October 1, 2023 6:49 am

ಚುನಾಯಿತ ಪ್ರತಿನಿಧಿಗಳ ಪಕ್ಷಾಂತರ ಮತ್ತು ರಾಜೀನಾಮೆ ಪರಿಣಾಮಗಳು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 2018ರ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದು ಯಾವ ಪಕ್ಷಕ್ಕೂ ಬಹುಮತ ಸಿಕ್ಕದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಬಿಜೆಪಿ ಪಕ್ಷ 104 ಸ್ಥಾನಗಳನ್ನು ಗೆದ್ದು ಮೊದಲನೆ ಸ್ಥಾನದಲ್ಲಿದ್ದ ಕಾರಣಕ್ಕೆ ರಾಜ್ಯಪಾಲರು ಅವರನ್ನು ಆಹ್ವಾನಿಸಿ ಸರ್ಕಾರ ರಚಿಸಲು ಅನುವು ಮಾಡಿ ಕೊಟ್ಟು ಸುಮಾರು ಒಂದು ತಿಂಗಳ ಸಮಯವನ್ನು ನೀಡಿ ಬಹುಮತವನ್ನು ಸಾಬೀತುಪಡಿಸಲು ಸೂಚಿಸಿದರು. ಇದರ ವಿರುದ್ಧ ವಿರೋಧ ಪಕ್ಷಗಳು ಸುಪ್ರೀಮ್ ಕೋರ್ಟಿನ ಕದ ತಟ್ಟಿದರು. ರಾಜ್ಯಪಾಲರು ನೀಡಿರುವ ಒಂದು ತಿಂಗಳ ಸಮಯ ಕುದುರೆ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. ಆದ್ದರಿಂದ 24 ಗಂಟೆಗಳಲ್ಲಿ ಬಹುಮತವನ್ನು ಸಾಬೀತುಪಡಿಸಬೇಕೆಂದು ನ್ಯಾಯಾಲಯ ಆದೇಶಿಸಿತು. ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಬಿಜೆಪಿ ಸರ್ಕಾರ ಬಿದ್ದುಹೋಯಿತು. ನಂತರ ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯಾತೀತ) ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು.

13 ತಿಂಗಳ ನಂತರ ಮೈತ್ರಿ ಸರ್ಕಾರಕ್ಕೆ ಗಂಡಾಂತರ ಎದುರಾಯಿತು. ಕಾಂಗ್ರೆಸ್ಸಿನ 12 ಮತ್ತು ಜನತಾದಳದ 3 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಪರಿಣಾಮವಾಗಿ ಮೈತ್ರಿ ಸರ್ಕಾರ ಬಿದ್ದು ಹೋಗಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಜನಪ್ರತಿನಿಧಿಗಳು ತಮಗೆ ಬೇಕಾದಾಗ ಮತ್ತು ತಮಗೆ ಇಷ್ಟ ಬಂದಂತೆ ರಾಜೀನಾಮೆ ನೀಡಬಹುದೇ ಅಥವಾ ಪಕ್ಷಾಂತರ ಮಾಡಬಹುದೇ ಎಂಬ ಪ್ರಶ್ನೆ ಇಂದು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲು.

ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡುವುದು ಮತ್ತು ಪಕ್ಷಾಂತರ ಮಾಡುವುದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇದು ದೇಶ ವ್ಯಾಪಿಯಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಹಾರಾಷ್ಟ್ರ, ಮಧ್ಯಪ್ರದೇಶ, ಗೋವಾ ಹೀಗೆ ಅನೇಕ ರಾಜ್ಯಗಳಲ್ಲಿ ಈ ರೀತಿ ರಾಜೀನಾಮೆ ನೀಡುವುದು ಮತ್ತು ಪಕ್ಷಾಂತರ ಮಾಡುವುದು ದಿನನಿತ್ಯದ ಸಂಗತಿಯಾಗಿದೆ. ಈ ಕೃತ್ಯದ ಹಿಂದೆ ಯಾವುದೇ ತಾತ್ವಿಕ ಕಾರಣವಾಗಲಿ ಅಥವಾ ಜನಹಿತವಾಗಲಿ ಇಲ್ಲವೆಂದು ಮೇಲ್ನೋಟಕ್ಕೆ ಕಾಣುತ್ತದೆ. ಈ ಪ್ರಕ್ರಿಯೆ ದೇಶದ್ರೋಹದ ಕೆಲಸ, ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವಂಥದ್ದು, ಪ್ರಜಾಪ್ರಭುತ್ವ ಶಕ್ತಿಗಳು ಇಂತಹ ರಾಜಕೀಯ ಬೆಳವಣಿಗೆಯನ್ನು ಗಟ್ಟಿ ಧ್ವನಿಯಿಂದ ಖಂಡಿಸಬೇಕು.

