December 3, 2023 7:38 am

ಕೋವಿಡ್ ಮತ್ತು ಮೂಢನಂಬಿಕೆಗಳು

ಯಾವುದೇ ಧರ್ಮದವರ ರಕ್ತವನ್ನು ಯಾರಿಗಾದರೂ ಕೊಡಬಹುದು: ಡಾ.ಎಚ್.ಎಸ್.ನಿರಂಜನಾರಾಧ್ಯ

ಬೆಂಗಳೂರು: ಕೊರೊನಾ ಈಗ ಮಾತ್ರ ಬಂದಿರುವುದಲ್ಲ. ಸರಾಸರಿ 100 ವರ್ಷಕ್ಕೊಮ್ಮೆ ರೋಗಗಳು ಕಾಡಿವೆ. ಈಗ ಕೊರೊನಾ ರೂಪದಲ್ಲಿ ಬಂದಿದೆ ಎಂದು ವಿಜ್ಞಾನ ಚಿಂತಕ ಡಾ.ಎಚ್.ಎಸ್.ನಿರಂಜನಾರಾಧ್ಯ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯುತ್ತಿರುವ 10 ದಿನಗಳ ವೆಬಿನಾರ್ ಸರಣಿಯ 9ನೇ ದಿನ “ಕೋವಿಡ್ ಮತ್ತು ಮೂಢನಂಬಿಕೆಗಳು” ಮಂಡಿಸಿ ಮಾತಾಡಿದ ಅವರು, ಒಂದು ವಾದದ ಪ್ರಕಾರ, ಚೀನಾದಲ್ಲಿರುವ ವುಹಾನ್ ನಗರದಿಂದ ಉದ್ಭವವಾಯಿತು. ಕಾಡು ಪ್ರಾಣಿಗಳನ್ನು ಮಾರುವ ಮಾರುಕಟ್ಟೆ ಇದೆ. ಪ್ರಾಣಿಗಳಲ್ಲಿದ್ದ ವೈರಸ್ ಮನುಷ್ಯರಿಗೆ ಬಂದು ಪರಿವರ್ತನೆಯಾಗಿದೆ ಎಂದು ಹೇಳಲಾಗಿದೆ. ಎರಡನೆಯ ವಾದದ ಪ್ರಕಾರ ವುಹಾನ್ ನಲ್ಲೇ ಇರುವ ವೈರಸ್ ಅಧ್ಯಯನ ಕೇಂದ್ರದಲ್ಲಿ ಸಮಸ್ಯೆಯಾಗಿ ಕೊರೊನಾ ಉದ್ಭವಿಸಿದೆ. 3ನೇ ವಾದದ ಪ್ರಕಾರ, ಬಾವಲಿಯಲ್ಲಿ ಕೊರೊನಾಗೆ ಕಾರಣವಾದ ವೈರಸ್ ಇತ್ತು ಪರಿವರ್ತನೆಯಾಗಿ ಕೊರೊನಾಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಆದರೆ ಯಾವುದಕ್ಕು ಧೃಡವಾದ ದಾಖಲೆ ಸಿಕ್ಕಿಲ್ಲ ಎಂದರು.

ಜಗತ್ತಿನಲ್ಲಿ ಬಹುತೇಕ ಜನರಲ್ಲಿ ಮೂಢನಂಬಿಕೆ ಇರುತ್ತೆ. ತಾವು ನಂಬಿರುವುದನ್ನು ಮತ್ತೊಬ್ಬರನ್ನು ಕೊಲೆ ಮಾಡುವ ಮಟ್ಟಕ್ಕೂ ಹೋಗುತ್ತದೆ. ಆಧಾರ ರಹಿತ ಮೂಢನಂಬಿಕೆ ಇರುತ್ತದೆ. ಏಸು ಹೇಗೆ ಜನಿಸಿದರು, ನೀರಿನಿಂದ ವೈನ್ ತಯಾರಿಸುವುದು ಹೇಗೆ? ಎಂಬ ಪ್ರಶ್ನೆಗಳಿವೆ. ಆದರೆ, ಇದನ್ನು ಪ್ರಶ್ನಿಸುವವರ ಮೇಲೆ ದಾಳಿ ನಡೆಸುತ್ತಾರೆ. ಇಂತವರನ್ನು ಅಂಧಭಕ್ತರು ಎನ್ನುತ್ತೇವೆ ಎಂದರು.

