ಬೆಂಗಳೂರು: ರೈತರ ಹೋರಾಟ ಆರಂಭವಾಗಿ ನವೆಂಬರ್ 26ಕ್ಕೆ ಎಂಟು ತಿಂಗಳಾಯ್ತು. ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ನಡೆಯುತ್ತಿದೆ ಎಂದು ಕೃಷಿ ಆರ್ಥಿಕ ತಜ್ಞ, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ ಕಮ್ಮರಡಿ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಬಂಧುತ್ವ ಬೆಳಕು-5 ವಿಶೇಷ ವೆಬಿನಾರ್ ಸರಣಿಯ ವಿಷಯ ಪ್ರಸಕ್ತ ಕೃಷಿ ಬಿಕ್ಕಟ್ಟು ಮತ್ತು ಪರಿಹಾರ ವಿಷಯದ ಕುರಿತು ಮಾತಾಡಿದ ಅವರು, ಕೃಷಿ ಬಿಕ್ಕಟ್ಟು ಎಂದರೆ ಕೃಷಿ ವಲಯದಲ್ಲಿ ಬಿಕ್ಕಟ್ಟು ಅಥವಾ ಕೃಷಿ ಉತ್ಪಾದನೆಯಲ್ಲಿ ಬಿಕ್ಕಟ್ಟು ಇದೆಯೋ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಂದರು.
2019-20ರಲ್ಲಿ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಕೋವಿಡ್ ಸಂದರ್ಭದಲ್ಲಿಯೂ ರೈತರ ದುಡಿಮೆ ನಿಂತಿಲ್ಲ. ರೈತ ಮಾತ್ರ ಕೈಕಟ್ಟಿ ಕೂರದೇ ಆಹಾರಕ್ಕೆ ಹಾಹಾಕಾರ ಆಗದಂತೆ ದುಡಿಯುತ್ತಿದ್ದಾನೆ. ಕೋವಿಡ್ ಸಂಕಷ್ಟದ ದಿನಗಳಲ್ಲಿಯೂ ನಷ್ಟದಲ್ಲಿ ರೈತ ಸಮುದಾಯ ನಲುಗಿದೆ. ಅವರಿಗೆ ಬೆಂಬಲ ಬೆಲೆ ಸಿಕ್ಕಿಲ್ಲ. ಸರಕಾರ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಂದನೆಯ ಕೆಲಸ ಮಾಡಲಿಲ್ಲ ಎಂದರು.
ರಾಜ್ಯ ಸರಕಾರ ಎಪಿಎಂಸಿ ನಿರ್ನಾಮ ಮಾಡಿದರೆ ಕೇಂದ್ರ ಸರಕಾರ ಯಾರಿಗೂ ಅರ್ಥವಾಗದ ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿತು. ಚರ್ಚೆಗೂ ಅವಕಾಶ ಕೊಡದೇ ಯಾವುದೋ ಕಾರ್ಪೋರೇಟ್ ಶಕ್ತಿಗಳ ಹುನ್ನಾರಕ್ಕೆ ಕಟ್ಟುಬಿದ್ದು ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ಬಿಕ್ಕಟ್ಟು ಸೃಷ್ಟಿಸಿವೆ ಎಂದರು.
ಹೈದರಾಬಾದಿನ ಪೌಷ್ಟಿಕತೆಗೆ ಸಂಬಂಧಿಸಿದ ಸಂಸ್ಥೆ ಮನುಷ್ಯ ನಿತ್ಯ ಕನಿಷ್ಠ 300 ಗ್ರಾಮ್ ತರಕಾರಿ ಸೇವಿಸಬೇಕು, 300 ಮಿಲೀ ಹಾಲು ಸೇವಿಸಬೇಕು ಎಂದು ಹೇಳಿದೆ. ದೇಶದ ರೈತ ಅಗತ್ಯಕ್ಕಿಂತ ಹೆಚ್ಚು ಉತ್ಪಾದಿಸುತ್ತಿದ್ದರೂ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ರೈತರು ಉತ್ಪಾದಿಸಿದ ಆಹಾರ ಧಾನ್ಯಗಳು ಭಾರತೀಯ ಆಹಾರ ಗೋದಾಮಿನಲ್ಲಿ ಬಿದ್ದು ಕೊಳೆಯುತ್ತಿವೆ. ಇಷ್ಟೆಲ್ಲ ರೈತ ದೇಶಕ್ಕೆ ನೀಡುತ್ತಿದ್ದರೂ ನಿತ್ಯ 27 ಜನ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದರು.
ಬಿಕ್ಕಟ್ಟು ರೈತರ ಆದಾಯ ಭದ್ರತೆಯಲ್ಲಿದೆಯೇ ಹೊರತು ಕೃಷಿ ರಂಗದಲ್ಲಿಲ್ಲ. ಬೇರೆ ಕ್ಷೇತ್ರದ ಜನರಂತೆ ರೈತರಿಗೆ ನಿಶ್ಚಿತ ಆದಾಯ ಭದ್ರತೆ ಇಲ್ಲ. ರೈತನಿಗೆ ತಾನು ಬೆಳೆಯುವುದಕ್ಕೆ ಸರಿಯಾದ ನಿಶ್ಚಿತ ಆದಾಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಮಾನ್ಸೂನ್ ಮತ್ತು ಮಾರುಕಟ್ಟೆ ಎರಡೂ ರೈತನಿಗೆ ಸಹಕಾರಿಯಾಗಿರುವುದಿಲ್ಲ. ಸಂಘಟಿತ ವಲಯದ ನೌಕರರಿಗೆ ಮಾಸಿಕ ಸಿಗುವ ಸಂಬಳದಂತೆ ರೈತನಿಗೆ ಯಾವ ನಿಶ್ಚಿತ ಆದಾಯವಿಲ್ಲ. ಅವರು ಬೆಳೆದ ಬೆಳೆಗೂ ಸರಿಯಾದ ಬೆಲೆ ಸಿಗುವುದಿಲ್ಲ. ಇಷ್ಟೆಲ್ಲ ಕೃಷಿ ಬಿಕ್ಕಟ್ಟು ಮತ್ತು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಯಾರೂ ಕೇಳದ ಕಾಯ್ದದೆಗಳನ್ನು ಸರಕಾರಗಳು ತರುತ್ತಿವೆ ಎಂದರು.
ರಾಜಕಾರಣಿಗಳು ರೈತರನ್ನು ಜಾತಿ ಹೆಸರಿನಲ್ಲಿ ನೋಡಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಇಂದು ರೈತ ಜಾಗೃತವಾಗುತ್ತಿದ್ದಾನೆ, ತಾನು ಜಾತಿಯ ಹೊರತಾಗಿ ರೈತ ಸಮುದಾಯ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ ಎಂದು ಅವರು ಕರೆನೀಡಿದರು.
ರೈತನಿಗೆ ನಾವು ಬೆಳೆಯುವುದನ್ನು ಕಲಿಸಬೇಕಾಗಿಲ್ಲ. ಆತ ಬೆಳೆದ ಬೆಳೆಗೆ ಸೂಕ್ತ ಬೆಲೆ ನಿರ್ಧಾರ ಮಾಡಬೇಕಷ್ಟೇ. ಹಾಲು, ಹಣ್ಣು, ತರಕಾರಿಗಳನ್ನು ರಸ್ತೆಗೆ ಸುರಿಯುವ ಅಮಾನವೀಯ ಪರಿಸ್ಥಿತಿ ಹೋಗಬೇಕು. ಕಾನೂನಿನ ನಿಯಂತ್ರಣದಿಂದ ಮಾತ್ರ ಬೆಂಬಲ ಬೆಲೆ ತರಲು ಸಾಧ್ಯ ಎಂದರು.
ಎಪಿಎಂಸಿ ರದ್ಧತಿಯಿಂದ ಏನೂ ಪ್ರಯೋಜನವಿಲ್ಲ. ಅದರಲ್ಲಿಯ ಸಮಸ್ಯೆಗಳನ್ನು ಸರಿಪಡಿಸಿ ಸುಧಾರಣೆ ಮಾಡಬೇಕಷ್ಟೇ. ಪಡಿತರ ವಿತರಣೆ, ಬಿಸಿಯೂಟ, ಅಂಗನವಾಡಿ, ಜೈಲು, ಇಂದಿರಾ ಕ್ಯಾಂಟೀನ್ ಇಂಥಲ್ಲಿ ಸರಕಾರವೇ ಹೆಚ್ಚು ರೈತರ ಉತ್ಪನ್ನಗಳನ್ನು ಬಳಸುವುದರಿಂದ ಬೆಂಬಲ ಬೆಲೆ ಸೂಚಿಸುವುದು ಕಷ್ಟವೇನಲ್ಲ ಎಂದರು.
ಬೆಂಬಲ ಬೆಲೆ ನೀಡುವುದು ಎಪಿಎಂಸಿ ಮೂಲಕ ಸಾಧ್ಯವಾಗುತ್ತದೆ. ಆದರೆ ಸರಕಾರ ಎಪಿಎಂಸಿ ನಿರ್ನಾಮ ಮಾಡುತ್ತಿದೆ. ರೈತ ಬೆಳೆದುದನ್ನು ಸರಿಯಾಗಿ ಖರೀದಿಸಿ ಹಂಚಿಕೆ ಮಾಡುವುದರಿಂದ ಅಪೌಷ್ಟಿಕತೆಯೇ ಇರುವುದಿಲ್ಲ. ಜೊತೆಗೆ ರೈತ ಸಮುದಾಯದ ಸಮಸ್ಯೆಗಳೂ ಪರಿಹಾರವಾಗುತ್ತವೆ. ರೈತ ಹೇಗೆ ಸಾಯುತ್ತಿದ್ದಾನೆ ಎಂಬ ಪ್ರಶ್ನೆಗಿಂತ ಹೇಗೆ ಬದುಕುತ್ತಿದ್ದಾನೆ ಎಂಬ ವಾಸ್ತವದ ಅಧ್ಯಯನ ಮಾಡಬೇಕಾಗಿದೆ ಎಂದರು.
ಸ್ವಾತಂತ್ರ್ಯಾನಂತರ ಭಾರತದ ಯಾವ ಸರಕಾರಗಳೂ ರೈತರ ಬಗ್ಗೆ ಸರಿಯಾಗಿ ಅಧ್ಯಯನ ಮಾಡಿಲ್ಲ. ಜಾತಿ ರಾಜಕಾರಣದಿಂದ ರೈತರ ಕಷ್ಟಗಳನ್ನು ಮರೆ ಮಾಡಲಾಗುತ್ತಿದೆ. ರೈತರ ಕೂಗು ರಾಜಕೀಯ ಕೂಗು ಆಗದ ಹೊರತು ಪರಿಹಾರ ಸಾಧ್ಯವಿಲ್ಲ ಎಂದರು.
ಪ್ರಶ್ನೆಗಳು:
1. ಕೇಂದ್ರ ಸರಕಾರ ರೈತ ಕಾಯ್ದೆಗಳನ್ನು ತಡೆ ಹಿಡಿಯುತ್ತೇವೆ, ಚರ್ಚೆಗೆ ಬನ್ನಿ ಎನ್ನುವಾಗ ಯಾಕೆ ಇದನ್ನು ರೈತರು ಉಪಯೋಗಿಸಿಕೊಳ್ಳಬಾರದು?
ಉತ್ತರ: ದೀರ್ಘಾವಧಿಯಿಂದ ಕಟ್ಟಿದ ಚಳುವಳಿ ತುಂಬಾ ದೂರ ಸಾಗಿ ಬಂದಿದೆ. ಈ ಸಮಯದಲ್ಲಿ ಅವರು ಸಾಕಷ್ಟು ಜನರನ್ನು ಕಳೆದುಕೊಂಡಿದ್ದಾರೆ. ಇಷ್ಟುಕಾಲ ಸರಕಾರಗಳು ಯಾವುದೇ ರೀತಿಯಲ್ಲಿ ಸರಿಯಾಗಿ ಸ್ಪಂದಿಸದೇ ಭ್ರಮನಿರಸನಗೊಳಿಸಿವೆ. ಹಾಗಾಗಿ ಪ್ರಭುತ್ವದ ಮೇಲೆ ರೈತರಿಗೆ ನಂಬಿಕೆ ಉಳಿದಿಲ್ಲ. ಇಷ್ಟು ದೊಡ್ಡ ಚಾರಿತ್ರಿಕ ಚಳುವಳಿ ಕಟ್ಟಿ ಹಿಂದೆ ಸರಿಯಲು ಅವರು ತಯಾರಿಲ್ಲ.
2. ಎಪಿಎಂಸಿ ನಾವೇನು ರದ್ಧತಿ ಮಾಡುತ್ತಿಲ್ಲ, ನಾವು ಸುಧಾರಣೆಗೆ ಒಂದು ಕೋಟಿ ಅನುದಾನ ಕೊಡುತ್ತೇವೆ ಎನ್ನುತ್ತಿದೆ ಸರಕಾರ, ಸ್ಪಷ್ಟೀಕರಣ ನೀಡಿ.
ಉತ್ತರ: ಶೇಕಡಾ 75 ಭಾಗ ವ್ಯವಹಾರ ಕಡಿಮೆ ಆಗಿದೆ. ದೊಡ್ಡ ಗೋದಾಮುಗಳಿವೆ, ಸಿಬ್ಬಂದಿಗಳಿದ್ದಾರೆ. 65% ಕಮಿಷನ್ ಬರುತ್ತೆ ಅದರಲ್ಲಿಯೂ ಕತ್ತರಿ ಹಾಕಿದರೆ ಅವರು ಹೇಗೆ ವ್ಯವಹಾರ ಮಾಡಬೇಕು. ಅಲ್ಲಿ ಯಾರೂ ಬರುವುದಿಲ್ಲ.
3. ಪ್ರಧಾನಿಗಳು ಇಂದಿಗೂ ರೈತ ನಾಯಕರೊಂದಿಗೆ ಮುಕ್ತ ಮಾತುಕತೆಗೆ ಬರುತ್ತಿಲ್ಲ ಯಾಕೆ?
ಉತ್ತರ: ಕೇವಲ ಕಾಯ್ದೆಗಳ ಪ್ರಶ್ನೆಯಲ್ಲ ಎಮ್.ಎಸ್.ಸ್ವಾಮಿನಾಥನ್ ವರದಿ ಕೂಡ ಅನುಷ್ಠಾನ ಮಾಡಬೇಕು. ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಜಾರಿಗೆ ತರಬೇಕು. ಸರಕಾರದ ವತಿಯಿಂದ ಪ್ರತಿನಿಧಿ ಬಂದರೂ ಚರ್ಚೆ ಫಲಪ್ರದವಾಗಿಲ್ಲ.