ಇಂತಹ ರಾಜೀನಾಮೆ ಮತ್ತು ಪಕ್ಷಾಂತರದ ಹಿಂದೆ ಹಲವು ಕಾರಣಗಳು ಇವೆ: ಪ್ರಮುಖ ಕಾರಣಗಳೆಂದರೆ :

1. ಚುನಾಯಿತ ಪ್ರತಿನಿಧಿಗಳು ಹಣದ ಆಮಿಶಕ್ಕೆ ಒಳಗಾಗಿ ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಕೆಲವರಿಗೆ 50 ರಿಂದ 200 ಕೋಟಿ ರೂಪಾಯಿಗಳು ಅಕ್ರಮ ಹಣವನ್ನು ನೀಡಿದ್ದಾರೆಂದು ವರದಿಯಾಗಿದೆ. ಇಂತಹ ಜನಪ್ರತಿನಿಧಿಗಳು ಚಾರ್ಟರ್ ವಿಮಾನದಲ್ಲಿ ಪ್ರಯಾಣಿಸುವುದು ಮತ್ತು ವಾರಗಟ್ಟಲೆ ಪಂಚಾತಾರಾ ಹೋಟೆಲುಗಳಲ್ಲಿ ಭೋಗ ಜೀವನ ನಡೆಸುವುದರಲ್ಲಿಯೂ ಕೋಟಿ ಕೋಟಿ ರೂಪಾಯಿಗಳ ಖರ್ಚು ಯಾರು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಒಟ್ಟಾರೆ ಇದರ ಹಿಂದೆ ಸಾವಿರಾರು ಕೋಟಿ ರೂಪಾಯಿಗಳ ಹಣದ ವ್ಯವಹಾರ ನಡೆದಿದೆ. ಇದರ ಜೊತೆಗೆ ಸಿಡಿ ಪ್ರಕರಣ ಒಬ್ಬ ಮಂತ್ರಿ ರಾಜಿನಾಮೆ ಕೊಡುವಂತೆ ಮಾಡಿದೆ.

2. ವಿಧಾನಸಭೆ ಅಥವಾ ಸಂಸತ್ ಚುನಾವಣೆ ಕ್ಷೇತ್ರದ ಪರಿಚಯವೇ ಇಲ್ಲದ ಒಬ್ಬ ವ್ಯಕ್ತಿ ಹಣದ ಚೀಲವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಚುನಾವಣೆಯನ್ನು ಗೆದ್ದು ಬರುತ್ತಿದ್ದಾನೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಿಳುವಳಿಕೆಯಿಲ್ಲ. ಕ್ಷೇತ್ರದ ಪರಿಚಯವೂ ಇಲ್ಲ. ಆದರೆ ಕ್ಷೇತ್ರದ ದೊಡ್ಡ ವಿಭಾಗದ ಮತದಾರರನ್ನು ಭ್ರಷ್ಟರನ್ನಾಗಿ ಮಾಡಿ, ಜಾತಿವಾದ ಸೃಷ್ಟಿಸಿ, ರೌಡಿಸಂ ನಡೆಸಿ, ಚುನಾವಣೆಗಳಲ್ಲಿ ಗೆದ್ದು ಬರುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಚುನಾಯಿತ ಪ್ರತಿನಿಧಿಗಳು ಮನಬಂದಂತೆ ನಿಲುವು ಬದಲಾಯಿಸುತ್ತಾರೆ. ಪಕ್ಷ ಬದಲಾಯಿಸುತ್ತಾರೆ. ಸಾಲದೆಂದು ರಾಜೀನಾಮೆ ನೀಡುತ್ತಿದ್ದಾರೆ. ಇದು ಕೇವಲ ದುಡ್ಡಿಗಾಗಿ ಮತ್ತು ಅಧಿಕಾರ ಪಡೆಯುವ ದುರಾಸೆಗಾಗಿ ಎಲ್ಲಾ ನೈತಿಕತೆಯನ್ನು ಬದಿಗೊತ್ತಿ ಅಪವಿತ್ರ ಹೊಂದಾಣಿಕೆಗಳ ಹಾಗೂ ಮೈತ್ರಿಗಳ ಯುಗವನ್ನು ಪ್ರಾರಂಭಿಸಿದ್ದಾರೆ. ಜನಸೇವೆಯನ್ನು ಮಾಡದೆ, ಯಾವ ತ್ಯಾಗವನ್ನೂ ಮಾಡದೆ, ಅರ್ಹತೆ ಮತ್ತು ಅನುಭವ ಇಲ್ಲದವರು ಮಂತ್ರಿಗಳಾಗಬೇಕೆಂಬ ದುರಾಸೆ ಇಂತಹ ಅವನತಿಗೆ ಕಾರಣ.

3. ಸ್ವಾತಂತ್ರ್ಯ ಬಂದ ನಂತರ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ದೇಶದಲ್ಲಿ ಅಪಾರವಾದ ಸಂಪತ್ತು ಉತ್ಪಾದನೆಯಾಗಿದೆ. ಭಾರತ ಹಿಂದೆಂದಿಗಿಂತ ಇಂದು ಬಹಳ ಶ್ರೀಮಂತವಾಗಿದೆ. ಆದರೆ ಶೇ 60 ರಷ್ಟು ಸಂಪತ್ತು ದೇಶದ ಶೇ 1 ರಷ್ಟು ಜನರ ಕೈಯಲ್ಲಿ ಇದೆ. ಇವರಲ್ಲಿ ಬಹುಪಾಲು ಜನ ಅಕ್ರಮವಾಗಿ ಸಂಪತ್ತು ಗಳಿಸಿದ್ದಾರೆ. ಇಂತಹ ಜನ ತಮ್ಮ ಅಕ್ರಮ ಸಂಪತ್ತನ್ನು ಉಳಿಸಿಕೊಂಡು ಮತ್ತಷ್ಟು ಬೆಳೆಸಲು ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ದಿನೇ ದಿನೇ ಇಂತಹ ಶ್ರೀಮಂತರು ಹೆಚ್ಚು ಹೆಚ್ಚು ರಾಜಕೀಯವನ್ನು ಪ್ರವೇಶಿಸುತ್ತಿದ್ದಾರೆ. 14ನೇ ಲೋಕಸಭೆಯಲ್ಲಿ ಶೇ 30, 15ನೇ ಲೋಕಸಭೆಯಲ್ಲಿ ಶೇ 58, 16ನೇ ಲೋಕಸಭೆಯಲ್ಲಿ ಶೇ 82 ಮತ್ತು 17ನೇ ಲೋಕಸಭೆಯಲ್ಲಿ ಶೇ 88 ಕೋಟ್ಯಾಧಿಪತಿಗಳು ನಮ್ಮ ಸಂಸದರು. ಇದೇ ರೀತಿಯಲ್ಲಿ ಕೋಟ್ಯಾಧಿಪತಿಗಳು ದೊಡ್ಡ ಪ್ರಮಾಣದಲ್ಲಿ ವಿಧಾನಸಭೆಗೂ ಪ್ರವೇಶಿಸುತ್ತಿದ್ದಾರೆ. ಆಡಳಿತಾರೂಢ ಸರ್ಕಾರಗಳು CBI, ED, IT ಇಂತಹ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಂಡು ಚುನಾಯಿತ ಪ್ರತಿನಿಧಿಗಳಲ್ಲಿ ಭಯವನ್ನು ಹುಟ್ಟಿಸುತ್ತಿವೆ. ತಮ್ಮ ಅಕ್ರಮ ಸಂಪತ್ತನ್ನು ಕಾಪಾಡಿಕೊಳ್ಳಲು ಚುನಾಯಿತ ಪ್ರತಿನಿಧಿಗಳು ಪಕ್ಷಾಂತರ ಮಾಡುತ್ತಿದ್ದಾರೆ ಅಥವಾ ರಾಜೀನಾಮೆ ನೀಡುತ್ತಿದ್ದಾರೆ. ಈ ಸಂಸ್ಥೆಗಳನ್ನು ಬಳಸಿ ಎಲ್ಲರ ಅಕ್ರಮ ಸಂಪಾದನೆ ಮಾಡಿರುವ ವಿರುದ್ಧವೂ ಕ್ರಮ ಕೈಗೊಂಡರೆ ಯಾವ ತಕರಾರೂ ಇಲ್ಲ. ಆದರೆ ಇಲ್ಲಿ ಅಸ್ತ್ರವನ್ನು ಬಹುಪಾಲು ವಿರೋಧ ಪಕ್ಷದವರ ಮೇಲೆ ಬಳಸುತ್ತಿರುವುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ. ಇದು ಕೂಡ ಒಂದು ಮುಖ್ಯ ಕಾರಣ.

4. ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುವ ಪಕ್ಷಗಳು ಎಷ್ಟು ಮುಖ್ಯವೋ ವಿರೋಧ ಪಕ್ಷಗಳೂ ಅಷ್ಟೇ ಮುಖ್ಯ. ಎಲ್ಲ ಪ್ರಮುಖ ವಿಷಯಗಳ ಬಗ್ಗೆಯೂ ಮುಕ್ತ ಚರ್ಚೆ ನಡೆಯಬೇಕು. ಪ್ರಗತಿ ಸಾಧ್ಯವಾಗುವುದು ಆಡಳಿತಾರೂಢ ನೀತಿಗಳನ್ನು, ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವುದರ ಮೂಲಕವಲ್ಲ, ಬದಲಾಗಿ ಸರ್ಕಾರದ ಅಭಿಪ್ರಾಯಗಳು ಬದಲಾಗುವಷ್ಟರ ಮಟ್ಟಿಗೆ ಹೊಸ ವಿಷಯಗಳನ್ನು, ವೈಜ್ಞಾನಿಕ ಚಿಂತನೆಯ ಆಧಾರದ ಮೇಲೆ ಮಂಡಿಸುವ ಮೂಲಕ. ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ವಿಭಿನ್ನ ದೃಷ್ಟಿಕೋನಗಳು, ವಿಚಾರ ವಿನಿಮಯ ಮತ್ತು ಆರೋಗ್ಯಕರ ಚರ್ಚೆ ಅನಿವಾರ್ಯ ಮತ್ತು ಪೂರಕ.

ಆದರೆ ಇಂದು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳಾದ ವಿಧಾನಮಂಡಳ ಮತ್ತು ಸಂಸತ್ತಿನಲ್ಲಿ ಅಸಹನೆ, ವಿಭಜನಶೀಲತೆ, ಘರ್ಷಣೆಗಳು ಹಾಗೂ ಭಿನ್ನಮತಕ್ಕೆ ಅಗೌರವ ತೋರುವುದು ದಿನನಿತ್ಯದ ಸಂಗತಿಯಾಗಿದೆ. ಯಾವುದೇ ಗಂಭೀರವಾದ ಚರ್ಚೆಯಿಲ್ಲದೆ ಮುಖ್ಯವಾದ ಹಲವಾರು ಮಸೂದೆಗಳು ಅಂಗೀಕಾರವಾಗುತ್ತಿವೆ. ಮುಂದುವರಿದು ಚುನಾಯಿತ ಪ್ರತಿನಿಧಿಗಳನ್ನು ರಾಜೀನಾಮೆ ಕೊಡಿಸಿ ಮತ್ತು ಪಕ್ಷಾಂತರವನ್ನು ಮಾಡಿಸಿ ವಿರೋಧ ಪಕ್ಷಗಳನ್ನು ಬಲಹೀನಗೊಳಿಸಲಾಗುತ್ತಿದೆ. ಇದೇ ಪ್ರಕ್ರಿಯೆ ಮುಂದುವರೆದರೆ ದೇಶದಲ್ಲಿ ವಿರೋಧ ಪಕ್ಷ ಇಲ್ಲದೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ಬರುವುದರಲ್ಲಿ ಯಾವ ಅನುಮಾನವೂ ಬೇಡ.

ಇಂದಿನ ರಾಜಕೀಯ ಬೆಳವಣಿಗೆಗಳಲ್ಲಿ ರಾಜೀನಾಮೆ ಕೊಟ್ಟ ಚುನಾಯಿತ ಪ್ರತಿನಿಧಿಗಳಿದ್ದಾರೆ. ಜೊತೆಜೊತೆಯಲ್ಲಿ ರಾಜೀನಾಮೆ ಕೊಡಿಸಿದವರು ಮತ್ತು ಪಕ್ಷಾಂತರ ಮಾಡಿಸಿದವರು ಇದ್ದಾರೆ. ಇಲ್ಲಿ ಎರಡೂ ಕಡೆಯವರು ಅಪರಾಧಿಗಳೆ, ಅಪರಾಧ ಮಾಡಿದವರಿಗೂ ಮತ್ತು ಅಪರಾಧ ಮಾಡಲು ಪ್ರೇರಣೆ ನೀಡಿದವರಿಗೂ ಶಿಕ್ಷೆಯಾಗಬೇಕಾಗಿದೆ. ಯಾರು ಯಾರು ರಾಜೀನಾಮೆ ಕೊಟ್ಟರು ಮತ್ತು ಪಕ್ಷಾಂತರ ಮಾಡಿದರು. ಎಂಬುದು ನಮ್ಮ ಕಣ್ಣೆದುರಿಗೇ ಕಾಣಿಸುತ್ತಿದೆ. ಆದರೆ ಯಾವ ಶಕ್ತಿಗಳು ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿವೆ, ಯಾವ ಕಾರಣಕ್ಕೆ ಈ ಅಪರಾಧಗಳನ್ನು ಮಾಡಿಸುತ್ತಿದ್ದಾರೆ ಮತ್ತು ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆಯೆಂಬುದು ನಮಗೆ ನೇರವಾಗಿ ಕಾಣಿಸುತ್ತಿಲ್ಲ. ಇದು ಕೇವಲ ಒಂದು ರಾಜ್ಯದಲ್ಲಿ ನಡೆದಂಥ ಘಟನೆಯಲ್ಲ. ಬದಲಾಗಿ ದೇಶದ ಹಲವು ರಾಜ್ಯಗಳಲ್ಲಿ ಈ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಜನತೆಗೆ ಸತ್ಯ ತಿಳಿಯಬೇಕಾಗಿದೆ. ಆದ್ದರಿಂದ ಈ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಷ್ಟ್ರಮಟ್ಟದ ನ್ಯಾಯಾಂಗ ತನಿಖೆಯಾಗಬೇಕು, ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು ಮತ್ತು ಕಠಿಣವಾದ ಶಿಕ್ಷೆಗೊಳಪಡಿಸಬೇಕು.

ಪಂಚಾಯಿತಿಯಿಂದ ಪಾರ್ಲಿಮೆಂಟಿನವರೆಗೂ ನಡೆಯುವ ಚುನಾವಣೆಗಳು ಧರ್ಮ, ಜಾತಿ, ಹಣ, ಭ್ರಷ್ಟಾಚಾರ ಮತ್ತು ರೌಡಿಸಂ ಇತ್ಯಾದಿಗಳ ಪ್ರಭಾವಕ್ಕೆ ಒಳಗಾಗಿವೆ. ಚುನಾವಣಾ ಆಯೋಗವು ತನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸೋತಿದೆ. ದೇಶದ ಚುನಾವಣೆಗಳನ್ನು ನಡೆಸಲು ಮತ್ತು ನಂತರದ ಬೆಳವಣಿಗೆಗಳನ್ನು ನಿಯಂತ್ರಿಸಲು ಎರಡು ಕಾನೂನುಗಳು ಇವೆ. ಅವುಗಳೆಂದರೆ, ಒಂದು ಪ್ರಜಾ ಪ್ರಾತಿನಿಧ್ಯ ಕಾಯಿದೆ ಮತ್ತು ಎರಡನೆಯದು ಪಕ್ಷಾಂತರ ನಿಷೇಧ ಕಾಯಿದೆ. ಈ ಕಾನೂನುಗಳೂ ಸಹ ಬೆಳೆದು ಬರುತ್ತಿರುವ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ನಿಯಂತ್ರಿಸಲು ಮತ್ತು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಮಸ್ಯೆಗಳ ಅಧ್ಯಯನ ಮಾಡಬೇಕಾಗಿದೆ. ಕಾರಣಗಳನ್ನು ಕಂಡುಕೊಳ್ಳಬೇಕಾಗಿದೆ ಮತ್ತು ವೈಜ್ಞಾನಿಕ ಹಾಗೂ ಪರಿಣಾಮಕಾರಿಯಾದ ಪರಿಹಾರಗಳನ್ನು ತರಬೇಕಾಗಿದೆ. ಇರತಕ್ಕಂಥ ಕಾನೂನುಗಳಿಗೆ ಸಣ್ಣಪುಟ್ಟ ತಿದ್ದುಪಡಿಗಳನ್ನು ತರುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಮಗ್ರವಾದ ಹೊಸದೊಂದು ತರಬೇಕಾಗಿದೆ. ಈ ರೀತಿಯ ಹೊಸ ಕಾನೂನು ಈ ಕೆಳಕಂಡ ಅಂಶಗಳಿಗೆ ಒತ್ತು ನೀಡಬೇಕಾಗಿದೆ:  

1. ಧರ್ಮ, ಜಾತಿ, ಹಣ, ರೌಡಿಸಂ, ಭ್ರಷ್ಟಾಚಾರ ಇತ್ಯಾದಿಗಳಿಂದ ಚುನಾವಣೆಗಳನ್ನು ಮುಕ್ತಗೊಳಿಸಬೇಕು.

2. ಭಾವನಾತ್ಮಕ ವಿಷಯಗಳಿಗೆ ತಡೆಯೊಡ್ಡಿ ಬದುಕಿನ ವಿಚಾರಗಳಿಗೆ ಮಹತ್ವ ನೀಡುವ ಪರಿಸ್ಥಿತಿ ನಿರ್ಮಾಣವಾಗಬೇಕು.

3. ಪಕ್ಷಾಂತರಿಗಳಿಗೆ ಮತ್ತು ರಾಜೀನಾಮೆ ನೀಡುವವರಿಗೆ ಕನಿಷ್ಠ ಹತ್ತು ವರ್ಷಗಳ ಕಾಲ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಬೇಕು ಮತ್ತು ಚುನಾವಣೆ ಖರ್ಚನ್ನು ವಸೂಲಿ ಮಾಡಿಕೊಳ್ಳಬೇಕು.

4. ಪಕ್ಷಾಂತರ ಮತ್ತು ರಾಜೀನಾಮೆ ಕೊಡಿಸುವ ಶಕ್ತಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು.

5. ಪ್ರಜಾಪ್ರಭುತ್ವ ಮತ್ತು ಸ್ವಾಯತ್ತತೆ ಸಮಸ್ಯೆಗಳ ದುರ್ಬಳಕೆಯನ್ನು ನಿಲ್ಲಿಸಬೇಕು. ಈ ಸಂಸ್ಥೆಗಳ ಅಧಿಕಾರಿಗಳು ತಮ್ಮ ಕರ್ತವ್ಯ ಲೋಪವೆಸಗಿದರೆ ಜವಾಬುದಾರರನ್ನಾಗಿ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು. ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಚರ್ಚೆಗಳು ನಡೆದು ಪರಿಸ್ಥಿತಿಯನ್ನು ಉತ್ತಮಗೊಳಿಸಬೇಕು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು