March 25, 2023 5:17 pm

ಕೋವಿಡ್ ಮತ್ತು ಶೈಕ್ಷಣಿಕ ಸವಾಲುಗಳು

ಬೆಂಗಳೂರು: ಶೈಕ್ಷಣಿಕವಾಗಿ ಕೋವಿಡ್ ನಿಂದ ಮಾತ್ರ ಬಿಕ್ಕಟ್ಟು ಬಂದಿಲ್ಲ. ಕೋವಿಡ್ ಪೂರ್ವದಲ್ಲೇ ಸಾಕಷ್ಟು ಸಮಸ್ಯೆಗಳು ಪ್ರಾಥಮಿಕ ಮತ್ತು ಪ್ರೌಢ ಶೈಕ್ಷಣಿಕ ವಲಯದಲ್ಲಿದ್ದವು ಎಂದು ರಾಷ್ಟ್ರೀಯ ಕಾನೂನು ಶಾಲೆಯ ಶಿಕ್ಷಣ ತಜ್ಞ ಡಾ.ಪಿ.ವಿ.ನಿರಂಜನಾರಾಧ್ಯ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯುತ್ತಿರುವ 10 ದಿನಗಳ ವೆಬಿನಾರ್ ಸರಣಿಯ 10ನೇ ದಿನದ “ಕೋವಿಡ್ ಮತ್ತು ಶೈಕ್ಷಣಿಕ ಸವಾಲುಗಳು” ವಿಷಯ ಮಂಡಿಸಿ ಮಾತಾಡಿದ ಅವರು, ಕೋವಿಡ್ ನಂತರ ಶೈಕ್ಷಣಿಕ ಸಮಸ್ಯೆಗಳು ದುಪ್ಪಟ್ಟಾಗಿವೆ. ಶಿಕ್ಷಣದಲ್ಲಿ ದೊಡ್ಡ ಮಟ್ಟದ ಅಸಮಾನತೆ. ಶಿಕ್ಷಣ ಸಾಮಾಜಿಕ ನ್ಯಾಯದ ಬಹುದೊಡ್ಡ ಅಸ್ತ್ರವಾಗಬೇಕು ಎಂಬ ಆಶಯವನ್ನು ಸಂವಿಧಾನದ ಅಡಿಯಲ್ಲಿ ಹೊಂದಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ ಎಂದರು.

ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ವರ್ಗ, ಭೌಗೋಳಿಕ, ಶೈಕ್ಷಣಿಕ ಪಠ್ಯಕ್ರಮದಲ್ಲೇ ದೊಡ್ಡ ಅಸಮಾನತೆ ಇದೆ. ಶಿಕ್ಷಣದಲ್ಲಿ 7-8 ಬಗೆಯ ಶಾಲೆಗಳನ್ನ ಕಟ್ಟಲಾಗಿದೆ. ಉದಾ: ಅಂತರರಾಷ್ಟ್ರೀಯ ಶಾಲೆಗಳು, ಸಿಬಿ.ಎಸ್.ಇ, ಐಸಿಎಸ್.ಇ ಶಾಲೆಗಳು, ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಚೋಟಾಮೋಟಾ ಶಾಲೆಗಳು, ಮೀಡಿಯೋಕರ್ ಶಾಲೆಗಳು, ಸರ್ಕಾರಿ ಶಾಲೆಗಳು ಇತ್ಯಾದಿ ಶಾಲೆಗಳನ್ನು ಕಟ್ಟಿ ಬೆಳೆಸುತ್ತಿದ್ದೇವೆ. ಒಂದು ರೀತಿಯಲ್ಲಿ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದೇವೆ ಎಂದರು.

ಲಿಂಗ ಅಸಮಾನತೆ ಹೊಸ ಸ್ವರೂಪವನ್ನು ಪಡೆಯುತ್ತಿದೆ. ಹೆಣ್ಣುಮಕ್ಕಳನ್ನು ಮತ್ತು ಗಂಡುಮಕ್ಕಳನ್ನು ಬೇರೆಬೇರೆ ಶಾಲೆಗಳಲ್ಲಿ ಓದಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ 8 ಅಂಶಗಳ ಮೂಲಸೌಕರ್ಯವನ್ನು ಪಡೆಯುವ ನಿಟ್ಟಿನಲ್ಲಿ ಅಸಮಾನತೆ ಇದೆ. ಶಿಕ್ಷಣ ಕ್ಷೇತ್ರದ ಹೂಡಿಕೆಯಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಕಡಿಮೆಮಾಡುತ್ತಿವೆ. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಕೋವಿಡ್ ಮುನ್ನ ಬಿಕ್ಕಟ್ಟನ್ನು ಸೃಷ್ಟಿಸಿದ್ದವು. ಕೋರೊನಾ ನಂತರ ಇವುದೊಡ್ಡ ಮಟ್ಟದಲ್ಲಿ ಉಲ್ಬಣವಾದವು ಎಂದರು.

ಸರ್ಕಾರಿ ಶಾಲೆಗಳು ಕೇವಲ ಕಲಿಕೆಯ ಕೇಂದ್ರಗಳಾಗಿರಲಿಲ್ಲ. ಜೊತೆಗೆ, ಮಕ್ಕಳಿಗೆ ಪೌಷ್ಠಿಕಾಂಶ, ಬಿಸಿಯೂಟ, ಆಹಾರ, ಮಾತ್ರೆಗಳು, ಆರೋಗ್ಯ ತಪಾಸಣೆ ಮತ್ತು ಕೆಳಸ್ತರದ, ಅವಕಾಶವಂಚಿತ ಮಕ್ಕಳಿಗೆ ಇದ್ದ ಕ್ರೀಡೆ ಆಟ ಪಾಠಗಳ ಒಡನಾಟದ ಕೊರತೆಯನ್ನ ನೀಗಿಸುತ್ತಿತ್ತು. ಜೊತೆಗೆ, ಮಕ್ಕಳಿಗೆ ಹಲವು ಅವಘಡಗಳಿಂದ ರಕ್ಷಣೆ ಕೊಡಲಾಗುತ್ತಿತ್ತು. ಜೊತೆಗೆ ಕಲಿಕೆ ಭಾಗವಾಗಿತ್ತು. ಸರ್ಕಾರಿ ಶಾಲೆ ಭೌತಿಕ, ಮಾನಸಿಕ ಮತ್ತು ಎಲ್ಲ ಬಗೆಯ ಬೆಳವಣಿಗೆಗಳಿಗೆ ಮುಖ್ಯವಾದ ಕೇಂದ್ರಸ್ಥಾನವಾಗಿತ್ತು ಎಂದರು.

ಕೋವಿಡ್ ಸಾಂಕ್ರಮಿಕದ ಭಾಗವಾಗಿ ಕೇಂದ್ರ ಲಾಕ್ ಡೌನ್ ಘೋಷಣೆಗೂ ಮುನ್ನ ಮಾರ್ಚ್ 14ರಂದು ಲಾಕ್ ಡೌನ್ ಘೋಷಿಸಲಾಗಿತ್ತು. ಲಾಕ್ ಡೌನ್ ನಿಂದಾಗಿ ಸುಮಾರು 75,000 ಶಾಲೆಗಳಲ್ಲಿ 1 ಕೋಟಿ 10 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ದಾಖಲೀಕರಣವನ್ನು ಗಮನಿಸಿದರೆ ಒಬಿಸಿ, ಪರಿಶಿಷ್ಟ ಜಾತಿ, ಪಂಗಡ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆನ್ ಲೈನ್ ಶಿಕ್ಷಣದಲ್ಲಿ ದೊಡ್ಡ ಡಿಜಿಟಲ್ ಉದ್ಯಮದ ಲಾಬಿ ಇದೆ. ಆನ್ ಲೈನ್ ಶಿಕ್ಷಣ ತರಗತಿ ಕಲಿಕೆಗೆ ಎಂದಿಗೂ ಪರ್ಯಾಯವಾಗಲು ಸಾಧ್ಯವಿಲ್ಲ ಎಂದರು.

ಶಿಕ್ಷಣದ ಉದ್ದೇಶ ಸಾಮಾಜೀಕರಣ. ಪರಸ್ಪರ ನಾವು ನಮ್ಮನ್ನು ಅರ್ಥಮಾಡಿಕೊಳ್ಳುವ ಮೂಲಕ ಸಂವಿಧಾನದ ಮೂಲ ಆಶಯವಾದ ಸಮಾನತೆಯೆಡೆಗೆ ಸಾಗಬೇಕಾಗಿರುವುದು ಶಿಕ್ಷಣದ ಮೂಲ ಉದ್ದೇಶ. ಆದರೆ ಆನ್ ಲೈನ್ ಶಿಕ್ಷಣದಿಂದ ಇದು ಸಾಧ್ಯವಾಗದು. ಶಾಲೆಗಳಲ್ಲಿ ಎಲ್ಲ ಜಾತಿ, ವರ್ಗ, ಲಿಂಗದವರು ಸೇರಿ ಊಟ, ಆಟಪಾಠ, ಜಗಳ ಆಡಬೇಕು. ಆನ್ಲೈನ್ ಶಿಕ್ಷಣ ಸಣ್ಣಪರಿಹಾರವೇ ಹೊರತು, ಅದೇ ಪರ್ಯಾಯವಲ್ಲ. ಅದರ ಹಿಂದೆ ದೊಡ್ಡ ಪಿತೂರಿ ಇದೆ. ಬಹುತೇಕ ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣವನ್ನು ವಂಚಿಸುವ ಹುನ್ನಾರವಿದೆ ಎಂದರು.

15 ತಿಂಗಳು ಶಾಲೆಗಳನ್ನು ಮುಚ್ಚಿದ್ದರಿಂದ ಪೌಷ್ಠಿಕತೆಯ ಸಮಸ್ಯೆ ದೊಡ್ಡಮಟ್ಟದಲ್ಲಿ ಆಗಿದೆ. ಅಂಗನವಾಡಿ ಮತ್ತು ಶಾಲೆಗಳಲ್ಲಿ ಒದಗಿಸುವ ಆಹಾರ ಮೂಲಭೂತ ಆಹಾರವಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಬಿಸಿಹಾಲು, ಬಿಸಿಯೂಟ ಸೇವಿಸುತ್ತಿದ್ದರು. ಆದರೆ ಶಾಲೆ ಬಂದ್ ಆದ ನಂತರ ಪೌಷ್ಠಿಕತೆಯ ಕೊರತೆಯ ಯಾತನೆಯನ್ನು ಅನುಭವಿಸಬೇಕಾಯಿತು. ಸರ್ಕಾರ ಡ್ರೈ ರೇಷನ್ ಕೊಟ್ಟಿದೆ. ಆದರೆ ವಿತರಣೆಯ ಸಮಸ್ಯೆ ಇದೆ. ಬಿಸಿಯೂಟ ಕೊಟ್ಟಂತೆ ಆಗುವುದಿಲ್ಲ. ಬಿಸಿಯೂಟ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಜಾರಿಗೆ ಬಂದಿದ್ದು, ಪೌಷ್ಠಿಕಾಂಶವನ್ನು ಕೊಡಬೇಕು ಎಂದೇ ಜಾರಿಯಾಗಿದ್ದು ಎಂದರು.

ಮಕ್ಕಳು ಬಾಲ್ಯವನ್ನು ಅನುಭವಿಸಲು ಇದ್ದ ಜಾಗ ಶಾಲೆ. ನಗರ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ವತಂತ್ರ, ಸಲಿಗೆಯಿಂದ ವಿಕಾಸ ಕಂಡುಕೊಳ್ಳಲು ಇದ್ದ ಜಾಗ ಶಾಲೆ. ನನ್ನ ಜೀವನದಲ್ಲಿ ಇಂದಿಗೂ ಅದ್ಭುತವಾಗಿ ನೆನಪಿರುವುದು ಶಾಲಾ ದಿನಗಳು. ಆ ಸಂದರ್ಭದಲ್ಲಿ ನಮ್ಮ ಆಟಪಾಠ, ಸ್ನೇಹ ಇತ್ಯಾದಿಗಳು ನಮ್ಮನ್ನು ರೂಪಿಸುವ ಪ್ರಮುಖ ಘಟ್ಟ. ಅದಕ್ಕಾಗಿಯೇ ಬಾಲ್ಯ ಮುಖ್ಯ ಎಂದರು.

15 ತಿಂಗಳು ಮಕ್ಕಳಿಗೆ ದೊಡ್ಡ ನಷ್ಟವಾಯಿತು. ಇದರಿಂದ ಸಹಪಾಠಿಗಳಿಲ್ಲದೆ ಮಕ್ಕಳು  ಮನೆಯಲ್ಲೇ ಕಳೆಯಬೇಕಾಯಿತು. ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವೆ ಅಂತರವಿದೆ. ಒಂದೇ ಮನೆಯಲ್ಲಿ 15 ಜನರವರೆಗೆ ಇರುತ್ತಾರೆ. ಇದರಿಂದಾಗಿ ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಆಯಿತು. ಕೂಲಿಕಾರರು, ದಿನಗೂಲಿಗಳು, ವಲಸೆ ಕಾರ್ಮಿಕರ ಮೇಲೆ ಒತ್ತಡ ಬಿತ್ತು. ದಶಕಗಳಿಂದ ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸಲು ನಡೆಸಿದ ಯತ್ನಕ್ಕೆ ಕಳೆದ 15 ತಿಂಗಳಲ್ಲಿ ಮತ್ತೆ ಹಿನ್ನಡೆ ಎದುರಾಯಿತು. ಮಕ್ಕಳು ಬಾಲಕಾರ್ಮಿಕರಾದರು. ಉತ್ತರಕರ್ನಾಟಕದಲ್ಲಿ ಮತ್ತಷ್ಟು ಜಾಸ್ತಿಯಾಯಿತು. ಶಾಲೆ ಮುಚ್ಚಿದ್ದರಿಂದ ಮಕ್ಕಳು ಬಾಲಕಾರ್ಮಿಕರಾದರು ಎಂದರು.

ಬಾಲ್ಯ ವಿವಾಹಗಳು ದೊಡ್ಡ ಮಟ್ಟದಲ್ಲಿ ನಡೆದವು. 1 ತಿಂಗಳಲ್ಲಿ 250 ಬಾಲ್ಯವಿವಾಹ ನಡೆದವು. ಬಾಲಕರ ಕಳ್ಳಸಾಗಣೆ, ಭಿಕ್ಷೆಗೆ ಹಚ್ಚಿದ್ದನ್ನು ನೋಡಬಹುದು. ಮಾನಸಿಕ, ಲೈಂಗಿಕ ದೌರ್ಜನ್ಯದ ಪ್ರಮಾಣ ಹೆಚ್ಚಾದವು. ಎಲ್ಲ ಸಂಕಷ್ಟಗಳು 2-3 ಪಟ್ಟು ಹೆಚ್ಚಿದವು. ಶೇ.80ರಷ್ಟು ಮಕ್ಕಳು ಕಲಿಕೆಯಿಂದ ವಂಚಿತರಾದರು. ವಿದ್ಯಾಗಮವನ್ನು ಒಂದೂವರೆ ತಿಂಗಳು ನಡೆಸಲು ಸಾಧ್ಯವಾಗಲಿಲ್ಲ ಎಂದರು.

ಯುನಿಸೆಫ್, ಯುನೆಸ್ಕೊ ಪ್ರಕಾರ ಶೇ. 30ರಷ್ಟು ಮಕ್ಕಳು ಶಾಲೆಗಳಿಗೆ ತೆರಳುವ ಸಾಧ್ಯತೆ ಬಹಳ ಕಡಿಮೆ ಎಂದಿವೆ. ಇದಕ್ಕೆ ಪರಿಹಾರವೇನು? ಎಂಬುದು ಬಿಕ್ಕಟ್ಟು. ಪೌಷ್ಠಿಕಾಂಶ, ಕಲಿಕೆ, ಮಾನಸಿಕ ಆರೋಗ್ಯ, ಸಂತಸದ ಬಾಲ್ಯದ ದೃಷ್ಟಿಯಿಂದ ನಾವು ಕಂಡುಕೊಳ್ಳಬೇಕಾದ ಪರಿಹಾರವೆಂದರೆ ಶೀಘ್ರದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಶಾಲೆಗಳನ್ನು ತೆರೆಯಬೇಕು. ಆದರೆ, ಶಾಲೆ ತೆರೆದರೆ ಮಕ್ಕಳಿಗೆ ಕೊರೊನಾ ಬರುತ್ತದೆ ಎಂಬ ಅಂಶಗಳು ಚರ್ಚೆಗೆ ಬರುತ್ತವೆ. ಆದರೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲದೆ ಭಯ ಹುಟ್ಟಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಲ್ಯಾನ್ಸೆಟ್ ಸಂಸ್ಥೆಯ ಅಧ್ಯಯನ ವರದಿಯ ಪ್ರಕಾರ, ಜೂನ್ 2020ರ ವರದಿಯಲ್ಲಿ ಮಕ್ಕಳಿಗೆ ಕೊರೊನಾ ಬಾಧಿಸಬಹುದು ಎಂಬುದಕ್ಕೆ ಯಾವುದೇ ರೀತಿಯ ಪುರಾವೆಗಳು ಇಲ್ಲ. ಮತ್ತು ಈ ವಿಷಯದ ಬಗ್ಗೆ ಯಾವುದೇ ತೀರ್ಮಾನವನ್ನು ಹೇಳಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಕರಾರುವಕ್ಕಾಗಿ ಹೇಳಿದೆ. ಆದ್ದರಿಂದ ವೈಜ್ಞಾನಿಕ ಸುರಕ್ಷತಾ ಕ್ರಮಗಳಾದ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಮತ್ತು ಶುಚಿತ್ವ ಕಾಪಾಡಿಕೊಳ್ಳುವುದರ ಮೂಲಕ ಶಾಲೆಗಳನ್ನು ಪ್ರಾರಂಭಿಸಬೇಕು. ಸರ್ಕಾರಿ ಶಾಲೆಗಳನ್ನು ಆರಂಭಿಸಲು ಇರುವ ಅನುಕೂಲವೆಂದರೆ ಕರ್ನಾಟಕದಲ್ಲಿ ಸಣ್ಣ ಶಾಲೆಗಳು ಹೆಚ್ಚಿವೆ. ಮಕ್ಕಳ ಸಂಖ್ಯೆ ಕಡಿಮೆ ಇದೆ. 1-9 ಮಕ್ಕಳು ಮಾತ್ರ ಸುಮಾರು 4,000 ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.  1-50 ವಿದ್ಯಾರ್ಥಿಗಳಿರುವ ಸುಮಾರು 25,000 ಶಾಲೆಗಳಿವೆ. ಇಲ್ಲಿ ಮಕ್ಕಳಿಗೆ ಸರ್ವತೋಮುಖ ಅಭಿವೃದ್ಧಿ ಮಾಡಬೇಕು ಎಂದರು.

ಅಂಗನವಾಡಿಗಳನ್ನೂ ಆರಂಭಿಸಬೇಕು. ಇಲ್ಲಿ ಪೌಷ್ಠಿಕಾಂಶ ಆಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಅದರ ಆದೇಶವನ್ನೂ ಪಾಲಿಸಿಲ್ಲ. ಅಂಗನವಾಡಿಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಗರ್ಭಿಣಿ, ಬಾಣಂತಿಯರಲ್ಲಿ ಅಪೌಷ್ಠಿಕತೆ ಇದೆ. ಕೊರೊನಾ ಸಮಯದಲ್ಲಿ ಆರೋಗ್ಯ ಪರೀಕ್ಷೆ ತೀರಾ ಅಗತ್ಯವಾಗಿರುವುದರಿಂದ ಬೇಗ ಅಂಗನವಾಡಿಗಳನ್ನು ತೆರೆಯಬೇಕು ಎಂದರು.

ನೀತಿ ಆಯೋಗ ಎರಡು ದಿನಗಳ ಹಿಂದೆ ವರದಿಯನ್ನು ಬಿಡುಗಡೆ ಮಾಡಿದೆ. ಹಸಿವು ಮುಕ್ತ ಭಾರತದ ಕೆಳಗೆ ಕರ್ನಾಟಕ 5 ವರ್ಷಕ್ಕಿಂತ ಕೆಳಗಿನ ಶೇ 32ರಷ್ಟು ಮಕ್ಕಳ ತೂಕದಲ್ಲಿ ಕಡಿಮೆ ಕಂಡುಬಂದಿದೆ. ಇದು ಮಗುವಿನ ಅನಾರೋಗ್ಯದ ಸೂಚಕ. ಅಂಗನವಾಡಿಗಳನ್ನು ತೆರೆಯದೇ ಇದ್ದರೆ ದೊಡ್ಡ ಮಟ್ಟದಲ್ಲಿ ತಳಸಮುದಾಯದ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ಅಪೌಷ್ಠಿಕತೆಯಿಂದಲೇ ಕೊರೊನಾಗಿಂತ ಭೀಕರ ಸಂಕಷ್ಟಗಳಿಗೆ ಸಿಲುಕುವುದು ಕಳವಳಕಾರಿ ಅಂಶ ಎಂದರು.

ಬಾಣಂತಿಯರಲ್ಲಿ ರಕ್ತಹೀತನೆಯ ಪ್ರಮಾಣ 45.4%. 4-11ನೇ ತರಗತಿಗಳಲ್ಲಿ ಓದುತ್ತಿರುವ 10-19ರ ವಯೋಮಾನದ ಮಕ್ಕಳಲ್ಲಿ 17% ರಕ್ತಹೀನತೆ ಇದೆ. ಗರ್ಭಿಣಿ, ಬಾಣಂತಿಯರಲ್ಲಿ ರಕ್ತ ಹೀನತೆ ಕಂಡುಬಂದರೆ ಮಕ್ಕಳು, ತಾಯಿ ಇಬ್ಬರಿಗೂ ಸಮಸ್ಯೆ ಎದುರಾಗುತ್ತದೆ. ಅಂಗನವಾಡಿಯನ್ನು ತೆರೆದು ರಕ್ತಹೀನತೆಯ ವಿರುದ್ಧ ಯುದ್ಧದ ರೀತಿಯಲ್ಲಿ ಹೋರಾಡದೇ ಇದ್ದರೆ ಜೀವಕ್ಕೆ ತೊಂದರೆ ಇದೆ ಎಂದರು.

2 ದಶಕಗಳಿಂದ ಮಕ್ಕಳಿಗೆ ಪೌಷ್ಠಿಕತೆಯ ದೃಷ್ಟಿಯಿಂದ ಮೊಟ್ಟೆಯನ್ನು ಕೊಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಯಲ್ಲಿ ಕೊಡುತ್ತಿದ್ದ ಆಹಾರ ಕೊಡುತ್ತಿದ್ದುದರ ಜೊತೆಗೆ, ಭವಿಷ್ಯದಲ್ಲಿ ಬೇಯಿಸಿದ ಮೊಟ್ಟೆ ಮತ್ತು ಬಿಸಿಯೂಟವನ್ನು ಕೊಡಲು ವಿಶೇಷ ಒತ್ತು, ಉತ್ತೇಜನ, ಸಂಪನ್ಮೂಲವನ್ನು ಸರ್ಕಾರ ಒದಗಿಸಬೇಕು ಎಂದರು.

2030ರಲ್ಲಿ ಹಸಿವು ಮುಕ್ತ ಕರ್ನಾಟಕ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಬದ್ಧರಾಗಿದ್ದೇವೆ. ಆದರೆ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ಬಹಳ ಹಿಂದಿದೆ. ಶಾಲೆಗಳನ್ನು ಆರಂಭಿಸಿ ಕಲಿಕೆ ಆರಂಭಿಸಿದೆ. ಈಗ ಹಿಂದೆ ಉಳಿದಿರುವ ಪ್ರಮಾಣ ಇನ್ನಷ್ಟು ವಿಸ್ತರಿಸುತ್ತದೆ ಎಂದರು.

ಒಮ್ಮೆ ಸರ್ಕಾರಿ ಕೆಲಸಕ್ಕೆ ಸೇರಿದರೆ ನಮ್ಮನ್ನು ಏನೂ ಮಾಡಲಿಕ್ಕಾಗದು ಎಂಬುದು ಸುಳ್ಳು. ಬಿ.ಎಸ್.ಎನ್.ಎಲ್. ನಲ್ಲಿ ಸುಮಾರು 45,000 ಜನರನ್ನು ಮನೆಗೆ ಕಳಿಸಿದರು. ಕೊರೊನಾ ನಂತರ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ವಾಪಸ್ ಕರೆತರಲು ವಿಶೇಷ ಯೋಜನೆಗಳನ್ನು ರೂಪಿಸದಿದ್ದರೆ ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರಿಗೆ ದೊಡ್ಡ ಸಮಸ್ಯೆಯಾಗುತ್ತದೆ ಎಂದರು

ಖಾಸಗೀಕರಣದ ವೇಗ 46-60% ವಿದ್ಯಾರ್ಥಿಗಳು ಈಗಾಗಲೇ ಖಾಸಗಿ ಶಾಲೆಗಳಿಗೆ ಸೇರಿಕೊಂಡಿದ್ದಾರೆ. ಶೇ. 45ರಷ್ಟು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಇದ್ದು, ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸರ್ಕಾರಿ ಶಾಲೆಗಳನ್ನು ಸಬಲೀಕರಿಸದೆ ಇದ್ದರೆ ದೊಡ್ಡ ಹೊಡೆತವನ್ನು ಕಾಣುತ್ತೇವೆ ಎಂದರು.

ಶಿಕ್ಷಣವನ್ನು ಸಾಮಾಜಿಕ ಸಬಲೀಕರಣದ ಸಾಧನವೆಂದು ಸರ್ಕಾರ ಪರಿಗಣಿಸಬೇಕು. ಶಿಕ್ಷಣ ಎಲ್ಲ ವರ್ಗದ ಮಕ್ಕಳಿಗೆ ಸಾಮಾಜಿಕ ಒಳಿತನ್ನಾಗಿ ನೋಡಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ತರಬೇಕಾದ ಬದಲಾವಣೆಗಳನ್ನು ತರಬೇಕು. ಮಕ್ಕಳಿಗೆ ಕಲಿಕೆಯ ಜೊತೆಗೆ, ಕಲಿಕೆ, ಆರೈಕೆ, ಪೌಷ್ಠಿಕ ಆಹಾರ ಒದಗಿಸುವ ಕೆಲಸ ಆಗಬೇಕು ಎಂದರು.

4ರವರೆಗೆ ಮಾತ್ರ ಹಳ್ಳಿ, ಹಟ್ಟಿ, ಹಾಡಿಗಳಲ್ಲಿ ಉಳಿಸಿಕೊಂಡು, 5ನೇ ತರಗತಿಯಿಂದ 12ನೇ ತರಗತಿವರೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಶಾಲೆಗಳನ್ನು ತೆರೆಯಬೇಕು. ನಗರ ಪ್ರದೇಶದಲ್ಲಿ ವಾರ್ಡ್ ಗಳಲ್ಲಿ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳು ಇದ್ದವಂತೆ ಎಂದು ಪುಸ್ತಕಗಳಲ್ಲಿ ಓದಬೇಕಾಗುತ್ತದೆ ಎಂದರು.

ವೆಬಿನಾರ್ ನ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ, ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ ಅಪ್ಪಗೆರೆ ಸೋಮಶೇಖರ್,  ಗಂಭೀರವಾಗಿ ಆತ್ಮಾವಲೋಕನ ಮಾಡಬೇಕಾದ ವಿಷಯಗಳನ್ನು ನಿರಂಜನಾರಾಧ್ಯ ಮಂಡಿಸಿದರು. ಮಾನವ ಬಂಧುತ್ವ ವೇದಿಕೆ ವೆಬಿನಾರ್ ಅರ್ಥಪೂರ್ಣವಾದುದು. ವೈಜ್ಞಾನಿಕವಾಗಿ, ವಾಸ್ತವಿಕ, ಸಮಸ್ಯೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ನಿರಂಜನಾರಾಧ್ಯ ಅವರು ವಿಷಯ ಮಂಡಿಸಿದ್ದಾರೆ ಎಂದರು.

ಕರ್ನಾಟಕ ಒಳಗೊಂಡಂತೆ ಭಾರತ ಎದುರಿಸುತ್ತಿರುವ ಸಮಸ್ಯೆಗಳೇನು ಎಂದು ನಿರಂಜನಾರಾಧ್ಯ ತಿಳಿಸಿದ್ದಾರೆ. ಕೋವಿಡ್ ಪೂರ್ವದಲ್ಲೇ ಸಮಸ್ಯೆ ಇತ್ತು ಎಂದರು. ನಮ್ಮ ಶಿಕ್ಷಣ ಕ್ಷೇತ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ನಮ್ಮಲ್ಲಿರುವ ಶಿಕ್ಷಣ ತಜ್ಞರನ್ನು ನಾವು ಸರಿಯಾಗಿ ಬಳಸಿಕೊಂಡು ಶೈಕ್ಷಣಿಕ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಇಚ್ಛಾಶಕ್ತಿಯನ್ನು ತೋರಿಸಿದೇ ಇರುವುದೇ ಕಾರಣ ಎಂದರು.

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆದರು ಎನ್ನುವಂತೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ ವೈಜ್ಞಾನಿಕವಾಗಿ ವರದಿ ಮಾಡಿರುವ ಅಧ್ಯಯನಕಾರರು ಸಾಕಷ್ಟು ಜನ ಇದ್ದಾರೆ. ಅವರ ಫಲಿತಗಳನ್ನು ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಆಡಳಿತ, ನಮ್ಮ ಸರ್ಕಾರ, ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಸೋತಿದ್ದಾರೆ. ಈ ಪರಿಹಾರದ ಮಾರ್ಗಗಳನ್ನು ಜಾರಿಗೆ ತರುವುದು ಹೇಗೆ ಎಂದು ನಾವೆಲ್ಲರೂ ಒಟ್ಟಾಗಿ ಯೋಚಿಸಬೇಕಿದೆ. ಇದು ಯಾರೊಬ್ಬರಿಗೆ ಸೀಮಿತವಲ್ಲ ಎಂದರು.

ವೆಬಿನಾರ್ ಅನ್ನು ಮಾನವ ಬಂಧುತ್ವ ವೇದಿಕೆ  – ಕರ್ನಾಟಕದ ಘಟಕ ವಿದ್ಯಾರ್ಥಿ ಬಂಧುತ್ವ ವೇದಿಕೆಯ ಸಂಚಾಲಕ ತೋಳಿ ಭರಮಣ್ಣ ನಿರ್ವಹಿಸಿದರು.

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