ವಬ್ಯಾಂಕ್ ಪ್ರಕಾರ 15 ಕೋಟಿಯಷ್ಟು ಜನರ ಆದಾಯ ಬಡತನ ರೇಖೆಯಿಂದ ಕೆಳಗೆ ಇಳಿದಿರಬಹುದು. ಅಂದರೆ ಹೆಚ್ಚು ಕಡಿಮೆ 51 ಕೋಟಿಯಷ್ಟು ಜನರು ಬಡವರಿದ್ದಾರೆ. ಮೂರನೇ ಒಂದಕ್ಕಿಂತಲೂ ಹೆಚ್ಚಿನ ಸಂಖ್ಯೆಯಷ್ಟು ಜನರು ಬಡವರು.
5. ಉದ್ಯೋಗ – 2018ರ ಮಾರ್ಚ್ 31ರಂದು ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸುದ್ಧಿ ನಮ್ಮ ನಿರುದ್ಯೋಗ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಉದಾಹರಣೆ. ರೈಲ್ವೇ ಇಲಾಖೆ ಖಾಲಿ ಇರುವ 90,000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿತ್ತು. 90,000 ಹುದ್ದೆಗಳಿಗೆ 2.8 ಕೋಟಿ ಅರ್ಜಿಗಳು ಬಂದವು. ಅಂದರೆ ಒಂದು ಹುದ್ದೆಗೆ 311 ಅರ್ಜಿಗಳು. ಎಂಬಿಎ, ಎಂಜಿನೀಯರ್, ಸ್ನಾತಕೋತ್ತರ ಪದವೀಧರರು ಅರ್ಜಿ ಹಾಕಿದರು. ಹಾಗೆ ನೋಡಿದರೆ ಇದು ಸಾಮಾನ್ಯ ಉದಾಹರಣೆ. ಏಕೆಂದರೆ ಹಲವು ಬಾರಿ ಒಂದೆರಡು ಹುದ್ದೆಗಳಿಗೆ ಹಲವು ಸಾವಿರ ಅರ್ಜಿಗಳು ಬಂದ ಉದಾಹಣೆಗಳು ಇವೆ. ಅಟೆಂಡರ್, ಕ್ಲಾರ್ಕ್ ಇತ್ಯಾದಿ ಸಣ್ಣಪುಟ್ಟ ಸಂಬಳದ ಹುದ್ದೆಗಳಿಗೆ ಅತ್ಯುನ್ನತ ಶೈಕ್ಷಣಿಕ ಆರ್ಹತೆ ಹೊಂದಿದವರು ಅರ್ಜಿ ಹಾಕುವುದು ಇಂದು ಸಾಮಾನ್ಯವಾಗಿದೆ.
ಜನಸಂಖ್ಯೆ ಮತ್ತು ಉದ್ಯೋಗಿಗಳ ಅನುಪಾತ ನಿರುದ್ಯೋಗದ ಮತ್ತೊಂದು ಮುಖವನ್ನು ಪರಿಚಯಿಸುತ್ತದೆ. ಪ್ರತಿ 100 ಜನಸಂಖ್ಯೆಗೆ ಅಮೆರಿಕಾದಲ್ಲಿ 60, ಇಂಗ್ಲೆಂಡ್‍ಲ್ಲಿ 61, ನಮ್ಮ ನೆರೆ ದೇಶ ಬಾಂಗ್ಲಾದಲ್ಲಿ 56, ಚೈನಾದಲ್ಲಿ 41 ಇದ್ದರೆ ನಮ್ಮಲ್ಲಿ ಕೇವಲ 35 ಮಂದಿ ಉದ್ಯೋಗಿಗಳಿದ್ದಾರೆ.
6. ಆದಾಯ – ಉದ್ಯೋಗಿಗಳಲ್ಲಿ ಬಹುತೇಕರು ಸ್ವಉದ್ಯೋಗಿಗಳು ಅಥವಾ ಸೆಲ್ಪ್ ಎಂಪ್ಲಾಯ್ಡ್. ಶೇ. 50 ಸೆಲ್ಪ್ ಎಂಪ್ಲಾಯ್ಡ್, ಶೇ. 32 ದಿನಗೂಲಿ ಕೆಲಸಗಾರರು, ಶೇ. 4 ಕಾಂಟ್ರಾಕ್ಟ್ ಕೆಲಸಗಾರರು ಮತ್ತು ಶೇ. 17 ಮಾತ್ರ ಸಂಬಳಕ್ಕೆ ದುಡಿಯುವ ನೌಕರರು. ಹೆಚ್ಚು ಕಡಿಮೆ ಶೇ. 83ರಷ್ಟು (ಸೆಲ್ಪ್ ಎಂಪ್ಲಾಯ್ಡ್, ದಿನಗೂಲಿ ನೌಕರರು ಮತ್ತು ಕಾಂಟ್ರಾಕ್ಟ್ ಕೆಲಸಗಾರರು) ಅಸಂಘಟಿತ ಕೆಲಸಗಾರರು. ಅಂದರೆ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವವರು. ಏಳನೇ ವೇತನ ಆಯೋಗ 2015ರಲ್ಲಿ ರೂ.18,000 ಕನಿಷ್ಠ ವೇತನ ಇರಬೇಕೆಂದು ಘೊಷಿಸಿದೆ. ಆದರೆ ನಮ್ಮಲ್ಲಿ ಇದೇ ಸಂದರ್ಭದಲ್ಲಿ ಉದ್ಯೋಗದಲ್ಲಿರುವ ಶೇ. 82ರಷ್ಟು ಪುರುಷ ಉದ್ಯೋಗಿಗಳ ಮತ್ತು ಶೇ.92ರಷ್ಟು ಮಹಿಳಾ ಉದ್ಯೋಗಿಗಳ ತಿಂಗಳ ಸಂಬಳ ರೂ.10000 ಕ್ಕಿಂತ ಕಡಿಮೆ ಇದೆ. 2017ರಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವವರ ಕೂಲಿ ರೂ. 255 ಮತ್ತು ಸ್ವ ಉದ್ಯೋಗಿಗಳ ಆದಾಯ ರೂ. 276. ಇದು ನ್ಯಾಶನಲ್ ಮಿನಿಮಮ್ ವೇಜಸ್ 375 ಗಿಂತ ತುಂಬಾ ಕಡಿಮೆ ಇದೆ.
7. ಊಟಕ್ಕಿಲ್ಲದಿರುವುದು – ಶೇ.15ರಷ್ಟು ಜನರು ಇವತ್ತು ಕೂಡ ಒಂದು ಹೊತ್ತಿನ ಉಟ ಮಿಸ್ ಮಾಡಿಕೊಳ್ಳುತ್ತಾರೆ. ಗ್ಲೋಬಲ್ ಹಂಗರ್ ಇಂಡೆಕ್ಸ್ ಆಹಾರದ ಕೊರತೆಯನ್ನು ಮಾಪನ ಮಾಡುತ್ತದೆ. 2020ರ ಗ್ಲೋಬಲ್ ಹಂಗರ್ ಇಂಡೆಕ್ಸ್ ಪ್ರಕಾರ ಪ್ರಪಂಚದ 104 ದೇಶಗಳಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ಅಂದರೆ ಅತಿಯಾದ ಆಹಾರದ ಕೊರತೆಯನ್ನ ಅನುಭವಿಸುತ್ತಿದೆ. ನಮ್ಮ ನೆರೆ ದೇಶಗಳು ಆಹಾರ ಭದ್ರತೆ ಒದಗಿಸುವಲ್ಲಿ ಹೆಚ್ಚಿನ ಸಾಧನೆ ಮಾಡಿವೆ. ನೇಪಾಳ 73, ಪಾಕಿಸ್ಥಾನ 88, ಬಾಂಗ್ಲಾ 75, ಇಂಡೋನೇಶಿಯಾ 70ನೇ ಸ್ತಾನ. ಕೇವಲ 13 ದೇಶಗಳು ಮಾತ್ರ ನಮಗಿಂತ ಕೆಟ್ಟ ಸ್ಥಿತಿಯಲ್ಲಿವೆ.
8. ಆರೋಗ್ಯ – ಶೇ.51ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಶೇ.38ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 58ರಷ್ಟು ಗಂಡು ಮಕ್ಕಳು ಮತ್ತು ಶೇ. 50ರಷ್ಟು ಹೆಣ್ಣು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಶೇ. 24ರಷ್ಟು ಪುರುಷರು ಮತ್ತು ಶೇ. 23ರಷ್ಟು ಮಹಿಳೆಯರು ಕಡಿಮೆ ತೂಕ ಇದ್ದಾರೆ.
9. ಶಿಕ್ಷಣದ ಕೊರತೆ – ಶೇ. 70, 80 ಲಿಟರಸಿ ರೇಟ್ ಸರಕಾರಿ ಅಂಕಿಅಂಶಗಳು ತೋರಿಸುತ್ತವೆ. ಲಿಟರಸಿ ರೇಟ್ ಅಂದರೆ ಓದಲು, ಬರೆಯಲು ಬರುವವರು ಎನ್ನುವ ಅರ್ಥ. ಇವರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರೆಷ್ಟು, ಪ್ರೌಢ ಶಾಲಾ ಶಿಕ್ಷಣ ಪಡೆದವರೆಷ್ಟು, ಉನ್ನತ ಶಿಕ್ಷಣ ಪಡೆದವರೆಷ್ಟು ಎನ್ನುವುದು ತಿಳಿಯುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ದೊಡ್ಡ ಬುದ್ದಿವಂತಿಕೆ ಬೇಕಿಲ್ಲ. ಒಂದು ಜಿಲ್ಲೆಯಲ್ಲಿರುವ ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ನೋಡಿದರೆ ಸಾಕು.
ಏಕೆ ಬಡವರ ಅಭಿವೃದ್ಧಿ ಆಗಿಲ್ಲ?
1. ಬಡತನವನ್ನ ಅರ್ಥಮಾಡಿಕೊಳ್ಳುವ ಸಮಸ್ಯೆ – ಒಂದು, ಬಡತನದ ಲಕ್ಷಣಗಳನ್ನು ಕಾರಣಗಳೆಂದು ಪರಿಗಣಿಸುವುದು
2. ಬಡತನವನ್ನು ವ್ಯಕ್ತಿಗತ ಸಮಸ್ಯೆಯಾಗಿ ನೋಡುವುದು ಅಥವಾ ಬಡತನಕ್ಕೆ ಬಡವರನ್ನೇ ಕಾರಣ ಮಾಡುವುದು
3. ಅನುಕೂಲಸ್ಥರ ಪರ ಅಭಿವೃದ್ಧಿ ನೀತಿಗಳು
ಅನುಕೂಲಸ್ಥಪರ ಅಭಿವೃದ್ಧಿ ನೀತಿಗಳು –
ಅ) ತೆರಿಗೆ ನೀತಿ – ದೇಶವೊಂದು ತನ್ನ ಹೆಚ್ಚಿನ ಆದಾಯವನ್ನು ನೇರ ತೆರಿಗೆಯಿಂದ ಸಂಗ್ರಹಿಸುವುದನ್ನು ನಾವು ಪ್ರಗತಿಪರ ತೆರಿಗೆ ನೀತಿ ಎನ್ನುತ್ತೇವೆ. ಅದೇ ರೀತಿ ದೇಶವೊಂದು ತನ್ನ ಆದಾಯವ ಬಹುಪಾಲನ್ನು ಪರೋಕ್ಷ ತೆರಿಗೆಯಿಂದ ಸಂಗ್ರಹಿಸುವುದನ್ನು ರಿಗ್ರೆಸಿವ್ ಟ್ಯಾಕ್ಸ್ ಪಾಲಿಸಿ ಎನ್ನುತ್ತೇವೆ. ಭಾರತದ ಕೇಂದ್ರ ಮತ್ತು ರಾಜ್ಯ ಸರಕಾರಗಳ ತೆರಿಗೆ ನೀತಿ ಹಿಂದಿನಿಂದಲೂ ರಿಗ್ರೆಸಿವ್ ಆಗಿತ್ತು. ಅಂದರೆ ದೇಶದ ಆದಾಯದ ಬಹುಪಾಲು ಪರೋಕ್ಷ ತರಿಗೆಯಿಂದಲೇ ಬರುತ್ತಿದೆ. 2009-10ರಲ್ಲಿ ಶೇ. 56 ಪರೋಕ್ಷ ತೆರಿಗೆ ಸಂಗ್ರಹ ಇತ್ತು. 2013-14ರಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಶೇ. 60ಕ್ಕೆ ಏರಿದೆ. 2018-19ರಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಶೇ. 62ಕ್ಕೆ ಏರಿದೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ನೋಡಿದರೆ ಸರಕಾರಗಳು ಬಡವರನ್ನು ಹೇಗೆ ಸುಲಿಗೆ ಮಾಡುತ್ತಿವೆ ಎನ್ನುವುದು ಇನ್ನೂ ಹೆಚ್ಚು ಸ್ಪಷ್ಟವಾಗಬಹುದು. ರಾಜ್ಯ ಮತ್ತು ಕೇಂದ್ರ ಸರಕಾರಗಳ ತೆರಿಗೆ ಪೆಟ್ರೋಲ್ ಬೆಲೆಯ ಶೇ. 64ರಿದ್ದರೆ ಡಿಸೇಲ್ ಮೇಲೆ ಶೇ. 63ರಷ್ಟಿದೆ. ಕೇಂದ್ರ ಸರಕಾರ ಸಂಗ್ರಹ ಮಾಡುವ ಸೆಂಟ್ರಲ್ ಎಕ್ಸ್‍ಸೈಸ್ ಶೇ.70ಕ್ಕಿಂತಲೂ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳಿಂದ ಬಂದರೆ ಶೇ. 24ರಷ್ಟು ಪರೋಕ್ಷ ತೆರಿಗೆ ಇದೇ ಉತ್ಪನ್ನದಿಂದ ಬರುತ್ತಿದೆ.
ಆ) ಕೃಷಿ/ಉದ್ದಿಮೆಗಳ ಅಭಿವೃದ್ಧಿ ನೀತಿ – ಸರಕಾರಿ ಸಲವತ್ತು ಬಂಡವಾಳ ವಿನಿಯೋಜನೆ ಮೇಲೆ ಅವಲಂಬಿತ. 1 ಕೋಟಿಗಿಂತ ಕಡಿಮೆ ವಿನಿಯೋಜನೆ ಮೈಕ್ರೋ ಎಂಟರ್ ಪ್ರೈಸಸ್, 1-10 ಕೋಟಿ ಸಣ್ಣ, 10-20 ಕೋಟಿ ಮಧ್ಯಮ, 20ಕ್ಕಿಂತ ಹೆಚ್ಚು ಕೋಟಿ ದೊಡ್ಡ ಉದ್ದಿಮೆ. ಹೆಚ್ಚು ಹೂಡಿಕೆ ಹೆಚ್ಚು ಕಡಿಮೆ ಬಡ್ಡಿ ಸಾಲ ಮತ್ತು ಇತರ ಸರಕಾರಿ ಸಾಲಗಳು. ಒಂದು ವೇಳೆ ಇದೇ ಸರಕಾರಿ ಸವಲತ್ತನ್ನು ಹೂಡಿಕೆ ಬದಲು ಉದ್ಯೋಗ ಸೃಷ್ಟಿ ಮೇಲೆ ಸರಕಾರ ಕೊಡುತ್ತಿದ್ದರೆ ನಮ್ಮ ಸಾರ್ವಜನಿಕ ಸಂಪನ್ಮೂಲ ಕೆಲವರಲ್ಲೇ ಕ್ರೋಢೀಕರಣಗೊಳ್ಳುವ ಬದಲು ಎಲ್ಲರಿಗೂ ಹಂಚಲ್ಪಡುತಿತ್ತು ಮತ್ತು ಎಕನಾಮಿ ಕೂಡ ಎಫಿಶಿಯಂಟ್ ಆಗಿ ನಡೆಯಬಹುದಿತ್ತು.
ಇ) ಕಾರ್ಮಿಕ ನೀತಿ – ತೊಂಬತ್ತರ ನಂತರ ಕಾರ್ಮಿಕ ನೀತಿ ಸತತ ಸಡಿಲಗೊಳ್ಳುತ್ತಿದೆ. ಹೊರಗುತ್ತಿಗೆ, ಗುತ್ತಿಗೆ, ತಾತ್ಕಾಲಿಕ ಹೀಗೆ ಹಲವು ಅನಧಿಕೃತ ಅಥವಾ ಅಸಂಘಟಿತ ಕಾರ್ಮಿಕರನ್ನು ಸೃಷ್ಟಿಸುವ ಕಾಯಿದೆಗಳನ್ನು ಸರಕಾರ ಜಾರಿ ತರುತ್ತಲೇ ಇದೆ. ಇದರಿಂದಾಗಿ ಶೇ. 94ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಅಸಂಘಟಿತ ಅಂದರೆ ಸಂಬಳ, ಉದ್ಯೋಗ, ಸಾಮಾಜಿಕ ಭದ್ರತೆ ಇಲ್ಲದೆ ಕಾರ್ಮಿಕರು. ಇವರಲ್ಲಿ ಬಹುತೇಕರು (ಶೇ.50) ಸ್ವಉದ್ಯೋಗಿಗಳು.
ಈ) ಸಾಲ ನೀತಿ – ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳು ನೀಡುವ ಸಾಲಗಳಲ್ಲಿ ಶೇ. 40ನ್ನು ಆದ್ಯತಾ ವಲಯಕ್ಕೆ ನೀಡಬೇಕೆನ್ನುವ ನೀತಿ ಇದೆ. ಈ ಶೇ. 40ರಲ್ಲಿ ಶೇ. 18 ಕೃಷಿಗೆ, ಶೇ. 7.5 ಸಣ್ಣಪುಟ್ಟ ವ್ಯಾಪಾರ ಉದ್ದಿಮೆಗಳಿಗೆ, ಶೇ.12 ಬಡತನ ನಿವಾರಣ ಕಾರ್ಯಕ್ರಮಗಳಿಗೆ. ಇವರೆಲ್ಲರನ್ನು ಸೇರಿಸಿದರೆ ಶೇ. 90ರಷ್ಟು ಜನರು ಶೇ.40ರಷ್ಟು ಬ್ಯಾಂಕ್ ಸಾಲವನ್ನು ಹಂಚಿಕೊಳ್ಳಬೇಕು. ಉಳಿದ ಶೇ. 10ರಷ್ಟು ಜನರ ಶೇ. 60 ಬ್ಯಾಂಕ್ ಸಾಲವನ್ನು ಬಳಸಿಕೊಳ್ಳುತ್ತಾರೆ.
1) ಕೆಟ್ಟ ಸಾಲಗಳು – ನಾನು ಕೆಟ್ಟ ಸಾಲ, ಎನ್‍ಪಿಎಗಳ ನಡುವಿನ ಟೆಕ್ನಿಕಲ್ ಭಿನ್ನತೆಗಳನ್ನು ಚರ್ಚಿಸಲು ಹೋಗುವುದಿಲ್ಲ. ಆರ್‍ಬಿಐ ಮೂಲಗಳ ಪ್ರಕಾರ 2015ನೇ ಹಣಕಾಸು ವರ್ಷದ ಕೊನೆ ವೇಳೆಗೆ ಸರಕಾರಿ ವಾಣಿಜ್ಯ ಬ್ಯಾಂಕ್‍ಗಳು ನೀಡಿದ ಒಟ್ಟು ಸಾಲ ರೂ.76.6 ಲಕ್ಷ ಕೋಟಿಗಳು. ಇದರಲ್ಲಿ ರೂ. 3.22 ಲಕ್ಷ ಕೋಟಿಗಳಷ್ಟು (ಶೇ.4.2) ಮರುಸಂದಾಯವಾಗದಿರುವ ಸಾಲ. 2017ರ ವೇಳೆಗೆ ಕೆಟ್ಟ ಸಾಲದ ಮೊತ್ತ ರೂ. 7 ಲಕ್ಷ ಕೋಟಿಗಳನ್ನು ಮೀರಿದೆ (ಶೇ.9). ಆರ್‍ಬಿಐಯ ಫಿನಾನ್ಸಿಯಲ್ ಸ್ಟೆಬಿಲಿಟಿ ರಿಪೋರ್ಟ್ ಪ್ರಕಾರ ಸೆಪ್ಟಂಬರ್ 2021ರ ವೇಳೆಗೆ ಎನ್‍ಪಿಎ ಮೊತ್ತ ಶೇ.13.5ರಷ್ಟಕ್ಕೆ ಏರಲಿದೆ.
2) ಬಾಕಿ ಇಟ್ಟವರು ಯಾರು? – ಸಾಲ ಬಾಕಿ ಇಟ್ಟವರಲ್ಲಿ ಅನುಕೂಲಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆರ್‍ಬಿಐ ಮೂಲಗಳ ಪ್ರಕಾರ ಮಾರ್ಚ್ 2015ರ ವೇಳೆಗೆ ಒಟ್ಟು ಸಾಲ ಬಾಕಿ ಇಟ್ಟವರಲ್ಲಿ 5 ಕೋಟಿಗಿಂತ ಹೆಚ್ಚು ಸಾಲ ಬಾಕಿ ಇಟ್ಟವರು ಶೇ.74ರಷ್ಟಿದ್ದರೆ ಸೆಪ್ಟಂಬರ್ 2015ರ ವೇಳೆಗೆ ಇವರ ಸಂಖ್ಯೆ ಶೇ.87ಕ್ಕೆ ಏರಿದೆ. 2018ರಲ್ಲಿ ಒಟ್ಟು ಕೆಟ್ಟ ಸಾಲದ ಮೊತ್ತು ರೂ. 9.62 ಲಕ್ಷ ಕೋಟಿ. ಕೆಟ್ಟ ಸಾಲಗಳಲ್ಲಿ ಸಿಂಹಪಾಲು ಇಂಡಸ್ಟ್ರಿಗಳದ್ದು – ಶೇ.73ರಷ್ಟು. ಶೇ. 9 ಕೃಷಿ ವಲಯದ್ದು, ಶೇ. 13 ಸೇವಾ ವಲಯದ್ದು. ಶೇ. 4 ಮಾತ್ರ ರಿಟೈಲ್ ಸಾಲ ಪಡೆದವರು. ಅಂದರೆ ಮನೆ, ಗಾಡಿ ಇತ್ಯಾದಿಗಳಿಗೆ ವ್ಯಕ್ತಿಗಳು ಪಡೆದ ಸಾಲ.
1) ಕೆಟ್ಟ ಸಾಲಗಳ ರಿಟ್ ಆಫ್ – 2008-14ರ ನಡುವೆ ರೂ. 32109 ಕೋಟಿ ಕೆಟ್ಟ ಸಾಲವನ್ನು ಬ್ಯಾಂಕ್‍ಗಳು ರಿಟ್ ಆಫ್ ಮಾಡಿವೆ. 2015-20ರ ನಡುವೆ 6.83 ಕೋಟಿಯಷ್ಟು ಕೆಟ್ಟ ಸಾಲವನ್ನು ಬ್ಯಾಂಕ್‍ಗಳು ರಿಟ್ ಆಫ್ ಮಾಡಿವೆ. ಒಟ್ಟು ರೂ. 7.15 ಲಕ್ಷ ಕೋಟಿ ಕೆಟ್ಟ ಸಾಲ ರಿಟ್ ಆಫ್ ಆಗಿದೆ.
2) ಬ್ಯಾಂಕ್ ಕ್ಯಾಪಿಟಲ್ ಇನ್‍ಫ್ಯಿಶನ್ – ಕೆಟ್ಟ ಸಾಲದಿಂದ ಕುಸಿದ ಬ್ಯಾಂಕ್‍ನ್ನು ಸುಧಾರಿಸಲು ಸರಕಾರ ರಿಕ್ಯಾಪಿಟಲೈಸೇಶನ್ ಮಾಡುತ್ತಿದೆ – 1985-86 ರಿಂದ 2019-20ರವರೆಗೆ ಸರಕಾರ ಒಟ್ಟು 4,16,816 ಕೋಟಿಯಷ್ಟು ತೆರಿಗೆ ಹಣವನ್ನು ಬ್ಯಾಂಕ್‍ಗಳಿಗೆ ತುಂಬಿದೆ. ಇದಕ್ಕೆ ಕೃಷಿ ಸಾಲ ಮನ್ನಾದ ಮೊತ್ತು ರೂ. 2.27 ಲಕ್ಷಗಳನ್ನು ಸೇರಿಸಿದರೆ 6,44,641 ಕೋಟಿಗಳಷ್ಟು ತೆರಿಗೆ ಹಣ.
3) ಕೆಟ್ಟ ಸಾಲ ರಿಟ್ ಆಫ್ ಮತ್ತು ಬ್ಯಾಂಕ್ ರಿಕ್ಯಾಪಿಟಲೈಸೇಶನ್ ಸೇರಿಸಿದರೆ ನಮ್ಮ ತೆರಿಗೆ ಹಣ ರೂ. 13.59 ಲಕ್ಷ ಕೋಟಿ ಅನುಕೂಲಸ್ಥರ ಕೆಟ್ಟ ಸಾಲ ತೀರಿಸಲು ಮತ್ತು ಅವರು ಮಾಡಿದ ಎನ್‍ಪಿಎ ಯಿಂದ ಕಂಗಾಲಾದ ಬ್ಯಾಂಕ್ ಸುಧಾರಣೆಗೆ ಬಳಕೆ ಆಗಿದೆ.
ಉ) ಶಿಕ್ಷಣ ನೀತಿ – ಶೇ. 75ಕ್ಕಿಂತಲೂ ಹೆಚ್ಚು ಪ್ರೊಫೆಶನಲ್ ಕಾಲೇಜುಗಳು ಖಾಸಗಿ ಕ್ಷೇತ್ರದಲ್ಲಿವೆ. ಜನರಲ್ ಎಜುಕೇಶನ್ ಶೇ. 70ರಷ್ಟು ಖಾಸಗಿ ವಲಯದಲ್ಲಿದೆ. ಇದರಿಂದಾಗಿ ಜನ ಉನ್ನತ ಶಿಕ್ಷಣದ ಮೇಲೆ ಆದಾಯದ ಗಣನೀಯ ಭಾಗವನ್ನು ಖರ್ಚು ಮಾಡಬೇಕಾಗಿದೆ. ಭಾರತದ ಗ್ರಾಮೀಣ ಭಾಗದಲ್ಲಿ ಕುಟುಂಬಗಳು ತಮ್ಮ ಆದಾಯದ ಶೇ. 15ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ. 18ರಷ್ಟನ್ನು ಉನ್ನತ ಶಿಕ್ಷಣದ ಮೇಲೆ ಖರ್ಚು ಮಾಡುತ್ತಾರೆ. ದಕ್ಷಿಣದ ರಾಜ್ಯಗಳಲ್ಲಿ ಇದು ಶೇ. 43 ಮತ್ತು ಶೇ. 38ರ ಪ್ರಮಾಣದಲ್ಲಿದೆ. (ದಿ ಟೈಮ್ಸ್ ಆಫ್ ಇಂಡಿಯಾ, 40% ಆಪ್ ಇನ್‍ಕಮ್ ಇನ್ ಸೌತ್ ಸ್ಟೇಟ್ಸ್ ಗೋಸ್ ಆನ್ ಹೈಯರ್ ಎಜುಕೇಶನ್, ಜೂನ್ 13, 2017)
ಊ) ಆರೋಗ್ಯ ನೀತಿ – ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ಅತ್ಯಂತ ಕನಿಷ್ಠ (ಶೇ.1) ವಿನಿಯೋಜಿಸುವುದರಿಂದ ಖಾಸಗಿ ಆಸ್ಪತ್ರೆಗಳು ಎಲ್ಲ ರಾಜ್ಯಗಳಲ್ಲೂ ಹೆಚ್ಚಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಜನ ದುಡಿಮೆಯ ಬಹುಭಾಗವನ್ನು ಖರ್ಚು ಮಾಡಬೇಕಾಗಿದೆ. ಜನ ತಮ್ಮ ಸ್ವಂತ ಜೇಬಿನಿಂದ ಆರೋಗ್ಯದ ಮೇಲೆ ಮಾಡುವ ಖರ್ಚು. ಶೇ.65ರಷ್ಟಿದೆ. ಒಂದು ವೇಳೆ ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ಜಿಡಿಪಿಯ ಶೇ.2-3ರಷ್ಟು ವಿನಿಯೋಜಿಸಿದರೆ ಜನ ಸ್ವಂತ ಜೇಬಿನಿಂದ ಕರ್ಚು ಮಾಡುವ ಮೊತ್ತ ಶೇ.30ಕ್ಕೆ ಇಳಿಯುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. (ದಿ ಹಿಂದೂ, ಸ್ಪೆಷಲ್ ಕರೆಸ್ಪೊಂಡೆಂಟ್, ಎಕನಾಮಿಕ್ ಸರ್ವೇ ಹೈ ಔಟ್ ಆಫ್ ಪೊಕೆಟ್ ಎಕ್ಸ್‍ಪೆನ್‍ಸಸ್ ಫಾರ್ ಹೆಲ್ತ್ ಕೇನ್ ಲೀಡ್ ಟು ಪಾವರ್ಟಿ, ಜನವರಿ 29, 2021)
ಎ) ಕೋವಿಡ್ ಸ್ಟಿಮ್ಯುಲಸ್ ಪ್ಯಾಕೇಜ್ – ಕೊರೋನದ ಮೊದಲನೇ ಅಲೆ ಹೊಡೆತದಿಂದ ಅರ್ಥ ವ್ಯವಸ್ಥೆಯನ್ನು ಪುನಶ್ಚೇತಗೊಳಿಸಲು 20 ಲಕ್ಷ ಕೋಟಿ, ಎರಡನೇ ಅಲೆಯಿಂದ ಸುಧಾರಿಸಲು 6.28 ಲಕ್ಷ ಕೋಟಿ ಪ್ಯಾಕೇಜ್‍ಗಳನ್ನು ಘೋಷಿಸಲಾಯಿತು. ಒಟ್ಟು 26 ಲಕ್ಷ ಕೋಟಿಗಳು. ಇದರಲ್ಲಿ ಶೇ. 90 ಕೂಡ ಲಿಕ್ಟಿಡಿಟಿ ಹೆಚ್ಚಿಸುವ ಕ್ರಮಗಳು. ಅಂದರೆ ಹಣದ ಪೂರೈಕೆ ಹೆಚ್ಚಿಸುವ ಕ್ರಮಗಳು. ಉತ್ಪಾದಕರಿಗೆ ಬ್ಯಾಂಕ್‍ಗಳು, ಎನ್‍ಬಿ ಎಫ್‍ಸಿಗಳು, ಹೌಸಿಂಗ್ ಫಿನಾನ್ಸಿಯಲ್ ಇನ್‍ಸ್ಟಿಟ್ಯುಶನ್‍ಗಳು, ಮೈಕ್ರೋ ಫಿನಾನ್ಸಿಯಲ್ ಇನಸ್ಟಿಟ್ಯುಶನಲ್‍ಗಳು ಸಾಲ ಕೊಡಬೇಕು. ಅವರು ನೀಡುವ ಸಾಲಕ್ಕೆ ಸರಕಾರಕ್ಕೆ ಗ್ಯಾರಂಟಿ ಕೊಡುತ್ತದೆ. ಅಂದರೆ ಸಾಲ ತೆಗೆದುಕೊಂಡವರು ಕಟ್ಟದಿದ್ದರೆ ಸರಕಾರಕ್ಕೆ ಕಟ್ಟುತ್ತದೆ. ಸರಕಾರ ಎಲ್ಲಿಂದ ಕಟ್ಟುತ್ತದೆ. ನಾವು ನೀವು ಕಟ್ಟಿದ ತೆರಿಗೆ ಹಣದಿಂದ ಕಟ್ಟುತ್ತದೆ.
ಬಡತನ ದೇವರ ಸೃಷ್ಟಿ ಅಲ್ಲ, ಮನುಷ್ಯರ ಸೃಷ್ಟಿ. ನಮ್ಮ ಸಾಮಾಜಿಕ ಆರ್ಥಿಕ ರಾಜಕೀಯ ಸಾಂಸ್ಕೃತಿಕ ಸಂಬಂಧಗಳು ಬಡತನವನ್ನು ಸೃಷ್ಟಿಸುತ್ತವೆ ಮತ್ತು ಮುಂದುವರಿಸುತ್ತವೆ. ಈ ಲೇಖನದಲ್ಲಿ ರಾಜಕೀಯ ಹೇಗೆ ಬಡತನ ಸೃಷ್ಟಿಸುತ್ತಿದೆ ಎನ್ನುವುದನ್ನು ವಿವರಿಸಿದ್ದೇನೆ. ಇದೇ ರೀತಿ ಸಾಮಾಜಿಕ ಹಾಗು ಸಾಂಸ್ಕೃತಿಕ ಬದುಕು ಕೂಡ ಬಡತನವನ್ನು ಮುಂದುವರಿಸುವುದರಲ್ಲಿ ತಮ್ಮದೇ ಕೊಡುಗೆ ನೀಡುತ್ತವೆ.
- ಪ್ರೊ. ಎಂ.ಚಂದ್ರಪೂಜಾರಿ, ಪ್ರಸಿದ್ಧ ಸಂಶೋಧಕರು ಮತ್ತು ವಿದ್ವಾಂಸರು
ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿ ಪ್ರೊ. ಎಂ.ಚಂದ್ರಪೂಜಾರಿ ಹೆಸರಾಗಿದ್ದಾರೆ. ಅವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.