ಮೂಢನಂಬಿಕೆಯ ಜನ ವಂಚನೆಗೆ ಒಳಗಾಗುತ್ತಾರೆ. ಮೋಸ ಮಾಡುವವರಿಗೆ ಇದೇ ಬಂಡವಾಳ. ಸಾಧ್ಯವಾದಷ್ಟು ಜನರನ್ನು ಇದರ ಒಳಗೆ ತರುತ್ತಾರೆ. ಮೂಢನಂಬಿಕೆಗಳನ್ನು ಹೊಂದಿದವರು ಬಲಿಯಾಗುತ್ತಾರೆ ಎಂದರು.

ಚೀನಾದಲ್ಲಿ ಪ್ರಾಣಿ, ಹುಳ ಹುಪಟ್ಟೆಗಳನ್ನು ತಿನ್ನುತ್ತಾರೆ ಆದ್ದರಿಂದ ಕೊರೊನ ಬಂತು ಎಂದು ಹೇಳಲಾಗುತ್ತದೆ. ಇದಕ್ಕೆ ಯಾವುದೇ ಆಧಾರವಿಲ್ಲ. ಕೊರೊನಾ ಓಡಿಲಸು ದೀಪ ಹಚ್ಚುವುದು, ಕ್ಯಾಂಡಲ್ ಹಚ್ಚುವುದು, ಲೈಟ್ ಆರಿಸುವದಕ್ಕೆ ಸಮರ್ಥನೆ ಮಾಡಲಾಯಿತು. ಆದರೆ, ಇದ್ಯಾವುದೂ ಸತ್ಯವಲ್ಲ ಎಂದರು.

ಡಿ.ಎನ್.ಎ ಜಗತ್ತಿನ ಎಲ್ಲ ಜನಾಂಗದ ಮೂಲದ ಕುರಿತು ಸಂಶೋಧನೆಗಳು ನಡೆದಿವೆ. ಯಾವುದೇ ಧರ್ಮದ ರಕ್ತವನ್ನು ಯಾರಿಗಾದರೂ ಕೊಡಬಹುದು. ಆದರೆ, ಗುಂಪು ಬೇರೆಯಾದರೆ ಅಣ್ಣ ತಮ್ಮನ ರಕ್ತವನ್ನು ಕೊಡಲಾಗುವುದಿಲ್ಲ. ಜಾತಿ, ಧರ್ಮ, ಪಂಗಡಗಳ ವಿಂಗಡಣೆ ಅನಗತ್ಯ ಎಂದರು.

ವಿವೇಕ ಇಲ್ಲದೇ ನಂಬುವ ಎಲ್ಲವೂ ಮೂಢನಂಬಿಕೆ ಆಗಿರುತ್ತವೆ. ಜನರ ಮುಗ್ದತೆಯನ್ನೇ ಬಂಡವಾಳವಾಗಿಸಿಕೊಳ್ಳುವ ಕೆಲ ಮೋಸಗಾರರು ಇದ್ದಾರೆ. ಸೂರ್ಯಕೇಂದ್ರ ವಾದವನ್ನು ವಿರೋಧಿಸಿದ ಗೆಲಿಲಿಯೋನನ್ನು ಹೇಗೆ ಜೀವಂತ ದಹನ ಮಾಡಿದರೋ ಹಾಗೆ ಯಾವುದೇ ಒಂದು ದೇಶದಲ್ಲಿ ಪ್ರಮುಖರು ರೂಢಿಸಿಕೊಂಡ ವಿಷಯಗಳನ್ನು ಅಲ್ಲಿಯ ಜನ ಅನುಸರಿಸುತ್ತಾರೆ ಎಂದರು.

ತಟ್ಟೆ ಬಾರಿಸುವುದು, ಜಾಗಟೆ ಬಾರಿಸುವುದು ಇವೆಲ್ಲ ಇದಕ್ಕೆ ಉದಾಹರಣೆ. ಭಯವೇ ನಮ್ಮನ್ನು ಅತೀಂದ್ರಿಯ ಶಕ್ತಿಗಳಿಗೆ ಮೊರೆ ಹೋಗುವಂತೆ ಮಾಡುತ್ತದೆ. ಮಂತ್ರ ಉಚ್ಚಾರಣೆ, ಪಾದ ಚುಂಬನ, ಯಜ್ಞ ಯಾಗಾದಿ, ಸಾರಾಯಿ ಸೇವನೆ, ಕೊರೋನಾ ಮಾರಮ್ಮ ಪೂಜೆ, ಪ್ರಾಣಿ ಬಲಿಯಿಂದ ಕೊರೋನಾ ಹೋಗುತ್ತೆ ಎಂದು ಪ್ರಚಾರ ಮಾಡಿದ ಉದಾಹರಣೆ ಕೂಡ ಇವೆ ಎಂದರು.

ಗೋವಿನ ಗಂಜಲದಲ್ಲಿ, ಸಗಣಿಯ ಸ್ನಾನದಲ್ಲಿ ಕೋವಿಡ್ ಔಷಧಿಯಿದೆ ಎಂದೂ ಹೇಳಿದ್ದಾರೆ. ಗುರೂಜಿಗಳು, ನಾಟಿ ವೈದ್ಯರ ಜಾಹಿರಾತುಗಳು ಕೂಡ ಶುರುವಾದುವು. ಭಯ ಮತ್ತು ಭಾವುಕತೆಯ ಮೇಲೆ ಆಕ್ರಮಣ ಮಾಡುವ ಸಮೂಹ ಮಾಧ್ಯಮಗಳ ಪರಿಣಾಮದಿಂದ ಕೂಡ ಹೆಚ್ಚು ಸಾವುಗಳು ಸಂಭವಿಸಿವೆ ಎಂದರು.

ವಿಜ್ಞಾನಿಗಳು ಈ ರೋಗದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ತುಂಬಾ ಕೂಲಂಕಷವಾಗಿ ಅಧ್ಯಯನ ಮಾಡಿಯೇ ಎಚ್ಚರಿಕೆ ನೀಡುತ್ತದೆ. ಭಾರತದ ICMR ಕೂಡ ಪುರಾವೆ ಆಧಾರಿತ ಕೆಲ ಔಷಧಿಗಳನ್ನು ಮಾನ್ಯ ಮಾಡಿರುತ್ತದೆ. ಅಂತಹ ಮಾಹಿತಿ ಮತ್ತು ಔಷಧಿಗಳ ಬಳಕೆ ಮಾತ್ರ ಸುರಕ್ಷಿತ. ಲಸಿಕೆಯನ್ನು ನಿರಂತರ ಅಧ್ಯಯನ, ಸಂಶೋಧನೆಯ ಮೂಲಕ ಕಂಡು ಹಿಡಿಯಲಾಗುತ್ತದೆ. ಸುರಕ್ಷೆಯ ಬಗ್ಗೆ ತುಂಬಾ ಕಾಳಜಿ ವಹಿಸಲಾಗಿರುತ್ತದೆ ಎಂದರು.

ಕೋವಿಡ್ ನಿಯಮಗಳನ್ನು ಪಾಲಿಸಿ, ಲಸಿಕೆ ಪಡೆಯಿರಿ, “ನಾವು ಮೂರ್ಖರನ್ನಾಗಿಸುವುದನ್ನು ತಪ್ಪಿಸುವುದೇ ವಿಜ್ಞಾನ” ಎಂಬ ವಿಜ್ಞಾನಿಯೊರ್ವರ ಮಾತಿನಂತೆ ನಾವು ಮೌಢ್ಯವನ್ನು ತೊರೆದು‌ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳೋಣ. ಎಲ್ಲವನ್ನೂ ಪರೀಕ್ಷಿಸಿ, ಪರಿಶೀಲಿಸಿ, ವಿಶ್ಲೇಷಿಸಿ ಒಪ್ಪಿಕೊಳ್ಳಬೇಕು ಎಂದರು.

ವೆಬಿನಾರ್ ಅಧ್ಯಕತೆ ವಹಿಸಿಕೊಂಡು ಮಾತಾಡಿದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಂಬಿಕೆ ಜನರಲ್ಲಿದ್ದವು. ಬರಬರುತ್ತ ನಂಬಿಕೆಗಳು ಮೂಢನಂಬಿಕೆಗಳಾಗಿ ಜನರ ಬದುಕನ್ನು ಕಿತ್ತುಕೊಂಡವು. ಆದರೆ, ಇವುಗಳಿಂದ ಬಿಡುಗಡೆ ಹೊಂದುವ ವಿವೇಕ ಬರಲಿಲ್ಲ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹಳೆಯ ಕಾಲ ಇರಲಿ. ಇಂದು ವಿಜ್ಞಾನ, ತಂತ್ರಜ್ಞಾನ ಯುಗ. ಪ್ರತಿಯೊಂದನ್ನು ಪ್ರಶ್ನಿಸುವ ಮನೋಭಾವ ಇದೆ. ಆದರೆ ಹಿಂದೆಂದೂ ಇರದಷ್ಟು ಮೂಢನಂಬಿಕೆ ಇದೆ. ಎಂಜಲೆಲೆ ಮೇಲೆ ಉರುಳುವುದು, ಪ್ರಾಣಿ ಬಲಿ, ತಲೆಬೋಳಿಸಿಕೊಳ್ಳುವಂತ ಲೆಕ್ಕವಿಲ್ಲದಷ್ಟು ಮೂಢನಂಬಿಕೆಗಳಿರುವುದು ವಿಷಾಧನೀಯ ಎಂದರು.

ನೀರ ಕಂಡಲ್ಲಿ ಮುಳುಗುಂತಹ, ಮರಕಂಡಲ್ಲಿ ಸುತ್ತುವಂತಹವರು ಭಕ್ತರಾಗಲು ಸಾಧ್ಯವೇ ಎಂದು ಬಸವಣ್ಣ ಪ್ರಶ್ನಿಸಿದ್ದರು. ಕಲ್ಲನಾಗರ ಕಂಡರೆ ಹಾಲೆರೆಯುವವರು ದಿಟದ ಭಕ್ತ ಬಂದರೆ ಊಟ ಕೊಡುವುದಿಲ್ಲ ಇದೆಂತಹ ನಂಬಿಕೆ ಎಂದರು. ಹಾವಾಡಿಗ, ಹೆಂಡತಿಯ ಮೂಗು ಕೊರೆದಿದೆ, ಅವರ ಕೈಯಲ್ಲಿ ಹಾವಿನ ಬುಟ್ಟಿಇದೆ. ಎದುರಿಗೆ ತಮ್ಮಂತೆಯೇ ಇರುವವರು ಬಂದಾಗ ಅಪಶಕುನ ಎಂದು ವಾಪಸಾಗುತ್ತಾರೆ. ತಮಗೆ ತಾವೇ ಅಪಶಕುನ ಆಗಬೇಕಲ್ಲವೇ? ಎದುರಿನವರಿಗೆ ಹೇಗೆ ಅಪಶಕುನವಾಗುತ್ತಾರೆ. ಇಂತಹ ವಿಚಾರಗಳ ಮೂಲಕ ಮೂಢನಂಬಿಕೆಗಳನ್ನು ತೊಡೆಯಲು ಯತ್ನಿಸಿದರು. ಆದರೆ, ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು ಎಂಬಂತಾಗಿದೆ ಎಂದರು.

ವಿಶ್ವದೆಲ್ಲೆಡೆ ಕೊರೊನ ಕಾಟದಿಂದ ಜನ ತತ್ತರಿಸಿದ್ದರೆ, ಸೂಕ್ತ ಚುಚ್ಚುಮದ್ದು ಔಷಧಿಯಿಲ್ಲದೆ ಪರದಾಡುತ್ತಿದಾರೆ. ಇಂತಹ ಸಮಯದಲ್ಲಿ ಜನರನ್ನು ಮೂರ್ಖರನ್ನಾಗಿಸಲು ಹೊಟ್ಟೆಹೋಕರು ಅನೇಕ ವಿಚಾರಗಳನ್ನು ಹೇಳುತ್ತ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಮೂಢ ಆಚರಣೆಗಳಿಂದ ಕೊರೊನಾ ಓಡಿಸಿಲು ಸಾಧ್ಯವಿಲ್ಲ. ಲಾಕ್ ಡೌನ್ ಸಮಯದಲ್ಲಿ ಮಂದಿರ, ಮಸೀದಿ, ಚರ್ಚ್ ಗಳನ್ನು ಬಂದ್ ಮಾಡಿದ್ದರು. ಆಗ ದೇವರ ಆಟ ನಡೆಯಲಿಲ್ಲ. ಈಗ ಕೊರೊನಾ ವೈರಸ್ ಕೊರೊನಮ್ಮ ಆಗಿ ಪರಿವರ್ತನೆಯಾಗಿದೆ. ನೋಡವ್ವಾ ತಾಯಿಹೀಗೆಲ್ಲ ಕಾಡಿಸ್ಬೇಡ. ನಮ್ಮ ಜೀವಾ ಸಾಕಾಗೇತಿ, ನಿನಗೆ ಹಬ್ಬ ಮಾಡಿ, ಹೋಳಿಗೆ ಎಡೆ ಇಟ್ಟಿದ್ದೇವೆ. ನೀನು ನಮ್ಮೂರು ಬಿಟ್ಟು ಹೋಗು. ನಮ್ಮನ್ನ ಕಾಡಿಸದಂತೆ ಬಿಟ್ಟುಹೋಗು ಎಂದು ಕೊರೊನಮ್ಮನ ಹಬ್ಬ ಆಚರಿಸಿದ್ದಾರೆ. ಹೀಗೆ ಮಾಡಿದರೆ ಕೊರೊನಾ ಹೋಗಲು ಸಾಧ್ಯವೇ? ಅದಕ್ಕೆ ಬೇಕಿರುವುದು ಹಬ್ಬವಲ್ಲ. ಸರ್ಕಾರ ನಿಗದಿಪಡಿಸಿದ ಚುಚ್ಚುಮದ್ದು ಪಡೆದುಕೊಳ್ಳುವುದು, ದೈಹಿಕ ಅಂತರ ಕಾಪಾಡುವುದು, ಸ್ವಚ್ಛತೆ ಕಾಪಾಡುವುದರಿಂದ ಓಡಿಸಬಹುದು ಎಂದರು.

ಕೆಲವು ಮಠದ ಸ್ವಾಮಿಗಳು ಕೂಡ ಮೂಢನಂಬಿಕೆಯಿಂದ ಹಿಂದೆ ಬಿದ್ದಿಲ್ಲ. ಕೋಡಿ ಮಠದ ಸ್ವಾಮಿಗಳು ಕೊರೊನಾ ಸಂಪೂರ್ಣವಾಗಿ ಹೊರಟು ಹೋಗಲು 10 ವರ್ಷ ಬೇಕು ಎಂದರು. ಹಿಂದಿನ ವರ್ಷ ಜಲಪ್ರಳಯ ಆಗುತ್ತೆ, ಕೋಟ್ಯಂತರ ಜನರನ್ನು ಹೂಳಿರುವುದರಿಂದ ಅವರು ಹೊರಬರುತ್ತಾರೆ. ದೊಡ್ಡದೊಡ್ಡ ತಲೆಗಳು ಉರುಳುತ್ತವೆ. ಸಾಮೂಹಿಕ ಸಾವು ನೋವುಗಳಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ. ಹೀಗೆ ಭವಿಷ್ಯ ನುಡಿಯುವವರು ಪರಿಹಾರ ಸೂಚಿಸಬಹುದಲ್ಲವೇ? ವಿಜ್ಞಾನ ಯುಗದಲ್ಲೂ ಅಜ್ಞಾನ ಪಸರಿಸುವವರಿಗೆ ಕೊರತೆ ಇಲ್ಲ ಎಂದರು.

ಬುದ್ಧ, ಬಸವ ಮೊದಲಾದವರು ಹುಟ್ಟಿರುವ ನಾಡು ನಮ್ಮದು. ಬಸವ ಹೇಳಿದಂತೆ ಜ್ಞಾನದ ಬಲದಿಂದ ಅಜ್ಞಾನವನ್ನು ಓಡಿಸದೆ ಇದ್ರೆ ಇಂತಹ ಪಾರ್ಥೇನಿಯಂ ಬೆಳೆಯುತ್ತದೆ. ಮೂಢನಂಬಿಕೆಯನ್ನು ತೊಲಗಿಸಲು ಇರುವ ರೌಂಡಪ್ ಎಂದರೆ ಜನ ವಿವೇಕಯುತರಾಗಬೇಕು. ಭವಿಷ್ಯ ಹೇಳುವವರಿಗೆ ನಿಮ್ಮ ಭವಿಷ್ಯ ಏನು ಎಂದು ಕೇಳಬೇಕು ಎಂದರು.

ಗಿಳಿಯೋದಿ ಫಲವೇನು ವಚನದಂತೆ ಗಿಳಿ ಭವಿಷ್ಯ ಹೇಳುತ್ತದೆಯೇ? ಅದಕ್ಕೆ ಬೆಕ್ಕು ಹಿಂದಿನಿಂದ ಯಾವಾಗ ಬಂದು ಹಿಡಿಯುತ್ತದೆ ಎಂಬುದೇ ಗೊತ್ತಿಲ್ಲ. ಜನ ಸಂಕಷ್ಟದಲ್ಲಿದ್ದಾಗ ಆತ್ಮಸ್ಥೈರ್ಯ ತುಂಬಬೇಕು. ಇಂತಹ ಸಮಯದಲ್ಲಿ ಮೂಢನಂಬಿಕೆ ಪಸರಿಸಬಾರದು. ಎನ್ನವಾಮಕ್ಷೇಮ ನಿಮ್ಮದಯ್ಯ ಎಂಬ ವಚನದಲ್ಲಿ ಬಸವಣ್ಣ ಹುಟ್ಟಿಸುವ ಆತ್ಮಸ್ಥೈರ್ಯವನ್ನು ರೂಢಿಸಬೇಕು. ನಾವು ಇವರನ್ನು ಮಾನಸಿಕ ಭಯೋತ್ಪಾದಕರು ಎಂದು ಕರೆಯುತ್ತೇವೆ. ಅವರು ಸತ್ಯದ ತಲೆ ಮೇಲೆ ಹೊಡೆದಂತೆ ಇಂತ ಪೂಜೆ ಮಾಡಿದರೆ ಇಂತ ಫಲ ಸಿಗುತ್ತದೆ ಎಂದು ಹೇಳಿ ಮೋಸಮಾಡುತ್ತಾರೆ. ಎಲ್ಲರಿಗೂ ಒಳಿತುಮಾಡುವ ಸಂಪ್ರದಾಯ ಇದ್ದರೆ ಸ್ವಾಗತಿಸೋಣ. ಇಲ್ಲವಾದರೆ ಮಾನಸಿಕ ಭಯೋತ್ಪಾದಕರಿಗೆ ನಾವೆಲ್ಲರೂ ಬಿಸಿಮುಟ್ಟಿಸಬೇಕಿದೆ ಎಂದರು.

ನಾಳೆ ಬರುವುದು ನಮಗಿಂದೇ ಬರಲಿ ಎಂಬಂತಹ ವಚನಗಳನ್ನು ಹೇಳಿ ನಾವು ಅಂತವರ ಬಾಯಿ ಮುಚ್ಚಿಸಬೇಕಿದೆ. ಮನುಷ್ಯರಿಗೆ ಸಾವು ಕಟ್ಟಿಟ್ಟ ಬುತ್ತಿ. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮರಣ ಬಂದಾಗ ಮರಣವೇ ಮಹಾನವಮಿ ಎಂದು ಹಬ್ಬದ ರೀತಿಯಲ್ಲಿ ಸ್ವಾಗತಿಸಬೇಕು ಎಂದು ಬಸವಣ್ಣ ಹೇಳಿದ್ದಾರೆ. ಸಾಧನೆ ಮಾಡಿದವರಿಗೆ ಸಾವಿಲ್ಲ ಎಂದು ಅವರು ಹೇಳುತ್ತಾರೆ. ನೀ ಹುಟ್ಟಿಸಿದಲ್ಲಿ ಹುಟ್ಟಿ ವಚನದಲ್ಲಿ ಹೇಳಿರುವ ರೀತಿಯ ಆತ್ಮಬಲ ತುಂಬಿರುವ ಮಾತುಗಳನ್ನು ಕೊರೊನಾ ಭಯ ತುಂಬಿರುವ ಜನರಿಗತೆ ಭರವಸೆ ಮಾತುಗಳನ್ನು ಹೇಳದೆ, ಭಯ ಹುಟ್ಟಿಸುವ ಭಯೋತ್ಪಾದಕರ ಹಿಂದೆ ನೀವ್ಯಾರೂ ಹೋಗಬೇಡಿ. ಮೂಢನಂನಬಿಕೆಗಳಿಂದ ಕೊರೊನಾ ಹೋಗಲ್ಲ. ಪ್ರತಿಯೊಂದು ರೋಗಕ್ಕೂ ಮದ್ದು ಕಂಡುಹಿಡಿಯುವ ಸಾಮರ್ಥ್ಯ ವೈದ್ಯಲೋಕಕ್ಕಿದೆ ಎಂದರು.

ವೈದ್ಯರು ಹೇಳಿದಂತೆ 2 ಬಾರಿ ಚುಚ್ಚುಮದ್ದು ಪಡೆದರೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. 2 ಬಾರಿ ಚುಚ್ಚುಮದ್ದು ಪಡೆದವರು ಕೊರೊನಾದಿಂದ ಮುಕ್ತರಾಗಿದ್ದಾರೆ. ನಾವೆಲ್ಲ ಪಡೆದಿದ್ದೇವೆ. ಕೊರೊನಾ ನಿಯಂತ್ರಿಸಲು ದೈಹಿಕ ಅಂತರ, ಕೈತೊಳೆಯುತ್ತಿದ್ದೇವೆ. ನೀವು ಮೂಢನಂಬಿಕೆಯ ದಾಸರಾಗದೆ, ವೈದ್ಯಪದ್ಧತಿಯಲ್ಲಿ ನಂಬಿಕೆ ಇರಿಸಿ. ನಿಮ್ಮ ಮೊಬೈಲ್ ಆನ್ ಮಾಡಿದರೆ ಬರುವ ಮಾತುಗಳನ್ನು ಅನುಸರಿಸಿ ಎಂದರು.

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ಎಂಬ ವಚನದ ರೀತಿಯಲ್ಲಿ ಜ್ಯೋತಿಷ್ಯ, ಶಾಸ್ತ್ರ, ಪಂಚಾಂಗ ಹೇಳುವವರನ್ನು ನಂಬಬೇಡಿ. ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿ ಬಂದಿದೆ ಎಂದು ಯಾರೂ ಭಾವಿಸಬೇಡಿ. ಇದು ನಮ್ಮ ರಕ್ಷಣೆಗಾಗಿ. ಇಂದ್ರಿಯ ಚಪಲತೆಯಿಂದ ನಿಮ್ಮನ್ನು ನೀವೇ ಹೆಳವ, ಕುರುಡ, ಕಿವುಡರನ್ನಾಗಿಸಿಕೊಳ್ಳಿ. ಅವುಗಳನ್ನು ಹಿಡಿತದಲ್ಲಿಟ್ಟುಕೊಂಡು, ಆತ್ಮಕಲ್ಯಾಣ, ಲೋಕಕಲ್ಯಾಣ ಮಾಡಬೇಕು. ನಾವೆಲ್ಲ ಶರಣರ ಸತ್ಸಂಗದಲ್ಲಿರುವುದನ್ನು ಬಿಟ್ಟು ಭವಿಷ್ಯ ಹೇಳುವವರು, ಮೂಢನಂಬಿಕೆ ಬಿತ್ತುವವರ ಹಿಂದೆ ಹೋಗಬೇಡಿ ಎಂದು ಮನವಿ ಮಾಡಿಕೊಂಡರು. 

ಯಾವ ಮೂರ್ಖನೂ ನಮ್ಮ ಮನಃಸ್ಥಿತಿಯನ್ನು ಬದಲಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬಳಿಯಾವ ಜೋತಿಷಿಯೂ ಬರಲ್ಲ. ನಮ್ಮ ಭವಿಷ್ಯಾನೂ ಹೇಳಿ ಎಂದರೂ ಯಾರೂ ಹೇಳುವುದಿಲ್ಲ. ನಾವು ಪ್ರಶ್ನಿಸುವುದನ್ನು ಕಳೆದುಕೊಂಡಾಗ ಮಾನಸಿಕ ಭಯೋತ್ಪಾದಕರು ಜೇಬಿಗೆ ಮಾತ್ರವಲ್ಲ, ಮೆದುಳಿಗೂ ಕೈಹಾಕುತ್ತಾರೆ. ಇಂತವರಿಂದ ಆದಷ್ಟು ದೂರ ತಳ್ಳಿದರೆ ನೀವೆಲ್ಲ ಉದ್ಧಾರವಾಗುತ್ತೀರಿ ಎಂದರು. 

ಮಾನಸಿಕ ಭಯೋತ್ಪಾದಕರ ಮಾತು ಕೇಳಿದರೆ ನೀವು ಸಿಂಬಳದಲ್ಲಿ ಸಿಕ್ಕ ನೊಣದಂತೆ. ನೀವು ಇದನ್ನು ಮರೆಯಬಾರದು. ರೋಗ ಬಂದಾಗ ಚುಚ್ಚುಮದ್ದು ಪಡೆಯಬೇಕು. ಯಾವ ದೇವರಿಗೂ ಹೋಗಬೇಕಾದ ಅಗತ್ಯವಿಲ್ಲ. ನೀವು ಹೋಗುವ ದೇವರುಗಳಿಗೆ ಯಾವುದೇ ಅರಿವು, ಆನಂದ ಇಲ್ಲ. ಆದರು ಜನ ಹೊಸ ಗುಡಿಗಳನ್ನು ಕಟ್ಟಿಸ್ತಾರೆ. ನಮ್ಮ ತಲೆಯನ್ನು ಬಂಗಾರದ ಕಳಶ ಮಾಡಿಕೊಂಡರೆ ಎಲ್ಲರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂದರು.

ಆರಂಭದಲ್ಲಿ ವೆಬಿನಾರ್ ನಿರ್ವಹಿಸಿದ ಪತ್ರಕರ್ತ ಡಾ. ಪ್ರದೀಪ್ ಮಾಲ್ಗುಡಿ, ಮೂಢನಂಬಿಕೆಗಳಿಗೆ ಕೊನೆಮೊದಲಿಲ್ಲ. ಮೂಢನಂಬಿಕೆಗಳ ವಿರುದ್ಧ ಬುದ್ಧ, ಬಸವ, ಪೆರಿಯಾರ್, ಕುವೆಂಪುರಂತಹ ಚಿಂತಕರು ನಿರಂತರ ಹೋರಾಡಿದ್ದಾರೆ. ಬಸವಣ್ಣ

ಹಾವಾಡಿಗನು ಮೂಕೊರತಿಯು

ತನ್ನ ಕೈಯಲ್ಲಿ ಹಾವು ಮಗನ ಮದುವೆಗೆ

ಶಕುನವ ನೋಡಹೋಹಾಗ ಇದಿರಲೊಬ್ಬ

ಮೂಕೊರತಿಯ ಹಾವಾಡಿಗನ ಕಂಡು

ಶಕುನ ಹೊಲ್ಲೆಂಬ ಚದುರ ನೋಡಾ

ತನ್ನ ಸತಿ ಮೂಕೊರತಿ ತನ್ನ ಕೈಯಲ್ಲಿ ಹಾವು ತಾನು ಮೂಕೊರೆಯ

ತನ್ನ ಭಿನ್ನವನರಿಯದೆ ಅನ್ಯರನೆಂಬ

ಕುನ್ನಿಯನೇನೆಂಬೆ ಕೂಡಲಸಂಗಮದೇವಾ ಎಂದಿದ್ದಾನೆ. ಕೊರೊನಾ ಸಮಯದಲ್ಲಿ ಅತ್ಯಂತ ಹೆಚ್ಚು ಸುಳ್ಳು ಸುದ್ದಿಗಳು, ಮೌಢ್ಯ ಹರಡತೊಡಗಿದೆ. ಅದರಲ್ಲೂ ಕೋವ್ಯಾಕ್ಸಿನ್ ಪಡೆದವರ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತದೆ, ಅಯಸ್ಕಾಂತ ಶಕ್ತಿ ಉಂಟಾಗಿದೆ ಎಂದು ವರದಿಗಳನ್ನು ಸುದ್ದಿ ವಾಹಿನಿಗಳು ಮತ್ತು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಇದು ನಮ್ಮ ದೇಶವನ್ನು ವೈಜ್ಞಾನಿಕವಾಗಿ ಅತ್ಯಂತ ಹಿಂದಕ್ಕೆ ಕೊಂಡೊಯ್ದಿರುವುದರ ಉದಾಹರಣೆ. ಇಂತಹ ವಿಷಯಗಳ ಕುರಿತು ಇಂದಿನ ಗೋಷ್ಠಿಯಲ್ಲಿ ಚರ್ಚೆ ನಡೆಯಲಿದೆ ಎಂದರು.

ಮಾನವ ಬಂಧುತ್ವ ವೇದಿಕೆಯ ಆಶಯವೂ ಮೂಢನಂಬಿಕೆಯನ್ನು ತೊಡೆದು ಹಾಕುವುದಾಗಿದೆ. ಇದರ ಹಿನ್ನೆಲೆಯಲ್ಲಿ ಇಂದಿನ “ಕೋವಿಡ್ ಮತ್ತು ಮೂಢನಂಬಿಕೆಗಳು” ವಿಚಾರದ ಕುರಿತು ವೆಬಿನಾರ್ ಆಯೋಜಿಸಲಾಗಿದೆ. ಎಂದರು.

ವೆಬಿನಾರ್ ಅನ್ನು ಮುನ್ನಡೆಸಿದ ಡಾ.ಲೀಲಾ ಸಂಪಿಗೆ ಮತ್ತೆ ಕಲ್ಯಾಣದಂತಹ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗಳು ನಿರಂತರವಾಗಿ ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮಾನವ ಬಂಧುತ್ವ ವೇದಿಕೆ ವತಿಯಿಂದ ಕೂಡ ಮೂಢನಂಬಿಕೆ ವಿರುದ್ಧ ಚಳವಳಿಯ ಮಾದರಿಯಲ್ಲಿ ಸತೀಶ್ ಜಾರಕಿಹೊಳಿಯವರು ಪ್ರಯತ್ನಿಸುತ್ತಿದ್ದಾರೆ ಎಂದರು. ಸಾಣೇಹಳ್ಳಿ ಮಠದ ಸಂಗೀತ ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ನೀರನು ಕಂಡಲ್ಲಿ ಮುಳುಗುವರಯ್ಯ, ಅತ್ತಲಿತ್ತ ಹೋಗದಂತೆ, ಕಲ್ಲ ದೇವರ ಪೂಜೆಯ ಮಾಡಿ ಕಲಿಯುಗದ ಕತ್ತೆಗಳಾಗಿ ಹುಟ್ಟಿದರು ವಚನಗಳನ್ನು ಸಾಣೇಹಳ್ಳಿ ಶಿವಸಂಚಾರ ತಂಡದ ಎಚ್.ಎಸ್.ನಾಗರಾಜ್ ಹಾಡಿದರು. ಶರಣ್ ಕುಮಾರ್ ತಬಲ ಸಾಥ್ ನೀಡಿದರು. 

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು